ಗುರುವಾರ, ಫೆಬ್ರವರಿ 25, 2021
ದುರ್ಗಸಿಂಹನ ಪಂಚತಂತ್ರದ ಎರಡು ಗಿಳಿಗಳ ಕಥೆ
ಕನ್ನಡ ಸಾಹಿತ್ಯದಲ್ಲಿ ದುರ್ಗಸಿಂಹನಿಗೆ ವಿಶಿಷ್ಟ ಸ್ಥಾನವಿದೆ.ಪಂಚತಂತ್ರ ಎಂಬ ವಿಶಿಷ್ಟ ಕೃತಿಯ ಮೂಲಕ ತನ್ನ ಸ್ಥಾನವನ್ನು ಆತ ಭದ್ರಪಡಿಸಿ ಕೊಂಡಿದ್ದಾನೆ. ಭಾರತೀಯ ಸಾಹಿತ್ಯದಲ್ಲಿ ಪಂಚತಂತ್ರದ ಎರಡು ಧಾರೆಗಳು ಪ್ರಚಲಿತದಲ್ಲಿವೆ.ಒಂದು ವಿಷ್ಣುಶರ್ಮನ ಪಂಚತಂತ್ರ ಇನ್ನೊಂದು ವಸುಭಾಗಭಟ್ಟ ನ ಪಂಚತಂತ್ರ. ವಿಷ್ಣುಶರ್ಮನ ಪಂಚತಂತ್ರದ ಅನೇಕ ಅವತರಣಿಕೆಗಳು ನಮಗೆ ದೊರಕುತ್ತವೆ ಆದರೆ ವಸುಭಾಗಭಟ್ಟನ ಪಂಚತಂತ್ರದ ಅವತರಣಿಕೆ ಕೇವಲ ದುರ್ಗಸಿಂಹನಲ್ಲಿ ಮಾತ್ರ ದೊರಕುತ್ತದೆ.ಆದ್ದರಿಂದ ದುರ್ಗಸಿಂಹನ ಪಂಚತಂತ್ರಕ್ಕೆ ಭಾರತೀಯ ಸಾಹಿತ್ಯದಲ್ಲಿ ಮಹತ್ವದ ಸ್ಥಾನವಿದೆ. ದುರ್ಗಸಿಂಹ ಈ ಕೃತಿಯಲ್ಲಿ ತನ್ನ ವೈಯಕ್ತಿಕ ವಿವರಗಳನ್ನು ಹೇಳಿಕೊಂಡಿದ್ದಾನೆ .ಇವನ ಊರು ಸಯ್ಯಡಿ.ಇಂದಿನ ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿದೆ. ತಂದೆ ಈಶ್ವರಾರ್ಯ, ತಾಯಿ ದೇವಕಬ್ಬೆ.ದುರ್ಗಸಿಂಹನ ಗುರು ಶಂಕರ ಭಟ್ಟ.ಇಮ್ಮಡಿ ಜಯಸಿಂಹನ ಆಸ್ಥಾನದಲ್ಲಿ ಸಂಧಿವಿಗ್ರಹಿ ಆಗಿದ್ದ ದುರ್ಗಸಿಂಹ ಪ್ರತಾಪಶಾಲಿಯೂ ಆಗಿದ್ದ.ಸಂಸ್ಕೃತದಲ್ಲಿದ್ದ ಪಂಚತಂತ್ರವನ್ನು ಕನ್ನಡದಲ್ಲಿ ರಚಿಸುವ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾನೆ.ಈ ಕೃತಿಯನ್ನು 1031ರಲ್ಲಿ ರಚಿಸಿರುವದಾಗಿ ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.
