ಸೋಮವಾರ, ಆಗಸ್ಟ್ 26, 2024
ಕೃಷ್ಣನ ಕುರಿತು ಚೇತನಾ ತೀರ್ಥಹಳ್ಳಿ.
ಕೃಷ್ಣ ಹಲವು ಪದರಗಳ ಪಾತ್ರ. ಆ ಎಲ್ಲ ಪದರಗಳಲ್ಲೂ ಆತ ಎಷ್ಟು ಅಡಗಿಸಿಕೊಂಡರೂ ದೈವತ್ವ ಹೊರ ತೂರಿ ತನ್ನ ಅಸ್ತಿತ್ವ ಸಾರುವುದು. ಒಳಿತು, ಕೆಡುಕು ಎಲ್ಲವನ್ನೂ ಸಮಾನವಾಗಿ ಸೆಳೆಯುವ ಕೃಷ್ಣ; ಪ್ರತಿಫಲಿಸಿದರೆ ಬೆಳಕು, ಪ್ರತಿರೋಧಿಸಿದರೆ ಕತ್ತಲು… । ಚೇತನಾ ತೀರ್ಥಹಳ್ಳಿ
ಭಾರತದ ಪುರಾಣೇತಿಹಾಸದ ಜಗತ್ತಿನಲ್ಲಿ ರಾಮ – ಕೃಷ್ಣರಷ್ಟು ಜನಪ್ರಿಯರಾದವರು ಯಾರೂ ಇಲ್ಲ. ಇವರಿಬ್ಬರೂ ನೇರ ದೇವರಲ್ಲದೆ ಅವತಾರಿಗಳೆಂಬ ಗುರುತು ಹೊತ್ತಿರೋದು ಇದಕ್ಕೆ ಮುಖ್ಯ ಕಾರಣ. ಈ ಇಬ್ಬರು ಅವತಾರಿಗಳಲ್ಲಿ ರಾಮ ಮನುಷ್ಯತ್ವದಿಂದ ದೈವತ್ವಕ್ಕೇರುವ ಸಂಕೇತವಾಗಿ ಕಂಡರೆ, ಕೃಷ್ಣ ದೈವತ್ವ ಕಳಚಿಕೊಂಡು ಮನುಷ್ಯನಾಗಲು ಸಾಹಸ ಪಡುವ ಸಂಕೇತವಾಗಿ ಕಾಣುತ್ತಾನೆ. ಆದ್ದರಿಂದ ಕೃಷ್ಣ ಒಂದು ಕೈ ಹೆಚ್ಚು ಹತ್ತಿರದ ಭಗವಂತ. ಹಾಗೆಂದೇ ಕೃಷ್ಣನ ಕತೆಗಳು, ಕಾವ್ಯಗಳು, ಕಲಾಕೃತಿಗಳು, ವ್ಯಾಖ್ಯಾನಗಳು ಸಂಖ್ಯೆಯಲ್ಲೂ ಜನಪ್ರಿಯತೆಯಲ್ಲೂ ರಾಮನಿಗಿಂತ ಹೆಚ್ಚು.
ಈ ಕೃಷ್ಣನ ಪಾತ್ರ ಕೇವಲ ಮಹಾಭಾರತದಲ್ಲಿ ಬಂದುಹೋಗುವಂಥದ್ದಲ್ಲ. ಮಹಾಭಾರತದಲ್ಲಿ ಆತ ಇಡೀ ಕತೆಯ ಒಂದು ಅಧ್ಯಾಯವಷ್ಟೇ. ಈತ ಹೆಚ್ಚು ಕಾಣಿಸಿಕೊಳ್ಳೋದು ಪುರಾಣಗಳಲ್ಲಿ. ಅದರಲ್ಲೂ ಭಾಗವತ ಮತ್ತು ಬ್ರಹ್ಮವೈವರ್ತ ಪುರಾಣಗಳಲ್ಲಿ. ಭಾರತೀಯ ಪುರಾಣಗಳು ಜನಪದದಿಂದ ಹೆಕ್ಕಿ ಸಂಸ್ಕೃತಕ್ಕೆ ಒಳಪಡಿಸಿದ ಕಥನಗಳೇ ಆದ್ದರಿಂದ, ಇವು ಮಹಾಕಾವ್ಯಕ್ಕಿಂತಲೂ ಹೆಚ್ಚು ಆಪ್ತ.
ಕೃಷ್ಣ ಹಲವು ಪದರಗಳ ಪಾತ್ರ. ಆ ಎಲ್ಲ ಪದರಗಳಲ್ಲೂ ಆತ ಎಷ್ಟು ಅಡಗಿಸಿಕೊಂಡರೂ ದೈವತ್ವ ಹೊರ ತೂರಿ ತನ್ನ ಅಸ್ತಿತ್ವ ಸಾರುವುದು. ಬಾಲ್ಯದಲ್ಲಿ ತನ್ನ ದೈವೀಶಕ್ತಿಯಿಂದ ರಕ್ಕಸ ರಕ್ಕಸಿಯರನ್ನು ಕೊಲ್ಲುವ ಕೃಷ್ಣ, ಅದನ್ನು ಮರೆಮಾಚಲು ಬೆಣ್ಣೆ ಕದಿಯುತ್ತಾನೆ, ಸೀರೆ ಸೆಳೆಯುತ್ತಾನೆ, ಊರ ತುಂಬ ಗದ್ದಲವೆಬ್ಬಿಸುತ್ತ ತಿರುಗುತ್ತಾನೆ. ಬೆಳೆದ ಮೇಲೆ ದುಷ್ಟ ಶಿಕ್ಷಣ ನಡೆಸುತ್ತಾ ಜಂಬೂದ್ವೀಪದ ಉದ್ದಗಲ ತಿರುಗುವ ಕೃಷ್ಣ, ಮದುಮಗಳನ್ನು ಹಾರಿಸಿಕೊಂಡು ಹೋಗುತ್ತಾನೆ, ಇಬ್ಬರ ನಡುವೆ ಜಗಳ ಹಚ್ಚುತ್ತಾನೆ, ಥಟ್ಟನೆ ಕಣ್ಕಟ್ಟು ಮಾಡಿ ಒಬ್ಬರನ್ನು ಗೆಲ್ಲಿಸುತ್ತಾನೆ, ಮತ್ತೊಬ್ಬರನ್ನು ಸೋಲಿಸುತ್ತಾನೆ.
ಅವನು ಅದೇನೇ ಮಾಡಿದರೂ ಎಲ್ಲಕ್ಕೂ ಒಂದು ‘ಒಪ್ಪಬಹುದಾದ’ ಸಮಜಾಯಿಷಿ ಇದೆ. ಆ ಕಾರಣಕ್ಕೇ ಶಂಭೂಕ ವಧೆ ಮತ್ತು ಸೀತಾಪರಿತ್ಯಾಗದ ವಿಷಯಗಳಲ್ಲಿ ರಾಮನನ್ನು ಕಟೆಕಟೆಗೆ ಹತ್ತಿಸುವಂತೆ ಕೃಷ್ಣನನ್ನು ಯಾವ ಪ್ರಕರಣದಲ್ಲೂ ವಿಚಾರಣೆಗೆ ಒಳಪಡಿಸಿದ್ದಿಲ್ಲ. ಯುದ್ಧಗಳಲ್ಲಿ ಕೃಷ್ಣನ ನಡೆಗಳೂ ಚಾಣಾಕ್ಷತೆ ಅಥವಾ ಮುಳ್ಳನ್ನು ಮುಳ್ಳಿಂದಲೇ ತೆಗೆಯುವ ಉಪಾಯವೆಂಬ ಸಮರ್ಥನೆಗೆ ಒಳಪಡುತ್ತವೆಯೇ ಹೊರತು, ಕೃಷ್ಣ ಆರೋಪಿ ಸ್ಥಾನದಲ್ಲಿ ನಿಲ್ಲುವುದಿಲ್ಲ. ಇದ್ದುದರಲ್ಲಿ ಕೃಷ್ಣನಿಗೆ ಶಾಪ ಕೊಟ್ಟ ಗಾಂಧಾರಿಯೊಬ್ಬಳೇ ಅವನ ಮೇಲೆ ಆರೋಪ ಹೊರಿಸಿದ್ದು. ಅದರಲ್ಲೂ ದುರ್ಯೋಧನಾದಿಗಳ ದುಷ್ಟತನಗಳು ಮಹಾಭಾರತದ ಉದ್ದಕ್ಕೂ ಢಾಳಾಗಿ ಕಾಣುವುದರಿಂದ ಶಾಪ ಕೊಟ್ಟ ಗಾಂಧಾರಿಯ ಬಗ್ಗೆ ಮನಸ್ಸು ಮುರಿಯುವುದೇ ಹೊರತು,ಕೃಷ್ಣನ ಮೇಲಲ್ಲ!
ಕೃಷ್ಣನನ್ನು ವ್ಯಕ್ತಿಯಾಗಲ್ಲದೆ ಒಂದು ತತ್ವವಾಗಿ ನೋಡಿದರೆ, ಅದು ಕೂಡಾ ಹಲವು ಪದರಗಳ ಮಹಾ ಕಡಲಾಗಿಯೇ ತೋರುವುದು.
