ಸೋಮವಾರ, ಜುಲೈ 21, 2025
"ವಿಧಿಗೆ ಸವಾಲು"- ಒಂದು ಅವಲೋಕನ.
"ವಿಧಿಗೆ ಸವಾಲು"- ಒಂದು ಅವಲೋಕನ.
ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಪೌರಾಣಿಕ ಮತ್ತು ಐತಿಹಾಸಿಕ ವಸ್ತುಗಳನ್ನು ಒಳಗೊಂಡ ಕೃತಿಗಳ ರಚನೆ ಮತ್ತು ಪ್ರಕಟಣೆ ಹೆಚ್ಚಾಗುತ್ತಿದೆ.ಪರಂಪರೆಯೊಂದಿಗೆ ಪುನರ್ ಸಂಬಂಧವನ್ನು ಹೊಂದುವ, ಆ ಮೂಲಕ ಶ್ರೇಷ್ಠತೆಯನ್ನು ನೆನಪಿಸಿಕೊಳ್ಳುವ ಮತ್ತು ವರ್ತಮಾನದೊಂದಿಗೆ ಮುಖಾಮುಖಿಯಾಗಿ ಸಂವಾದಕ್ಕೆ ತೊಡಗುವ ಉದ್ದೇಶ ಇದರ ಹಿಂದೆ ಇರುವಂತಿದೆ.ಇದು ಪುರಾಣೇತಿಹಾಸಗಳನ್ನು ಪುನರ್ ವ್ಯಾಖ್ಯಾನಿಸುವ ಪ್ರಯತ್ನವೂ ಹೌದು.ಆದ್ದರಿಂದಲೇ ಮಯೂರವರ್ಮ,ಪುಲಿಕೇಶಿ,ಚೆನ್ನಭೈರಾದೇವಿ,ಮೈಸೂರು ಒಡೆಯರು ಮುಂತಾದ ಐತಿಹಾಸಿಕ ವ್ಯಕ್ತಿಗಳನ್ನು ಕುರಿತಾದ ಕೃತಿಗಳು ಹೆಚ್ಚು ಜನಪ್ರಿಯವಾಗುತ್ತಿವೆ.ಒಂದರ್ಥದಲ್ಲಿ ಇದು ಸ್ವಾಗತಾರ್ಹ ಬೆಳವಣಿಗೆಯಾದರೂ ವರ್ತಮಾನದಿಂದ ವಿಮುಖವಾಗುವ ಸಾಧ್ಯತೆ ಎಂಬ ವ್ಯಾಖ್ಯಾನಕ್ಕೆ ಒಳಗಾಗಬಹುದು.ಇತಿಹಾಸ ಎಂದರೆ ಹೀಗೆ ಇತ್ತು ಎಂದು ಹೇಳುವ ಒಂದು ಪ್ರಕ್ರಿಯೆ.ಈ ಪ್ರಕ್ರಿಯೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.ಆದ್ದರಿಂದ "ಇತಿಹಾಸ ಎನ್ನುವುದು ಇರುವುದೇ ಇಲ್ಲ.ಎಲ್ಲ ಇತಿಹಾಸಗಳೂ ಆಯಾ ಕಾಲ,ದೇಶ,ಸನ್ನಿವೇಶ,ದೃಷ್ಟಿಕೋನಗಳು ಕಟ್ಟಿದ ಕಾಲ್ಪನಿಕ ರಚನೆಗಳು" ಎಂದು ಗಿರಡ್ಡಿ ಗೋವಿಂದರಾಜು ಅವರು ಅಭಿಪ್ರಾಯ ಪಡುತ್ತಾರೆ.
ಇತಿಹಾಸದಿಂದ ಪಾಠ ಕಲಿಯಬೇಕು ಎಂಬ ಮಾತೊಂದಿದೆ.ಅಂದರೆ ಹಿಂದೆ ಆದ ತಪ್ಪುಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲು ಇತಿಹಾಸದ ಅವಲೋಕನ ಅಗತ್ಯ.ಜಾಗತೀಕರಣದ ತೀವ್ರತೆಯಲ್ಲಿ ಭೌತಿಕವಾದಿಗಳಾಗುತ್ತಿರುವ ಸಂದರ್ಭದಲ್ಲಿ ನಮ್ಮತನವನ್ನು ಜಾಗೃತಗೊಳಿಸಿಕೊಳ್ಳಲು ಇತಿಹಾಸವನ್ನು ಮನನ ಮಾಡಿಕೊಳ್ಳುವುದು ಅನಿವಾರ್ಯ.ಆದರೆ ಅಷ್ಟಕ್ಕೇ ಸೀಮಿತವಾಗದೇ ಗೋಪಾಲ ಕೃಷ್ಣ ಅಡಿಗರು ಹೇಳಿದಂತೆ ಕ್ರಿಯಾಶೀಲರಾಗಬೇಕಾಗಿದೆ.
