ಮಂಗಳವಾರ, ಏಪ್ರಿಲ್ 14, 2026
ಬಂಡಿಹಬ್ಬ - ಜಗತ್ತಿನ ಅತಿ ಪ್ರಾಚೀನ ಜಾತ್ರೆಯೊಂದರ ಅನಾವರಣ
ಬಂಡಿ ಹಬ್ಬ ಎಂದಾಗ ಸಾಮಾನ್ಯವಾಗಿ ನಮಗೆಲ್ಲ ನೆನಪಾಗುವುದು ಅಂಕೋಲೆಯ ಭೂಮ್ತಾಯಿ ದೇವಸ್ಥಾನ,ಉಲಿ ಚಪ್ಪರದ ಜೋಕಾಲಿ,ಆಡುಕಟ್ಟೆಯ ಮುಖ ಆಡಿಸುವುದು,ಗುನಗರು ತಲೆಯ ಮೇಲೆ ಹೊತ್ತ ಕಳಸ,ಅವರು ಸೊಂಟಕ್ಕೆ ಸಿಕ್ಕಿಸಿಕೊಂಡ ಕತ್ತಿ,ಭಾರ ಬಂದಾಗ ವಿಚಾರ ಹಾಕುವದು,ಬಲಿಮಕ್ಕಳ ಕೂಗು,ಕಾಜಮಿಜಿ,ಕೊಳಕುರಿ,ಕುರಿ ಕಡಿಯುವುದು ಹೀಗೆ ಹಲವು ರೋಮಾಂಚನಕಾರಿ ಸಂಗತಿಗಳ ನೆನಪಾಗುತ್ತದೆ.ಬಂಡಿಹಬ್ಬ ನಮ್ಮ ಅಂಕೋಲಿಗರ ಜನಬದುಕಿನಲ್ಲಿ ಬೆರೆತು ಹೋದ ಒಂದು ಅವಿಸ್ಮರಣೀಯ ಅನುಭವ.ಬಂಡಿಹಬ್ಬದ ಬಗ್ಗೆ ಮಾತನಾಡುವಾಗ ಭಯ ಭಕ್ತಿ ಶ್ರದ್ಧೆಯಿಂದ ನಮಗೆ ದಕ್ಕಿದ ಸಂಗತಿಗಳ ಬಗ್ಗೆ ಸಂಭ್ರಮದಿಂದ ಮಾತನಾಡುತ್ತೇವೆ.ಆದರ ಕುತೂಹಲದ ಸಂಗತಿ ಎಂದರೆ ನಾವು ತಿಳಿದುಕೊಂಡದಷ್ಟೇ ಬಂಡಿಹಬ್ಬ ಅಲ್ಲ.ಅದರಾಚೆಗೂ ನಮಗೆ ಗೊತ್ತಿಲ್ಲದ ನಮ್ಮ ಅರಿವಿಗೂ ದಕ್ಕದ ಹಲವು ವಿಸ್ಮಯಗಳಿವೆ.ಹಬ್ಬದ ಆಚರಣೆಯ ಸಡಗರದಲ್ಲಿ ಅದೆಲ್ಲ ಮರೆಯಾಗಿದೆ.ಹೀಗೆ ವಿಸ್ಮೃತಿಗೆ ಸರಿದ ನಿಗೂಢ ಸಂಗತಿಗಳನ್ನು ಅನಾವರಣಗೊಳಿಸುವ ಪ್ರಯತ್ನವನ್ನು ವಿಘ್ನೇಶ ಗುನಗಾ ಮಾಡಿದ್ದಾರೆ.ಮೂಲತಃ ವಿಜ್ಞಾನದ ವಿದ್ಯಾರ್ಥಿಯಾದ ವಿಘ್ನೇಶ ಸಂಸ್ಕೃತಿಯ ಕುರಿತು ತಾಳಿರುವ ಕುತೂಹಲ ಆಶ್ಚರ್ಯಕರವಾದದ್ದು.ಈಗಾಗಲೇ ಭೂಮ್ತಾಯಿ:ಮೂಲ, ವಿವಾದ ಮತ್ತು ವಾಸ್ತವ ಎಂಬ ಕೃತಿಯ ಮೂಲಕ ಗಮನ ಸೆಳೆದಿರುವ ಇವರು ಈಗ ಅಂಕೋಲಿಗರ ಮತ್ತು ಉತ್ತರ ಕನ್ನಡ ಕರಾವಳಿಗರ ದೈವಿಕ ಸಂವೇದನೆಯ ಪ್ರತೀಕವಾಗಿರುವ ಬಂಡಿಹಬ್ಬದ ಕುರಿತು ಅಧ್ಯಯನಪೂರ್ಣ ಕೃತಿಯನ್ನು ರಚಿಸುವುದರ ಮೂಲಕ ತಮ್ಮ ಆಸಕ್ತಿ ಯಾವ ಕಡೆಗಿದೆ ಎಂಬುದನ್ನು ತೋರಿಸುತ್ತಿದ್ದಾರೆ.ಅವರು ಬಂಡಿಹಬ್ಬದ ಆಚರಣೆಯ ಭಾಗವಾಗಿರುವುದರಿಂದ,ಆಚರಣೆಯ ಒಳಗಿನವರಾಗಿರುವುದರಿಂದ ಅವರ ಪ್ರಯತ್ನ ಅಧಿಕೃತ ಎನಿಸಿಕೊಳ್ಳುತ್ತದೆ.
ಬಂಡಿಹಬ್ಬದ ನಿಗೂಢತೆಯನ್ನು ಭೇದಿಸುವ ಸಂದರ್ಭದಲ್ಲಿ ಅವರು ಕೇವಲ ಮೌಖಿಕ ಹೇಳಿಕೆಗಳಿಗಷ್ಟೇ ಸೀಮಿತರಾಗಿಲ್ಲ. ಕನ್ನಡ ಇಂಗ್ಲಿಷ್ ಮತ್ತಿತ್ತರ ಹಲವು ಭಾಷೆಗಳ ಹತ್ತಾರು ಪುಸ್ತಕಗಳನ್ನು ಅವಲೋಕಿಸಿದ್ದಾರೆ.ಗ್ರಂಥಸ್ಥವಾದ ಹಲವು ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಶೀಲಿಸಿದ್ದಾರೆ. ಅಂಕೋಲೆಯ ಸುತ್ತ ಮುತ್ತಲಿನ ಹಾಗೂ ಹೊರರಾಜ್ಯ ಮತ್ತು ಹೊರದೇಶಗಳ ಆಚರಣೆಗಳನ್ನು ತೌಲನಿಕವಾಗಿ ಗಮನಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕೃತಕ ಬುದ್ಧಿಮತ್ತೆ ಪ್ರಬಲವಾಗುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಅತ್ಯಂತ ಪ್ರಾಚೀನವಾದ ಆಚರಣೆಯೊಂದರ ರಹಸ್ಯವನ್ನು ಹೊಸತಲೆಮಾರಿಗೆ ಬಹಿರಂಗಪಡಿಸಬೇಕು ಎಂಬ ಪ್ರಾಮಾಣಿಕತೆಯಿಂದ ಈ ಮಹತ್ತರ ಕಾರ್ಯದಲ್ಲಿ ತೊಡಗಿದ್ದಾರೆ.ಆದ್ದರಿಂದ ಅಂಕೋಲೆಯ ಬಂಡಿಹಬ್ಬವನ್ನು ಕುರಿತಾದ ಅವರ ಈ ಪುಸ್ತಕ ಚಿರಕಾಲ ಉಳಿಯುವ ದಾಖಲೆಯಾಗಲಿದೆ.
ಕರ್ನಾಟಕ ಕರಾವಳಿಗೆ ತನ್ನದೇ ಆದ ಸಾಂಸ್ಕೃತಿಕ ಅಸ್ಮಿತೆ ಇದೆ. ಕರ್ನಾಟಕದ ಇತರೆಡೆಗಳಿಗೆ ಹೋಲಿಸಿದರೆ ಕರಾವಳಿಯ ಪರಿಸರದಲ್ಲಿ ಗುರುತಿಸಬಹುದಾದ ಸಂಸ್ಕೃತಿಯ ಚಿತ್ತಾರ ವಿಶಿಷ್ಟವಾದದ್ದು.ಸುಗ್ಗಿಹಬ್ಬ,ದೊಡ್ಡಹಬ್ಬ,ಹೊಸ್ತು,ಬಂಡಿಹಬ್ಬ,ಯಕ್ಷಗಾನ ಮೊದಲಾದ ಸಾಂಸ್ಕೃತಿಕ ಗುರುತುಗಳು ಇಲ್ಲಿನ ಜನಜೀವನದೊಂದಿಗೆ ಹಾಸುಹೊಕ್ಕಾಗಿವೆ.ಒಂದು ಕಾಲಕ್ಕೆ ಕರಾವಳಿ ಕರ್ನಾಟಕದ ಭೌಗೋಳಿಕ ಪರಿಸರವು ಕೃಷಿ ಸಂಸ್ಕೃತಿಯನ್ನು ಒಳಗೊಂಡಿತ್ತು.ಈ ಕೃಷಿ ಸಂಸ್ಕೃತಿಯ ಭಾಗವಾಗಿ ದೈವಗಳು ಆರಾಧನೆಗೆ ಒಳಪಡುತ್ತಿದ್ದವು.ಕರಾವಳಿಯ ಜನಪದರು ತಮ್ಮ ಬದುಕಿನ ಆರಾಧ್ಯ ದೈವಗಳಾಗಿ ಮಾಸ್ತಿ, ಜಟಗ,ಬೀರ,ಬೊಮ್ಮಯ್ಯ,ಭೂಮ್ತಾಯಿ,ರಾಕೇಶ ಹೀಗೆ ಅನೇಕ ದೈವ ಶಕ್ತಿಗಳನ್ನು ಪೂಜಿಸುತ್ತಿದ್ದಾರೆ.ಈ ದೈವಗಳಲ್ಲಿ ಹೆಚ್ಚಿನವುಗಳನ್ನು ಸಾಂಕೇತಿಕವಾಗಿ ನಂಬಿಕೊಂಡು ಬರುತ್ತಿದ್ದಾರೆ.ಈ ದೈವಗಳ ತೃಪ್ತಿಗಾಗಿ ಹಲವು ಆಚರಣೆಗಳನ್ನು ಪಾಲಿಸುತ್ತಿದ್ದಾರೆ. ಜನಪದ ಸಂಸ್ಕೃತಿಗೆ ಆಚರಣೆಯೇ ಬೆನ್ನೆಲುಬು.ಆಚರಣೆಯಿಲ್ಲದೆ ಯಾವ ದೈವದ ಅಸ್ತಿತ್ವವೂ ಇಲ್ಲಿ ಸಾಧ್ಯವಿಲ್ಲ.ಜನಪದ ಧರ್ಮ ಎಂದರೆ ಅದು ಆಚರಣೆಯ ಧರ್ಮ ಎನ್ನಬಹುದು.ಇಂತಹ ಆಚರಣೆಗಳು ನಿರ್ದಿಷ್ಟ ಕಾಲದಲ್ಲಿ ನಿರ್ದಿಷ್ಟ ವ್ಯಕ್ತಿ ಮತ್ತು ನಿರ್ದಿಷ್ಟ ಸಮುದಾಯಗಳಿಂದ ಆಗಬೇಕಾದುದು ನಿಯಮ.ದೈವಕ್ಕೂ ಸಮಾಜಕ್ಕೂ ಇರುವ ಸಂಬಂಧ ಅಭಿನಯಗೊಳ್ಳುವ ಕ್ರಮದ ವಿವರಗಳೇ ಆಚರಣೆಗಳು.ಈ ಆಚರಣೆಗಳಿಗೆ ನಂಬಿಕೆಯೇ ಮೂಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಈ ನಂಬಿಕೆ ಮತ್ತು ಆಚರಣೆಯ ಹಿನ್ನೆಲೆಯಲ್ಲಿ ಜಗತ್ತಿನ ಅತಿ ಪ್ರಾಚೀನ ಜಾತ್ರೆಯಾದ ಬಂಡಿಹಬ್ಬದ ರೂಪ ಸ್ವರೂಪವನ್ನು ಅನಾವರಣ ಮಾಡಲು ಇಲ್ಲಿ ಪ್ರಯತ್ನಿಸಲಾಗಿದೆ. ಲೇಖಕರ ಪ್ರಕಾರ ಬಂಡಿಹಬ್ಬ ಬರಿ ಒಂದು ಸಾಧಾರಣ ಹಬ್ಬವಲ್ಲ,ಅದು ಹಬ್ಬಗಳ ಗುಚ್ಛ.ಒಂದು ದೃಷ್ಟಿಯಿಂದ ಕೃಷಿ ಹಬ್ಬವಾದರೆ,ಇನ್ನೊಂದು ದೃಷ್ಟಿಯಿಂದ ವೀರಯೋಧರ ಹಬ್ಬ.ಮತ್ತೊಂದು ದೃಷ್ಟಿಯಿಂದ ಮಹಾಸತಿಯರ ಹಬ್ಬ.ಹೀಗೆ ಬಹು ಆಯಾಮಗಳನ್ನು ಹೊಂದಿದ ನಿಸರ್ಗ ಮತ್ತು ಪಿತೃದೇವತೆಗಳನ್ನು ಆರಾಧಿಸುವ ಆದಿಮ ಆಚರಣೆಯ ಮುಂದುವರಿಕೆ.
