ಸೋಮವಾರ, ಮಾರ್ಚ್ 23, 2026

ಶಾಂತಾರಾಮ ನಾಯಕರ ಸಾಧಕ ಶ್ರೇಷ್ಠ -- ಕೃತಿ ಪರಿಚಯ.

ಸಾತ್ವಿಕತೆಯ ಪ್ರತೀಕದಂತಿರುವ ಶಾಂತಾರಾಮ ನಾಯಕರನ್ನು ನೋಡಿದಾಗಲೆಲ್ಲ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರಿಗೆ ಪ್ರಿಯವಾದ ವೈಷ್ಣವ ಜನತೋ ಭಜನೆ ನೆನಪಾಗುತ್ತದೆ.ಸದ್ಗುಣ ಸಂಪನ್ನ ಸಜ್ಜನರು ಯಾರು ಎಂದರೆ ಅಹಂಕಾರವಿಲ್ಲದೆ, ಸಕಲರನ್ನೂ ಗೌರವಿಸುತ್ತಾ, ಸತ್ಯ ಮತ್ತು ದೃಢ ವೈರಾಗ್ಯವನ್ನು ಅಳವಡಿಸಿಕೊಂಡವನು.ಪರರ ದುಃಖವನ್ನು ಅರಿತು ಅವರ ದುಃಖಕ್ಕೆ ನೆರವಾಗುವವನು,ಲೋಭ-ವಂಚನೆ ಇಲ್ಲದವನು,ಕಾಮ ಮತ್ತು ಕ್ರೋಧಗಳನ್ನು ಗೆದ್ದವನು.ಅಂತಹ ಮಹಾತ್ಮನ ದರ್ಶನದಿಂದಲೇ ಜನ್ಮ ಸಾರ್ಥಕವಾಗುತ್ತದೆ.ಇಲ್ಲಿ ಬರುವ ವೈಷ್ಣವ ಜನ ಎಂಬ ಪದ ಕೇವಲ ವಿಷ್ಣು ಭಕ್ತರಿಗೆ ಮಾತ್ರವಲ್ಲ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡ ಎಲ್ಲರಿಗೂ ಅನ್ವಯವಾಗುತ್ತದೆ.ಶಾಂತಾರಾಮ ನಾಯಕರು ಅಂತಹ ಮಾನವೀಯ ವ್ಯಕ್ತಿತ್ವ.ಯಾರಲ್ಲಿಯೂ ಯಾವುದೇ ಸಂದರ್ಭದಲ್ಲಿಯೂ ದೋಷವನ್ನು ಹುಡುಕದ ಅವರ ಸ್ವಭಾವ ಅವರನ್ನು ಅಜಾತಶತ್ರುವನ್ನಾಗಿಸಿದೆ.ಆರೋಗ್ಯಪೂರ್ಣ ಮನಸ್ಸು ಆರೋಗ್ಯ ಪೂರ್ಣ ದೇಹವನ್ನು ರೂಪಿಸುತ್ತದೆಯಂತೆ.ಅವರು ಇನ್ನಷ್ಟು ಆರೋಗ್ಯವಂತರಾಗಿ ಕಿರಿಯರಿಗೆ ಮಾರ್ಗದರ್ಶನ ನೀಡುತ್ತಾ ಶತಾಯುಷಿಗಳಾಗಲಿ, ಆ ಸಂದರ್ಭದ ಆಚರಣೆಯಲ್ಲಿ ನಾವೆಲ್ಲ ಪಾಲ್ಗೊಳ್ಳುವ ಭಾಗ್ಯ ಸಿಗಲಿ ಎಂದು ಹಾರೈಸುತ್ತಾ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರುತ್ತೇನೆ. ಈ ಶುಭ ಸಂದರ್ಭದಲ್ಲಿ ಅವರು ರಚಿಸಿದ ಕೃತಿಯೊಂದು ಬಿಡುಗಡೆಯಾಗುತ್ತಿರುವುದು ಅರ್ಥಪೂರ್ಣ.ಶಾಂತಾರಾಮ ನಾಯಕರು ಒಂದರ್ಥದಲ್ಲಿ ಜನ ಸಾಮಾನ್ಯರ ಲೇಖಕ.