ಮಂಗಳವಾರ, ಜೂನ್ 23, 2026

ಶ್ರೀ ಶಾಂತಾರಾಮ ನಾರಾಯಣ ನಾಯಕರವರು ಸ್ವಾತಂತ್ರ್ಯಯೋಧರ ಕುಟುಂಬದಲ್ಲಿ,೧೯೩೯ರ ಮಾರ್ಚ ೨೩ ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಹಿಚಕಡದಲ್ಲಿ ಜನಿಸಿದರು.ಪ್ರಾರಂಭಿಕ ಶಿಕ್ಷಣವನ್ನು ಪೂರೈಸಿದ ನಂತರ ಉನ್ನತ ಶಿಕ್ಷಣಕ್ಕಾಗಿ ಮೈಸೂರನ್ನು ಸೇರಿದರು.ಅಲ್ಲಿ ಅವರಿಗೆ ಅಂಕೋಲೆಯವರೇ ಆದ ಜಿ.ಎಚ್.ನಾಯಕ,ಕುವೆಂಪು ಅವರ ಮಗ ಪೂರ್ಣಚಂದ್ರ ತೇಜಸ್ವಿ,ರಾಮದಾಸ್,ಲಂಕೇಶ್ ಮುಂತಾದವರ ಸ್ನೇಹಸಾಂಗತ್ಯ ದೊರಕಿತು.ಅದು ಅವರಲ್ಲಿ ವೈಚಾರಿಕತೆ,ಸಂವೇದನಾಶೀಲತೆಯನ್ನು ಬೆಳೆಸುವಲ್ಲಿ ಸಹಕಾರಿಯಾಯಿತು.ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡದ ಶ್ರೇಷ್ಠ ಗುರುಗಳಾದ ಡಿ.ಎಲ್.ನರಸಿಂಹಾಚಾರ್,ಪ್ರಭುಶಂಕರ,ತಿ.ನಂ.ಶ್ರೀಕಂಠಯ್ಯ ಮುಂತಾದವರ ಸಮರ್ಥ ಮಾರ್ಗದರ್ಶನ ಅವರ ಸೃಜನಶೀಲತೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿತು. ಎಂ.ಎ.ಹಾಗೂ ಬಿ.ಎಡ್.ಪದವಿ ಪಡೆದ ಇವರು ರಾಷ್ಟ್ರಭಾಷಾ ವಿಶಾರದ ಪದವಿಯನ್ನೂ ಪೂರೈಸಿದ್ದಾರೆ.ಮೈಸೂರಿನಲ್ಲಿಯೇ ವೃತ್ತಿ ಬದುಕನ್ನು ಪ್ರಾರಂಭಿಸುವ ಅವಕಾಶಗಳಿದ್ದರೂ ಹುಟ್ಟಿದೂರಿನ ವ್ಯಾಮೋಹ ಅವರನ್ನು ಅಂಕೋಲೆಗೆ ಕರೆತಂದಿತು.ದಿನಕರ ದೇಸಾಯಿಯವರಿಂದ ಪ್ರಾರಂಭವಾಗಿದ್ದ ಕೆನರಾ ವೆಲ್‌ಫೇರ್ ಟ್ರಸ್ಟಿನ ಮೊದಲ ಹೈಸ್ಕೂಲ್ ಪಿ.ಎಮ್.ಹೈಸ್ಕೂಲಿನಲ್ಲಿ ಸಹಶಿಕ್ಷಕರಾಗಿ ಸೇವೆಯನ್ನು ಪ್ರಾರಂಭಿಸಿದರು.ಮುಂದೆ ಶೆಟಗೇರಿಯಲ್ಲಿ ಪ್ರಾರಂಭವಾದ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದಲ್ಲಿ ಸಹಶಿಕ್ಷಕರಾಗಿ ತಮ್ಮ ವೃತ್ತಿ ಬದುಕನ್ನು ಮುಂದುವರೆಸಿದರು.ಅಲ್ಲಿ ಮುಖ್ಯಾಧ್ಯಾಪಕರಾಗಿದ್ದ ಸರಳತೆಯ ಪ್ರತೀಕದಂತಿದ್ದ ಶ್ರೀ ವಿ.ಜೆ.ನಾಯಕರ ಹೆಗಲಿಗೆ ಹೆಗಲು ಕೊಟ್ಟು ಈ ಸಂಸ್ಥೆಯ ಭೌತಿಕ ಪರಿಸರವನ್ನು ಸದೃಢವಾಗಿ ನಿರ್ಮಿಸುವುದರ ಜೊತೆಗೆ ಪ್ರೌಢಶಾಲೆಯಲ್ಲಿ ಓದುವ ಬಡ ಹಿಂದುಳಿದ,ದಲಿತ ಮಕ್ಠಳ ಶೈಕ್ಷಣಿಕ,ಬೌದ್ಧಿಕ ಪ್ರಗತಿಗೆ ಶ್ರಮಿಸಿದರು.ಹೀಗಾಗಿ ಸತ್ಯಾಗ್ರಹ ಸ್ಮಾರಕ ವಿದ್ಯಾಲಯ ರಾಜ್ಯದ ಪ್ರತಿಷ್ಠಿತ ಪ್ರೌಢಶಾಲೆಗಳಲ್ಲಿ ಒಂದಾಯಿತು.ವಿ.ಜೆ.ನಾಯಕರ ನಿವೃತ್ತಿಯ ನಂತರ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ ಮುಖ್ಯಾಧ್ಯಾಪಕರಾಗಿ ಸಂಸ್ಥೆಯ ಪ್ರತಿಷ್ಠೆಯನ್ನು ಹೆಚ್ಚಿಸುವ ಕೈಂಕರ್ಯದಲ್ಲಿ ಇನ್ನಷ್ಟು ಶ್ರದ್ಧೆಯಿಂದ ತೊಡಗಿಸಿಕೊಂಡರು.ಸುದೀರ್ಘಕಾಲ ಸೇವೆ ಸಲ್ಲಿಸಿ 1997ರಲ್ಲಿ ನಿವೃತ್ತಿಯಾದರು.ನಿವೃತ್ತಿ ಹೊಂದಿದರೂ ಸಂಸ್ಥೆಯ ಆಡಳಿತವು ಶಾಂತಾರಾಮ ನಾಯಕರ ಅನುಭವ,ಮಾರ್ಗದರ್ಶನವನ್ನು ಸಮರ್ಥವಾಗಿಯೇ ಬಳಸಿಕೊಳ್ಳುವ ಉದ್ದೇಶದಿಂದ ಅವರನ್ನು ಆಡಳಿತ ಮಂಡಳಿಯ ನಿರ್ದೇಶಕರನ್ನಾಗಿ ಸೇರಿಸಿಕೊಂಡಿತು.ಉತ್ತಮ ಶಿಕ್ಷಕ ಮಾತ್ರವಲ್ಲ,ಉತ್ತಮ ಸಾಹಿತಿಗಳೂ ಆಗಿರುವ ಶಾಂತಾರಾಮ ನಾಯಕರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಕಾಡಹೆಣ್ಣು, ದಾರಿಮಾಡಿಕೊಡಿ, ಅನುಭವ, ಆತಂಕ, ಅನುರಾಗ, ನಿನಾದ,ಸಂಭ್ರಮ ಮತ್ತು ಒಡಲಗೀತ ಇವರ ಕವನ ಸಂಗ್ರಹಗಳು. ಚರಿತ್ರೆಯಲ್ಲಿ ಮರೆತವರ ಕಥೆ ಮತ್ತು ಸ್ವಾತಂತ್ರ್ಯ ಹೋರಾಟದ ಹೊರಳುನೋಟ,ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು,ಸ್ವಾತಂತ್ರ್ಯ ಹೋರಾಟದಲ್ಲಿ ನಾಡವರು,ಮತ್ತೆ ಮತ್ತೆ ನೆನಪಾಗುವ ಗಾಂಧಿ - ಇವು ಚಾರಿತ್ರಿಕ ಕೃತಿಗಳು.ಮಾನಧನ ಎಂ. ಎಚ್.ನಾಯಕ, ಶಿಕ್ಷಕ ಕವಿ ವಿ. ವೆ.ತೊರ್ಕೆ, ಕರುಣಾಳು ಸ.ಪ.ಗಾಂವಕರ, ಕರಬಂಧಿ ಡಿಕ್ಟೇಟರ್ ಬಾಸಗೋಡ ರಾಮ ನಾಯಕ, ಚುಟುಕು ಬ್ರಹ್ಮ ದಿನಕರ ದೇಸಾಯಿ ಮತ್ತು ಗೊನೇಹಳ್ಳಿಯ ಬೆಳಕು ಇವು ಶಾಂತಾರಾಮ ನಾಯಕರ ಲೇಖನಿಯಿಂದ ಒಡಮೂಡಿದ ಜೀವನ ಚರಿತ್ರೆಗಳು.ನಾಡವರು ಒಂದು ಸಾಂಸ್ಕೃತಿಕ ಅಧ್ಯಯನ ಎಂಬುದು ಸಂಸ್ಕೃತಿಗೆ ಸಂಬಂಧಿಸಿದ ಕೃತಿಯಾದರೆ ಮಂಡಕ್ಕಿ ತಿಂದ ಗಂಗೆ ಕಥಾ ಸಂಕಲನ.ಇದಲ್ಲದೇ ಹಂಬಲ, ಹುಡುಕಾಟ,ಒಡನಾಟ ಎಂಬ ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಯಾವ ಪ್ರಶಸ್ತಿ ಪುರಸ್ಕಾರವನ್ನೂ ಬಯಸದೇ,ಎಲ್ಲವೂ ತನ್ನ ಕರ್ತವ್ಯವೆಂದೇ ಭಾವಿಸಿದ ಅವರನ್ನು ಹಲವು ಪ್ರಶಸ್ತಿಗಳು ಅರಸಿಕೊಂಡು ಬಂದಿವೆ.ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ,ರಾಜ್ಯ ಶಿಕ್ಷಕ ಪ್ರಶಸ್ತಿ , ಡಾ.ಸೈಯ್ಯದ್ ಝಮೀರುಲ್ಲಾ ಷರೀಫ್ ಕಾವ್ಯ ಪ್ರಶಸ್ತಿ, ಮೈಸೂರಿನ ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗವು ಸಾಹಿತ್ಯ ಮತ್ತು ಸಮಾಜ ಸೇವೆಗಾಗಿ ಕೊಡಮಾಡುವ ಹೊಯ್ಸಳ ಪ್ರಶಸ್ತಿ, ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ,ಸುಕ್ರು ಮಾಸ್ತರ ಪ್ರಶಸ್ತಿ, ಸಾಹಿತ್ಯ ಸೇವೆಗಾಗಿ 2019 ರ ಶ್ರೀ ಆರ್ . ಎನ್ . ನಾಯಕ ಪ್ರತಿಷ್ಠಾನದ ಪ್ರಶಸ್ತಿ - ಇವು ಅವರಿಗೆ ದೊರೆತ ಕೆಲವು ಪ್ರಶಸ್ತಿಗಳು. ಈಗ ಅವರಿಗೆ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧಕ್ಷತೆಯ ಗೌರವ ಒಲಿದು ಬಂದಿದೆ.ಯುವಕರನ್ನೂ ನಾಚಿಸುವ ಕ್ರಿಯಾಶೀಲತೆಯನ್ನು ಹೊಂದಿರುವ 83 ರ ಪ್ರಾಯದ ಶಾಂತಾರಾಮ ನಾಯಕರಿಗೆ ದೊರಕಿರುವ ಈ ಗೌರವ ಯೋಗ್ಯತೆಗೆ ಸಂದ ಸನ್ಮಾನ ಎಂದು ಹೇಳಬಹುದು. - ಶ್ರೀಧರ ಬಿ.ನಾಯಕ,ಬೇಲೇಕೇರಿ