ಈ ಕೃತಿಯಲ್ಲಿ ಮೂವತ್ತಾರು ಅಧ್ಯಾಯಗಳಿವೆ. ಅವುಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.ಮೊದಲನೆಯ ಭಾಗವನ್ನು ಆಚರಣಾ ಪರ್ವ ಎಂದು ಹೆಸರಿಸಿದ್ದಾರೆ. ಇಲ್ಲಿ ಆವಾರೆಯಿಂದ ಆರಂಬಿಸಿ ಕೊನೆಯ ದಿನದ ಕೋಳಕುರಿವರೆಗಿನ ಬಂಡಿಹಬ್ಬದ ಹನ್ನೆರಡು ದಿನಗಳ ಆಚರಣೆಯ ವಿಧಿ - ವಿಧಾನಗಳನ್ನು ಎಳೆ ಎಳೆಯಾಗಿ ಬಿಡಿಸಿ ವಿವರಿಸಿದ್ದಾರೆ.
ಕಳಸ ಬಂಡಿಹಬ್ಬದ ಕೇಂದ್ರ ಬಿಂದು.ಕಳಸದ ಮನೆ,ಕಳಸದ ಗಿಂಡಿಯ ಸ್ವರೂಪ, ಕಳಸದ ಆಭರಣಗಳು,ಕಳಸದ ಅಲಂಕಾರ,ಕಳಸದಲ್ಲಿ ಅಡಕವಾದ ಪ್ರತಿಯೊಂದು ವಸ್ತುವಿನ ತಾಂತ್ರಿಕ ಮಹತ್ವವನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.ಕಳಸ ಆತ್ಮದ ಆರಾಧನೆ ಸಂಕೇತ.ಅಲ್ಲಿ ಬಳಸಲಾಗುವ ಕನ್ನಡಿ ಸತ್ಯ ದರ್ಶನದ ಸಾಧನ. ಮೆಕ್ಸಿಕೋದ ಅಜ್ಟೆಕ್ ಜನಾಂಗದಲ್ಲಿ ಈ ರೀತಿಯ ಕನ್ನಡಿಯ ಬಳಕೆ ಇತ್ತು ಎನ್ನುತ್ತಾರೆ.ಕಳಸದ ಬೆನ್ನೆಲುಬಾದ ಚಿಬ್ಬು ಭೂಮಿ ಮತ್ತು ಸ್ವರ್ಗವನ್ನು ಬೆಸೆಯುವ ಬ್ರಹ್ಮಾಂಡ ಶಕ್ತಿಯನ್ನು ಕಳಸಕ್ಕೆ ಆಕರ್ಷಿಸುವ ವಿಶ್ವ ಅಕ್ಷದ ಪ್ರತಿನಿಧಿ.ನಾಗರ ಹೆಡೆ ಜನನ ಮರಣ ಮತ್ತು ಪುನರ್ ಸೃಷ್ಟಿಯ ಚಕ್ರದ ಸಂಕೇತ,ಕೀರ್ತಿಮುಖ ಭಾರತದ ಮೂಲ ಮತ್ತು ವೈದಿಕ ಪೂರ್ವ ದೇವತೆ, ಕೊಡೆ ಆಧ್ಯಾತ್ಮಿಕ ಸಾರ್ವಭೌಮತೆಯ ಪ್ರತೀಕವಾಗಿದ್ದು ಭೂಮಿ ಮತ್ತು ಸ್ವರ್ಗವನ್ನು ಸಂಪರ್ಕಿಸುವ ಸಾಧನ ಎಂದು ಮಾನವಶಾಸ್ತ್ರ, ವಿಜ್ಞಾನ ಮತ್ತು ತಾಂತ್ರಿಕ ವಿದ್ಯೆಗಳ ಹಿನ್ನೆಲೆಯಲ್ಲಿ ವಿವರಿಸುತ್ತಾರೆ.ಕಳಸದ ಗಿಂಡಿಯ S ಆಕಾರದ ಕೊಳವೆಯು ದೇವಿಯ ದೈವಿಕ ಉಸಿರಾಟದ ಮಾಧ್ಯಮವಾಗಿದ್ದು ಒಟ್ಟಾರೆಯಾಗಿ ಕಳಸದ ಮೂಲಕ ದೈವಕ್ಕೆ ಜೀವ ತುಂಬುವ ಗುನಗ ಒಬ್ಬ ಆದಿಮ ವಿಜ್ಞಾನಿ ಎಂಬ ತೀರ್ಮಾನಕ್ಕೆ ಲೇಖಕರು ಬರುತ್ತಾರೆ. ಕಳಸವನ್ನು ಗುನಗರು ತಲೆಯvಮೇಲೆ ಹೊತ್ತು ಸಾಗುವ ಕ್ರಿಯೆ ಸಾಮಾನ್ಯವಾದುದಲ್ಲ.ಅದು ಜೀವನvಮರಣದ ಪ್ರಶ್ನೆ.ಏನಾದರೂ ಅವಘಡಗಳು ಸಂಭವಿಸಿದರೆ ಪ್ರಾಣತ್ಯಾಗಕ್ಕೆ ಸೊಂಟದಲ್ಲಿಯೇ ಕತ್ತಿಯನ್ನು ಇಟ್ಟುಕೊಂಡಿರುತ್ತಾರೆ.ಹಬ್ಬದ ಆರಂಭದಲ್ಲಿಯೇ ಗುನಗರ ಹೆಂಡತಿ ತನ್ನ ಮುತ್ತೈದೆಯ ಸಂಕೇತವಾದ ಮೂಗುತಿಯನ್ನು ಕಳಸದ ಗದ್ದುಗೆಯ ಮೇಲೆ ಇಡುವ ಸಂಗತಿಯತ್ತ ಗಮನ ಸೆಳೆಯುತ್ತಾರೆ.ಕಳಸದ ಸಿದ್ಧತೆ ವೈದಿಕ ಸಂಪ್ರದಾಯಕ್ಕಿಂತ ಭಿನ್ನ ಎಂಬುದರತ್ತ ಅವರು ಗಮನಸೆಳೆಯುತ್ತಾರೆ. ಕಳಸ ಸಿದ್ದಮಾಡುವುದು ಎಂದರೆ ದೈವದ ಪ್ರಾಣ ಪ್ರತಿಷ್ಠೆ ಎಂದು ಹೇಳುವುದರ ಮೂಲಕ ದೈವ ಎಂಬುದು ಸ್ಥಾವರವಲ್ಲ ಅದು ಜಂಗಮ ಸ್ವರೂಪಿ,ಅದು ಜೀವಂತ ದೇವತೆ ಎಂದು ಪ್ರತಿಪಾದಿಸುತ್ತಾರೆ.
ಬಂಡಿಹಬ್ಬದ ಸಂದರ್ಭದಲ್ಲಿ ಕಳಸದ ದೇವಾಲಯ,ಗ್ರಾಮದೇವತೆ ದೇವಾಲಯ,ಮತ್ತು ಆಡುಕಟ್ಟೆಗಳು ಪ್ರಮುಖವಾಗಿದ್ದು ಇಲ್ಲಿ ನಡೆಯುವ ಹೆಚ್ಚಿನ ವಿಧಿ - ವಿಧಾನಗಳು ಅನಾದಿ ಕಾಲದ ಬುಡಕಟ್ಟು ಜನಾಂಗಗಳ ತಾಂತ್ರಿಕ ವಿದ್ಯೆಗಳು ಎಂದು ಗುರುತಿಸುತ್ತಾರೆ.ಹಬ್ಬದ ಸಂದರ್ಭದ ಎಲ್ಲ ಆಚರಣೆಗಳು ಅದು ಕೃಷಿ ಸಂಬಂಧಿತ ವಿಧಿಗಳು,ಮುಖವಾಡ ಕುಣಿತ, ಹಗರಣ- ಮುಂತಾದವು ಸಾಂಕೇತಿಕ ತಾಂತ್ರಿಕತೆಗಳಾಗಿವೆ ಎನ್ನುತ್ತಾರೆ.ಈ ಸಾಂಕೇತಿಕ ಆಚರಣೆಗಳ ಉದ್ದೇಶ ಪ್ರಕೃತಿಯ ಮೇಲೆ ಪ್ರಭಾವ ಬೀರಿ ಉತ್ತಮ ಮಳೆ ಬೆಳೆಯನ್ನು ಪಡೆಯುವುದರ ಮೂಲಕ ಸಮೃದ್ಧತೆಯನ್ನು ಹೊಂದುವುದೇ ಆಗಿದೆ. ಬಂಡಿಹಬ್ಬದ ಸಂದರ್ಭದಲ್ಲಿ ದೇವರನ್ನು ಕರೆಯುವ ಸಂಪ್ರದಾಯ ವಿಶೇಷವಾಗಿದೆ. ಈ ಸಂದರ್ಭದಲ್ಲಿ ಮೇಲ್ಮುಖವಾಗಿ ಮತ್ತು ಕೆಳಮುಖವಾಗಿ ಸೆಸೆ ಎಸೆಯುವ ಎರಡು ವಿಭಿನ್ನ ಕ್ರಿಯೆಗಳತ್ತ ಗಮನಸೆಳೆಯುತ್ತಾರೆ.ಸಾಮಿಮಕ್ಕಳ ಕುಣಿತ ನಿಸರ್ಗವನ್ನು ಒಲಿಸಿಕೊಳ್ಳಲು ಸಂವಹನ ನಡೆಸುವ ಜಗತ್ತಿನ ಅತಿ ಪ್ರಾಚೀನ ಕುಣಿತದೊಂದಿಗೆ ಹೊಂದಿರುವ ಸಾಮ್ಯತೆಯನ್ನು ಗುರುತಿಸುತ್ತಾರೆ.ಅನಂತರ ಮಧ್ಯರಾತ್ರಿ ನಡೆಯುವ ಮಾಸ್ತಿ ದಹನ ಆತ್ಮಾಹುತಿಯ ಪ್ರಯತ್ನವಲ್ಲ, ಗ್ರಾಮದ ಒಳಿತಿಗಾಗಿ ದೇವತೆಯಾಗಿ ಪರಿವರ್ತಿತವಾಗುವ ಪ್ರಕ್ರಿಯೆ ಎಂಬ ಪ್ರಾಚೀನ ನಂಬಿಕೆಯನ್ನು ನೆನಪಿಸುತ್ತಾರೆ.