ಇದುವರೆಗೆ ಅವರು ಪ್ರಕಟಿಸಿದ ಮೂವತ್ತೊಂದು ಕೃತಿಗಳಲ್ಲಿ ನಾವು ಹೆಚ್ಚಾಗಿ ಕಾಣುವುದು ಸ್ಥಳೀಯವಾದ ಜನಸಾಮಾನ್ಯರ ಸಂವೇದನೆಗಳನ್ನು.ಸ್ಥಳೀಯ ಇತಿಹಾಸವನ್ನು ಅಧ್ಯಯನ ಮಾಡುವ ಸಂದರ್ಭದಲ್ಲಿ ಅವರ ಕೃತಿಗಳನ್ನು ಬಿಟ್ಟು ಅಧ್ಯಯನ ಮಾಡಲು ಸಾಧ್ಯವೇ ಆಗುವುದಿಲ್ಲ.ಸ್ವಾತಂತ್ರ್ಯ ಚಳುವಳಿಯ ಕುರಿತು ಅವರು ಬರೆದ ಏಳೂ ಕೃತಿಗಳು ಅಧಿಕೃತ ದಾಖಲೆಗಳೇ ಆಗಿವೆ.ಇನ್ನು ಜೀವನ ಚರಿತ್ರೆಗಳ ವಿಷಯಕ್ಕೆ ಬಂದರೆ ಅವು ಕೂಡಾ ಈ ಪ್ರದೇಶದ ಅಸಾಮಾನ್ಯರ ಕಥೆಗಳೇ ಆಗಿವೆ. ಶಾಂತಾರಾಮ ನಾಯಕರು ಯಾರೋ ನಾಲ್ಕು ಜನರ ಜೀವನ ಚರಿತ್ರೆಯನ್ನು ಬರೆದವರಲ್ಲ,ಇವರು ಜೀವನ ಚರಿತ್ರೆ ಬರೆದವರೆಲ್ಲ ಮಹಾನ್ ಸಾಧಕರೇ ಆಗಿದ್ದಾರೆ,ಸಮಾಜಕ್ಕೆ ಮಾದರಿಯಾಗಿ ಮುಂದಿನ ತಲೆಮಾರಿಗೆ ಪ್ರೇರಕರಾಗಿದ್ದಾರೆ.ಎಂ.ಎಚ್.ನಾಯಕ,ವಿ.ವೆ.ತೊರ್ಕೆ ಸ.ಪ.ಗಾಂವಕಾರ,ಬಾಸಗೋಡ ರಾಮ ನಾಯಕ, ದಿನಕರ ದೇಸಾಯಿ, ವಿ.ಎಚ್. ನಾಯಕ ಗೊನೆಹಳ್ಳಿ ಹೀಗೆ ಎಲ್ಲರೂ ಹಲವು ತಲೆಮಾರುಗಳು ನೆನಪಿಸಿಕೊಳ್ಳಲೇ ಬೇಕಾದ ವಿಶಿಷ್ಟರು.ಇವರೆಲ್ಲರ ಸಾಲಿಗೆ ಈಗ ನ್ಯಾಯಮೂರ್ತಿ ಎಸ್.ಆರ್.ನಾಯಕರ ಜೀವನ ಚರಿತ್ರೆ ಸೇರ್ಪಡೆಯಾಗುತ್ತಿದೆ. ಈ ಪುಸ್ತಕದ ಶೀರ್ಷಿಕೆ "ಸಾಧಕ ಶ್ರೇಷ್ಠ". ಈ ಪದವೇ ವಿಶಿಷ್ಠ. ಎಲ್ಲರೂ ಸಾಧನೆ ಮಾಡುತ್ತಾರೆ.ಅವರು ರೈತರಿಗಾಗಿರಬಹುದು,ಸೈನಿಕರಾಗಿ ರಬಹುದು, ಶಿಕ್ಷಕರಾಗಿರಬಹುದು,ಜನಸೇವಕರಾಗಿರಬಹುದು.ಅವರಲ್ಲಿ ಕೆಲವರು ಶ್ರೇಷ್ಠವಾದುದನ್ನು ಸಾಧಿಸಿ ಶ್ರೇಷ್ಠ ಸಾಧಕರು ಎನಿಸಿಕೊಳ್ಳುತ್ತಾರೆ, ಅಂತಹ ಶ್ರೇಷ್ಠ ಸಾಧಕರಲ್ಲಿಯೇ ಇವರು ಶ್ರೇಷ್ಠರು ಎಂಬ ಅರ್ಥವನ್ನು ಇದು ಧ್ವನಿಸುತ್ತದೆ. ಈ ಕೃತಿಯನ್ನು ಅಂಕೋಲಿಗರಲ್ಲಿ ಸ್ವಾಭಿಮಾನವನ್ನು ಬಿತ್ತಿದ ಪ್ರೇಮಾ ತಾಯಿ ಪಿಕಳೆಯವರಿಗೆ ಅರ್ಪಿಸಿರುವದು ಅರ್ಥಪೂರ್ಣವಾಗಿದೆ. ಎಸ್.ಆರ್.