ಮಂಗಳವಾರ, ಏಪ್ರಿಲ್ 14, 2026
ಬಂಡಿಹಬ್ಬ - ಜಗತ್ತಿನ ಅತಿ ಪ್ರಾಚೀನ ಜಾತ್ರೆಯೊಂದರ ಅನಾವರಣ
ಬಂಡಿ ಹಬ್ಬ ಎಂದಾಗ ಸಾಮಾನ್ಯವಾಗಿ ನಮಗೆಲ್ಲ ನೆನಪಾಗುವುದು ಅಂಕೋಲೆಯ ಭೂಮ್ತಾಯಿ ದೇವಸ್ಥಾನ,ಉಲಿ ಚಪ್ಪರದ ಜೋಕಾಲಿ, ಆಡುಕಟ್ಟೆಯ ಮುಖ ಆಡಿಸುವುದು,ಗುನಗರು ತಲೆಯ ಮೇಲೆ ಹೊತ್ತ ಕಳಸ,ಅವರು ಸೊಂಟಕ್ಕೆ ಸಿಕ್ಕಿಸಿಕೊಂಡ ಕತ್ತಿ,ಭಾರ ಬಂದಾಗ ವಿಚಾರ ಹಾಕುವದು,ಬಲಿ ಮಕ್ಕಳ ಕೂಗು,ಕಾಜಮಿಜಿ,ಕೊಳಕುರಿ,ಕುರಿ ಕಡಿಯುವುದು ಹೀಗೆ ಹಲವು ರೋಮಾಂಚನಕಾರಿ ಸಂಗತಿಗಳ ನೆನಪಾಗುತ್ತದೆ.ಬಂಡಿಹಬ್ಬ ನಮ್ಮ ಅಂಕೋಲಿಗರ ಜನಬದುಕಿನಲ್ಲಿ ಬೆರೆತು ಹೋದ ಒಂದು ಅವಿಸ್ಮರಣೀಯ ಅನುಭವ.ಬಂಡಿಹಬ್ಬದ ಬಗ್ಗೆ ಮಾತನಾಡುವಾಗ ಭಯ ಭಕ್ತಿ ಶ್ರದ್ಧೆಯಿಂದ ನಮಗೆ ದಕ್ಕಿದ ಸಂಗತಿಗಳ ಬಗ್ಗೆ ಸಂಭ್ರಮದಿಂದ ಮಾತನಾಡುತ್ತೇವೆ.ಆದರ ಕುತೂಹಲದ ಸಂಗತಿ ಎಂದರೆ ನಾವು ತಿಳಿದುಕೊಂಡದಷ್ಟೇ ಬಂಡಿಹಬ್ಬ ಅಲ್ಲ.ಅದರಾಚೆಗೂ ನಮಗೆ ಗೊತ್ತಿಲ್ಲದ ನಮ್ಮ ಅರಿವಿಗೂ ದಕ್ಕದ ಹಲವು ವಿಸ್ಮಯಗಳಿವೆ.ಹಬ್ಬದ ಆಚರಣೆಯ ಸಡಗರದಲ್ಲಿ ಅದೆಲ್ಲ ಮರೆಯಾಗಿದೆ.ಹೀಗೆ ವಿಸ್ಮೃತಿಗೆ ಸರಿದ ನಿಗೂಢ ಸಂಗತಿಗಳನ್ನು ಅನಾವರಣಗೊಳಿಸುವ ಪ್ರಯತ್ನವನ್ನು ವಿಘ್ನೇಶ ಗುನಗಾ ಮಾಡಿದ್ದಾರೆ.ಮೂಲತಃ ವಿಜ್ಞಾನದ ವಿದ್ಯಾರ್ಥಿಯಾದ ವಿಘ್ನೇಶ ಸಂಸ್ಕೃತಿಯ ಕುರಿತು ತಾಳಿರುವ ಕುತೂಹಲ ಆಶ್ಚರ್ಯಕರವಾದದ್ದು.ಈಗಾಗಲೇ ಭೂಮ್ತಾಯಿ:ಮೂಲ, ವಿವಾದ ಮತ್ತು ವಾಸ್ತವ ಎಂಬ ಕೃತಿಯ ಮೂಲಕ ಗಮನ ಸೆಳೆದಿರುವ ಇವರು ಈಗ ಅಂಕೋಲಿಗರ ಮತ್ತು ಉತ್ತರ ಕನ್ನಡ ಕರಾವಳಿಗರ ದೈವಿಕ ಸಂವೇದನೆಯ ಪ್ರತೀಕವಾಗಿರುವ ಬಂಡಿಹಬ್ಬದ ಕುರಿತು ಅಧ್ಯಯನಪೂರ್ಣ ಕೃತಿಯನ್ನು ರಚಿಸುವುದರ ಮೂಲಕ ತಮ್ಮ ಆಸಕ್ತಿ ಯಾವ ಕಡೆಗಿದೆ ಎಂಬುದನ್ನು ತೋರಿಸುತ್ತಿದ್ದಾರೆ.ಅವರು ಬಂಡಿಹಬ್ಬದ ಆಚರಣೆಯ ಭಾಗವಾಗಿರುವುದರಿಂದ,ಆಚರಣೆಯ ಒಳಗಿನವರಾಗಿರುವುದರಿಂದ ಅವರ ಪ್ರಯತ್ನ ಅಧಿಕೃತ ಎನಿಸಿಕೊಳ್ಳುತ್ತದೆ.