ಹನ್ನೆರಡು ದಿನಗಳವರೆಗೆ ನಡೆಯುವ ಬಂಡಿಹಬ್ಬ ಸಂಪೂರ್ಣವಾಗಿ ಜಾನಪದೀಯವಾಗಿದ್ದು,ಸಾಂಕೇತಿಕ ಮರಣದಿಂದ ಆರಂಭವಾಗಿ,ಸೂತಕದ ರೀತಿಯಲ್ಲಿ ಅನುಷ್ಠಾನಗೊಂಡು ಮರು ಸೃಷ್ಟಿಯಲ್ಲಿ ಅಂತ್ಯಗೊಳ್ಳುವ ವಿಶಿಷ್ಠ ಹಬ್ಬ.ಪುನರಪಿ ಜನನಂ ಪುನರಪಿ ಮರಣಂ ಎಂಬುದನ್ನು ನೆನಪಿಸುವ ಜನನ ಮರಣಗಳ ಆವರ್ತನದಲ್ಲಿ ನಿಸರ್ಗ ಜೀವನ ಮತ್ತು ಮಾನವ ಜೀವನ ಎಂಬ ಎರಡು ಚಕ್ರಗಳನ್ನು ಬೆಸೆಯುವ ಬಂಡಿಯಾಗಿ ಬಂಡಿ ಇಲ್ಲದಿದ್ದರೂ ಬಂಡಿಹಬ್ಬವಾಗಿ ಚಲಿಸುತ್ತಲೇ ಇದೆ ಎಂದು ಹೇಳುತ್ತಾರೆ.ಬಂಡಿಹಬ್ಬ ಅವಲ ಹಬ್ಬದಿಂದ ಪ್ರಾರಂಭವಾಗಿ ತೊಟ್ಟಿಲು ಜಟಗನ ಆವಾರೆಯೊಂದಿಗೆ ಮುಕ್ತಾಯವಾಗುತ್ತದೆ. ಅವಲ ಹಬ್ಬ ಮರಣದ ಸಂಕೇತ.12 ದಿನದ ಬಂಡಿಹಬ್ಬ ಸೂತಕ ಮತ್ತು ಶ್ರಾದ್ಧದ ಸಂಕೇತ, ಅಕ್ಕಿಯ ಹಿಟ್ಟಿನಿಂದ ಶಿಶುವನ್ನು ಮಾಡಿ ತೂಗುವ ತೊಟ್ಟಿಲು ಜಟಗನ ಆವಾರೆ ಮರುಹುಟ್ಟಿನ ಸಂಕೇತ ಒಟ್ಟಿನಲ್ಲಿ ಬಂಡಿಹಬ್ಬದ ಆಚರಣೆ ಸಾವಿನಿಂದ ಹುಟ್ಟಿನ ಕಡೆಗೆ ಸಾಗುವ ಒಂದು ಅಂತ್ಯವಿಲ್ಲದ ಪ್ರಯಾಣ ಎಂಬ ತಾತ್ವಿಕ ತೀರ್ಮಾನಕ್ಕೆ ಬರುತ್ತಾರೆ.
ಎರಡನೆಯ ಭಾಗ ಈ ಕೃತಿಯ ಜೀವಾಳ.ಬಂಡಿಹಬ್ಬದ ಎಲ್ಲ ಆಚರಣೆಗಳನ್ನು ಅವರು ವಿಶ್ಲೇಷಣೆ ಒಳಪಡಿಸುತ್ತಾರೆ.ಹೀಗೆ ವಿಶ್ಲೇಷಣೆಗೆ ಒಳಪಡಿಸುವಾಗ ಮುನ್ನುಡಿಯಲ್ಲಿ ಶಿವಾನಂದ ಕೆಳಗಿನಮನಿಯವವರು ಗುರುತಿಸಿದಂತೆ "ದೇಶೀ ಪರಂಪರೆಯ ಪರಿಕರಗಳಿಂದಲೇ ಅಧ್ಯಯನ ಮಾಡಬೇಕೆಂಬುದರ ಬಗ್ಗೆ ಆಲೋಚನೆಗಳನ್ನು ರೂಪಿಸಿಕೊಳ್ಳುತ್ತಾ ಹೋಗುತ್ತಾರೆ.ಇಷ್ಟೇ ಅಲ್ಲ, ಒಂದು ಕೃತಿಯಿಂದ ಮತ್ತೊಂದು ಕೃತಿಗೆ ಚಿಂತನೆಯ ಪರಿಕರಗಳನ್ನು, ತಾತ್ವಿಕತೆಯನ್ನು ಪರಾಮರ್ಶಿಸುತ್ತ ಜಾನಪದ, ಇತಿಹಾಸ, ಚರಿತ್ರೆ, ಪುರಾಣಗಳಿಂದ ರೂಪಿತವಾಗುವ ಎಲ್ಲಾ ಬಗೆಯ ಆಲೋಚನೆಗಳನ್ನು ಬಳಸಿಕೊಳ್ಳುತ್ತಾ ಒಂದು ವಿಶಿಷ್ಟವಾದ ಮಾರ್ಗವನ್ನು ಅನ್ವೇಷಿಸುತ್ತಾರೆ." ಆದ್ದರಿಂದಲೇ ಇದು ಮಹತ್ವದ ಕೃತಿಯಾಗಿ ಕಾಣುತ್ತದೆ.ಭೂಮಿ ತಾಯಿ ಕೃಷಿ ದೇವತೆ.ನಾಗರಿಕತೆ ರೂಪಗೊಳ್ಳುವುದಕ್ಕಿಂತ ಎಷ್ಟೋ ಮೊದಲು ಭೂತಾಯಿಯ ಆರಾಧನೆ ಇತ್ತು.ಜಗತ್ತಿನ ಅತ್ಯಂತ ಪ್ರಾಚೀನ ನಾಗರಿಕತೆಗಳ ಎಂದು ಪರಿಗಣಿಸುವ ಗ್ರೀಕ್,ಮೆಸಪೋಟೋಮಿಯ ಗಳಲ್ಲಿ ಭೂಮಿಯನ್ನು ತಾಯಿ ಎಂದು ಪರಿಗಣಿಸುತ್ತಿದ್ದರು ಮತ್ತು ಅಲ್ಲೆಲ್ಲ ಆರಾಧನೆಯ ಸಂದರ್ಭದಲ್ಲಿ ರಕ್ತ ತರ್ಪಣ ನಡೆಯುತಿತ್ತು.ಸಧ್ಯ ಆ ನಾಗರಿಕತೆಗಳು ಕಣ್ಮರೆಯಾಗಿ ಆಚರಣೆಗಳು ನಿಂತು ಹೋದರೂ ನಮ್ಮಲ್ಲಿ ಇನ್ನೂ ಉಳಿದುಕೊಂಡಿರುವುದನ್ನು ವಿಘ್ನೇಶ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.ಬ್ರಾಹ್ಮಣೇತರರು ಈ ಹಬ್ಬದ ರೂವಾರಿಗಳು ಮತ್ತು ಆಚರಣೆಗಳೆಲ್ಲ ಅವೈದಿಕವಾದವುಗಳು.ಉತ್ತರಕನ್ನಡದ ಕರಾವಳಿಯುದ್ದಕ್ಕೂ ಈ ಹಬ್ಬದ ಆಚರಣೆ ಇದೆ.ಆದರೆ ಭೌಗೋಳಿಕವಾಗಿ ಆಚರಣೆಯ ಸ್ವರೂಪದಲ್ಲಿ ಬದಲಾವಣೆಗಳನ್ನು ಗುರುತಿಸಿದ್ದಾರೆ.ಕಾರವಾರದಿಂದ ಮಿರ್ಜಾನ್ ವರೆಗೆ ಕಳಸದೊಂದಿಗೆ ಹುಯಿಲು ಕಂಬ ಸುತ್ತಿದರೆ ಮಿರ್ಜಾನ್ ನಿಂದ ಮುಂದೆ ಕೆಂಡ ಹಾಯುವ ಸಂಪ್ರದಾಯವಿದೆ.ಆಶ್ಚರ್ಯವೆಂದರೆ ಮಿರ್ಜಾನ್ ನಲ್ಲಿ ಎರಡೂ ಆಚರಣೆಗಳಿರುವುದನ್ನು ಗುರುತಿಸಿದ್ದಾರೆ.ಗೋಕರ್ಣ ಭಾಗದ ಕೆಲವು ಕಡೆ ಇಂದಿಗೂ ಬಂಡಿ ಎಳೆಯುವ ರೂಢಿ ಇದೆ ಎಂದು ಹೇಳುತ್ತಾರೆ.ಗ್ರಾಮದೇವತೆ ರಾಮಾಯಣ ಕಾಲಕ್ಕಿಂತಲೂ ಪ್ರಾಚೀನ ಎಂದು ಗುರುತಿಸುವ ಲೇಖಕರು ಜಗತ್ತಿನಾದ್ಯಂತ ಇವುಗಳ ಅಸ್ತಿತ್ವವನ್ನು ಸಾಧಿಸುತ್ತಾರೆ.ಭೂಮಿತಾಯಿ ಗ್ರಾಮದೇವತೆಯಾದರೆ ಪೂರ್ವಜರ ಆತ್ಮಗಳು ಪರಿವಾರ ದೇವರುಗಳಾಗುವ ವಿಸ್ಮಯವನ್ನು ಅವರು ಗುರುತಿಸಿದ್ದಾರೆ.ಪರಿವಾರ ದೇವರುಗಳಲ್ಲಿರುವ ಬೀರ ಅಂದರೆ ವೀರ ಬರಿ ಯುದ್ಧವೀರರಲ್ಲ,ಗ್ರಾಮದ ಒಳಿತಿಗಾಗಿ ಪ್ರಾಣತ್ಯಾಗ ಮಾಡಿದವರಾಗಿರಬಹುದು,ಹಾಗೆ ಸ್ತ್ರೀ ಶಕ್ತಿಗಳಾದ ಮಾಸ್ತಿ ಕೇವಲ ಪತಿಗಾಗಿ ಸಹಗಮನ ಮಾಡಿದವಳಲ್ಲ,ಊರಿನ ಒಳಿತಿಗಾಗಿ ಪ್ರಾಣತ್ಯಾಗ ಮಾಡಿದ ಹೆಣ್ಣು ಆಗಿರಬಹುದು. ಅಂತಹ ಆತ್ಮಗಳ ಆರಾಧನೆ ಜನಪದರ ನಂಬಿಕೆಯನ್ನೇ ಅವಲಂಬಿಸಿದೆ ಎಂದು ಅವರು ಹೇಳುತ್ತಾರೆ.ಬೆಳೆ ಬೇಕೆಂದರೆ ನಾವು ಅದನ್ನು ದೇವರಿಗೆ ಅಭಿನಯಿಸಿ ತೋರಿಸಬೇಕು ಆಗ ಪ್ರಕೃತಿ ಅದನ್ನು ಅನುಕರಿಸುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಬಂಡಿಹಬ್ಬ ರೂಪಗೊಂಡಿದೆ ಎಂಬ ಅಭಿಪ್ರಾಯ ಅವರದ್ದು. ಬಂಡಿಹಬ್ಬದ ಸಂದರ್ಭದಲ್ಲಿ ಶುದ್ಧ ಅಕ್ಕಿಯನ್ನು ಅಕ್ಷತೆಯಾಗಿ ಬಳಸುತ್ತಾರೆ.ಶ್ರಾದ್ಧ ಮತ್ತು ಸೂತಕದ ಸಂದರ್ಭದಲ್ಲಿಯೂ ಬಿಳಿ ಅಕ್ಕಿಯೇ ಅಕ್ಷತೆ.ಇಲ್ಲಿ ಶಾಲಿವಾಹನನ ಒಂದು ದಂತಕತೆಯನ್ನು ಉಲ್ಲೇಖಿಸಿ ಬಂಡಿಹಬ್ಬದ ಆಚರಣೆಗೆ ಅವನೇ ಮೂಲಕಾರಣವಾಗಿರಬೇಕು ಎಂದು ಪ್ರತಿಪಾದಿಸುತ್ತಾರೆ.