ಪಂಚತಂತ್ರ ಹೆಸರೇ ಸೂಚಿಸುವಂತೆ ಐದು ತಂತ್ರಗಳ ಕಥೆಗಳ ಸಂಕಲನ.ಅರ್ಥಶಾಸ್ತ್ರದ ಐದು ತಂತ್ರಗಳ ಮೂಲಕ ಕಥೆಗಳನ್ನು ಹೇಳಿರುವದರಿಂದ ಇದಕ್ಕೆ ಪಂಚತಂತ್ರ ಎಂಬ ಹೆಸರು ಬಂದಿದೆ.ಅಮರ ಶಕ್ತಿ ಎಂಬ ಅರಸನ ದಾರಿತಪ್ಪಿದ ಮೂರು ಮಕ್ಕಳನ್ನು ಯೋಗ್ಯರನ್ನಾಗಿ ಮಾಡಲು ಪ್ರಾಣಿ-ಪಕ್ಷಿಗಳ ಪಾತ್ರಗಳನ್ನು ಒಳಗೊಂಡ ನೀತಿ ಕಥೆಗಳನ್ನು ಹೇಳುವ ಮೂಲಕ ಅವರನ್ನು ಸಂಸ್ಕಾರವಂತರನ್ನಾಗಿ ಪರಿವರ್ತಿಸಲಾಯಿತು ಎಂಬುದು ಈ ಕಾವ್ಯದ ಹೆಗ್ಗಳಿಕೆ.ಭೇದ ಪ್ರಕರಣ ಪರೀಕ್ಷಾ ಪ್ರಕರಣ ವಿಶ್ವಾಸ ಪ್ರಕರಣ, ವಂಚನೆ ಪ್ರಕರಣ ,ಮಿತ್ರಕಾರ್ಯ ಎಂಬ ಐದು ತಂತ್ರಗಳು ಈ ಕಾವ್ಯದಲ್ಲಿ ವೆ
ಪ್ರಸ್ತುತ ಎರಡು ಗಿಣಿಗಳ ಕಥೆಯನ್ನು ದುರ್ಗಸಿಂಹನ ಪಂಚತಂತ್ರದ ಮೊದಲ ಪ್ರಕರಣ ಮಿತ್ರ ಭೇದದಿಂದ ಆಯ್ದುಕೊಳ್ಳಲಾಗಿದೆ . ಗುಣದೋಷಗಳು ಸಹವಾಸದಿಂದ ಉಂಟಾಗುತ್ತವೆ ಎಂಬುದನ್ನು ಈ ಕಥೆ ಪರಿಣಾಮಕಾರಿಯಾಗಿ ನಿರೂಪಿಸುತ್ತದೆ.ಇಲ್ಲಿ ಪದ್ಯ ಭಾಗಕ್ಕಿಂತ ಗದ್ಯ ಭಾಗವೇ ಹೆಚ್ಚಾಗಿದ್ದು ನಿರೂಪಣೆಯ ದೃಷ್ಟಿಯಿಂದ ಅಡೆತಡೆಯಿಲ್ಲದೆ ಮುಂದುವರಿಯಲು ಅನುಕೂಲವಾಗಿದೆ. ಶ್ರೀಮನ್ನಾರಾಯಣನಿಗೆ ಸರಿ ದೊರೆಯಾದ ಜನೋದಯ ಎಂಬ ಅರಸನು ಒಮ್ಮೆ ಬೇಟೆಯಾಡಲು ಕಾಡಿಗೆ ಹೋದನು. ಇದನ್ನು ತಿಳಿದ ಅವನ ದಾಯಾದಿ ಅವನನ್ನು ಕೊಲ್ಲುವ ಉದ್ದೇಶದಿಂದ ಹಿಂಬಾಲಿಸಿದನು.ಇದನ್ನು ಅರಿತ ರಾಜನು ಅವನು ತನ್ನ ಶತ್ರು ಎಂದು ಭಾವಿಸಿ ವೈರತ್ವಕ್ಕೆ ಬಲಿಯಾಗಿ ನಿಷ್ಕಾರಣವಾಗಿ ಏಕೆ ಸಾಯಬೇಕು,ಬದುಕಿದವನೇ ಬಂಟ ಎಂಬ ಗಾದೆ ಮಾತಿದೆ. ಧರ್ಮಸಾಧನೆಗೆ ಶರೀರವೇ ನಿಜವಾದ ಮಾಧ್ಯಮ.ಆದ್ದರಿಂದ ಈ ಶರೀರವನ್ನು ಕಾಪಾಡಿಕೊಳ್ಳಬೇಕು ಎಂದು ನಿರ್ಧರಿಸಿ ತಾನು ಏರಿದ ಕುದುರೆಯನ್ನು ಮನಸ್ಸಿನ ವೇಗಕ್ಕೂ ಮಿಗಿಲಾಗಿ ಓಡಿಸಿದನು.