ಬಂಡಿಹಬ್ಬದ ನಿಗೂಢತೆಯನ್ನು ಭೇದಿಸುವ ಸಂದರ್ಭದಲ್ಲಿ ಅವರು ಕೇವಲ ಮೌಖಿಕ ಹೇಳಿಕೆಗಳಿಗಷ್ಟೇ ಸೀಮಿತರಾಗಿಲ್ಲ. ಕನ್ನಡ ಇಂಗ್ಲಿಷ್ ಮತ್ತಿತ್ತರ ಹಲವು ಭಾಷೆಗಳ ಹತ್ತಾರು ಪುಸ್ತಕಗಳನ್ನು ಅವಲೋಕಿಸಿದ್ದಾರೆ.ಗ್ರಂಥಸ್ಥವಾದ ಹಲವು ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಶೀಲಿಸಿದ್ದಾರೆ. ಅಂಕೋಲೆಯ ಸುತ್ತ ಮುತ್ತಲಿನ ಹಾಗೂ ಹೊರರಾಜ್ಯ ಮತ್ತು ಹೊರದೇಶಗಳ ಆಚರಣೆಗಳನ್ನು ತೌಲನಿಕವಾಗಿ ಗಮನಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕೃತಕ ಬುದ್ಧಿಮತ್ತೆ ಪ್ರಬಲವಾಗುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಅತ್ಯಂತ ಪ್ರಾಚೀನವಾದ ಆಚರಣೆಯೊಂದರ ರಹಸ್ಯವನ್ನು ಹೊಸತಲೆಮಾರಿಗೆ ಬಹಿರಂಗಪಡಿಸಬೇಕು ಎಂಬ ಪ್ರಾಮಾಣಿಕತೆಯಿಂದ ಈ ಮಹತ್ತರ ಕಾರ್ಯದಲ್ಲಿ ತೊಡಗಿದ್ದಾರೆ.ಆದ್ದರಿಂದ ಅಂಕೋಲೆಯ ಬಂಡಿಹಬ್ಬವನ್ನು ಕುರಿತಾದ ಅವರ ಈ ಪುಸ್ತಕ ಚಿರಕಾಲ ಉಳಿಯುವ ದಾಖಲೆಯಾಗಲಿದೆ.
ಕರ್ನಾಟಕ ಕರಾವಳಿಗೆ ತನ್ನದೇ ಆದ ಸಾಂಸ್ಕೃತಿಕ ಅಸ್ಮಿತೆ ಇದೆ. ಕರ್ನಾಟಕದ ಇತರೆಡೆಗಳಿಗೆ ಹೋಲಿಸಿದರೆ ಕರಾವಳಿಯ ಪರಿಸರದಲ್ಲಿ ಗುರುತಿಸಬಹುದಾದ ಸಂಸ್ಕೃತಿಯ ಚಿತ್ತಾರ ವಿಶಿಷ್ಟವಾದದ್ದು.ಸುಗ್ಗಿಹಬ್ಬ,ದೊಡ್ಡಹಬ್ಬ,ಹೊಸ್ತು, ಬಂಡಿಹಬ್ಬ,ಯಕ್ಷಗಾನ ಮೊದಲಾದ ಸಾಂಸ್ಕೃತಿಕ ಗುರುತುಗಳು ಇಲ್ಲಿನ ಜನಜೀವನದೊಂದಿಗೆ ಹಾಸುಹೊಕ್ಕಾಗಿವೆ. ಒಂದು ಕಾಲಕ್ಕೆ ಕರಾವಳಿ ಕರ್ನಾಟಕದ ಭೌಗೋಳಿಕ ಪರಿಸರವು ಕೃಷಿ ಸಂಸ್ಕೃತಿಯನ್ನು ಒಳಗೊಂಡಿತ್ತು. ಈ ಕೃಷಿ ಸಂಸ್ಕೃತಿಯ ಭಾಗವಾಗಿ ದೈವಗಳು ಆರಾಧನೆಗೆ ಒಳಪಡುತ್ತಿದ್ದವು. ಕರಾವಳಿಯ ಜನಪದರು ತಮ್ಮ ಬದುಕಿನ ಆರಾಧ್ಯ ದೈವಗಳಾಗಿ ಮಾಸ್ತಿ, ಜಟಗ,ಬೀರ,ಬೊಮ್ಮಯ್ಯ, ಭೂಮ್ತಾಯಿ,ರಾಕೇಶ ಹೀಗೆ ಅನೇಕ ದೈವ ಶಕ್ತಿಗಳನ್ನು ಪೂಜಿಸುತ್ತಿದ್ದಾರೆ.ಈ ದೈವಗಳಲ್ಲಿ ಹೆಚ್ಚಿನವುಗಳನ್ನು ಸಾಂಕೇತಿಕವಾಗಿ ನಂಬಿಕೊಂಡು ಬರುತ್ತಿದ್ದಾರೆ. ಈ ದೈವಗಳ ತೃಪ್ತಿಗಾಗಿ ಹಲವು ಆಚರಣೆಗಳನ್ನು ಪಾಲಿಸುತ್ತಿದ್ದಾರೆ. ಜನಪದ ಸಂಸ್ಕೃತಿಗೆ ಆಚರಣೆಯೇ ಬೆನ್ನೆಲುಬು.ಆಚರಣೆಯಿಲ್ಲದೆ ಯಾವ ದೈವದ ಅಸ್ತಿತ್ವವೂ ಇಲ್ಲಿ ಸಾಧ್ಯವಿಲ್ಲ.ಜನಪದ ಧರ್ಮ ಎಂದರೆ ಅದು ಆಚರಣೆಯ ಧರ್ಮ ಎನ್ನಬಹುದು.ಇಂತಹ ಆಚರಣೆಗಳು ನಿರ್ದಿಷ್ಟ ಕಾಲದಲ್ಲಿ ನಿರ್ದಿಷ್ಟ ವ್ಯಕ್ತಿ ಮತ್ತು ನಿರ್ದಿಷ್ಟ ಸಮುದಾಯಗಳಿಂದ ಆಗಬೇಕಾದುದು ನಿಯಮ.ದೈವಕ್ಕೂ ಸಮಾಜಕ್ಕೂ ಇರುವ ಸಂಬಂಧ ಅಭಿನಯಗೊಳ್ಳುವ ಕ್ರಮದ ವಿವರಗಳೇ ಆಚರಣೆಗಳು. ಈ ಆಚರಣೆಗಳಿಗೆ ನಂಬಿಕೆಯೇ ಮೂಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಈ ನಂಬಿಕೆ ಮತ್ತು ಆಚರಣೆಯ ಹಿನ್ನೆಲೆಯಲ್ಲಿ ಜಗತ್ತಿನ ಅತಿ ಪ್ರಾಚೀನ ಜಾತ್ರೆಯಾದ ಬಂಡಿಹಬ್ಬದ ರೂಪ ಸ್ವರೂಪವನ್ನು ಅನಾವರಣ ಮಾಡಲು ಇಲ್ಲಿ ಪ್ರಯತ್ನಿಸಲಾಗಿದೆ. ಲೇಖಕರ ಪ್ರಕಾರ ಬಂಡಿಹಬ್ಬ ಬರಿ ಒಂದು ಸಾಧಾರಣ ಹಬ್ಬವಲ್ಲ,ಅದು ಹಬ್ಬಗಳ ಗುಚ್ಛ. ಒಂದು ದೃಷ್ಟಿಯಿಂದ ಕೃಷಿ ಹಬ್ಬವಾದರೆ,ಇನ್ನೊಂದು ದೃಷ್ಟಿಯಿಂದ ವೀರಯೋಧರ ಹಬ್ಬ.ಮತ್ತೊಂದು ದೃಷ್ಟಿಯಿಂದ ಮಹಾಸತಿಯರ ಹಬ್ಬ. ಹೀಗೆ ಬಹು ಆಯಾಮಗಳನ್ನು ಹೊಂದಿದ ನಿಸರ್ಗ ಮತ್ತು ಪಿತೃದೇವತೆಗಳನ್ನು ಆರಾಧಿಸುವ ಆದಿಮ ಆಚರಣೆಯ ಮುಂದುವರಿಕೆ.