" 'ಇತ್ತು’ಗಳ ಧ್ವಜವ ಹಿಡಿದೆತ್ತಿ ನಿಲ್ಲೋ ಮಗೂ,
’ಇದೆ’ಯ ಹೃದಯದ್ರಾವ ಬೇಡ ನಿನಗೆ.
ಮರವುಂಟು, ಮರಕೆ ಬಂಗಾರವುಂಟಲ್ಲದೆಯೇ
ಕಟ್ಟೆಯುಂಟಲ್ಲ! ನೀರಿಕ್ಕು ಅದಕೆ!"
ಭಾರತದ ಇತಿಹಾಸದಲ್ಲಿ ಛತ್ರಪತಿ ಶಿವಾಜಿಗೆ ವಿಶಿಷ್ಟ ಸ್ಥಾನವಿದೆ.ಭಾರತದ ಸ್ವಾಭಿಮಾನದ ಸಂಕೇತ ಅವನು.ಮೊಗಲರ ದುರಾಕ್ರಮಣಕ್ಕೆ ತಕ್ಕ ಉತ್ತರ ನೀಡಿದ ವೀರಯೋಧ ಅವನು.ಎಲ್ಲರನ್ನೂ ಒಳಗೊಳ್ಳುವ ಸ್ವರಾಜ್ಯ ಸ್ಥಾಪನೆಯ ಅವನ ಕನಸು.ಶಿವಾಜಿಯ ದೃಷ್ಟಿಯಲ್ಲಿ ಸ್ವರಾಜ್ಯವೆಂದರೆ "ನಮ್ಮದೇ ಆದ ರಾಜ್ಯ, ನಾವೇ ಆಳುವ ರಾಜ್ಯ. ನಮ್ಮದೇ ಆದ ಸೇನಾ ನೆಲೆಗಳನ್ನು, ನಮ್ಮ ಸಶಸ್ತ್ರ ಪಡೆಗಳಿಂದ ಕೂಡಿದ,ನಮ್ಮ ಕಾವಲು ಪಡೆಗಳಿಂದ ತುಂಬಿದ, ಆದಿಲ್‌ಶಾಹಿ ಅಥವಾ ಮೊಘಲ್ ಸೈನ್ಯಗಳಿಗೆ ಅಭೇಧ್ಯವಾದ ರಾಜ್ಯ.” ಹಾಗೆಂದು ಅವನ ಸ್ವರಾಜ್ಯದ ತಳಹದಿ ಧಾರ್ಮಿಕ ನಿರ್ದೇಶನದ ಮೇಲೆ ಆಧಾರಿತವಾಗಿ ರಲಿಲ್ಲ.ಅವನ ಆಡಳಿತದಲ್ಲಿ ಧರ್ಮದ ರಾಜಕೀಯವಿರಲಿಲ್ಲ.ಅದಕ್ಕಾಗಿ ಶ್ರಮಿಸಿದ ಮಹಾಯೋಧ ಶಿವಾಜಿ. ಅವನನ್ನು ಕುರಿತು ಇಂಗ್ಲೀಷ,ಮರಾಠಿ ಭಾಷೆಯಲ್ಲಿ ಹಲವು ಕೃತಿಗಳು ಬಂದಿವೆ. ಅವು ಶಿವಾಜಿ ವ್ಯಕ್ತಿತ್ವವನ್ನು ತಮ್ಮದೇ ಆದ ರೀತಿಯಲ್ಲಿ ಅನಾವರಣಗೊಳಿಸುತ್ತವೆ. ಅಂತಹ ಕೃತಿಗಳಲ್ಲಿ ಮೇಧಾ ದೇಶಮುಖ್ ಭಾಸ್ಕರನ್ ಅವರ “ಛಾಲೆಂಜಿಂಗ್ ಡೆಸ್ಟಿನಿ”ಎಂಬ ಇಂಗ್ಲೀಷ್ ಕೃತಿ ಅತ್ಯಂತ ವಿಶಿಷ್ಟವಾಗಿದೆ.