ಮಂಗಳವಾರ, ಏಪ್ರಿಲ್ 14, 2026

ಬಂಡಿಹಬ್ಬ - ಜಗತ್ತಿನ ಅತಿ ಪ್ರಾಚೀನ ಜಾತ್ರೆಯೊಂದರ ಅನಾವರಣ

ಬಂಡಿ ಹಬ್ಬ ಎಂದಾಗ ಸಾಮಾನ್ಯವಾಗಿ ನಮಗೆಲ್ಲ ನೆನಪಾಗುವುದು ಅಂಕೋಲೆಯ ಭೂಮ್ತಾಯಿ ದೇವಸ್ಥಾನ,ಉಲಿ ಚಪ್ಪರದ ಜೋಕಾಲಿ,ಆಡುಕಟ್ಟೆಯ ಮುಖ ಆಡಿಸುವುದು,ಗುನಗರು ತಲೆಯ ಮೇಲೆ ಹೊತ್ತ ಕಳಸ,ಅವರು ಸೊಂಟಕ್ಕೆ ಸಿಕ್ಕಿಸಿಕೊಂಡ ಕತ್ತಿ,ಭಾರ ಬಂದಾಗ ವಿಚಾರ ಹಾಕುವದು,ಬಲಿಮಕ್ಕಳ ಕೂಗು,ಕಾಜಮಿಜಿ,ಕೊಳಕುರಿ,ಕುರಿ ಕಡಿಯುವುದು ಹೀಗೆ ಹಲವು ರೋಮಾಂಚನಕಾರಿ ಸಂಗತಿಗಳ ನೆನಪಾಗುತ್ತದೆ.ಬಂಡಿಹಬ್ಬ ನಮ್ಮ ಅಂಕೋಲಿಗರ ಜನಬದುಕಿನಲ್ಲಿ ಬೆರೆತು ಹೋದ ಒಂದು ಅವಿಸ್ಮರಣೀಯ ಅನುಭವ.ಬಂಡಿಹಬ್ಬದ ಬಗ್ಗೆ ಮಾತನಾಡುವಾಗ ಭಯ ಭಕ್ತಿ ಶ್ರದ್ಧೆಯಿಂದ ನಮಗೆ ದಕ್ಕಿದ ಸಂಗತಿಗಳ ಬಗ್ಗೆ ಸಂಭ್ರಮದಿಂದ ಮಾತನಾಡುತ್ತೇವೆ.ಆದರ ಕುತೂಹಲದ ಸಂಗತಿ ಎಂದರೆ ನಾವು ತಿಳಿದುಕೊಂಡದಷ್ಟೇ ಬಂಡಿಹಬ್ಬ ಅಲ್ಲ.ಅದರಾಚೆಗೂ ನಮಗೆ ಗೊತ್ತಿಲ್ಲದ ನಮ್ಮ ಅರಿವಿಗೂ ದಕ್ಕದ ಹಲವು ವಿಸ್ಮಯಗಳಿವೆ.ಹಬ್ಬದ ಆಚರಣೆಯ ಸಡಗರದಲ್ಲಿ ಅದೆಲ್ಲ ಮರೆಯಾಗಿದೆ.ಹೀಗೆ ವಿಸ್ಮೃತಿಗೆ ಸರಿದ ನಿಗೂಢ ಸಂಗತಿಗಳನ್ನು ಅನಾವರಣಗೊಳಿಸುವ ಪ್ರಯತ್ನವನ್ನು ವಿಘ್ನೇಶ ಗುನಗಾ ಮಾಡಿದ್ದಾರೆ.ಮೂಲತಃ ವಿಜ್ಞಾನದ ವಿದ್ಯಾರ್ಥಿಯಾದ ವಿಘ್ನೇಶ ಸಂಸ್ಕೃತಿಯ ಕುರಿತು ತಾಳಿರುವ ಕುತೂಹಲ ಆಶ್ಚರ್ಯಕರವಾದದ್ದು.ಈಗಾಗಲೇ ಭೂಮ್ತಾಯಿ:ಮೂಲ, ವಿವಾದ ಮತ್ತು ವಾಸ್ತವ ಎಂಬ ಕೃತಿಯ ಮೂಲಕ ಗಮನ ಸೆಳೆದಿರುವ ಇವರು ಈಗ ಅಂಕೋಲಿಗರ ಮತ್ತು ಉತ್ತರ ಕನ್ನಡ ಕರಾವಳಿಗರ ದೈವಿಕ ಸಂವೇದನೆಯ ಪ್ರತೀಕವಾಗಿರುವ ಬಂಡಿಹಬ್ಬದ ಕುರಿತು ಅಧ್ಯಯನಪೂರ್ಣ ಕೃತಿಯನ್ನು ರಚಿಸುವುದರ ಮೂಲಕ ತಮ್ಮ ಆಸಕ್ತಿ ಯಾವ ಕಡೆಗಿದೆ ಎಂಬುದನ್ನು ತೋರಿಸುತ್ತಿದ್ದಾರೆ.ಅವರು ಬಂಡಿಹಬ್ಬದ ಆಚರಣೆಯ ಭಾಗವಾಗಿರುವುದರಿಂದ,ಆಚರಣೆಯ ಒಳಗಿನವರಾಗಿರುವುದರಿಂದ ಅವರ ಪ್ರಯತ್ನ ಅಧಿಕೃತ ಎನಿಸಿಕೊಳ್ಳುತ್ತದೆ. ಬಂಡಿಹಬ್ಬದ ನಿಗೂಢತೆಯನ್ನು ಭೇದಿಸುವ ಸಂದರ್ಭದಲ್ಲಿ ಅವರು ಕೇವಲ ಮೌಖಿಕ ಹೇಳಿಕೆಗಳಿಗಷ್ಟೇ ಸೀಮಿತರಾಗಿಲ್ಲ. ಕನ್ನಡ ಇಂಗ್ಲಿಷ್ ಮತ್ತಿತ್ತರ ಹಲವು ಭಾಷೆಗಳ ಹತ್ತಾರು ಪುಸ್ತಕಗಳನ್ನು ಅವಲೋಕಿಸಿದ್ದಾರೆ.ಗ್ರಂಥಸ್ಥವಾದ ಹಲವು ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಶೀಲಿಸಿದ್ದಾರೆ. ಅಂಕೋಲೆಯ ಸುತ್ತ ಮುತ್ತಲಿನ ಹಾಗೂ ಹೊರರಾಜ್ಯ ಮತ್ತು ಹೊರದೇಶಗಳ ಆಚರಣೆಗಳನ್ನು ತೌಲನಿಕವಾಗಿ ಗಮನಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕೃತಕ ಬುದ್ಧಿಮತ್ತೆ ಪ್ರಬಲವಾಗುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಅತ್ಯಂತ ಪ್ರಾಚೀನವಾದ ಆಚರಣೆಯೊಂದರ ರಹಸ್ಯವನ್ನು ಹೊಸತಲೆಮಾರಿಗೆ ಬಹಿರಂಗಪಡಿಸಬೇಕು ಎಂಬ ಪ್ರಾಮಾಣಿಕತೆಯಿಂದ ಈ ಮಹತ್ತರ ಕಾರ್ಯದಲ್ಲಿ ತೊಡಗಿದ್ದಾರೆ.ಆದ್ದರಿಂದ ಅಂಕೋಲೆಯ ಬಂಡಿಹಬ್ಬವನ್ನು ಕುರಿತಾದ ಅವರ ಈ ಪುಸ್ತಕ ಚಿರಕಾಲ ಉಳಿಯುವ ದಾಖಲೆಯಾಗಲಿದೆ. ಕರ್ನಾಟಕ ಕರಾವಳಿಗೆ ತನ್ನದೇ ಆದ ಸಾಂಸ್ಕೃತಿಕ ಅಸ್ಮಿತೆ ಇದೆ. ಕರ್ನಾಟಕದ ಇತರೆಡೆಗಳಿಗೆ ಹೋಲಿಸಿದರೆ ಕರಾವಳಿಯ ಪರಿಸರದಲ್ಲಿ ಗುರುತಿಸಬಹುದಾದ ಸಂಸ್ಕೃತಿಯ ಚಿತ್ತಾರ ವಿಶಿಷ್ಟವಾದದ್ದು.ಸುಗ್ಗಿಹಬ್ಬ,ದೊಡ್ಡಹಬ್ಬ,ಹೊಸ್ತು,ಬಂಡಿಹಬ್ಬ,ಯಕ್ಷಗಾನ ಮೊದಲಾದ ಸಾಂಸ್ಕೃತಿಕ ಗುರುತುಗಳು ಇಲ್ಲಿನ ಜನಜೀವನದೊಂದಿಗೆ ಹಾಸುಹೊಕ್ಕಾಗಿವೆ.ಒಂದು ಕಾಲಕ್ಕೆ ಕರಾವಳಿ ಕರ್ನಾಟಕದ ಭೌಗೋಳಿಕ ಪರಿಸರವು ಕೃಷಿ ಸಂಸ್ಕೃತಿಯನ್ನು ಒಳಗೊಂಡಿತ್ತು.ಈ ಕೃಷಿ ಸಂಸ್ಕೃತಿಯ ಭಾಗವಾಗಿ ದೈವಗಳು ಆರಾಧನೆಗೆ ಒಳಪಡುತ್ತಿದ್ದವು.ಕರಾವಳಿಯ ಜನಪದರು ತಮ್ಮ ಬದುಕಿನ ಆರಾಧ್ಯ ದೈವಗಳಾಗಿ ಮಾಸ್ತಿ, ಜಟಗ,ಬೀರ,ಬೊಮ್ಮಯ್ಯ,ಭೂಮ್ತಾಯಿ,ರಾಕೇಶ ಹೀಗೆ ಅನೇಕ ದೈವ ಶಕ್ತಿಗಳನ್ನು ಪೂಜಿಸುತ್ತಿದ್ದಾರೆ.ಈ ದೈವಗಳಲ್ಲಿ ಹೆಚ್ಚಿನವುಗಳನ್ನು ಸಾಂಕೇತಿಕವಾಗಿ ನಂಬಿಕೊಂಡು ಬರುತ್ತಿದ್ದಾರೆ.ಈ ದೈವಗಳ ತೃಪ್ತಿಗಾಗಿ ಹಲವು ಆಚರಣೆಗಳನ್ನು ಪಾಲಿಸುತ್ತಿದ್ದಾರೆ. ಜನಪದ ಸಂಸ್ಕೃತಿಗೆ ಆಚರಣೆಯೇ ಬೆನ್ನೆಲುಬು.ಆಚರಣೆಯಿಲ್ಲದೆ ಯಾವ ದೈವದ ಅಸ್ತಿತ್ವವೂ ಇಲ್ಲಿ ಸಾಧ್ಯವಿಲ್ಲ.ಜನಪದ ಧರ್ಮ ಎಂದರೆ ಅದು ಆಚರಣೆಯ ಧರ್ಮ ಎನ್ನಬಹುದು.ಇಂತಹ ಆಚರಣೆಗಳು ನಿರ್ದಿಷ್ಟ ಕಾಲದಲ್ಲಿ ನಿರ್ದಿಷ್ಟ ವ್ಯಕ್ತಿ ಮತ್ತು ನಿರ್ದಿಷ್ಟ ಸಮುದಾಯಗಳಿಂದ ಆಗಬೇಕಾದುದು ನಿಯಮ.ದೈವಕ್ಕೂ ಸಮಾಜಕ್ಕೂ ಇರುವ ಸಂಬಂಧ ಅಭಿನಯಗೊಳ್ಳುವ ಕ್ರಮದ ವಿವರಗಳೇ ಆಚರಣೆಗಳು.ಈ ಆಚರಣೆಗಳಿಗೆ ನಂಬಿಕೆಯೇ ಮೂಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಈ ನಂಬಿಕೆ ಮತ್ತು ಆಚರಣೆಯ ಹಿನ್ನೆಲೆಯಲ್ಲಿ ಜಗತ್ತಿನ ಅತಿ ಪ್ರಾಚೀನ ಜಾತ್ರೆಯಾದ ಬಂಡಿಹಬ್ಬದ ರೂಪ ಸ್ವರೂಪವನ್ನು ಅನಾವರಣ ಮಾಡಲು ಇಲ್ಲಿ ಪ್ರಯತ್ನಿಸಲಾಗಿದೆ. ಲೇಖಕರ ಪ್ರಕಾರ ಬಂಡಿಹಬ್ಬ ಬರಿ ಒಂದು ಸಾಧಾರಣ ಹಬ್ಬವಲ್ಲ,ಅದು ಹಬ್ಬಗಳ ಗುಚ್ಛ.ಒಂದು ದೃಷ್ಟಿಯಿಂದ ಕೃಷಿ ಹಬ್ಬವಾದರೆ,ಇನ್ನೊಂದು ದೃಷ್ಟಿಯಿಂದ ವೀರಯೋಧರ ಹಬ್ಬ.ಮತ್ತೊಂದು ದೃಷ್ಟಿಯಿಂದ ಮಹಾಸತಿಯರ ಹಬ್ಬ.ಹೀಗೆ ಬಹು ಆಯಾಮಗಳನ್ನು ಹೊಂದಿದ ನಿಸರ್ಗ ಮತ್ತು ಪಿತೃದೇವತೆಗಳನ್ನು ಆರಾಧಿಸುವ ಆದಿಮ ಆಚರಣೆಯ ಮುಂದುವರಿಕೆ. ಈ ಕೃತಿಯಲ್ಲಿ ಮೂವತ್ತಾರು ಅಧ್ಯಾಯಗಳಿವೆ. ಅವುಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.ಮೊದಲನೆಯ ಭಾಗವನ್ನು ಆಚರಣಾ ಪರ್ವ ಎಂದು ಹೆಸರಿಸಿದ್ದಾರೆ. ಇಲ್ಲಿ ಆವಾರೆಯಿಂದ ಆರಂಬಿಸಿ ಕೊನೆಯ ದಿನದ ಕೋಳಕುರಿವರೆಗಿನ ಬಂಡಿಹಬ್ಬದ ಹನ್ನೆರಡು ದಿನಗಳ ಆಚರಣೆಯ ವಿಧಿ - ವಿಧಾನಗಳನ್ನು ಎಳೆ ಎಳೆಯಾಗಿ ಬಿಡಿಸಿ ವಿವರಿಸಿದ್ದಾರೆ. ಕಳಸ ಬಂಡಿಹಬ್ಬದ ಕೇಂದ್ರ ಬಿಂದು.ಕಳಸದ ಮನೆ,ಕಳಸದ ಗಿಂಡಿಯ ಸ್ವರೂಪ, ಕಳಸದ ಆಭರಣಗಳು,ಕಳಸದ ಅಲಂಕಾರ,ಕಳಸದಲ್ಲಿ ಅಡಕವಾದ ಪ್ರತಿಯೊಂದು ವಸ್ತುವಿನ ತಾಂತ್ರಿಕ ಮಹತ್ವವನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.ಕಳಸ ಆತ್ಮದ ಆರಾಧನೆ ಸಂಕೇತ.ಅಲ್ಲಿ ಬಳಸಲಾಗುವ ಕನ್ನಡಿ ಸತ್ಯ ದರ್ಶನದ ಸಾಧನ. ಮೆಕ್ಸಿಕೋದ ಅಜ್ಟೆಕ್ ಜನಾಂಗದಲ್ಲಿ ಈ ರೀತಿಯ ಕನ್ನಡಿಯ ಬಳಕೆ ಇತ್ತು ಎನ್ನುತ್ತಾರೆ.ಕಳಸದ ಬೆನ್ನೆಲುಬಾದ ಚಿಬ್ಬು ಭೂಮಿ ಮತ್ತು ಸ್ವರ್ಗವನ್ನು ಬೆಸೆಯುವ ಬ್ರಹ್ಮಾಂಡ ಶಕ್ತಿಯನ್ನು ಕಳಸಕ್ಕೆ ಆಕರ್ಷಿಸುವ ವಿಶ್ವ ಅಕ್ಷದ ಪ್ರತಿನಿಧಿ.ನಾಗರ ಹೆಡೆ ಜನನ ಮರಣ ಮತ್ತು ಪುನರ್ ಸೃಷ್ಟಿಯ ಚಕ್ರದ ಸಂಕೇತ,ಕೀರ್ತಿಮುಖ ಭಾರತದ ಮೂಲ ಮತ್ತು ವೈದಿಕ ಪೂರ್ವ ದೇವತೆ, ಕೊಡೆ ಆಧ್ಯಾತ್ಮಿಕ ಸಾರ್ವಭೌಮತೆಯ ಪ್ರತೀಕವಾಗಿದ್ದು ಭೂಮಿ ಮತ್ತು ಸ್ವರ್ಗವನ್ನು ಸಂಪರ್ಕಿಸುವ ಸಾಧನ ಎಂದು ಮಾನವಶಾಸ್ತ್ರ, ವಿಜ್ಞಾನ ಮತ್ತು ತಾಂತ್ರಿಕ ವಿದ್ಯೆಗಳ ಹಿನ್ನೆಲೆಯಲ್ಲಿ ವಿವರಿಸುತ್ತಾರೆ.ಕಳಸದ ಗಿಂಡಿಯ S ಆಕಾರದ ಕೊಳವೆಯು ದೇವಿಯ ದೈವಿಕ ಉಸಿರಾಟದ ಮಾಧ್ಯಮವಾಗಿದ್ದು ಒಟ್ಟಾರೆಯಾಗಿ ಕಳಸದ ಮೂಲಕ ದೈವಕ್ಕೆ ಜೀವ ತುಂಬುವ ಗುನಗ ಒಬ್ಬ ಆದಿಮ ವಿಜ್ಞಾನಿ ಎಂಬ ತೀರ್ಮಾನಕ್ಕೆ ಲೇಖಕರು ಬರುತ್ತಾರೆ. ಕಳಸವನ್ನು ಗುನಗರು ತಲೆಯvಮೇಲೆ ಹೊತ್ತು ಸಾಗುವ ಕ್ರಿಯೆ ಸಾಮಾನ್ಯವಾದುದಲ್ಲ.ಅದು ಜೀವನvಮರಣದ ಪ್ರಶ್ನೆ.ಏನಾದರೂ ಅವಘಡಗಳು ಸಂಭವಿಸಿದರೆ ಪ್ರಾಣತ್ಯಾಗಕ್ಕೆ ಸೊಂಟದಲ್ಲಿಯೇ ಕತ್ತಿಯನ್ನು ಇಟ್ಟುಕೊಂಡಿರುತ್ತಾರೆ.ಹಬ್ಬದ ಆರಂಭದಲ್ಲಿಯೇ ಗುನಗರ ಹೆಂಡತಿ ತನ್ನ ಮುತ್ತೈದೆಯ ಸಂಕೇತವಾದ ಮೂಗುತಿಯನ್ನು ಕಳಸದ ಗದ್ದುಗೆಯ ಮೇಲೆ ಇಡುವ ಸಂಗತಿಯತ್ತ ಗಮನ ಸೆಳೆಯುತ್ತಾರೆ.ಕಳಸದ ಸಿದ್ಧತೆ ವೈದಿಕ ಸಂಪ್ರದಾಯಕ್ಕಿಂತ ಭಿನ್ನ ಎಂಬುದರತ್ತ ಅವರು ಗಮನಸೆಳೆಯುತ್ತಾರೆ. ಕಳಸ ಸಿದ್ದಮಾಡುವುದು ಎಂದರೆ ದೈವದ ಪ್ರಾಣ ಪ್ರತಿಷ್ಠೆ ಎಂದು ಹೇಳುವುದರ ಮೂಲಕ ದೈವ ಎಂಬುದು ಸ್ಥಾವರವಲ್ಲ ಅದು ಜಂಗಮ ಸ್ವರೂಪಿ,ಅದು ಜೀವಂತ ದೇವತೆ ಎಂದು ಪ್ರತಿಪಾದಿಸುತ್ತಾರೆ. ಬಂಡಿಹಬ್ಬದ ಸಂದರ್ಭದಲ್ಲಿ ಕಳಸದ ದೇವಾಲಯ,ಗ್ರಾಮದೇವತೆ ದೇವಾಲಯ,ಮತ್ತು ಆಡುಕಟ್ಟೆಗಳು ಪ್ರಮುಖವಾಗಿದ್ದು ಇಲ್ಲಿ ನಡೆಯುವ ಹೆಚ್ಚಿನ ವಿಧಿ - ವಿಧಾನಗಳು ಅನಾದಿ ಕಾಲದ ಬುಡಕಟ್ಟು ಜನಾಂಗಗಳ ತಾಂತ್ರಿಕ ವಿದ್ಯೆಗಳು ಎಂದು ಗುರುತಿಸುತ್ತಾರೆ.ಹಬ್ಬದ ಸಂದರ್ಭದ ಎಲ್ಲ ಆಚರಣೆಗಳು ಅದು ಕೃಷಿ ಸಂಬಂಧಿತ ವಿಧಿಗಳು,ಮುಖವಾಡ ಕುಣಿತ, ಹಗರಣ- ಮುಂತಾದವು ಸಾಂಕೇತಿಕ ತಾಂತ್ರಿಕತೆಗಳಾಗಿವೆ ಎನ್ನುತ್ತಾರೆ.ಈ ಸಾಂಕೇತಿಕ ಆಚರಣೆಗಳ ಉದ್ದೇಶ ಪ್ರಕೃತಿಯ ಮೇಲೆ ಪ್ರಭಾವ ಬೀರಿ ಉತ್ತಮ ಮಳೆ ಬೆಳೆಯನ್ನು ಪಡೆಯುವುದರ ಮೂಲಕ ಸಮೃದ್ಧತೆಯನ್ನು ಹೊಂದುವುದೇ ಆಗಿದೆ. ಬಂಡಿಹಬ್ಬದ ಸಂದರ್ಭದಲ್ಲಿ ದೇವರನ್ನು ಕರೆಯುವ ಸಂಪ್ರದಾಯ ವಿಶೇಷವಾಗಿದೆ. ಈ ಸಂದರ್ಭದಲ್ಲಿ ಮೇಲ್ಮುಖವಾಗಿ ಮತ್ತು ಕೆಳಮುಖವಾಗಿ ಸೆಸೆ ಎಸೆಯುವ ಎರಡು ವಿಭಿನ್ನ ಕ್ರಿಯೆಗಳತ್ತ ಗಮನಸೆಳೆಯುತ್ತಾರೆ.ಸಾಮಿಮಕ್ಕಳ ಕುಣಿತ ನಿಸರ್ಗವನ್ನು ಒಲಿಸಿಕೊಳ್ಳಲು ಸಂವಹನ ನಡೆಸುವ ಜಗತ್ತಿನ ಅತಿ ಪ್ರಾಚೀನ ಕುಣಿತದೊಂದಿಗೆ ಹೊಂದಿರುವ ಸಾಮ್ಯತೆಯನ್ನು ಗುರುತಿಸುತ್ತಾರೆ.ಅನಂತರ ಮಧ್ಯರಾತ್ರಿ ನಡೆಯುವ ಮಾಸ್ತಿ ದಹನ ಆತ್ಮಾಹುತಿಯ ಪ್ರಯತ್ನವಲ್ಲ, ಗ್ರಾಮದ ಒಳಿತಿಗಾಗಿ ದೇವತೆಯಾಗಿ ಪರಿವರ್ತಿತವಾಗುವ ಪ್ರಕ್ರಿಯೆ ಎಂಬ ಪ್ರಾಚೀನ ನಂಬಿಕೆಯನ್ನು ನೆನಪಿಸುತ್ತಾರೆ. ಹನ್ನೆರಡು ದಿನಗಳವರೆಗೆ ನಡೆಯುವ ಬಂಡಿಹಬ್ಬ ಸಂಪೂರ್ಣವಾಗಿ ಜಾನಪದೀಯವಾಗಿದ್ದು,ಸಾಂಕೇತಿಕ ಮರಣದಿಂದ ಆರಂಭವಾಗಿ,ಸೂತಕದ ರೀತಿಯಲ್ಲಿ ಅನುಷ್ಠಾನಗೊಂಡು ಮರು ಸೃಷ್ಟಿಯಲ್ಲಿ ಅಂತ್ಯಗೊಳ್ಳುವ ವಿಶಿಷ್ಠ ಹಬ್ಬ.ಪುನರಪಿ ಜನನಂ ಪುನರಪಿ ಮರಣಂ ಎಂಬುದನ್ನು ನೆನಪಿಸುವ ಜನನ ಮರಣಗಳ ಆವರ್ತನದಲ್ಲಿ ನಿಸರ್ಗ ಜೀವನ ಮತ್ತು ಮಾನವ ಜೀವನ ಎಂಬ ಎರಡು ಚಕ್ರಗಳನ್ನು ಬೆಸೆಯುವ ಬಂಡಿಯಾಗಿ ಬಂಡಿ ಇಲ್ಲದಿದ್ದರೂ ಬಂಡಿಹಬ್ಬವಾಗಿ ಚಲಿಸುತ್ತಲೇ ಇದೆ ಎಂದು ಹೇಳುತ್ತಾರೆ.ಬಂಡಿಹಬ್ಬ ಅವಲ ಹಬ್ಬದಿಂದ ಪ್ರಾರಂಭವಾಗಿ ತೊಟ್ಟಿಲು ಜಟಗನ ಆವಾರೆಯೊಂದಿಗೆ ಮುಕ್ತಾಯವಾಗುತ್ತದೆ. ಅವಲ ಹಬ್ಬ ಮರಣದ ಸಂಕೇತ.12 ದಿನದ ಬಂಡಿಹಬ್ಬ ಸೂತಕ ಮತ್ತು ಶ್ರಾದ್ಧದ ಸಂಕೇತ, ಅಕ್ಕಿಯ ಹಿಟ್ಟಿನಿಂದ ಶಿಶುವನ್ನು ಮಾಡಿ ತೂಗುವ ತೊಟ್ಟಿಲು ಜಟಗನ ಆವಾರೆ ಮರುಹುಟ್ಟಿನ ಸಂಕೇತ ಒಟ್ಟಿನಲ್ಲಿ ಬಂಡಿಹಬ್ಬದ ಆಚರಣೆ ಸಾವಿನಿಂದ ಹುಟ್ಟಿನ ಕಡೆಗೆ ಸಾಗುವ ಒಂದು ಅಂತ್ಯವಿಲ್ಲದ ಪ್ರಯಾಣ ಎಂಬ ತಾತ್ವಿಕ ತೀರ್ಮಾನಕ್ಕೆ ಬರುತ್ತಾರೆ. ಎರಡನೆಯ ಭಾಗ ಈ ಕೃತಿಯ ಜೀವಾಳ.ಬಂಡಿಹಬ್ಬದ ಎಲ್ಲ ಆಚರಣೆಗಳನ್ನು ಅವರು ವಿಶ್ಲೇಷಣೆ ಒಳಪಡಿಸುತ್ತಾರೆ.ಹೀಗೆ ವಿಶ್ಲೇಷಣೆಗೆ ಒಳಪಡಿಸುವಾಗ ಮುನ್ನುಡಿಯಲ್ಲಿ ಶಿವಾನಂದ ಕೆಳಗಿನಮನಿಯವವರು ಗುರುತಿಸಿದಂತೆ "ದೇಶೀ ಪರಂಪರೆಯ ಪರಿಕರಗಳಿಂದಲೇ ಅಧ್ಯಯನ ಮಾಡಬೇಕೆಂಬುದರ ಬಗ್ಗೆ ಆಲೋಚನೆಗಳನ್ನು ರೂಪಿಸಿಕೊಳ್ಳುತ್ತಾ ಹೋಗುತ್ತಾರೆ.ಇಷ್ಟೇ ಅಲ್ಲ, ಒಂದು ಕೃತಿಯಿಂದ ಮತ್ತೊಂದು ಕೃತಿಗೆ ಚಿಂತನೆಯ ಪರಿಕರಗಳನ್ನು, ತಾತ್ವಿಕತೆಯನ್ನು ಪರಾಮರ್ಶಿಸುತ್ತ ಜಾನಪದ, ಇತಿಹಾಸ, ಚರಿತ್ರೆ, ಪುರಾಣಗಳಿಂದ ರೂಪಿತವಾಗುವ ಎಲ್ಲಾ ಬಗೆಯ ಆಲೋಚನೆಗಳನ್ನು ಬಳಸಿಕೊಳ್ಳುತ್ತಾ ಒಂದು ವಿಶಿಷ್ಟವಾದ ಮಾರ್ಗವನ್ನು ಅನ್ವೇಷಿಸುತ್ತಾರೆ." ಆದ್ದರಿಂದಲೇ ಇದು ಮಹತ್ವದ ಕೃತಿಯಾಗಿ ಕಾಣುತ್ತದೆ.ಭೂಮಿ ತಾಯಿ ಕೃಷಿ ದೇವತೆ.ನಾಗರಿಕತೆ ರೂಪಗೊಳ್ಳುವುದಕ್ಕಿಂತ ಎಷ್ಟೋ ಮೊದಲು ಭೂತಾಯಿಯ ಆರಾಧನೆ ಇತ್ತು.ಜಗತ್ತಿನ ಅತ್ಯಂತ ಪ್ರಾಚೀನ ನಾಗರಿಕತೆಗಳ ಎಂದು ಪರಿಗಣಿಸುವ ಗ್ರೀಕ್,ಮೆಸಪೋಟೋಮಿಯ ಗಳಲ್ಲಿ ಭೂಮಿಯನ್ನು ತಾಯಿ ಎಂದು ಪರಿಗಣಿಸುತ್ತಿದ್ದರು ಮತ್ತು ಅಲ್ಲೆಲ್ಲ ಆರಾಧನೆಯ ಸಂದರ್ಭದಲ್ಲಿ ರಕ್ತ ತರ್ಪಣ ನಡೆಯುತಿತ್ತು.ಸಧ್ಯ ಆ ನಾಗರಿಕತೆಗಳು ಕಣ್ಮರೆಯಾಗಿ ಆಚರಣೆಗಳು ನಿಂತು ಹೋದರೂ ನಮ್ಮಲ್ಲಿ ಇನ್ನೂ ಉಳಿದುಕೊಂಡಿರುವುದನ್ನು ವಿಘ್ನೇಶ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.ಬ್ರಾಹ್ಮಣೇತರರು ಈ ಹಬ್ಬದ ರೂವಾರಿಗಳು ಮತ್ತು ಆಚರಣೆಗಳೆಲ್ಲ ಅವೈದಿಕವಾದವುಗಳು.ಉತ್ತರಕನ್ನಡದ ಕರಾವಳಿಯುದ್ದಕ್ಕೂ ಈ ಹಬ್ಬದ ಆಚರಣೆ ಇದೆ.ಆದರೆ ಭೌಗೋಳಿಕವಾಗಿ ಆಚರಣೆಯ ಸ್ವರೂಪದಲ್ಲಿ ಬದಲಾವಣೆಗಳನ್ನು ಗುರುತಿಸಿದ್ದಾರೆ.ಕಾರವಾರದಿಂದ ಮಿರ್ಜಾನ್ ವರೆಗೆ ಕಳಸದೊಂದಿಗೆ ಹುಯಿಲು ಕಂಬ ಸುತ್ತಿದರೆ ಮಿರ್ಜಾನ್ ನಿಂದ ಮುಂದೆ ಕೆಂಡ ಹಾಯುವ ಸಂಪ್ರದಾಯವಿದೆ.ಆಶ್ಚರ್ಯವೆಂದರೆ ಮಿರ್ಜಾನ್ ನಲ್ಲಿ ಎರಡೂ ಆಚರಣೆಗಳಿರುವುದನ್ನು ಗುರುತಿಸಿದ್ದಾರೆ.ಗೋಕರ್ಣ ಭಾಗದ ಕೆಲವು ಕಡೆ ಇಂದಿಗೂ ಬಂಡಿ ಎಳೆಯುವ ರೂಢಿ ಇದೆ ಎಂದು ಹೇಳುತ್ತಾರೆ.ಗ್ರಾಮದೇವತೆ ರಾಮಾಯಣ ಕಾಲಕ್ಕಿಂತಲೂ ಪ್ರಾಚೀನ ಎಂದು ಗುರುತಿಸುವ ಲೇಖಕರು ಜಗತ್ತಿನಾದ್ಯಂತ ಇವುಗಳ ಅಸ್ತಿತ್ವವನ್ನು ಸಾಧಿಸುತ್ತಾರೆ.ಭೂಮಿತಾಯಿ ಗ್ರಾಮದೇವತೆಯಾದರೆ ಪೂರ್ವಜರ ಆತ್ಮಗಳು ಪರಿವಾರ ದೇವರುಗಳಾಗುವ ವಿಸ್ಮಯವನ್ನು ಅವರು ಗುರುತಿಸಿದ್ದಾರೆ.ಪರಿವಾರ ದೇವರುಗಳಲ್ಲಿರುವ ಬೀರ ಅಂದರೆ ವೀರ ಬರಿ ಯುದ್ಧವೀರರಲ್ಲ,ಗ್ರಾಮದ ಒಳಿತಿಗಾಗಿ ಪ್ರಾಣತ್ಯಾಗ ಮಾಡಿದವರಾಗಿರಬಹುದು,ಹಾಗೆ ಸ್ತ್ರೀ ಶಕ್ತಿಗಳಾದ ಮಾಸ್ತಿ ಕೇವಲ ಪತಿಗಾಗಿ ಸಹಗಮನ ಮಾಡಿದವಳಲ್ಲ,ಊರಿನ ಒಳಿತಿಗಾಗಿ ಪ್ರಾಣತ್ಯಾಗ ಮಾಡಿದ ಹೆಣ್ಣು ಆಗಿರಬಹುದು. ಅಂತಹ ಆತ್ಮಗಳ ಆರಾಧನೆ ಜನಪದರ ನಂಬಿಕೆಯನ್ನೇ ಅವಲಂಬಿಸಿದೆ ಎಂದು ಅವರು ಹೇಳುತ್ತಾರೆ.ಬೆಳೆ ಬೇಕೆಂದರೆ ನಾವು ಅದನ್ನು ದೇವರಿಗೆ ಅಭಿನಯಿಸಿ ತೋರಿಸಬೇಕು ಆಗ ಪ್ರಕೃತಿ ಅದನ್ನು ಅನುಕರಿಸುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಬಂಡಿಹಬ್ಬ ರೂಪಗೊಂಡಿದೆ ಎಂಬ ಅಭಿಪ್ರಾಯ ಅವರದ್ದು. ಬಂಡಿಹಬ್ಬದ ಸಂದರ್ಭದಲ್ಲಿ ಶುದ್ಧ ಅಕ್ಕಿಯನ್ನು ಅಕ್ಷತೆಯಾಗಿ ಬಳಸುತ್ತಾರೆ.ಶ್ರಾದ್ಧ ಮತ್ತು ಸೂತಕದ ಸಂದರ್ಭದಲ್ಲಿಯೂ ಬಿಳಿ ಅಕ್ಕಿಯೇ ಅಕ್ಷತೆ.ಇಲ್ಲಿ ಶಾಲಿವಾಹನನ ಒಂದು ದಂತಕತೆಯನ್ನು ಉಲ್ಲೇಖಿಸಿ ಬಂಡಿಹಬ್ಬದ ಆಚರಣೆಗೆ ಅವನೇ ಮೂಲಕಾರಣವಾಗಿರಬೇಕು ಎಂದು ಪ್ರತಿಪಾದಿಸುತ್ತಾರೆ. ಬಂಡಿ ಹಬ್ಬವನ್ನು ದಕ್ಷಿಣ ಭಾರತದುದ್ದಕ್ಕೂ ಆಚರಿಸಲಾಗುತ್ತದೆ.ಆದ್ದರಿಂದ ದ್ರಾವಿಡ ಜನಪದ ಸಂಸ್ಕೃತಿಯ ಅಂಗವಾಗಿ ಇದು ರೂಪುಗೊಂಡಿರುವ ಸಾಧ್ಯತೆಯತ್ತ ಗಮನಸೆಳೆಯುತ್ತಾರೆ.ಬಲಿಮಕ್ಕಳು,ರಕ್ತತರ್ಪಣ ಮುಂತಾದವುಗಳು ಬಂಡಿಹಬ್ಬದ ಸಂದರ್ಭದ ನರಬಲಿಯ ಸೂಚನೆಗಳು ಎಂಬುದನ್ನು ಆಧಾರ ಸಹಿತ ಅವರು ನಿರೂಪಿಸುತ್ತಾರೆ.ಬಿಣಗಾ,ಅಲಗೇರಿ,ಶಿರಗುಂಜಿಗಳಲ್ಲಿ ಇಂದಿಗೂ ಸಾಂಕೇತಿಕ ರಕ್ತ ಅರ್ಪಣೆಯ ಪದ್ಧತಿಯಿದೆ ಎಂದು ಹೇಳುವ ಅವರು ಹಿರೇಗುತ್ತಿಯಲ್ಲಿ ಮುಂಡದಿಂದ ಬೇರ್ಪಡಿಸಿದ ಮೂರು ತಲೆಗಳನ್ನು ಒಲೆಯ ಗುಂಡಿನ ಆಕಾರದಲ್ಲಿಟ್ಟು ಉಪಾರ ಬೇಯಿಸಲಾಗುತ್ತಿತ್ತು.ಒಂದು ವರ್ಷ ರುಂಡ ಮುಂಡಗಳು ಅದಲು ಬದಲಾಗಿ ಅನಾಹುತ ಸಂಭವಿಸಿತು. ಅಂದಿನಿಂದ ನರಬಲಿಯನ್ನು ನಿಲ್ಲಿಸಲಾಯಿತು ಎಂಬ ಸಿಲ್ವಾ ಅವರ ಉಲ್ಲೇಖವನ್ನು ಉಲ್ಲೇಖಿಸುತ್ತಾರೆ.ಕಾಣಕೋಣದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಇಂದಿಗೂ ಈ ಪದ್ಧತಿ ಇರುವದರತ್ತ ಗಮನ ಸೆಳೆಯುತ್ತಾರೆ.ಬಲಿಮಕ್ಕಳು ನರಬಲಿಯ ಪಳೆಯುಳಿಕೆ ಆಗಿರಬಹುದು ಎಂಬ ಊಹೆ ಅವರದ್ದು.ಬಂಡಿ ಹಬ್ಬ ಅಪ್ಪಟ ಮಣ್ಣಿನ ಮಕ್ಕಳ ಹಬ್ಬ ವಾಗಿರುವುದರಿಂದ ಇಲ್ಲಿ ಬ್ರಾಹ್ಮಣರ ಪಾತ್ರ ಗೌಣವಾಗಿದೆ.ಆದರೆ ಉತ್ತರಕನ್ನಡದ ಕರಾವಳಿಯ ಬಂಡಿ ಹಬ್ಬದಲ್ಲಿ ಬ್ರಾಹ್ಮಣರಿಗೂ ಗೌರವ ಸ್ಥಾನ ಕಲ್ಪಿಸಿರುವದರತ್ತ ಗಮನ ಸೆಳೆಯುತ್ತಾರೆ.ಹೊನ್ನಾವರದ ಅಂಶೊಳ್ಳಿಯಲ್ಲಿ ಬ್ರಾಹ್ಮಣರೇ ಕಳಸ ಹೊರುತ್ತಾರೆ.ಆದರೆ ಕಳಸ ತಯಾರಿಸಲು ಕೆಕ್ಕಾರ ಗ್ರಾಮದ ಗುನಗರೇ ಹೋಗಬೇಕು.ಅಂಕೋಲೆಯಲ್ಲಿ ಗುನಗರು ಮತ್ತು ಬ್ರಾಹ್ಮಣರ ನಡುವಿನ ಹೊಂದಾಣಿಕೆ ಸಾಮಾಜಿಕ ಸಾಮರಸ್ಯದ ಅದ್ಭುತ ಉದಾಹರಣೆ.ಹಾಗೆ ನೋಡಿದರೆ ಬಂಡಿ ಹಬ್ಬವೇ ಸಾಮರಸ್ಯ ಪ್ರತೀಕ.ಅಲ್ಲಿ ಎಲ್ಲ ಸಮಾಜದವರು ಒಂದಲ್ಲ ಒಂದು ರೀತಿಯಲ್ಲಿ ತೊಡಗಿ ಕೊಳ್ಳುತ್ತಾರೆ.ಕಳಸದ ಮೆರವಣೆಗೆಯ ಸಂದರ್ಭದಲ್ಲಿ ಆಗೇರರ ಪಂಚವಾದ್ಯ,ವಾಜಂತ್ರಿಗಳ ಸಾಂಪ್ರದಾಯಿಕ ವಾದ್ಯ ಇರಲೇ ಬೇಕು.ಬೋವಿಗಳು ದೀವಟಿಗೆ ಹಿಡಿದರೆ,ಗೌಡರು ಬಾವುಟಗಳನ್ನು ಹಿಡಿಯುತ್ತಾರೆ. ಉಳಿದ ಸಮಾಜದವರು ಕಟ್ಟಿಗೆದಾರರಾದರೆ ಗುನಗರು ಕಳಸ ಹೊತ್ತು ಕೇಂದ್ರಬಿಂದುವಾಗುತ್ತಾರೆ.ಒಂದು ಕಾಲಘಟ್ಟದಲ್ಲಿ ಗುನಗರೇ ಈ ಮಣ್ಣಿನ ಅಧಿಕೃತ ಪುರೋಹಿತ ವರ್ಗದವರಾಗಿದ್ದರು ಎಂದು ಹೇಳುವ ಲೇಖಕರು ಪರಿಶಿಷ್ಟ ವರ್ಗದವರನ್ನು ಹೊರತುಪಡಿಸಿ ಉಳಿದ ಶೂದ್ರ ವರ್ಗದ ಶ್ರಾದ್ಧ ಕ್ರಿಯೆಗಳನ್ನು ಗುನಗರೇ ನೆರವೇರಿಸುತ್ತಿದ್ದರೆಂಬ ಗೆಜೆಟ್ಟಿನ ಉಲ್ಲೇಖ ನೀಡುತ್ತಾರೆ.ಗ್ರಾಮದೇವತೆಗಳಿಗೆ ಪ್ರಾಣ ಪ್ರತಿಷ್ಠಾಪನೆಯೂ ಇವರಿಂದಲೇ ನಡೆಯುತ್ತಿತ್ತು. ಬಂಡಿಹಬ್ಬದ ಸಂದರ್ಭದಲ್ಲಿ ಅವರ ಕಠಿಣ ವ್ರತಾಚರಣೆಗಳು ಭಯ ಮತ್ತು ಕುತೂಹಲವನ್ನು ಉಂಟು ಮಾಡುತ್ತವೆ ಎನ್ನುತ್ತಾರೆ.ಬಂಡಿಹಬ್ಬದ ಸಂದರ್ಭದಲ್ಲಿ ಮೂಕ ಗುನಗರಿಗೆ ಭಾರ ಬಂದಾಗ ಅವರು ಸ್ಪಷ್ಟವಾಗಿ ಮಾತನಾಡಿದ ಪ್ರಸಂಗವನ್ನು ಉಲ್ಲೇಖಿಸುವಾಗ ಮೈ ರೋಮಾಂಚನವಾಗುತ್ತದೆ. ಬಂಡಿ ಹಬ್ಬ ಬರಿ ಹಬ್ಬವಲ್ಲ,ಅದು ಕೃಷಿ ಸಂಸ್ಕೃತಿಯ ಪುನರುತ್ಥಾನದ ಪ್ರಕ್ರಿಯೆ.ಬಂಡಿ ಹಬ್ಬದ ನಂತರ ಬೀಜ ಬಿತ್ತನೆ ಶುರುವಾಗುತ್ತದೆ.ತೊಟ್ಟಿಲು ಜಟಗನ ಹಬ್ಬಕ್ಕೆ ಮಳೆ ಬಂದು ಬೀಜ ಮೊಳಕೆವಡೆಯುತ್ತದೆ.ನಂತರ ತೆನೆ ಬಲಿತಾಗ ಹೊಸತು ಹಬ್ಬ.ಕೊನೆಯಲ್ಲಿ ಬತ್ತ ಬೇಯಿಸಿ ಅವಲಕ್ಕಿ ತಯಾರಿಸಿ ಅವಲ ಹಬ್ಬ. ಅವಲ ಹಬ್ಬ ಮರಣದ ಸಂಕೇತವಾದರೆ ಬಂಡಿ ಹಬ್ಬ ಪಿತೃಗಳನ್ನು ದೈವಗಳನ್ನಾಗಿಸುವ ಹಬ್ಬ,ತೊಟ್ಟಿಲು ಜಟಗನ ಹಬ್ಬ ಹೊಸ ಹುಟ್ಟಿನ ಹಬ್ಬ. ಒಟ್ಟಿನಲ್ಲಿ ಬಂಡಿ ಹಬ್ಬ ಕೇವಲ ಒಂದು ಆಚರಣೆಯಲ್ಲ,ಅದು ನಿಸರ್ಗದ ಚಲನೆಯ ಪ್ರಕ್ರಿಯೆ.ಇಡೀ ಮನುಕುಲದ ವಿಕಾಸ,ನಂಬಿಕೆ ಮತ್ತು ಆದಿಮ ಸಂಸ್ಕೃತಿಯ ಜೀವಂತ ಮ್ಯೂಸಿಯಂ ಎಂದು ಹೇಳುವ ಅವರು ವಿಶ್ವದ ಉಳಿದ ಪ್ರಾಚೀನ ನಾಗರೀಕತೆಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡರೂ ನಮ್ಮಲ್ಲಿ ಅದು ಶಾಶ್ವತವಾಗಿ ಉಳಿದಿದೆ ಮತ್ತು ಉಳಿಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜನಪದೀಯವಾದ ಆಚರಣೆಯೊಂದು ತನ್ನ ಮೂಲಸ್ವರೂಪವನ್ನು ಕಳೆದುಕೊಂಡು ಮೂಲ ಉದ್ದೇಶದಿಂದ ದೂರವಾಗಿ ಕೇವಲ ಯಾಂತ್ರಿಕ ಆಚರಣೆಯಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಅದರ ಮೂಲ ಸ್ವರೂಪ ಮತ್ತು ಉದ್ದೇಶವನ್ನು ಮುಂದಿನ ಜನಾಂಗಕ್ಕೆ ಪರಿಚಯಿಸುವ ವಿಘ್ನೇಶ ಗುನಗಾ ಅವರ ಪ್ರಯತ್ನ ನಿಜಕ್ಕೂ ಅಭಿನಂದನೀಯ. ಈಗಾಗಲೇ ಅಂಕೋಲೆಯ ಶಾಸನೋಕ್ತ ಇತಿಹಾಸವನ್ನು ಶ್ಯಾಮಸುಂದರ ಗೌಡ ಅನಾವರಣಗೊಳಿಸಿದ್ದಾರೆ.ಅಂಕೋಲೆಯ ಸ್ವಾತಂತ್ಯ ಹೋರಾಟದ ಚರಿತ್ರೆಯನ್ನು ಶಾಂತಾರಾಮ ನಾಯಕ,ಹಿಚ್ಕಡ ಅವರು ನಿರೂಪಿಸಿದ್ದಾರೆ.ಅಂಕೋಲೆಯ ನೆಲದಲ್ಲಿ ನಡೆದ ರೈತ ಹೋರಾಟದ ಕತೆಯನ್ನು ವಿಷ್ಣು ನಾಯ್ಕರು ದಾಖಲಿಸಿದ್ದಾರೆ.ಅಂಕೋಲೆಯ ಜಾನಪದ ಸಂಗತಿಗಳನ್ನು ಡಾ.ಎನ್.ಆರ್.ನಾಯಕ ಮತ್ತು ಶಾಂತಿ ನಾಯಕ ದಂಪತಿಗಳು ಹಿಡಿದಿಟ್ಟಿದ್ದಾರೆ.ಆದರೆ ಇದುವರೆಗೆ ಆಚರಣೆಯೊಂದರ ಇತಿಹಾಸ ದಾಖಲಾಗಿರಲಿಲ್ಲ.ಈಗ ವಿಘ್ನೇಶ ಗುನಗಾ ಜಗತ್ತಿನ ಅತ್ಯಂತ ಪ್ರಾಚೀನ ಜಾತ್ರೆಯಾದ ಉತ್ತರ ಕನ್ನಡದ ಬಂಡಿಹಬ್ಬದ ಸಂಪೂರ್ಣ ವೈಶಿಷ್ಟ್ಯಗಳನ್ನು ಆಧಾರಗಳೊಂದಿಗೆ ನಿರೂಪಿಸುವುದರ ಮೂಲಕ ಅಂಕೋಲೆಯ ಸಾಂಸ್ಕೃತಿಕ ಮತ್ತು ದೈವಿಕ ಕ್ಷೇತ್ರದ ಹಿರಿಮೆಯನ್ನು ನಾಡಿಗೆ ಪರಿಚಯಿಸಿದ್ದಾರೆ.ಅವರ ಈ ಕಾರ್ಯ ಹಲವು ತಲೆಮಾರುಗಳಿಗೆ ಮಾರ್ಗದರ್ಶನವಾಗಿದೆ.ಇಲ್ಲಿ ಬಳಸಲಾದ ಚಿತ್ರಗಳು ಬಂಡಿಹಬ್ಬದ ವೈಶಿಷ್ಟ್ಯ ಮತ್ತು ವೈವಿಧ್ಯತೆಗಳನ್ನು ಅನಾವರಣಗೊಳಿಸುವಲ್ಲಿ ಯಶಸ್ವಿಯಾಗಿವೆ.ತಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ಬಂಡಿಹಬ್ಬದ ಮಹತ್ವವನ್ನು ತಿಳಿಯಲು ಪ್ರತಿಯೊಬ್ಬ ಶ್ರದ್ಧಾಳುಗಳು ಓದಲೇಬೇಕಾದ ಕೃತಿ ಇದು. - ಶ್ರೀಧರ ಬಿ.ನಾಯಕ, ಬೇಲೇಕೇರಿ.

ಸೋಮವಾರ, ಮಾರ್ಚ್ 23, 2026

ಶಾಂತಾರಾಮ ನಾಯಕರ ಸಾಧಕ ಶ್ರೇಷ್ಠ -- ಕೃತಿ ಪರಿಚಯ.