ಬಂಡಿ ಹಬ್ಬವನ್ನು ದಕ್ಷಿಣ ಭಾರತದುದ್ದಕ್ಕೂ ಆಚರಿಸಲಾಗುತ್ತದೆ.ಆದ್ದರಿಂದ ದ್ರಾವಿಡ ಜನಪದ ಸಂಸ್ಕೃತಿಯ ಅಂಗವಾಗಿ ಇದು ರೂಪುಗೊಂಡಿರುವ ಸಾಧ್ಯತೆಯತ್ತ ಗಮನಸೆಳೆಯುತ್ತಾರೆ.ಬಲಿಮಕ್ಕಳು,ರಕ್ತತರ್ಪಣ ಮುಂತಾದವುಗಳು ಬಂಡಿಹಬ್ಬದ ಸಂದರ್ಭದ ನರಬಲಿಯ ಸೂಚನೆಗಳು ಎಂಬುದನ್ನು ಆಧಾರ ಸಹಿತ ಅವರು ನಿರೂಪಿಸುತ್ತಾರೆ.ಬಿಣಗಾ,ಅಲಗೇರಿ,ಶಿರಗುಂಜಿಗಳಲ್ಲಿ ಇಂದಿಗೂ ಸಾಂಕೇತಿಕ ರಕ್ತ ಅರ್ಪಣೆಯ ಪದ್ಧತಿಯಿದೆ ಎಂದು ಹೇಳುವ ಅವರು ಹಿರೇಗುತ್ತಿಯಲ್ಲಿ ಮುಂಡದಿಂದ ಬೇರ್ಪಡಿಸಿದ ಮೂರು ತಲೆಗಳನ್ನು ಒಲೆಯ ಗುಂಡಿನ ಆಕಾರದಲ್ಲಿಟ್ಟು ಉಪಾರ ಬೇಯಿಸಲಾಗುತ್ತಿತ್ತು.ಒಂದು ವರ್ಷ ರುಂಡ ಮುಂಡಗಳು ಅದಲು ಬದಲಾಗಿ ಅನಾಹುತ ಸಂಭವಿಸಿತು. ಅಂದಿನಿಂದ ನರಬಲಿಯನ್ನು ನಿಲ್ಲಿಸಲಾಯಿತು ಎಂಬ ಸಿಲ್ವಾ ಅವರ ಉಲ್ಲೇಖವನ್ನು ಉಲ್ಲೇಖಿಸುತ್ತಾರೆ.ಕಾಣಕೋಣದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಇಂದಿಗೂ ಈ ಪದ್ಧತಿ ಇರುವದರತ್ತ ಗಮನ ಸೆಳೆಯುತ್ತಾರೆ.ಬಲಿಮಕ್ಕಳು ನರಬಲಿಯ ಪಳೆಯುಳಿಕೆ ಆಗಿರಬಹುದು ಎಂಬ ಊಹೆ ಅವರದ್ದು.ಬಂಡಿ ಹಬ್ಬ ಅಪ್ಪಟ ಮಣ್ಣಿನ ಮಕ್ಕಳ ಹಬ್ಬ ವಾಗಿರುವುದರಿಂದ ಇಲ್ಲಿ ಬ್ರಾಹ್ಮಣರ ಪಾತ್ರ ಗೌಣವಾಗಿದೆ.ಆದರೆ ಉತ್ತರಕನ್ನಡದ ಕರಾವಳಿಯ ಬಂಡಿ ಹಬ್ಬದಲ್ಲಿ ಬ್ರಾಹ್ಮಣರಿಗೂ ಗೌರವ ಸ್ಥಾನ ಕಲ್ಪಿಸಿರುವದರತ್ತ ಗಮನ ಸೆಳೆಯುತ್ತಾರೆ.ಹೊನ್ನಾವರದ ಅಂಶೊಳ್ಳಿಯಲ್ಲಿ ಬ್ರಾಹ್ಮಣರೇ ಕಳಸ ಹೊರುತ್ತಾರೆ.ಆದರೆ ಕಳಸ ತಯಾರಿಸಲು ಕೆಕ್ಕಾರ ಗ್ರಾಮದ ಗುನಗರೇ ಹೋಗಬೇಕು.ಅಂಕೋಲೆಯಲ್ಲಿ ಗುನಗರು ಮತ್ತು ಬ್ರಾಹ್ಮಣರ ನಡುವಿನ ಹೊಂದಾಣಿಕೆ ಸಾಮಾಜಿಕ ಸಾಮರಸ್ಯದ ಅದ್ಭುತ ಉದಾಹರಣೆ.ಹಾಗೆ ನೋಡಿದರೆ ಬಂಡಿ ಹಬ್ಬವೇ ಸಾಮರಸ್ಯ ಪ್ರತೀಕ.ಅಲ್ಲಿ ಎಲ್ಲ ಸಮಾಜದವರು ಒಂದಲ್ಲ ಒಂದು ರೀತಿಯಲ್ಲಿ ತೊಡಗಿ ಕೊಳ್ಳುತ್ತಾರೆ.ಕಳಸದ ಮೆರವಣೆಗೆಯ ಸಂದರ್ಭದಲ್ಲಿ ಆಗೇರರ ಪಂಚವಾದ್ಯ,ವಾಜಂತ್ರಿಗಳ ಸಾಂಪ್ರದಾಯಿಕ ವಾದ್ಯ ಇರಲೇ ಬೇಕು.ಬೋವಿಗಳು ದೀವಟಿಗೆ ಹಿಡಿದರೆ,ಗೌಡರು ಬಾವುಟಗಳನ್ನು ಹಿಡಿಯುತ್ತಾರೆ. ಉಳಿದ ಸಮಾಜದವರು ಕಟ್ಟಿಗೆದಾರರಾದರೆ ಗುನಗರು ಕಳಸ ಹೊತ್ತು ಕೇಂದ್ರಬಿಂದುವಾಗುತ್ತಾರೆ.ಒಂದು ಕಾಲಘಟ್ಟದಲ್ಲಿ ಗುನಗರೇ ಈ ಮಣ್ಣಿನ ಅಧಿಕೃತ ಪುರೋಹಿತ ವರ್ಗದವರಾಗಿದ್ದರು ಎಂದು ಹೇಳುವ ಲೇಖಕರು ಪರಿಶಿಷ್ಟ ವರ್ಗದವರನ್ನು ಹೊರತುಪಡಿಸಿ ಉಳಿದ ಶೂದ್ರ ವರ್ಗದ ಶ್ರಾದ್ಧ ಕ್ರಿಯೆಗಳನ್ನು ಗುನಗರೇ ನೆರವೇರಿಸುತ್ತಿದ್ದರೆಂಬ ಗೆಜೆಟ್ಟಿನ ಉಲ್ಲೇಖ ನೀಡುತ್ತಾರೆ.ಗ್ರಾಮದೇವತೆಗಳಿಗೆ ಪ್ರಾಣ ಪ್ರತಿಷ್ಠಾಪನೆಯೂ ಇವರಿಂದಲೇ ನಡೆಯುತ್ತಿತ್ತು. ಬಂಡಿಹಬ್ಬದ ಸಂದರ್ಭದಲ್ಲಿ ಅವರ ಕಠಿಣ ವ್ರತಾಚರಣೆಗಳು ಭಯ ಮತ್ತು ಕುತೂಹಲವನ್ನು ಉಂಟು ಮಾಡುತ್ತವೆ ಎನ್ನುತ್ತಾರೆ.ಬಂಡಿಹಬ್ಬದ ಸಂದರ್ಭದಲ್ಲಿ ಮೂಕ ಗುನಗರಿಗೆ ಭಾರ ಬಂದಾಗ ಅವರು ಸ್ಪಷ್ಟವಾಗಿ ಮಾತನಾಡಿದ ಪ್ರಸಂಗವನ್ನು ಉಲ್ಲೇಖಿಸುವಾಗ ಮೈ ರೋಮಾಂಚನವಾಗುತ್ತದೆ.
ಬಂಡಿ ಹಬ್ಬ ಬರಿ ಹಬ್ಬವಲ್ಲ,ಅದು ಕೃಷಿ ಸಂಸ್ಕೃತಿಯ ಪುನರುತ್ಥಾನದ ಪ್ರಕ್ರಿಯೆ.ಬಂಡಿ ಹಬ್ಬದ ನಂತರ ಬೀಜ ಬಿತ್ತನೆ ಶುರುವಾಗುತ್ತದೆ.ತೊಟ್ಟಿಲು ಜಟಗನ ಹಬ್ಬಕ್ಕೆ ಮಳೆ ಬಂದು ಬೀಜ ಮೊಳಕೆವಡೆಯುತ್ತದೆ.ನಂತರ ತೆನೆ ಬಲಿತಾಗ ಹೊಸತು ಹಬ್ಬ.ಕೊನೆಯಲ್ಲಿ ಬತ್ತ ಬೇಯಿಸಿ ಅವಲಕ್ಕಿ ತಯಾರಿಸಿ ಅವಲ ಹಬ್ಬ. ಅವಲ ಹಬ್ಬ ಮರಣದ ಸಂಕೇತವಾದರೆ ಬಂಡಿ ಹಬ್ಬ ಪಿತೃಗಳನ್ನು ದೈವಗಳನ್ನಾಗಿಸುವ ಹಬ್ಬ,ತೊಟ್ಟಿಲು ಜಟಗನ ಹಬ್ಬ ಹೊಸ ಹುಟ್ಟಿನ ಹಬ್ಬ. ಒಟ್ಟಿನಲ್ಲಿ ಬಂಡಿ ಹಬ್ಬ ಕೇವಲ ಒಂದು ಆಚರಣೆಯಲ್ಲ,ಅದು ನಿಸರ್ಗದ ಚಲನೆಯ ಪ್ರಕ್ರಿಯೆ.ಇಡೀ ಮನುಕುಲದ ವಿಕಾಸ,ನಂಬಿಕೆ ಮತ್ತು ಆದಿಮ ಸಂಸ್ಕೃತಿಯ ಜೀವಂತ ಮ್ಯೂಸಿಯಂ ಎಂದು ಹೇಳುವ ಅವರು ವಿಶ್ವದ ಉಳಿದ ಪ್ರಾಚೀನ ನಾಗರೀಕತೆಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡರೂ ನಮ್ಮಲ್ಲಿ ಅದು ಶಾಶ್ವತವಾಗಿ ಉಳಿದಿದೆ ಮತ್ತು ಉಳಿಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜನಪದೀಯವಾದ ಆಚರಣೆಯೊಂದು ತನ್ನ ಮೂಲಸ್ವರೂಪವನ್ನು ಕಳೆದುಕೊಂಡು ಮೂಲ ಉದ್ದೇಶದಿಂದ ದೂರವಾಗಿ ಕೇವಲ ಯಾಂತ್ರಿಕ ಆಚರಣೆಯಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಅದರ ಮೂಲ ಸ್ವರೂಪ ಮತ್ತು ಉದ್ದೇಶವನ್ನು ಮುಂದಿನ ಜನಾಂಗಕ್ಕೆ ಪರಿಚಯಿಸುವ ವಿಘ್ನೇಶ ಗುನಗಾ ಅವರ ಪ್ರಯತ್ನ ನಿಜಕ್ಕೂ ಅಭಿನಂದನೀಯ. ಈಗಾಗಲೇ ಅಂಕೋಲೆಯ ಶಾಸನೋಕ್ತ ಇತಿಹಾಸವನ್ನು ಶ್ಯಾಮಸುಂದರ ಗೌಡ ಅನಾವರಣಗೊಳಿಸಿದ್ದಾರೆ.ಅಂಕೋಲೆಯ ಸ್ವಾತಂತ್ಯ ಹೋರಾಟದ ಚರಿತ್ರೆಯನ್ನು ಶಾಂತಾರಾಮ ನಾಯಕ,ಹಿಚ್ಕಡ ಅವರು ನಿರೂಪಿಸಿದ್ದಾರೆ.ಅಂಕೋಲೆಯ ನೆಲದಲ್ಲಿ ನಡೆದ ರೈತ ಹೋರಾಟದ ಕತೆಯನ್ನು ವಿಷ್ಣು ನಾಯ್ಕರು ದಾಖಲಿಸಿದ್ದಾರೆ.ಅಂಕೋಲೆಯ ಜಾನಪದ ಸಂಗತಿಗಳನ್ನು ಡಾ.ಎನ್.ಆರ್.ನಾಯಕ ಮತ್ತು ಶಾಂತಿ ನಾಯಕ ದಂಪತಿಗಳು ಹಿಡಿದಿಟ್ಟಿದ್ದಾರೆ.ಆದರೆ ಇದುವರೆಗೆ ಆಚರಣೆಯೊಂದರ ಇತಿಹಾಸ ದಾಖಲಾಗಿರಲಿಲ್ಲ.ಈಗ ವಿಘ್ನೇಶ ಗುನಗಾ ಜಗತ್ತಿನ ಅತ್ಯಂತ ಪ್ರಾಚೀನ ಜಾತ್ರೆಯಾದ ಉತ್ತರ ಕನ್ನಡದ ಬಂಡಿಹಬ್ಬದ ಸಂಪೂರ್ಣ ವೈಶಿಷ್ಟ್ಯಗಳನ್ನು ಆಧಾರಗಳೊಂದಿಗೆ ನಿರೂಪಿಸುವುದರ ಮೂಲಕ ಅಂಕೋಲೆಯ ಸಾಂಸ್ಕೃತಿಕ ಮತ್ತು ದೈವಿಕ ಕ್ಷೇತ್ರದ ಹಿರಿಮೆಯನ್ನು ನಾಡಿಗೆ ಪರಿಚಯಿಸಿದ್ದಾರೆ.ಅವರ ಈ ಕಾರ್ಯ ಹಲವು ತಲೆಮಾರುಗಳಿಗೆ ಮಾರ್ಗದರ್ಶನವಾಗಿದೆ.ಇಲ್ಲಿ ಬಳಸಲಾದ ಚಿತ್ರಗಳು ಬಂಡಿಹಬ್ಬದ ವೈಶಿಷ್ಟ್ಯ ಮತ್ತು ವೈವಿಧ್ಯತೆಗಳನ್ನು ಅನಾವರಣಗೊಳಿಸುವಲ್ಲಿ ಯಶಸ್ವಿಯಾಗಿವೆ.ತಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ಬಂಡಿಹಬ್ಬದ ಮಹತ್ವವನ್ನು ತಿಳಿಯಲು ಪ್ರತಿಯೊಬ್ಬ ಶ್ರದ್ಧಾಳುಗಳು ಓದಲೇಬೇಕಾದ ಕೃತಿ ಇದು.
