ಮಂಗಳವಾರ, ಜೂನ್ 23, 2026
ಶ್ರೀ ಶಾಂತಾರಾಮ ನಾರಾಯಣ ನಾಯಕರವರು ಸ್ವಾತಂತ್ರ್ಯಯೋಧರ ಕುಟುಂಬದಲ್ಲಿ,೧೯೩೯ರ ಮಾರ್ಚ ೨೩ ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಹಿಚಕಡದಲ್ಲಿ ಜನಿಸಿದರು.ಪ್ರಾರಂಭಿಕ ಶಿಕ್ಷಣವನ್ನು ಪೂರೈಸಿದ ನಂತರ ಉನ್ನತ ಶಿಕ್ಷಣಕ್ಕಾಗಿ ಮೈಸೂರನ್ನು ಸೇರಿದರು.ಅಲ್ಲಿ ಅವರಿಗೆ ಅಂಕೋಲೆಯವರೇ ಆದ ಜಿ.ಎಚ್.ನಾಯಕ,ಕುವೆಂಪು ಅವರ ಮಗ ಪೂರ್ಣಚಂದ್ರ ತೇಜಸ್ವಿ,ರಾಮದಾಸ್,ಲಂಕೇಶ್ ಮುಂತಾದವರ ಸ್ನೇಹಸಾಂಗತ್ಯ ದೊರಕಿತು.ಅದು ಅವರಲ್ಲಿ ವೈಚಾರಿಕತೆ,ಸಂವೇದನಾಶೀಲತೆಯನ್ನು ಬೆಳೆಸುವಲ್ಲಿ ಸಹಕಾರಿಯಾಯಿತು.ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡದ ಶ್ರೇಷ್ಠ ಗುರುಗಳಾದ ಡಿ.ಎಲ್.ನರಸಿಂಹಾಚಾರ್,ಪ್ರಭುಶಂಕರ,ತಿ.ನಂ.ಶ್ರೀಕಂಠಯ್ಯ ಮುಂತಾದವರ ಸಮರ್ಥ ಮಾರ್ಗದರ್ಶನ ಅವರ ಸೃಜನಶೀಲತೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿತು. ಎಂ.ಎ.ಹಾಗೂ ಬಿ.ಎಡ್.ಪದವಿ ಪಡೆದ ಇವರು ರಾಷ್ಟ್ರಭಾಷಾ ವಿಶಾರದ ಪದವಿಯನ್ನೂ ಪೂರೈಸಿದ್ದಾರೆ.ಮೈಸೂರಿನಲ್ಲಿಯೇ ವೃತ್ತಿ ಬದುಕನ್ನು ಪ್ರಾರಂಭಿಸುವ ಅವಕಾಶಗಳಿದ್ದರೂ ಹುಟ್ಟಿದೂರಿನ ವ್ಯಾಮೋಹ ಅವರನ್ನು ಅಂಕೋಲೆಗೆ ಕರೆತಂದಿತು.ದಿನಕರ ದೇಸಾಯಿಯವರಿಂದ ಪ್ರಾರಂಭವಾಗಿದ್ದ ಕೆನರಾ ವೆಲ್‌ಫೇರ್ ಟ್ರಸ್ಟಿನ ಮೊದಲ ಹೈಸ್ಕೂಲ್ ಪಿ.ಎಮ್.ಹೈಸ್ಕೂಲಿನಲ್ಲಿ ಸಹಶಿಕ್ಷಕರಾಗಿ ಸೇವೆಯನ್ನು ಪ್ರಾರಂಭಿಸಿದರು.