ಕೃಷ್ಣ ಅನ್ನುವ ಹೆಸರೇ ಕರ್ಷಣೆಯ ಸೂಚಿ, ಆಕರ್ಷಣೆಯ ಸೂಚಿ. ಯಾರನ್ನೇ ಆದರೂ ತನ್ನತ್ತ ಸೆಳೆಯುವವನು ಕೃಷ್ಣ. ಈ ಕೃಷ್ಣ ಒಳಿತನ್ನೂ ಕೆಡುಕನ್ನೂ ಸಮಾನವಾಗಿ ತನ್ನತ್ತ ಸೆಳೆಯುವನು. ಒಳಿತು ಹೊತ್ತ ಭಕ್ತರೂ ಪ್ರೇಮಿಗಳೂ ಕೃಷ್ಣನನ್ನು ಪ್ರತಿಫಲಿಸಿ ತಮ್ಮ ಮೈಮನದ ತುಂಬ ಅವನ ಬಿಂಬ ಹೊತ್ತು, ತಾವೇ ಕೃಷ್ಣರಾಗುವರು. ಕೆಡುಕು ಹೊತ್ತ ಶತ್ರುಗಳು ಕೃಷ್ಣನ ಸೆಳೆತದಿಂದ ತಪ್ಪಿಸಿಕೊಳ್ಳಲಾಗದೆ ಅವನತ್ತ ನುಗ್ಗಿ, ಕಪ್ಪುಕುಳಿಯಂಥ ಅವನ ಆಕರ್ಷಣೆಗೆ ಸಿಕ್ಕು (ಕೃಷ್ಣ ಎಂದರೆ ಕಪ್ಪು ಕೂಡಾ. ಕಪ್ಪನ್ನು ಕೃಷ್ಣ ಅನ್ನುವುದು ಅದಕ್ಕೆ ಆಕರ್ಷಣೆಯ ಗುಣವಿದೆ ಅಂತಲೇ.) ನುಂಗಲ್ಪಟ್ಟು ಅವನೊಳಗೆ ಒಂದಾಗಿ ಹೋಗುವರು, ಮುಕ್ತರಾಗುವರು. ಒಟ್ಟಾರೆ ಕೃಷ್ಣ, ಪ್ರತಿಫಲಿಸಿದರೆ ಬೆಳಕು, ಪ್ರತಿರೋಧಿಸಿದರೆ ಕತ್ತಲು.
ಪುರಾಣಗಳೇ ಇರಲಿ, ಮಹಾಕಾವ್ಯವೇ ಇರಲಿ, ನಂತರದ ನೂರು – ಸಾವಿರ ಕಥನಗಳೇ ಇರಲಿ, ಯಾವುದರಲ್ಲೂ ಕೃಷ್ಣನಿಗೆ ಅತಿವಿನಯದ ಸೋಗು ಹಾಕಿಲ್ಲದೆ ಇರುವುದು ಬಹಳ ಆಸಕ್ತಿಕರ ಅಂಶ. ಕೃಷ್ಣ ಚಿಕ್ಕವನಿದ್ದಾಗ ದೂರ್ವಾಸರಂಥ ದೂರ್ವಾಸರಿಗೇ ಎದುರಾಡಿದ್ದ. ಮದುವೆಯಾಗೆಂದು ಬಂದ ಯಾವ ಹೆಣ್ಣನ್ನೂ ದೂರವಿಡಲಿಲ್ಲ ಈ ಶ್ಯಾಮ; ಅಷ್ಟಾವಕ್ರೆಯ ಸೇವೆಯನ್ನೂ (ಈ ಸೇವೆಗೆ ಒಂದೊಂದರಲ್ಲಿ ಒಂದೊಂದು ಅರ್ಥ…) ತಿರಸ್ಕರಿಸಲಿಲ್ಲ. ಕರಡಿಯ ಮಗಳನ್ನೂ ಮದುವೆಯಾದ. ರುಕ್ಮಿಣಿ ಇವನ ಪಟ್ಟದರಸಿ, ದಾಯಾದಿ ಕುಲದ ಸತ್ಯಭಾಮೆಯೂ ಇವನ ಹೆಂಡತಿ. ನರಕಾಸುರನ ಸೆರೆಯಲ್ಲಿದ್ದು ಲೋಕರೂಢಿಯಂತೆ ಬಹಿಷ್ಕೃತೆಯರಾದ ಹೆಣ್ಣುಗಳಿಗೆಲ್ಲ ತನ್ನ ಹೆಂಡತಿಯರೆಂಬ ಪಟ್ಟ ಕೊಟ್ಟು ಆಗಿನ ಅನಿವಾರ್ಯದಂತೆ ಉದ್ಧರಿಸಿದ ಉದಾರಿ ನಮ್ಮ ಕೃಷ್ಣ! ಯಾವುದೇ ಮಾತು, ರೀತಿ, ನಿಯಮ, ಚೌಕಟ್ಟು ಇವನನ್ನು ಕಟ್ಟಿ ಹಾಕಲಾಗಲಿಲ್ಲ. ಬಾಲ್ಯದಲ್ಲಿ ಯಶೋದೆಗೆ ಅವನನ್ನು ಒಂದು ಯಕಃಶ್ಚಿತ್ ಒರಳಿಗೇ ಕಟ್ಟಿ ಹಾಕಲು ಆಗಿರಲಿಲ್ಲ ಅಂದಮೇಲೆ…
ಈ ನಮ್ಮ ಕೃಷ್ಣ, ಮಹಾಯೋಧನೇನಲ್ಲ. ಆದರೆ ಯುದ್ಧನೀತಿ ಬಲ್ಲ ನಿಪುಣ, ನುಣುಚಿಕೊಳ್ಳುವ ಮಹಾಜಾಣ. ಹಾಗೆಂದೇ ಇವನಿಗೆ ರಣಚೋರನೆಂಬ ಹೆಸರೂ ಇದೆ. ಜರಾಸಂಧ 17 ಸಲ ಮಥುರೆಯ ಮೇಲೆ ದಂಡೆತ್ತಿ ಬರುತ್ತಾನೆ. ಆದರೂ, ಎಲ್ಲರ ಯುದ್ಧ ಗೆಲ್ಲಿಸುವ ಕೃಷ್ಣ ತಾನು ಎದುರು ನಿಂತು ಅವನನ್ನು ಮಣಿಸುವ ಗೋಜಿಗೆ ಹೋಗುವುದಿಲ್ಲ. ಕೊನೆಗೂ ಅವನು ಜರಾಸಂಧನ ವಧೆ ಮಾಡಿಸುವುದು ಭೀಮನ ಕೈಯಿಂದ! ಆತ ಶಿಶುಪಾಲನನ್ನು ಕೊಲ್ಲುವುದೂ ರಣಾಂಗಣದಲ್ಲಿ ಅಲ್ಲ, ರಾಜಸಭೆಯಲ್ಲಿ! ಕಂಸನನ್ನು ಕೊಂದಿದ್ದೂ ಮಲ್ಲಕುಸ್ತಿಯಲ್ಲಿ ಹೊರತು ಯುದ್ಧದಲ್ಲಲ್ಲ!
ಕೃಷ್ಣ ಯೋಧನಲ್ಲ ಅಂದಮಾತ್ರಕ್ಕೆ ಆತ ಶೂರನಲ್ಲ ಎಂದು ತಿಳಿಯಬಾರದು. ಕೃಷ್ಣ ಸಂಯಮಿ. ಅನಗತ್ಯ ಸಾವುನೋವಿಗೆ ಬೆನ್ನು ತಿರುಗಿಸುವ ನಿಜಧೀರ. ಅವನು ಸಾಧ್ಯವಾದಷ್ಟೂ ಯುದ್ಧಗಳನ್ನು ತಪ್ಪಿಸಲು, ತಪ್ಪು ಮಾಡಿದ ವ್ಯಕ್ತಿಯನ್ನಷ್ಟೇ ಶಿಕ್ಷಿಸಲು ಪ್ರಯತ್ನಿಸುತ್ತಿದ್ದ.
ಇಂಥಾ ಕೃಷ್ಣ, ಅರ್ಜುನ ಒಲ್ಲೆನೆಂದರೂ ಕುರುಕ್ಷೇತ್ರ ಯುದ್ಧವನ್ನೇಕೆ ಮಾಡಿಸಿದ?
ಏಕೆಂದರೆ ಕೃಷ್ಣ, ಒಂದೊಂದೇ ಅಂಗಳದ ಕಳೆ ಕೀಳುವ ಬದಲು ಒಟ್ಟು ಬಂದಳಿಕೆ ರಾಶಿಗೆ ಕೊಳ್ಳಿ ಇಡಲು ಬಯಸಿದ್ದ. ಹೊಸತಾಗಿ, ಸರಿಯಾದ ಬೆಳೆಗೆ ಭೂಮಿ ಹಸನು ಮಾಡಲು ಬಯಸಿದ್ದ. ಕೆಡುಕು ಮಾತ್ರವಲ್ಲ, ಕೆಡುಕಿನ ಕೈಹಿಡಿದವರೂ ಕೇಡಿಗರೇ ಆದ್ದರಿಂದ ಅವರನ್ನೆಲ್ಲ ಒಗ್ಗೂಡಿಸಿ, ಗುಡಿಸಿಹಾಕುವ ಕೆಲಸ ಮಾಡಿದ. ಮಾಡಿಸಿದ, ಅರ್ಜುನನ ಕೈಯಿಂದ.