ಮೇಧಾ ದೇಶಮುಖ್ ಅವರು ಒಬ್ಬ ಸೂಕ್ಷ್ಮ ಜೀವಶಾಸ್ತ್ರಜ್ಞೆ, ಅವರು ಜರ್ಮನಿ, ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಂತಹ ದೇಶಗಳಲ್ಲಿ ಆಹಾರ ಮತ್ತು ಔಷಧ ಕಂಪನಿಗಳಿಗೆ ಮಾರ್ಕೆಟಿಂಗ್ ಮತ್ತು ವ್ಯವಹಾರ ಅಭಿವೃದ್ಧಿಯಲ್ಲಿ ಕೆಲಸ ಮಾಡಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಅವರು ಮರಾಠಿ ಮತ್ತು ಇಂಗ್ಲಿಷ್‌ನಲ್ಲಿ ಕಾವ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಎರಡು ಐತಿಹಾಸಿಕ ಕಾದಂಬರಿಗಳು'ಫ್ರಾಂಟಿಯರ್ಸ್-ಎ ರಿಲೆಂಟ್ಲೆಸ್ ಬ್ಯಾಟಲ್ ಬಿಟ್ವೀನ್ ಔರಂಗಜೇಬ್ ಅಂಡ್ ಶಿವಾಜಿ' ಮತ್ತು 'ಲೈಫ್ ಅಂಡ್ ಡೆತ್ ಆಫ್ ಸಂಭಾಜಿ'ಪ್ರಕಟಗೊಂಡಿವೆ.'ಅಪ್ ಅಗೆನಸ್ಟ್ ಡಾರ್ಕನೆಸ್ ಮತ್ತು'ದ ಸ್ಟೋರಿ ಆಫ್ ಕಮ್ಯೂನಿಟಿ'ಇವು ಅವರ ಇನ್ನಿತರ ಕೃತಿಗಳು.
ಪ್ರಸ್ತುತ ಶಿವಾಜಿಯ ಜೀವನ ಚರಿತ್ರೆಯನ್ನು ಹೊಂದಿದ 'ಛಾಲೆಂಜಿಂಗ್ ಡೆಸ್ಟಿನಿ' ಎಂಬ ಕೃತಿಯನ್ನು ಪ್ರೊ.ಆರ್.ಎಸ್.ಹಬ್ಬು ಅವರು ಕನ್ನಡಕ್ಕೆ "ವಿಧಿಗೆ ಸವಾಲು"ಎಂಬ ಶೀರ್ಷಿಕೆಯಲ್ಲಿ ಅನುವಾದ ಮಾಡಿದ್ದಾರೆ.ವೃತ್ತಿಯಿಂದ ಗಣಿತ ಮತ್ತು ಸಂಖ್ಯಾಶಾಸ್ತ್ರದ ಪ್ರಾಧ್ಯಾಪಕರಾದ ಅವರು ಕಾರವಾರದ ದಿವೇಕರ್ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ. ಹಿಂದೂ ಪತ್ರಿಕೆಯ ಬರಹಗಾರರೂ ಆದ ಅವರು ಬಿ.ಆರ್.ನಂದಾ ಅವರ 'ಗಾಂಧೀಜಿ ಜೀವನ ಚರಿತೆ'ಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
'ವಿಧಿಗೆ ಸವಾಲು'278 ಪುಟಗಳನ್ನು ಹೊಂದಿದ ಬೃಹತ್ ಕೃತಿಯಾಗಿದ್ದು ಹನ್ನೆರಡು ಅಧ್ಯಾಯಗಳನ್ನು ಒಳಗೊಂಡಿದೆ.1826ರಿಂದ 2016 ವರೆಗೆ ಪ್ರಕಟವಾದ ಸುಮಾರು 150ಕ್ಕೂ ಅಧಿಕ ಪುಸ್ತಕಗಳನ್ನು ಪರಾಮರ್ಶಿಸಿ, ಸಂಶೋಧಿಸಿ ಹೆಚ್ಚು ಅಥೆಂಟಿಕ್ ಆಗಿ ಶಿವಾಜಿಯ ಜೀವನ ಚರಿತ್ರೆಯನ್ನು ಕೊಡಲು ಪ್ರಯತ್ನಿಸಿದ್ದಾರೆ.ಒಂದು ರೀತಿಯಲ್ಲಿ ಧಾರ್ಮಿಕ ದುರಾಕ್ರಮಣ ವಿರುದ್ಧ ಪರಾಕ್ರಮ ತೋರಿದ ವೀರನ ಕೃತಿಯಾಗಿ ಇದು ಗಮನ ಸೆಳೆಯುತ್ತದೆ. ಪ್ರಾರಂಭದ ಪೀಠಿಕೆಯಲ್ಲಿ ಮಹಮ್ಮದ್ ಘಜನಿಯಿಂದ ಪ್ರಾರಂಭಿಸಿ ಔರಂಗಜೇಬ್‌ನವರೆಗೆ ಭಾರತದ ಮೇಲಾದ ದೌರ್ಜನ್ಯವನ್ನು,ರಾಜಕೀಯ ಸ್ಥಿತಿ-ಗತಿಯನ್ನು ಸಂಕ್ಷಿಪ್ತವಾಗಿ ಆದರೆ ಸಮಗ್ರವಾಗಿ ವಿವೇಚಿಸಲಾಗಿದೆ.ಆ ಕಾಲದಲ್ಲಿ ಪ್ರಚಲಿತದಲ್ಲಿದ್ದ ವತನದಾರಿ ಮತ್ತು ಜಹಗೀರದಾರಿ ಪದ್ಧತಿಗಳಲ್ಲಿನ ದೋಷಗಳನ್ನು ವಿವರವಾಗಿ ಚರ್ಚಿಸಲಾಗಿದೆ.ಆ ಕಾಲ ಘಟ್ಟದಲ್ಲಿ ಹಿಂದೂಗಳೆನಿಸಿಕೊಂಡವರು ಸ್ವಾರ್ಥ,ಕುತಂತ್ರ ಇರ್ಷ್ಯೆಗಳಿಂದ ನೈತಿಕ ಅಧ:ಪತನದತ್ತ ಸಾಗುತ್ತಿದ್ದರು. ಹಿಂದೂ ಸೈನಿಕರು ತಮ್ಮ ಹೃದಯದಲ್ಲಿದ್ದ ಕ್ಷತ್ರಿಯತ್ವವನ್ನೇ ಕೊಂದರೆ ಪುರೋಹಿತಶಾಹಿ ವರ್ಗ ತನ್ನ ಆತ್ಮ ಗೌರವವನ್ನು ಕೊಂದಿತ್ತು.ಇಂತಹ ಅವನತಿಯ ಸಂದರ್ಭದಲ್ಲಿ ಸ್ವಾಭಿಮಾನದ ಪ್ರತಿಷ್ಠಾಪನಾಚಾರ್ಯನಾಗಿ ಮೂಡಿ ಬಂದ ಶಿವಾಜಿಯ ಸಾಹಸಗಳೇ ಈ ಕೃತಿಯಲ್ಲಿ ಪೂರ್ತಿಯಾಗಿ ಆವರಿಸಿವೆ. ಅವನ ಬುದ್ಧಿವಂತಿಕೆ, ಚಾಣಾಕ್ಷತನ, ಕುತಂತ್ರ, ಶೌರ್ಯ, ಚುರುಕುತನ,ನ್ಯಾಯ ನಿಷ್ಠುರತೆ ಮತ್ತು ದೂರದೃಷ್ಟಿಗಳ ಸಮಗ್ರ ವಿವೇಚನೆ ಇಲ್ಲಿದೆ.17ನೇ ಶತಮಾನದ ಭಾರತದ ರಾಜಕೀಯ ಮತ್ತು ಸೈನಿಕ ಪರಿಸ್ಥಿತಿಯನ್ನು ಅಮೂಲಾಗ್ರವಾಗಿ ಚಿತ್ರಿಸಲಾಗಿದೆ.