ಮುಂದೆ ಶೆಟಗೇರಿಯಲ್ಲಿ ಪ್ರಾರಂಭವಾದ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದಲ್ಲಿ ಸಹಶಿಕ್ಷಕರಾಗಿ ತಮ್ಮ ವೃತ್ತಿ ಬದುಕನ್ನು ಮುಂದುವರೆಸಿದರು.ಅಲ್ಲಿ ಮುಖ್ಯಾಧ್ಯಾಪಕರಾಗಿದ್ದ ಸರಳತೆಯ ಪ್ರತೀಕದಂತಿದ್ದ ಶ್ರೀ ವಿ.ಜೆ.ನಾಯಕರ ಹೆಗಲಿಗೆ ಹೆಗಲು ಕೊಟ್ಟು ಈ ಸಂಸ್ಥೆಯ ಭೌತಿಕ ಪರಿಸರವನ್ನು ಸದೃಢವಾಗಿ ನಿರ್ಮಿಸುವುದರ ಜೊತೆಗೆ ಪ್ರೌಢಶಾಲೆಯಲ್ಲಿ ಓದುವ ಬಡ ಹಿಂದುಳಿದ,ದಲಿತ ಮಕ್ಠಳ ಶೈಕ್ಷಣಿಕ,ಬೌದ್ಧಿಕ ಪ್ರಗತಿಗೆ ಶ್ರಮಿಸಿದರು.ಹೀಗಾಗಿ ಸತ್ಯಾಗ್ರಹ ಸ್ಮಾರಕ ವಿದ್ಯಾಲಯ ರಾಜ್ಯದ ಪ್ರತಿಷ್ಠಿತ ಪ್ರೌಢಶಾಲೆಗಳಲ್ಲಿ ಒಂದಾಯಿತು.ವಿ.ಜೆ.ನಾಯಕರ ನಿವೃತ್ತಿಯ ನಂತರ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ ಮುಖ್ಯಾಧ್ಯಾಪಕರಾಗಿ ಸಂಸ್ಥೆಯ ಪ್ರತಿಷ್ಠೆಯನ್ನು ಹೆಚ್ಚಿಸುವ ಕೈಂಕರ್ಯದಲ್ಲಿ ಇನ್ನಷ್ಟು ಶ್ರದ್ಧೆಯಿಂದ ತೊಡಗಿಸಿಕೊಂಡರು.ಸುದೀರ್ಘಕಾಲ ಸೇವೆ ಸಲ್ಲಿಸಿ 1997ರಲ್ಲಿ ನಿವೃತ್ತಿಯಾದರು.ನಿವೃತ್ತಿ ಹೊಂದಿದರೂ ಸಂಸ್ಥೆಯ ಆಡಳಿತವು ಶಾಂತಾರಾಮ ನಾಯಕರ ಅನುಭವ,ಮಾರ್ಗದರ್ಶನವನ್ನು ಸಮರ್ಥವಾಗಿಯೇ ಬಳಸಿಕೊಳ್ಳುವ ಉದ್ದೇಶದಿಂದ ಅವರನ್ನು ಆಡಳಿತ ಮಂಡಳಿಯ ನಿರ್ದೇಶಕರನ್ನಾಗಿ ಸೇರಿಸಿಕೊಂಡಿತು.ಉತ್ತಮ ಶಿಕ್ಷಕ ಮಾತ್ರವಲ್ಲ,ಉತ್ತಮ ಸಾಹಿತಿಗಳೂ ಆಗಿರುವ ಶಾಂತಾರಾಮ ನಾಯಕರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ.
ಕಾಡಹೆಣ್ಣು, ದಾರಿಮಾಡಿಕೊಡಿ, ಅನುಭವ, ಆತಂಕ, ಅನುರಾಗ, ನಿನಾದ,ಸಂಭ್ರಮ ಮತ್ತು ಒಡಲಗೀತ ಇವರ ಕವನ ಸಂಗ್ರಹಗಳು.