ಈ ಕೃತಿಯಲ್ಲಿ ಮೂವತ್ತಾರು ಅಧ್ಯಾಯಗಳಿವೆ. ಅವುಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.ಮೊದಲನೆಯ ಭಾಗವನ್ನು ಆಚರಣಾ ಪರ್ವ ಎಂದು ಹೆಸರಿಸಿದ್ದಾರೆ. ಇಲ್ಲಿ ಆವಾರೆಯಿಂದ ಆರಂಬಿಸಿ ಕೊನೆಯ ದಿನದ ಕೋಳಕುರಿವರೆಗಿನ ಬಂಡಿಹಬ್ಬದ ಹನ್ನೆರಡು ದಿನಗಳ ಆಚರಣೆಯ ವಿಧಿ - ವಿಧಾನಗಳನ್ನು ಎಳೆ ಎಳೆಯಾಗಿ ಬಿಡಿಸಿ ವಿವರಿಸಿದ್ದಾರೆ.
ಕಳಸ ಬಂಡಿಹಬ್ಬದ ಕೇಂದ್ರ ಬಿಂದು.ಕಳಸದ ಮನೆ, ಕಳಸದ ಗಿಂಡಿಯ ಸ್ವರೂಪ, ಕಳಸದ ಆಭರಣಗಳು,ಕಳಸದ ಅಲಂಕಾರ,ಕಳಸದಲ್ಲಿ ಅಡಕವಾದ ಪ್ರತಿಯೊಂದು ವಸ್ತುವಿನ ತಾಂತ್ರಿಕ ಮಹತ್ವವನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.ಕಳಸ ಆತ್ಮದ ಆರಾಧನೆ ಸಂಕೇತ.ಅಲ್ಲಿ ಬಳಸಲಾಗುವ ಕನ್ನಡಿ ಸತ್ಯ ದರ್ಶನದ ಸಾಧನ. ಮೆಕ್ಸಿಕೋದ ಅಜ್ಟೆಕ್ ಜನಾಂಗದಲ್ಲಿ ಈ ರೀತಿಯ ಕನ್ನಡಿಯ ಬಳಕೆ ಇತ್ತು ಎನ್ನುತ್ತಾರೆ.ಕಳಸದ ಬೆನ್ನೆಲುಬಾದ ಚಿಬ್ಬು ಭೂಮಿ ಮತ್ತು ಸ್ವರ್ಗವನ್ನು ಬೆಸೆಯುವ ಬ್ರಹ್ಮಾಂಡ ಶಕ್ತಿಯನ್ನು ಕಳಸಕ್ಕೆ ಆಕರ್ಷಿಸುವ ವಿಶ್ವ ಅಕ್ಷದ ಪ್ರತಿನಿಧಿ.ನಾಗರ ಹೆಡೆ ಜನನ ಮರಣ ಮತ್ತು ಪುನರ್ ಸೃಷ್ಟಿಯ ಚಕ್ರದ ಸಂಕೇತ,ಕೀರ್ತಿಮುಖ ಭಾರತದ ಮೂಲ ಮತ್ತು ವೈದಿಕ ಪೂರ್ವ ದೇವತೆ, ಕೊಡೆ ಆಧ್ಯಾತ್ಮಿಕ ಸಾರ್ವಭೌಮತೆಯ ಪ್ರತೀಕವಾಗಿದ್ದು ಭೂಮಿ ಮತ್ತು ಸ್ವರ್ಗವನ್ನು ಸಂಪರ್ಕಿಸುವ ಸಾಧನ ಎಂದು ಮಾನವಶಾಸ್ತ್ರ, ವಿಜ್ಞಾನ ಮತ್ತು ತಾಂತ್ರಿಕ ವಿದ್ಯೆಗಳ ಹಿನ್ನೆಲೆಯಲ್ಲಿ ವಿವರಿಸುತ್ತಾರೆ.ಕಳಸದ ಗಿಂಡಿಯ S ಆಕಾರದ ಕೊಳವೆಯು ದೇವಿಯ ದೈವಿಕ ಉಸಿರಾಟದ ಮಾಧ್ಯಮವಾಗಿದ್ದು ಒಟ್ಟಾರೆಯಾಗಿ ಕಳಸದ ಮೂಲಕ ದೈವಕ್ಕೆ ಜೀವ ತುಂಬುವ ಗುನಗ ಒಬ್ಬ ಆದಿಮ ವಿಜ್ಞಾನಿ ಎಂಬ ತೀರ್ಮಾನಕ್ಕೆ ಲೇಖಕರು ಬರುತ್ತಾರೆ. ಕಳಸವನ್ನು ಗುನಗರು ತಲೆಯ ಮೇಲೆ ಹೊತ್ತು ಸಾಗುವ ಕ್ರಿಯೆ ಸಾಮಾನ್ಯವಾದುದಲ್ಲ.ಅದು ಜೀವನ ಮರಣದ ಪ್ರಶ್ನೆ. ಏನಾದರೂ ಅವಘಡಗಳು ಸಂಭವಿಸಿದರೆ ಪ್ರಾಣತ್ಯಾಗಕ್ಕೆ ಸೊಂಟದಲ್ಲಿಯೇ ಕತ್ತಿಯನ್ನು ಇಟ್ಟುಕೊಂಡಿರುತ್ತಾರೆ.ಹಬ್ಬದ ಆರಂಭದಲ್ಲಿಯೇ ಗುನಗರ ಹೆಂಡತಿ ತನ್ನ ಮುತ್ತೈದೆಯ ಸಂಕೇತವಾದ ಮೂಗುತಿಯನ್ನು ಕಳಸದ ಗದ್ದುಗೆಯ ಮೇಲೆ ಇಡುವ ಸಂಗತಿಯತ್ತ ಗಮನ ಸೆಳೆಯುತ್ತಾರೆ.ಕಳಸದ ಸಿದ್ಧತೆ ವೈದಿಕ ಸಂಪ್ರದಾಯಕ್ಕಿಂತ ಭಿನ್ನ ಎಂಬುದರತ್ತ ಅವರು ಗಮನಸೆಳೆಯುತ್ತಾರೆ. ಕಳಸ ಸಿದ್ದಮಾಡುವುದು ಎಂದರೆ ದೈವದ ಪ್ರಾಣ ಪ್ರತಿಷ್ಠೆ ಎಂದು ಹೇಳುವುದರ ಮೂಲಕ ದೈವ ಎಂಬುದು ಸ್ಥಾವರವಲ್ಲ ಅದು ಜಂಗಮ ಸ್ವರೂಪಿ,ಅದು ಜೀವಂತ ದೇವತೆ ಎಂದು ಪ್ರತಿಪಾದಿಸುತ್ತಾರೆ.