ಹಾಗೆ ಓಡಿದ ಕುದುರೆ ಬೇಡರ ಬಿಡಾರವೊಂದನ್ನು ತಲುಪಿತು.ಜನ ಸಂಚಾರವಿರುವಲ್ಲಿ ನಿರ್ಭೀತನಾಗಿ ಇರಬಹುದು ಎಂದು ಭಾವಿಸಿದ ರಾಜ ಅಲ್ಲಿ ಕೆಲಕಾಲ ವಿಶ್ರಾಂತಿ ಬಯಸಿದನು.ಆದರೆ ಬೇಡರ ಬಿಡಾರದಲ್ಲಿ ಇದ್ದ ಪಂಜರದ ಗಿಣಿಯೊಂದು ಎಲೈ ಶಬರರಾಜ,ಬಗೆಬಗೆಯ ಆಭರಣಗಳನ್ನು ತೊಟ್ಟುಕೊಂಡು ಒಬ್ಬನು ವ್ಯಾಕುಲಗೊಂಡು ಇಲ್ಲಿಗೆ ಬರುತ್ತಿದ್ದಾನೆ. ಯಾವುದೇ ಗೊಂದಲಗಳಿಲ್ಲದೆ ಈ ಐಶ್ವರ್ಯವನ್ನು ತೆಗೆದುಕೊಳ್ಳು ಎಂದಿತು.ಈ ಮಾತನ್ನು ಕೇಳಿ ಇನ್ನಷ್ಟು ಗಾಬರಿಗೊಂಡ ರಾಜ ಇದು ಸುರಕ್ಷಿತ ಪ್ರದೇಶವಲ್ಲ ಎಂದು ಭಾವಿಸಿ ಕುದುರೆಯನ್ನು ಮುನ್ನಡೆಸಿದನು. ಸ್ವಲ್ಪ ದೂರ ಕ್ರಮಿಸುತ್ತಿದ್ದಂತೆ ಮುಗಿಲು ಮುದ್ದಿಡುವ ಮರಗಳ ಗುಂಪಿನ ನಡುವೆ ಸ್ವರ್ಗಕ್ಕೆ ಹೋಗಲು ಸೋಪಾನ ಕಟ್ಟಿದಂತೆ ಏರುತ್ತಿದ್ದ ಹೊಗೆಯನ್ನು ಕಂಡು ಅದೂ ಬೇಡರಹಳ್ಳಿ ಎಂದು ಭಾವಿಸಿ ಭಯಗೊಂಡು ತನ್ನ ಇಷ್ಟದೈವವನ್ನು ಸ್ಮರಿಸಿದನು.ಮಾರ್ಗಾಯಾಸದಿಂದ ಬಳಲಿದ ನನಗೆ ದೇವರೇ ಗತಿಯೆಂದು ಭಾವಿಸಿ ಮನಗುಂದಿ ಬರುತ್ತಿದ್ದ ಜನೋದಯ ಅರಸನಿಗೆ ಪ್ರಾಣವಾಯು ಬರುವಂತೆ ಹೋಮಧೂಮದ ಕಂಪನ್ನು ಹೊತ್ತುತಂದ ಗಾಳಿ ದೇಹದ ಬಳಲಿಕೆಯನ್ನು ದೂರ ಮಾಡುತ್ತದೆ.ಧೂಪ ವಾಸನೆಯಿಂದ ಇದು ಋಷ್ಯಾಶ್ರಮವಾಗಿರಬೇಕು ಎಂದು ನಿಶ್ಚಯಿಸಿ ಅತ್ತ ಮುಂದುವರೆಯುತ್ತಾನೆ.ಅಲ್ಲಿಯ ವಾತಾವರಣ ಆಹ್ಲಾದಕರವಾಗಿರುತ್ತದೆ. ಆಶ್ರಮವಾಸಿಗಳು ಹೋಮಕಾರ್ಯಗಳ ಸಿದ್ಧತೆಯಲ್ಲಿ ಇರುತ್ತಾರೆ. ಬಗೆ ಬಗೆಯ ಸುಗಂಧ ಪುಷ್ಪಗಳನ್ನು ಹೋಮ ಕಟ್ಟಿಗೆಗಳನ್ನು ಸಂಗ್ರಹಿಸುತ್ತಿದ್ದ ಪರಿಚಾರಕರನ್ನು ಕಾಣುತ್ತಾನೆ. ಫಲಭರಿತ ಮರ-ಗಿಡಗಳನ್ನೂ ವೇದಮಂತ್ರಗಳನ್ನು