ಸಾತ್ವಿಕತೆಯ ಪ್ರತೀಕದಂತಿರುವ ಶಾಂತಾರಾಮ ನಾಯಕರನ್ನು ನೋಡಿದಾಗಲೆಲ್ಲ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರಿಗೆ ಪ್ರಿಯವಾದ ವೈಷ್ಣವ ಜನತೋ ಭಜನೆ ನೆನಪಾಗುತ್ತದೆ.ಸದ್ಗುಣ ಸಂಪನ್ನ ಸಜ್ಜನರು ಯಾರು ಎಂದರೆ ಅಹಂಕಾರವಿಲ್ಲದೆ, ಸಕಲರನ್ನೂ ಗೌರವಿಸುತ್ತಾ, ಸತ್ಯ ಮತ್ತು ದೃಢ ವೈರಾಗ್ಯವನ್ನು ಅಳವಡಿಸಿಕೊಂಡವನು.ಪರರ ದುಃಖವನ್ನು ಅರಿತು ಅವರ ದುಃಖಕ್ಕೆ ನೆರವಾಗುವವನು,ಲೋಭ-ವಂಚನೆ ಇಲ್ಲದವನು,ಕಾಮ ಮತ್ತು ಕ್ರೋಧಗಳನ್ನು ಗೆದ್ದವನು.ಅಂತಹ ಮಹಾತ್ಮನ ದರ್ಶನದಿಂದಲೇ ಜನ್ಮ ಸಾರ್ಥಕವಾಗುತ್ತದೆ.ಇಲ್ಲಿ ಬರುವ ವೈಷ್ಣವ ಜನ ಎಂಬ ಪದ ಕೇವಲ ವಿಷ್ಣು ಭಕ್ತರಿಗೆ ಮಾತ್ರವಲ್ಲ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡ ಎಲ್ಲರಿಗೂ ಅನ್ವಯವಾಗುತ್ತದೆ.ಶಾಂತಾರಾಮ ನಾಯಕರು ಅಂತಹ ಮಾನವೀಯ ವ್ಯಕ್ತಿತ್ವ.ಯಾರಲ್ಲಿಯೂ ಯಾವುದೇ ಸಂದರ್ಭದಲ್ಲಿಯೂ ದೋಷವನ್ನು ಹುಡುಕದ ಅವರ ಸ್ವಭಾವ ಅವರನ್ನು ಅಜಾತಶತ್ರುವನ್ನಾಗಿಸಿದೆ.ಆರೋಗ್ಯಪೂರ್ಣ ಮನಸ್ಸು ಆರೋಗ್ಯ ಪೂರ್ಣ ದೇಹವನ್ನು ರೂಪಿಸುತ್ತದೆಯಂತೆ.ಅವರು ಇನ್ನಷ್ಟು ಆರೋಗ್ಯವಂತರಾಗಿ ಕಿರಿಯರಿಗೆ ಮಾರ್ಗದರ್ಶನ ನೀಡುತ್ತಾ ಶತಾಯುಷಿಗಳಾಗಲಿ, ಆ ಸಂದರ್ಭದ ಆಚರಣೆಯಲ್ಲಿ ನಾವೆಲ್ಲ ಪಾಲ್ಗೊಳ್ಳುವ ಭಾಗ್ಯ ಸಿಗಲಿ ಎಂದು ಹಾರೈಸುತ್ತಾ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರುತ್ತೇನೆ. ಈ ಶುಭ ಸಂದರ್ಭದಲ್ಲಿ ಅವರು ರಚಿಸಿದ ಕೃತಿಯೊಂದು ಬಿಡುಗಡೆಯಾಗುತ್ತಿರುವುದು ಅರ್ಥಪೂರ್ಣ.ಶಾಂತಾರಾಮ ನಾಯಕರು ಒಂದರ್ಥದಲ್ಲಿ ಜನ ಸಾಮಾನ್ಯರ ಲೇಖಕ.ಇದುವರೆಗೆ ಅವರು ಪ್ರಕಟಿಸಿದ ಮೂವತ್ತೊಂದು ಕೃತಿಗಳಲ್ಲಿ ನಾವು ಹೆಚ್ಚಾಗಿ ಕಾಣುವುದು ಸ್ಥಳೀಯವಾದ ಜನಸಾಮಾನ್ಯರ ಸಂವೇದನೆಗಳನ್ನು.ಸ್ಥಳೀಯ ಇತಿಹಾಸವನ್ನು ಅಧ್ಯಯನ ಮಾಡುವ ಸಂದರ್ಭದಲ್ಲಿ ಅವರ ಕೃತಿಗಳನ್ನು ಬಿಟ್ಟು ಅಧ್ಯಯನ ಮಾಡಲು ಸಾಧ್ಯವೇ ಆಗುವುದಿಲ್ಲ.ಸ್ವಾತಂತ್ರ್ಯ ಚಳುವಳಿಯ ಕುರಿತು ಅವರು ಬರೆದ ಏಳೂ ಕೃತಿಗಳು ಅಧಿಕೃತ ದಾಖಲೆಗಳೇ ಆಗಿವೆ.ಇನ್ನು ಜೀವನ ಚರಿತ್ರೆಗಳ ವಿಷಯಕ್ಕೆ ಬಂದರೆ ಅವು ಕೂಡಾ ಈ ಪ್ರದೇಶದ ಅಸಾಮಾನ್ಯರ ಕಥೆಗಳೇ ಆಗಿವೆ. ಶಾಂತಾರಾಮ ನಾಯಕರು ಯಾರೋ ನಾಲ್ಕು ಜನರ ಜೀವನ ಚರಿತ್ರೆಯನ್ನು ಬರೆದವರಲ್ಲ,ಇವರು ಜೀವನ ಚರಿತ್ರೆ ಬರೆದವರೆಲ್ಲ ಮಹಾನ್ ಸಾಧಕರೇ ಆಗಿದ್ದಾರೆ,ಸಮಾಜಕ್ಕೆ ಮಾದರಿಯಾಗಿ ಮುಂದಿನ ತಲೆಮಾರಿಗೆ ಪ್ರೇರಕರಾಗಿದ್ದಾರೆ.ಎಂ.ಎಚ್.ನಾಯಕ,ವಿ.ವೆ.ತೊರ್ಕೆ ಸ.ಪ.ಗಾಂವಕಾರ,ಬಾಸಗೋಡ ರಾಮ ನಾಯಕ, ದಿನಕರ ದೇಸಾಯಿ, ವಿ.ಎಚ್. ನಾಯಕ ಗೊನೆಹಳ್ಳಿ ಹೀಗೆ ಎಲ್ಲರೂ ಹಲವು ತಲೆಮಾರುಗಳು ನೆನಪಿಸಿಕೊಳ್ಳಲೇ ಬೇಕಾದ ವಿಶಿಷ್ಟರು.ಇವರೆಲ್ಲರ ಸಾಲಿಗೆ ಈಗ ನ್ಯಾಯಮೂರ್ತಿ ಎಸ್.ಆರ್.ನಾಯಕರ ಜೀವನ ಚರಿತ್ರೆ ಸೇರ್ಪಡೆಯಾಗುತ್ತಿದೆ. ಈ ಪುಸ್ತಕದ ಶೀರ್ಷಿಕೆ "ಸಾಧಕ ಶ್ರೇಷ್ಠ". ಈ ಪದವೇ ವಿಶಿಷ್ಠ. ಎಲ್ಲರೂ ಸಾಧನೆ ಮಾಡುತ್ತಾರೆ.ಅವರು ರೈತರಿಗಾಗಿರಬಹುದು,ಸೈನಿಕರಾಗಿ ರಬಹುದು, ಶಿಕ್ಷಕರಾಗಿರಬಹುದು,ಜನಸೇವಕರಾಗಿರಬಹುದು.ಅವರಲ್ಲಿ ಕೆಲವರು ಶ್ರೇಷ್ಠವಾದುದನ್ನು ಸಾಧಿಸಿ ಶ್ರೇಷ್ಠ ಸಾಧಕರು ಎನಿಸಿಕೊಳ್ಳುತ್ತಾರೆ, ಅಂತಹ ಶ್ರೇಷ್ಠ ಸಾಧಕರಲ್ಲಿಯೇ ಇವರು ಶ್ರೇಷ್ಠರು ಎಂಬ ಅರ್ಥವನ್ನು ಇದು ಧ್ವನಿಸುತ್ತದೆ. ಈ ಕೃತಿಯನ್ನು ಅಂಕೋಲಿಗರಲ್ಲಿ ಸ್ವಾಭಿಮಾನವನ್ನು ಬಿತ್ತಿದ ಪ್ರೇಮಾ ತಾಯಿ ಪಿಕಳೆಯವರಿಗೆ ಅರ್ಪಿಸಿರುವದು ಅರ್ಥಪೂರ್ಣವಾಗಿದೆ. ಎಸ್.ಆರ್.ನಾಯಕರ ಮಹೋನ್ನತ ವ್ಯಕ್ತಿತ್ವದ ಅನಾವರಣಕ್ಕೆ ಅವರೂ ಕಾರಣರಾಗಿದ್ದಾರೆ. ಕೃತಿ ಗಾತ್ರದಲ್ಲಿ ಕಿರಿದಾಗಿದ್ದರೂ ಸಮಗ್ರವಾಗಿದೆ.ಒಟ್ಟು ಹನ್ನೊಂದು ಅಧ್ಯಾಯಗಳಲ್ಲಿ ಎಸ್ ಆರ್ ನಾಯಕರ ಬದುಕು,ಹೋರಾಟ,ಸಾಧನೆಗಳನ್ನು ಸ್ಪಷ್ಟವಾಗಿ ಚಿತ್ರಿಸುತ್ತದೆ. ಗಂಗಾವಳಿ ನದಿಯ ಎಡ ದಂಡೆಯ ಮೇಲಿರುವ ಮಾಸ್ಕೇರಿ ಎಂಬ ಊರಿನಲ್ಲಿ ಹುಟ್ಟಿ,ಅಲ್ಲಿಯ ಗಾಂವಟಿ ಶಾಲೆಯಲ್ಲಿ ತನ್ನ ಪ್ರಾರಂಭಿಕ ಶಿಕ್ಷಣವನ್ನು ಪೂರೈಸಿ,ಮುಲ್ಕಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮವಾಗಿ ಪಾಸಾದರೂ ಶಿಕ್ಷಣವನ್ನು ಮುಂದುವರೆಸಲಾಗದೇ ಹೊಟೆಲ್ ಒಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಕನಸುಗಣ್ಣಿನ ಹುಡುಗನೊಬ್ಬ ಮುಂದೆ ರಾಜ್ಯ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಅಸಂಖ್ಯಾತರ ಬದುಕಿನಲ್ಲಿ ಬೆಳಕು ಚೆಲ್ಲುವ ದೀಪಸ್ತಂಭವಾದ ಯಶಸ್ಸಿನ ಕತೆಯನ್ನು ಈ ಕೃತಿ ಒಳಗೊಂಡಿದೆ. ಶಾಂತಾರಾಮ ನಾಯಕರು ಎಸ್.ಆರ್.ನಾಯಕರ ಆತ್ಮೀಯರಲ್ಲಿ ಒಬ್ಬರು.ಅವರ ಬದುಕಿನ ಪ್ರತಿ ವಿವರಗಳನ್ನು,ಕಷ್ಟ- ಬವಣೆಗಳನ್ನೆಲ್ಲ ಬಲ್ಲವರು.ಆದ್ದರಿಂದ ಯಾವುದೇ ಮುಚ್ಚು ಮರೆಯಿಲ್ಲದೇ ಅವರ ಬದುಕಿನ ಚಿತ್ರಣವನ್ನು ನೀಡುತ್ತಾರೆ.ಇದರಿಂದ ಈ ಕೃತಿಗೆ ಅಧಿಕೃತತೆ ಪ್ರಾಪ್ತವಾಗಿದೆ.ಒಬ್ಬ ಸಾಧಕನ ಶ್ರೇಷ್ಠ ವ್ಯಕ್ತಿತ್ವ ನಿರ್ಮಾಣವಾಗಲು ಹಲವರ ಮಾರ್ಗದರ್ಶನ,ನೆರವು ಸಹಕಾರ ಅತ್ಯಗತ್ಯ.ಎಸ್.ಆರ್.ನಾಯಕ ಎಂಬ ವ್ಯಕ್ತಿತ್ವದ ನಿರ್ಮಾಣದಲ್ಲಿ ಜಿ.ಎಚ್.ನಾಯಕ,ಸ.ಪ.ಗಾಂವಕಾರ,ಎಸ್.ವಿ.ಪಿಕಳೆ,ಪ್ರೇಮಾ ಪಿಕಳೆ, ಸುಬ್ಬಣ್ಣ ಮೊದಲಾದವರು ನೀಡಿದ ಸಹಾಯವನ್ನು ಶಾಂತರಾಮರು ನೆನಪಿಸಿಕೊಳ್ಳುತ್ತಾರೆ.ಅವರು ತಮ್ಮ ವೃತ್ತಿ ಬದುಕಿನಲ್ಲಿ ನ್ಯಾಯಪರವಾಗಿ, ಜನಪರವಾಗಿ ಕರ್ತವ್ಯ ನಿರ್ವಹಿಸಲು ದಿವಂಗತ ಗೋಪಾಲಕೃಷ್ಣ ಶೆಟ್ಟಿ,ಎಲ್.ಜಿ.ಹಾವನೂರ ಅವರಂತಹ ಮಹನೀಯರ ಮಾರ್ಗದರ್ಶನ ಕಾರಣ ಎನ್ನುವುದರತ್ತ ಗಮನ ಸೆಳೆಯುತ್ತಾರೆ. ಒಬ್ಬ ವ್ಯಕ್ತಿ ಬವಣೆಗಳ ನಡುವೆಯೂ ಪ್ರಯತ್ನವಾದಿಯಾಗಿ ಉನ್ನತ ಸ್ಥಾನ ಮಾನ ಹೊಂದುವುದು ಒಂದು ಹಂತ.ಹಾಗೆ ಉನ್ನತ ಸ್ಥಾನ ಮಾನ ಪಡೆದ ನಂತರ ಆತ ಪಾಲಿಸಿದ ಮತ್ತು ಪ್ರತಿಪಾದಿಸಿದ ಜೀವನ ಮೌಲ್ಯಗಳು ಯಾವವು ಎಂಬುದು ಇನ್ನೊಂದು ಹಂತ. ಸಾಧನೆಯ ಹಂತದಲ್ಲಿ ತಾನು ಅನುಭವಿಸಿದ ಕಷ್ಟಗಳನ್ನು ನೆನಪಿನಲ್ಲಿಟ್ಟುಕೊಂಡು ನೊಂದವರ ಬದುಕಿಗೆ ಸಾಂತ್ವನ ದೊರಕಿಸುವಂತೆ ಕಾರ್ಯ ನಿರ್ವಹಿಸಿದರೆ ನಿಜಕ್ಕೂ ಅದು ಸಾರ್ಥಕತೆ ಎನಿಸಿಕೊಳ್ಳುತ್ತದೆ.ಈ ದೃಷ್ಟಿಯಿಂದ ನ್ಯಾಯಮೂರ್ತಿ ಎಸ್ ಆರ್ ನಾಯಕರು ಆದರ್ಶ ಪ್ರಾಯರಾಗುತ್ತಾರೆ.ನ್ಯಾಯವಾದಿಯಾಗಿ ಮತ್ತು ನ್ಯಾಯಾಧೀಶರಾದ ನಂತರ ಅವರು ಉನ್ನತ ಜೀವನಾದರ್ಶಗಳನ್ನು ಪಾಲಿಸಿ ಇತರರಿಗೆ ಮಾದರಿಯಾಗಿರುವದನ್ನು ಇಲ್ಲಿ ನೆನಪಿಸಿಕೊಳ್ಳಲಾಗಿದೆ. ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಹೈಕೋರ್ಟಗಳ ನ್ಯಾಯಮೂರ್ತಿಗಳಾಗಿ ಅವರು ನೀಡಿದ ತೀರ್ಪುಗಳು ನ್ಯಾಯಾಪರವೂ ಜನಪರವೂ ಆಗಿ ದಾಖಲೆಯಾಗಿವೆ ಎಂದು ಶಾಂತಾರಾಮ ನಾಯಕರು ಹೇಳುತ್ತಾರೆ.ಧಾರವಾಡ ಮತ್ತು ಕಲ್ಬುರ್ಗಿಗಳ ಹೈಕೋರ್ಟ್ ಪೀಠ ಸ್ಥಾಪನೆಯಲ್ಲಿ ನಾಯಕರ ಶ್ರಮವಿರುವದರತ್ತ ಗಮನ ಸೆಳೆಯುತ್ತಾರೆ.ಛತ್ತಿಸ ಗಡ ರಾಜ್ಯದ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಹೊಸ ರಾಜ್ಯದ ನ್ಯಾಯಾಂಗಕ್ಕೆ ಭದ್ರ ಅಡಿಪಾಯ ಹಾಕಿ ಲೋಕ ಅದಾಲತ್ ಮೂಲಕ ಅಸಂಖ್ಯ ಪ್ರಕರಣಗಳನ್ನು ಬಗೆಹರಿಸಿದ ನಾಯಕರ ಕರ್ತೃತ್ವಶಕ್ತಿಯ ಅಗಾಧತೆಯನ್ನು ಪರಿಚಯ ಮಾಡಿಕೊಡುತ್ತಾರೆ.ನ್ಯಾಯ ತೀರ್ಮಾನದ ಸಂದರ್ಭದಲ್ಲಿ ಸಾಮಾಜಿಕ ಕಲ್ಯಾಣಕ್ಕೆ ಭಂಗ ಬಾರದಂತೆ, ದುರ್ಬಲರಿಗೆ,ಅಶಕ್ತರಿಗೆ,ಅನ್ಯಾಯವಾಗದಂತೆ,ಜಾತಿ,ಧರ್ಮ,ಸ್ಥಾನ-ಮಾನಗಳನ್ನು ಲೆಕ್ಕಿಸದೇ, ಯಾವುದೇ ಭಯ-ಪಕ್ಷಪಾತವಿಲ್ಲದೇ ತೀರ್ಪು ನೀಡಿ ನ್ಯಾಯ ದೇವತೆಯ ಹಾಗೂ ದೈವಿಕ ಸ್ವರೂಪಿಯಾದ ತಾಯಿ ಸರಸ್ವತಿಯ ಪ್ರೀತಿಯ ಮಗ ಎಂದು ಅಭಿನಂದನೆಗೆ ಪಾತ್ರರಾಗಿರುವದು ಅವರ ವ್ಯಕ್ತಿತ್ವದ ಘನತೆಯನ್ನು ಸೂಚಿಸುತ್ತದೆ.ಛತ್ತಿಸಗಡ ರಾಜ್ಯದ ರಾಯಪುರದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಅಸ್ತಿತ್ವವೇ ಅಲುಗಾಡುವ ಸಂದರ್ಭದಲ್ಲಿ ಅದರ ಕುಲಪತಿಯಾಗಿ ತಮ್ಮ ಆಡಳಿತ ಕೌಶಲ್ಯ ಮತ್ತು ಕರ್ತವ್ಯನಿಷ್ಠೆಯಿಂದ ಕಾಯಕಲ್ಪ ನೀಡಿದ ಶ್ರೇಯಸ್ಸು ಎಸ್.ಆರ್.ನಾಯಕರಿಗೆ ಸಲ್ಲುತ್ತದೆ. ನಿವೃತ್ತಿಯ ನಂತರ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಮೊದಲ ಅಧ್ಯಕ್ಷರಾಗಿ ಅವರು ನಿರ್ವಹಿಸಿದ ಪಾತ್ರ ನಿಜಕ್ಕೂ ಸ್ಮರಣೀಯ.ಸರ್ಕಾರದಿಂದ ಮೂಲಭೂತ ಸೌಕರ್ಯಗಳು,ಅಗತ್ಯ ಸಿಬ್ಬಂದಿ ಸಿಗದಿದ್ದರೂ ಶ್ರದ್ಧೆಯಿಂದ ಕಾರ್ಯ ನಿರ್ವಹಿಸಿ,ಮಾನವ ಹಕ್ಕುಗಳ ಆಯೋಗಕ್ಕೆ ಐಡೆಂಟಿಟಿಯನ್ನು ಒದಗಿಸಿದ್ದು ನಾಯಕರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ.ಐದು ವರ್ಷಗಳ ಅವಧಿಯಲ್ಲಿ ಸುಮಾರು 5000 ಮಾನವ ಹಕ್ಕು ಉಲ್ಲಂಘನೆಯ ಪ್ರಕರಣಗಳು,ಅವುಗಳಲ್ಲಿ 900ರಷ್ಟು ಸಾರ್ವತ್ರಿಕ ಮಹತ್ವದ ಪ್ರಕರಣಗಳನ್ನು ಸ್ವಯಂ ಪ್ರೇರಣೆಯಿಂದ ನೋಂದಣಿ ಮಾಡಿಕೊಂಡು ವಿಚಾರಣೆ ನಡೆಸಿದ್ದು ನಾಯಕರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ. ಮಳೆಗಾಲದ ಸಮಯದಲ್ಲಿ ಲಿಂಗನಮಕ್ಕಿ ಅಣೆಕಟ್ಟು ತುಂಬಿ ಕೃತಕ ನೆರೆ ಸೃಷ್ಟಿ ಮಾಡಿದ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಚಂದ್ರಕಾಂತ ಕೊಚರೇಕರ ಅವರ ನೇತ್ರತ್ವದಲ್ಲಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಕೆಯಾದಾಗ ಅದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಶಾಶ್ವತ ಪರಿಹಾರ ಸೂಚಿಸಿದ್ದು ನಾಯಕರ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ.ಇದು ಕೇವಲ ಲಿಂಗನಮಕ್ಕಿಗೆ ಸೀಮಿತವಾಗದೇ ರಾಜ್ಯದ ಎಲ್ಲ ಅಣೆಕಟ್ಟುಗಳಿಗೂ ಅನ್ವಯವಾಗಿರುವದು ನಾಯಕರ ಜನಪರ ಸಾರ್ವತ್ರಿಕ ಧೋರಣೆಯ ಹೆಗ್ಗುರುತಾಗಿದೆ. ಎಸ್.ಆರ್.ನಾಯಕರು ಕೇವಲ ನ್ಯಾಯಮೂರ್ತಿಗಳಾಗಿ ಹೆಸರು ಮಾಡಿದವರಲ್ಲ.ಅವರು ಅತ್ಯುತ್ತಮ ಪ್ರಾಧ್ಯಾಪಕರೂ ಆಗಿದ್ದರು.ಅವರ ಉಪನ್ಯಾಸಗಳಲ್ಲಿ ಸಾಮಾಜಿಕ ಚಿಂತನೆ,ದೇಶದ ಭವಿಷ್ಯದ ಕುರಿತು ಕಾಳಜಿ, ಯುವ ಜನಾಂಗದ ಕುರಿತು ಕಳಕಳಿಗಳನ್ನು ಕಾಣಬಹುದು.ಯುವಕರು ಸಾಹಿತ್ಯ,ಕಲೆ,ವಿಜ್ಞಾನ,ಕಾನೂನು,ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದರೆ ಸಾಲದು ದೇಶದ ನೀತಿ ನಿರೂಪಣೆಯಲ್ಲಿ ಮುಖ್ಯ ಪಾತ್ರವಹಿಸುವ ರಾಜಕೀಯದಲ್ಲಿಯೂ ತೊಡಗಿಕೊಳ್ಳಬೇಕು.ರಾಜಕೀಯದಲ್ಲಿ ಯುವಕರ ಹಿಂಜರಿಕೆ ದೇಶದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬುದು ಅವರ ಖಚಿತ ಅಭಿಪ್ರಾಯ.ಅವರ ಪ್ರೌಢ ವಿಚಾರಗಳು ಕೃತಿರೂಪದಲ್ಲಿ ಪ್ರಕಟಗೊಳ್ಳಬೇಕು ಎಂದು ಶಾಂತಾರಾಮ ನಾಯಕರು ಅಭಿಪ್ರಾಯ ಪಡುತ್ತಾರೆ.ಎಸ್.ಆರ್. ನಾಯಕರಿಗೆ ದೊರೆತ ಗೌರವ ಸನ್ಮಾನಗಳು, ಅವರ ಕುರಿತು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರನ್ನೂ ಸೇರಿಸಿ ಹಲವು ಮಹನೀಯರ ಅಭಿನಂದನಾಪರ ಮಾತುಗಳು ಈ ಕೃತಿಯಲ್ಲಿವೆ.ಇವೆಲ್ಲ ಈ ಕೃತಿಯ ಮಹತ್ವವನ್ನು ಹೆಚ್ಚಿಸಿವೆ. ಶಾಂತಾರಾಮ ನಾಯಕರು ನ್ಯಾಯಮೂರ್ತಿ ಎಸ್.ಆರ್.ನಾಯಕರಿಗೆ ಆತ್ಮೀಯರಾದರೂ ಎಲ್ಲಿಯೂ ಅವರನ್ನು ವಿಜೃಂಭಿಸಿದಂತೆ ಕಂಡು ಬರುವುದಿಲ್ಲ.ಅವರ ವ್ಯಕ್ತಿತ್ವ ಮತ್ತು ಸಾಧನೆಗಳ ಯಥಾವತ್ತಾದ ಚಿತ್ರಣ ಇಲ್ಲಿದೆ. ಅಲ್ಲಲ್ಲಿ ಉಲ್ಲೇಖಿತವಾದ ಮಹನೀಯರ ಮಾತುಗಳು ಈ ವಯಸ್ಸಿನಲ್ಲಿಯೂ ಶಾಂತರಾಮರ ಓದಿನ ವಿಸ್ತಾರವನ್ನು ಪರಿಚಯಿಸುತ್ತವೆ.ಎಂದಿನಂತೆ ಲವಲವಿಕೆಯ ಬರವಣಿಗೆಯ ಶೈಲಿ ಕೃತಿಯನ್ನು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.ಮುನ್ನುಡಿಯಲ್ಲಿ ಡಾ. ರಾಮಕೃಷ್ಣ ಗುಂದಿಯವರು ಹೇಳಿದಂತೆ ಇದು ಶಾಂತಾರಾಮ ನಾಯಕರು ನಿರೂಪಿಸಿದ ಹೊನ್ನ ಹೊತ್ತಿಗೆ.ಶಾಂತಾರಾಮ ನಾಯಕರು ಇಂತಹ ಕೃತಿಯನ್ನು ನಿರೂಪಿಸದಿದ್ದರೆ ಮಹಾಚೇತನವೊಂದು ಮರೆಯಲ್ಲಿಯೇ ಉಳಿದು ಬಿಡುತ್ತಿತ್ತು.ರಾಷ್ಟ್ರಪಿತ ಗಾಂಧಿಜಿಯಂತಹ ದಿವ್ಯ ಚೇತನಗಳನ್ನು ಅಪಮೌಲ್ಯಗೊಳಿಸುತ್ತಿರುವ ವರ್ತಮಾನದ ಸಂದರ್ಭದಲ್ಲಿ ಗಾಂಧಿ ಮಾರ್ಗದಲ್ಲಿಯೇ ಸಾಗಿದ ಎಸ್.ಆರ್.ನಾಯಕರಂತಹ ಚೇತನಗಳನ್ನು ಹೊಸ ತಲೆಮಾರಿಗೆ ಪರಿಚಯಿಸಿ ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸಬೇಕಾದ ಹೊಣೆಗಾರಿಕೆ ಈಗ ಹಿರಿಯರಾದ ನಮ್ಮ ಮೇಲಿದೆ.ಸರ್ಕಾರ ಎಲ್ಲ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಗ್ರಂಥಾಲಯಗಳಿಗೆ ಪುಸ್ತಕ ಖರೀದಿಸಲು ಅನುದಾನ ನೀಡುತ್ತಿದೆ. ಈ ಅನುದಾನದಲ್ಲಿ ಕನಿಷ್ಠ ಶೇ.25 ರಷ್ಟು ಅನುದಾನವನ್ನು ಸ್ಥಳೀಯ ಲೇಖಕರ ಇಂತಹ ಕೃತಿಗಳನ್ನು ಖರೀದಿಸಲು ಅವಕಾಶ ಕಲ್ಪಿಸಿದರೆ ವಿದ್ಯಾರ್ಥಿಗಳು ಸ್ಥಳೀಯ ಸಾಧಕರ ಸಾಧನೆಗಳನ್ನು ಅರಿತುಕೊಂಡು ಅವರಂತೆ ವ್ಯಕ್ತಿತ್ವದ ಮಾದರಿಯೊಂದನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ . -ಶ್ರೀಧರ ಬಿ.ನಾಯಕ,ಬೇಲೇಕೇರಿ

ಮಂಗಳವಾರ, ಮಾರ್ಚ್ 3, 2026

ಡಾ. ರಣಜಿತ ನಾಯ್ಕರ "ಹೃದಯ ತಾರುಣ್ಯ":