ಕೃಷ್ಣನ ಯಾವುದೇ ಕಥೆ ಹೊಕ್ಕು ನೋಡಿದರೂ ಅಲ್ಲಿ ದ್ವೇಷ ಕಾಣುವುದಿಲ್ಲ. ಅವನ ಸಿಟ್ಟುಗಳು ಅನ್ಯಾಯದ ಬಗೆಗಷ್ಟೇ. ಬಯಲಲ್ಲಿ ಕೊಳಲೂದುತ್ತಾ ಬೆಳೆದ ಹುಡುಗ, ಕೈಯೊಡ್ಡಿದವರಿಗೆಲ್ಲ ಪ್ರೀತಿ ಮೊಗೆಮೊಗೆದು ಹಂಚಿದ. ಯಾರಿಗೂ ಇಲ್ಲವೆನ್ನಲಿಲ್ಲ. ಅಂಥಾ ದುರ್ಯೋಧನನನ್ನೂ ಖಾಲಿ ಕೈಯಲ್ಲಿ ಮರಳಿಸದ ಮಾಹಾನುಭಾನೀತ.
ಹೂವು ಕೊಟ್ಟವರ ಮನೆಗೆ ಹೆಗಲ ಮೇಲೆ ಹುಲ್ಲು ಹೊತ್ತು ತರುವ, ಒಂದು ದಳ ತುಳಸಿಗೆ, ಹಿಡಿ ಅವಲಕ್ಕಿಗೆ ಒಲಿಯುವ, ಗೊಲ್ಲಬಾಲ, ಗೀತಾಚಾರ್ಯನ ಮಹಿಮೆ ಯಾರನ್ನು ತಾನೇ ಸೆಳೆಯದು ಹೇಳಿ?
- ಚೇತನಾ ತೀರ್ಥಹಳ್ಳಿ
ಭಾನುವಾರ, ಜುಲೈ 14, 2024
ಅಪರ್ಣ ನುಡಿನಮನ
"ಸುಲಿದ ಬಾಳೆಯ ಹಣ್ಣಿನಂದದಿ
ಕಳೆದ ಸಿಗುರಿನ ಕಬ್ಬಿನಂದದಿ
ಅಳಿದ ಉಷ್ಣದ ಹಾಲಿನಂದದಿ ಲಲಿತವಾದ ಕನ್ನಡ" ಎಂಬ 16 ನೇ ಶತಮಾನದ ಕವಿ ಮಹಾಲಿಂಗರಂಗನ ನುಡಿಯನ್ನು ಸಾಕಾರಗೊಳಿಸಿ ಅಭಿವ್ಯಕ್ತಿಸಿದವರು ಖ್ಯಾತ ನಿರೂಪಕಿ ಶ್ರೀಮತಿ ಅಪರ್ಣ ವಸ್ತಾರೆ.ಅವರ ಬಾಯಿಂದ ಹೊರಹೊಮ್ಮುವ ಕನ್ನಡ ಪದಗಳನ್ನು ಕೇಳುವಾಗಲೆಲ್ಲ ಎನಿತು ಇನಿದು ಈ ಕನ್ನಡ ನುಡಿಯು ಎಂಬ ಕವಿವಾಣಿ ಸಹಜವಾಗಿ ನೆನಪಾಗುತ್ತಿತ್ತು.ಕನ್ನಡದಲ್ಲಿ ನಿರೂಪಣೆಗೆ ಘನತೆ-ಗೌರವ ದೊರಕಿಸಿ ಸ್ಟಾರ್ ವ್ಯಾಲ್ಯೂ ತಂದು ಕೊಟ್ಟ ಖ್ಯಾತಿ ಅಪರ್ಣ ಅವರಿಗೆ ಸಲ್ಲುತ್ತದೆ.ಒಂದು ಕಾಲ ಘಟ್ಟದಲ್ಲಿ ಯಾವುದೇ ಸರ್ಕಾರಿ ಇಲ್ಲವೇ ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದರೆ ಅವುಗಳ ನಿರೂಪಣೆಯ ಜವಾಬ್ದಾರಿ ಅಪರ್ಣ ಅವರದಾಗಿರುತಿತ್ತು.ಒಂದು ರೀತಿಯಲ್ಲಿ ಅವರು ನಿರೂಪಣಾ ಕ್ಷೇತ್ರದ ಅನಭಿಷಿಕ್ತ ರಾಣಿಯಾಗಿದ್ದರು.ಅವರ ನಿರೂಪಣೆಯನ್ನು ಕೇಳಲೆಂದೇ ಕಾರ್ಯಕ್ರಮಗಳಿಗೆ ಬರುವ ಅಭಿಮಾನಿಗಳಿದ್ದರು. ಅವರು ಕನ್ನಡ ಭಾಷೆ ಮತ್ತು ಸಾಹಿತ್ಯದ ಸಾರಸತ್ವವನ್ನು ಹೀರಿಕೊಂಡು, ಕನ್ನಡದ ಅಂತರಂಗ ಬಹಿರಂಗವನ್ನು ಮನನ ಮಾಡಿಕೊಂಡಿದ್ದರಿಂದ ಅಂತಹ ಭಾಷಾ ಪ್ರೌಢಿಮೆಯನ್ನು ಸಾಧಿಸಲು ಸಾಧ್ಯವಾಗಿತ್ತು.ಸುಮಾರು ಎರಡು ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಿರೂಪಿಸಿದ ಶ್ರೇಯಸ್ಸು ಅವರಿಗಿದೆ.ಸತತ ಎಂಟು ಗಂಟೆಗಳ ಕಾಲ ಒಂದು ಕಾರ್ಯಕ್ರಮವನ್ನು ನಡೆಸಿಕೊಟ್ಟ ದಾಖಲೆ ಅವರದು.ಡಾ.ರಾಜಕುಮಾರ ಅವರನ್ನು ಬಿಟ್ಟರೆ ಪರಿಶುದ್ಧವಾಗಿ ಕನ್ನಡ ಮಾತನಾಡುವ ಸಾಮರ್ಥ್ಯವನ್ನು ಅಪರ್ಣ ಪಡೆದಿದ್ದರು.