ನಾಯಕರ ಮಹೋನ್ನತ ವ್ಯಕ್ತಿತ್ವದ ಅನಾವರಣಕ್ಕೆ ಅವರೂ ಕಾರಣರಾಗಿದ್ದಾರೆ. ಕೃತಿ ಗಾತ್ರದಲ್ಲಿ ಕಿರಿದಾಗಿದ್ದರೂ ಸಮಗ್ರವಾಗಿದೆ.ಒಟ್ಟು ಹನ್ನೊಂದು ಅಧ್ಯಾಯಗಳಲ್ಲಿ ಎಸ್ ಆರ್ ನಾಯಕರ ಬದುಕು,ಹೋರಾಟ,ಸಾಧನೆಗಳನ್ನು ಸ್ಪಷ್ಟವಾಗಿ ಚಿತ್ರಿಸುತ್ತದೆ. ಗಂಗಾವಳಿ ನದಿಯ ಎಡ ದಂಡೆಯ ಮೇಲಿರುವ ಮಾಸ್ಕೇರಿ ಎಂಬ ಊರಿನಲ್ಲಿ ಹುಟ್ಟಿ,ಅಲ್ಲಿಯ ಗಾಂವಟಿ ಶಾಲೆಯಲ್ಲಿ ತನ್ನ ಪ್ರಾರಂಭಿಕ ಶಿಕ್ಷಣವನ್ನು ಪೂರೈಸಿ,ಮುಲ್ಕಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮವಾಗಿ ಪಾಸಾದರೂ ಶಿಕ್ಷಣವನ್ನು ಮುಂದುವರೆಸಲಾಗದೇ ಹೊಟೆಲ್ ಒಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಕನಸುಗಣ್ಣಿನ ಹುಡುಗನೊಬ್ಬ ಮುಂದೆ ರಾಜ್ಯ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಅಸಂಖ್ಯಾತರ ಬದುಕಿನಲ್ಲಿ ಬೆಳಕು ಚೆಲ್ಲುವ ದೀಪಸ್ತಂಭವಾದ ಯಶಸ್ಸಿನ ಕತೆಯನ್ನು ಈ ಕೃತಿ ಒಳಗೊಂಡಿದೆ. ಶಾಂತಾರಾಮ ನಾಯಕರು ಎಸ್.ಆರ್.ನಾಯಕರ ಆತ್ಮೀಯರಲ್ಲಿ ಒಬ್ಬರು.ಅವರ ಬದುಕಿನ ಪ್ರತಿ ವಿವರಗಳನ್ನು,ಕಷ್ಟ- ಬವಣೆಗಳನ್ನೆಲ್ಲ ಬಲ್ಲವರು.ಆದ್ದರಿಂದ ಯಾವುದೇ ಮುಚ್ಚು ಮರೆಯಿಲ್ಲದೇ ಅವರ ಬದುಕಿನ ಚಿತ್ರಣವನ್ನು ನೀಡುತ್ತಾರೆ.ಇದರಿಂದ ಈ ಕೃತಿಗೆ ಅಧಿಕೃತತೆ ಪ್ರಾಪ್ತವಾಗಿದೆ.ಒಬ್ಬ ಸಾಧಕನ ಶ್ರೇಷ್ಠ ವ್ಯಕ್ತಿತ್ವ ನಿರ್ಮಾಣವಾಗಲು ಹಲವರ ಮಾರ್ಗದರ್ಶನ,ನೆರವು ಸಹಕಾರ ಅತ್ಯಗತ್ಯ.ಎಸ್.ಆರ್.ನಾಯಕ ಎಂಬ ವ್ಯಕ್ತಿತ್ವದ ನಿರ್ಮಾಣದಲ್ಲಿ ಜಿ.ಎಚ್.ನಾಯಕ,ಸ.ಪ.ಗಾಂವಕಾರ,ಎಸ್.ವಿ.ಪಿಕಳೆ,ಪ್ರೇಮಾ ಪಿಕಳೆ, ಸುಬ್ಬಣ್ಣ ಮೊದಲಾದವರು ನೀಡಿದ ಸಹಾಯವನ್ನು ಶಾಂತರಾಮರು ನೆನಪಿಸಿಕೊಳ್ಳುತ್ತಾರೆ.ಅವರು ತಮ್ಮ ವೃತ್ತಿ ಬದುಕಿನಲ್ಲಿ ನ್ಯಾಯಪರವಾಗಿ, ಜನಪರವಾಗಿ ಕರ್ತವ್ಯ ನಿರ್ವಹಿಸಲು ದಿವಂಗತ ಗೋಪಾಲಕೃಷ್ಣ ಶೆಟ್ಟಿ,ಎಲ್.