ಶಿವಾಜಿಯ ನಾಯಕತ್ವದಲ್ಲಿನ ದೃಢತೆ,ಮೊಘಲ ಸಾಮ್ರಾಜ್ಯ ಮತ್ತು ಆದಿಲ್‌ಶಾಹಿ ಸೈನ್ಯಗಳ ವಿರುದ್ಧ ಅವನ ಸಂಘರ್ಷ,ಮತ್ತು ಸ್ವರಾಜ್ಯದ ಸ್ಥಾಪನೆಗಾಗಿ ಅವನು ನಡೆಸಿದ ಹೋರಾಟದ ಸಂಪೂರ್ಣ ಚಿತ್ರಣವನ್ನು ಈ ಕೃತಿ ಒಳಗೊಂಡಿದೆ. ಇಲ್ಲಿ ಶಿವಾಜಿಯ ಯುದ್ಧತಂತ್ರಗಳು,ಯುದ್ಧವನ್ನು ಗೆಲ್ಲಲು ಕೋಟೆಗಳ ಅಗತ್ಯ ಮತ್ತು ಅವುಗಳ ಮಹತ್ವವನ್ನು ಅನಾವರಣಗೊಳಿಸಲಾಗಿದೆ.ತಂತ್ರಕ್ಕೆ ಪ್ರತಿತಂತ್ರ ಹೂಡುವಲ್ಲಿ ಶಿವಾಜಿ ನಿಷ್ಣಾತನಾಗಿದ್ದ ಎಂಬುದಕ್ಕೆ ಅಫ್ಜಲ್ ಖಾನನ ಸಾವಿನ ಸನ್ನಿವೇಶದ ವಿವರಣೆ ಮೈ ನವಿರೇಳಿಸುತ್ತದೆ.ಅಮೇರಿಕೆಯು ಅಬ್ಬೋಟಾಬಾದನಲ್ಲಿ ಒಸಾಮಾ ಬಿನ್ ಲಾಡೆನ್ ಮೇಲೆ ನಡೆಸಿದ ದಾಳಿಯು ಪುಣೆಯ ಲಾಲಮಹಲಿನಲ್ಲಿ ಡೆಕ್ಕನ್‌ನ ಮೊಗಲ್ ಸುಬೇದಾರ್ ಶೈಶ್ತಾಖಾನ್‌ನ ಮೇಲೆ ಶಿವಾಜಿ ನಡೆಸಿದ ದಾಳಿಯಂತಿತ್ತು ಎಂದು ಸಮೀಕರಿಸುವ ಮೂಲಕ ಅವನ ಯುದ್ಧ ತಂತ್ರದ ಅಗಾಧತೆಯನ್ನು ನಿರೂಪಿಸಲಾಗಿದೆ.ಔರಂಗಜೇಬ ಮೋಸದಿಂದ ಶಿವಾಜಿಯನ್ನು ಪ್ರತಿಬಂಧಿಸಲು ಪ್ರಯತ್ನಿಸಿದಾಗ ಅದೇ ರೀತಿಯ ಮೋಸವನ್ನು ಬಳಸಿ ಆಗ್ರಾದಿಂದ ಮಹಾ ಪಲಾಯನ ಮಾಡಿದ ಶಿವಾಜಿಯ ಚಾಣಾಕ್ಷತನವನ್ನು ಗುರುತಿಸಲಾಗಿದೆ.ಅವನ ಗೆಲುವಿನ ಜೊತೆಗೆ ಸೋಲು,ಸೋಲಿನ ಜೊತೆಗೆ ಗೆಲುವಿನ ಕತೆ ಇಲ್ಲಿದೆ. ಡೆಕ್ಕನ್ ಪ್ರದೇಶದಲ್ಲಿ ಶಿವಾಜಿಯ ಏಳಿಗೆ ಮೊಗಲರು ಅಜೇಯರಲ್ಲ,ಅವರನ್ನು ಸೋಲಿಸಬಹುದು ಎಂಬ ಆತ್ಮವಿಶ್ವಾಸವನ್ನು ಉಳಿದ ಆಡಳಿತಗಾರರಲ್ಲಿ ಹುಟ್ಟುಹಾಕಿತು.ಈ ದೃಷ್ಠಿಯಿಂದ ಮೊಗಲ್ ಆಡಳಿತಕ್ಕೆ ಸವಾಲೆಸೆಯುವವರಿಗೆ ಶಿವಾಜಿ ಪ್ರೇರಣೆಯಾದ ಎಂಬುದರತ್ತ ಇಲ್ಲಿ ಗಮನ ಸೆಳೆಯಲಾಗಿದೆ.