ಉಲಿಯುತ್ತಿದ್ದ ಕೋಗಿಲೆ,ಗಿಳಿ, ಗೊರವಂಕಗಳನ್ನು ನೋಡುತ್ತಾನೆ. ತಮ್ಮ ತುಂಟಾಟಗಳನ್ನು ಮರೆತು ತಪೋಧನರಿಗೆ ನೆರವು ನೀಡುವ ಕಪಿಗಳನ್ನು ಅರಸ ಕಾಣುತ್ತಾನೆ. ಯಜ್ಞಕ್ಕೆ ಬೇಕಾದ ಸಮೃದ್ಧ ಕ್ಷೀರಗಳನ್ನು ನೀಡುವ ಕಾಮಧೇನುಗಳು ಅವನ ಕಣ್ಣಿಗೆ ಬೀಳುತ್ತವೆ. ಅಲ್ಲಿರುವ ಪ್ರಾಣಿ ಪಕ್ಷಿಗಳು ತಮ್ಮಲ್ಲಿರುವ ವೈರತ್ವವನ್ನು ಮರೆತು ವರ್ತಿಸುವುದನ್ನು ಅರಸ ಕಾಣುತ್ತಾನೆ. ಎಲ್ಲಿ ನೋಡಿದರೂ ತಪೋಧನರ ತಪಸ್ಸಿನ ಪ್ರಭಾವಕ್ಕೆ ಒಳಗಾಗಿ ಸದ್ಗುಣಗಳನ್ನು ಹೊಂದಿದ ಜೀವಸಂಕುಲಗಳನ್ನು ಕಂಡು ಅರಸ ಆಶ್ಚರ್ಯ ಚಕಿತನಾಗುತ್ತಾನೆ. ಆಗಲೇ ಅವನನ್ನು ಕಂಡ ಒಂದು ರಾಜಕೀರವು ಎಲೈ ಮಹಾಪುರುಷ ನೀನೂ ಕುದುರೆಯೂ ತುಂಬಾ ಬಳಲಿದ್ದೀರಿ.ಇಂದಿ ನೀವು ಈ ಋಷ್ಯಾಶ್ರಮದಲ್ಲಿ ವಿಶ್ರಮಿಸಿ ಕೊಂಡು ಹೋಗಿ ಎಂದಿತು.ಆ ಪಕ್ಷಿಯ ಮಾತನ್ನು ನಂಬಿ ಸಮೀಪದ ಹೂಗೊಳದ ದಡದಲ್ಲಿದ್ದ ಮಾವಿನ ಮರದ ನೆರಳಲ್ಲಿ ಕುದುರೆಯನ್ನು ಬಿಟ್ಟು ತಾನು ಸ್ನಾನಾದಿ ನಿತ್ಯ ನಿಯಮಗಳನ್ನು ಪೂರೈಸಿ ಶುಚಿರ್ಭೂತನಾದನು.ಬಳಿಕ ಅಲ್ಲಿಯೇ ಸಮೀಪದಲ್ಲಿದ್ದ ಆಶ್ರಮದ ಗುರುಗಳ ಬಳಿ ಬಂದು ಅವರಿಗೆ ನಮಸ್ಕರಿಸಿ ಗುರುಗಳೇ ತಾವು ದೇವತಾ ಸ್ವರೂಪರು.ತತ್ವ,ತಪಸ್ಸು, ಧರ್ಮ ಇವುಗಳು ಹೇಗಿವೆ ಎಂಬುದನ್ನು ನನಗೆ ತಿಳಿಯುವಂತೆ ಹೇಳಿರಿ ಎಂದು ಕೋರುತ್ತಾನೆ.ಆಗ ಆ ಮುನೀಶ್ವರನು"ಹುಟ್ಟು ಸಾವು ಇಲ್ಲದವನೇ ದೇವರು, ಅವನ ಮಾತೇ ತತ್ವ, ಜೀವ ದಯೆಯೇ ಧರ್ಮ, ಇಂದ್ರಿಯ ಸೇವನೆಯನ್ನು ತೊರೆಯುವುದೇ ತಪಸ್ಸು" ಎಂದು ಕೆಲ ಮಾತುಗಳಲ್ಲಿ ತತ್ವ ವಿಚಾರವನ್ನು ಉಪದೇಶಿಸುತ್ತಾನೆ. ಇದರಿಂದ ಸಂತೋಷ ಹೊಂದಿದ ರಾಜನು ಅಲ್ಲಿಯೇ ಕುಳಿತು ವಿಶ್ರಾಂತಿ ಪಡೆಯುತ್ತಾನೆ.