- ಶ್ರೀಧರ ಬಿ.ನಾಯಕ, ಬೇಲೇಕೇರಿ.
ಸೋಮವಾರ, ಮಾರ್ಚ್ 23, 2026
ಶಾಂತಾರಾಮ ನಾಯಕರ ಸಾಧಕ ಶ್ರೇಷ್ಠ -- ಕೃತಿ ಪರಿಚಯ.
ಸಾತ್ವಿಕತೆಯ ಪ್ರತೀಕದಂತಿರುವ ಶಾಂತಾರಾಮ ನಾಯಕರನ್ನು ನೋಡಿದಾಗಲೆಲ್ಲ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರಿಗೆ ಪ್ರಿಯವಾದ ವೈಷ್ಣವ ಜನತೋ ಭಜನೆ ನೆನಪಾಗುತ್ತದೆ.ಸದ್ಗುಣ ಸಂಪನ್ನ ಸಜ್ಜನರು ಯಾರು ಎಂದರೆ ಅಹಂಕಾರವಿಲ್ಲದೆ, ಸಕಲರನ್ನೂ ಗೌರವಿಸುತ್ತಾ, ಸತ್ಯ ಮತ್ತು ದೃಢ ವೈರಾಗ್ಯವನ್ನು ಅಳವಡಿಸಿಕೊಂಡವನು.ಪರರ ದುಃಖವನ್ನು ಅರಿತು ಅವರ ದುಃಖಕ್ಕೆ ನೆರವಾಗುವವನು,ಲೋಭ-ವಂಚನೆ ಇಲ್ಲದವನು,ಕಾಮ ಮತ್ತು ಕ್ರೋಧಗಳನ್ನು ಗೆದ್ದವನು.ಅಂತಹ ಮಹಾತ್ಮನ ದರ್ಶನದಿಂದಲೇ ಜನ್ಮ ಸಾರ್ಥಕವಾಗುತ್ತದೆ.ಇಲ್ಲಿ ಬರುವ ವೈಷ್ಣವ ಜನ ಎಂಬ ಪದ ಕೇವಲ ವಿಷ್ಣು ಭಕ್ತರಿಗೆ ಮಾತ್ರವಲ್ಲ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡ ಎಲ್ಲರಿಗೂ ಅನ್ವಯವಾಗುತ್ತದೆ.ಶಾಂತಾರಾಮ ನಾಯಕರು ಅಂತಹ ಮಾನವೀಯ ವ್ಯಕ್ತಿತ್ವ.ಯಾರಲ್ಲಿಯೂ ಯಾವುದೇ ಸಂದರ್ಭದಲ್ಲಿಯೂ ದೋಷವನ್ನು ಹುಡುಕದ ಅವರ ಸ್ವಭಾವ ಅವರನ್ನು ಅಜಾತಶತ್ರುವನ್ನಾಗಿಸಿದೆ.ಆರೋಗ್ಯಪೂರ್ಣ ಮನಸ್ಸು ಆರೋಗ್ಯ ಪೂರ್ಣ ದೇಹವನ್ನು ರೂಪಿಸುತ್ತದೆಯಂತೆ.ಅವರು ಇನ್ನಷ್ಟು ಆರೋಗ್ಯವಂತರಾಗಿ ಕಿರಿಯರಿಗೆ ಮಾರ್ಗದರ್ಶನ ನೀಡುತ್ತಾ ಶತಾಯುಷಿಗಳಾಗಲಿ, ಆ ಸಂದರ್ಭದ ಆಚರಣೆಯಲ್ಲಿ ನಾವೆಲ್ಲ ಪಾಲ್ಗೊಳ್ಳುವ ಭಾಗ್ಯ ಸಿಗಲಿ ಎಂದು ಹಾರೈಸುತ್ತಾ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರುತ್ತೇನೆ.
ಈ ಶುಭ ಸಂದರ್ಭದಲ್ಲಿ ಅವರು ರಚಿಸಿದ ಕೃತಿಯೊಂದು ಬಿಡುಗಡೆಯಾಗುತ್ತಿರುವುದು ಅರ್ಥಪೂರ್ಣ.ಶಾಂತಾರಾಮ ನಾಯಕರು ಒಂದರ್ಥದಲ್ಲಿ ಜನ ಸಾಮಾನ್ಯರ ಲೇಖಕ.ಇದುವರೆಗೆ ಅವರು ಪ್ರಕಟಿಸಿದ ಮೂವತ್ತೊಂದು ಕೃತಿಗಳಲ್ಲಿ ನಾವು ಹೆಚ್ಚಾಗಿ ಕಾಣುವುದು ಸ್ಥಳೀಯವಾದ ಜನಸಾಮಾನ್ಯರ ಸಂವೇದನೆಗಳನ್ನು.ಸ್ಥಳೀಯ ಇತಿಹಾಸವನ್ನು ಅಧ್ಯಯನ ಮಾಡುವ ಸಂದರ್ಭದಲ್ಲಿ ಅವರ ಕೃತಿಗಳನ್ನು ಬಿಟ್ಟು ಅಧ್ಯಯನ ಮಾಡಲು ಸಾಧ್ಯವೇ ಆಗುವುದಿಲ್ಲ.ಸ್ವಾತಂತ್ರ್ಯ ಚಳುವಳಿಯ ಕುರಿತು ಅವರು ಬರೆದ ಏಳೂ ಕೃತಿಗಳು ಅಧಿಕೃತ ದಾಖಲೆಗಳೇ ಆಗಿವೆ.ಇನ್ನು ಜೀವನ ಚರಿತ್ರೆಗಳ ವಿಷಯಕ್ಕೆ ಬಂದರೆ ಅವು ಕೂಡಾ ಈ ಪ್ರದೇಶದ ಅಸಾಮಾನ್ಯರ ಕಥೆಗಳೇ ಆಗಿವೆ. ಶಾಂತಾರಾಮ ನಾಯಕರು ಯಾರೋ ನಾಲ್ಕು ಜನರ ಜೀವನ ಚರಿತ್ರೆಯನ್ನು ಬರೆದವರಲ್ಲ,ಇವರು ಜೀವನ ಚರಿತ್ರೆ ಬರೆದವರೆಲ್ಲ ಮಹಾನ್ ಸಾಧಕರೇ ಆಗಿದ್ದಾರೆ,ಸಮಾಜಕ್ಕೆ ಮಾದರಿಯಾಗಿ ಮುಂದಿನ ತಲೆಮಾರಿಗೆ ಪ್ರೇರಕರಾಗಿದ್ದಾರೆ.ಎಂ.ಎಚ್.ನಾಯಕ,ವಿ.ವೆ.ತೊರ್ಕೆ ಸ.ಪ.ಗಾಂವಕಾರ,ಬಾಸಗೋಡ ರಾಮ ನಾಯಕ, ದಿನಕರ ದೇಸಾಯಿ, ವಿ.ಎಚ್. ನಾಯಕ ಗೊನೆಹಳ್ಳಿ ಹೀಗೆ ಎಲ್ಲರೂ ಹಲವು ತಲೆಮಾರುಗಳು ನೆನಪಿಸಿಕೊಳ್ಳಲೇ ಬೇಕಾದ ವಿಶಿಷ್ಟರು.ಇವರೆಲ್ಲರ ಸಾಲಿಗೆ ಈಗ ನ್ಯಾಯಮೂರ್ತಿ ಎಸ್.ಆರ್.ನಾಯಕರ ಜೀವನ ಚರಿತ್ರೆ ಸೇರ್ಪಡೆಯಾಗುತ್ತಿದೆ. ಈ ಪುಸ್ತಕದ ಶೀರ್ಷಿಕೆ "ಸಾಧಕ ಶ್ರೇಷ್ಠ". ಈ ಪದವೇ ವಿಶಿಷ್ಠ. ಎಲ್ಲರೂ ಸಾಧನೆ ಮಾಡುತ್ತಾರೆ.ಅವರು ರೈತರಿಗಾಗಿರಬಹುದು,ಸೈನಿಕರಾಗಿ ರಬಹುದು, ಶಿಕ್ಷಕರಾಗಿರಬಹುದು,ಜನಸೇವಕರಾಗಿರಬಹುದು.ಅವರಲ್ಲಿ ಕೆಲವರು ಶ್ರೇಷ್ಠವಾದುದನ್ನು ಸಾಧಿಸಿ ಶ್ರೇಷ್ಠ ಸಾಧಕರು ಎನಿಸಿಕೊಳ್ಳುತ್ತಾರೆ, ಅಂತಹ ಶ್ರೇಷ್ಠ ಸಾಧಕರಲ್ಲಿಯೇ ಇವರು ಶ್ರೇಷ್ಠರು ಎಂಬ ಅರ್ಥವನ್ನು ಇದು ಧ್ವನಿಸುತ್ತದೆ. ಈ ಕೃತಿಯನ್ನು ಅಂಕೋಲಿಗರಲ್ಲಿ ಸ್ವಾಭಿಮಾನವನ್ನು ಬಿತ್ತಿದ ಪ್ರೇಮಾ ತಾಯಿ ಪಿಕಳೆಯವರಿಗೆ ಅರ್ಪಿಸಿರುವದು ಅರ್ಥಪೂರ್ಣವಾಗಿದೆ. ಎಸ್.ಆರ್.ನಾಯಕರ ಮಹೋನ್ನತ ವ್ಯಕ್ತಿತ್ವದ ಅನಾವರಣಕ್ಕೆ ಅವರೂ ಕಾರಣರಾಗಿದ್ದಾರೆ.
ಕೃತಿ ಗಾತ್ರದಲ್ಲಿ ಕಿರಿದಾಗಿದ್ದರೂ ಸಮಗ್ರವಾಗಿದೆ.ಒಟ್ಟು ಹನ್ನೊಂದು ಅಧ್ಯಾಯಗಳಲ್ಲಿ ಎಸ್ ಆರ್ ನಾಯಕರ ಬದುಕು,ಹೋರಾಟ,ಸಾಧನೆಗಳನ್ನು ಸ್ಪಷ್ಟವಾಗಿ ಚಿತ್ರಿಸುತ್ತದೆ. ಗಂಗಾವಳಿ ನದಿಯ ಎಡ ದಂಡೆಯ ಮೇಲಿರುವ ಮಾಸ್ಕೇರಿ ಎಂಬ ಊರಿನಲ್ಲಿ ಹುಟ್ಟಿ,ಅಲ್ಲಿಯ ಗಾಂವಟಿ ಶಾಲೆಯಲ್ಲಿ ತನ್ನ ಪ್ರಾರಂಭಿಕ ಶಿಕ್ಷಣವನ್ನು ಪೂರೈಸಿ,ಮುಲ್ಕಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮವಾಗಿ ಪಾಸಾದರೂ ಶಿಕ್ಷಣವನ್ನು ಮುಂದುವರೆಸಲಾಗದೇ ಹೊಟೆಲ್ ಒಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಕನಸುಗಣ್ಣಿನ ಹುಡುಗನೊಬ್ಬ ಮುಂದೆ ರಾಜ್ಯ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಅಸಂಖ್ಯಾತರ ಬದುಕಿನಲ್ಲಿ ಬೆಳಕು ಚೆಲ್ಲುವ ದೀಪಸ್ತಂಭವಾದ ಯಶಸ್ಸಿನ ಕತೆಯನ್ನು ಈ ಕೃತಿ ಒಳಗೊಂಡಿದೆ. ಶಾಂತಾರಾಮ ನಾಯಕರು ಎಸ್.ಆರ್.ನಾಯಕರ ಆತ್ಮೀಯರಲ್ಲಿ ಒಬ್ಬರು.ಅವರ ಬದುಕಿನ ಪ್ರತಿ ವಿವರಗಳನ್ನು,ಕಷ್ಟ- ಬವಣೆಗಳನ್ನೆಲ್ಲ ಬಲ್ಲವರು.ಆದ್ದರಿಂದ ಯಾವುದೇ ಮುಚ್ಚು ಮರೆಯಿಲ್ಲದೇ ಅವರ ಬದುಕಿನ ಚಿತ್ರಣವನ್ನು ನೀಡುತ್ತಾರೆ.ಇದರಿಂದ ಈ ಕೃತಿಗೆ ಅಧಿಕೃತತೆ ಪ್ರಾಪ್ತವಾಗಿದೆ.ಒಬ್ಬ ಸಾಧಕನ ಶ್ರೇಷ್ಠ ವ್ಯಕ್ತಿತ್ವ ನಿರ್ಮಾಣವಾಗಲು ಹಲವರ ಮಾರ್ಗದರ್ಶನ,ನೆರವು ಸಹಕಾರ ಅತ್ಯಗತ್ಯ.ಎಸ್.ಆರ್.ನಾಯಕ ಎಂಬ ವ್ಯಕ್ತಿತ್ವದ ನಿರ್ಮಾಣದಲ್ಲಿ ಜಿ.ಎಚ್.ನಾಯಕ,ಸ.ಪ.ಗಾಂವಕಾರ,ಎಸ್.ವಿ.ಪಿಕಳೆ,ಪ್ರೇಮಾ ಪಿಕಳೆ, ಸುಬ್ಬಣ್ಣ ಮೊದಲಾದವರು ನೀಡಿದ ಸಹಾಯವನ್ನು ಶಾಂತರಾಮರು ನೆನಪಿಸಿಕೊಳ್ಳುತ್ತಾರೆ.ಅವರು ತಮ್ಮ ವೃತ್ತಿ ಬದುಕಿನಲ್ಲಿ ನ್ಯಾಯಪರವಾಗಿ, ಜನಪರವಾಗಿ ಕರ್ತವ್ಯ ನಿರ್ವಹಿಸಲು ದಿವಂಗತ ಗೋಪಾಲಕೃಷ್ಣ ಶೆಟ್ಟಿ,ಎಲ್.ಜಿ.ಹಾವನೂರ ಅವರಂತಹ ಮಹನೀಯರ ಮಾರ್ಗದರ್ಶನ ಕಾರಣ ಎನ್ನುವುದರತ್ತ ಗಮನ ಸೆಳೆಯುತ್ತಾರೆ.
ಒಬ್ಬ ವ್ಯಕ್ತಿ ಬವಣೆಗಳ ನಡುವೆಯೂ ಪ್ರಯತ್ನವಾದಿಯಾಗಿ ಉನ್ನತ ಸ್ಥಾನ ಮಾನ ಹೊಂದುವುದು ಒಂದು ಹಂತ.ಹಾಗೆ ಉನ್ನತ ಸ್ಥಾನ ಮಾನ ಪಡೆದ ನಂತರ ಆತ ಪಾಲಿಸಿದ ಮತ್ತು ಪ್ರತಿಪಾದಿಸಿದ ಜೀವನ ಮೌಲ್ಯಗಳು ಯಾವವು ಎಂಬುದು ಇನ್ನೊಂದು ಹಂತ. ಸಾಧನೆಯ ಹಂತದಲ್ಲಿ ತಾನು ಅನುಭವಿಸಿದ ಕಷ್ಟಗಳನ್ನು ನೆನಪಿನಲ್ಲಿಟ್ಟುಕೊಂಡು ನೊಂದವರ ಬದುಕಿಗೆ ಸಾಂತ್ವನ ದೊರಕಿಸುವಂತೆ ಕಾರ್ಯ ನಿರ್ವಹಿಸಿದರೆ ನಿಜಕ್ಕೂ ಅದು ಸಾರ್ಥಕತೆ ಎನಿಸಿಕೊಳ್ಳುತ್ತದೆ.ಈ ದೃಷ್ಟಿಯಿಂದ ನ್ಯಾಯಮೂರ್ತಿ ಎಸ್ ಆರ್ ನಾಯಕರು ಆದರ್ಶ ಪ್ರಾಯರಾಗುತ್ತಾರೆ.ನ್ಯಾಯವಾದಿಯಾಗಿ ಮತ್ತು ನ್ಯಾಯಾಧೀಶರಾದ ನಂತರ ಅವರು ಉನ್ನತ ಜೀವನಾದರ್ಶಗಳನ್ನು ಪಾಲಿಸಿ ಇತರರಿಗೆ ಮಾದರಿಯಾಗಿರುವದನ್ನು ಇಲ್ಲಿ ನೆನಪಿಸಿಕೊಳ್ಳಲಾಗಿದೆ. ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಹೈಕೋರ್ಟಗಳ ನ್ಯಾಯಮೂರ್ತಿಗಳಾಗಿ ಅವರು ನೀಡಿದ ತೀರ್ಪುಗಳು ನ್ಯಾಯಾಪರವೂ ಜನಪರವೂ ಆಗಿ ದಾಖಲೆಯಾಗಿವೆ ಎಂದು ಶಾಂತಾರಾಮ ನಾಯಕರು ಹೇಳುತ್ತಾರೆ.ಧಾರವಾಡ ಮತ್ತು ಕಲ್ಬುರ್ಗಿಗಳ ಹೈಕೋರ್ಟ್ ಪೀಠ ಸ್ಥಾಪನೆಯಲ್ಲಿ ನಾಯಕರ ಶ್ರಮವಿರುವದರತ್ತ ಗಮನ ಸೆಳೆಯುತ್ತಾರೆ.ಛತ್ತಿಸ ಗಡ ರಾಜ್ಯದ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಹೊಸ ರಾಜ್ಯದ ನ್ಯಾಯಾಂಗಕ್ಕೆ ಭದ್ರ ಅಡಿಪಾಯ ಹಾಕಿ ಲೋಕ ಅದಾಲತ್ ಮೂಲಕ ಅಸಂಖ್ಯ ಪ್ರಕರಣಗಳನ್ನು ಬಗೆಹರಿಸಿದ ನಾಯಕರ ಕರ್ತೃತ್ವಶಕ್ತಿಯ ಅಗಾಧತೆಯನ್ನು ಪರಿಚಯ ಮಾಡಿಕೊಡುತ್ತಾರೆ.ನ್ಯಾಯ ತೀರ್ಮಾನದ ಸಂದರ್ಭದಲ್ಲಿ ಸಾಮಾಜಿಕ ಕಲ್ಯಾಣಕ್ಕೆ ಭಂಗ ಬಾರದಂತೆ, ದುರ್ಬಲರಿಗೆ,ಅಶಕ್ತರಿಗೆ,ಅನ್ಯಾಯವಾಗದಂತೆ,ಜಾತಿ,ಧರ್ಮ,ಸ್ಥಾನ-ಮಾನಗಳನ್ನು ಲೆಕ್ಕಿಸದೇ, ಯಾವುದೇ ಭಯ-ಪಕ್ಷಪಾತವಿಲ್ಲದೇ ತೀರ್ಪು ನೀಡಿ ನ್ಯಾಯ ದೇವತೆಯ ಹಾಗೂ ದೈವಿಕ ಸ್ವರೂಪಿಯಾದ ತಾಯಿ ಸರಸ್ವತಿಯ ಪ್ರೀತಿಯ ಮಗ ಎಂದು ಅಭಿನಂದನೆಗೆ ಪಾತ್ರರಾಗಿರುವದು ಅವರ ವ್ಯಕ್ತಿತ್ವದ ಘನತೆಯನ್ನು ಸೂಚಿಸುತ್ತದೆ.ಛತ್ತಿಸಗಡ ರಾಜ್ಯದ ರಾಯಪುರದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಅಸ್ತಿತ್ವವೇ ಅಲುಗಾಡುವ ಸಂದರ್ಭದಲ್ಲಿ ಅದರ ಕುಲಪತಿಯಾಗಿ ತಮ್ಮ ಆಡಳಿತ ಕೌಶಲ್ಯ ಮತ್ತು ಕರ್ತವ್ಯನಿಷ್ಠೆಯಿಂದ ಕಾಯಕಲ್ಪ ನೀಡಿದ ಶ್ರೇಯಸ್ಸು ಎಸ್.ಆರ್.ನಾಯಕರಿಗೆ ಸಲ್ಲುತ್ತದೆ.
ನಿವೃತ್ತಿಯ ನಂತರ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಮೊದಲ ಅಧ್ಯಕ್ಷರಾಗಿ ಅವರು ನಿರ್ವಹಿಸಿದ ಪಾತ್ರ ನಿಜಕ್ಕೂ ಸ್ಮರಣೀಯ.ಸರ್ಕಾರದಿಂದ ಮೂಲಭೂತ ಸೌಕರ್ಯಗಳು,ಅಗತ್ಯ ಸಿಬ್ಬಂದಿ ಸಿಗದಿದ್ದರೂ ಶ್ರದ್ಧೆಯಿಂದ ಕಾರ್ಯ ನಿರ್ವಹಿಸಿ,ಮಾನವ ಹಕ್ಕುಗಳ ಆಯೋಗಕ್ಕೆ ಐಡೆಂಟಿಟಿಯನ್ನು ಒದಗಿಸಿದ್ದು ನಾಯಕರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ.ಐದು ವರ್ಷಗಳ ಅವಧಿಯಲ್ಲಿ ಸುಮಾರು 5000 ಮಾನವ ಹಕ್ಕು ಉಲ್ಲಂಘನೆಯ ಪ್ರಕರಣಗಳು,ಅವುಗಳಲ್ಲಿ 900ರಷ್ಟು ಸಾರ್ವತ್ರಿಕ ಮಹತ್ವದ ಪ್ರಕರಣಗಳನ್ನು ಸ್ವಯಂ ಪ್ರೇರಣೆಯಿಂದ ನೋಂದಣಿ ಮಾಡಿಕೊಂಡು ವಿಚಾರಣೆ ನಡೆಸಿದ್ದು ನಾಯಕರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ. ಮಳೆಗಾಲದ ಸಮಯದಲ್ಲಿ ಲಿಂಗನಮಕ್ಕಿ ಅಣೆಕಟ್ಟು ತುಂಬಿ ಕೃತಕ ನೆರೆ ಸೃಷ್ಟಿ ಮಾಡಿದ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಚಂದ್ರಕಾಂತ ಕೊಚರೇಕರ ಅವರ ನೇತ್ರತ್ವದಲ್ಲಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಕೆಯಾದಾಗ ಅದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಶಾಶ್ವತ ಪರಿಹಾರ ಸೂಚಿಸಿದ್ದು ನಾಯಕರ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ.ಇದು ಕೇವಲ ಲಿಂಗನಮಕ್ಕಿಗೆ ಸೀಮಿತವಾಗದೇ ರಾಜ್ಯದ ಎಲ್ಲ ಅಣೆಕಟ್ಟುಗಳಿಗೂ ಅನ್ವಯವಾಗಿರುವದು ನಾಯಕರ ಜನಪರ ಸಾರ್ವತ್ರಿಕ ಧೋರಣೆಯ ಹೆಗ್ಗುರುತಾಗಿದೆ.