ಜಿ.ಹಾವನೂರ ಅವರಂತಹ ಮಹನೀಯರ ಮಾರ್ಗದರ್ಶನ ಕಾರಣ ಎನ್ನುವುದರತ್ತ ಗಮನ ಸೆಳೆಯುತ್ತಾರೆ. ಒಬ್ಬ ವ್ಯಕ್ತಿ ಬವಣೆಗಳ ನಡುವೆಯೂ ಪ್ರಯತ್ನವಾದಿಯಾಗಿ ಉನ್ನತ ಸ್ಥಾನ ಮಾನ ಹೊಂದುವುದು ಒಂದು ಹಂತ.ಹಾಗೆ ಉನ್ನತ ಸ್ಥಾನ ಮಾನ ಪಡೆದ ನಂತರ ಆತ ಪಾಲಿಸಿದ ಮತ್ತು ಪ್ರತಿಪಾದಿಸಿದ ಜೀವನ ಮೌಲ್ಯಗಳು ಯಾವವು ಎಂಬುದು ಇನ್ನೊಂದು ಹಂತ. ಸಾಧನೆಯ ಹಂತದಲ್ಲಿ ತಾನು ಅನುಭವಿಸಿದ ಕಷ್ಟಗಳನ್ನು ನೆನಪಿನಲ್ಲಿಟ್ಟುಕೊಂಡು ನೊಂದವರ ಬದುಕಿಗೆ ಸಾಂತ್ವನ ದೊರಕಿಸುವಂತೆ ಕಾರ್ಯ ನಿರ್ವಹಿಸಿದರೆ ನಿಜಕ್ಕೂ ಅದು ಸಾರ್ಥಕತೆ ಎನಿಸಿಕೊಳ್ಳುತ್ತದೆ.ಈ ದೃಷ್ಟಿಯಿಂದ ನ್ಯಾಯಮೂರ್ತಿ ಎಸ್ ಆರ್ ನಾಯಕರು ಆದರ್ಶ ಪ್ರಾಯರಾಗುತ್ತಾರೆ.ನ್ಯಾಯವಾದಿಯಾಗಿ ಮತ್ತು ನ್ಯಾಯಾಧೀಶರಾದ ನಂತರ ಅವರು ಉನ್ನತ ಜೀವನಾದರ್ಶಗಳನ್ನು ಪಾಲಿಸಿ ಇತರರಿಗೆ ಮಾದರಿಯಾಗಿರುವದನ್ನು ಇಲ್ಲಿ ನೆನಪಿಸಿಕೊಳ್ಳಲಾಗಿದೆ. ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಹೈಕೋರ್ಟಗಳ ನ್ಯಾಯಮೂರ್ತಿಗಳಾಗಿ ಅವರು ನೀಡಿದ ತೀರ್ಪುಗಳು ನ್ಯಾಯಾಪರವೂ ಜನಪರವೂ ಆಗಿ ದಾಖಲೆಯಾಗಿವೆ ಎಂದು ಶಾಂತಾರಾಮ ನಾಯಕರು ಹೇಳುತ್ತಾರೆ.ಧಾರವಾಡ ಮತ್ತು ಕಲ್ಬುರ್ಗಿಗಳ ಹೈಕೋರ್ಟ್ ಪೀಠ ಸ್ಥಾಪನೆಯಲ್ಲಿ ನಾಯಕರ ಶ್ರಮವಿರುವದರತ್ತ ಗಮನ ಸೆಳೆಯುತ್ತಾರೆ.ಛತ್ತಿಸ ಗಡ ರಾಜ್ಯದ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಹೊಸ ರಾಜ್ಯದ ನ್ಯಾಯಾಂಗಕ್ಕೆ ಭದ್ರ ಅಡಿಪಾಯ ಹಾಕಿ ಲೋಕ ಅದಾಲತ್ ಮೂಲಕ ಅಸಂಖ್ಯ ಪ್ರಕರಣಗಳನ್ನು ಬಗೆಹರಿಸಿದ ನಾಯಕರ ಕರ್ತೃತ್ವಶಕ್ತಿಯ ಅಗಾಧತೆಯನ್ನು ಪರಿಚಯ ಮಾಡಿಕೊಡುತ್ತಾರೆ.