ಚರಿತ್ರೆಯಲ್ಲಿ ಮರೆತವರ ಕಥೆ ಮತ್ತು ಸ್ವಾತಂತ್ರ್ಯ ಹೋರಾಟದ ಹೊರಳುನೋಟ,ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು,ಸ್ವಾತಂತ್ರ್ಯ ಹೋರಾಟದಲ್ಲಿ ನಾಡವರು,ಮತ್ತೆ ಮತ್ತೆ ನೆನಪಾಗುವ ಗಾಂಧಿ - ಇವು ಚಾರಿತ್ರಿಕ ಕೃತಿಗಳು.ಮಾನಧನ ಎಂ. ಎಚ್.ನಾಯಕ, ಶಿಕ್ಷಕ ಕವಿ ವಿ. ವೆ.ತೊರ್ಕೆ, ಕರುಣಾಳು ಸ.ಪ.ಗಾಂವಕರ, ಕರಬಂಧಿ ಡಿಕ್ಟೇಟರ್ ಬಾಸಗೋಡ ರಾಮ ನಾಯಕ, ಚುಟುಕು ಬ್ರಹ್ಮ ದಿನಕರ ದೇಸಾಯಿ ಮತ್ತು ಗೊನೇಹಳ್ಳಿಯ ಬೆಳಕು ಇವು ಶಾಂತಾರಾಮ ನಾಯಕರ ಲೇಖನಿಯಿಂದ ಒಡಮೂಡಿದ ಜೀವನ ಚರಿತ್ರೆಗಳು.ನಾಡವರು ಒಂದು ಸಾಂಸ್ಕೃತಿಕ ಅಧ್ಯಯನ ಎಂಬುದು ಸಂಸ್ಕೃತಿಗೆ ಸಂಬಂಧಿಸಿದ ಕೃತಿಯಾದರೆ ಮಂಡಕ್ಕಿ ತಿಂದ ಗಂಗೆ ಕಥಾ ಸಂಕಲನ.ಇದಲ್ಲದೇ ಹಂಬಲ, ಹುಡುಕಾಟ,ಒಡನಾಟ ಎಂಬ ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ.
ಯಾವ ಪ್ರಶಸ್ತಿ ಪುರಸ್ಕಾರವನ್ನೂ ಬಯಸದೇ,ಎಲ್ಲವೂ ತನ್ನ ಕರ್ತವ್ಯವೆಂದೇ ಭಾವಿಸಿದ ಅವರನ್ನು ಹಲವು ಪ್ರಶಸ್ತಿಗಳು ಅರಸಿಕೊಂಡು ಬಂದಿವೆ.ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ,ರಾಜ್ಯ ಶಿಕ್ಷಕ ಪ್ರಶಸ್ತಿ , ಡಾ.ಸೈಯ್ಯದ್ ಝಮೀರುಲ್ಲಾ ಷರೀಫ್ ಕಾವ್ಯ ಪ್ರಶಸ್ತಿ, ಮೈಸೂರಿನ ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗವು ಸಾಹಿತ್ಯ ಮತ್ತು ಸಮಾಜ ಸೇವೆಗಾಗಿ ಕೊಡಮಾಡುವ ಹೊಯ್ಸಳ ಪ್ರಶಸ್ತಿ, ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ,ಸುಕ್ರು ಮಾಸ್ತರ ಪ್ರಶಸ್ತಿ, ಸಾಹಿತ್ಯ ಸೇವೆಗಾಗಿ 2019 ರ ಶ್ರೀ ಆರ್ . ಎನ್ . ನಾಯಕ ಪ್ರತಿಷ್ಠಾನದ ಪ್ರಶಸ್ತಿ - ಇವು ಅವರಿಗೆ ದೊರೆತ ಕೆಲವು ಪ್ರಶಸ್ತಿಗಳು. ಈಗ ಅವರಿಗೆ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧಕ್ಷತೆಯ ಗೌರವ ಒಲಿದು ಬಂದಿದೆ.ಯುವಕರನ್ನೂ ನಾಚಿಸುವ ಕ್ರಿಯಾಶೀಲತೆಯನ್ನು ಹೊಂದಿರುವ 83 ರ ಪ್ರಾಯದ ಶಾಂತಾರಾಮ ನಾಯಕರಿಗೆ ದೊರಕಿರುವ ಈ ಗೌರವ ಯೋಗ್ಯತೆಗೆ ಸಂದ ಸನ್ಮಾನ ಎಂದು ಹೇಳಬಹುದು.
- ಶ್ರೀಧರ ಬಿ.ನಾಯಕ,ಬೇಲೇಕೇರಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)