ಅಪರ್ಣ ಚಲನಚಿತ್ರ ನಟಿಯಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದವರು.ಅವರ ವೃತ್ತಿ ಜೀವನ ಪ್ರಾರಂಭವಾಗಿದ್ದು ನಮ್ಮ ಜಿಲ್ಲೆಯಿಂದ ಎಂಬುದು ವಿಶೇಷ.ಆದ್ದರಿಂದಲೇ ಅವರ ಸಾವಿಗೆ ಜಿಲ್ಲೆಯಲ್ಲಿ ಹೆಚ್ಚು ಸ್ಪಂದನೆ ಸಿಗುತ್ತಿದೆ.ಕನ್ನಡ ಪ್ರಭ ಪತ್ರಿಕೆಯ ಸಿನೇಮಾ ಪುರವಣಿಯ ಸಂಪಾದಕರಾಗಿದ್ದ ಅವರ ತಂದೆ ನಾರಾಯಣಸ್ವಾಮಿಯವರು ಖ್ಯಾತ ನಿರ್ದೇಶಕರಾಗಿದ್ದ ಪುಟ್ಟಣ್ಣ ಕಣಗಾಲ್ ಅವರಿಗೆ ಆತ್ಮೀಯರಾಗಿದ್ದರು.ಹೀಗಾಗಿ ಪುಟ್ಟಣ್ಣನವರ ಕಣ್ಣಿಗೆ ಬಿದ್ದ ಅಪರ್ಣ ತರಾಸು ಅವರ ಕಾದಂಬರಿ ಆಧಾರಿತ ಮಸಣದ ಹೂವು ಸಿನೇಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು.ಈ ಚಲನಚಿತ್ರದ ಬಹುಮುಖ್ಯ ದೃಶ್ಯಗಳ ಚಿತ್ರಿಕರಣ ಕಾರವಾರ,ಸದಾಶಿವಗಡ,ಅಂಕೋಲಾ, ಬೇಲೇಕೇರಿ,ಶಿರೂರು ಸಾಣೆಕಟ್ಟಾ ಮುಂತಾದ ಕಡೆಗಳಲ್ಲಿ ನಡೆದಿತ್ತು.ಆಗ ಬೇಲೇಕೇರಿಯ ಪ್ರವಾಸಿ ಮಂದಿರದಲ್ಲಿ ನೋಡಿದ ಎತ್ತರದ ನಿಲುವಿನ ಅಂಬರೀಷ್ ಮತ್ತು ಬಟ್ಟಲು ಕಂಗಳ ಅಪರ್ಣ ಅವರ ಚಿತ್ರ ಈಗಲೂ ಕಣ್ಣಿಗೆ ಕಟ್ಟಿದಂತಿದೆ.ಆ ಚಲನಚಿತ್ರದ "ಉಪ್ಪಿನ ಸಾಗರಕೂ ಮುಪ್ಪಿದೆಯಂತೆ,ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ" ಎಂಬ ಹಾಡಿನ ಚಿತ್ರಿಕರಣದಲ್ಲಿ ನಮ್ಮ ಜಿಲ್ಲೆಯ ಬುಡಕಟ್ಟು ಜನಾಂಗವಾದ ಹಾಲಕ್ಕಿ ಒಕ್ಕಲು ಹೆಣ್ಣುಮಕ್ಕಳ ಅಲಂಕಾರ ಮಾಡಿಕೊಂಡು ಸಂಭ್ರಮಿಸಿದ್ದರು.ಆ ಚಲನಚಿತ್ರದ ಪಾರ್ವತಿಯ ಪಾತ್ರ ಅಪರ್ಣ ಅವರಿಗೆ ಯಾರೂ ಊಹಿಸಲಾಗದ ಕೀರ್ತಿಯನ್ನು ತಂದು ಕೊಟ್ಟಿತು.ಆದರೆ ಮುಂದೆ ಸಿನೇಮಾ ರಂಗದಲ್ಲಿ ಅವರ ಪ್ರತಿಭೆಗೆ ತಕ್ಕ ಪಾತ್ರಗಳು ದೊರಕಲಿಲ್ಲ.ನಂತರದ ದಿನಗಳಲ್ಲಿ ಅವರು ಕಾರ್ಯಕ್ರಮ ನಿರೂಪಣೆಗೆ ತೊಡಗಿ ತಮ್ಮ ಛಾಪು ಮೂಡಿಸಿದರು.ಆಗಾಗ ಕಿರುತೆರೆಯ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು.ಮುಕ್ತ ಧಾರಾವಾಹಿಯ ಶೀಲಾ ಪ್ರಸಾದ್,ಮಜಾ ಟಾಕೀಸ್‌ನ ಪಾತ್ರಗಳು ಅವರಿಗೆ ಹೆಚ್ಚು ಮನ್ನಣೆಯನ್ನು ದೊರಕಿಸಿಕೊಟ್ಟವು.ಕವಿ ನಾಗರಾಜ್ ವಸ್ತಾರೆಯವರನ್ನು ಮದುವೆಯಾಗಿ ಸಂತೃಪ್ತಿಯ ಬದುಕನ್ನು ಸಾಗಿಸುತ್ತಿದ್ದ ಅವರ ದೇಹದಲ್ಲಿ ಕ್ಯಾನ್ಸರ್ ಯಾವ ಮಾಯದಲ್ಲಿ ಪ್ರವೇಶಿಸಿತೋ! ಯಾರಿಗೂ ಸುಳಿವು ಕೊಡದೇ ದಂಪತಿಗಳು ನಡೆಸಿದ ಹೋರಾಟ ಕೊನೆಗೂ ಫಲಕಾರಿಯಾಗದೇ ಹೋಯಿತು! ಅಪ್ಪಟ ಕನ್ನಡದ ಧ್ವನಿಯೊಂದು ಉಡುಗಿ ಹೋಯಿತು.ಅವರ ನಿಧನದಿಂದ ಕನ್ನಡ ಸಾಂಸ್ಕೃತಿಕ ಲೋಕ ಅದ್ಭುತ ನಿರೂಪಕಿಯನ್ನು ಕಳೆದುಕೊಂಡಿದೆ.ಅವರಂತಹ ನಿರೂಪಕಿ ಹಿಂದೆ ಇರಲಿಲ್ಲ,ಮುಂದೆ ಬರಲಾರರು.ಅವರೊಬ್ಬರೇ ಅಪ್ಪಟ ಕನ್ನಡದ ನಿರೂಪಕಿಯಾಗಿ ಸಾವಿರದ ಕನ್ನಡದ ಮನಸ್ಸುಗಳಲ್ಲಿ ಶಾಶ್ವತರಾಗಿರುತ್ತಾರೆ.
-ಶ್ರೀಧರ ಬಿ.ನಾಯಕ,ಬೇಲೇಕೇರಿ
ಶನಿವಾರ, ಫೆಬ್ರವರಿ 24, 2024
ಜನಪರ ಹೋರಾಟಗಳಲ್ಲಿ ವಿಷ್ಣು ನಾಯ್ಕರು.
ಸಾಹಿತಿಗಳ ಬಗ್ಗೆ ಜನಸಾಮಾನ್ಯರಲ್ಲಿ ಒಂದು ರೀತಿಯ ಗೌರವ ಭಾವನೆಯಿದೆ. ಸಾಹಿತಿಯಾದವರ ಮುಖ್ಯ ಕಾರ್ಯವೆಂದರೆ ಜನಪರವಾಗಿ ಯೋಚಿಸುತ್ತ ತನ್ನ ಸುತ್ತ ಮುತ್ತಲಿನ ಸಮಾಜದಲ್ಲಿ ಹೊಸ ಎಚ್ಚರ ಹುಟ್ಟಿಸುವುದು. ನಾವೆಲ್ಲರೂ ಸಮಾಜದ ಒಂದು ಭಾಗ, ಈ ಕಾರಣದಿಂದ ತಾನು ಬೇರೂರಿ ಬದುಕುವ ಸಮಾಜದ ವಾಸ್ತವ ಚಿತ್ರವನ್ನು ಸಾಹಿತ್ಯದ ಮೂಲಕ ಜನಸಾಮಾನ್ಯರಿಗೆ ಕಟ್ಟಿಕೊಡುವುದು, ಸಮಾಜದ ಓರೆ-ಕೊರೆಗಳನ್ನು ಅನಾವರಣಗೊಳಿಸುತ್ತ ಓದುಗರ ಸಾಮಾಜಿಕ ಅರಿವನ್ನು ವಿಸ್ತರಿಸುವುದು ತನ್ನ ಮೊದಲ ಕರ್ತವ್ಯ ಎಂಬ ನಂಬಿಕೆ ಬರಹಗಾರನಿಂದ ಹೊಮ್ಮಿದಾಗ ಮಾತ್ರ ಬದಲಾವಣೆಯನ್ನು ನಿರೀಕ್ಷಿಸಬಹುದು. ವ್ಯಕ್ತಿನಿಷ್ಠತೆಯ ಬದಲು, ವಸ್ತುನಿಷ್ಠ ನಿಲುವಿನಲ್ಲಿ ನಿಂತು ತನ್ನ ಸುತ್ತಣ ಸಾಮಾಜಿಕ ಪರಿಸರದಲ್ಲಿ ಇದ್ದುದನ್ನು ಇದ್ದ ಹಾಗೆ, ಯಾವ ಉತ್ಪ್ರೇಕ್ಷೆ,ಪೂರ್ವಾಗ್ರಹಗಳ ಸೋಂಕೂ ಇಲ್ಲದೆ ಚಿತ್ರಿಸುವುದು ಸಮಾಜಮುಖಿ ಬರಹಗಾರನಿಗೆ ಮಾತ್ರ ಸಾಧ್ಯ. ಸಾಹಿತಿಗಳು ಸಾಮಾಜಿಕ ಬದ್ಧತೆಯನ್ನು ಹೊಂದಿದವರಾಗಿದ್ದು, ವಸ್ತುನಿಷ್ಠವಾಗಿ ಚಿಂತಿಸುವ ಬರೆಯುವ ಹಾಗೂ ಜನಸಾಮಾನ್ಯರ ಬವಣೆಗಳ ಬಗ್ಗೆ ಬೆಳಕು ಚೆಲ್ಲುವ ದಾರ್ಶನಿಕರು ಎಂಬ ಗ್ರಹಿಕೆ ಓದುಗರಲ್ಲಿದೆ.ಒಬ್ಬ ಸೃಜನಶೀಲ ಬರಹಗಾರನ ಬರಹ ವೈಯಕ್ತಿಕವಾಗಿ ಹಾಗೂ ಸಾರ್ವಜನಿಕವಾಗಿ ಎರಡು ಸ್ತರಗಳಲ್ಲಿ ತೆರೆದುಕೊಳ್ಳುತ್ತದೆ. ತನ್ನ ಆತ್ಮ ಸಂತೋಷಕ್ಕೆ ಬರೆದುಕೊಂಡ ವೈಯಕ್ತಿಕ ಬರಹದ ಬಗ್ಗೆ ಸಾಹಿತಿಗೆ ಯಾವ ವಿಧವಾದ ಕಟ್ಟುಪಾಡುಗಳಿರುವುದಿಲ್ಲ. ಆದರೆ ಸಾರ್ವಜನಿಕ ಸಮಸ್ಯೆಗಳನ್ನು ತನ್ನ ಬರಹಕ್ಕೆ ವಸ್ತುವಿಷಯವನ್ನಾಗಿ ಆಯ್ಕೆ ಮಾಡಿಕೊಂಡು ರಚಿಸಿದ ಕಥೆ, ಕವಿತೆ, ಲೇಖನ ಯಾವುದೇ ಆಗಲಿ ಅದು ಚರ್ಚಿತ ವಿಷಯವಾಗಿ ಅನಾವರಣಗೊಳ್ಳುತ್ತದೆ. ಆದ್ದರಿಂದ ಸಾಹಿತಿಗಳು ಬರವಣಿಗೆಗೆ ಸೀಮಿತವಾಗಿ ನಿಷ್ಕ್ರೀಯರಾದರೆ ಸಾಲದು,ಜನ ಸಮುದಾಯದ ನೋವು ಕಷ್ಟಗಳಿಗೆ ಸ್ಪಂದಿಸುತ್ತ ಸಕ್ರಿಯರಾಗಿದ್ದರೆ ಅವರ ಬರವಣಿಗೆಗೆ ಬೆಲೆ ಬರುತ್ತದೆ.ಅಂತಹ ಮೌಲ್ಯಯುತ ಬದುಕನ್ನು ಬದುಕಿದವರು ವಿಷ್ಣು ನಾಯ್ಕರು.