ನ್ಯಾಯ ತೀರ್ಮಾನದ ಸಂದರ್ಭದಲ್ಲಿ ಸಾಮಾಜಿಕ ಕಲ್ಯಾಣಕ್ಕೆ ಭಂಗ ಬಾರದಂತೆ, ದುರ್ಬಲರಿಗೆ,ಅಶಕ್ತರಿಗೆ,ಅನ್ಯಾಯವಾಗದಂತೆ,ಜಾತಿ,ಧರ್ಮ,ಸ್ಥಾನ-ಮಾನಗಳನ್ನು ಲೆಕ್ಕಿಸದೇ, ಯಾವುದೇ ಭಯ-ಪಕ್ಷಪಾತವಿಲ್ಲದೇ ತೀರ್ಪು ನೀಡಿ ನ್ಯಾಯ ದೇವತೆಯ ಹಾಗೂ ದೈವಿಕ ಸ್ವರೂಪಿಯಾದ ತಾಯಿ ಸರಸ್ವತಿಯ ಪ್ರೀತಿಯ ಮಗ ಎಂದು ಅಭಿನಂದನೆಗೆ ಪಾತ್ರರಾಗಿರುವದು ಅವರ ವ್ಯಕ್ತಿತ್ವದ ಘನತೆಯನ್ನು ಸೂಚಿಸುತ್ತದೆ.ಛತ್ತಿಸಗಡ ರಾಜ್ಯದ ರಾಯಪುರದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಅಸ್ತಿತ್ವವೇ ಅಲುಗಾಡುವ ಸಂದರ್ಭದಲ್ಲಿ ಅದರ ಕುಲಪತಿಯಾಗಿ ತಮ್ಮ ಆಡಳಿತ ಕೌಶಲ್ಯ ಮತ್ತು ಕರ್ತವ್ಯನಿಷ್ಠೆಯಿಂದ ಕಾಯಕಲ್ಪ ನೀಡಿದ ಶ್ರೇಯಸ್ಸು ಎಸ್.ಆರ್.ನಾಯಕರಿಗೆ ಸಲ್ಲುತ್ತದೆ. ನಿವೃತ್ತಿಯ ನಂತರ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಮೊದಲ ಅಧ್ಯಕ್ಷರಾಗಿ ಅವರು ನಿರ್ವಹಿಸಿದ ಪಾತ್ರ ನಿಜಕ್ಕೂ ಸ್ಮರಣೀಯ.ಸರ್ಕಾರದಿಂದ ಮೂಲಭೂತ ಸೌಕರ್ಯಗಳು,ಅಗತ್ಯ ಸಿಬ್ಬಂದಿ ಸಿಗದಿದ್ದರೂ ಶ್ರದ್ಧೆಯಿಂದ ಕಾರ್ಯ ನಿರ್ವಹಿಸಿ,ಮಾನವ ಹಕ್ಕುಗಳ ಆಯೋಗಕ್ಕೆ ಐಡೆಂಟಿಟಿಯನ್ನು ಒದಗಿಸಿದ್ದು ನಾಯಕರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ.ಐದು ವರ್ಷಗಳ ಅವಧಿಯಲ್ಲಿ ಸುಮಾರು 5000 ಮಾನವ ಹಕ್ಕು ಉಲ್ಲಂಘನೆಯ ಪ್ರಕರಣಗಳು,ಅವುಗಳಲ್ಲಿ 900ರಷ್ಟು ಸಾರ್ವತ್ರಿಕ ಮಹತ್ವದ ಪ್ರಕರಣಗಳನ್ನು ಸ್ವಯಂ ಪ್ರೇರಣೆಯಿಂದ ನೋಂದಣಿ ಮಾಡಿಕೊಂಡು ವಿಚಾರಣೆ ನಡೆಸಿದ್ದು ನಾಯಕರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ. ಮಳೆಗಾಲದ ಸಮಯದಲ್ಲಿ ಲಿಂಗನಮಕ್ಕಿ ಅಣೆಕಟ್ಟು ತುಂಬಿ ಕೃತಕ ನೆರೆ ಸೃಷ್ಟಿ ಮಾಡಿದ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಚಂದ್ರಕಾಂತ ಕೊಚರೇಕರ ಅವರ ನೇತ್ರತ್ವದಲ್ಲಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಕೆಯಾದಾಗ ಅದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಶಾಶ್ವತ ಪರಿಹಾರ ಸೂಚಿಸಿದ್ದು ನಾಯಕರ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ.ಇದು ಕೇವಲ ಲಿಂಗನಮಕ್ಕಿಗೆ ಸೀಮಿತವಾಗದೇ ರಾಜ್ಯದ ಎಲ್ಲ ಅಣೆಕಟ್ಟುಗಳಿಗೂ ಅನ್ವಯವಾಗಿರುವದು ನಾಯಕರ ಜನಪರ ಸಾರ್ವತ್ರಿಕ ಧೋರಣೆಯ ಹೆಗ್ಗುರುತಾಗಿದೆ. ಎಸ್.ಆರ್.ನಾಯಕರು ಕೇವಲ ನ್ಯಾಯಮೂರ್ತಿಗಳಾಗಿ ಹೆಸರು ಮಾಡಿದವರಲ್ಲ.ಅವರು ಅತ್ಯುತ್ತಮ ಪ್ರಾಧ್ಯಾಪಕರೂ ಆಗಿದ್ದರು.ಅವರ ಉಪನ್ಯಾಸಗಳಲ್ಲಿ ಸಾಮಾಜಿಕ ಚಿಂತನೆ,ದೇಶದ ಭವಿಷ್ಯದ ಕುರಿತು ಕಾಳಜಿ, ಯುವ ಜನಾಂಗದ ಕುರಿತು ಕಳಕಳಿಗಳನ್ನು ಕಾಣಬಹುದು.ಯುವಕರು ಸಾಹಿತ್ಯ,ಕಲೆ,ವಿಜ್ಞಾನ,ಕಾನೂನು,ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದರೆ ಸಾಲದು ದೇಶದ ನೀತಿ ನಿರೂಪಣೆಯಲ್ಲಿ ಮುಖ್ಯ ಪಾತ್ರವಹಿಸುವ ರಾಜಕೀಯದಲ್ಲಿಯೂ ತೊಡಗಿಕೊಳ್ಳಬೇಕು.ರಾಜಕೀಯದಲ್ಲಿ ಯುವಕರ ಹಿಂಜರಿಕೆ ದೇಶದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬುದು ಅವರ ಖಚಿತ ಅಭಿಪ್ರಾಯ.ಅವರ ಪ್ರೌಢ ವಿಚಾರಗಳು ಕೃತಿರೂಪದಲ್ಲಿ ಪ್ರಕಟಗೊಳ್ಳಬೇಕು ಎಂದು ಶಾಂತಾರಾಮ ನಾಯಕರು ಅಭಿಪ್ರಾಯ ಪಡುತ್ತಾರೆ.ಎಸ್.ಆರ್. ನಾಯಕರಿಗೆ ದೊರೆತ ಗೌರವ ಸನ್ಮಾನಗಳು, ಅವರ ಕುರಿತು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರನ್ನೂ ಸೇರಿಸಿ ಹಲವು ಮಹನೀಯರ ಅಭಿನಂದನಾಪರ ಮಾತುಗಳು ಈ ಕೃತಿಯಲ್ಲಿವೆ.ಇವೆಲ್ಲ ಈ ಕೃತಿಯ ಮಹತ್ವವನ್ನು ಹೆಚ್ಚಿಸಿವೆ. ಶಾಂತಾರಾಮ ನಾಯಕರು ನ್ಯಾಯಮೂರ್ತಿ ಎಸ್.ಆರ್.