ಬಂಡಿಹಬ್ಬದ ಸಂದರ್ಭದಲ್ಲಿ ಕಳಸದ ದೇವಾಲಯ,ಗ್ರಾಮದೇವತೆ ದೇವಾಲಯ,ಮತ್ತು ಆಡುಕಟ್ಟೆಗಳು ಪ್ರಮುಖವಾಗಿದ್ದು ಇಲ್ಲಿ ನಡೆಯುವ ಹೆಚ್ಚಿನ ವಿಧಿ - ವಿಧಾನಗಳು ಅನಾದಿ ಕಾಲದ ಬುಡಕಟ್ಟು ಜನಾಂಗಗಳ ತಾಂತ್ರಿಕ ವಿದ್ಯೆಗಳು ಎಂದು ಗುರುತಿಸುತ್ತಾರೆ.ಹಬ್ಬದ ಸಂದರ್ಭದ ಎಲ್ಲ ಆಚರಣೆಗಳು ಅದು ಕೃಷಿ ಸಂಬಂಧಿತ ವಿಧಿಗಳು,ಮುಖವಾಡ ಕುಣಿತ, ಹಗರಣ- ಮುಂತಾದವು ಸಾಂಕೇತಿಕ ತಾಂತ್ರಿಕತೆಗಳಾಗಿವೆ ಎನ್ನುತ್ತಾರೆ.ಈ ಸಾಂಕೇತಿಕ ಆಚರಣೆಗಳ ಉದ್ದೇಶ ಪ್ರಕೃತಿಯ ಮೇಲೆ ಪ್ರಭಾವ ಬೀರಿ ಉತ್ತಮ ಮಳೆ ಬೆಳೆಯನ್ನು ಪಡೆಯುವುದರ ಮೂಲಕ ಸಮೃದ್ಧತೆಯನ್ನು ಹೊಂದುವುದೇ ಆಗಿದೆ. ಬಂಡಿಹಬ್ಬದ ಸಂದರ್ಭದಲ್ಲಿ ದೇವರನ್ನು ಕರೆಯುವ ಸಂಪ್ರದಾಯ ವಿಶೇಷವಾಗಿದೆ. ಈ ಸಂದರ್ಭದಲ್ಲಿ ಮೇಲ್ಮುಖವಾಗಿ ಮತ್ತು ಕೆಳಮುಖವಾಗಿ ಸೆಸೆ ಎಸೆಯುವ ಎರಡು ವಿಭಿನ್ನ ಕ್ರಿಯೆಗಳತ್ತ ಗಮನಸೆಳೆಯುತ್ತಾರೆ. ಸಾಮಿಮಕ್ಕಳ ಕುಣಿತ ನಿಸರ್ಗವನ್ನು ಒಲಿಸಿಕೊಳ್ಳಲು ಸಂವಹನ ನಡೆಸುವ ಜಗತ್ತಿನ ಅತಿ ಪ್ರಾಚೀನ ಕುಣಿತದೊಂದಿಗೆ ಹೊಂದಿರುವ ಸಾಮ್ಯತೆಯನ್ನು ಗುರುತಿಸುತ್ತಾರೆ. ಅನಂತರ ಮಧ್ಯರಾತ್ರಿ ನಡೆಯುವ ಮಾಸ್ತಿ ದಹನ ಆತ್ಮಾಹುತಿಯ ಪ್ರಯತ್ನವಲ್ಲ, ಗ್ರಾಮದ ಒಳಿತಿಗಾಗಿ ದೇವತೆಯಾಗಿ ಪರಿವರ್ತಿತವಾಗುವ ಪ್ರಕ್ರಿಯೆ ಎಂಬ ಪ್ರಾಚೀನ ನಂಬಿಕೆಯನ್ನು ನೆನಪಿಸುತ್ತಾರೆ.
ಹನ್ನೆರಡು ದಿನಗಳವರೆಗೆ ನಡೆಯುವ ಬಂಡಿಹಬ್ಬ ಸಂಪೂರ್ಣವಾಗಿ ಜಾನಪದೀಯವಾಗಿದ್ದು,ಸಾಂಕೇತಿಕ ಮರಣದಿಂದ ಆರಂಭವಾಗಿ,ಸೂತಕದ ರೀತಿಯಲ್ಲಿ ಅನುಷ್ಠಾನಗೊಂಡು ಮರು ಸೃಷ್ಟಿಯಲ್ಲಿ ಅಂತ್ಯಗೊಳ್ಳುವ ವಿಶಿಷ್ಠ ಹಬ್ಬ.ಪುನರಪಿ ಜನನಂ ಪುನರಪಿ ಮರಣಂ ಎಂಬುದನ್ನು ನೆನಪಿಸುವ ಜನನ ಮರಣಗಳ ಆವರ್ತನದಲ್ಲಿ ನಿಸರ್ಗ ಜೀವನ ಮತ್ತು ಮಾನವ ಜೀವನ ಎಂಬ ಎರಡು ಚಕ್ರಗಳನ್ನು ಬೆಸೆಯುವ ಬಂಡಿಯಾಗಿ ಬಂಡಿ ಇಲ್ಲದಿದ್ದರೂ ಬಂಡಿಹಬ್ಬವಾಗಿ ಚಲಿಸುತ್ತಲೇ ಇದೆ ಎಂದು ಹೇಳುತ್ತಾರೆ.ಬಂಡಿಹಬ್ಬ ಅವಲ ಹಬ್ಬದಿಂದ ಪ್ರಾರಂಭವಾಗಿ ತೊಟ್ಟಿಲು ಜಟಗನ ಆವಾರೆಯೊಂದಿಗೆ ಮುಕ್ತಾಯವಾಗುತ್ತದೆ. ಅವಲ ಹಬ್ಬ ಮರಣದ ಸಂಕೇತ.12 ದಿನದ ಬಂಡಿಹಬ್ಬ ಸೂತಕ ಮತ್ತು ಶ್ರಾದ್ಧದ ಸಂಕೇತ, ಅಕ್ಕಿಯ ಹಿಟ್ಟಿನಿಂದ ಶಿಶುವನ್ನು ಮಾಡಿ ತೂಗುವ ತೊಟ್ಟಿಲು ಜಟಗನ ಆವಾರೆ ಮರುಹುಟ್ಟಿನ ಸಂಕೇತ ಒಟ್ಟಿನಲ್ಲಿ ಬಂಡಿಹಬ್ಬದ ಆಚರಣೆ ಸಾವಿನಿಂದ ಹುಟ್ಟಿನ ಕಡೆಗೆ ಸಾಗುವ ಒಂದು ಅಂತ್ಯವಿಲ್ಲದ ಪ್ರಯಾಣ ಎಂಬ ತಾತ್ವಿಕ ತೀರ್ಮಾನಕ್ಕೆ ಬರುತ್ತಾರೆ.