ಆಗ ರಾಜಕೀರವು ನೇರಳೆ, ಬಾಳೆ ಮುಂತಾದ ರುಚಿಕರವಾದ ಹಣ್ಣುಗಳನ್ನು ತಂದು ಕೊಡುತ್ತದೆ. ಅದನ್ನೆಲ್ಲ ಸವಿದು ತನ್ನ ಶ್ರಮ ಪರಿಹರಿಸಿಕೊಂಡ ಅರಸನು ಆ ಗಿಳಿಯ ಜೊತೆಗೆ ಸಂವಾದ ನಡೆಸುತ್ತಾನೆ. ನಿನ್ನಂತೆ ದೇಹ,ರೂಪು,ವಯಸ್ಸು, ಸ್ವರಗಳನ್ನು ಹೊಂದಿದ ನಿನಗೆ ಅನುರೂಪವಾದ ಗಿಳಿಯೊಂದನ್ನು ಬೇಡರಹಳ್ಳಿಯಲ್ಲಿ ಕಂಡೆ.ಅದು ನನ್ನನ್ನು ಕಂಡು ಇವನನ್ನು ಹಿಡಿ,ಕಟ್ಟು,ಕೊಲ್ಲು ಎಂದು ಕಠಿಣವಾಗಿ ವರ್ತಿಸಿತು.ಆದರೆ ನೀನು ಮಿತ್ರನಾಗಿ ನಡೆದುಕೊಂಡೆ ಇದಕ್ಕೆ ಕಾರಣವೇನು? ಎಂದು ಕೇಳಿದನು.ಆಗ ರಾಜಕೀರವು ಆ ಪಕ್ಷಿಗೂ ನನಗೂ ತಂದೆ-ತಾಯಿಗಳು ಒಬ್ಬರೇ.ಈ ಮುನಿಗಳು ನನ್ನನ್ನು ಕೊಂಡು ಬಂದರು.ಅವನನ್ನು ಕ್ರೂರರೂ, ಕಠಿಣ ಹೃದಯದವರೂ ಆದ ಬೇಡರು ಕೊಂಡು ಹೋದರು. ನಾನು ಪ್ರತಿದಿನ ಮುನಿಗಳ ಮಾತುಗಳನ್ನು ಕೇಳಿದರೆ ಅವನು ಬೇಡರ ಮಾತುಗಳನ್ನು ಕೇಳುವನು ಇದು ಪ್ರತ್ಯಕ್ಷವಾಗಿ ನಿನ್ನ ಅನುಭವಕ್ಕೆ ಬಂದಿದೆ ಎಂದು ಹೇಳಿತು.
ಎಂತಹ ಬುದ್ಧಿವಂತನೂ ಸಂಗ ವಶದಿಂದ ತನ್ನ ಸ್ವಭಾವವನ್ನು ಬೆಳೆಸಿಕೊಳ್ಳುತ್ತಾನೆ ಎಂಬುದು ಸತ್ಯ ಎಂದು ಅರಸ ಅರಿತುಕೊಂಡನು.
ನೀತಿಯೇ ಮುಖ್ಯ ಉದ್ದೇಶವಾದ ಈ ಕಥೆಯಲ್ಲಿ ದುರ್ಗಸಿಂಹ, ವ್ಯಕ್ತಿಯ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಪರಿಸರ ವಹಿಸುವ ಪಾತ್ರವನ್ನು ನಿರೂಪಿಸುತ್ತಾನೆ. ಪರಿಸರ ಮತ್ತು ಸಹವಾಸಗಳು ವ್ಯಕ್ತಿಗಳ ಬದುಕಿನಲ್ಲಿ ಮಹತ್ವದ ಪ್ರಭಾವವನ್ನು ಬೀರುತ್ತವೆ ಆದ್ದರಿಂದ ಒಳ್ಳೆಯ ಪರಿಸರದಲ್ಲಿ ಬಾಳಿ ಬದುಕಬೇಕು ಎಂಬ ನೀತಿಯನ್ನು ಈ ಕತೆಯ ಮೂಲಕ ನಿರೂಪಿಸುತ್ತಾನೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