ನಾಯಕರಿಗೆ ಆತ್ಮೀಯರಾದರೂ ಎಲ್ಲಿಯೂ ಅವರನ್ನು ವಿಜೃಂಭಿಸಿದಂತೆ ಕಂಡು ಬರುವುದಿಲ್ಲ.ಅವರ ವ್ಯಕ್ತಿತ್ವ ಮತ್ತು ಸಾಧನೆಗಳ ಯಥಾವತ್ತಾದ ಚಿತ್ರಣ ಇಲ್ಲಿದೆ. ಅಲ್ಲಲ್ಲಿ ಉಲ್ಲೇಖಿತವಾದ ಮಹನೀಯರ ಮಾತುಗಳು ಈ ವಯಸ್ಸಿನಲ್ಲಿಯೂ ಶಾಂತರಾಮರ ಓದಿನ ವಿಸ್ತಾರವನ್ನು ಪರಿಚಯಿಸುತ್ತವೆ.ಎಂದಿನಂತೆ ಲವಲವಿಕೆಯ ಬರವಣಿಗೆಯ ಶೈಲಿ ಕೃತಿಯನ್ನು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.ಮುನ್ನುಡಿಯಲ್ಲಿ ಡಾ. ರಾಮಕೃಷ್ಣ ಗುಂದಿಯವರು ಹೇಳಿದಂತೆ ಇದು ಶಾಂತಾರಾಮ ನಾಯಕರು ನಿರೂಪಿಸಿದ ಹೊನ್ನ ಹೊತ್ತಿಗೆ.ಶಾಂತಾರಾಮ ನಾಯಕರು ಇಂತಹ ಕೃತಿಯನ್ನು ನಿರೂಪಿಸದಿದ್ದರೆ ಮಹಾಚೇತನವೊಂದು ಮರೆಯಲ್ಲಿಯೇ ಉಳಿದು ಬಿಡುತ್ತಿತ್ತು.ರಾಷ್ಟ್ರಪಿತ ಗಾಂಧಿಜಿಯಂತಹ ದಿವ್ಯ ಚೇತನಗಳನ್ನು ಅಪಮೌಲ್ಯಗೊಳಿಸುತ್ತಿರುವ ವರ್ತಮಾನದ ಸಂದರ್ಭದಲ್ಲಿ ಗಾಂಧಿ ಮಾರ್ಗದಲ್ಲಿಯೇ ಸಾಗಿದ ಎಸ್.ಆರ್.ನಾಯಕರಂತಹ ಚೇತನಗಳನ್ನು ಹೊಸ ತಲೆಮಾರಿಗೆ ಪರಿಚಯಿಸಿ ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸಬೇಕಾದ ಹೊಣೆಗಾರಿಕೆ ಈಗ ಹಿರಿಯರಾದ ನಮ್ಮ ಮೇಲಿದೆ.ಸರ್ಕಾರ ಎಲ್ಲ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಗ್ರಂಥಾಲಯಗಳಿಗೆ ಪುಸ್ತಕ ಖರೀದಿಸಲು ಅನುದಾನ ನೀಡುತ್ತಿದೆ. ಈ ಅನುದಾನದಲ್ಲಿ ಕನಿಷ್ಠ ಶೇ.25 ರಷ್ಟು ಅನುದಾನವನ್ನು ಸ್ಥಳೀಯ ಲೇಖಕರ ಇಂತಹ ಕೃತಿಗಳನ್ನು ಖರೀದಿಸಲು ಅವಕಾಶ ಕಲ್ಪಿಸಿದರೆ ವಿದ್ಯಾರ್ಥಿಗಳು ಸ್ಥಳೀಯ ಸಾಧಕರ ಸಾಧನೆಗಳನ್ನು ಅರಿತುಕೊಂಡು ಅವರಂತೆ ವ್ಯಕ್ತಿತ್ವದ ಮಾದರಿಯೊಂದನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ . -ಶ್ರೀಧರ ಬಿ.ನಾಯಕ,ಬೇಲೇಕೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