ವೈದ್ಯಕೀಯ ಮತ್ತು ತಂತ್ರಜ್ಞಾನವನ್ನು ಕುರಿತ ಅಧ್ಯಯನ ಕೃತಿಗಳನ್ನು ಕನ್ನಡದಂತಹ ಪ್ರಾದೇಶಿಕ ಭಾಷೆಯಲ್ಲಿ ರಚಿಸುವುದು ಕಷ್ಟ ಎಂಬ ಮಾತುಗಳನ್ನು ಕೇಳುತ್ತಲೇ ಇದ್ದೇವೆ.ಆದರೆ ಇಂತಹ ಮಾತುಗಳನ್ನು ಹುಸಿಗೊಳಿಸುವಂತೆ ಹಲವು ವೈದ್ಯರು ಕನ್ನಡದಲ್ಲಿ ಉತ್ತಮ ಮಾಹಿತಿಪೂರ್ಣ ಅನೇಕ ಕೃತಿಗಳನ್ನು ರಚಿಸಿದ್ದಾರೆ.ಡಾ.ಅನುಪಮಾ ನಿರಂಜನ,ಡಾ.ಸಿ.ಆರ್.ಚಂದ್ರಶೇಖರ್,ಡಾ.ಡಿ.ಎಸ್.ಶಿವಪ್ಪ,ಡಾ. ಕರವೀರಪ್ರಭು ಕ್ಯಾಲಕೊಂಡ,ಡಾ.ವಿಜಯಲಕ್ಷ್ಮಿಬಾಳೆಕುಂದ್ರಿ, ಡಾ.ವಸುಂಧರಾ ಭೂಪತಿ, ಡಾ.ನಾ.ಮೊಗಸಾಲೆ,ಡಾ.ಎಚ್.ಎಸ್.ಅನುಪಮಾ,ಡಾ.ಬ್ರಹ್ಮಾನಂದ ನಾಯಕ ಹೀಗೆ ಅನೇಕ ವೈದ್ಯರು ತಮ್ಮ ವೈದ್ಯಕೀಯ ಬರೆಹಗಳ ಮೂಲಕ ಜನಸಾಮಾನ್ಯರನ್ನು ಜಾಗೃತಗೊಳಿಸುವ ಕಾರ್ಯವನ್ನು ಮಾಡುತ್ತಲೇ ಇದ್ದಾರೆ. ಈ ಸಾಲಿನಲ್ಲಿ ನಿಲ್ಲಬಲ್ಲ ಇನ್ನೊಬ್ಬರು ಡಾ. ರಣಜಿತ ಬೀರಣ್ಣ ನಾಯ್ಕ ಕೆಂಚನ್ ಹಿರೇಗುತ್ತಿ. ಕಿರಿಯ ವಯಸ್ಸಿನಲ್ಲಿಯೇ ತಮ್ಮ ವೃತ್ತಿ ಮತ್ತು ಪ್ರವೃತ್ತಿಗಳಲ್ಲಿ ವಿಶಿಷ್ಟ ಸಾಧನೆ ಮಾಡುತ್ತಿರುವ ಈ ಯುವವೈದ್ಯ ಸಧ್ಯ ಬೆಳಗಾವಿಯ ಕೆ.ಎಲ್. ಇ.ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರೋಗಿಗಳನ್ನು ಉಪಚರಿಸುವದು ಅವರ ವೃತ್ತಿಯಾದರೆ ಬರವಣಿಗೆ ಅವರ ಪ್ರವೃತ್ತಿ.ವಿದ್ಯಾರ್ಥಿಯಾಗಿದ್ದಾಗಲೇ ಬರವಣಿಗೆಯಲ್ಲಿ ಆಸಕ್ತಿಯನ್ನು ಹೊಂದಿದ್ದ ಅವರು ವೈದ್ಯರಾದ ಮೇಲೂ ತಮ್ಮ ಪ್ರವೃತ್ತಿಯನ್ನು ಪೋಷಿಸಿ ಬೆಳೆಸುತ್ತಿರುವುದು ಅವರ ಬದ್ಧತೆಗೆ ನಿದರ್ಶನ. ಆರೋಗ್ಯ ಮತ್ತು ವೈದ್ಯಕೀಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಂಟು ಪುಸ್ತಕಗಳನ್ನು ಹೊರತಂದಿರುವ ಡಾ.ರಣಜಿತ ಈಗ “ಹೃದಯ ತಾರುಣ್ಯ” ಎಂಬ ಇನ್ನೊಂದು ಪುಸ್ತಕವನ್ನು ಹೊರತಂದಿದ್ದಾರೆ. ಹೃದಯ ಮನುಷ್ಯನ ದೇಹದ ಬಹು ಮುಖ್ಯ ಅಂಗ. ಮೆದುಳು ಮನುಷ್ಯನ ಆಲೋಚನಾ ಶಕ್ತಿಯನ್ನು ರೂಪಿಸಿದರೆ ಹೃದಯ ಭಾವನೆಗಳನ್ನು ನಿಯಂತ್ರಿಸುತ್ತದೆ. ಮೆದುಳು ತನ್ನ ಕಾರ್ಯಗಳನ್ನು ನಿಲ್ಲಿಸಿದರೂ ಮನುಷ್ಯ ಶವದಂತೆ ಬದುಕಬಲ್ಲ. ಆದರೆ ಹೃದಯ ತನ್ನ ಕಾರ್ಯವನ್ನು ನಿಲ್ಲಿಸಿದರೆ ಮನುಷ್ಯ ಶವವೇ ಆಗುತ್ತಾನೆ. ಆದ್ದರಿಂದ ಹೃದಯವನ್ನು ಕಾಪಾಡಿಕೊಳ್ಳುವ, ಅದರ ಕುರಿತು ಹೆಚ್ಚು ಕಾಳಜಿ ವಹಿಸುವ ಅಗತ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಅಂದರೆ ಕೋವಿಡೋತ್ತರ ಕಾಲಘಟ್ಟದಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ ಸಾವನ್ನಪ್ಪುತ್ತಿರುವ ಯುವಕರ ಸಂಖ್ಯೆ ಹೆಚ್ಚಾಗಿದೆ.ಇದರಿಂದ ಹೃದಯ ಕಾಯಿಲೆ ವಯಸ್ಸಾದವರ ಸಮಸ್ಯೆ ಎಂಬ ಒಂದು ಕಾಲದ ನಂಬಿಕೆ ದೂರವಾಗುತ್ತಿದೆ.ಇಂತಹ ಸಂದರ್ಭದಲ್ಲಿ ಹೊರತಂದಿರುವ ಡಾ. ರಣಜಿತ್ ಇವರ “ಹೃದಯ ತಾರುಣ್ಯ” ಎಂಬ ಕೃತಿ ಯುವಕರಲ್ಲಿ ಹೃದಯದ ಕುರಿತು ಜಾಗೃತಿಯನ್ನು ಉಂಟು ಮಾಡಿ ಹೃದಯದ ತಾರುಣ್ಯವನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ. ಇದನ್ನು ಲೇಖಕರ ಮಾತಿನಲ್ಲಿ ಅವರು ಸ್ಪಷ್ಟವಾಗಿ ಹೇಳುತ್ತಾರೆ. "ಯುವಕರಲ್ಲಿ ಇಂದು "ಮಾಹಿತಿ" ಇದೆ. ಆದರೆ ಅವರಿಗೆ ಅದು “ಅನುಭವ-ಜ್ಞಾನ'ವಾಗಿ ದೊರೆಯುತ್ತಿಲ್ಲ. ಕೇವಲ “ಅಂಕಿ-ಸಂಖ್ಯೆ” ರೂಪದಲ್ಲಿ ಲಭ್ಯವಿವೆ. ಅವರಿಗೆ ಅದನ್ನು "ವಿವರಣೆ” ರೂಪದಲ್ಲಿ ವೈಜ್ಞಾನಿಕ ವಿಶ್ಲೇಷಣೆಯಾಗಿ ನೀಡಬೇಕಾದ ಮಾಧ್ಯಮಗಳು ವೈದ್ಯರು-ಆಸ್ಪತ್ರೆ ಜನರನ್ನು ಭಯ ಭೀತಗೊಳಿಸುತ್ತಿವೆ............ ವೈದ್ಯಕೀಯ ಸಾಹಿತ್ಯ ಜನರಲ್ಲಿ ಅರಿವು ಮೂಡಿಸಿ, ಸಮಸ್ಯೆ ವಿಶ್ಲೇಷಿಸಿ, ಪರಿಹಾರ ಕಂಡುಕೊಳ್ಳಲು ಪ್ರೇರಣೆಯಾಗಬೇಕು.ಆದರಿಂದು ವೈದ್ಯಕೀಯ ಲೇಖನಗಳು ಕೇವಲ “ಜಾಹೀರಾತು” ರೂಪ ಪಡೆಯುತ್ತಿವೆ. ಹಾಗಾಗಿ ಈ ಪುಸ್ತಕವನ್ನು ಬರೆಯಬೇಕಾದ ಅನಿವಾರ್ಯತೆ ಇದೆ.” ಇದು ಪ್ರಾಮಾಣಿಕವಾದ ಅವರ ಹೃದಯದ ಮಾತು. ತಜ್ಞ ಹೃದಯ ವೈದ್ಯರಾದ ಅವರು ಈ ಕೃತಿಯಲ್ಲಿ ಹೃದಯ ಸಂಬಂಧಿ ಅನೇಕ ಸಂಗತಿಗಳನ್ನು ಸರಳವಾಗಿ ವಿವರಿಸುತ್ತಾರೆ. ಒಟ್ಟು 25 ಅಧ್ಯಾಯಗಳನ್ನು ಹೊಂದಿರುವ ಈ ಕೃತಿ ಹೃದಯದ ಕುರಿತು ಜನ ಸಾಮಾನ್ಯರನ್ನು ಶಿಕ್ಷಿತರನ್ನಾಗಿ ಮಾಡುವಲ್ಲಿ ಯಶಸ್ವಿಯಾಗುತ್ತದೆ. ಯುವ ಭಾರತದ ಯುವಕರನ್ನು ಕಾಡುವ ಹೃದ್ರೋಗಗಳು, ಅವುಗಳಿಗೆ ಕಾರಣವಾದ ಆಧುನಿಕ ಜೀವನಶೈಲಿ ಮತ್ತು ಅದರಿಂದ ಸೃಷ್ಟಿಯಾಗುತ್ತಿರುವ ಅಪಾಯಕಾರಿ ಅಂಶಗಳನ್ನು ಅವರು ಇಲ್ಲಿ ಗುರುತಿಸಿದ್ದಾರೆ.ಶ್ರಮರಹಿತ ಜೀವನ, ಮಾನಸಿಕ ಒತ್ತಡ,ಕೆಲಸದ ಒತ್ತಡ, ಇದರಿಂದ ಸೃಷ್ಟಿಯಾದ ಒಂಟಿತನ, ಬದಲಾಗುತ್ತಿರುವ ನಮ್ಮ ಆಹಾರ ಪದ್ಧತಿ ಇವೆಲ್ಲವೂ ಹೇಗೆ ಹೃದಯದ ಅನಾರೋಗ್ಯಕ್ಕೆ ಕಾರಣ ಎಂಬುದನ್ನು ವಿವರಿಸಿದ್ದಾರೆ. ಪರಿಸರ ಮಾಲಿನ್ಯವು ನಮ್ಮ ಹೃದಯವನ್ನೂ ಸೇರಿ ಹಲವು ದೈಹಿಕ ರೋಗಗಳಿಗೆ ಕಾರಣವಾಗಿರುವುದರಿಂದ ಸ್ವಚ್ಛ ಪರಿಸರದತ್ತ ಗಮನ ಸೆಳೆಯುತ್ತಾರೆ.ಹೃದಯವನ್ನು ಆರೋಗ್ಯಪೂರ್ಣವಾಗಿಟ್ಟುಕೊಳ್ಳಲು ಅಗತ್ಯವಾದ ನಿರ್ದೇಶನಗಳು ಈ ಕೃತಿಯಲ್ಲಿವೆ.ಹೃದಯದ ಆರೋಗ್ಯಕ್ಕೆ ದೈಹಿಕ ಕ್ರಿಯಾಶೀಲತೆಯೇ ಮುಖ್ಯವೇ ಹೊರತು ಜಿಮ್ ಗೆ ಹೋಗಿ ದೇಹ ದಂಡಿಸುವುದಲ್ಲ ಎಂಬುದರಿಂದ ಹಿಡಿದು ಹೃದ್ರೋಗಕ್ಕೆ ಅಗತ್ಯವಾದ ಆರೈಕೆ ಮತ್ತು ಚಿಕಿತ್ಸಾ ಕ್ರಮ,ಅನುಸರಿಸ ಬೇಕಾದ ವಿಧಾನ,ಔಷಧಗಳ ಕಿರುಪರಿಚಯವನ್ನೂ ಈ ಕೃತಿ ಒಳಗೊಂಡಿದೆ. ಹೃದ್ರೋಗಕ್ಕೆ ಕಾರಣವಾಗುವ ಅಂಶಗಳ ಸಾಮಾಜಿಕ ಆಯಾಮಗಳನ್ನು ವಿಶ್ಲೇಷಿಸಿದ್ದಾರೆ.ಹೀಗಾಗಿ ಈ ಕೃತಿಗೆ ಒಂದು ರೀತಿಯಲ್ಲಿ ಸಮಗ್ರತೆ ಪ್ರಾಪ್ತವಾಗಿದೆ. ಅನಾರೋಗ್ಯದಿಂದ ಬಳಲುವ ರೋಗಿಗಳಿಗೆ ಔಷಧೋಪಚಾರ ನೀಡುವುದು ವೈದ್ಯರ ಮೊದಲ ಕರ್ತವ್ಯ. ಅದರ ಜೊತೆಗೆ ಅವರ ಆತಂಕವನ್ನು ದೂರಮಾಡಿ, ಆತ್ಮವಿಶ್ವಾಸ ಮೂಡುವಂತೆ ಸಮಾಧಾನದಿಂದ ಸಲಹೆ ನೀಡುವದು ವೈದ್ಯರ ಕಾರ್ಯವೇ ಆಗಿದೆ. ಬಹಳಷ್ಟು ಸಂದರ್ಭದಲ್ಲಿ ಚಿಕಿತ್ಸೆಗಿಂತ ವೈದ್ಯರು ನೀಡುವ ಸಲಹೆಯೇ ಪರಿಣಾಮಕಾರಿಯಾಗಿರುತ್ತದೆ.ಹಾಗೆ ನೀಡುವ ಸಲಹೆಗಳು ಕೇವಲ ಒಬ್ಬ ರೋಗಿಗೆ ಸೀಮಿತವಾಗದೆ ಸಾರ್ವತ್ರಿಕವಾಗಿ ಲೇಖನವಾಗಿ, ಪುಸ್ತಕವಾಗಿ ಪ್ರಕಟವಾದರೆ ಅದರ ಪರಿಣಾಮ ಇನ್ನಷ್ಟು ವ್ಯಾಪಕವಾಗುತ್ತದೆ. ಇಂತಹ ಸಾಮೂದಾಯಿಕ ಒಳಿತಿನ ಕಾರ್ಯವನ್ನು ಡಾ. ರಣಜಿತ ನಾಯ್ಕ್ ಮಾಡಿದ್ದಾರೆ.ಒಬ್ಬ ಸಾಮಾನ್ಯ ಅಕ್ಷರಸ್ಥನು ಸುಲಭದಲ್ಲಿ ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಇರುವುದರಿಂದ ಈ ಪುಸ್ತಕ ಖಂಡಿತವಾಗಿಯೂ ಓದುಗರ ಹೃದಯವನ್ನುತಲುಪಬಲ್ಲದು. ಈ ಕೃತಿಯ ಭಾಷೆ ತುಂಬಾ ಆಪ್ತವಾಗಿದೆ. ಕನ್ನಡದಲ್ಲಿ ವೈದ್ಯಕೀಯ ಲೇಖಕರಿಗೆ ಅನೇಕ ಸಮಸ್ಯೆಗಳಿವೆ. ಇಂಗ್ಲಿಷ್‌ನಿಂದ ಕನ್ನಡಕ್ಕೆ ಪದಗಳನ್ನು ಅನುವಾದ ಮಾಡುವಾಗ ಹೊಸ ಪದಗಳ ಸೃಷ್ಟಿ, ಸಮಾನಾರ್ಥಕ ಪದಗಳ ಬಳಕೆ, ಅದರಲ್ಲಿ ಏಕರೂಪತೆ ಕಾಯ್ದುಕೊಳ್ಳುವುದು ಹೀಗೆ ಅನೇಕ ಸವಾಲುಗಳಿವೆ.ಅವುಗಳನ್ನೆಲ್ಲ ಡಾ. ರಣಜಿತ ಯಶಸ್ವಿಯಾಗಿ ನಿಭಾಯಿಸಿದ್ದಾರೆ.ಕನ್ನಡ ಸಾಹಿತ್ಯದ ಆಳವಾದ ಜ್ಞಾನ ಅವರಲ್ಲಿ ಭಾಷೆಯ ಬಳಕೆಯ ಗೊಂದಲಗಳನ್ನು ನಿವಾರಿಸಿದೆ."ಹೃದಯ ಮೀರಿಸಬಲ್ಲ ರೂಪಕ ಇನ್ನೊಂದಿಲ್ಲ","ಅತಿಯಾದ ಸಕ್ಕರೆ ಹೃದಯಕ್ಕೆ ಕಹಿಯಾಗದಿರಲಿ", "ಹೃದಯದ ಹಣತೆ ಬೆಳಗುತ್ತಿರಲಿ" - ಈ ಮುಂತಾದ ಶೀರ್ಷಿಕೆಗಳು ಗಮನ ಸೆಳೆಯುತ್ತವೆ. ವೈದ್ಯಕೀಯ ಮತ್ತು ವೈಜ್ಞಾನಿಕ ಕೃತಿಗಳ ವಿಸ್ತಾರವಾದ ಓದು ಮತ್ತು ವೈದ್ಯರಾಗಿ ಅವರು ಪಡೆದ ವಿಸ್ತೃತ ಅನುಭವ ಬರವಣಿಗೆಗೆ ಖಚಿತತೆಯನ್ನು ಒದಗಿಸಿದೆ.ಇವೆಲ್ಲ ಡಾ. ರಣಜಿತ ಬೀರಣ್ಣ ನಾಯ್ಕ್ ಕೆಂಚನ್ ಹಿರೇಗುತ್ತಿ ಅವರನ್ನು ಅತ್ಯುತ್ತಮ ವೈದ್ಯ ಲೇಖಕರನ್ನಾಗಿ ರೂಪಿಸಿದೆ.ಹೃದಯದ ಕುರಿತು ಕಾಳಜಿ ಇರುವ ಪ್ರತಿಯೊಬ್ಬರೂ ಈ ಕೃತಿಯನ್ನು ಓದಲೇಬೇಕು. -- ಶ್ರೀಧರ ಬಿ ನಾಯಕ, ಬೇಲೇಕೇರಿ

ಮಂಗಳವಾರ, ಜುಲೈ 29, 2025

ಕ್ರಿಯೆ ಮತ್ತು ಧ್ಯಾನ

ಕಬೀರ ಭಾರತದ ಅತ್ಯಂತ ದೊಡ್ಡ ಅನುಭಾವಿ ಸಂತ. ಅವನು ನೇಕಾರ, ಜ್ಞಾನೋದಯದ ಹಂತ ದಾಟಿದ ಮೇಲೂ ಕಬೀರ ಬಟ್ಟೆ ನೇಯುವುದನ್ನು ನಿಲ್ಲಿಸಲಿಲ್ಲ. ಕಬೀರನಿಗೆ ಸಾವಿರಾರು ಶಿಷ್ಯರು, ಅವರು ಮೇಲಿಂದ ಮೇಲೆ ಕಬೀರನಿಗೆ ಹೇಳುತ್ತಿದ್ದರು,"ಬಟ್ಟೆ ನೇಯುವುದನ್ನ ಸಾಕು ಮಾಡು, ನಾವು ನಿನ್ನ ನೋಡಿಕೊಳ್ಳುತ್ತೇವೆ. ನಿನ್ನ ಸಮಯವನ್ನ ಧ್ಯಾನ ಮುಂತಾದ ಸತ್ಕಾರ್ಯಗಳಿಗೆ ಬಳಸು." ಶಿಷ್ಯರ ಮಾತಿಗೆ ಕಬೀರ ನಕ್ಕು ಬಿಡುತ್ತಿದ್ದ, " ನಾನು ಬಟ್ಟೆ ನೇಯುವುದು ಸಾಧಾರಣ ಕ್ರಿಯೆ ಅಲ್ಲ, ನಾನು ಬಟ್ಟೆ ತಯಾರಿಸುತ್ತಿರುವುದು ಕೇವಲ ಒಂದು ಬಹಿರಂಗ ಕ್ರಿಯೆ ಆದರೆ ಅದೇ ಸಮಯಕ್ಕೆ ನನ್ನ ಒಳಗೂ ಒಂದು ಕ್ರಿಯೆ ನಡೆಯುತ್ತಿರುತ್ತದೆ ಅದು ನನ್ನನ್ನು ಈ ಬದುಕಿನ ಸಹಜತೆಯೊಂದಿಗೆ ಒಂದುಗೂಡಿಸುತ್ತಿದೆ, ಇದು ನನ್ನ ಧ್ಯಾನ." ಹೇಗೆ ಬಟ್ಟೆ ನೇಯುವುದು ಒಂದು ಧ್ಯಾನವಾಗಬಲ್ಲದು? ಬಟ್ಟೆ ನೇಯುವಾಗ ನಿಮ್ಮ ಬುದ್ದಿ ಮತ್ತು ಮನಸ್ಸು (ಮೈಂಡ್) ನೇಯುವಿಕೆಯಲ್ಲಿ ಧ್ಯಾನದ ಗುಣಮಟ್ಟವನ್ನು ಸಾಧಿಸಬಲ್ಲವಾದರೆ ಆಗ ಬಹಿರಂಗವಾಗಿ ಕಾಣುವ ಕ್ರಿಯೆಯ ಮಹತ್ವಕ್ಕೆ ಇನ್ನೂ ಹೆಚ್ಚಿನ ಕುಶಲತೆಯ ಜೊತೆ ಅಪರೂಪದ ಸಮಾಧಾನವೂ ಸಾಧ್ಯವಾಗುತ್ತದೆ. ಇನೊಬ್ಬ ಅನುಭಾವಿ ಸಂತ ಕುಂಬಾರ, ಅವನ ಹೆಸರು ಗೋರಾ. ಮಣ್ಣಿನ ಮಡಿಕೆಗಳನ್ನು ತಯಾರಿಸುವುದು ಅವನ ವೃತ್ತಿ. ಮಡಿಕೆಗಳನ್ನು ತಯಾರಿಸುವಾಗ ಗೋರಾ ಹಾಡುತ್ತಿದ್ದ, ಕುಣಿಯುತ್ತಿದ್ದ. ಚಕ್ರದ ಮಧ್ಯೆ ಮಣ್ಣಿನ ಮುದ್ದೆ ಇಟ್ಟಾಗಲೆಲ್ಲ ತಾನೂ ತನ್ನ ಮಧ್ಯಕ್ಕೆ ಸೇರಿಕೊಳ್ಳುತ್ತಿದ್ದ. ಹೊರಗಿನ ಜನ ನೋಡುವುದು ಚಕ್ರ ತಿರುಗುವುದನ್ನ ಮತ್ತು ಗೋರಾ ಆ ಮಣ್ಣಿನ ಮುದ್ದೆಯನ್ನ ಮಡಿಕೆಯನ್ನಾಗಿಸುವ ಅದ್ಭುತವನ್ನ ಆದರೆ ಅದೇ ಸಮಯಕ್ಕೆ ಗೋರಾನ ಒಳಗೆ ಇನ್ನೊಂದು ಅದ್ಭುತ ನಡೆಯುತ್ತಿದೆ. ಚಕ್ರದ ನಡುವೆ ಮಡಿಕೆಯನ್ನು ಸ್ಥಾಪಿಸುತ್ತಿರುವಂತೆಯೇ ಗೋರಾ ತಾನೂ ಒಳ ಪ್ರಜ್ಞೆಯ ಮಧ್ಯದಲ್ಲಿ ಸ್ಥಾಪಿತವಾಗುತ್ತಿದ್ದಾನೆ, ಹೊಸದಾಗಿ ಹುಟ್ಟುತ್ತಿದ್ದಾನೆ. ಗೋರಾ ಕೇವಲ ಮಡಿಕೆಯನ್ನಷ್ಟೇ ತಯಾರಿಸುತ್ತಿಲ್ಲ ತನ್ನನ್ನೂ ಹೊಸದಾಗಿ ರೂಪಿಸಿಕೊಳ್ಳುತ್ತಿದ್ದಾನೆ. ಯಾವ ಕ್ರಿಯೆಯೂ ಧ್ಯಾನವಾಗಬಲ್ಲದು. ಒಂದು ಕ್ರಿಯೆಯನ್ನ ಹೇಗೆ ಧ್ಯಾನವಾಗಿ ಪರಿವರ್ತಿಸಕೊಳ್ಳಬಹುದು ಎನ್ನುವುದು ನಿಮ್ಮ ಅರಿವಿಗೆ ಬರುತ್ತಿದ್ದಂತೆಯೇ ನೀವು ನಿಮ್ಮ ಎಲ್ಲ ಕ್ರಿಯೆಗಳನ್ನ ಧ್ಯಾನವಾಗಿ ಬದಲಾಯಿಸಿಕೊಳ್ಳುತ್ತೀರಿ. ಆಗ ನಿಮ್ಮ ಇಡೀ ಬದುಕು ಧ್ಯಾನ ಮಾರ್ಗದಲ್ಲಿ ಮುನ್ನಡೆಯುತ್ತದೆ. ಆಗ, ನೀವು ನಡೆಯುತ್ತಿರಬಹುದು, ಆಫೀಸಿನಲ್ಲಿ ಕೆಲಸ ಮಾಡುತ್ತಿರಬಹುದು, ಏನೂ ಮಾಡದೆ ಸುಮ್ಮನೇ ಕುಳಿತಿರಬಹುದು ಎಲ್ಲವೂ ಧ್ಯಾನವಾಗಿ ಪರಿವರ್ತಿತವಾಗುತ್ತವೆ. ಹಾಗಾಗಿ ನೆನಪಿರಲಿ, ಧ್ಯಾನ ಒಂದು ನಿರ್ಧಿಷ್ಟ ಪ್ರಕಾರದ ಕ್ರಿಯೆಯಲ್ಲ, ಧ್ಯಾನ, ನೀವು ಆ ಕ್ರಿಯೆಯಲ್ಲಿ ಸಾಧಿಸುವ ಗುಣಮಟ್ಟ. (ಸಂಗ್ರಹ:ಅರಳಿ ಮರದಿಂದ

ಸೋಮವಾರ, ಜುಲೈ 21, 2025

"ವಿಧಿಗೆ ಸವಾಲು"- ಒಂದು ಅವಲೋಕನ.

"ವಿಧಿಗೆ ಸವಾಲು"- ಒಂದು ಅವಲೋಕನ. ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಪೌರಾಣಿಕ ಮತ್ತು ಐತಿಹಾಸಿಕ ವಸ್ತುಗಳನ್ನು ಒಳಗೊಂಡ ಕೃತಿಗಳ ರಚನೆ ಮತ್ತು ಪ್ರಕಟಣೆ ಹೆಚ್ಚಾಗುತ್ತಿದೆ.ಪರಂಪರೆಯೊಂದಿಗೆ ಪುನರ್ ಸಂಬಂಧವನ್ನು ಹೊಂದುವ, ಆ ಮೂಲಕ ಶ್ರೇಷ್ಠತೆಯನ್ನು ನೆನಪಿಸಿಕೊಳ್ಳುವ ಮತ್ತು ವರ್ತಮಾನದೊಂದಿಗೆ ಮುಖಾಮುಖಿಯಾಗಿ ಸಂವಾದಕ್ಕೆ ತೊಡಗುವ ಉದ್ದೇಶ ಇದರ ಹಿಂದೆ ಇರುವಂತಿದೆ.ಇದು ಪುರಾಣೇತಿಹಾಸಗಳನ್ನು ಪುನರ್ ವ್ಯಾಖ್ಯಾನಿಸುವ ಪ್ರಯತ್ನವೂ ಹೌದು.ಆದ್ದರಿಂದಲೇ ಮಯೂರವರ್ಮ,ಪುಲಿಕೇಶಿ,ಚೆನ್ನಭೈರಾದೇವಿ,ಮೈಸೂರು ಒಡೆಯರು ಮುಂತಾದ ಐತಿಹಾಸಿಕ ವ್ಯಕ್ತಿಗಳನ್ನು ಕುರಿತಾದ ಕೃತಿಗಳು ಹೆಚ್ಚು ಜನಪ್ರಿಯವಾಗುತ್ತಿವೆ.ಒಂದರ್ಥದಲ್ಲಿ ಇದು ಸ್ವಾಗತಾರ್ಹ ಬೆಳವಣಿಗೆಯಾದರೂ ವರ್ತಮಾನದಿಂದ ವಿಮುಖವಾಗುವ ಸಾಧ್ಯತೆ ಎಂಬ ವ್ಯಾಖ್ಯಾನಕ್ಕೆ ಒಳಗಾಗಬಹುದು.ಇತಿಹಾಸ ಎಂದರೆ ಹೀಗೆ ಇತ್ತು ಎಂದು ಹೇಳುವ ಒಂದು ಪ್ರಕ್ರಿಯೆ.ಈ ಪ್ರಕ್ರಿಯೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.ಆದ್ದರಿಂದ "ಇತಿಹಾಸ ಎನ್ನುವುದು ಇರುವುದೇ ಇಲ್ಲ.ಎಲ್ಲ ಇತಿಹಾಸಗಳೂ ಆಯಾ ಕಾಲ,ದೇಶ,ಸನ್ನಿವೇಶ,ದೃಷ್ಟಿಕೋನಗಳು ಕಟ್ಟಿದ ಕಾಲ್ಪನಿಕ ರಚನೆಗಳು" ಎಂದು ಗಿರಡ್ಡಿ ಗೋವಿಂದರಾಜು ಅವರು ಅಭಿಪ್ರಾಯ ಪಡುತ್ತಾರೆ. ಇತಿಹಾಸದಿಂದ ಪಾಠ ಕಲಿಯಬೇಕು ಎಂಬ ಮಾತೊಂದಿದೆ.ಅಂದರೆ ಹಿಂದೆ ಆದ ತಪ್ಪುಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲು ಇತಿಹಾಸದ ಅವಲೋಕನ ಅಗತ್ಯ.ಜಾಗತೀಕರಣದ ತೀವ್ರತೆಯಲ್ಲಿ ಭೌತಿಕವಾದಿಗಳಾಗುತ್ತಿರುವ ಸಂದರ್ಭದಲ್ಲಿ ನಮ್ಮತನವನ್ನು ಜಾಗೃತಗೊಳಿಸಿಕೊಳ್ಳಲು ಇತಿಹಾಸವನ್ನು ಮನನ ಮಾಡಿಕೊಳ್ಳುವುದು ಅನಿವಾರ್ಯ.ಆದರೆ ಅಷ್ಟಕ್ಕೇ ಸೀಮಿತವಾಗದೇ ಗೋಪಾಲ ಕೃಷ್ಣ ಅಡಿಗರು ಹೇಳಿದಂತೆ ಕ್ರಿಯಾಶೀಲರಾಗಬೇಕಾಗಿದೆ. " 'ಇತ್ತು’ಗಳ ಧ್ವಜವ ಹಿಡಿದೆತ್ತಿ ನಿಲ್ಲೋ ಮಗೂ, ’ಇದೆ’ಯ ಹೃದಯದ್ರಾವ ಬೇಡ ನಿನಗೆ. ಮರವುಂಟು, ಮರಕೆ ಬಂಗಾರವುಂಟಲ್ಲದೆಯೇ ಕಟ್ಟೆಯುಂಟಲ್ಲ! ನೀರಿಕ್ಕು ಅದಕೆ!" ಭಾರತದ ಇತಿಹಾಸದಲ್ಲಿ ಛತ್ರಪತಿ ಶಿವಾಜಿಗೆ ವಿಶಿಷ್ಟ ಸ್ಥಾನವಿದೆ.ಭಾರತದ ಸ್ವಾಭಿಮಾನದ ಸಂಕೇತ ಅವನು.ಮೊಗಲರ ದುರಾಕ್ರಮಣಕ್ಕೆ ತಕ್ಕ ಉತ್ತರ ನೀಡಿದ ವೀರಯೋಧ ಅವನು.ಎಲ್ಲರನ್ನೂ ಒಳಗೊಳ್ಳುವ ಸ್ವರಾಜ್ಯ ಸ್ಥಾಪನೆಯ ಅವನ ಕನಸು.ಶಿವಾಜಿಯ ದೃಷ್ಟಿಯಲ್ಲಿ ಸ್ವರಾಜ್ಯವೆಂದರೆ "ನಮ್ಮದೇ ಆದ ರಾಜ್ಯ, ನಾವೇ ಆಳುವ ರಾಜ್ಯ. ನಮ್ಮದೇ ಆದ ಸೇನಾ ನೆಲೆಗಳನ್ನು, ನಮ್ಮ ಸಶಸ್ತ್ರ ಪಡೆಗಳಿಂದ ಕೂಡಿದ,ನಮ್ಮ ಕಾವಲು ಪಡೆಗಳಿಂದ ತುಂಬಿದ, ಆದಿಲ್‌ಶಾಹಿ ಅಥವಾ ಮೊಘಲ್ ಸೈನ್ಯಗಳಿಗೆ ಅಭೇಧ್ಯವಾದ ರಾಜ್ಯ.” ಹಾಗೆಂದು ಅವನ ಸ್ವರಾಜ್ಯದ ತಳಹದಿ ಧಾರ್ಮಿಕ ನಿರ್ದೇಶನದ ಮೇಲೆ ಆಧಾರಿತವಾಗಿ ರಲಿಲ್ಲ.ಅವನ ಆಡಳಿತದಲ್ಲಿ ಧರ್ಮದ ರಾಜಕೀಯವಿರಲಿಲ್ಲ.ಅದಕ್ಕಾಗಿ ಶ್ರಮಿಸಿದ ಮಹಾಯೋಧ ಶಿವಾಜಿ. ಅವನನ್ನು ಕುರಿತು ಇಂಗ್ಲೀಷ,ಮರಾಠಿ ಭಾಷೆಯಲ್ಲಿ ಹಲವು ಕೃತಿಗಳು ಬಂದಿವೆ. ಅವು ಶಿವಾಜಿ ವ್ಯಕ್ತಿತ್ವವನ್ನು ತಮ್ಮದೇ ಆದ ರೀತಿಯಲ್ಲಿ ಅನಾವರಣಗೊಳಿಸುತ್ತವೆ. ಅಂತಹ ಕೃತಿಗಳಲ್ಲಿ ಮೇಧಾ ದೇಶಮುಖ್ ಭಾಸ್ಕರನ್ ಅವರ “ಛಾಲೆಂಜಿಂಗ್ ಡೆಸ್ಟಿನಿ”ಎಂಬ ಇಂಗ್ಲೀಷ್ ಕೃತಿ ಅತ್ಯಂತ ವಿಶಿಷ್ಟವಾಗಿದೆ. ಮೇಧಾ ದೇಶಮುಖ್ ಅವರು ಒಬ್ಬ ಸೂಕ್ಷ್ಮ ಜೀವಶಾಸ್ತ್ರಜ್ಞೆ, ಅವರು ಜರ್ಮನಿ, ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಂತಹ ದೇಶಗಳಲ್ಲಿ ಆಹಾರ ಮತ್ತು ಔಷಧ ಕಂಪನಿಗಳಿಗೆ ಮಾರ್ಕೆಟಿಂಗ್ ಮತ್ತು ವ್ಯವಹಾರ ಅಭಿವೃದ್ಧಿಯಲ್ಲಿ ಕೆಲಸ ಮಾಡಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಅವರು ಮರಾಠಿ ಮತ್ತು ಇಂಗ್ಲಿಷ್‌ನಲ್ಲಿ ಕಾವ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಎರಡು ಐತಿಹಾಸಿಕ ಕಾದಂಬರಿಗಳು'ಫ್ರಾಂಟಿಯರ್ಸ್-ಎ ರಿಲೆಂಟ್ಲೆಸ್ ಬ್ಯಾಟಲ್ ಬಿಟ್ವೀನ್ ಔರಂಗಜೇಬ್ ಅಂಡ್ ಶಿವಾಜಿ' ಮತ್ತು 'ಲೈಫ್ ಅಂಡ್ ಡೆತ್ ಆಫ್ ಸಂಭಾಜಿ'ಪ್ರಕಟಗೊಂಡಿವೆ.'ಅಪ್ ಅಗೆನಸ್ಟ್ ಡಾರ್ಕನೆಸ್ ಮತ್ತು'ದ ಸ್ಟೋರಿ ಆಫ್ ಕಮ್ಯೂನಿಟಿ'ಇವು ಅವರ ಇನ್ನಿತರ ಕೃತಿಗಳು. ಪ್ರಸ್ತುತ ಶಿವಾಜಿಯ ಜೀವನ ಚರಿತ್ರೆಯನ್ನು ಹೊಂದಿದ 'ಛಾಲೆಂಜಿಂಗ್ ಡೆಸ್ಟಿನಿ' ಎಂಬ ಕೃತಿಯನ್ನು ಪ್ರೊ.ಆರ್.ಎಸ್.ಹಬ್ಬು ಅವರು ಕನ್ನಡಕ್ಕೆ "ವಿಧಿಗೆ ಸವಾಲು"ಎಂಬ ಶೀರ್ಷಿಕೆಯಲ್ಲಿ ಅನುವಾದ ಮಾಡಿದ್ದಾರೆ.ವೃತ್ತಿಯಿಂದ ಗಣಿತ ಮತ್ತು ಸಂಖ್ಯಾಶಾಸ್ತ್ರದ ಪ್ರಾಧ್ಯಾಪಕರಾದ ಅವರು ಕಾರವಾರದ ದಿವೇಕರ್ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ. ಹಿಂದೂ ಪತ್ರಿಕೆಯ ಬರಹಗಾರರೂ ಆದ ಅವರು ಬಿ.ಆರ್.ನಂದಾ ಅವರ 'ಗಾಂಧೀಜಿ ಜೀವನ ಚರಿತೆ'ಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. 'ವಿಧಿಗೆ ಸವಾಲು'278 ಪುಟಗಳನ್ನು ಹೊಂದಿದ ಬೃಹತ್ ಕೃತಿಯಾಗಿದ್ದು ಹನ್ನೆರಡು ಅಧ್ಯಾಯಗಳನ್ನು ಒಳಗೊಂಡಿದೆ.1826ರಿಂದ 2016 ವರೆಗೆ ಪ್ರಕಟವಾದ ಸುಮಾರು 150ಕ್ಕೂ ಅಧಿಕ ಪುಸ್ತಕಗಳನ್ನು ಪರಾಮರ್ಶಿಸಿ, ಸಂಶೋಧಿಸಿ ಹೆಚ್ಚು ಅಥೆಂಟಿಕ್ ಆಗಿ ಶಿವಾಜಿಯ ಜೀವನ ಚರಿತ್ರೆಯನ್ನು ಕೊಡಲು ಪ್ರಯತ್ನಿಸಿದ್ದಾರೆ.ಒಂದು ರೀತಿಯಲ್ಲಿ ಧಾರ್ಮಿಕ ದುರಾಕ್ರಮಣ ವಿರುದ್ಧ ಪರಾಕ್ರಮ ತೋರಿದ ವೀರನ ಕೃತಿಯಾಗಿ ಇದು ಗಮನ ಸೆಳೆಯುತ್ತದೆ. ಪ್ರಾರಂಭದ ಪೀಠಿಕೆಯಲ್ಲಿ ಮಹಮ್ಮದ್ ಘಜನಿಯಿಂದ ಪ್ರಾರಂಭಿಸಿ ಔರಂಗಜೇಬ್‌ನವರೆಗೆ ಭಾರತದ ಮೇಲಾದ ದೌರ್ಜನ್ಯವನ್ನು,ರಾಜಕೀಯ ಸ್ಥಿತಿ-ಗತಿಯನ್ನು ಸಂಕ್ಷಿಪ್ತವಾಗಿ ಆದರೆ ಸಮಗ್ರವಾಗಿ ವಿವೇಚಿಸಲಾಗಿದೆ.ಆ ಕಾಲದಲ್ಲಿ ಪ್ರಚಲಿತದಲ್ಲಿದ್ದ ವತನದಾರಿ ಮತ್ತು ಜಹಗೀರದಾರಿ ಪದ್ಧತಿಗಳಲ್ಲಿನ ದೋಷಗಳನ್ನು ವಿವರವಾಗಿ ಚರ್ಚಿಸಲಾಗಿದೆ.ಆ ಕಾಲ ಘಟ್ಟದಲ್ಲಿ ಹಿಂದೂಗಳೆನಿಸಿಕೊಂಡವರು ಸ್ವಾರ್ಥ,ಕುತಂತ್ರ ಇರ್ಷ್ಯೆಗಳಿಂದ ನೈತಿಕ ಅಧ:ಪತನದತ್ತ ಸಾಗುತ್ತಿದ್ದರು. ಹಿಂದೂ ಸೈನಿಕರು ತಮ್ಮ ಹೃದಯದಲ್ಲಿದ್ದ ಕ್ಷತ್ರಿಯತ್ವವನ್ನೇ ಕೊಂದರೆ ಪುರೋಹಿತಶಾಹಿ ವರ್ಗ ತನ್ನ ಆತ್ಮ ಗೌರವವನ್ನು ಕೊಂದಿತ್ತು.ಇಂತಹ ಅವನತಿಯ ಸಂದರ್ಭದಲ್ಲಿ ಸ್ವಾಭಿಮಾನದ ಪ್ರತಿಷ್ಠಾಪನಾಚಾರ್ಯನಾಗಿ ಮೂಡಿ ಬಂದ ಶಿವಾಜಿಯ ಸಾಹಸಗಳೇ ಈ ಕೃತಿಯಲ್ಲಿ ಪೂರ್ತಿಯಾಗಿ ಆವರಿಸಿವೆ. ಅವನ ಬುದ್ಧಿವಂತಿಕೆ, ಚಾಣಾಕ್ಷತನ, ಕುತಂತ್ರ, ಶೌರ್ಯ, ಚುರುಕುತನ,ನ್ಯಾಯ ನಿಷ್ಠುರತೆ ಮತ್ತು ದೂರದೃಷ್ಟಿಗಳ ಸಮಗ್ರ ವಿವೇಚನೆ ಇಲ್ಲಿದೆ.17ನೇ ಶತಮಾನದ ಭಾರತದ ರಾಜಕೀಯ ಮತ್ತು ಸೈನಿಕ ಪರಿಸ್ಥಿತಿಯನ್ನು ಅಮೂಲಾಗ್ರವಾಗಿ ಚಿತ್ರಿಸಲಾಗಿದೆ.ಶಿವಾಜಿಯ ನಾಯಕತ್ವದಲ್ಲಿನ ದೃಢತೆ,ಮೊಘಲ ಸಾಮ್ರಾಜ್ಯ ಮತ್ತು ಆದಿಲ್‌ಶಾಹಿ ಸೈನ್ಯಗಳ ವಿರುದ್ಧ ಅವನ ಸಂಘರ್ಷ,ಮತ್ತು ಸ್ವರಾಜ್ಯದ ಸ್ಥಾಪನೆಗಾಗಿ ಅವನು ನಡೆಸಿದ ಹೋರಾಟದ ಸಂಪೂರ್ಣ ಚಿತ್ರಣವನ್ನು ಈ ಕೃತಿ ಒಳಗೊಂಡಿದೆ. ಇಲ್ಲಿ ಶಿವಾಜಿಯ ಯುದ್ಧತಂತ್ರಗಳು,ಯುದ್ಧವನ್ನು ಗೆಲ್ಲಲು ಕೋಟೆಗಳ ಅಗತ್ಯ ಮತ್ತು ಅವುಗಳ ಮಹತ್ವವನ್ನು ಅನಾವರಣಗೊಳಿಸಲಾಗಿದೆ.ತಂತ್ರಕ್ಕೆ ಪ್ರತಿತಂತ್ರ ಹೂಡುವಲ್ಲಿ ಶಿವಾಜಿ ನಿಷ್ಣಾತನಾಗಿದ್ದ ಎಂಬುದಕ್ಕೆ ಅಫ್ಜಲ್ ಖಾನನ ಸಾವಿನ ಸನ್ನಿವೇಶದ ವಿವರಣೆ ಮೈ ನವಿರೇಳಿಸುತ್ತದೆ.ಅಮೇರಿಕೆಯು ಅಬ್ಬೋಟಾಬಾದನಲ್ಲಿ ಒಸಾಮಾ ಬಿನ್ ಲಾಡೆನ್ ಮೇಲೆ ನಡೆಸಿದ ದಾಳಿಯು ಪುಣೆಯ ಲಾಲಮಹಲಿನಲ್ಲಿ ಡೆಕ್ಕನ್‌ನ ಮೊಗಲ್ ಸುಬೇದಾರ್ ಶೈಶ್ತಾಖಾನ್‌ನ ಮೇಲೆ ಶಿವಾಜಿ ನಡೆಸಿದ ದಾಳಿಯಂತಿತ್ತು ಎಂದು ಸಮೀಕರಿಸುವ ಮೂಲಕ ಅವನ ಯುದ್ಧ ತಂತ್ರದ ಅಗಾಧತೆಯನ್ನು ನಿರೂಪಿಸಲಾಗಿದೆ.ಔರಂಗಜೇಬ ಮೋಸದಿಂದ ಶಿವಾಜಿಯನ್ನು ಪ್ರತಿಬಂಧಿಸಲು ಪ್ರಯತ್ನಿಸಿದಾಗ ಅದೇ ರೀತಿಯ ಮೋಸವನ್ನು ಬಳಸಿ ಆಗ್ರಾದಿಂದ ಮಹಾ ಪಲಾಯನ ಮಾಡಿದ ಶಿವಾಜಿಯ ಚಾಣಾಕ್ಷತನವನ್ನು ಗುರುತಿಸಲಾಗಿದೆ.ಅವನ ಗೆಲುವಿನ ಜೊತೆಗೆ ಸೋಲು,ಸೋಲಿನ ಜೊತೆಗೆ ಗೆಲುವಿನ ಕತೆ ಇಲ್ಲಿದೆ. ಡೆಕ್ಕನ್ ಪ್ರದೇಶದಲ್ಲಿ ಶಿವಾಜಿಯ ಏಳಿಗೆ ಮೊಗಲರು ಅಜೇಯರಲ್ಲ,ಅವರನ್ನು ಸೋಲಿಸಬಹುದು ಎಂಬ ಆತ್ಮವಿಶ್ವಾಸವನ್ನು ಉಳಿದ ಆಡಳಿತಗಾರರಲ್ಲಿ ಹುಟ್ಟುಹಾಕಿತು.ಈ ದೃಷ್ಠಿಯಿಂದ ಮೊಗಲ್ ಆಡಳಿತಕ್ಕೆ ಸವಾಲೆಸೆಯುವವರಿಗೆ ಶಿವಾಜಿ ಪ್ರೇರಣೆಯಾದ ಎಂಬುದರತ್ತ ಇಲ್ಲಿ ಗಮನ ಸೆಳೆಯಲಾಗಿದೆ. ಈ ಕೃತಿಯಲ್ಲಿ ಕೇವಲ ಶಿವಾಜಿಯ ಸೈನಿಕ ಕಾರ್ಯಚರಣೆಗಳ ವಿವರಣೆ ಮಾತ್ರವಲ್ಲ.ಅವನ ಆಡಳಿತ ವಿಧಾನದ ಮೇಲೂ ಬೆಳಕು ಚೆಲ್ಲಲಾಗಿದೆ.ಶಿವಾಜಿ ಬರೀ ಸೈನ್ಯ ಕಟ್ಟಲಿಲ್ಲ,ರಾಜ್ಯವನ್ನೂ ಕಟ್ಟಿದ.ರಾಜ್ಯದ ಆದಾಯದ ಮೂಲವನ್ನು ಬಲಪಡಿಸಿದ.ನ್ಯಾಯಯುತವಾಗಿ ರಾಜ್ಯಾಡಳಿತ ಮಾಡುತ್ತಿದ್ದ.ಅವನ ಆಡಳಿತದಲ್ಲಿ ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರು ಹಿಂದೂಗಳಷ್ಟೇ ಸಂತೃಪ್ತಿಯಿಂದ ಇದ್ದರು.ಕುಶಲಕರ್ಮಿಗಳಿಗೆ ಹಣ ಕೊಡುವುದರಲ್ಲಿಯೂ ಉದಾರಿಯಾಗಿದ್ದ. ಕೃಷಿಯನ್ನು ಪ್ರೊತ್ಸಹಿಸಿದ್ದ.ಸಮೃದ್ಧ ರಾಜ್ಯಕ್ಕೆ ಅಗತ್ಯವಾದ ಎಲ್ಲ ಯೋಜನೆಗಳನ್ನೂ ರೂಪಿಸಿದ್ದ ಮತ್ತು ಅನುಷ್ಠಾನಕ್ಕೆ ತಂದಿದ್ದ.ಆದ್ದರಿಂದಲೇ ಆತ ಛತ್ರಪತಿ ಎನಿಸಿಕೊಂಡಿದ್ದ ಎಂಬುದನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಲಾಗಿದೆ. ಐತಿಹಾಸಿಕ ಸಂಗತಿಗಳನ್ನು ಒಳಗೊಂಡ ಈ ಜೀವನ ಚರಿತ್ರೆ ಕೆಲವೊಮ್ಮೆ ದಟ್ಟವಾದ ವಿವರಗಳೊಂದಿಗೆ ಇಡಿಕಿರಿದು ಇತಿಹಾಸದ ಪಠ್ಯವನ್ನು ಓದಿದ ಅನುಭವ ಕೊಡುತ್ತದೆ.ಇನ್ನೊಮ್ಮೆ ಸಾಹಸದ ಚಿತ್ರಣದೊಂದಿಗೆ ಥ್ರಿಲ್ಲರ್ ಕಾದಂಬರಿಯನ್ನು ಓದುವಾಗಿನ ರೋಮಾಂಚನ ನೀಡುತ್ತದೆ.ಮತ್ತೊಮ್ಮೆ ಸರಳ ನಿರೂಪಣೆಯೊಂದಿಗೆ ಪ್ರಬಂಧದ ಸಮಾಧಾನವನ್ನು ದೊರಕಿಸುತ್ತದೆ. ಅನುವಾದ ನಿಜಕ್ಕೂ ತುಂಬ ಶ್ರಮ ಬಯಸುವ ಕೆಲಸ.ಅದೊಂದು ರೀತಿಯ ಸೃಜನಶೀಲತೆಯೂ ಹೌದು.ಪ್ರೊ.ಆರ್.ಎಸ್.ಹಬ್ಬು ಅವರು ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಪರಿಣತಿ ಪಡೆದಿದ್ದಾರೆ.ಇಷ್ಟಪಟ್ಟು ಅನುವಾದಕ್ಕೆ ತೊಡಗಿರುವುದರಿಂದ ಅವರಿಗೆ ಯಾವ ತೊಡಕು ಉಂಟಾಗಿಲ್ಲ.ಮೂಲಕ್ಕೆ ಭಂಗ ಬರದಂತೆ ಅನುವಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆದ್ದರಿಂದ ಎಲ್ಲಿಯೂ ಇದು ಅನುವಾದ ಎಂಬ ಭಾವನೆ ಮೂಡಿಸುವುದಿಲ್ಲ.ಇದನ್ನು ಓದುವಾಗ ಮೂಲ ಕೃತಿ ಎಂದೇ ಭಾಸವಾಗುತ್ತದೆ.ಇದೇ ಅನುವಾದಕರ ನಿಜವಾದ ಯಶಸ್ಸು. - ಶ್ರೀಧರ ಬಿ.ನಾಯಕ,ಬೇಲೇಕೇರಿ