ಜಗದಗಲ ತುಂಬಿರುವ
ನೋವಿನಲ್ಲಿ ಪೆನ್ನದ್ದು
ಅರಳುವವು ಅಕ್ಷರವು ಕವನವಾಗಿ
ನೋವು ಸಾಯುವವರೆಗೆ
ಕವನ ಸಾಯುವುದಿಲ್ಲ
ನಿಲ್ಲುವುದು ಸಾಂತ್ವನದ ಸಿಲುಬೆಯಾಗಿ.
ವಿಷ್ಣು ನಾಯ್ಕರು ಒಂದು ವ್ಯಕ್ತಿಯಲ್ಲ,ಶಕ್ತಿ.ಒಂದು ಬೃಹತ್ ಸಂಸ್ಥೆ ಮಾಡುವ ಕಾರ್ಯವನ್ನು ಏಕಾಂಗಿಯಾಗಿ ಸಾಧಿಸಿದವರು.ತನ್ನ ಊರು, ಪರಿಸರ, ಅಂಕೋಲೆ, ಅಂಬಾರಕೊಡ್ಲು, ಉತ್ತರ ಕನ್ನಡ ಜಿಲ್ಲೆ, ಅಲ್ಲಿನ ಜನ ಸಮುದಾಯ ಇವುಗಳನ್ನೆಲ್ಲ ಪ್ರೀತಿ ಮತ್ತು ಕಾಳಜಿಯಿಂದ ನೋಡಿದವರು. ಇಲ್ಲಿನ ಜನರ ಒಡಲಾಳದ ನೋವನ್ನು, ತೀವ್ರ ಬಡತನವನ್ನು, ಬದುಕುವ ಛಲವನ್ನು, ಕಷ್ಟ-ಸುಖ- ಸಮೃದ್ಧಿಗಳನ್ನು ಕಣ್ಣಾರೆ ಕಂಡವರು ಜನಸಮುದಾಯದ ಜೊತೆಗೆ ಒಂದಾಗಿ ಬೆರೆತು ಮನುಷ್ಯನ ಬದುಕು ಹಸನಾಗಲು ನಿರಂತರವಾಗಿ ಚಿಂತಿಸಿದವರು.ಅವರು ಕೇವಲ ಬರೆದವರಲ್ಲ, ಬರೆದಂತೆ ಬದುಕಿದವರು.ಬದುಕು ಮತ್ತು ಬರಹದಲ್ಲಿ ಅಭಿನ್ನತೆಯನ್ನು ರೂಢಿಸಿಕೊಂಡವರು.ಅವರಲ್ಲಿದ್ದ ಶ್ರದ್ಧೆ,ನಿಷ್ಠೆ,ಕಾರ್ಯತತ್ಪರತೆ,ಸಮಯಪ್ರಜ್ಞೆ,ಶಿಸ್ತು ಮುಂತಾದ ಗುಣಗಳು ಅವರನ್ನು ವಿಶಿಷ್ಟರಲ್ಲಿ ವಿಶಿಷ್ಟರನ್ನಾಗಿ ಪರಿಗಣಿಸುವಂತೆ ಮಾಡಿದ್ದವು.
ಹೆಣ್ಣಿಗಾಗಿ ಸತ್ತವರು ಕೋಟಿ
ಮಣ್ಣಿಗಾಗಿ ಸತ್ತವರು ಕೋಟಿ
ಹೊನ್ನಿಗಾಗಿ ಸತ್ತವರು ಕೋಟಿ
ಗುಹೇಶ್ವರ ನಿನಗಾಗಿ ಸತ್ತವರನಾರನೂ ಕಾಣೆ
ಎಂದು ಅಲ್ಲಮ ಪ್ರಭು ಹೇಳುತ್ತಾರೆ.ಇಂದು ಸಮಾಜದಲ್ಲಿ ಅನೇಕರು ಸಮಾಜದ ಲೋಪ ದೋಷಗಳ ಮಾತನಾಡುತ್ತ ಕೇವಲ ತಮಗಾಗಿ ಮಾತ್ರ ಬದುಕುತ್ತಾರೆ.ಆದರೆ ಸಾಮೂದಾಹಿಕ ಸಾಮಾಜಿಕ ಹಿತವನ್ನು ಬಯಸಿ ಸಮಾಜಕ್ಕಾಗಿ ಬದುಕುವವರು ವಿರಳ.ಅಂತಹ ವಿರಳರಲ್ಲಿ ವಿಷ್ಣು ನಾಯ್ಕರು ಒಬ್ಬರು.ಒಂದರ್ಥದಲ್ಲಿ ವಿಷ್ಣು ನಾಯ್ಕರು ಹುಟ್ಟು ಹೋರಾಟಗಾರರು.ಬಡತನವನ್ನೇ ಹಾಸಿ ಹೊದ್ದುಕೊಂಡ ನಿರಕ್ಷರಿ ಅಪ್ಪ ಅವ್ವನ ಆರು ಮಕ್ಕಳಲ್ಲಿ ಒಬ್ಬನಾಗಿ,ಹಸಿವು,ಬಡತನ,ಮೂಢನಂಬಿಕೆಗಳ ವಿರುದ್ಧ ಸೆಣೆಸುತ್ತ,
ಬಾಲ್ಯದಿಂದಲೂ ಹೋರಾಟವನ್ನೇ ಮೈಗೂಡಿಸಿಕೊಂಡು ಬೆಳೆದು ಬಂದವರು.ಮುಂದೆ ಈ ಹೋರಾಟದ ಮನೋಭಾವವೇ ಅವರ ಸಾರ್ವಜನಿಕ ಬದುಕಿನ ಭಾಗವಾಗಿ ಬೆರೆತು ಹೋಯಿತು.ಅದನ್ನು ಜನಪರವಾಗಿ ಬಳಸಿಕೊಂಡು ಬೆಳೆಸಿಕೊಂಡು ಜನರು ನೋವಿಗೆ ಮಿಡಿಯುವ ಪ್ರಾಣಮಿತ್ರನಂತಾದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನಕರ ದೇಸಾಯಿ ಅವರ ನೇತೃತ್ವದಲ್ಲಿ 'ಉಳುವವನಿಗೇ ನೆಲೆದೊಡೆತನ' ಎಂಬ ಬೇಡಿಕೆ ಮುಂದಿಟ್ಟು ನಡೆದ ರೈತ ಆಂದೋಲನದಲ್ಲಿ ಬಡ ರೈತನ ಮಗನಾದ ವಿಷ್ಣು ನಾಯ್ಕ ಅವರು ತಮ್ಮ ೧೩ನೇ ವಯಸ್ಸಿನಲ್ಲೇ ವಿದ್ಯಾರ್ಥಿ ಹೋರಾಟಗಾರನಾಗಿ - ಪ್ರವೇಶಿಸಬೇಕಾದ ಸಂದರ್ಭ ಎದುರಾಯಿತು. ಆ ಹದಿಹರೆಯದಲ್ಲೇ ದೇಸಾಯಿಯವರ ರೈತ ಚಳುವಳಿಯ ನಿಷ್ಠಾವಂತ ಕಾರ್ಯಕರ್ತನಾಗಿ ಸೇರಿದ ಇವರು ೧೯೫೭ ರಿಂದ ೧೯೭೧ನೇ ಇಸವಿಯವರೆಗೆ ಹೋರಾಟದ ಕೊನೆಯ ದಿನಗಳವರೆಗ ಛಲ ಬಿಡದೆ ತಮ್ಮನ್ನು ತೊಡಗಿಸಿಕೊಂಡರು.ಅವರು ಕೆಂಪುಬಾವುಟ ಹಿಡಿದ ಕಾಲದಲ್ಲಿ 'ಸಮಾಜವಾದ ಅಂದರೇನು' ಎಂಬುದೇ ಅವರಿಗೆ ತಿಳಿದಿರಲಿಲ್ಲ. ಅವರು ಈ ರೈತಜನಾಂದೋಲನದಲ್ಲಿ ತೊಡಗಿಸಿಕೊಂಡದ್ದಕ್ಕೆ ಕಾರಣಗಳಿವೆ. ಅವರು ಹುಟ್ಟುವುದಕ್ಕಿಂತ ಮೊದಲೇ, ಅವರು ಹುಟ್ಟಿದ ಹಳ್ಳಿಯಾದ ಅಂಬಾರಕೊಡ್ಲದ ಪರಿಸರದಲ್ಲಿಯೇ ಆ ಹೋರಾಟದ ಗಾಳಿ ಇತ್ತು. ಗ್ರಾಮೀಣ ಭಾಗದಲ್ಲಿ ಈ ಹೋರಾಟವನ್ನು ಕುರಿತ ಮೊದಲ ಬೃಹತ್ ಸಭೆ ನಡೆದದ್ದೇ ಅವರ ಊರು ಅಂಬಾರಕೊಡ್ಲದಲ್ಲಿ-ಅವರು ಹುಟ್ಟುವುದಕ್ಕಿಂತ ನಾಲ್ಕುವರ್ಷ ಮೊದಲು,-೧೯೪೦ರಲ್ಲಿ. ಭೂಮಾಲಿಕವರ್ಗದವರ ಪಿತೂರಿ ಕಾರಣವಾಗಿ, ದಿನಕರ ದೇಸಾಯಿಯವರಿಗೆ 'ಹಾವಳಿ ಮಂಜ' ಎಂದು ಕುಖ್ಯಾತಿಯ ನಾಮಕರಣ ಮಾಡಿ, ವರ್ಗಕಲಹ ಹುಟ್ಟುಹಾಕುತ್ತಿರುವವರೆಂಬ ಆರೋಪ ಮಾಡಿ, ಅವರನ್ನು ಗಡಿಪಾರು ಶಿಕ್ಷೆಗೆ ಆಗಿನ ಬ್ರಿಟಿಷ್ ಸರ್ಕಾರ ಗುರಿಪಡಿಸಿದ್ದು ಅದೇ ವರ್ಷ. ಈ ರೈತ ಹೋರಾಟವೇ ಕಾವು ಕೊಟ್ಟು ವಿಷ್ಣುನಾಯ್ಕರ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಪ್ರಜ್ಞೆಯನ್ನು ಹೊರೆಸಿ, ಮೊಳಕೆಯೊಡೆಸಿ ಬೆಳೆಸಿದ್ದು. ಅವರು ಸಮಾಜವಾದವನ್ನೋ ಸಮತಾವಾದವನ್ನೋ ಅಧ್ಯಯನ ಮಾಡಿ ಪಡೆದ ತಿಳಿವು ಮತ್ತು ಪ್ರೇರಣೆಯಿಂದ ಈ ಹೋರಾಟಕ್ಕೆ ಪ್ರವೇಶಿಸಿದವರಲ್ಲ. ಈ ರೈತ ಹೋರಾಟದೊಂದಿಗೆ ಕೂಡಿಕೊಳ್ಳುವುದು ಅವರಿಗೆ ಒಂದು ತಾತ್ಕಾಲಿಕ ಉಮೇದಿಯ
ವೇಷವೋ ಆವೇಶವೋ ಆಗಿರಲಿಲ್ಲ. ಈ ಹೋರಾಟ ಅವರ ಒಡಲ ಉರಿಹಸಿವೆಗೆ ದನಿಕೊಡುವ ಒಂದು ಸಹಜ ಬೆಳವಣಿಗೆಯಾಗಿತ್ತು. ಮನೆಯಲ್ಲಿ ಎರಡು ಹೊತ್ತಿನ ತುತ್ತನ್ನಕ್ಕೂ ಗತಿಯಿಲ್ಲದ ಕುಟುಂಬ ಅವರದಾಗಿತ್ತು. ಇರುವ 25 ಗುಂಟೆ ಗೇಣಿ ಜಮೀನಿನಲ್ಲಿ ವರ್ಷವಿಡೀ ಕಷ್ಟಪಟ್ಟು ದುಡಿದ ಪ್ರಯುಕ್ತ ಬೆಳೆದು ನಿಂತ ಪೈರಿನಲ್ಲಿ ಸರಿ ಅರ್ಧಭಾಗ ಒಡೆಯನ ಮನೆಗೆ-ಅಳೆಯಬೇಕಾಗುತ್ತಿತ್ತು. ನೈಸರ್ಗಿಕ ಕ್ಷಾಮವೋ, ಅತಿವೃಷ್ಟಿಯೋ ಉಂಟಾಗಿ ಬೆಳೆ ನಾಶವಾದರೂ 'ಗೇಣಿ' ಎಂಬ ಹೆಸರಿನಲ್ಲಿ ಭೂಮಾಲಿಕರ ಮನೆಗೆ ಅಳೆಯಬೇಕಾದುದನ್ನು ಅಳೆಯದಿದ್ದರೆ ಅದನ್ನು ಭೂ ಮಾಲೀಕ 'ನಗದುಸಾಲ' ಎಂದು ಪರಿಗಣಿಸಿ ಛಾಪಾ ಕಾಗದದಲ್ಲಿ ಬರೆದು ಸಹಿ ಪಡೆಯುತ್ತಿದ್ದರು. ಹೀಗೆ ಬರೆಯಿಸಿಕೊಂಡ ಹಣಕ್ಕೆ ಬಡ್ಡಿಯಾಕರಣೆಯಾಗುತ್ತಿತ್ತು. ಅಸಲು ಬಡ್ಡಿ ಬೆಳೆಯುತ್ತಿದ್ದಂತೆ ಒಂದುದಿನ ಮನೆಜಪ್ತಿ ವಾರಂಟನ್ನು ಎದುರಿಸಬೇಕಾಗುತ್ತಿತ್ತು. ಒಂದುಕಡೆ ನಿರುಮ್ಮಳ ಊಟಕ್ಕಿಲ್ಲದ ನೋವು, ಇನ್ನೊಂದೆಡೆ ಯಾವಾಗ ಮನೆ ಜಪ್ತಿಗೆ ಬರುವುದೋ ಎಂಬ ಆತಂಕ. ಇಂಥ ನಿರಂತರ ನೋವು- ನಷ್ಟಗಳಲ್ಲಿ ನರಳಿದ ಬಹಳಷ್ಟು ಕುಟುಂಬಗಳಲ್ಲಿ ಅವರ ಕುಟುಂಬವೂ ಒಂದಾಗಿತ್ತು.ಇಂತಹ ಸಂದರ್ಭದಲ್ಲಿ ದುಡಿಯುವ ರೈತನಿಗೆ ಅವನ ಜಮೀನಿನ ಮಾಲೀಕತ್ವದ ಹಕ್ಕು ಬರಬೇಕೆಂದು ಚಳವಳಿ ಆರಂಭವಾದಾಗ ಯಾವ ಜಾಗೃತ ಮನಸ್ಸು ಸುಮ್ಮನೆ ಇರಲು ಸಾಧ್ಯ?... ಮುಲ್ಕಿ ಮುಗಿಸಿ ಹೈಸ್ಕೂಲು ಸೇರುತ್ತಿರುವಾಗಲೇ ಕೆಂಪುಬಾವುಟ ಕೈಗೆ ಬಂದಿತ್ತು. ಶ್ರಮಜೀವಿಗಳ ಒಕ್ಕಟ್ಟು ಮತ್ತು ಹೋರಾಟ ಅವರ ಕಣ್ಮುಂದೆ ಇರುವ ನೆಮ್ಮದಿಯ ಬದುಕಿನ ದಾರಿಗಳಾಗಿದ್ದವು. ಹೈಸ್ಕೂಲು ಮುಗಿಸುವುದರೊಳಗಾಗಿ ಅವರ ಹೆಸರು ರೈತಸಂಘಟನೆಯಲ್ಲಿ-ದಿನಕರ ದೇಸಾಯಿ, ವಿಜಯಾ ನಾಡಕರ್ಣಿ ದಯಾನಂದ ನಾಡಕರ್ಣಿ, ಗಿರಿಪಿಕಳೆ, ಶಂಕರ ಕೇಣಿ, ಅಮ್ಮೆಂಬಳ ಆನಂದ, ಗಂಗಮ್ಮ ಅವರ ಗಮನ ಸೆಳೆಯುವಂತಾಯಿತು.ಅದರಿಂದಾಗಿ
ಹತ್ತು-ಹಲವು ರೈತಪರವಾದ ಸಭೆ-ಸಮಾರಂಭಗಳಲ್ಲಿ ಅವರು ನಿರಂತರ 13 ವರ್ಷಗಳವರೆಗೆ ತೊಡಗಿಸಿಕೊಂಡು ಸಮಚಿತ್ತದಿಂದ ಎಲ್ಲ ಕಠಿಣ ಪ್ರಸಂಗಗಳನ್ನು ಎದುರಿಸಿದ್ದರು, ಚುನಾವಣೆಗಳಲ್ಲಿ ವಹಿಸಲಾಗುತ್ತಿದ್ದ ಹೊಣೆಗಾರಿಕೆಗಳನ್ನೆಲ್ಲ ನಿಭಾಯಿಸಿದ್ದರು, 13 ವರ್ಷಗಳ ಆ ಸುದೀರ್ಘ ಹೋರಾಟ ಅವರ ಪಾಲಿನ ಸಾರ್ಥಕ ಬದುಕಿನ ಸ್ಮರಣಾರ್ಹ ದಿನಗಳಾಗಿವೆ. ಇಂತಹ ಬದ್ಧತೆಯ ಉಳ್ಳ ಹೋರಾಟಗಾರರು ಶ್ರಮದ ಫಲವಾಗಿಯೇ ಸರ್ಕಾರ ಜಮೀನು ರಹಿತ ಬಡ ರೈತರಿಗೆ ಸಾಗುವಳಿ ಯೋಗ್ಯ ಒಂದು ಲಕ್ಷ ಎಕರೆ ಅರಣ್ಯ ಜಮೀನನ್ನು ಬಿಟ್ಟು ಕೊಡುವ ವಾಗ್ದಾನ ಮಾಡಿತು.ಇದು ನಿಜವಾಗಿ ಜನಪರ ಹೋರಾಟದ ವಿಜಯವಾಗಿತ್ತು.