ಎರಡನೆಯ ಭಾಗ ಈ ಕೃತಿಯ ಜೀವಾಳ.ಬಂಡಿಹಬ್ಬದ ಎಲ್ಲ ಆಚರಣೆಗಳನ್ನು ಅವರು ವಿಶ್ಲೇಷಣೆ ಒಳಪಡಿಸುತ್ತಾರೆ.ಹೀಗೆ ವಿಶ್ಲೇಷಣೆಗೆ ಒಳಪಡಿಸುವಾಗ ಮುನ್ನುಡಿಯಲ್ಲಿ ಶಿವಾನಂದ ಕೆಳಗಿನಮನಿಯವವರು ಗುರುತಿಸಿದಂತೆ "ದೇಶೀ ಪರಂಪರೆಯ ಪರಿಕರಗಳಿಂದಲೇ ಅಧ್ಯಯನ ಮಾಡಬೇಕೆಂಬುದರ ಬಗ್ಗೆ ಆಲೋಚನೆಗಳನ್ನು ರೂಪಿಸಿಕೊಳ್ಳುತ್ತಾ ಹೋಗುತ್ತಾರೆ.ಇಷ್ಟೇ ಅಲ್ಲ, ಒಂದು ಕೃತಿಯಿಂದ ಮತ್ತೊಂದು ಕೃತಿಗೆ ಚಿಂತನೆಯ ಪರಿಕರಗಳನ್ನು, ತಾತ್ವಿಕತೆಯನ್ನು ಪರಾಮರ್ಶಿಸುತ್ತ ಜಾನಪದ, ಇತಿಹಾಸ, ಚರಿತ್ರೆ, ಪುರಾಣಗಳಿಂದ ರೂಪಿತವಾಗುವ ಎಲ್ಲಾ ಬಗೆಯ ಆಲೋಚನೆಗಳನ್ನು ಬಳಸಿಕೊಳ್ಳುತ್ತಾ ಒಂದು ವಿಶಿಷ್ಟವಾದ ಮಾರ್ಗವನ್ನು ಅನ್ವೇಷಿಸುತ್ತಾರೆ." ಆದ್ದರಿಂದಲೇ ಇದು ಮಹತ್ವದ ಕೃತಿಯಾಗಿ ಕಾಣುತ್ತದೆ.ಭೂಮಿ ತಾಯಿ ಕೃಷಿ ದೇವತೆ. ನಾಗರಿಕತೆ ರೂಪಗೊಳ್ಳುವುದಕ್ಕಿಂತ ಎಷ್ಟೋ ಮೊದಲು ಭೂತಾಯಿಯ ಆರಾಧನೆ ಇತ್ತು. ಜಗತ್ತಿನ ಅತ್ಯಂತ ಪ್ರಾಚೀನ ನಾಗರಿಕತೆಗಳ ಎಂದು ಪರಿಗಣಿಸುವ ಗ್ರೀಕ್,ಮೆಸಪೋಟೋಮಿಯ ಗಳಲ್ಲಿ ಭೂಮಿಯನ್ನು ತಾಯಿ ಎಂದು ಪರಿಗಣಿಸುತ್ತಿದ್ದರು ಮತ್ತು ಅಲ್ಲೆಲ್ಲ ಆರಾಧನೆಯ ಸಂದರ್ಭದಲ್ಲಿ ರಕ್ತ ತರ್ಪಣ ನಡೆಯುತಿತ್ತು.ಸಧ್ಯ ಆ ನಾಗರಿಕತೆಗಳು ಕಣ್ಮರೆಯಾಗಿ ಆಚರಣೆಗಳು ನಿಂತು ಹೋದರೂ ನಮ್ಮಲ್ಲಿ ಇನ್ನೂ ಉಳಿದುಕೊಂಡಿರುವುದನ್ನು ವಿಘ್ನೇಶ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.ಬ್ರಾಹ್ಮಣೇತರರು ಈ ಹಬ್ಬದ ರೂವಾರಿಗಳು ಮತ್ತು ಆಚರಣೆಗಳೆಲ್ಲ ಅವೈದಿಕವಾದವುಗಳು.ಉತ್ತರಕನ್ನಡದ ಕರಾವಳಿಯುದ್ದಕ್ಕೂ ಈ ಹಬ್ಬದ ಆಚರಣೆ ಇದೆ.ಆದರೆ ಭೌಗೋಳಿಕವಾಗಿ ಆಚರಣೆಯ ಸ್ವರೂಪದಲ್ಲಿ ಬದಲಾವಣೆಗಳನ್ನು ಗುರುತಿಸಿದ್ದಾರೆ.ಕಾರವಾರದಿಂದ ಮಿರ್ಜಾನ್ ವರೆಗೆ ಕಳಸದೊಂದಿಗೆ ಹುಯಿಲು ಕಂಬ ಸುತ್ತಿದರೆ ಮಿರ್ಜಾನ್ ನಿಂದ ಮುಂದೆ ಕೆಂಡ ಹಾಯುವ ಸಂಪ್ರದಾಯವಿದೆ.ಆಶ್ಚರ್ಯವೆಂದರೆ ಮಿರ್ಜಾನ್ ನಲ್ಲಿ ಎರಡೂ ಆಚರಣೆಗಳಿರುವುದನ್ನು ಗುರುತಿಸಿದ್ದಾರೆ.ಗೋಕರ್ಣ ಭಾಗದ ಕೆಲವು ಕಡೆ ಇಂದಿಗೂ ಬಂಡಿ ಎಳೆಯುವ ರೂಢಿ ಇದೆ ಎಂದು ಹೇಳುತ್ತಾರೆ.