ಸೋಮವಾರ, ಆಗಸ್ಟ್ 26, 2024

ಕೃಷ್ಣನ ಕುರಿತು ಚೇತನಾ ತೀರ್ಥಹಳ್ಳಿ.

ಕೃಷ್ಣ ಹಲವು ಪದರಗಳ ಪಾತ್ರ. ಆ ಎಲ್ಲ ಪದರಗಳಲ್ಲೂ ಆತ ಎಷ್ಟು ಅಡಗಿಸಿಕೊಂಡರೂ ದೈವತ್ವ ಹೊರ ತೂರಿ ತನ್ನ ಅಸ್ತಿತ್ವ ಸಾರುವುದು. ಒಳಿತು, ಕೆಡುಕು ಎಲ್ಲವನ್ನೂ ಸಮಾನವಾಗಿ ಸೆಳೆಯುವ ಕೃಷ್ಣ; ಪ್ರತಿಫಲಿಸಿದರೆ ಬೆಳಕು, ಪ್ರತಿರೋಧಿಸಿದರೆ ಕತ್ತಲು… । ಚೇತನಾ ತೀರ್ಥಹಳ್ಳಿ ಭಾರತದ ಪುರಾಣೇತಿಹಾಸದ ಜಗತ್ತಿನಲ್ಲಿ ರಾಮ – ಕೃಷ್ಣರಷ್ಟು ಜನಪ್ರಿಯರಾದವರು ಯಾರೂ ಇಲ್ಲ. ಇವರಿಬ್ಬರೂ ನೇರ ದೇವರಲ್ಲದೆ ಅವತಾರಿಗಳೆಂಬ ಗುರುತು ಹೊತ್ತಿರೋದು ಇದಕ್ಕೆ ಮುಖ್ಯ ಕಾರಣ. ಈ ಇಬ್ಬರು ಅವತಾರಿಗಳಲ್ಲಿ ರಾಮ ಮನುಷ್ಯತ್ವದಿಂದ ದೈವತ್ವಕ್ಕೇರುವ ಸಂಕೇತವಾಗಿ ಕಂಡರೆ, ಕೃಷ್ಣ ದೈವತ್ವ ಕಳಚಿಕೊಂಡು ಮನುಷ್ಯನಾಗಲು ಸಾಹಸ ಪಡುವ ಸಂಕೇತವಾಗಿ ಕಾಣುತ್ತಾನೆ. ಆದ್ದರಿಂದ ಕೃಷ್ಣ ಒಂದು ಕೈ ಹೆಚ್ಚು ಹತ್ತಿರದ ಭಗವಂತ. ಹಾಗೆಂದೇ ಕೃಷ್ಣನ ಕತೆಗಳು, ಕಾವ್ಯಗಳು, ಕಲಾಕೃತಿಗಳು, ವ್ಯಾಖ್ಯಾನಗಳು ಸಂಖ್ಯೆಯಲ್ಲೂ ಜನಪ್ರಿಯತೆಯಲ್ಲೂ ರಾಮನಿಗಿಂತ ಹೆಚ್ಚು. ಈ ಕೃಷ್ಣನ ಪಾತ್ರ ಕೇವಲ ಮಹಾಭಾರತದಲ್ಲಿ ಬಂದುಹೋಗುವಂಥದ್ದಲ್ಲ. ಮಹಾಭಾರತದಲ್ಲಿ ಆತ ಇಡೀ ಕತೆಯ ಒಂದು ಅಧ್ಯಾಯವಷ್ಟೇ. ಈತ ಹೆಚ್ಚು ಕಾಣಿಸಿಕೊಳ್ಳೋದು ಪುರಾಣಗಳಲ್ಲಿ. ಅದರಲ್ಲೂ ಭಾಗವತ ಮತ್ತು ಬ್ರಹ್ಮವೈವರ್ತ ಪುರಾಣಗಳಲ್ಲಿ. ಭಾರತೀಯ ಪುರಾಣಗಳು ಜನಪದದಿಂದ ಹೆಕ್ಕಿ ಸಂಸ್ಕೃತಕ್ಕೆ ಒಳಪಡಿಸಿದ ಕಥನಗಳೇ ಆದ್ದರಿಂದ, ಇವು ಮಹಾಕಾವ್ಯಕ್ಕಿಂತಲೂ ಹೆಚ್ಚು ಆಪ್ತ. ಕೃಷ್ಣ ಹಲವು ಪದರಗಳ ಪಾತ್ರ. ಆ ಎಲ್ಲ ಪದರಗಳಲ್ಲೂ ಆತ ಎಷ್ಟು ಅಡಗಿಸಿಕೊಂಡರೂ ದೈವತ್ವ ಹೊರ ತೂರಿ ತನ್ನ ಅಸ್ತಿತ್ವ ಸಾರುವುದು. ಬಾಲ್ಯದಲ್ಲಿ ತನ್ನ ದೈವೀಶಕ್ತಿಯಿಂದ ರಕ್ಕಸ ರಕ್ಕಸಿಯರನ್ನು ಕೊಲ್ಲುವ ಕೃಷ್ಣ, ಅದನ್ನು ಮರೆಮಾಚಲು ಬೆಣ್ಣೆ ಕದಿಯುತ್ತಾನೆ, ಸೀರೆ ಸೆಳೆಯುತ್ತಾನೆ, ಊರ ತುಂಬ ಗದ್ದಲವೆಬ್ಬಿಸುತ್ತ ತಿರುಗುತ್ತಾನೆ. ಬೆಳೆದ ಮೇಲೆ ದುಷ್ಟ ಶಿಕ್ಷಣ ನಡೆಸುತ್ತಾ ಜಂಬೂದ್ವೀಪದ ಉದ್ದಗಲ ತಿರುಗುವ ಕೃಷ್ಣ, ಮದುಮಗಳನ್ನು ಹಾರಿಸಿಕೊಂಡು ಹೋಗುತ್ತಾನೆ, ಇಬ್ಬರ ನಡುವೆ ಜಗಳ ಹಚ್ಚುತ್ತಾನೆ, ಥಟ್ಟನೆ ಕಣ್ಕಟ್ಟು ಮಾಡಿ ಒಬ್ಬರನ್ನು ಗೆಲ್ಲಿಸುತ್ತಾನೆ, ಮತ್ತೊಬ್ಬರನ್ನು ಸೋಲಿಸುತ್ತಾನೆ. ಅವನು ಅದೇನೇ ಮಾಡಿದರೂ ಎಲ್ಲಕ್ಕೂ ಒಂದು ‘ಒಪ್ಪಬಹುದಾದ’ ಸಮಜಾಯಿಷಿ ಇದೆ. ಆ ಕಾರಣಕ್ಕೇ ಶಂಭೂಕ ವಧೆ ಮತ್ತು ಸೀತಾಪರಿತ್ಯಾಗದ ವಿಷಯಗಳಲ್ಲಿ ರಾಮನನ್ನು ಕಟೆಕಟೆಗೆ ಹತ್ತಿಸುವಂತೆ ಕೃಷ್ಣನನ್ನು ಯಾವ ಪ್ರಕರಣದಲ್ಲೂ ವಿಚಾರಣೆಗೆ ಒಳಪಡಿಸಿದ್ದಿಲ್ಲ. ಯುದ್ಧಗಳಲ್ಲಿ ಕೃಷ್ಣನ ನಡೆಗಳೂ ಚಾಣಾಕ್ಷತೆ ಅಥವಾ ಮುಳ್ಳನ್ನು ಮುಳ್ಳಿಂದಲೇ ತೆಗೆಯುವ ಉಪಾಯವೆಂಬ ಸಮರ್ಥನೆಗೆ ಒಳಪಡುತ್ತವೆಯೇ ಹೊರತು, ಕೃಷ್ಣ ಆರೋಪಿ ಸ್ಥಾನದಲ್ಲಿ ನಿಲ್ಲುವುದಿಲ್ಲ. ಇದ್ದುದರಲ್ಲಿ ಕೃಷ್ಣನಿಗೆ ಶಾಪ ಕೊಟ್ಟ ಗಾಂಧಾರಿಯೊಬ್ಬಳೇ ಅವನ ಮೇಲೆ ಆರೋಪ ಹೊರಿಸಿದ್ದು. ಅದರಲ್ಲೂ ದುರ್ಯೋಧನಾದಿಗಳ ದುಷ್ಟತನಗಳು ಮಹಾಭಾರತದ ಉದ್ದಕ್ಕೂ ಢಾಳಾಗಿ ಕಾಣುವುದರಿಂದ ಶಾಪ ಕೊಟ್ಟ ಗಾಂಧಾರಿಯ ಬಗ್ಗೆ ಮನಸ್ಸು ಮುರಿಯುವುದೇ ಹೊರತು,ಕೃಷ್ಣನ ಮೇಲಲ್ಲ! ಕೃಷ್ಣನನ್ನು ವ್ಯಕ್ತಿಯಾಗಲ್ಲದೆ ಒಂದು ತತ್ವವಾಗಿ ನೋಡಿದರೆ, ಅದು ಕೂಡಾ ಹಲವು ಪದರಗಳ ಮಹಾ ಕಡಲಾಗಿಯೇ ತೋರುವುದು. ಕೃಷ್ಣ ಅನ್ನುವ ಹೆಸರೇ ಕರ್ಷಣೆಯ ಸೂಚಿ, ಆಕರ್ಷಣೆಯ ಸೂಚಿ. ಯಾರನ್ನೇ ಆದರೂ ತನ್ನತ್ತ ಸೆಳೆಯುವವನು ಕೃಷ್ಣ. ಈ ಕೃಷ್ಣ ಒಳಿತನ್ನೂ ಕೆಡುಕನ್ನೂ ಸಮಾನವಾಗಿ ತನ್ನತ್ತ ಸೆಳೆಯುವನು. ಒಳಿತು ಹೊತ್ತ ಭಕ್ತರೂ ಪ್ರೇಮಿಗಳೂ ಕೃಷ್ಣನನ್ನು ಪ್ರತಿಫಲಿಸಿ ತಮ್ಮ ಮೈಮನದ ತುಂಬ ಅವನ ಬಿಂಬ ಹೊತ್ತು, ತಾವೇ ಕೃಷ್ಣರಾಗುವರು. ಕೆಡುಕು ಹೊತ್ತ ಶತ್ರುಗಳು ಕೃಷ್ಣನ ಸೆಳೆತದಿಂದ ತಪ್ಪಿಸಿಕೊಳ್ಳಲಾಗದೆ ಅವನತ್ತ ನುಗ್ಗಿ, ಕಪ್ಪುಕುಳಿಯಂಥ ಅವನ ಆಕರ್ಷಣೆಗೆ ಸಿಕ್ಕು (ಕೃಷ್ಣ ಎಂದರೆ ಕಪ್ಪು ಕೂಡಾ. ಕಪ್ಪನ್ನು ಕೃಷ್ಣ ಅನ್ನುವುದು ಅದಕ್ಕೆ ಆಕರ್ಷಣೆಯ ಗುಣವಿದೆ ಅಂತಲೇ.) ನುಂಗಲ್ಪಟ್ಟು ಅವನೊಳಗೆ ಒಂದಾಗಿ ಹೋಗುವರು, ಮುಕ್ತರಾಗುವರು. ಒಟ್ಟಾರೆ ಕೃಷ್ಣ, ಪ್ರತಿಫಲಿಸಿದರೆ ಬೆಳಕು, ಪ್ರತಿರೋಧಿಸಿದರೆ ಕತ್ತಲು. ಪುರಾಣಗಳೇ ಇರಲಿ, ಮಹಾಕಾವ್ಯವೇ ಇರಲಿ, ನಂತರದ ನೂರು – ಸಾವಿರ ಕಥನಗಳೇ ಇರಲಿ, ಯಾವುದರಲ್ಲೂ ಕೃಷ್ಣನಿಗೆ ಅತಿವಿನಯದ ಸೋಗು ಹಾಕಿಲ್ಲದೆ ಇರುವುದು ಬಹಳ ಆಸಕ್ತಿಕರ ಅಂಶ. ಕೃಷ್ಣ ಚಿಕ್ಕವನಿದ್ದಾಗ ದೂರ್ವಾಸರಂಥ ದೂರ್ವಾಸರಿಗೇ ಎದುರಾಡಿದ್ದ. ಮದುವೆಯಾಗೆಂದು ಬಂದ ಯಾವ ಹೆಣ್ಣನ್ನೂ ದೂರವಿಡಲಿಲ್ಲ ಈ ಶ್ಯಾಮ; ಅಷ್ಟಾವಕ್ರೆಯ ಸೇವೆಯನ್ನೂ (ಈ ಸೇವೆಗೆ ಒಂದೊಂದರಲ್ಲಿ ಒಂದೊಂದು ಅರ್ಥ…) ತಿರಸ್ಕರಿಸಲಿಲ್ಲ. ಕರಡಿಯ ಮಗಳನ್ನೂ ಮದುವೆಯಾದ. ರುಕ್ಮಿಣಿ ಇವನ ಪಟ್ಟದರಸಿ, ದಾಯಾದಿ ಕುಲದ ಸತ್ಯಭಾಮೆಯೂ ಇವನ ಹೆಂಡತಿ. ನರಕಾಸುರನ ಸೆರೆಯಲ್ಲಿದ್ದು ಲೋಕರೂಢಿಯಂತೆ ಬಹಿಷ್ಕೃತೆಯರಾದ ಹೆಣ್ಣುಗಳಿಗೆಲ್ಲ ತನ್ನ ಹೆಂಡತಿಯರೆಂಬ ಪಟ್ಟ ಕೊಟ್ಟು ಆಗಿನ ಅನಿವಾರ್ಯದಂತೆ ಉದ್ಧರಿಸಿದ ಉದಾರಿ ನಮ್ಮ ಕೃಷ್ಣ! ಯಾವುದೇ ಮಾತು, ರೀತಿ, ನಿಯಮ, ಚೌಕಟ್ಟು ಇವನನ್ನು ಕಟ್ಟಿ ಹಾಕಲಾಗಲಿಲ್ಲ. ಬಾಲ್ಯದಲ್ಲಿ ಯಶೋದೆಗೆ ಅವನನ್ನು ಒಂದು ಯಕಃಶ್ಚಿತ್ ಒರಳಿಗೇ ಕಟ್ಟಿ ಹಾಕಲು ಆಗಿರಲಿಲ್ಲ ಅಂದಮೇಲೆ… ಈ ನಮ್ಮ ಕೃಷ್ಣ, ಮಹಾಯೋಧನೇನಲ್ಲ. ಆದರೆ ಯುದ್ಧನೀತಿ ಬಲ್ಲ ನಿಪುಣ, ನುಣುಚಿಕೊಳ್ಳುವ ಮಹಾಜಾಣ. ಹಾಗೆಂದೇ ಇವನಿಗೆ ರಣಚೋರನೆಂಬ ಹೆಸರೂ ಇದೆ. ಜರಾಸಂಧ 17 ಸಲ ಮಥುರೆಯ ಮೇಲೆ ದಂಡೆತ್ತಿ ಬರುತ್ತಾನೆ. ಆದರೂ, ಎಲ್ಲರ ಯುದ್ಧ ಗೆಲ್ಲಿಸುವ ಕೃಷ್ಣ ತಾನು ಎದುರು ನಿಂತು ಅವನನ್ನು ಮಣಿಸುವ ಗೋಜಿಗೆ ಹೋಗುವುದಿಲ್ಲ. ಕೊನೆಗೂ ಅವನು ಜರಾಸಂಧನ ವಧೆ ಮಾಡಿಸುವುದು ಭೀಮನ ಕೈಯಿಂದ! ಆತ ಶಿಶುಪಾಲನನ್ನು ಕೊಲ್ಲುವುದೂ ರಣಾಂಗಣದಲ್ಲಿ ಅಲ್ಲ, ರಾಜಸಭೆಯಲ್ಲಿ! ಕಂಸನನ್ನು ಕೊಂದಿದ್ದೂ ಮಲ್ಲಕುಸ್ತಿಯಲ್ಲಿ ಹೊರತು ಯುದ್ಧದಲ್ಲಲ್ಲ! ಕೃಷ್ಣ ಯೋಧನಲ್ಲ ಅಂದಮಾತ್ರಕ್ಕೆ ಆತ ಶೂರನಲ್ಲ ಎಂದು ತಿಳಿಯಬಾರದು. ಕೃಷ್ಣ ಸಂಯಮಿ. ಅನಗತ್ಯ ಸಾವುನೋವಿಗೆ ಬೆನ್ನು ತಿರುಗಿಸುವ ನಿಜಧೀರ. ಅವನು ಸಾಧ್ಯವಾದಷ್ಟೂ ಯುದ್ಧಗಳನ್ನು ತಪ್ಪಿಸಲು, ತಪ್ಪು ಮಾಡಿದ ವ್ಯಕ್ತಿಯನ್ನಷ್ಟೇ ಶಿಕ್ಷಿಸಲು ಪ್ರಯತ್ನಿಸುತ್ತಿದ್ದ. ಇಂಥಾ ಕೃಷ್ಣ, ಅರ್ಜುನ ಒಲ್ಲೆನೆಂದರೂ ಕುರುಕ್ಷೇತ್ರ ಯುದ್ಧವನ್ನೇಕೆ ಮಾಡಿಸಿದ? ಏಕೆಂದರೆ ಕೃಷ್ಣ, ಒಂದೊಂದೇ ಅಂಗಳದ ಕಳೆ ಕೀಳುವ ಬದಲು ಒಟ್ಟು ಬಂದಳಿಕೆ ರಾಶಿಗೆ ಕೊಳ್ಳಿ ಇಡಲು ಬಯಸಿದ್ದ. ಹೊಸತಾಗಿ, ಸರಿಯಾದ ಬೆಳೆಗೆ ಭೂಮಿ ಹಸನು ಮಾಡಲು ಬಯಸಿದ್ದ. ಕೆಡುಕು ಮಾತ್ರವಲ್ಲ, ಕೆಡುಕಿನ ಕೈಹಿಡಿದವರೂ ಕೇಡಿಗರೇ ಆದ್ದರಿಂದ ಅವರನ್ನೆಲ್ಲ ಒಗ್ಗೂಡಿಸಿ, ಗುಡಿಸಿಹಾಕುವ ಕೆಲಸ ಮಾಡಿದ. ಮಾಡಿಸಿದ, ಅರ್ಜುನನ ಕೈಯಿಂದ. ಕೃಷ್ಣನ ಯಾವುದೇ ಕಥೆ ಹೊಕ್ಕು ನೋಡಿದರೂ ಅಲ್ಲಿ ದ್ವೇಷ ಕಾಣುವುದಿಲ್ಲ. ಅವನ ಸಿಟ್ಟುಗಳು ಅನ್ಯಾಯದ ಬಗೆಗಷ್ಟೇ. ಬಯಲಲ್ಲಿ ಕೊಳಲೂದುತ್ತಾ ಬೆಳೆದ ಹುಡುಗ, ಕೈಯೊಡ್ಡಿದವರಿಗೆಲ್ಲ ಪ್ರೀತಿ ಮೊಗೆಮೊಗೆದು ಹಂಚಿದ. ಯಾರಿಗೂ ಇಲ್ಲವೆನ್ನಲಿಲ್ಲ. ಅಂಥಾ ದುರ್ಯೋಧನನನ್ನೂ ಖಾಲಿ ಕೈಯಲ್ಲಿ ಮರಳಿಸದ ಮಾಹಾನುಭಾನೀತ. ಹೂವು ಕೊಟ್ಟವರ ಮನೆಗೆ ಹೆಗಲ ಮೇಲೆ ಹುಲ್ಲು ಹೊತ್ತು ತರುವ, ಒಂದು ದಳ ತುಳಸಿಗೆ, ಹಿಡಿ ಅವಲಕ್ಕಿಗೆ ಒಲಿಯುವ, ಗೊಲ್ಲಬಾಲ, ಗೀತಾಚಾರ್ಯನ ಮಹಿಮೆ ಯಾರನ್ನು ತಾನೇ ಸೆಳೆಯದು ಹೇಳಿ? - ಚೇತನಾ ತೀರ್ಥಹಳ್ಳಿ