ಈ ಕೃತಿಯಲ್ಲಿ ಕೇವಲ ಶಿವಾಜಿಯ ಸೈನಿಕ ಕಾರ್ಯಚರಣೆಗಳ ವಿವರಣೆ ಮಾತ್ರವಲ್ಲ.ಅವನ ಆಡಳಿತ ವಿಧಾನದ ಮೇಲೂ ಬೆಳಕು ಚೆಲ್ಲಲಾಗಿದೆ.ಶಿವಾಜಿ ಬರೀ ಸೈನ್ಯ ಕಟ್ಟಲಿಲ್ಲ,ರಾಜ್ಯವನ್ನೂ ಕಟ್ಟಿದ.ರಾಜ್ಯದ ಆದಾಯದ ಮೂಲವನ್ನು ಬಲಪಡಿಸಿದ.ನ್ಯಾಯಯುತವಾಗಿ ರಾಜ್ಯಾಡಳಿತ ಮಾಡುತ್ತಿದ್ದ.ಅವನ ಆಡಳಿತದಲ್ಲಿ ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರು ಹಿಂದೂಗಳಷ್ಟೇ ಸಂತೃಪ್ತಿಯಿಂದ ಇದ್ದರು.ಕುಶಲಕರ್ಮಿಗಳಿಗೆ ಹಣ ಕೊಡುವುದರಲ್ಲಿಯೂ ಉದಾರಿಯಾಗಿದ್ದ. ಕೃಷಿಯನ್ನು ಪ್ರೊತ್ಸಹಿಸಿದ್ದ.ಸಮೃದ್ಧ ರಾಜ್ಯಕ್ಕೆ ಅಗತ್ಯವಾದ ಎಲ್ಲ ಯೋಜನೆಗಳನ್ನೂ ರೂಪಿಸಿದ್ದ ಮತ್ತು ಅನುಷ್ಠಾನಕ್ಕೆ ತಂದಿದ್ದ.ಆದ್ದರಿಂದಲೇ ಆತ ಛತ್ರಪತಿ ಎನಿಸಿಕೊಂಡಿದ್ದ ಎಂಬುದನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಲಾಗಿದೆ.
ಐತಿಹಾಸಿಕ ಸಂಗತಿಗಳನ್ನು ಒಳಗೊಂಡ ಈ ಜೀವನ ಚರಿತ್ರೆ ಕೆಲವೊಮ್ಮೆ ದಟ್ಟವಾದ ವಿವರಗಳೊಂದಿಗೆ ಇಡಿಕಿರಿದು ಇತಿಹಾಸದ ಪಠ್ಯವನ್ನು ಓದಿದ ಅನುಭವ ಕೊಡುತ್ತದೆ.ಇನ್ನೊಮ್ಮೆ ಸಾಹಸದ ಚಿತ್ರಣದೊಂದಿಗೆ ಥ್ರಿಲ್ಲರ್ ಕಾದಂಬರಿಯನ್ನು ಓದುವಾಗಿನ ರೋಮಾಂಚನ ನೀಡುತ್ತದೆ.ಮತ್ತೊಮ್ಮೆ ಸರಳ ನಿರೂಪಣೆಯೊಂದಿಗೆ ಪ್ರಬಂಧದ ಸಮಾಧಾನವನ್ನು ದೊರಕಿಸುತ್ತದೆ.
ಅನುವಾದ ನಿಜಕ್ಕೂ ತುಂಬ ಶ್ರಮ ಬಯಸುವ ಕೆಲಸ.ಅದೊಂದು ರೀತಿಯ ಸೃಜನಶೀಲತೆಯೂ ಹೌದು.ಪ್ರೊ.ಆರ್.ಎಸ್.ಹಬ್ಬು ಅವರು ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಪರಿಣತಿ ಪಡೆದಿದ್ದಾರೆ.ಇಷ್ಟಪಟ್ಟು ಅನುವಾದಕ್ಕೆ ತೊಡಗಿರುವುದರಿಂದ ಅವರಿಗೆ ಯಾವ ತೊಡಕು ಉಂಟಾಗಿಲ್ಲ.ಮೂಲಕ್ಕೆ ಭಂಗ ಬರದಂತೆ ಅನುವಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆದ್ದರಿಂದ ಎಲ್ಲಿಯೂ ಇದು ಅನುವಾದ ಎಂಬ ಭಾವನೆ ಮೂಡಿಸುವುದಿಲ್ಲ.ಇದನ್ನು ಓದುವಾಗ ಮೂಲ ಕೃತಿ ಎಂದೇ ಭಾಸವಾಗುತ್ತದೆ.ಇದೇ ಅನುವಾದಕರ ನಿಜವಾದ ಯಶಸ್ಸು.
- ಶ್ರೀಧರ ಬಿ.ನಾಯಕ,ಬೇಲೇಕೇರಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