ಇದೇ ಸಮಯದಲ್ಲಿ ಸಮಾಜವಾದಿ ನಿಲುವಿನಿಂದ ಪ್ರಭಾವಿತರಾಗಿ, ತಮ್ಮ ಸ್ವಂತ ಊರಿನಲ್ಲಿ ಸಮಾಜವಾದಿ ಯುವಕ ಸಂಘವನ್ನು ಹುಟ್ಟು ಹಾಕಿ ಜನಪರವಾದ ಕಾರ್ಯಕ್ಕೆ,ಜನಜಾಗ್ರತಿ ಅಭಿಯಾನಕ್ಕೆ ಅಲ್ಲಿನ ಯುವಕರನ್ನು ಸಂಘಟಿಸಿದರು. ಅದರ ಮೂಲಕವೇ ಊರಿಗೆ ಅಗತ್ಯವಿರುವ ರಸ್ತೆ, ನೀರು, ದಾರಿದೀಪ, ಶಾಲೆ ಮುಂತಾದ ಅಭಿವೃದ್ಧಿಗಾಗಿ ತೊಡಗಿಸಿಕೊಂಡರು. ನಾಲ್ಕಡಿ ಅಗಲಳತೆಯ ಅಂಬಾರಕೊಡ್ಡದ ರಸ್ತೆಗಳೆಲ್ಲ ಅಗಲೀಕರಣಗೊಂಡು ವಾಹನ ಸಂಚಾರಕ್ಕೆ ಅನುಕೂಲವಾದುದು ಆಗಲೇ. ಶ್ರಮದಾನ, ಮೆರವಣಿಗೆ, ಭಾಷಣ ಮುಂತಾದ ಕಾರ್ಯಕ್ರಮಗಳಿಗೂ ನೇತೃತ್ವ ನೀಡಿದರು. ಜೊತೆಗೆ ಊರ ಯುವಜನರ ಸಾಂಸ್ಕೃತಿಕ ಚಟುವಟಿಕೆಗಳಿಗೂ ಪ್ರೋತ್ಸಾಹಿಸಿದರು.ಈ ಯುವಕ ಸಂಘದಿಂದ ಪ್ರೇರಿತರಾಗಿ ಸುತ್ತಲಿನ ಹಳ್ಳಿಗಳಲ್ಲಿಯೂ ಯುವಕ ಸಂಘಗಳು ಹುಟ್ಟಿಕೊಂಡು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು ವಿಷ್ಣು ನಾಯ್ಕರ ಜನಪರ ಕಾಳಜಿಯ ಯಶಸ್ಸು ಎಂದು ಹೇಳಬಹುದು.
ಸಮಾಜದ ಏಕತೆ ಮತ್ತು ಸಾಮರಸ್ಯಕ್ಕೆ ವಿಷ್ಣು ನಾಯ್ಕರು ನೀಡಿದ ಕೊಡುಗೆ ಗಮನಾರ್ಹವಾದದ್ದು.
ದೇಶದಲ್ಲಿ ಕೋಮುಸೌಹಾರ್ದ ಹದಗೆಡುತ್ತಿದ್ದ ಸಮಯದಲ್ಲಿ ವಿಷ್ಣು ನಾಯ್ಕರು ಅಂಕೋಲೆಯ ಸಮಾನ ಮನಸ್ಕ ಸ್ನೇಹಿತರೊಂದಿಗೆ ಸೇರಿ, ಸರಕಾರಿ ಅಧಿಕಾರಿಗಳ ಸಹಕಾರವನ್ನೂ ಪಡೆದು ಅಂಕೋಲೆಯಲ್ಲಿ ಬೀದಿ ಕವಿಗೋಷ್ಠಿ ಹಾಗೂ ಒಂದು ಹನಿ ರಕ್ತ ಎಂಬ ಬೀದಿ ನಾಟಕ ಮುಂತಾದ ಚಟುವಟಿಕೆಗಳನ್ನು ನಡೆಸಿದರು. ವಿಚಾರವಾದಿಗಳ ವೇದಿಕೆಗಳನ್ನು ಬಳಸಿಕೊಂಡು ಭಾಷಣಗಳ ಮೂಲಕ, ಆಗಲೇ ಘಟಿಸಿ ಹೋದ ಅಹಿತಕರ ಘಟನೆಗೆ ಕಾರಣರಾದವರ ನಿಲುವನ್ನು ತರಾಟೆಗೆ ತೆಗೆದುಕೊಂಡರು. ಇದು ಅವರ ಪ್ರಗತಿಪರ ಜನಪರ ನಿಲುವಿನ ದೃಢತೆಯಾಗಿತ್ತು.ಇಂತಹುದೇ ಇನ್ನೊಂದು ಪ್ರಸಂಗದಲ್ಲಿ
ಇಬ್ಬರು ವ್ಯಕ್ತಿಗಳ ನಡುವಿನ ವೈಯಕ್ತಿಕ ಜಗಳ ಕೆಲವರ ಪ್ರತಿಷ್ಠೆಯಿಂದಾಗಿ ಎರಡು ಸಮುದಾಯಗಳ ಮಧ್ಯೆ ವೈಷಮ್ಯವನ್ನು ಹುಟ್ಟುಹಾಕಿ ಅಂಕೋಲೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಂದರ್ಭದಲ್ಲಿ ಎದುರಾಗಿತ್ತು.ಇದು ಇಡೀ ಅಂಕೋಲೆಯ ಸಾಮರಸ್ಯವನ್ನು ಶಾಶ್ವತವಾಗಿ ಹದಗೆಡಿಸುವ ಆತಂಕಕಾರಿ ಬೆಳವಣಿಗೆಯಾಗಿತ್ತು. ಇಂತಹ ಬೆಳವಣಿಗೆ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಅರಿತ ವಿಷ್ಣು ನಾಯ್ಕರು ಎರಡೂ ಸಮುದಾಯದ ಹಿರಿಯರನ್ನು ಭೇಟಿಮಾಡಿ ಸಮಾಜದಲ್ಲಿ ಸಾಮರಸ್ಯವನ್ನು ಉಂಟು ಮಾಡಲು ಶ್ರಮಿಸಿದರು.ಆ ವೇಳೆಗೆ ಕೆಲವರು ಅವರ ಸೈಕಲ್ಲನ್ನು ತಡೆದು ಬೆದರಿಸಿದಾಗಲೂ ಅದಕ್ಕೆಲ್ಲ ಸೊಪ್ಪು ಹಾಕದೇ ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದರು.ಆದರೆ ಇದನ್ನೊಂದು ಹೋರಾಟವೆಂದು ಅವರೆಂದೂ ಬಿಂಬಿಸಿ ಕೊಂಡು ಎಲ್ಲಿಯೂ ದಾಖಲಿಸಿಲ್ಲ. ಇತಿಹಾಸದಲ್ಲಿ ಇಂತಹ ಕಹಿ ಘಟನೆಗಳು ಸ್ಥಾನ ಪಡೆದು ಮುಂದಿನ ತಲೆಮಾರಿಗೆ ತಪ್ಪು ಸಂದೇಶ ಹೋಗಬಾರದೆಂಬ ಸದುದ್ದೇಶ ಇದರ ಹಿಂದಿರುವಂತಿದೆ.