ಭಾನುವಾರ, ಜುಲೈ 14, 2024

ಅಪರ್ಣ ನುಡಿನಮನ

"ಸುಲಿದ ಬಾಳೆಯ ಹಣ್ಣಿನಂದದಿ ಕಳೆದ ಸಿಗುರಿನ ಕಬ್ಬಿನಂದದಿ ಅಳಿದ ಉಷ್ಣದ ಹಾಲಿನಂದದಿ ಲಲಿತವಾದ ಕನ್ನಡ" ಎಂಬ 16 ನೇ ಶತಮಾನದ ಕವಿ ಮಹಾಲಿಂಗರಂಗನ ನುಡಿಯನ್ನು ಸಾಕಾರಗೊಳಿಸಿ ಅಭಿವ್ಯಕ್ತಿಸಿದವರು ಖ್ಯಾತ ನಿರೂಪಕಿ ಶ್ರೀಮತಿ ಅಪರ್ಣ ವಸ್ತಾರೆ.ಅವರ ಬಾಯಿಂದ ಹೊರಹೊಮ್ಮುವ ಕನ್ನಡ ಪದಗಳನ್ನು ಕೇಳುವಾಗಲೆಲ್ಲ ಎನಿತು ಇನಿದು ಈ ಕನ್ನಡ ನುಡಿಯು ಎಂಬ ಕವಿವಾಣಿ ಸಹಜವಾಗಿ ನೆನಪಾಗುತ್ತಿತ್ತು.ಕನ್ನಡದಲ್ಲಿ ನಿರೂಪಣೆಗೆ ಘನತೆ-ಗೌರವ ದೊರಕಿಸಿ ಸ್ಟಾರ್ ವ್ಯಾಲ್ಯೂ ತಂದು ಕೊಟ್ಟ ಖ್ಯಾತಿ ಅಪರ್ಣ ಅವರಿಗೆ ಸಲ್ಲುತ್ತದೆ.ಒಂದು ಕಾಲ ಘಟ್ಟದಲ್ಲಿ ಯಾವುದೇ ಸರ್ಕಾರಿ ಇಲ್ಲವೇ ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದರೆ ಅವುಗಳ ನಿರೂಪಣೆಯ ಜವಾಬ್ದಾರಿ ಅಪರ್ಣ ಅವರದಾಗಿರುತಿತ್ತು.ಒಂದು ರೀತಿಯಲ್ಲಿ ಅವರು ನಿರೂಪಣಾ ಕ್ಷೇತ್ರದ ಅನಭಿಷಿಕ್ತ ರಾಣಿಯಾಗಿದ್ದರು.ಅವರ ನಿರೂಪಣೆಯನ್ನು ಕೇಳಲೆಂದೇ ಕಾರ್ಯಕ್ರಮಗಳಿಗೆ ಬರುವ ಅಭಿಮಾನಿಗಳಿದ್ದರು. ಅವರು ಕನ್ನಡ ಭಾಷೆ ಮತ್ತು ಸಾಹಿತ್ಯದ ಸಾರಸತ್ವವನ್ನು ಹೀರಿಕೊಂಡು, ಕನ್ನಡದ ಅಂತರಂಗ ಬಹಿರಂಗವನ್ನು ಮನನ ಮಾಡಿಕೊಂಡಿದ್ದರಿಂದ ಅಂತಹ ಭಾಷಾ ಪ್ರೌಢಿಮೆಯನ್ನು ಸಾಧಿಸಲು ಸಾಧ್ಯವಾಗಿತ್ತು.ಸುಮಾರು ಎರಡು ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಿರೂಪಿಸಿದ ಶ್ರೇಯಸ್ಸು ಅವರಿಗಿದೆ.ಸತತ ಎಂಟು ಗಂಟೆಗಳ ಕಾಲ ಒಂದು ಕಾರ್ಯಕ್ರಮವನ್ನು ನಡೆಸಿಕೊಟ್ಟ ದಾಖಲೆ ಅವರದು.ಡಾ.ರಾಜಕುಮಾರ ಅವರನ್ನು ಬಿಟ್ಟರೆ ಪರಿಶುದ್ಧವಾಗಿ ಕನ್ನಡ ಮಾತನಾಡುವ ಸಾಮರ್ಥ್ಯವನ್ನು ಅಪರ್ಣ ಪಡೆದಿದ್ದರು. ಅಪರ್ಣ ಚಲನಚಿತ್ರ ನಟಿಯಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದವರು.ಅವರ ವೃತ್ತಿ ಜೀವನ ಪ್ರಾರಂಭವಾಗಿದ್ದು ನಮ್ಮ ಜಿಲ್ಲೆಯಿಂದ ಎಂಬುದು ವಿಶೇಷ.ಆದ್ದರಿಂದಲೇ ಅವರ ಸಾವಿಗೆ ಜಿಲ್ಲೆಯಲ್ಲಿ ಹೆಚ್ಚು ಸ್ಪಂದನೆ ಸಿಗುತ್ತಿದೆ.ಕನ್ನಡ ಪ್ರಭ ಪತ್ರಿಕೆಯ ಸಿನೇಮಾ ಪುರವಣಿಯ ಸಂಪಾದಕರಾಗಿದ್ದ ಅವರ ತಂದೆ ನಾರಾಯಣಸ್ವಾಮಿಯವರು ಖ್ಯಾತ ನಿರ್ದೇಶಕರಾಗಿದ್ದ ಪುಟ್ಟಣ್ಣ ಕಣಗಾಲ್ ಅವರಿಗೆ ಆತ್ಮೀಯರಾಗಿದ್ದರು.ಹೀಗಾಗಿ ಪುಟ್ಟಣ್ಣನವರ ಕಣ್ಣಿಗೆ ಬಿದ್ದ ಅಪರ್ಣ ತರಾಸು ಅವರ ಕಾದಂಬರಿ ಆಧಾರಿತ ಮಸಣದ ಹೂವು ಸಿನೇಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು.ಈ ಚಲನಚಿತ್ರದ ಬಹುಮುಖ್ಯ ದೃಶ್ಯಗಳ ಚಿತ್ರಿಕರಣ ಕಾರವಾರ,ಸದಾಶಿವಗಡ,ಅಂಕೋಲಾ, ಬೇಲೇಕೇರಿ,ಶಿರೂರು ಸಾಣೆಕಟ್ಟಾ ಮುಂತಾದ ಕಡೆಗಳಲ್ಲಿ ನಡೆದಿತ್ತು.ಆಗ ಬೇಲೇಕೇರಿಯ ಪ್ರವಾಸಿ ಮಂದಿರದಲ್ಲಿ ನೋಡಿದ ಎತ್ತರದ ನಿಲುವಿನ ಅಂಬರೀಷ್ ಮತ್ತು ಬಟ್ಟಲು ಕಂಗಳ ಅಪರ್ಣ ಅವರ ಚಿತ್ರ ಈಗಲೂ ಕಣ್ಣಿಗೆ ಕಟ್ಟಿದಂತಿದೆ.ಆ ಚಲನಚಿತ್ರದ "ಉಪ್ಪಿನ ಸಾಗರಕೂ ಮುಪ್ಪಿದೆಯಂತೆ,ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ" ಎಂಬ ಹಾಡಿನ ಚಿತ್ರಿಕರಣದಲ್ಲಿ ನಮ್ಮ ಜಿಲ್ಲೆಯ ಬುಡಕಟ್ಟು ಜನಾಂಗವಾದ ಹಾಲಕ್ಕಿ ಒಕ್ಕಲು ಹೆಣ್ಣುಮಕ್ಕಳ ಅಲಂಕಾರ ಮಾಡಿಕೊಂಡು ಸಂಭ್ರಮಿಸಿದ್ದರು.ಆ ಚಲನಚಿತ್ರದ ಪಾರ್ವತಿಯ ಪಾತ್ರ ಅಪರ್ಣ ಅವರಿಗೆ ಯಾರೂ ಊಹಿಸಲಾಗದ ಕೀರ್ತಿಯನ್ನು ತಂದು ಕೊಟ್ಟಿತು.ಆದರೆ ಮುಂದೆ ಸಿನೇಮಾ ರಂಗದಲ್ಲಿ ಅವರ ಪ್ರತಿಭೆಗೆ ತಕ್ಕ ಪಾತ್ರಗಳು ದೊರಕಲಿಲ್ಲ.ನಂತರದ ದಿನಗಳಲ್ಲಿ ಅವರು ಕಾರ್ಯಕ್ರಮ ನಿರೂಪಣೆಗೆ ತೊಡಗಿ ತಮ್ಮ ಛಾಪು ಮೂಡಿಸಿದರು.ಆಗಾಗ ಕಿರುತೆರೆಯ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು.ಮುಕ್ತ ಧಾರಾವಾಹಿಯ ಶೀಲಾ ಪ್ರಸಾದ್,ಮಜಾ ಟಾಕೀಸ್‌ನ ಪಾತ್ರಗಳು ಅವರಿಗೆ ಹೆಚ್ಚು ಮನ್ನಣೆಯನ್ನು ದೊರಕಿಸಿಕೊಟ್ಟವು.ಕವಿ ನಾಗರಾಜ್ ವಸ್ತಾರೆಯವರನ್ನು ಮದುವೆಯಾಗಿ ಸಂತೃಪ್ತಿಯ ಬದುಕನ್ನು ಸಾಗಿಸುತ್ತಿದ್ದ ಅವರ ದೇಹದಲ್ಲಿ ಕ್ಯಾನ್ಸರ್ ಯಾವ ಮಾಯದಲ್ಲಿ ಪ್ರವೇಶಿಸಿತೋ! ಯಾರಿಗೂ ಸುಳಿವು ಕೊಡದೇ ದಂಪತಿಗಳು ನಡೆಸಿದ ಹೋರಾಟ ಕೊನೆಗೂ ಫಲಕಾರಿಯಾಗದೇ ಹೋಯಿತು! ಅಪ್ಪಟ ಕನ್ನಡದ ಧ್ವನಿಯೊಂದು ಉಡುಗಿ ಹೋಯಿತು.ಅವರ ನಿಧನದಿಂದ ಕನ್ನಡ ಸಾಂಸ್ಕೃತಿಕ ಲೋಕ ಅದ್ಭುತ ನಿರೂಪಕಿಯನ್ನು ಕಳೆದುಕೊಂಡಿದೆ.ಅವರಂತಹ ನಿರೂಪಕಿ ಹಿಂದೆ ಇರಲಿಲ್ಲ,ಮುಂದೆ ಬರಲಾರರು.ಅವರೊಬ್ಬರೇ ಅಪ್ಪಟ ಕನ್ನಡದ ನಿರೂಪಕಿಯಾಗಿ ಸಾವಿರದ ಕನ್ನಡದ ಮನಸ್ಸುಗಳಲ್ಲಿ ಶಾಶ್ವತರಾಗಿರುತ್ತಾರೆ. -ಶ್ರೀಧರ ಬಿ.ನಾಯಕ,ಬೇಲೇಕೇರಿ

ಶನಿವಾರ, ಫೆಬ್ರವರಿ 24, 2024

ಜನಪರ ಹೋರಾಟಗಳಲ್ಲಿ ವಿಷ್ಣು ನಾಯ್ಕರು.

ಸಾಹಿತಿಗಳ ಬಗ್ಗೆ ಜನಸಾಮಾನ್ಯರಲ್ಲಿ ಒಂದು ರೀತಿಯ ಗೌರವ ಭಾವನೆಯಿದೆ. ಸಾಹಿತಿಯಾದವರ ಮುಖ್ಯ ಕಾರ್ಯವೆಂದರೆ ಜನಪರವಾಗಿ ಯೋಚಿಸುತ್ತ ತನ್ನ ಸುತ್ತ ಮುತ್ತಲಿನ ಸಮಾಜದಲ್ಲಿ ಹೊಸ ಎಚ್ಚರ ಹುಟ್ಟಿಸುವುದು. ನಾವೆಲ್ಲರೂ ಸಮಾಜದ ಒಂದು ಭಾಗ, ಈ ಕಾರಣದಿಂದ ತಾನು ಬೇರೂರಿ ಬದುಕುವ ಸಮಾಜದ ವಾಸ್ತವ ಚಿತ್ರವನ್ನು ಸಾಹಿತ್ಯದ ಮೂಲಕ ಜನಸಾಮಾನ್ಯರಿಗೆ ಕಟ್ಟಿಕೊಡುವುದು, ಸಮಾಜದ ಓರೆ-ಕೊರೆಗಳನ್ನು ಅನಾವರಣಗೊಳಿಸುತ್ತ ಓದುಗರ ಸಾಮಾಜಿಕ ಅರಿವನ್ನು ವಿಸ್ತರಿಸುವುದು ತನ್ನ ಮೊದಲ ಕರ್ತವ್ಯ ಎಂಬ ನಂಬಿಕೆ ಬರಹಗಾರನಿಂದ ಹೊಮ್ಮಿದಾಗ ಮಾತ್ರ ಬದಲಾವಣೆಯನ್ನು ನಿರೀಕ್ಷಿಸಬಹುದು. ವ್ಯಕ್ತಿನಿಷ್ಠತೆಯ ಬದಲು, ವಸ್ತುನಿಷ್ಠ ನಿಲುವಿನಲ್ಲಿ ನಿಂತು ತನ್ನ ಸುತ್ತಣ ಸಾಮಾಜಿಕ ಪರಿಸರದಲ್ಲಿ ಇದ್ದುದನ್ನು ಇದ್ದ ಹಾಗೆ, ಯಾವ ಉತ್ಪ್ರೇಕ್ಷೆ,ಪೂರ್ವಾಗ್ರಹಗಳ ಸೋಂಕೂ ಇಲ್ಲದೆ ಚಿತ್ರಿಸುವುದು ಸಮಾಜಮುಖಿ ಬರಹಗಾರನಿಗೆ ಮಾತ್ರ ಸಾಧ್ಯ. ಸಾಹಿತಿಗಳು ಸಾಮಾಜಿಕ ಬದ್ಧತೆಯನ್ನು ಹೊಂದಿದವರಾಗಿದ್ದು, ವಸ್ತುನಿಷ್ಠವಾಗಿ ಚಿಂತಿಸುವ ಬರೆಯುವ ಹಾಗೂ ಜನಸಾಮಾನ್ಯರ ಬವಣೆಗಳ ಬಗ್ಗೆ ಬೆಳಕು ಚೆಲ್ಲುವ ದಾರ್ಶನಿಕರು ಎಂಬ ಗ್ರಹಿಕೆ ಓದುಗರಲ್ಲಿದೆ.ಒಬ್ಬ ಸೃಜನಶೀಲ ಬರಹಗಾರನ ಬರಹ ವೈಯಕ್ತಿಕವಾಗಿ ಹಾಗೂ ಸಾರ್ವಜನಿಕವಾಗಿ ಎರಡು ಸ್ತರಗಳಲ್ಲಿ ತೆರೆದುಕೊಳ್ಳುತ್ತದೆ. ತನ್ನ ಆತ್ಮ ಸಂತೋಷಕ್ಕೆ ಬರೆದುಕೊಂಡ ವೈಯಕ್ತಿಕ ಬರಹದ ಬಗ್ಗೆ ಸಾಹಿತಿಗೆ ಯಾವ ವಿಧವಾದ ಕಟ್ಟುಪಾಡುಗಳಿರುವುದಿಲ್ಲ. ಆದರೆ ಸಾರ್ವಜನಿಕ ಸಮಸ್ಯೆಗಳನ್ನು ತನ್ನ ಬರಹಕ್ಕೆ ವಸ್ತುವಿಷಯವನ್ನಾಗಿ ಆಯ್ಕೆ ಮಾಡಿಕೊಂಡು ರಚಿಸಿದ ಕಥೆ, ಕವಿತೆ, ಲೇಖನ ಯಾವುದೇ ಆಗಲಿ ಅದು ಚರ್ಚಿತ ವಿಷಯವಾಗಿ ಅನಾವರಣಗೊಳ್ಳುತ್ತದೆ. ಆದ್ದರಿಂದ ಸಾಹಿತಿಗಳು ಬರವಣಿಗೆಗೆ ಸೀಮಿತವಾಗಿ ನಿಷ್ಕ್ರೀಯರಾದರೆ ಸಾಲದು,ಜನ ಸಮುದಾಯದ ನೋವು ಕಷ್ಟಗಳಿಗೆ ಸ್ಪಂದಿಸುತ್ತ ಸಕ್ರಿಯರಾಗಿದ್ದರೆ ಅವರ ಬರವಣಿಗೆಗೆ ಬೆಲೆ ಬರುತ್ತದೆ.ಅಂತಹ ಮೌಲ್ಯಯುತ ಬದುಕನ್ನು ಬದುಕಿದವರು ವಿಷ್ಣು ನಾಯ್ಕರು. ಜಗದಗಲ ತುಂಬಿರುವ ನೋವಿನಲ್ಲಿ ಪೆನ್ನದ್ದು ಅರಳುವವು ಅಕ್ಷರವು ಕವನವಾಗಿ ನೋವು ಸಾಯುವವರೆಗೆ ಕವನ ಸಾಯುವುದಿಲ್ಲ ನಿಲ್ಲುವುದು ಸಾಂತ್ವನದ ಸಿಲುಬೆಯಾಗಿ. ವಿಷ್ಣು ನಾಯ್ಕರು ಒಂದು ವ್ಯಕ್ತಿಯಲ್ಲ,ಶಕ್ತಿ.ಒಂದು ಬೃಹತ್ ಸಂಸ್ಥೆ ಮಾಡುವ ಕಾರ್ಯವನ್ನು ಏಕಾಂಗಿಯಾಗಿ ಸಾಧಿಸಿದವರು.ತನ್ನ ಊರು, ಪರಿಸರ, ಅಂಕೋಲೆ, ಅಂಬಾರಕೊಡ್ಲು, ಉತ್ತರ ಕನ್ನಡ ಜಿಲ್ಲೆ, ಅಲ್ಲಿನ ಜನ ಸಮುದಾಯ ಇವುಗಳನ್ನೆಲ್ಲ ಪ್ರೀತಿ ಮತ್ತು ಕಾಳಜಿಯಿಂದ ನೋಡಿದವರು. ಇಲ್ಲಿನ ಜನರ ಒಡಲಾಳದ ನೋವನ್ನು, ತೀವ್ರ ಬಡತನವನ್ನು, ಬದುಕುವ ಛಲವನ್ನು, ಕಷ್ಟ-ಸುಖ- ಸಮೃದ್ಧಿಗಳನ್ನು ಕಣ್ಣಾರೆ ಕಂಡವರು ಜನಸಮುದಾಯದ ಜೊತೆಗೆ ಒಂದಾಗಿ ಬೆರೆತು ಮನುಷ್ಯನ ಬದುಕು ಹಸನಾಗಲು ನಿರಂತರವಾಗಿ ಚಿಂತಿಸಿದವರು.ಅವರು ಕೇವಲ ಬರೆದವರಲ್ಲ, ಬರೆದಂತೆ ಬದುಕಿದವರು.ಬದುಕು ಮತ್ತು ಬರಹದಲ್ಲಿ ಅಭಿನ್ನತೆಯನ್ನು ರೂಢಿಸಿಕೊಂಡವರು.ಅವರಲ್ಲಿದ್ದ ಶ್ರದ್ಧೆ,ನಿಷ್ಠೆ,ಕಾರ್ಯತತ್ಪರತೆ,ಸಮಯಪ್ರಜ್ಞೆ,ಶಿಸ್ತು ಮುಂತಾದ ಗುಣಗಳು ಅವರನ್ನು ವಿಶಿಷ್ಟರಲ್ಲಿ ವಿಶಿಷ್ಟರನ್ನಾಗಿ ಪರಿಗಣಿಸುವಂತೆ ಮಾಡಿದ್ದವು. ಹೆಣ್ಣಿಗಾಗಿ ಸತ್ತವರು ಕೋಟಿ ಮಣ್ಣಿಗಾಗಿ ಸತ್ತವರು ಕೋಟಿ ಹೊನ್ನಿಗಾಗಿ ಸತ್ತವರು ಕೋಟಿ ಗುಹೇಶ್ವರ ನಿನಗಾಗಿ ಸತ್ತವರನಾರನೂ ಕಾಣೆ ಎಂದು ಅಲ್ಲಮ ಪ್ರಭು ಹೇಳುತ್ತಾರೆ.ಇಂದು ಸಮಾಜದಲ್ಲಿ ಅನೇಕರು ಸಮಾಜದ ಲೋಪ ದೋಷಗಳ ಮಾತನಾಡುತ್ತ ಕೇವಲ ತಮಗಾಗಿ ಮಾತ್ರ ಬದುಕುತ್ತಾರೆ.ಆದರೆ ಸಾಮೂದಾಯಿಕ ಸಾಮಾಜಿಕ ಹಿತವನ್ನು ಬಯಸಿ ಸಮಾಜಕ್ಕಾಗಿ ಬದುಕುವವರು ವಿರಳ.ಅಂತಹ ವಿರಳರಲ್ಲಿ ವಿಷ್ಣು ನಾಯ್ಕರು ಒಬ್ಬರು.ಒಂದರ್ಥದಲ್ಲಿ ವಿಷ್ಣು ನಾಯ್ಕರು ಹುಟ್ಟು ಹೋರಾಟಗಾರರು.ಬಡತನವನ್ನೇ ಹಾಸಿ ಹೊದ್ದುಕೊಂಡ ನಿರಕ್ಷರಿ ಅಪ್ಪ ಅವ್ವನ ಆರು ಮಕ್ಕಳಲ್ಲಿ ಒಬ್ಬನಾಗಿ,ಹಸಿವು,ಬಡತನ,ಮೂಢನಂಬಿಕೆಗಳ ವಿರುದ್ಧ ಸೆಣೆಸುತ್ತ,ಬಾಲ್ಯದಿಂದಲೂ ಹೋರಾಟವನ್ನೇ ಮೈಗೂಡಿಸಿಕೊಂಡು ಬೆಳೆದು ಬಂದವರು.ಮುಂದೆ ಈ ಹೋರಾಟದ ಮನೋಭಾವವೇ ಅವರ ಸಾರ್ವಜನಿಕ ಬದುಕಿನ ಭಾಗವಾಗಿ ಬೆರೆತು ಹೋಯಿತು.ಅದನ್ನು ಜನಪರವಾಗಿ ಬಳಸಿಕೊಂಡು ಬೆಳೆಸಿಕೊಂಡು ಜನರು ನೋವಿಗೆ ಮಿಡಿಯುವ ಪ್ರಾಣಮಿತ್ರನಂತಾದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನಕರ ದೇಸಾಯಿ ಅವರ ನೇತೃತ್ವದಲ್ಲಿ 'ಉಳುವವನಿಗೇ ನೆಲೆದೊಡೆತನ' ಎಂಬ ಬೇಡಿಕೆ ಮುಂದಿಟ್ಟು ನಡೆದ ರೈತ ಆಂದೋಲನದಲ್ಲಿ ಬಡ ರೈತನ ಮಗನಾದ ವಿಷ್ಣು ನಾಯ್ಕ ಅವರು ತಮ್ಮ ೧೩ನೇ ವಯಸ್ಸಿನಲ್ಲೇ ವಿದ್ಯಾರ್ಥಿ ಹೋರಾಟಗಾರನಾಗಿ - ಪ್ರವೇಶಿಸಬೇಕಾದ ಸಂದರ್ಭ ಎದುರಾಯಿತು. ಆ ಹದಿಹರೆಯದಲ್ಲೇ ದೇಸಾಯಿಯವರ ರೈತ ಚಳುವಳಿಯ ನಿಷ್ಠಾವಂತ ಕಾರ್ಯಕರ್ತನಾಗಿ ಸೇರಿದ ಇವರು ೧೯೫೭ ರಿಂದ ೧೯೭೧ನೇ ಇಸವಿಯವರೆಗೆ ಹೋರಾಟದ ಕೊನೆಯ ದಿನಗಳವರೆಗ ಛಲ ಬಿಡದೆ ತಮ್ಮನ್ನು ತೊಡಗಿಸಿಕೊಂಡರು.ಅವರು ಕೆಂಪುಬಾವುಟ ಹಿಡಿದ ಕಾಲದಲ್ಲಿ 'ಸಮಾಜವಾದ ಅಂದರೇನು' ಎಂಬುದೇ ಅವರಿಗೆ ತಿಳಿದಿರಲಿಲ್ಲ. ಅವರು ಈ ರೈತಜನಾಂದೋಲನದಲ್ಲಿ ತೊಡಗಿಸಿಕೊಂಡದ್ದಕ್ಕೆ ಕಾರಣಗಳಿವೆ. ಅವರು ಹುಟ್ಟುವುದಕ್ಕಿಂತ ಮೊದಲೇ, ಅವರು ಹುಟ್ಟಿದ ಹಳ್ಳಿಯಾದ ಅಂಬಾರಕೊಡ್ಲದ ಪರಿಸರದಲ್ಲಿಯೇ ಆ ಹೋರಾಟದ ಗಾಳಿ ಇತ್ತು. ಗ್ರಾಮೀಣ ಭಾಗದಲ್ಲಿ ಈ ಹೋರಾಟವನ್ನು ಕುರಿತ ಮೊದಲ ಬೃಹತ್ ಸಭೆ ನಡೆದದ್ದೇ ಅವರ ಊರು ಅಂಬಾರಕೊಡ್ಲದಲ್ಲಿ-ಅವರು ಹುಟ್ಟುವುದಕ್ಕಿಂತ ನಾಲ್ಕುವರ್ಷ ಮೊದಲು,-೧೯೪೦ರಲ್ಲಿ. ಭೂಮಾಲಿಕವರ್ಗದವರ ಪಿತೂರಿ ಕಾರಣವಾಗಿ, ದಿನಕರ ದೇಸಾಯಿಯವರಿಗೆ 'ಹಾವಳಿ ಮಂಜ' ಎಂದು ಕುಖ್ಯಾತಿಯ ನಾಮಕರಣ ಮಾಡಿ, ವರ್ಗಕಲಹ ಹುಟ್ಟುಹಾಕುತ್ತಿರುವವರೆಂಬ ಆರೋಪ ಮಾಡಿ, ಅವರನ್ನು ಗಡಿಪಾರು ಶಿಕ್ಷೆಗೆ ಆಗಿನ ಬ್ರಿಟಿಷ್ ಸರ್ಕಾರ ಗುರಿಪಡಿಸಿದ್ದು ಅದೇ ವರ್ಷ. ಈ ರೈತ ಹೋರಾಟವೇ ಕಾವು ಕೊಟ್ಟು ವಿಷ್ಣುನಾಯ್ಕರ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಪ್ರಜ್ಞೆಯನ್ನು ಹೊರೆಸಿ, ಮೊಳಕೆಯೊಡೆಸಿ ಬೆಳೆಸಿದ್ದು. ಅವರು ಸಮಾಜವಾದವನ್ನೋ ಸಮತಾವಾದವನ್ನೋ ಅಧ್ಯಯನ ಮಾಡಿ ಪಡೆದ ತಿಳಿವು ಮತ್ತು ಪ್ರೇರಣೆಯಿಂದ ಈ ಹೋರಾಟಕ್ಕೆ ಪ್ರವೇಶಿಸಿದವರಲ್ಲ. ಈ ರೈತ ಹೋರಾಟದೊಂದಿಗೆ ಕೂಡಿಕೊಳ್ಳುವುದು ಅವರಿಗೆ ಒಂದು ತಾತ್ಕಾಲಿಕ ಉಮೇದಿಯ ವೇಷವೋ ಆವೇಶವೋ ಆಗಿರಲಿಲ್ಲ. ಈ ಹೋರಾಟ ಅವರ ಒಡಲ ಉರಿ ಹಸಿವೆಗೆ ದನಿಕೊಡುವ ಒಂದು ಸಹಜ ಬೆಳವಣಿಗೆಯಾಗಿತ್ತು. ಮನೆಯಲ್ಲಿ ಎರಡು ಹೊತ್ತಿನ ತುತ್ತನ್ನಕ್ಕೂ ಗತಿಯಿಲ್ಲದ ಕುಟುಂಬ ಅವರದಾಗಿತ್ತು. ಇರುವ 25 ಗುಂಟೆ ಗೇಣಿ ಜಮೀನಿನಲ್ಲಿ ವರ್ಷವಿಡೀ ಕಷ್ಟಪಟ್ಟು ದುಡಿದ ಪ್ರಯುಕ್ತ ಬೆಳೆದು ನಿಂತ ಪೈರಿನಲ್ಲಿ ಸರಿ ಅರ್ಧಭಾಗ ಒಡೆಯನ ಮನೆಗೆ-ಅಳೆಯಬೇಕಾಗುತ್ತಿತ್ತು. ನೈಸರ್ಗಿಕ ಕ್ಷಾಮವೋ, ಅತಿವೃಷ್ಟಿಯೋ ಉಂಟಾಗಿ ಬೆಳೆ ನಾಶವಾದರೂ 'ಗೇಣಿ' ಎಂಬ ಹೆಸರಿನಲ್ಲಿ ಭೂಮಾಲಿಕರ ಮನೆಗೆ ಅಳೆಯಬೇಕಾದುದನ್ನು ಅಳೆಯದಿದ್ದರೆ ಅದನ್ನು ಭೂ ಮಾಲೀಕ 'ನಗದುಸಾಲ' ಎಂದು ಪರಿಗಣಿಸಿ ಛಾಪಾ ಕಾಗದದಲ್ಲಿ ಬರೆದು ಸಹಿ ಪಡೆಯುತ್ತಿದ್ದರು. ಹೀಗೆ ಬರೆಯಿಸಿಕೊಂಡ ಹಣಕ್ಕೆ ಬಡ್ಡಿಯಾಕರಣೆಯಾಗುತ್ತಿತ್ತು. ಅಸಲು ಬಡ್ಡಿ ಬೆಳೆಯುತ್ತಿದ್ದಂತೆ ಒಂದುದಿನ ಮನೆಜಪ್ತಿ ವಾರಂಟನ್ನು ಎದುರಿಸಬೇಕಾಗುತ್ತಿತ್ತು. ಒಂದುಕಡೆ ನಿರುಮ್ಮಳ ಊಟಕ್ಕಿಲ್ಲದ ನೋವು, ಇನ್ನೊಂದೆಡೆ ಯಾವಾಗ ಮನೆ ಜಪ್ತಿಗೆ ಬರುವುದೋ ಎಂಬ ಆತಂಕ. ಇಂಥ ನಿರಂತರ ನೋವು- ನಷ್ಟಗಳಲ್ಲಿ ನರಳಿದ ಬಹಳಷ್ಟು ಕುಟುಂಬಗಳಲ್ಲಿ ಅವರ ಕುಟುಂಬವೂ ಒಂದಾಗಿತ್ತು.ಇಂತಹ ಸಂದರ್ಭದಲ್ಲಿ ದುಡಿಯುವ ರೈತನಿಗೆ ಅವನ ಜಮೀನಿನ ಮಾಲೀಕತ್ವದ ಹಕ್ಕು ಬರಬೇಕೆಂದು ಚಳವಳಿ ಆರಂಭವಾದಾಗ ಯಾವ ಜಾಗೃತ ಮನಸ್ಸು ಸುಮ್ಮನೆ ಇರಲು ಸಾಧ್ಯ?... ಮುಲ್ಕಿ ಮುಗಿಸಿ ಹೈಸ್ಕೂಲು ಸೇರುತ್ತಿರುವಾಗಲೇ ಕೆಂಪುಬಾವುಟ ಕೈಗೆ ಬಂದಿತ್ತು. ಶ್ರಮಜೀವಿಗಳ ಒಕ್ಕಟ್ಟು ಮತ್ತು ಹೋರಾಟ ಅವರ ಕಣ್ಮುಂದೆ ಇರುವ ನೆಮ್ಮದಿಯ ಬದುಕಿನ ದಾರಿಗಳಾಗಿದ್ದವು. ಹೈಸ್ಕೂಲು ಮುಗಿಸುವುದರೊಳಗಾಗಿ ಅವರ ಹೆಸರು ರೈತಸಂಘಟನೆಯಲ್ಲಿ-ದಿನಕರ ದೇಸಾಯಿ, ವಿಜಯಾ ನಾಡಕರ್ಣಿ ದಯಾನಂದ ನಾಡಕರ್ಣಿ, ಗಿರಿಪಿಕಳೆ, ಶಂಕರ ಕೇಣಿ, ಅಮ್ಮೆಂಬಳ ಆನಂದ, ಗಂಗಮ್ಮ ಅವರ ಗಮನ ಸೆಳೆಯುವಂತಾಯಿತು.ಅದರಿಂದಾಗಿ ಹತ್ತು-ಹಲವು ರೈತಪರವಾದ ಸಭೆ-ಸಮಾರಂಭಗಳಲ್ಲಿ ಅವರು ನಿರಂತರ 13 ವರ್ಷಗಳವರೆಗೆ ತೊಡಗಿಸಿಕೊಂಡು ಸಮಚಿತ್ತದಿಂದ ಎಲ್ಲ ಕಠಿಣ ಪ್ರಸಂಗಗಳನ್ನು ಎದುರಿಸಿದ್ದರು,ಚುನಾವಣೆಗಳಲ್ಲಿ ವಹಿಸಲಾಗುತ್ತಿದ್ದ ಹೊಣೆಗಾರಿಕೆಗಳನ್ನೆಲ್ಲ ನಿಭಾಯಿಸಿದ್ದರು,13 ವರ್ಷಗಳ ಆ ಸುದೀರ್ಘ ಹೋರಾಟ ಅವರ ಪಾಲಿನ ಸಾರ್ಥಕ ಬದುಕಿನ ಸ್ಮರಣಾರ್ಹ ದಿನಗಳಾಗಿವೆ. ಇಂತಹ ಬದ್ಧತೆಯ ಉಳ್ಳ ಹೋರಾಟಗಾರರು ಶ್ರಮದ ಫಲವಾಗಿಯೇ ಸರ್ಕಾರ ಜಮೀನು ರಹಿತ ಬಡ ರೈತರಿಗೆ ಸಾಗುವಳಿ ಯೋಗ್ಯ ಒಂದು ಲಕ್ಷ ಎಕರೆ ಅರಣ್ಯ ಜಮೀನನ್ನು ಬಿಟ್ಟು ಕೊಡುವ ವಾಗ್ದಾನ ಮಾಡಿತು.ಇದು ನಿಜವಾಗಿ ಜನಪರ ಹೋರಾಟದ ವಿಜಯವಾಗಿತ್ತು. ಇದೇ ಸಮಯದಲ್ಲಿ ಸಮಾಜವಾದಿ ನಿಲುವಿನಿಂದ ಪ್ರಭಾವಿತರಾಗಿ, ತಮ್ಮ ಸ್ವಂತ ಊರಿನಲ್ಲಿ ಸಮಾಜವಾದಿ ಯುವಕ ಸಂಘವನ್ನು ಹುಟ್ಟು ಹಾಕಿ ಜನಪರವಾದ ಕಾರ್ಯಕ್ಕೆ,ಜನಜಾಗ್ರತಿ ಅಭಿಯಾನಕ್ಕೆ ಅಲ್ಲಿನ ಯುವಕರನ್ನು ಸಂಘಟಿಸಿದರು. ಅದರ ಮೂಲಕವೇ ಊರಿಗೆ ಅಗತ್ಯವಿರುವ ರಸ್ತೆ, ನೀರು, ದಾರಿದೀಪ, ಶಾಲೆ ಮುಂತಾದ ಅಭಿವೃದ್ಧಿಗಾಗಿ ತೊಡಗಿಸಿಕೊಂಡರು. ನಾಲ್ಕಡಿ ಅಗಲಳತೆಯ ಅಂಬಾರಕೊಡ್ಡದ ರಸ್ತೆಗಳೆಲ್ಲ ಅಗಲೀಕರಣಗೊಂಡು ವಾಹನ ಸಂಚಾರಕ್ಕೆ ಅನುಕೂಲವಾದುದು ಆಗಲೇ. ಶ್ರಮದಾನ, ಮೆರವಣಿಗೆ, ಭಾಷಣ ಮುಂತಾದ ಕಾರ್ಯಕ್ರಮಗಳಿಗೂ ನೇತೃತ್ವ ನೀಡಿದರು. ಜೊತೆಗೆ ಊರ ಯುವಜನರ ಸಾಂಸ್ಕೃತಿಕ ಚಟುವಟಿಕೆಗಳಿಗೂ ಪ್ರೋತ್ಸಾಹಿಸಿದರು.ಈ ಯುವಕ ಸಂಘದಿಂದ ಪ್ರೇರಿತರಾಗಿ ಸುತ್ತಲಿನ ಹಳ್ಳಿಗಳಲ್ಲಿಯೂ ಯುವಕ ಸಂಘಗಳು ಹುಟ್ಟಿಕೊಂಡು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು ವಿಷ್ಣು ನಾಯ್ಕರ ಜನಪರ ಕಾಳಜಿಯ ಯಶಸ್ಸು ಎಂದು ಹೇಳಬಹುದು. ಸಮಾಜದ ಏಕತೆ ಮತ್ತು ಸಾಮರಸ್ಯಕ್ಕೆ ವಿಷ್ಣು ನಾಯ್ಕರು ನೀಡಿದ ಕೊಡುಗೆ ಗಮನಾರ್ಹವಾದದ್ದು.ದೇಶದಲ್ಲಿ ಕೋಮುಸೌಹಾರ್ದ ಹದಗೆಡುತ್ತಿದ್ದ ಸಮಯದಲ್ಲಿ ವಿಷ್ಣು ನಾಯ್ಕರು ಅಂಕೋಲೆಯ ಸಮಾನ ಮನಸ್ಕ ಸ್ನೇಹಿತರೊಂದಿಗೆ ಸೇರಿ, ಸರಕಾರಿ ಅಧಿಕಾರಿಗಳ ಸಹಕಾರವನ್ನೂ ಪಡೆದು ಅಂಕೋಲೆಯಲ್ಲಿ ಬೀದಿ ಕವಿಗೋಷ್ಠಿ ಹಾಗೂ ಒಂದು ಹನಿ ರಕ್ತ ಎಂಬ ಬೀದಿ ನಾಟಕ ಮುಂತಾದ ಚಟುವಟಿಕೆಗಳನ್ನು ನಡೆಸಿದರು. ವಿಚಾರವಾದಿಗಳ ವೇದಿಕೆಗಳನ್ನು ಬಳಸಿಕೊಂಡು ಭಾಷಣಗಳ ಮೂಲಕ, ಆಗಲೇ ಘಟಿಸಿ ಹೋದ ಅಹಿತಕರ ಘಟನೆಗೆ ಕಾರಣರಾದವರ ನಿಲುವನ್ನು ತರಾಟೆಗೆ ತೆಗೆದುಕೊಂಡರು. ಇದು ಅವರ ಪ್ರಗತಿಪರ ಜನಪರ ನಿಲುವಿನ ದೃಢತೆಯಾಗಿತ್ತು.ಇಂತಹುದೇ ಇನ್ನೊಂದು ಪ್ರಸಂಗದಲ್ಲಿ ಇಬ್ಬರು ವ್ಯಕ್ತಿಗಳ ನಡುವಿನ ವೈಯಕ್ತಿಕ ಜಗಳ ಕೆಲವರ ಪ್ರತಿಷ್ಠೆಯಿಂದಾಗಿ ಎರಡು ಸಮುದಾಯಗಳ ಮಧ್ಯೆ ವೈಷಮ್ಯವನ್ನು ಹುಟ್ಟುಹಾಕಿ ಅಂಕೋಲೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಂದರ್ಭದಲ್ಲಿ ಎದುರಾಗಿತ್ತು.ಇದು ಇಡೀ ಅಂಕೋಲೆಯ ಸಾಮರಸ್ಯವನ್ನು ಶಾಶ್ವತವಾಗಿ ಹದಗೆಡಿಸುವ ಆತಂಕಕಾರಿ ಬೆಳವಣಿಗೆಯಾಗಿತ್ತು. ಇಂತಹ ಬೆಳವಣಿಗೆ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಅರಿತ ವಿಷ್ಣು ನಾಯ್ಕರು ಎರಡೂ ಸಮುದಾಯದ ಹಿರಿಯರನ್ನು ಭೇಟಿಮಾಡಿ ಸಮಾಜದಲ್ಲಿ ಸಾಮರಸ್ಯವನ್ನು ಉಂಟು ಮಾಡಲು ಶ್ರಮಿಸಿದರು.ಆ ವೇಳೆಗೆ ಕೆಲವರು ಅವರ ಸೈಕಲ್ಲನ್ನು ತಡೆದು ಬೆದರಿಸಿದಾಗಲೂ ಅದಕ್ಕೆಲ್ಲ ಸೊಪ್ಪು ಹಾಕದೇ ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದರು.ಆದರೆ ಇದನ್ನೊಂದು ಹೋರಾಟವೆಂದು ಅವರೆಂದೂ ಬಿಂಬಿಸಿ ಕೊಂಡು ಎಲ್ಲಿಯೂ ದಾಖಲಿಸಿಲ್ಲ. ಇತಿಹಾಸದಲ್ಲಿ ಇಂತಹ ಕಹಿ ಘಟನೆಗಳು ಸ್ಥಾನ ಪಡೆದು ಮುಂದಿನ ತಲೆಮಾರಿಗೆ ತಪ್ಪು ಸಂದೇಶ ಹೋಗಬಾರದೆಂಬ ಸದುದ್ದೇಶ ಇದರ ಹಿಂದಿರುವಂತಿದೆ. ಅಂಕೋಲಾ ತಾಲೂಕಿನಲ್ಲಿ ೧೯೯೧ರಲ್ಲಿ ಸ್ಥಳೀಯ ಸಾಮಾಜಿಕ ಸೇವಾ ಸಂಸ್ಥೆಯಾದ ಕ್ರಿಸ್ತಮಿತ್ರ ಆಶ್ರಮದ ಸಹಯೋಗದಲ್ಲಿ ಪ್ರಾರಂಭಗೊಂಡ ಮದ್ಯಪಾನ ವಿರೋಧಿ ಅಂದೋಲನದಲ್ಲಿ ವಿಷ್ಣು ನಾಯ್ಕ ಅವರು ನಿರ್ವಹಿಸಿದ ಪಾತ್ರ ಬಹಳ ಮಹತ್ವದ್ದು. ಮದ್ಯಪಾನ ದುಶ್ಚಟಗಳಿಂದ ದೂರವಿರುವಂತೆ ಜನರಿಗೆ ತಿಳಿಹೇಳಲು ವಿಷ್ಣು ನಾಯ್ಕರು ಆ ಸಂದರ್ಭದಲ್ಲಿ ಬಳಸಿಕೊಂಡದ್ದು ಬೀದಿನಾಟಕಗಳ ಮಾಧ್ಯಮ. ಆ ಒಂದು ದಶಕದಲ್ಲಿ ಜಿಲ್ಲೆಯಾದ್ಯಂತ ಮದ್ಯಪಾನ ವಿರೋಧಿ ಅಂದೋಲನ ವ್ಯಾಪಿಸಿದ್ದರ ಹಿಂದೆ ವಿಷ್ಣು ನಾಯ್ಕ ಅವರು ಹುಟ್ಟು ಹಾಕಿದ 'ರಾಘವೇಂದ್ರ ರಂಗಸಂಗ'ದ ಪಾತ್ರ ಬಹಳ ಹಿರಿದು. ಮದ್ಯಪಾನದಿಂದ ಆಗುವ ವಿವಿಧ ಅನಾಹುತಗಳನ್ನು ಬಿಂಬಿಸುವ ಸರಾಯಿ ಸೂರಪ್ಪ ಎಂಬ ಬೀದಿನಾಟಕವನ್ನು ಸ್ವತಃ ಬರೆದು ನಿರ್ದೇಶಿಸಿ, ಜಿಲ್ಲೆಯ ಹಲವಾರು ಹಳ್ಳಿಗಳಿಗೆ ಹೋಗಿ ಅಭಿನಯಿಸಿದ ರೀತಿ ನಿಜಕ್ಕೂ ಪರಿಣಾಮಕಾರಿಯಾಗಿತ್ತು ಅದನ್ನು ನೋಡಿ ಮನವರಿಕೆ ಮಾಡಿಕೊಂಡ ಹಲವರು ಕುಡಿತದ ಚಟದಿಂದ ಹೊರಬಂದ ಉದಾಹರಣೆಗಳೂ ಇವೆ. ಅಂದು ವಯಸ್ಕರ ಶಿಕ್ಷಣ ಸಚಿವರಾಗಿದ್ದ ಶ್ರೀ ಪ್ರಭಾಕರ ರಾಣೆಯವರ ಒತ್ತಾಸೆಯ ಮೇರೆಗೆ ೯೦ರ ದಶಕದಲ್ಲಿ ರಾಜ್ಯಾದ್ಯಂತ ನಡೆದ ಸಂಪೂರ್ಣ ಸಾಕ್ಷರತಾ ಅಂದೋಲನದಲ್ಲಿ ವಿಷ್ಣು ನಾಯ್ಕ ಅವರು ತೊಡಗಿಸಿಕೊಂಡ ಪರಿ ಅವರ ಬದ್ಧತೆಯ ದ್ಯೋತಕವಾಗಿದೆ. ವಿಶೇಷವಾಗಿ ಸಾಕ್ಷರತಾ ಅಂದೋಲನದ ಪ್ರಾರಂಭದಲ್ಲಿ ವಾತಾವರಣ ನಿರ್ಮಾಣಕ್ಕಾಗಿರುವ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಕಲಾಜಾಥಾ ತಂಡಗಳ ಮುಂಚೂಣಿ ನಾಯಕರಾಗಿ ಜಿಲ್ಲೆಯ ಹನ್ನೊಂದು ತಾಲೂಕುಗಳಲ್ಲೂ ಮಿಂಚಿನ ಸಂಚಾರ ಕೈಕೊಂಡು ಅಕ್ಷರಾಭ್ಯಾಸದ ವಾತಾವರಣವನ್ನು ಗ್ರಾಮೀಣ ನಿರಕ್ಷರಿ ಜನತೆಯ ಮನಸ್ಸಿನಲ್ಲಿ ಮೂಡಿಸುವಲ್ಲಿ ಯಶಸ್ವಿಯಾದರು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಾಕ್ಷರತಾ ಕಾರ್ಯಕಾರಿಣಿ ಸಮಿತಿಯ ಕ್ರಿಯಾಶೀಲ ಸದಸ್ಯರಾಗಿ ತಮ್ಮ ಅಮೂಲ್ಯ ಸೇವೆ ಸಲ್ಲಿಸಿದರು. ಶಿಕ್ಷಣದಲ್ಲಿ ಭಾಷಾ ಮಾಧ್ಯಮದ ಕುರಿತಾಗಿ ನಡೆದ ಗೋಕಾಕ ಚಳುವಳಿಯ ಸಂದರ್ಭದಲ್ಲಿ ವಿಷ್ಣು ನಾಯ್ಕರು ತಾಲೂಕಿನ ಕನ್ನಡಾಭಿಮಾನಿ ಬಳಗದೊಂದಿಗೆ ಸೇರಿ ೨೧ ದಿನಗಳ ಸರದಿ ಉಪವಾಸ ಸತ್ಯಾಗ್ರಹಕ್ಕೆ ಬಲ ತುಂಬಿದರು. ಕನ್ನಡಾಭಿಮಾನ ಮೂಡಿಸಲು ರಾಜ್ಯಮಟ್ಟದಲ್ಲಿ ವಿಶೇಷ ಉಪನ್ಯಾಸ, ಸಾರ್ವಜನಿಕ ಜಾಥಾ ಮುಂತಾದವುಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡರು. ಗೋಕಾಕ ಚಳುವಳಿ ಸಂದರ್ಭದಲ್ಲಿ ಧಾರವಾಡದ ರಾಜ್ಯ ಕನ್ನಡ ಕ್ರಿಯಾ ಸಮಿತಿಯ ಕರೆಗೆ ಓಗೊಟ್ಟು ಧರಣಿಯಲ್ಲಿ ಪಾಲ್ಗೊಂಡರು. ಉತ್ತಮ ವಾಗ್ಮಿ,ಗಂಭೀರ ವ್ಯಕ್ತಿತ್ವ,ಪ್ರಖರ ವೈಚಾರಿಕ ನಿಲುವುಗಳನ್ನು ಹೊಂದಿದ್ದ ವಿಷ್ಣು ನಾಯ್ಕರು ತಮ್ಮ ಖಚಿತ ವಿಚಾರಗಳೊಂದಿಗೆ ಜಿಲ್ಲೆಯಲ್ಲಿ ನಡೆಯುವ ಯಾವುದೇ ತರದ ಸಾಮಾಜಿಕ ಹೋರಾಟವಿರಲಿ ಅಲ್ಲಿ ತಮ್ಮ ಸಹಭಾಗಿತ್ವವನ್ನು, ನೈತಿಕ ಬಲವನ್ನು ನೀಡುತ್ತಲೇ ಬಂದಿದ್ದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಆಗಾಗ ತಲೆ ಎತ್ತುವ ಪರಿಸರ ಸಂಬಂಧಿ ಹೋರಾಟಕ್ಕೆ ಭಾವಾವೇಶ ಬಿಟ್ಟು ವೈಜ್ಞಾನಿಕ ದೃಷ್ಟಿಕೋನದಿಂದ ಅಗತ್ಯಕ್ಕೆ ತಕ್ಕಷ್ಟು ನೈತಿಕ ಬೆಂಬಲ ನೀಡಿದವರಾಗಿದ್ದಾರೆ. ಜನಜೀವನಕ್ಕೆ ಮಾರಕವಾಗಬಹುದಾದಂತ ಅಣು ಉತ್ಪನ್ನ ಕೇಂದ್ರ, ಉಷ್ಣ ವಿದ್ಯುತ್ ಸ್ಥಾವರ, ನೌಕಾನೆಲೆ, ಗಣಿ ಉದ್ಯಮ ಮುಂತಾದವುಗಳನ್ನು ತಾತ್ವಿಕ ನೆಲೆಯಲ್ಲಿ ವಿರೋಧಿಸುವುದರ ಜೊತೆಗೆ ಪರಿಸರ ಸ್ನೇಹಿ ಅಭಿವೃದ್ಧಿಗಳಾದ ಪ್ರವಾಸೋದ್ಯಮ, ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗ ಮುಂತಾದ ಹಲವು ಜನೋಪಯೋಗಿ ಯೋಜನೆಗಳ ಅನುಷ್ಠಾನಕ್ಕಾಗಿ ಒತ್ತಾಯಿಸುತ್ತಲೇ ಬಂದಿದ್ದರು.ಇತ್ತೀಚಿನ ದಿನಗಳಲ್ಲಿ ಹೋರಾಟಗಳು ಜನಪರವಾಗಿರದೆ ವ್ಯಕ್ತಿಪರವಾಗುತ್ತಿವೆ.ಜನಹಿತವನ್ನು ಗಮನದಲ್ಲಿಟ್ಟುಕೊಂಡು ನಡೆಯುವ ಹೋರಾಟಗಳನ್ನು ರಾಜಕೀಯ ಒತ್ತಡದಿಂದ ದಮನಗೊಳಿಸುತ್ತಿರುವ ಸಂದರ್ಭದಲ್ಲಿ ವಿಷ್ಣು ನಾಯ್ಕ ಮತ್ತು ಅವರ ಸಮಕಾಲೀನರ ಹೋರಾಟ ಇತಿಹಾಸದ ಪುಟಗಳಲ್ಲಿ ಶಾಶ್ವತ ಸ್ಥಾನ ಪಡೆಯುತ್ತವೆ.