ಎಸ್.ಆರ್.ನಾಯಕರು ಕೇವಲ ನ್ಯಾಯಮೂರ್ತಿಗಳಾಗಿ ಹೆಸರು ಮಾಡಿದವರಲ್ಲ.ಅವರು ಅತ್ಯುತ್ತಮ ಪ್ರಾಧ್ಯಾಪಕರೂ ಆಗಿದ್ದರು.ಅವರ ಉಪನ್ಯಾಸಗಳಲ್ಲಿ ಸಾಮಾಜಿಕ ಚಿಂತನೆ,ದೇಶದ ಭವಿಷ್ಯದ ಕುರಿತು ಕಾಳಜಿ, ಯುವ ಜನಾಂಗದ ಕುರಿತು ಕಳಕಳಿಗಳನ್ನು ಕಾಣಬಹುದು.ಯುವಕರು ಸಾಹಿತ್ಯ,ಕಲೆ,ವಿಜ್ಞಾನ,ಕಾನೂನು,ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದರೆ ಸಾಲದು ದೇಶದ ನೀತಿ ನಿರೂಪಣೆಯಲ್ಲಿ ಮುಖ್ಯ ಪಾತ್ರವಹಿಸುವ ರಾಜಕೀಯದಲ್ಲಿಯೂ ತೊಡಗಿಕೊಳ್ಳಬೇಕು.ರಾಜಕೀಯದಲ್ಲಿ ಯುವಕರ ಹಿಂಜರಿಕೆ ದೇಶದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬುದು ಅವರ ಖಚಿತ ಅಭಿಪ್ರಾಯ.ಅವರ ಪ್ರೌಢ ವಿಚಾರಗಳು ಕೃತಿರೂಪದಲ್ಲಿ ಪ್ರಕಟಗೊಳ್ಳಬೇಕು ಎಂದು ಶಾಂತಾರಾಮ ನಾಯಕರು ಅಭಿಪ್ರಾಯ ಪಡುತ್ತಾರೆ.ಎಸ್.ಆರ್. ನಾಯಕರಿಗೆ ದೊರೆತ ಗೌರವ ಸನ್ಮಾನಗಳು, ಅವರ ಕುರಿತು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರನ್ನೂ ಸೇರಿಸಿ ಹಲವು ಮಹನೀಯರ ಅಭಿನಂದನಾಪರ ಮಾತುಗಳು ಈ ಕೃತಿಯಲ್ಲಿವೆ.ಇವೆಲ್ಲ ಈ ಕೃತಿಯ ಮಹತ್ವವನ್ನು ಹೆಚ್ಚಿಸಿವೆ.
ಶಾಂತಾರಾಮ ನಾಯಕರು ನ್ಯಾಯಮೂರ್ತಿ ಎಸ್.ಆರ್.ನಾಯಕರಿಗೆ ಆತ್ಮೀಯರಾದರೂ ಎಲ್ಲಿಯೂ ಅವರನ್ನು ವಿಜೃಂಭಿಸಿದಂತೆ ಕಂಡು ಬರುವುದಿಲ್ಲ.ಅವರ ವ್ಯಕ್ತಿತ್ವ ಮತ್ತು ಸಾಧನೆಗಳ ಯಥಾವತ್ತಾದ ಚಿತ್ರಣ ಇಲ್ಲಿದೆ. ಅಲ್ಲಲ್ಲಿ ಉಲ್ಲೇಖಿತವಾದ ಮಹನೀಯರ ಮಾತುಗಳು ಈ ವಯಸ್ಸಿನಲ್ಲಿಯೂ ಶಾಂತರಾಮರ ಓದಿನ ವಿಸ್ತಾರವನ್ನು ಪರಿಚಯಿಸುತ್ತವೆ.ಎಂದಿನಂತೆ ಲವಲವಿಕೆಯ ಬರವಣಿಗೆಯ ಶೈಲಿ ಕೃತಿಯನ್ನು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.ಮುನ್ನುಡಿಯಲ್ಲಿ ಡಾ. ರಾಮಕೃಷ್ಣ ಗುಂದಿಯವರು ಹೇಳಿದಂತೆ ಇದು ಶಾಂತಾರಾಮ ನಾಯಕರು ನಿರೂಪಿಸಿದ ಹೊನ್ನ ಹೊತ್ತಿಗೆ.ಶಾಂತಾರಾಮ ನಾಯಕರು ಇಂತಹ ಕೃತಿಯನ್ನು ನಿರೂಪಿಸದಿದ್ದರೆ ಮಹಾಚೇತನವೊಂದು ಮರೆಯಲ್ಲಿಯೇ ಉಳಿದು ಬಿಡುತ್ತಿತ್ತು.ರಾಷ್ಟ್ರಪಿತ ಗಾಂಧಿಜಿಯಂತಹ ದಿವ್ಯ ಚೇತನಗಳನ್ನು ಅಪಮೌಲ್ಯಗೊಳಿಸುತ್ತಿರುವ ವರ್ತಮಾನದ ಸಂದರ್ಭದಲ್ಲಿ ಗಾಂಧಿ ಮಾರ್ಗದಲ್ಲಿಯೇ ಸಾಗಿದ ಎಸ್.ಆರ್.ನಾಯಕರಂತಹ ಚೇತನಗಳನ್ನು ಹೊಸ ತಲೆಮಾರಿಗೆ ಪರಿಚಯಿಸಿ ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸಬೇಕಾದ ಹೊಣೆಗಾರಿಕೆ ಈಗ ಹಿರಿಯರಾದ ನಮ್ಮ ಮೇಲಿದೆ.ಸರ್ಕಾರ ಎಲ್ಲ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಗ್ರಂಥಾಲಯಗಳಿಗೆ ಪುಸ್ತಕ ಖರೀದಿಸಲು ಅನುದಾನ ನೀಡುತ್ತಿದೆ. ಈ ಅನುದಾನದಲ್ಲಿ ಕನಿಷ್ಠ ಶೇ.25 ರಷ್ಟು ಅನುದಾನವನ್ನು ಸ್ಥಳೀಯ ಲೇಖಕರ ಇಂತಹ ಕೃತಿಗಳನ್ನು ಖರೀದಿಸಲು ಅವಕಾಶ ಕಲ್ಪಿಸಿದರೆ ವಿದ್ಯಾರ್ಥಿಗಳು ಸ್ಥಳೀಯ ಸಾಧಕರ ಸಾಧನೆಗಳನ್ನು ಅರಿತುಕೊಂಡು ಅವರಂತೆ ವ್ಯಕ್ತಿತ್ವದ ಮಾದರಿಯೊಂದನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ .
-ಶ್ರೀಧರ ಬಿ.ನಾಯಕ,ಬೇಲೇಕೇರಿ
ಮಂಗಳವಾರ, ಮಾರ್ಚ್ 3, 2026
ಡಾ. ರಣಜಿತ ನಾಯ್ಕರ "ಹೃದಯ ತಾರುಣ್ಯ":
ವೈದ್ಯಕೀಯ ಮತ್ತು ತಂತ್ರಜ್ಞಾನವನ್ನು ಕುರಿತ ಅಧ್ಯಯನ ಕೃತಿಗಳನ್ನು ಕನ್ನಡದಂತಹ ಪ್ರಾದೇಶಿಕ ಭಾಷೆಯಲ್ಲಿ ರಚಿಸುವುದು ಕಷ್ಟ ಎಂಬ ಮಾತುಗಳನ್ನು ಕೇಳುತ್ತಲೇ ಇದ್ದೇವೆ.ಆದರೆ ಇಂತಹ ಮಾತುಗಳನ್ನು ಹುಸಿಗೊಳಿಸುವಂತೆ ಹಲವು ವೈದ್ಯರು ಕನ್ನಡದಲ್ಲಿ ಉತ್ತಮ ಮಾಹಿತಿಪೂರ್ಣ ಅನೇಕ ಕೃತಿಗಳನ್ನು ರಚಿಸಿದ್ದಾರೆ.ಡಾ.ಅನುಪಮಾ ನಿರಂಜನ,ಡಾ.ಸಿ.ಆರ್.ಚಂದ್ರಶೇಖರ್,ಡಾ.ಡಿ.ಎಸ್.ಶಿವಪ್ಪ,ಡಾ. ಕರವೀರಪ್ರಭು ಕ್ಯಾಲಕೊಂಡ,ಡಾ.ವಿಜಯಲಕ್ಷ್ಮಿಬಾಳೆಕುಂದ್ರಿ, ಡಾ.ವಸುಂಧರಾ ಭೂಪತಿ, ಡಾ.ನಾ.ಮೊಗಸಾಲೆ,ಡಾ.ಎಚ್.ಎಸ್.ಅನುಪಮಾ,ಡಾ.ಬ್ರಹ್ಮಾನಂದ ನಾಯಕ ಹೀಗೆ ಅನೇಕ ವೈದ್ಯರು ತಮ್ಮ ವೈದ್ಯಕೀಯ ಬರೆಹಗಳ ಮೂಲಕ ಜನಸಾಮಾನ್ಯರನ್ನು ಜಾಗೃತಗೊಳಿಸುವ ಕಾರ್ಯವನ್ನು ಮಾಡುತ್ತಲೇ ಇದ್ದಾರೆ.
ಈ ಸಾಲಿನಲ್ಲಿ ನಿಲ್ಲಬಲ್ಲ ಇನ್ನೊಬ್ಬರು ಡಾ. ರಣಜಿತ ಬೀರಣ್ಣ ನಾಯ್ಕ ಕೆಂಚನ್ ಹಿರೇಗುತ್ತಿ. ಕಿರಿಯ ವಯಸ್ಸಿನಲ್ಲಿಯೇ ತಮ್ಮ ವೃತ್ತಿ ಮತ್ತು ಪ್ರವೃತ್ತಿಗಳಲ್ಲಿ ವಿಶಿಷ್ಟ ಸಾಧನೆ ಮಾಡುತ್ತಿರುವ ಈ ಯುವವೈದ್ಯ ಸಧ್ಯ ಬೆಳಗಾವಿಯ ಕೆ.ಎಲ್. ಇ.ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರೋಗಿಗಳನ್ನು ಉಪಚರಿಸುವದು ಅವರ ವೃತ್ತಿಯಾದರೆ ಬರವಣಿಗೆ ಅವರ ಪ್ರವೃತ್ತಿ.ವಿದ್ಯಾರ್ಥಿಯಾಗಿದ್ದಾಗಲೇ ಬರವಣಿಗೆಯಲ್ಲಿ ಆಸಕ್ತಿಯನ್ನು ಹೊಂದಿದ್ದ ಅವರು ವೈದ್ಯರಾದ ಮೇಲೂ ತಮ್ಮ ಪ್ರವೃತ್ತಿಯನ್ನು ಪೋಷಿಸಿ ಬೆಳೆಸುತ್ತಿರುವುದು ಅವರ ಬದ್ಧತೆಗೆ ನಿದರ್ಶನ. ಆರೋಗ್ಯ ಮತ್ತು ವೈದ್ಯಕೀಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಂಟು ಪುಸ್ತಕಗಳನ್ನು ಹೊರತಂದಿರುವ ಡಾ.ರಣಜಿತ ಈಗ “ಹೃದಯ ತಾರುಣ್ಯ” ಎಂಬ ಇನ್ನೊಂದು ಪುಸ್ತಕವನ್ನು ಹೊರತಂದಿದ್ದಾರೆ.