ಅಂಕೋಲಾ ತಾಲೂಕಿನಲ್ಲಿ ೧೯೯೧ರಲ್ಲಿ ಸ್ಥಳೀಯ ಸಾಮಾಜಿಕ ಸೇವಾ ಸಂಸ್ಥೆಯಾದ ಕ್ರಿಸ್ತಮಿತ್ರ ಆಶ್ರಮದ ಸಹಯೋಗದಲ್ಲಿ ಪ್ರಾರಂಭಗೊಂಡ ಮದ್ಯಪಾನ ವಿರೋಧಿ ಅಂದೋಲನದಲ್ಲಿ ವಿಷ್ಣು ನಾಯ್ಕ ಅವರು ನಿರ್ವಹಿಸಿದ ಪಾತ್ರ ಬಹಳ ಮಹತ್ವದ್ದು. ಮದ್ಯಪಾನ ದುಶ್ಚಟಗಳಿಂದ ದೂರವಿರುವಂತೆ ಜನರಿಗೆ ತಿಳಿಹೇಳಲು ವಿಷ್ಣು ನಾಯ್ಕರು ಆ ಸಂದರ್ಭದಲ್ಲಿ ಬಳಸಿಕೊಂಡದ್ದು ಬೀದಿನಾಟಕಗಳ ಮಾಧ್ಯಮ. ಆ ಒಂದು ದಶಕದಲ್ಲಿ ಜಿಲ್ಲೆಯಾದ್ಯಂತ ಮದ್ಯಪಾನ ವಿರೋಧಿ ಅಂದೋಲನ ವ್ಯಾಪಿಸಿದ್ದರ ಹಿಂದೆ ವಿಷ್ಣು ನಾಯ್ಕ ಅವರು ಹುಟ್ಟು ಹಾಕಿದ 'ರಾಘವೇಂದ್ರ ರಂಗಸಂಗ'ದ ಪಾತ್ರ ಬಹಳ ಹಿರಿದು. ಮದ್ಯಪಾನದಿಂದ ಆಗುವ ವಿವಿಧ ಅನಾಹುತಗಳನ್ನು ಬಿಂಬಿಸುವ ಸರಾಯಿ ಸೂರಪ್ಪ ಎಂಬ ಬೀದಿನಾಟಕವನ್ನು ಸ್ವತಃ ಬರೆದು ನಿರ್ದೇಶಿಸಿ, ಜಿಲ್ಲೆಯ ಹಲವಾರು ಹಳ್ಳಿಗಳಿಗೆ ಹೋಗಿ ಅಭಿನಯಿಸಿದ ರೀತಿ ನಿಜಕ್ಕೂ ಪರಿಣಾಮಕಾರಿಯಾಗಿತ್ತು ಅದನ್ನು ನೋಡಿ ಮನವರಿಕೆ ಮಾಡಿಕೊಂಡ ಹಲವರು ಕುಡಿತದ ಚಟದಿಂದ ಹೊರಬಂದ ಉದಾಹರಣೆಗಳೂ ಇವೆ.
ಅಂದು ವಯಸ್ಕರ ಶಿಕ್ಷಣ ಸಚಿವರಾಗಿದ್ದ ಶ್ರೀ ಪ್ರಭಾಕರ ರಾಣೆಯವರ ಒತ್ತಾಸೆಯ ಮೇರೆಗೆ ೯೦ರ ದಶಕದಲ್ಲಿ ರಾಜ್ಯಾದ್ಯಂತ ನಡೆದ ಸಂಪೂರ್ಣ ಸಾಕ್ಷರತಾ ಅಂದೋಲನದಲ್ಲಿ ವಿಷ್ಣು ನಾಯ್ಕ ಅವರು ತೊಡಗಿಸಿಕೊಂಡ ಪರಿ ಅವರ ಬದ್ಧತೆಯ ದ್ಯೋತಕವಾಗಿದೆ. ವಿಶೇಷವಾಗಿ ಸಾಕ್ಷರತಾ ಅಂದೋಲನದ ಪ್ರಾರಂಭದಲ್ಲಿ ವಾತಾವರಣ ನಿರ್ಮಾಣಕ್ಕಾಗಿರುವ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಕಲಾಜಾಥಾ ತಂಡಗಳ ಮುಂಚೂಣಿ ನಾಯಕರಾಗಿ ಜಿಲ್ಲೆಯ ಹನ್ನೊಂದು ತಾಲೂಕುಗಳಲ್ಲೂ ಮಿಂಚಿನ ಸಂಚಾರ ಕೈಕೊಂಡು ಅಕ್ಷರಾಭ್ಯಾಸದ ವಾತಾವರಣವನ್ನು ಗ್ರಾಮೀಣ ನಿರಕ್ಷರಿ ಜನತೆಯ ಮನಸ್ಸಿನಲ್ಲಿ ಮೂಡಿಸುವಲ್ಲಿ ಯಶಸ್ವಿಯಾದರು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಾಕ್ಷರತಾ ಕಾರ್ಯಕಾರಿಣಿ ಸಮಿತಿಯ ಕ್ರಿಯಾಶೀಲ ಸದಸ್ಯರಾಗಿ ತಮ್ಮ ಅಮೂಲ್ಯ ಸೇವೆ ಸಲ್ಲಿಸಿದರು.
ಶಿಕ್ಷಣದಲ್ಲಿ ಭಾಷಾ ಮಾಧ್ಯಮದ ಕುರಿತಾಗಿ ನಡೆದ ಗೋಕಾಕ ಚಳುವಳಿಯ ಸಂದರ್ಭದಲ್ಲಿ ವಿಷ್ಣು ನಾಯ್ಕರು ತಾಲೂಕಿನ ಕನ್ನಡಾಭಿಮಾನಿ ಬಳಗದೊಂದಿಗೆ ಸೇರಿ ೨೧ ದಿನಗಳ ಸರದಿ ಉಪವಾಸ ಸತ್ಯಾಗ್ರಹಕ್ಕೆ ಬಲ ತುಂಬಿದರು. ಕನ್ನಡಾಭಿಮಾನ ಮೂಡಿಸಲು ರಾಜ್ಯಮಟ್ಟದಲ್ಲಿ ವಿಶೇಷ ಉಪನ್ಯಾಸ, ಸಾರ್ವಜನಿಕ ಜಾಥಾ ಮುಂತಾದವುಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡರು. ಗೋಕಾಕ ಚಳುವಳಿ ಸಂದರ್ಭದಲ್ಲಿ ಧಾರವಾಡದ ರಾಜ್ಯ ಕನ್ನಡ ಕ್ರಿಯಾ ಸಮಿತಿಯ ಕರೆಗೆ ಓಗೊಟ್ಟು ಧರಣಿಯಲ್ಲಿ ಪಾಲ್ಗೊಂಡರು.
ಉತ್ತಮ ವಾಗ್ಮಿ,ಗಂಭೀರ ವ್ಯಕ್ತಿತ್ವ,ಪ್ರಖರ ವೈಚಾರಿಕ ನಿಲುವುಗಳನ್ನು ಹೊಂದಿದ್ದ ವಿಷ್ಣು ನಾಯ್ಕರು ತಮ್ಮ ಖಚಿತ ವಿಚಾರಗಳೊಂದಿಗೆ ಜಿಲ್ಲೆಯಲ್ಲಿ ನಡೆಯುವ ಯಾವುದೇ ತರದ ಸಾಮಾಜಿಕ ಹೋರಾಟವಿರಲಿ ಅಲ್ಲಿ ತಮ್ಮ ಸಹಭಾಗಿತ್ವವನ್ನು, ನೈತಿಕ ಬಲವನ್ನು ನೀಡುತ್ತಲೇ ಬಂದಿದ್ದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಆಗಾಗ ತಲೆ ಎತ್ತುವ ಪರಿಸರ ಸಂಬಂಧಿ ಹೋರಾಟಕ್ಕೆ ಭಾವಾವೇಶ ಬಿಟ್ಟು ವೈಜ್ಞಾನಿಕ ದೃಷ್ಟಿಕೋನದಿಂದ ಅಗತ್ಯಕ್ಕೆ ತಕ್ಕಷ್ಟು ನೈತಿಕ ಬೆಂಬಲ ನೀಡಿದವರಾಗಿದ್ದಾರೆ. ಜನಜೀವನಕ್ಕೆ ಮಾರಕವಾಗಬಹುದಾದಂತ ಅಣು ಉತ್ಪನ್ನ ಕೇಂದ್ರ, ಉಷ್ಣ ವಿದ್ಯುತ್ ಸ್ಥಾವರ, ನೌಕಾನೆಲೆ, ಗಣಿ ಉದ್ಯಮ ಮುಂತಾದವುಗಳನ್ನು ತಾತ್ವಿಕ ನೆಲೆಯಲ್ಲಿ ವಿರೋಧಿಸುವುದರ ಜೊತೆಗೆ ಪರಿಸರ ಸ್ನೇಹಿ ಅಭಿವೃದ್ಧಿಗಳಾದ ಪ್ರವಾಸೋದ್ಯಮ, ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗ ಮುಂತಾದ ಹಲವು ಜನೋಪಯೋಗಿ ಯೋಜನೆಗಳ ಅನುಷ್ಠಾನಕ್ಕಾಗಿ ಒತ್ತಾಯಿಸುತ್ತಲೇ ಬಂದಿದ್ದರು.ಇಂತಹ ಕ್ರಿಯಾಶೀಲ,ಸೃಜನಶೀಲ ವ್ಯಕ್ತಿತ್ವದ ವಿಷ್ಣು ನಾಯ್ಕರ ಅಗಲುವಿಕೆಯಿಂದ ಜಿಲ್ಲೆಯ ಜನಪರ ಚಳುವಳಿ ಬಡವಾಗಿದೆಯೆಂದು ಹೇಳಬಹುದು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)