ಬುಧವಾರ, ಮಾರ್ಚ್ 1, 2023

ಮರೆಯಾದ ಬುಡಕಟ್ಟು ಭಾಷೆ

ತ್ರಿಪುರ ರಾಜ್ಯದ ಬುಡಕಟ್ಟು ಭಾಷೆಗಳಲ್ಲಿ ಒಂದಾದ `ಸೈಮರ್~ನ ಕಥೆ-ವ್ಯಥೆ ಇದು.ಇನ್ನು ಕೆಲವೇ ವರ್ಷಗಳಲ್ಲಿ ಅದು ಜಗತ್ತಿನಿಂದ ನಿರ್ಗಮಿಸುವುದು ಖಚಿತ! ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ಕೇವಲ ನಾಲ್ಕು ಮಾತ್ರ ಎಂದು ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ (ಸಿಐಐಎಲ್)2017ರಲ್ಲಿ ಅಧಿಕೃತವಾಗಿ ಘೋಷಿಸಿದೆ.ಕೊನೆಯುಸಿರೆಳೆಯುತ್ತಿರುವ ಈ ಭಾಷೆಯ ಅಂತಿಮ ಕೊಂಡಿಯಾಗಿರುವ 70 ವರ್ಷದ ಸುಕೃತಾಂಗ್ ಸೈಮ‌ ಅವರನ್ನು ಸಿಐಐಎಲ್ ತಂಡವು ಇಲ್ಲಿಗೆ ಕರೆದುಕೊಂಡು ಬಂದು ಈ ಭಾಷೆಯಲ್ಲಿರುವ ಜ್ಞಾನ, ಜನಪದ, ಆಚಾರ, ವಿಚಾರಗಳನ್ನು ದಾಖಲಿಸಿಡಲು ಪ್ರಯತ್ನಿಸಿದೆ. . ತ್ರಿಪುರ ರಾಜ್ಯದ ದಲಾಯ್ ಜಿಲ್ಲೆಯ ಘಂಟಾಚಲ್ ಕುಗ್ರಾಮದಲ್ಲಿರುವ `ಹಲಂ' ಜನಾಂಗದಲ್ಲಿ `ಸೈಮರ್' ಉಪಪಂಗಡದ ವ್ಯಕ್ತಿ ಆತ. ಸದ್ಯ ಈ ಭಾಷೆ ಮಾತನಾಡುವ ನಾಲ್ಕು ಕುಟುಂಬಗಳಲ್ಲಿ ಸುಕೃತಾಂಗ ಹಿರಿಯ ವ್ಯಕ್ತಿ. ತ್ರಿಪುರಾದ ಬೊರಕ್ ಕುಕುಬೈ ಬೊಸಾಂಗ್ ಸರ್ಕಾರೇತರ ಸಂಸ್ಥೆಯ ಅಧ್ಯಕ್ಷ ನಂದಕುಮಾರ್ ದೇವವರ್ಮ ಅವರು ಭಾಷಾ ಮಂದಾಕಿನಿ ಕಾರ್ಯದ ಅಂಗವಾಗಿ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಅವರು ಸಿಐಐಎಲ್‌ಗೆ ಈ ಸಂಗತಿಯನ್ನು ತಿಳಿಸಿದ ನಂತರ ಸೈಮರ್ ಭಾಷೆಯ ಅಧ್ಯಯನ ಆರಂಭವಾಗಿದೆ. ಸುಕೃತಾಂಗ್‌ಗೆ ಸೈಮರ್ ಭಾಷೆ ಹೊರತುಪಡಿಸಿ ಬೇರೆ ಯಾವುದೇ ಭಾಷೆ ಬರುವುದಿಲ್ಲ. ಅವರ ಭಾವನೆ ಮತ್ತು ತಮ್ಮ ಸಂಶೋಧನೆಯ ಕುರಿತು ನಂದಕುಮಾರ್ ವಿವರಿಸಿದ ಅಂಶಗಳು ಹೀಗಿವೆ; ಸೈಮರ್ ಕುಟುಂಬಗಳು ಕೂಲಿ ಮಾಡಿಕೊಂಡು ಜೀವನ ಸಾಗಿಸುವವರು. ಬಡತನ ರೇಖೆಗಿಂತ ಕೆಳಗಿರುವ ಈ ಜನಾಂಗವು ಅಳಿವಿನಂಚಿಗೆ ತಲುಪಲು ಸಾಮಾಜಿಕ, ಆರ್ಥಿಕ, ಆಧುನಿಕ ಕಾರಣಗಳಿವೆ. 2009ರಲ್ಲಿ 25 ಮಂದಿ ಈ ಭಾಷೆ ಬಳಕೆ ಮಾಡುತ್ತಿದ್ದರು. ಇದೀಗ ಕೇವಲ ನಾಲ್ಕ ಜನರು ಸೈಮರ್ ಭಾಷೆ ಬಳಸುತ್ತಿದ್ದಾರೆ. ಬಡತನದ ಕಾರಣದಿಂದ ದೂರದ ಊರುಗಳಿಗೆ ಉದ್ಯೋಗ ಅರಸಿ ಹಲವರು ಹೋಗಿದ್ದು, ವಿದ್ಯಾಭ್ಯಾಸಕ್ಕಾಗಿ ಕೆಲವರು ತಮ್ಮ ಮೂಲಸ್ಥಾನ ತೊರೆದಿದ್ದಾರೆ. ಲಿಂಗಾನುಪಾತವು ಅಸಮತೋಲನವಾಗಿದ್ದು ಸೈಮರ್ ಭಾಷೆಯ ಅಳಿವಿಗೆ ಮುಖ್ಯ ಕಾರಣಗಳು. ಸೈಮರ್ ಭಾಷೆ ಬಳಕೆ ಮಾಡುತ್ತಿದ್ದವರು ಚದುರಿ ಹೋಗಿದ್ದಾರೆ. ಈ ಜನಾಂಗದ ವ್ಯಕ್ತಿಯೊಬ್ಬ ಮದುವೆಯಾಗುವ ಮಹಿಳೆ ಮತ್ತೊಂದು ಭಾಷೆ ಮಾತನಾಡುತ್ತಾಳೆ. ಇವರಿಗೆ ಜನಿಸುವ ಮಗು ಇನ್ನೊಂದು ಭಾಷೆಯನ್ನು ಕಲಿಯುತ್ತದೆ. ಹೀಗಾಗಿ ಸೈಮರ್ ಭಾಷೆ ಗೊತ್ತಿರುವ ಮಂದಿ ಮಾತ್ರ ಪರಸ್ಪರ ಮಾತನಾಡಿಕೊಳ್ಳುತ್ತಾರೆ. ಇದೀಗ ವಲಸೆ ಹೆಚ್ಚಳವಾಗಿರುವುದರಿಂದ ಈ ರೂಢಿಯೂ ತಪ್ಪಿಹೋಗಿದೆ. ಹಲಂ ಜನಾಂಗದಲ್ಲಿ ಹಲವು ಉಪಪಂಗಡಗಳಿದ್ದು, ಪ್ರತಿಯೊಂದರಲ್ಲಿಯೂ ವಿವಿಧ ಶೈಲಿಗಳ ಭಾಷಾ ಬಳಕೆಯಿದೆ. ಅವುಗಳಲ್ಲಿ ಸ್ವಲ್ಪಮಟ್ಟಿನ ಅಂತರವಿದೆ. ಆದರೆ ಅಪ್ಪಟ ಸೈಮ‌ರ್ ಭಾಷೆಯನ್ನು ಅರ್ಥ ಮಾಡಿಕೊಳ್ಳುವವರೂ ಕಡಿಮೆಯಾಗುತ್ತಿದ್ದಾರೆ. ಉದ್ಯೋಗ, ವಿವಾಹ ಕಾರಣಗಳಿಗಾಗಿ ಸೈಮರ್ ಜನಾಂಗದ ಹಲವರು ಇನ್ನಿತರ ಪಂಗಡಗಳಿಗೆ ಮತಾಂತರಗೊಂಡಿದ್ದಾರೆ. ಅರಣ್ಯದಲ್ಲಿಯೇ ಬದುಕುವ ಈ ಜನಾಂಗವು ಮೂಲತಃ ಮಾಂಸಾಹಾರಿಗಳಾದರೂ, ರೊಟ್ಟಿ, ಚಪಾತಿಯಂತಹ ಪದಾರ್ಥಗಳನ್ನು ಸೇವಿಸುವುದಿಲ್ಲ. ಅನ್ನವೇ ಮುಖ್ಯ ಆಹಾರ. ಈ ಪಂಗಡದಲ್ಲಿಯೂ ಹಲವು ಜನಪದ ಗೀತೆಗಳು, ಆಚರಣೆಗಳು ಇವೆ. ತ್ರಿಪುರಾದಲ್ಲಿ ನಮ್ಮ ಸಮೀಕ್ಷೆಯ ಪ್ರಕಾರ 50 ಭಾಷೆಗಳಿವೆ. ಈಗಾಗಲೇ ಅಳಿದು ಹೋದ ಭಾಷೆಗಳ ಕುರಿತು ಹೆಚ್ಚು ಮಾಹಿತಿಯಿಲ್ಲ ಎಂದು ನಂದಕುಮಾರ್ ಹೇಳುತ್ತಾರೆ. `ಭಾಷೆಯನ್ನಂತೂ ಉಳಿಸಿ ಬೆಳೆಸುವುದು ಕಷ್ಟ. ಆ ಭಾಷೆಯಲ್ಲಿರುವ ಜ್ಞಾನ, ಜನಪದ ಮತ್ತಿತರ ಸಂಗತಿಗಳನ್ನು ದಾಖಲಿಸಿ, ಮುಂದಿನ ಸಂಶೋಧಕರಿಗಾಗಿ ಇಡುವುದು ನಮ್ಮ ಉದ್ದೇಶ. ಯಾವುದೇ ಒಂದು ಭಾಷೆಯಲ್ಲಿ ಆಯಾ ಜನಾಂಗದ ಸಂಸ್ಕೃತಿ, ಪರಂಪರೆ, ಅಸ್ತಿತ್ವಗಳು ಇರುತ್ತವೆ ಎಂದು ಈಶಾನ್ಯ ರಾಜ್ಯಗಳ ಆದಿವಾಸಿ ಮತ್ತು ಅಳಿವಿನಂಚಿನ ಭಾಷೆಗಳ ಮುಖ್ಯಸ್ಥ ಡಾ.ದೇವಿಪ್ರಸಾದ್ ಶಾಸ್ತ್ರಿ ಹೇಳುತ್ತಾರೆ. ತಮ್ಮ ಜನಾಂಗದ ಗತಿ ಏನಾಗಲಿದೆ ಎಂಬ ಕಹಿಸತ್ಯ ಗೊತ್ತಿದ್ದರೂ ಉಳಿಯುವಷ್ಟು ಉಳಿಯಲಿ ಉದ್ದೇಶದಿಂದ ಈಶಾನ್ಯ ರಾಜ್ಯದಿಂದ ದಕ್ಷಿಣದ ಮೈಸೂರಿಗೆ ಬಂದಿರುವ ಸುಕೃತಾಂಗ್ ಸಿಐಐಎಲ್‌ನರು ನೀಡಿದ ಸನ್ಮಾನ ಸ್ವೀಕರಿಸಿದ ನಂತರ `ನನ್ನ ಭಾಷೆ ವಿನಾಶವಾಗಲಿದೆ. ನಾವು ಎಲ್ಲವನ್ನೂ ಕಳೆದುಕೊಳ್ಳಲಿದ್ದೇವೆ..ದೇಶವಾಸಿಗಳು ನಮ್ಮ ಕೈಹಿಡಿಯಬೇಕು ಎಂದು ಕೂಗಿ ಹೇಳಿದ್ದು ತನ್ನ ಭಾಷೆಯ ಕುರಿತು ಅವನಿಗಿರುವ ಕಾಳಜಿಯ ಪ್ರತೀಕವಾಗಿತ್ತು. `ಸೈಮರ್ 'ಬುಡಕಟ್ಟು ಜನಾಂಗದಲ್ಲಿ ಹೆಣ್ಣು ಮಕ್ಕಳ ಸಂತಾನವೇ ಇಲ್ಲ. ಅನುವಂಶಿಕ ಕಾರಣಗಳಿಂದಾಗಿ ಈ ಜನಾಂಗದಲ್ಲಿ ತಲೆತಲಾಂತರದಿಂದ ಕೇವಲ ಪುತ್ರಸಂತಾನವಿರುವುದೇ ಈ ಭಾಷೆ ಮತ್ತು ಜನಾಂಗದ ಅಳಿವಿಗೆ ಕಾರಣವಂತೆ! ತ್ರಿಪುರಾದ ಬೊರಕ್ ಕುಕುಬೈ ಬೊಸಾಂಗ್ ಸರ್ಕಾರೇತರ ಸಂಸ್ಥೆಯ ಅಧ್ಯಕ್ಷ ನಂದಕುಮಾರ್ ದೇವವರ್ಮ ಉದಾಹರಣೆ ಸಮೇತ ಈ ಮಾತನ್ನು ಪುಷ್ಟಿಕರಿಸಿದ್ದಾರೆ.`ಸುಕೃತಾಂಗ್ ಅವರ ತಾತನಿಗೆ ಒಬ್ಬ ಮಗ, ಅವರಿಗೆ ಸುಕೃತಾಂಗ್ ಏಕೈಕ ಪುತ್ರ, ಅವರಿಗೆ ಒಬ್ಬ ಮಗ ಮಾತ್ರ ಇದ್ದಾರೆ.ಇದು ಸೈಮರ್‌ನ ಪ್ರತಿಯೊಂದು ಕುಟುಂಬದಲ್ಲಿಯೂ ಕಂಡುಬರುತ್ತಿರುವ ಆಶ್ಚರ್ಯದಾಯಕ ಸಂಗತಿ. ಇದರಿಂದಾಗಿ ಬೇರೆ ಪಂಗಡಗಳ ಹೆಣ್ಣುಮಕ್ಕಳನ್ನು ಮದುವೆಯಾಗಿ ಬರುವ ಸಂಪ್ರದಾಯ ಇಲ್ಲಿದ್ದು, ಕ್ರಮೇಣ ಇದು ಭಾಷೆಯ ಅಳಿವಿಗೂ ಕಾರಣವಾಗಿದೆ.ಇದು ತಮ್ಮ ಸಂಶೋಧನೆಯಲ್ಲಿ ಕಂಡುಬಂದಿರುವ ಅಂಶ ಎಂಬುದು ಅವರ ಅಭಿಪ್ರಾಯ.