ಗ್ರಾಮದೇವತೆ ರಾಮಾಯಣ ಕಾಲಕ್ಕಿಂತಲೂ ಪ್ರಾಚೀನ ಎಂದು ಗುರುತಿಸುವ ಲೇಖಕರು ಜಗತ್ತಿನಾದ್ಯಂತ ಇವುಗಳ ಅಸ್ತಿತ್ವವನ್ನು ಸಾಧಿಸುತ್ತಾರೆ. ಭೂಮಿತಾಯಿ ಗ್ರಾಮದೇವತೆಯಾದರೆ ಪೂರ್ವಜರ ಆತ್ಮಗಳು ಪರಿವಾರ ದೇವರುಗಳಾಗುವ ವಿಸ್ಮಯವನ್ನು ಅವರು ಗುರುತಿಸಿದ್ದಾರೆ. ಪರಿವಾರ ದೇವರುಗಳಲ್ಲಿರುವ ಬೀರ ಅಂದರೆ ವೀರ ಬರಿ ಯುದ್ಧವೀರರಲ್ಲ,ಗ್ರಾಮದ ಒಳಿತಿಗಾಗಿ ಪ್ರಾಣತ್ಯಾಗ ಮಾಡಿದವರಾಗಿರಬಹುದು,ಹಾಗೆ ಸ್ತ್ರೀ ಶಕ್ತಿಗಳಾದ ಮಾಸ್ತಿ ಕೇವಲ ಪತಿಗಾಗಿ ಸಹಗಮನ ಮಾಡಿದವಳಲ್ಲ, ಊರಿನ ಒಳಿತಿಗಾಗಿ ಪ್ರಾಣತ್ಯಾಗ ಮಾಡಿದ ಹೆಣ್ಣು ಆಗಿರಬಹುದು. ಅಂತಹ ಆತ್ಮಗಳ ಆರಾಧನೆ ಜನಪದರ ನಂಬಿಕೆಯನ್ನೇ ಅವಲಂಬಿಸಿದೆ ಎಂದು ಅವರು ಹೇಳುತ್ತಾರೆ.ಬೆಳೆ ಬೇಕೆಂದರೆ ನಾವು ಅದನ್ನು ದೇವರಿಗೆ ಅಭಿನಯಿಸಿ ತೋರಿಸಬೇಕು ಆಗ ಪ್ರಕೃತಿ ಅದನ್ನು ಅನುಕರಿಸುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಬಂಡಿಹಬ್ಬ ರೂಪಗೊಂಡಿದೆ ಎಂಬ ಅಭಿಪ್ರಾಯ ಅವರದ್ದು. ಬಂಡಿಹಬ್ಬದ ಸಂದರ್ಭದಲ್ಲಿ ಶುದ್ಧ ಅಕ್ಕಿಯನ್ನು ಅಕ್ಷತೆಯಾಗಿ ಬಳಸುತ್ತಾರೆ.ಶ್ರಾದ್ಧ ಮತ್ತು ಸೂತಕದ ಸಂದರ್ಭದಲ್ಲಿಯೂ ಬಿಳಿ ಅಕ್ಕಿಯೇ ಅಕ್ಷತೆ.ಇಲ್ಲಿ ಶಾಲಿವಾಹನನ ಒಂದು ದಂತಕತೆಯನ್ನು ಉಲ್ಲೇಖಿಸಿ ಬಂಡಿಹಬ್ಬದ ಆಚರಣೆಗೆ ಅವನೇ ಮೂಲಕಾರಣವಾಗಿರಬೇಕು ಎಂದು ಪ್ರತಿಪಾದಿಸುತ್ತಾರೆ.
ಬಂಡಿ ಹಬ್ಬವನ್ನು ದಕ್ಷಿಣ ಭಾರತದುದ್ದಕ್ಕೂ ಆಚರಿಸಲಾಗುತ್ತದೆ.ಆದ್ದರಿಂದ ದ್ರಾವಿಡ ಜನಪದ ಸಂಸ್ಕೃತಿಯ ಅಂಗವಾಗಿ ಇದು ರೂಪುಗೊಂಡಿರುವ ಸಾಧ್ಯತೆಯತ್ತ ಗಮನಸೆಳೆಯುತ್ತಾರೆ.ಬಲಿಮಕ್ಕಳು,ರಕ್ತತರ್ಪಣ ಮುಂತಾದವುಗಳು ಬಂಡಿಹಬ್ಬದ ಸಂದರ್ಭದ ನರಬಲಿಯ ಸೂಚನೆಗಳು ಎಂಬುದನ್ನು ಆಧಾರ ಸಹಿತ ಅವರು ನಿರೂಪಿಸುತ್ತಾರೆ.ಬಿಣಗಾ,ಅಲಗೇರಿ,ಶಿರಗುಂಜಿಗಳಲ್ಲಿ ಇಂದಿಗೂ ಸಾಂಕೇತಿಕ ರಕ್ತ ಅರ್ಪಣೆಯ ಪದ್ಧತಿಯಿದೆ ಎಂದು ಹೇಳುವ ಅವರು ಹಿರೇಗುತ್ತಿಯಲ್ಲಿ ಮುಂಡದಿಂದ ಬೇರ್ಪಡಿಸಿದ ಮೂರು ತಲೆಗಳನ್ನು ಒಲೆಯ ಗುಂಡಿನ ಆಕಾರದಲ್ಲಿಟ್ಟು ಉಪಾರ ಬೇಯಿಸಲಾಗುತ್ತಿತ್ತು.ಒಂದು ವರ್ಷ ರುಂಡ ಮುಂಡಗಳು ಅದಲು ಬದಲಾಗಿ ಅನಾಹುತ ಸಂಭವಿಸಿತು. ಅಂದಿನಿಂದ ನರಬಲಿಯನ್ನು ನಿಲ್ಲಿಸಲಾಯಿತು ಎಂಬ ಸಿಲ್ವಾ ಅವರ ಉಲ್ಲೇಖವನ್ನು ಉಲ್ಲೇಖಿಸುತ್ತಾರೆ.ಕಾಣಕೋಣದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಇಂದಿಗೂ ಈ ಪದ್ಧತಿ ಇರುವದರತ್ತ ಗಮನ ಸೆಳೆಯುತ್ತಾರೆ.ಬಲಿಮಕ್ಕಳು ನರಬಲಿಯ ಪಳೆಯುಳಿಕೆ ಆಗಿರಬಹುದು ಎಂಬ ಊಹೆ ಅವರದ್ದು.ಬಂಡಿ ಹಬ್ಬ ಅಪ್ಪಟ ಮಣ್ಣಿನ ಮಕ್ಕಳ ಹಬ್ಬ ವಾಗಿರುವುದರಿಂದ ಇಲ್ಲಿ ಬ್ರಾಹ್ಮಣರ ಪಾತ್ರ ಗೌಣವಾಗಿದೆ.ಆದರೆ ಉತ್ತರಕನ್ನಡದ ಕರಾವಳಿಯ ಬಂಡಿ ಹಬ್ಬದಲ್ಲಿ ಬ್ರಾಹ್ಮಣರಿಗೂ ಗೌರವ ಸ್ಥಾನ ಕಲ್ಪಿಸಿರುವದರತ್ತ ಗಮನ ಸೆಳೆಯುತ್ತಾರೆ.ಹೊನ್ನಾವರದ ಅಂಶೊಳ್ಳಿಯಲ್ಲಿ ಬ್ರಾಹ್ಮಣರೇ ಕಳಸ ಹೊರುತ್ತಾರೆ.ಆದರೆ ಕಳಸ ತಯಾರಿಸಲು ಕೆಕ್ಕಾರ ಗ್ರಾಮದ ಗುನಗರೇ ಹೋಗಬೇಕು.ಅಂಕೋಲೆಯಲ್ಲಿ ಗುನಗರು ಮತ್ತು ಬ್ರಾಹ್ಮಣರ ನಡುವಿನ ಹೊಂದಾಣಿಕೆ ಸಾಮಾಜಿಕ ಸಾಮರಸ್ಯದ ಅದ್ಭುತ ಉದಾಹರಣೆ.ಹಾಗೆ ನೋಡಿದರೆ ಬಂಡಿ ಹಬ್ಬವೇ ಸಾಮರಸ್ಯ ಪ್ರತೀಕ.ಅಲ್ಲಿ ಎಲ್ಲ ಸಮಾಜದವರು ಒಂದಲ್ಲ ಒಂದು ರೀತಿಯಲ್ಲಿ ತೊಡಗಿ ಕೊಳ್ಳುತ್ತಾರೆ.ಕಳಸದ ಮೆರವಣೆಗೆಯ ಸಂದರ್ಭದಲ್ಲಿ ಆಗೇರರ ಪಂಚವಾದ್ಯ,ವಾಜಂತ್ರಿಗಳ ಸಾಂಪ್ರದಾಯಿಕ ವಾದ್ಯ ಇರಲೇ ಬೇಕು.ಬೋವಿಗಳು ದೀವಟಿಗೆ ಹಿಡಿದರೆ,ಗೌಡರು ಬಾವುಟಗಳನ್ನು ಹಿಡಿಯುತ್ತಾರೆ. ಉಳಿದ ಸಮಾಜದವರು ಕಟ್ಟಿಗೆದಾರರಾದರೆ ಗುನಗರು ಕಳಸ ಹೊತ್ತು ಕೇಂದ್ರಬಿಂದುವಾಗುತ್ತಾರೆ.ಒಂದು ಕಾಲಘಟ್ಟದಲ್ಲಿ ಗುನಗರೇ ಈ ಮಣ್ಣಿನ ಅಧಿಕೃತ ಪುರೋಹಿತ ವರ್ಗದವರಾಗಿದ್ದರು ಎಂದು ಹೇಳುವ ಲೇಖಕರು ಪರಿಶಿಷ್ಟ ವರ್ಗದವರನ್ನು ಹೊರತುಪಡಿಸಿ ಉಳಿದ ಶೂದ್ರ ವರ್ಗದ ಶ್ರಾದ್ಧ ಕ್ರಿಯೆಗಳನ್ನು ಗುನಗರೇ ನೆರವೇರಿಸುತ್ತಿದ್ದರೆಂಬ ಗೆಜೆಟ್ಟಿನ ಉಲ್ಲೇಖ ನೀಡುತ್ತಾರೆ.ಗ್ರಾಮದೇವತೆಗಳಿಗೆ ಪ್ರಾಣ ಪ್ರತಿಷ್ಠಾಪನೆಯೂ ಇವರಿಂದಲೇ ನಡೆಯುತ್ತಿತ್ತು. ಬಂಡಿಹಬ್ಬದ ಸಂದರ್ಭದಲ್ಲಿ ಅವರ ಕಠಿಣ ವ್ರತಾಚರಣೆಗಳು ಭಯ ಮತ್ತು ಕುತೂಹಲವನ್ನು ಉಂಟು ಮಾಡುತ್ತವೆ ಎನ್ನುತ್ತಾರೆ.ಬಂಡಿಹಬ್ಬದ ಸಂದರ್ಭದಲ್ಲಿ ಮೂಕ ಗುನಗರಿಗೆ ಭಾರ ಬಂದಾಗ ಅವರು ಸ್ಪಷ್ಟವಾಗಿ ಮಾತನಾಡಿದ ಪ್ರಸಂಗವನ್ನು ಉಲ್ಲೇಖಿಸುವಾಗ ಮೈ ರೋಮಾಂಚನವಾಗುತ್ತದೆ.
