ಶನಿವಾರ, ನವೆಂಬರ್ 28, 2015

ಕಾಮಧೇನು
-----------------


ಸುತ್ತಲೂ ಕವಿದಿರಲು
ಅಜ್ಞಾನದ ಕತ್ತಲು
ಎಂದೂ ಆರದ ಅರಿವಿನ
ದೀಪ ಹೊತ್ತಿಸಿದೆ ನೀನು!
ಸ್ವಾಭಿಮಾನದ ಬೆಳಕು
ದಮನಿತರಲ್ಲಿ ಮೂಡಿಸಿ
ಅವಕಾಶಗಳ ದಿಕ್ಕು ನೀ ತೋರಿದೆ.
ಅನ್ಯಾಯ-ಅವಮಾನಗಳ
ಕುಲುಮೆಯಲಿ ಬೆಂದು
ದುಃಖ-ದುಮ್ಮಾನಗಳ
ಸುತ್ತಿಗೆಯೇಟು ತಿಂದು
‘ಭೀಮ’ಕಾಯದ ಪುತ್ಥಳಿಯಾದೆ.
ಭಾಷೆ-ಗಡಿಗಳ ದಾಟಿ
ರಾಶಿ ಕೋಶಗಳನೋದಿ
ಜ್ಞಾನಶಿಖರದ ತುತ್ತತುದಿಯೇರಿ
ಹಾರಿಸಿದೆ ವಿಚಾರಕ್ರಾಂತಿಯಧ್ವಜವ.
‘ಇಲ್ಲಿತ್ತು ಶೋಷಣೆ ಅಲ್ಲಿತ್ತು ದಾಸ್ಯ’
ಮೊಳಗಿಸಿದೆ ನೀನು ಹೋರಾಟದ ಘೋಷಣೆ.
‘ಸ್ವಾತಂತ್ರ-ಸಮತೆ ಜೊತೆಗೂಡಬೇಕು
ಬಿಡುಗಡೆಯ ಕನಸು ನನಸಾಗಬೇಕು’
ದಲಿತನಾಯಕ ನೀನು ರಾಷ್ಟ್ರನಾಯಕನಾದೆ;
ಸಮತ್ವವ ಸಾರುವ ರಾಜ್ಯಾಂಗ ರೂಪಿಸಿದೆ.
ಆಧುನಿಕ ಮನುವೆಂದು
ಕರೆಯುವರು ನಿನ್ನ
ಆದರೆ ತರತಮವ ಸೃಷ್ಠಿಸಿದ
ಮನುವಲ್ಲ ನೀನು
ಸಮಾನತೆಯ ಅಮೃತ ಕರೆದ ಕಾಮಧೇನು!

                                                                     - -  ಶ್ರೀಧರ ನಾಯಕ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