ಹೃದಯ ಮನುಷ್ಯನ ದೇಹದ ಬಹು ಮುಖ್ಯ ಅಂಗ. ಮೆದುಳು ಮನುಷ್ಯನ ಆಲೋಚನಾ ಶಕ್ತಿಯನ್ನು ರೂಪಿಸಿದರೆ ಹೃದಯ ಭಾವನೆಗಳನ್ನು ನಿಯಂತ್ರಿಸುತ್ತದೆ. ಮೆದುಳು ತನ್ನ ಕಾರ್ಯಗಳನ್ನು ನಿಲ್ಲಿಸಿದರೂ ಮನುಷ್ಯ ಶವದಂತೆ ಬದುಕಬಲ್ಲ. ಆದರೆ ಹೃದಯ ತನ್ನ ಕಾರ್ಯವನ್ನು ನಿಲ್ಲಿಸಿದರೆ ಮನುಷ್ಯ ಶವವೇ ಆಗುತ್ತಾನೆ. ಆದ್ದರಿಂದ ಹೃದಯವನ್ನು ಕಾಪಾಡಿಕೊಳ್ಳುವ, ಅದರ ಕುರಿತು ಹೆಚ್ಚು ಕಾಳಜಿ ವಹಿಸುವ ಅಗತ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಅಂದರೆ ಕೋವಿಡೋತ್ತರ ಕಾಲಘಟ್ಟದಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ ಸಾವನ್ನಪ್ಪುತ್ತಿರುವ ಯುವಕರ ಸಂಖ್ಯೆ ಹೆಚ್ಚಾಗಿದೆ.ಇದರಿಂದ ಹೃದಯ ಕಾಯಿಲೆ ವಯಸ್ಸಾದವರ ಸಮಸ್ಯೆ ಎಂಬ ಒಂದು ಕಾಲದ ನಂಬಿಕೆ ದೂರವಾಗುತ್ತಿದೆ.ಇಂತಹ ಸಂದರ್ಭದಲ್ಲಿ ಹೊರತಂದಿರುವ ಡಾ. ರಣಜಿತ್ ಇವರ “ಹೃದಯ ತಾರುಣ್ಯ” ಎಂಬ ಕೃತಿ ಯುವಕರಲ್ಲಿ ಹೃದಯದ ಕುರಿತು ಜಾಗೃತಿಯನ್ನು ಉಂಟು ಮಾಡಿ ಹೃದಯದ ತಾರುಣ್ಯವನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ. ಇದನ್ನು ಲೇಖಕರ ಮಾತಿನಲ್ಲಿ ಅವರು ಸ್ಪಷ್ಟವಾಗಿ ಹೇಳುತ್ತಾರೆ. "ಯುವಕರಲ್ಲಿ ಇಂದು "ಮಾಹಿತಿ" ಇದೆ. ಆದರೆ ಅವರಿಗೆ ಅದು “ಅನುಭವ-ಜ್ಞಾನ'ವಾಗಿ ದೊರೆಯುತ್ತಿಲ್ಲ. ಕೇವಲ “ಅಂಕಿ-ಸಂಖ್ಯೆ” ರೂಪದಲ್ಲಿ ಲಭ್ಯವಿವೆ. ಅವರಿಗೆ ಅದನ್ನು "ವಿವರಣೆ” ರೂಪದಲ್ಲಿ ವೈಜ್ಞಾನಿಕ ವಿಶ್ಲೇಷಣೆಯಾಗಿ ನೀಡಬೇಕಾದ ಮಾಧ್ಯಮಗಳು ವೈದ್ಯರು-ಆಸ್ಪತ್ರೆ ಜನರನ್ನು ಭಯ ಭೀತಗೊಳಿಸುತ್ತಿವೆ............ ವೈದ್ಯಕೀಯ ಸಾಹಿತ್ಯ ಜನರಲ್ಲಿ ಅರಿವು ಮೂಡಿಸಿ, ಸಮಸ್ಯೆ ವಿಶ್ಲೇಷಿಸಿ, ಪರಿಹಾರ ಕಂಡುಕೊಳ್ಳಲು ಪ್ರೇರಣೆಯಾಗಬೇಕು.ಆದರಿಂದು ವೈದ್ಯಕೀಯ ಲೇಖನಗಳು ಕೇವಲ “ಜಾಹೀರಾತು” ರೂಪ ಪಡೆಯುತ್ತಿವೆ. ಹಾಗಾಗಿ ಈ ಪುಸ್ತಕವನ್ನು ಬರೆಯಬೇಕಾದ ಅನಿವಾರ್ಯತೆ ಇದೆ.” ಇದು ಪ್ರಾಮಾಣಿಕವಾದ ಅವರ ಹೃದಯದ ಮಾತು. ತಜ್ಞ ಹೃದಯ ವೈದ್ಯರಾದ ಅವರು ಈ ಕೃತಿಯಲ್ಲಿ ಹೃದಯ ಸಂಬಂಧಿ ಅನೇಕ ಸಂಗತಿಗಳನ್ನು ಸರಳವಾಗಿ ವಿವರಿಸುತ್ತಾರೆ. ಒಟ್ಟು 25 ಅಧ್ಯಾಯಗಳನ್ನು ಹೊಂದಿರುವ ಈ ಕೃತಿ ಹೃದಯದ ಕುರಿತು ಜನ ಸಾಮಾನ್ಯರನ್ನು ಶಿಕ್ಷಿತರನ್ನಾಗಿ ಮಾಡುವಲ್ಲಿ ಯಶಸ್ವಿಯಾಗುತ್ತದೆ. ಯುವ ಭಾರತದ ಯುವಕರನ್ನು ಕಾಡುವ ಹೃದ್ರೋಗಗಳು, ಅವುಗಳಿಗೆ ಕಾರಣವಾದ ಆಧುನಿಕ ಜೀವನಶೈಲಿ ಮತ್ತು ಅದರಿಂದ ಸೃಷ್ಟಿಯಾಗುತ್ತಿರುವ ಅಪಾಯಕಾರಿ ಅಂಶಗಳನ್ನು ಅವರು ಇಲ್ಲಿ ಗುರುತಿಸಿದ್ದಾರೆ.ಶ್ರಮರಹಿತ ಜೀವನ, ಮಾನಸಿಕ ಒತ್ತಡ,ಕೆಲಸದ ಒತ್ತಡ, ಇದರಿಂದ ಸೃಷ್ಟಿಯಾದ ಒಂಟಿತನ, ಬದಲಾಗುತ್ತಿರುವ ನಮ್ಮ ಆಹಾರ ಪದ್ಧತಿ ಇವೆಲ್ಲವೂ ಹೇಗೆ
ಹೃದಯದ ಅನಾರೋಗ್ಯಕ್ಕೆ ಕಾರಣ ಎಂಬುದನ್ನು ವಿವರಿಸಿದ್ದಾರೆ. ಪರಿಸರ ಮಾಲಿನ್ಯವು ನಮ್ಮ ಹೃದಯವನ್ನೂ ಸೇರಿ ಹಲವು ದೈಹಿಕ ರೋಗಗಳಿಗೆ ಕಾರಣವಾಗಿರುವುದರಿಂದ ಸ್ವಚ್ಛ ಪರಿಸರದತ್ತ ಗಮನ ಸೆಳೆಯುತ್ತಾರೆ.ಹೃದಯವನ್ನು ಆರೋಗ್ಯಪೂರ್ಣವಾಗಿಟ್ಟುಕೊಳ್ಳಲು ಅಗತ್ಯವಾದ ನಿರ್ದೇಶನಗಳು ಈ ಕೃತಿಯಲ್ಲಿವೆ.ಹೃದಯದ ಆರೋಗ್ಯಕ್ಕೆ ದೈಹಿಕ ಕ್ರಿಯಾಶೀಲತೆಯೇ ಮುಖ್ಯವೇ ಹೊರತು ಜಿಮ್ ಗೆ ಹೋಗಿ ದೇಹ ದಂಡಿಸುವುದಲ್ಲ ಎಂಬುದರಿಂದ ಹಿಡಿದು ಹೃದ್ರೋಗಕ್ಕೆ ಅಗತ್ಯವಾದ ಆರೈಕೆ ಮತ್ತು ಚಿಕಿತ್ಸಾ ಕ್ರಮ,ಅನುಸರಿಸ ಬೇಕಾದ ವಿಧಾನ,ಔಷಧಗಳ ಕಿರುಪರಿಚಯವನ್ನೂ ಈ ಕೃತಿ ಒಳಗೊಂಡಿದೆ. ಹೃದ್ರೋಗಕ್ಕೆ ಕಾರಣವಾಗುವ ಅಂಶಗಳ ಸಾಮಾಜಿಕ ಆಯಾಮಗಳನ್ನು ವಿಶ್ಲೇಷಿಸಿದ್ದಾರೆ.ಹೀಗಾಗಿ ಈ ಕೃತಿಗೆ ಒಂದು ರೀತಿಯಲ್ಲಿ ಸಮಗ್ರತೆ ಪ್ರಾಪ್ತವಾಗಿದೆ.
ಅನಾರೋಗ್ಯದಿಂದ ಬಳಲುವ ರೋಗಿಗಳಿಗೆ ಔಷಧೋಪಚಾರ ನೀಡುವುದು ವೈದ್ಯರ ಮೊದಲ ಕರ್ತವ್ಯ. ಅದರ ಜೊತೆಗೆ ಅವರ ಆತಂಕವನ್ನು ದೂರಮಾಡಿ, ಆತ್ಮವಿಶ್ವಾಸ ಮೂಡುವಂತೆ ಸಮಾಧಾನದಿಂದ ಸಲಹೆ ನೀಡುವದು ವೈದ್ಯರ ಕಾರ್ಯವೇ ಆಗಿದೆ. ಬಹಳಷ್ಟು ಸಂದರ್ಭದಲ್ಲಿ ಚಿಕಿತ್ಸೆಗಿಂತ ವೈದ್ಯರು ನೀಡುವ ಸಲಹೆಯೇ ಪರಿಣಾಮಕಾರಿಯಾಗಿರುತ್ತದೆ.ಹಾಗೆ ನೀಡುವ ಸಲಹೆಗಳು ಕೇವಲ ಒಬ್ಬ ರೋಗಿಗೆ ಸೀಮಿತವಾಗದೆ ಸಾರ್ವತ್ರಿಕವಾಗಿ ಲೇಖನವಾಗಿ, ಪುಸ್ತಕವಾಗಿ ಪ್ರಕಟವಾದರೆ ಅದರ ಪರಿಣಾಮ ಇನ್ನಷ್ಟು ವ್ಯಾಪಕವಾಗುತ್ತದೆ. ಇಂತಹ ಸಾಮೂದಾಯಿಕ ಒಳಿತಿನ ಕಾರ್ಯವನ್ನು ಡಾ. ರಣಜಿತ ನಾಯ್ಕ್ ಮಾಡಿದ್ದಾರೆ.ಒಬ್ಬ ಸಾಮಾನ್ಯ ಅಕ್ಷರಸ್ಥನು ಸುಲಭದಲ್ಲಿ ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಇರುವುದರಿಂದ ಈ ಪುಸ್ತಕ ಖಂಡಿತವಾಗಿಯೂ ಓದುಗರ ಹೃದಯವನ್ನುತಲುಪಬಲ್ಲದು.
ಈ ಕೃತಿಯ ಭಾಷೆ ತುಂಬಾ ಆಪ್ತವಾಗಿದೆ. ಕನ್ನಡದಲ್ಲಿ ವೈದ್ಯಕೀಯ ಲೇಖಕರಿಗೆ ಅನೇಕ ಸಮಸ್ಯೆಗಳಿವೆ. ಇಂಗ್ಲಿಷ್‌ನಿಂದ ಕನ್ನಡಕ್ಕೆ ಪದಗಳನ್ನು ಅನುವಾದ ಮಾಡುವಾಗ ಹೊಸ ಪದಗಳ ಸೃಷ್ಟಿ, ಸಮಾನಾರ್ಥಕ ಪದಗಳ ಬಳಕೆ, ಅದರಲ್ಲಿ ಏಕರೂಪತೆ ಕಾಯ್ದುಕೊಳ್ಳುವುದು ಹೀಗೆ ಅನೇಕ ಸವಾಲುಗಳಿವೆ.ಅವುಗಳನ್ನೆಲ್ಲ ಡಾ. ರಣಜಿತ ಯಶಸ್ವಿಯಾಗಿ ನಿಭಾಯಿಸಿದ್ದಾರೆ.ಕನ್ನಡ ಸಾಹಿತ್ಯದ ಆಳವಾದ ಜ್ಞಾನ ಅವರಲ್ಲಿ ಭಾಷೆಯ ಬಳಕೆಯ ಗೊಂದಲಗಳನ್ನು ನಿವಾರಿಸಿದೆ."ಹೃದಯ ಮೀರಿಸಬಲ್ಲ ರೂಪಕ ಇನ್ನೊಂದಿಲ್ಲ","ಅತಿಯಾದ ಸಕ್ಕರೆ ಹೃದಯಕ್ಕೆ ಕಹಿಯಾಗದಿರಲಿ", "ಹೃದಯದ ಹಣತೆ ಬೆಳಗುತ್ತಿರಲಿ" - ಈ ಮುಂತಾದ ಶೀರ್ಷಿಕೆಗಳು ಗಮನ ಸೆಳೆಯುತ್ತವೆ. ವೈದ್ಯಕೀಯ ಮತ್ತು ವೈಜ್ಞಾನಿಕ ಕೃತಿಗಳ ವಿಸ್ತಾರವಾದ ಓದು ಮತ್ತು ವೈದ್ಯರಾಗಿ ಅವರು ಪಡೆದ ವಿಸ್ತೃತ ಅನುಭವ ಬರವಣಿಗೆಗೆ ಖಚಿತತೆಯನ್ನು ಒದಗಿಸಿದೆ.ಇವೆಲ್ಲ ಡಾ. ರಣಜಿತ ಬೀರಣ್ಣ ನಾಯ್ಕ್ ಕೆಂಚನ್ ಹಿರೇಗುತ್ತಿ ಅವರನ್ನು ಅತ್ಯುತ್ತಮ ವೈದ್ಯ ಲೇಖಕರನ್ನಾಗಿ ರೂಪಿಸಿದೆ.ಹೃದಯದ ಕುರಿತು ಕಾಳಜಿ ಇರುವ ಪ್ರತಿಯೊಬ್ಬರೂ ಈ ಕೃತಿಯನ್ನು ಓದಲೇಬೇಕು.
-- ಶ್ರೀಧರ ಬಿ ನಾಯಕ, ಬೇಲೇಕೇರಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)