ಬಂಡಿ ಹಬ್ಬ ಬರಿ ಹಬ್ಬವಲ್ಲ,ಅದು ಕೃಷಿ ಸಂಸ್ಕೃತಿಯ ಪುನರುತ್ಥಾನದ ಪ್ರಕ್ರಿಯೆ.ಬಂಡಿ ಹಬ್ಬದ ನಂತರ ಬೀಜ ಬಿತ್ತನೆ ಶುರುವಾಗುತ್ತದೆ.ತೊಟ್ಟಿಲು ಜಟಗನ ಹಬ್ಬಕ್ಕೆ ಮಳೆ ಬಂದು ಬೀಜ ಮೊಳಕೆವಡೆಯುತ್ತದೆ. ನಂತರ ತೆನೆ ಬಲಿತಾಗ ಹೊಸತು ಹಬ್ಬ.ಕೊನೆಯಲ್ಲಿ ಬತ್ತ ಬೇಯಿಸಿ ಅವಲಕ್ಕಿ ತಯಾರಿಸಿ ಅವಲ ಹಬ್ಬ. ಅವಲ ಹಬ್ಬ ಮರಣದ ಸಂಕೇತವಾದರೆ ಬಂಡಿ ಹಬ್ಬ ಪಿತೃಗಳನ್ನು ದೈವಗಳನ್ನಾಗಿಸುವ ಹಬ್ಬ,ತೊಟ್ಟಿಲು ಜಟಗನ ಹಬ್ಬ ಹೊಸ ಹುಟ್ಟಿನ ಹಬ್ಬ. ಒಟ್ಟಿನಲ್ಲಿ ಬಂಡಿ ಹಬ್ಬ ಕೇವಲ ಒಂದು ಆಚರಣೆಯಲ್ಲ,ಅದು ನಿಸರ್ಗದ ಚಲನೆಯ ಪ್ರಕ್ರಿಯೆ.ಇಡೀ ಮನುಕುಲದ ವಿಕಾಸ,ನಂಬಿಕೆ ಮತ್ತು ಆದಿಮ ಸಂಸ್ಕೃತಿಯ ಜೀವಂತ ಮ್ಯೂಸಿಯಂ ಎಂದು ಹೇಳುವ ಅವರು ವಿಶ್ವದ ಉಳಿದ ಪ್ರಾಚೀನ ನಾಗರೀಕತೆಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡರೂ ನಮ್ಮಲ್ಲಿ ಅದು ಶಾಶ್ವತವಾಗಿ ಉಳಿದಿದೆ ಮತ್ತು ಉಳಿಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜನಪದೀಯವಾದ ಆಚರಣೆಯೊಂದು ತನ್ನ ಮೂಲಸ್ವರೂಪವನ್ನು ಕಳೆದುಕೊಂಡು ಮೂಲ ಉದ್ದೇಶದಿಂದ ದೂರವಾಗಿ ಕೇವಲ ಯಾಂತ್ರಿಕ ಆಚರಣೆಯಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಅದರ ಮೂಲ ಸ್ವರೂಪ ಮತ್ತು ಉದ್ದೇಶವನ್ನು ಮುಂದಿನ ಜನಾಂಗಕ್ಕೆ ಪರಿಚಯಿಸುವ ವಿಘ್ನೇಶ ಗುನಗಾ ಅವರ ಪ್ರಯತ್ನ ನಿಜಕ್ಕೂ ಅಭಿನಂದನೀಯ. ಈಗಾಗಲೇ ಅಂಕೋಲೆಯ ಶಾಸನೋಕ್ತ ಇತಿಹಾಸವನ್ನು ಶ್ಯಾಮಸುಂದರ ಗೌಡ ಅನಾವರಣಗೊಳಿಸಿದ್ದಾರೆ.ಅಂಕೋಲೆಯ ಸ್ವಾತಂತ್ಯ ಹೋರಾಟದ ಚರಿತ್ರೆಯನ್ನು ಶಾಂತಾರಾಮ ನಾಯಕ,ಹಿಚ್ಕಡ ಅವರು ನಿರೂಪಿಸಿದ್ದಾರೆ.ಅಂಕೋಲೆಯ ನೆಲದಲ್ಲಿ ನಡೆದ ರೈತ ಹೋರಾಟದ ಕತೆಯನ್ನು ವಿಷ್ಣು ನಾಯ್ಕರು ದಾಖಲಿಸಿದ್ದಾರೆ.ಅಂಕೋಲೆಯ ಜಾನಪದ ಸಂಗತಿಗಳನ್ನು ಡಾ .ಎನ್. ಆರ್.ನಾಯಕ ಮತ್ತು ಶಾಂತಿ ನಾಯಕ ದಂಪತಿಗಳು ಹಿಡಿದಿಟ್ಟಿದ್ದಾರೆ.ಆದರೆ ಇದುವರೆಗೆ ಆಚರಣೆಯೊಂದರ ಇತಿಹಾಸ ದಾಖಲಾಗಿರಲಿಲ್ಲ.ಈಗ ವಿಘ್ನೇಶ ಗುನಗಾ ಜಗತ್ತಿನ ಅತ್ಯಂತ ಪ್ರಾಚೀನ ಜಾತ್ರೆಯಾದ ಉತ್ತರ ಕನ್ನಡದ ಬಂಡಿಹಬ್ಬದ ಸಂಪೂರ್ಣ ವೈಶಿಷ್ಟ್ಯಗಳನ್ನು ಆಧಾರಗಳೊಂದಿಗೆ ನಿರೂಪಿಸುವುದರ ಮೂಲಕ ಅಂಕೋಲೆಯ ಸಾಂಸ್ಕೃತಿಕ ಮತ್ತು ದೈವಿಕ ಕ್ಷೇತ್ರದ ಹಿರಿಮೆಯನ್ನು ನಾಡಿಗೆ ಪರಿಚಯಿಸಿದ್ದಾರೆ.ಅವರ ಈ ಕಾರ್ಯ ಹಲವು ತಲೆಮಾರುಗಳಿಗೆ ಮಾರ್ಗದರ್ಶನವಾಗಿದೆ.ಇಲ್ಲಿ ಬಳಸಲಾದ ಚಿತ್ರಗಳು ಬಂಡಿಹಬ್ಬದ ವೈಶಿಷ್ಟ್ಯ ಮತ್ತು ವೈವಿಧ್ಯತೆಗಳನ್ನು ಅನಾವರಣಗೊಳಿಸುವಲ್ಲಿ ಯಶಸ್ವಿಯಾಗಿವೆ.ತಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ಬಂಡಿಹಬ್ಬದ ಮಹತ್ವವನ್ನು ತಿಳಿಯಲು ಪ್ರತಿಯೊಬ್ಬ ಶ್ರದ್ಧಾಳುಗಳು ಓದಲೇಬೇಕಾದ ಕೃತಿ ಇದು.
- ಶ್ರೀಧರ ಬಿ.ನಾಯಕ, ಬೇಲೇಕೇರಿ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