ತಾಯಿಯ ಛಲ

ಒಂದು ದಿನ ಮಗು ಥಾಮಸ್ ಆಲ್ವಾ ಎಡಿಸನ್ ಮನೆಗೆ ಬಂದು ತನ್ನ ತಾಯಿಯ ಕೈಗೆ ಒಂದು ಪತ್ರ ಕೊಡುತ್ತಾನೆ, ಅಮ್ಮಾ ನಮ್ಮ ಟೀಚರ್ ಈ ಪತ್ರವನ್ನು ನಿನಗೆ ಮಾತ್ರ ಕೊಡಲು ಹೇಳಿದ್ದಾರೆ ಎನ್ನುತ್ತಾನೆ. ಅದನ್ನು ಮಗನಿಗಾಗಿ ಗಟ್ಟಿಯಾಗಿ ಓದುತ್ತಾ ಆ ತಾಯಿಯ ಕಣ್ಣು ಒದ್ದೆಯಾಯಿತು :"ನಿಮ್ಮ ಮಗ ತುಂಬ ಬುದ್ಧಿವಂತನಿದ್ದಾನೆ.ನಮ್ಮ ಶಾಲೆ ಅವನ ಬುದ್ಧಿಮತ್ತೆಗೆ ತುಂಬಾ ಸಣ್ಣದು ಹಾಗೂ ಅವನಿಗೆ ಕಲಿಸಬಲ್ಲ ಅರ್ಹತೆ ನಮ್ಮ ಯಾವ ಉಪಾಧ್ಯಾಯರಿಗೂ ಇಲ್ಲ. ಆದುದರಿಂದ ಅವನ ವಿದ್ಯಾಭ್ಯಾಸವನ್ನು ನೀವೇ ಮನೆಯಲ್ಲಿ ಮಾಡಿಸುವುದು."ಅದಾಗಿ ತುಂಬಾ ವರ್ಷಗಳ ನಂತರ ಎಡಿಸನ್ ರ ತಾಯಿ ಮರಣಿಸುತ್ತಾರೆ.ಆಗ ಎಡಿಸನ್ ಪ್ರಪಂಚದ ಅಗ್ರಮಾನ್ಯ ವಿಜ್ಞಾನಿಗಳಲ್ಲಿ ಮೊದಲಿಗರಾಗಿರುತ್ತಾರೆ. ಆ ಸಂದರ್ಭದಲ್ಲಿ ತನ್ನ ತಾಯಿಯ ಪೆಟ್ಟಿಗೆಯಲ್ಲಿನ ಹಳೆಯ ವಸ್ತು ವಿಚಾರಗಳನ್ನು ಪರಿಶೀಲಿಸುತ್ತಿರುವಾಗ ಕಣ್ಣಿಗೆ ಬಿದ್ದ ಮಡುಚಿದ ಕಾಗದವೊಂದನ್ನು ಬಿಡಿಸಿ ನೋಡಿದರೆ ಅದರಲ್ಲಿ ಹೀಗೆ ಬರೆದಿರುತ್ತದೆ.: "ನಿನ್ನ ಮಗ ಒಬ್ಬ ಬುದ್ಧಿಮಾಂದ್ಯ, ಅವನನ್ನು ನಾವು ಇನ್ನು ಮುಂದೆ ಶಾಲೆಗೆ ಬರಗೊಡುವುದಿಲ್ಲ.ಅವನನ್ನು ಮನೆಯಲ್ಲಿಯೇ ಇಟ್ಟು ಕೊಳ್ಳುವದು.” ತನ್ನ ಮಗುವಿನ ಮೃದು ಮನಸ್ಸನ್ನು ನೋಯಿಸದಿರಲು ಅಂದು ವಿರುದ್ಧವಾಗಿ ಓದಿದ ತಾಯಿಯನ್ನು ನೆನೆದು ಎಡಿಸನ್ ರು ಗದ್ಗದಿತರಾಗುತ್ತಾರೆ.ಗಂಟೆಗಟ್ಟಲೆ ಬಿಕ್ಕಿ ಬಿಕ್ಕಿ ಅಳುತ್ತಾರೆ ಮತ್ತು ತಮ್ಮ ದಿನಚರಿಯಲ್ಲಿ ಹೀಗೆ ಬರೆಯುತ್ತಾರೆ:' ಥಾಮಸ್ ಅಲ್ವಾ ಎಡಿಸನ್ ಒಬ್ಬ ಬುದ್ಧಿಮಾಂದ್ಯ ಮಗು, ಆದರೆ ಅವನ ಶ್ರೇಷ್ಠ ಮಾತೆಯ ದೆಸೆಯಿಂದ ಅವನು ಶತಮಾನದ ಬುದ್ಧಿವಂತನಾಗುತ್ತಾನೆ." Mother is the First Teacher in our Life. ಜಗದ ಎಲ್ಲ ತಾಯಂದಿರಿಗೆ ನಮನಗಳು.

ಶನಿವಾರ, ಸೆಪ್ಟೆಂಬರ್ 24, 2022

ದೀಪಾವಳಿ

ದೀಪಾವಳಿ ಬೆಳಕಿನ ಹಬ್ಬ.ಇದು ಬರೀ ಹಬ್ಬವಲ್ಲ,ಹಬ್ಬಗಳ ಪರಂಪರೆ.ಕೆಲವು ಪ್ರದೇಶಗಳಲ್ಲಿ ಮೂರು ದಿನ,ಇನ್ನೂ ಕೆಲವು ಪ್ರದೇಶಗಳಲ್ಲಿ ಐದು ದಿನಗಳವರೆಗೆ ಈ ಹಬ್ಬವನ್ನು ಆಚರಿಸಲಾಗುತ್ತದೆ.ಆದ್ದರಿಂದ ದೀಪಾವಳಿಯನ್ನು ದೊಡ್ಡ ಹಬ್ಬವೆಂದು ಕರೆಯಲಾಗುತ್ತದೆ.ಹೆಚ್ಚು ಕಡಿಮೆ ನಮ್ಮ ದೇಶದಲ್ಲಿ ಜಾತಿ,ಭಾಷೆ,ಪ್ರದೇಶಗಳ ಹಂಗಿಲ್ಲದೇ,ಬಡವ- ಬಲ್ಲಿದ ಎಂಬ ಭೇದವಿಲ್ಲದೇ ಶ್ರದ್ಧೆ,ಭಕ್ತಿ ಮತ್ತು ಸಂಭ್ರಮದಿಂದ ಆಚರಿಸುವ ಹಬ್ಬ ಇದೊಂದೇ ಇರಬಹುದು. ದೀಪಾವಳಿ ಹಬ್ಬ ಶಾಸ್ತ್ರೀಯವೂ ಹೌದು,ಜಾನಪದೀಯವೂ ಹೌದು.ಈ ಹಬ್ಬಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ. ಸಂಪ್ರದಾಯದ ಆಯಾಮವೂ ಇದೆ.ದೀಪಾವಳಿಗೆ ಸಂಬಂಧಿಸಿದಂತೆ ನರಕಾಸುರನ ದುಷ್ಟತನದ ದಮನದ ಕತೆಯನ್ನೂ ಹೇಳಲಾಗುತ್ತದೆ.ಬಲೀಂದ್ರನ ತ್ಯಾಗದ ಪ್ರಸಂಗವೂ ಪ್ರಚಲಿತದಲ್ಲಿದೆ.ಹಬ್ಬದ ಸಂದರ್ಭದಲ್ಲಿ ಲಕ್ಷ್ಮಿಯನ್ನೂ ಆರಾಧಿಸಲಾಗುತ್ತದೆ.ಗೋವುಗಳನ್ನೂ ಪೂಜಿಸಲಾಗುತ್ತದೆ.ಅತ್ಯಂತ ವೈವಿಧ್ಯಪೂರ್ಣವಾಗಿ ಆಚರಿಸಲ್ಪಡುವ ದೀಪಾವಳಿ ಫಲವಂತಿಕೆಯನ್ನು ಸೂಚಿಸುವ ಸಿರಿವಂತಿಕೆಯ ಹಬ್ಬ.ಮುಂಗಾರು ಬೆಳೆ ಕೊಯ್ಲಿಗೆ ಬರುವ ಸಮಯದಲ್ಲಿ ಈ ಹಬ್ಬ ಬರುವುದು ವಿಶೇಷ. ಕೆಲ ಕಡೆಗಳಲ್ಲಿ ದೀಪಾವಳಿಯಿಂದ ಹೊಸ ವರ್ಷವೂ ಪ್ರಾರಂಭವಾಗುತ್ತದೆ. ಈ ಹಬ್ಬವನ್ನು ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ಮಲೆನಾಡಿನಲ್ಲಿ ಮನೆ ಮನೆಗೂ ದೀಪದ ಬೆಳಕು ಹಂಚುವ ಅಂಟಿಗೆ-ಪಂಟಿಗೆ ,ಬಯಲು ಸೀಮೆಯಲ್ಲಿ ದೀಪದ ಸುತ್ತಮುತ್ತ ಸಗಣಿಯಿಂದ ಬೊಂಬೆಗಳನ್ನು ಮಾಡಿ ಪೂಜಿಸುವ ಹಟ್ಟಿ ಹಬ್ಬ, ದಕ್ಷಿಣ ಕನ್ನಡದಲ್ಲಿ ಬಲಿ ಚಕ್ರವರ್ತಿಗೆ ಪೂಜೆ.ಉತ್ತರ ಕನ್ನಡದ ಕರಾವಳಿಯಲ್ಲಿ ಬೋರಜ್ಜಿ ಮತ್ತು ಬಲೀಂದ್ರ ಪೂಜೆ ಹೀಗೆ ವೈವಿಧ್ಯತೆಯ ನಡುವೆಯೂ ಸಂಭ್ರಮದ ಏಕತೆಯಿದೆ. ಆಶ್ವಯುಜ ಮಾಸದ ಕೊನೆ ಮತ್ತು ಕಾರ್ತಿಕ ಮಾಸದ ಪ್ರಾರಂಭದಲ್ಲಿ ಆಚರಿಸುವ ಈ ಹಬ್ಬವನ್ನು ಬೆಳಕಿನ ಹಬ್ಬ ಎಂದೇ ಕರೆಯಲಾಗುತ್ತದೆ.ಪ್ರಾಕೃತಿಕವಾಗಿ ಹಗಲು ಚಿಕ್ಕದಾಗುತ್ತಾ ರಾತ್ರಿ ದೀರ್ಘವಾಗಿ ಆವರಿಸುವ ಕಾಲವಿದು.ಅಮವಾಸ್ಯೆಯ ಕಾರಣದಿಂದ ಕತ್ತಲು ಇನ್ನೂ ದಟ್ಟವಾಗುವ ಈ ಸಮಯದಲ್ಲಿ ಮನೆ ಹಾಗೂ ಮನದಲ್ಲಿ ಕವಿದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ.ದೀಪಾವಳಿ ಎಂದರೆ ದೀಪಗಳ ಆವಳಿ ಅಂದರೆ ದೀಪಗಳ ಸಾಲು. ದೀಪಾವಳಿ ಎಂದಾಗ ಕಣ್ಣಮುಂದೆ ಬರುವುದೇ ಹಣತೆ ದೀಪಗಳ ಬೆಳಕು.ಹೀಗೆ ಈ ಹಬ್ಬದಲ್ಲಿ ಹಣತೆ,ದೀಪ,ಬೆಳಕಿಗೆ ಬಹಳ ಪ್ರಾಮುಖ್ಯತೆಯಿದೆ.ನಮ್ಮ ಸಂಸ್ಕೃತಿಯಲ್ಲಿ ಸಾಮಾನ್ಯವಾಗಿ ದೀಪ ಬೆಳಗುವ ಮೂಲಕವೇ ಯಾವುದೇ ಕೆಲಸವನ್ನು ಆರಂಭಿಸಲಾಗುತ್ತದೆ.ದೀಪಗಳನ್ನೇ ಇಟ್ಟು ದೀಪದಿಂದಲೇಬೆಳಗುತ್ತೇವೆ.ಹಾಗೆ ಬೆಳಗುವ ಬೆಳಕು ಸಾಮಾನ್ಯವಲ್ಲ,ಕವಿ ಕೆ.ಎಸ್.ನರಸಿಂಹ ಸ್ವಾಮಿಯವರ ಪ್ರಕಾರ "ಯಾವ ಚಿತ್‌ಶಕ್ತಿಯದು? ಸೂರ್ಯನಲಿ ಬೆಳಕಾಗಿ, ತಾರೆಯಲಿ ಹೊಳಪಾಗಿ, ಬೆಂಕಿಯಲಿ ಬಿಸಿಯಾಗಿ ಪ್ರವಹಿಸಿಹುದೋ, ಆ ದಿವ್ಯಶಕ್ತಿಯೇ ಈ ಮಣ್ಣ ಹಣತೆಯಲಿ ಹರಿಯುತಿರೆ, ಕಿರಿಹಣತೆ ಕಿರಿದಾದರೇನು? ಬೆಳಕ ಬೀರುವ ಶಕ್ತಿ ಹಿರಿದಲ್ಲವೇನು?" ಹಣತೆಯ ಗಾತ್ರಕ್ಕಿಂತ ಅದರಿಂದ ಹೊಮ್ಮುವ ಬೆಳಕು ಮುಖ್ಯ.ಆದ್ದರಿಂದಲೇ ಇಡೀ ಜಗತ್ತನ್ನು ಬೆಳಗುವ ಸೂರ್ಯನೇ ಆಗಬೇಕಾಗಿಲ್ಲ.ನಮ್ಮ ಸುತ್ತಲನ್ನು ಬೆಳಗುವ ಹಣತೆಯಾದರೂ ಸಾಕು ಎಂಬ ಮಾತಿನ ಮೂಲಕ ಬೆಳಕಿನ ಮಹತ್ವವನ್ನು ಹೇಳುತ್ತೇವೆ. ”ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನ್ನು” ಎಂಬ ಬಿ.ಎಂ.ಶ್ರೀಕಂಠಯ್ಯನವರ ಕವಿತೆ ದೀಪಾವಳಿ ಹಬ್ಬಕ್ಕೆ ಅರ್ಥಪೂರ್ಣವಾಗಿದೆ. ”ಅಸತೋಮಾ ಸದ್ಗಮಯಾ, ತಮಸೋಮಾ ಜ್ಯೋತಿರ್ಗಮಯ“ ಎಂಬ ಮಾತು ದೀಪಾವಳಿಯ ಸಂದೇಶವನ್ನೇ ಪ್ರತಿಫಲಿಸುತ್ತದೆ.ಇಲ್ಲಿ ಕತ್ತಲು ಅಂದರೆ ಕೇವಲ ಯಥಾರ್ಥದ ಕತ್ತಲು ಮಾತ್ರವಲ್ಲ,ಮನುಷ್ಯನಲ್ಲಿರುವ ಅಹಂಕಾರ, ಅಂಧಶ್ರದ್ಧೆ, ಅಜ್ಞಾನ ಎಲ್ಲವೂ ಹೌದು.ಅವನ ಬುದ್ಧಿ,ನಡತೆ,ಆಚಾರ,ವಿಚಾರಗಳಿಗೆ ಅಂಟಿಕೊಂಡಿರುವ ಈ ಕತ್ತಲೆ ದೂರವಾಗಬೇಕು.ಬದುಕಿನ,ಮನಸ್ಸಿನ ಎಲ್ಲ ನಕಾರಾತ್ಮಕ ಅಂಶಗಳು ನಿವಾರಣೆಯಾಗಬೇಕು.ಅಜ್ಞಾನದ ಕತ್ತಲು ದೂರವಾಗಿ ಸುಜ್ಞಾನದ ಬೆಳಕು ಎಲ್ಲ ಕಡೆಗಳಲ್ಲಿಯೂ ಹರಡಬೇಕು ಎಂಬ ಹಿರಿದಾದ ಸಂದೇಶ ದೀಪಾವಳಿ ಹಬ್ಬದ ಆಚರಣೆಯಲ್ಲಿದೆ. ಶ್ರೀಧರ ಬಿ.ನಾಯಕ

ಗುರುವಾರ, ಸೆಪ್ಟೆಂಬರ್ 15, 2022

ರಾಣೆಯವರ ನೆನಪಿನಲ್ಲಿ..

ಶ್ರೀ ಪ್ರಭಾಕರ ರಾಣೆಯವರು ನಿಧನರಾಗಿದ್ದಾರೆ.ಅದರೊಂದಿಗೆ ಕಾರವಾರದ ಇತಿಹಾಸದಲ್ಲಿ ಸಾತ್ವಿಕ ಅಧ್ಯಾಯವೊಂದು ಮುಕ್ತಾಯವಾಗಿದೆ.ಅವರು ಸುಸಂಸ್ಕೃತ,ಪ್ರಾಮಾಣಿಕ ಮತ್ತು ಅಧ್ಯಯನಶೀಲ ರಾಜಕಾರಣಿಯಾಗಿದ್ದರು.ಆದರೆ ರಾಜಕಾರಣಿಯಾಗಿ ಅವರು ಏನನ್ನೂ ಗಳಿಸಲಿಲ್ಲ.ಶಿಕ್ಷಣ ಪ್ರೇಮಿಯಾಗಿ ಲಕ್ಷಾಂತರ ಜನರು ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ.ಶರಣರ ಗುಣ ಮರಣದಲ್ಲಿ ನೋಡು ಎಂಬ ಮಾತು ಪ್ರಚಲಿತದಲ್ಲಿದೆ.ಸಾತ್ವಿಕರೊಬ್ಬರ ಸಾವಿನ ಸಂದರ್ಭದಲ್ಲಿ ಈ ಮಾತು ಸತ್ಯ ಅನ್ನಿಸುತ್ತದೆ.ಏಕೆಂದರೆ ಹುಟ್ಟು ಆಕಸ್ಮಿಕವಾದರೂ ಸಾವು ಖಚಿತ. ಹುಟ್ಟು ಸಂಭ್ರಮಕ್ಕೆ ಕಾರಣವಾದರೆ ಸಾವು ನಮ್ಮನ್ನು ಇನ್ನಿಲ್ಲದ ದುಃಖಕ್ಕೀಡು ಮಾಡುತ್ತದೆ. ಆದರೆ ಸಾವು ಜಗತ್ತಿಗೇ ತಿಳಿಯುವಂತಾಗಬೇಕು. ಅದು ನಿಜವಾದ ಬದುಕಿನ ಸಾರ್ಥಕತೆ. ವ್ಯಕ್ತಿ ತನ್ನ ಇಡೀ ಜೀವಮಾನದಲ್ಲಿ ಅಳವಡಿಸಿಕೊಂಡ ವ್ಯಕ್ತಿತ್ವದ ಪರಾಮರ್ಶೆ ಸಾವಿನ ಬಳಿಕ ನಡೆಯುತ್ತದೆ. ಆ ವ್ಯಕ್ತಿಯ ಸಾಧನೆ ಮತ್ತು ಸಾಮಾಜಿಕ ಕೊಡುಗೆಯ ಆಧಾರದ ಮೇಲೆ ಅವನ ಅಮರತ್ವ ಸಾಬೀತಾಗುತ್ತದೆ. ಅಂತಹ ಅಮರತ್ವ ಪಡೆದ ವ್ಯಕ್ತಿ ಪ್ರಭಾಕರ ರಾಣೆಯವರು.ಕೆಲವರು ಅವರಲ್ಲಿ ರಾಜಕಾರಣಿಯನ್ನು ಕಂಡರೆ ಇನ್ನು ಕೆಲವರು ಅವರಲ್ಲಿ ಹೋರಾಟಗಾರರನ್ನು ಕಾಣುತ್ತಾರೆ.ಮತ್ತೆ ಕೆಲವರು ದೃಷ್ಟಿಯಲ್ಲಿ ಅವರೊಬ್ಬ ಶಿಕ್ಷಣ ಪ್ರೇಮಿ.ಎಲ್ಲಕ್ಕಿಂತ ಮುಖ್ಯವಾಗಿ ಅವರು ಮಾನವೀಯ ಅಂತಃಕರಣವುಳ್ಳ ವ್ಯಕ್ತಿಯಾಗಿದ್ದರು.ಇನ್ನೊಬ್ಬರ ನೋವು ಸಂಕಷ್ಟಗಳನ್ನು,ಅಸಹಾಯಕತೆಯನ್ನು ಅರ್ಥಮಾಡಿಕೊಳ್ಳಬಲ್ಲವರಾಗಿದ್ದರು.ಆದ್ದರಿಂದಲೇ ಅವರ ಶಿಕ್ಷಣ ಸಂಸ್ಥೆಗಳಲ್ಲಿ ನೂರಾರು ಜನ ಜಾತಿ,ಮತ,ಭಾಷೆ,ಪ್ರದೇಶಗಳ ವ್ಯಾಪ್ತಿಯನ್ನು ಮೀರಿ ಉದ್ಯೋಗಸ್ಥರಾಗಲು ಸಾಧ್ಯವಾಯಿತು.ಯಾರ ಮೇಲೂ ದ್ವೇಷ-ಅಸಹನೆ ತೋರಿಸುವ ವ್ಯಕ್ತಿ ಅವರಾಗಿರಲಿಲ್ಲ.ನೀರು ತನ್ನಲ್ಲಿ ಮುಳುಗಿದವರಿಗೆ ಬದುಕಲು ಮೂರು ಅವಕಾಶಗಳನ್ನು ನೀಡುತ್ತದೆ.ಹಾಗೆಯೇ ರಾಣೆಯವರು ನನಗೂ ಮೂರು ಅವಕಾಶ ನೀಡಿದರು.ಅವರು ನೀಡಿದ ಎರಡು ಅವಕಾಶಗಳನ್ನು ನಾನು ಕೈ ಚೆಲ್ಲಿದರೂ ಅದನ್ನು ಮನಸ್ಸಿನಲ್ಲಿಟ್ಟು ಕೊಳ್ಳದೇ ನನಗೆ ಸದಾಶಿವಗಡದ ಪದವಿ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಲು ಅನುವು ಮಾಡಿಕೊಟ್ಟ ವಿಶಾಲ ಹೃದಯಿ ಅವರು.ಸಾಹಿತ್ಯದ ಓದು ಅವರಲ್ಲಿ ಸಮಚಿತ್ತತೆಯನ್ನು ರೂಪಿಸಿತ್ತು.ಕುವೆಂಪು,ಬೇಂದ್ರೆ,ಕಾರಂತ,ಲಂಕೇಶ್,ಅನಂತಮೂರ್ತಿ ಹೀಗೆ ಕನ್ನಡದ ಮಹತ್ವದ ಲೇಖಕರನ್ನು ಸಮಗ್ರವಾಗಿ ಅಲ್ಲದಿದ್ದರೂ ಸಾಕಷ್ಟು ಓದಿದ್ದರು.ಕಾರಂತರ ಅಳಿದ ಮೇಲೆ ಕಾದಂಬರಿಯನ್ನು ಹತ್ತಾರು ಬಾರಿ ಕೇಳಿ ಪಡೆದು ಓದಿದ್ದರು.ಯಾವುದೇ ಪುಸ್ತಕ ನಮ್ಮ ಕೈಯಲ್ಲಿದ್ದರೆ ಆ ಪುಸ್ತಕದ ಬಗ್ಗೆ ಕೇಳಿ ತಿಳಿದು ಕೊಳ್ಳುತ್ತಿದ್ದರು.ಅಂತಹ ಅಪರೂಪದ ವ್ಯಕ್ತಿತ್ವವನ್ನು ಹೊಂದಿದ ಶ್ರೀ ರಾಣೆಯವರು ಅಗಲಿದರೂ ಸಾವಿರದ ಹೃದಯಗಳಲ್ಲಿ ಶಾಶ್ವತರಾಗಿರುತ್ತಾರೆ. ಸಾವು ಕೇವಲ ದೇಹಕ್ಕೆ ಮಾತ್ರ. ಆದರೆ ಅವರು ಇಡೀ ಜೀವಮಾನದಲ್ಲಿ ಅಳವಡಿಸಿಕೊಂಡ ಮೌಲ್ಯಗಳನ್ನು ಅನುಸರಿಸುವದರ ಮೂಲಕ,ಅವರ ಶಿಕ್ಷಣ ಸಂಸ್ಥೆಗಳನ್ನು ಆದರ್ಶ ಸಂಸ್ಥೆಗಳನ್ನಾಗಿ ರೂಪಿಸುವದರ ಮೂಲಕ ಅವರು ಹೆಸರನ್ನು ಚಿರಸ್ಥಾಯಿಯಾಗಿಸಬೇಕಿದೆ.

ಸೋಮವಾರ, ಆಗಸ್ಟ್ 15, 2022

ಕಾರವಾರ ಮತ್ತು ಸ್ವಾತಂತ್ರ್ಯ ಚಳುವಳಿ

ಕಾರವಾರ ಮತ್ತು ಸ್ವಾತಂತ್ರ್ಯ ಚಳುವಳಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸಮರ್ಥ ನಾಯಕತ್ವದಲ್ಲಿ ದೇಶದ ನಾಗರಿಕರ ತ್ಯಾಗ-ಬಲಿದಾನಗಳ ಮೂಲಕ ಗಳಿಸಿದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಸ್ತುತ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದ ಸ್ವಾತಂತ್ರ್ಯ ಚಳುವಳಿಯ ಅವಲೋಕನ ಯುವ ಜನತೆಯಲ್ಲಿ ಸ್ವಾತಂತ್ರ್ಯ ಚಳುವಳಿಯ ಇತಿಹಾಸದ ಕುರಿತು ಆಸಕ್ತಿಯನ್ನು ಮೂಡಿಸಬಲ್ಲದು. ಇತಿಹಾಸವನ್ನು ಅರಿಯದವರು ಹೊಸ ಇತಿಹಾಸವನ್ನು ಸೃಷ್ಟಿಸಲಾರರು ಎಂಬ ಮಾತಿನಂತೆ ಸ್ವಾತಂತ್ರ ಹೋರಾಟದ ಅರಿವಿಲ್ಲದವರಿಂದ ಸ್ವಾತಂತ್ರ್ಯದ ರಕ್ಷಣೆ ಸಾಧ್ಯವಾಗದು. (ಇಲ್ಲಿನ ಮಾಹಿತಿ ಅಪೂರ್ಣವಾಗಿರಬಹುದು. ಬಲ್ಲವರು ತಮಗೆ ತಿಳಿದ ಮಾಹಿತಿ ನೀಡಿದರೆ ಲೇಖನವನ್ನು ಇನ್ನಷ್ಟು ಅಧಿಕೃತ ಗೊಳಿಸಲಾಗುವುದು). 1858ರ ನಂತರ ಭಾರತ ಅಧಿಕೃತವಾಗಿ ಬ್ರಿಟೀಷ್ ಸರಕಾರದ ವಸಾಹತು ಎಂದು ಪರಿಗಣಿಸಲ್ಪಟ್ಟಿತು. ಇಂಗ್ಲೀಷ್ ಶಿಕ್ಷಣದ ಪರಿಣಾಮವಾಗಿ ಸ್ವಾತಂತ್ರ್ಯ ಸೌಹಾರ್ದತೆಗಳ ಆದರ್ಶಗಳನ್ನು ಅರಗಿಸಿಕೊಂಡ ಒಂದು ಜನಾಂಗ ರೂಪಗೊಂಡಿತು. ಇಂಗ್ಲೀಷ್ ಶಿಕ್ಷಣವನ್ನು ಪಡೆದ ಭಾರತೀಯರು ಬ್ರಿಟೀಷ್ ಸರಕಾರದಲ್ಲಿ ಕೆಳದರ್ಜೆಯ ಹುದ್ದೆಗಳನ್ನು ಪಡೆದು ವರ್ಣಭೇದ ನೀತಿಗೆ ತುತ್ತಾದರು. ಹೀಗೆ ಅಸಮಾನತೆಗೆ ತುತ್ತಾದಾಗ ರಾಷ್ಟ್ರೀಯ ಪರಿಷತ್ತು ರೂಪಗೊಂಡು ರಾಷ್ಟ್ರೀಯತೆಯ ಭಾವನೆಯನ್ನು ಭಾರತೀಯರಲ್ಲಿ ಮೂಡಿಸಲು ಪ್ರಯತ್ನಿಸಿತು. 1885ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ಕಾಂಗ್ರೆಸ್ ಈ ಉದ್ದೇಶವನ್ನು ಸಮಗ್ರವಾಗಿ ಮಂಡಿಸುವ ಒಂದು ರಾಜಕೀಯ ಸಂಸ್ಥೆಯಾಗಿ ಪರಿವರ್ತಿತವಾಯಿತು. ದಾದಾಬಾಯಿ ನವರೋಜಿ, ಗೋಪಾಲಕೃಷ್ಣ ಗೋಖಲೆ ಮತ್ತು ಬಾಲಗಂಗಾಧರ ತಿಲಕ ಮುಂತಾದ ಹಿರಿಯರ ಪ್ರಯತ್ನದ ಫಲವಾಗಿ ಕಾಂಗ್ರೆಸ್ ಭಾರತದಲ್ಲಿ ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ರೂಪುಗೊಂಡಿತು. 1915ರ ಪ್ರಾರಂಭದಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ಗಾಂಧೀಜಿ ತಮ್ಮ ರಾಜಕೀಯ ಗುರು ಗೋಖಲೆಯವರ ಸರ್ವಂಟ್ಸ್ ಆಫ್ ಇಂಡಿಯಾ ಸೊಸೈಟಿಯನ್ನು ಸೇರುವ ಅಭಿಲಾಷೆಯನ್ನು ಹೊಂದಿದ್ದರು. ಆದರೆ ಪುಸ್ತಕ ಜ್ಞಾನಕ್ಕಿಂತ ಜನಸಾಮಾನ್ಯರ ಆಸೆ ಆಕಾಂಕ್ಷೆಗಳ ಪರಿಜ್ಞಾನ ಬಹಳ ಮಹತ್ವದ್ದು ಎಂಬ ಗೋಖಲೆಯವರ ಮಾತಿನಂತೆ ಗಾಂಧೀಜಿ ಭಾರತದ ಮೂಲೆ ಮೂಲೆಯನ್ನು ಸಂಚರಿಸಿ ಲೋಕಜ್ಞಾನವನ್ನು ಪಡೆದರು. ಆದರೆ ಆ ವೇಳೆಗಾಗಲೇ ಗೋಖಲೆಯವರು ದಿವಂಗತರಾಗಿದ್ದರು. ಬ್ರಿಟೀಷ್ ಸರಕಾರ ಜಾರಿಗೆ ತಂದ ಕೌಲೆಟ್ ಕಾಯಿದೆಗಳ ವಿರುದ್ಧ ಗಾಂಧೀಜಿ ಅಸಹಕಾರ ಚಳುವಳಿ ಪ್ರಾರಂಭಿಸಿದಾಗ ತಿಲಕರ ಆಶೀರ್ವಾದ ದೊರಕಿತು. 1919-20 ರಿಂದ ಗಾಂಧಿಯುಗ ಪ್ರಾರಂಭವಾಯಿತು. ಗೋಖಲೆಯವರ ಮಾರ್ಗದರ್ಶನ, ತಿಲಕರ ಆದರ್ಶಗಳನ್ನು ಹೊಂದಿ ಗಾಂಧೀಜಿ ಕಾಂಗ್ರೆಸ್‌ನ್ನು ಜನಸಾಮಾನ್ಯರ ಸಂಘಟನೆಯಾಗಿ ರೂಪಿಸಿದರು. ಸ್ವರಾಜ್ಯವನ್ನು ಗಳಿಸಿಕೊಳ್ಳಲು ಯೋಗ್ಯ ಶೀಲ ಚಾರಿತ್ರ್ಯಗಳನ್ನು ಗಳಿಸಿಕೊಳ್ಳಬೇಕೆಂಬ ಅವರ ಮಾತುಗಳು ಭಾರತೀಯರ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದವು. ಇಂತಹ ಮಾತುಗಳು ಗಾಂಧೀಜಿಯವರ ಕುರಿತು ದೇಶಾದ್ಯಂತ ಗೌರವವನ್ನು ಮೂಡಿಸಿದವು. ಜನಸಾಮಾನ್ಯರು ಗಾಂಧೀಜಿಯವರಲ್ಲಿ ನಿಷ್ಠೆಯನ್ನು ಬೆಳೆಸಿಕೊಂಡರು. ಸ್ವಾತಂತ್ರ್ಯ ಪಡೆಯಲು ಅವರು ಹೇಳುವ ಕಾರ್ಯಗಳನ್ನು ಶಿರಸಾವಹಿಸಿ ಪಾಲಿಸಲು ಜನ ಸಿದ್ಧರಾದರು. ಇಂತಹ ಸಂದರ್ಭದಲ್ಲಿಯೇ ಚಳುವಳಿಯನ್ನು ತೀವ್ರಗೊಳಿಸಲು ಕಾಂಗ್ರೆಸ್ ತೀರ್ಮಾನಿಸಿತು. ಇದರ ಅಂಗವಾಗಿ ದೇಶದ ಬೇರೆ ಬೇರೆ ಸ್ಥಳಗಳಲ್ಲಿ ರಾಜಕೀಯ ಸಮ್ಮೇಳನಗಳು ನಡೆದವು. ಇಂತಹ ಒಂದು ಜಿಲ್ಲಾ ರಾಜಕೀಯ ಸಮ್ಮೇಳನವನ್ನು 1920ರಲ್ಲಿ ಕಾರವಾರದಲ್ಲಿ ಸಂಘಟಿಸಲಾಯಿತು. 1900ರಲ್ಲಿ ಲಾಹೋರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದ ಸರ್ ನಾರಾಯಣ ಚಂದಾವರಕರ ಈ ರಾಜಕೀಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಈ ಸಂದರ್ಭದಲ್ಲಿ ಅನೇಕ ಸಮಸ್ಯೆಗಳನ್ನು ಚರ್ಚಿಸಿ ಜಿಲ್ಲೆಯಲ್ಲಿ ರಾಜಕೀಯ ಜಾಗೃತಿ ಮೂಡಿಸಲು ತೀರ್ಮಾನಿಸಲಾಯಿತು. 1921ರಲ್ಲಿ ಕಾರವಾರ ತಾಲೂಕಿನ ಕಾಂಗ್ರೆಸ್ ಕಮಿಟಿಯ ಹಂಗಾಮಿ ಸಮಿತಿಯನ್ನು ಹರಿಬಾಬು ಕಾಮತರ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾಯಿತು. 1922ರಲ್ಲಿ ನಿಯಮಬದ್ಧ ಚುನಾವಣೆ ನಡೆದು ಮಂಗೇಶರಾವ ತೇಲಂಗ ಅಧ್ಯಕ್ಷರಾಗಿ ಆಯ್ಕೆಯಾದರು. ಕೆ.ಆರ್. ಹಳದಿಪುರಕರ ಮತ್ತು ಎಮ್.ಡಿ.ನಾಡಕರ್ಣಿ ಕಾರ್ಯದರ್ಶಿಗಳಾದರು. ಇದೇ ಸಂದರ್ಭದಲ್ಲಿ ಕಾರವಾರ ತಾಲೂಕಿನ ಕೆಲವು ತರುಣರು ಮುಂಬೈ ಪೂಣಾ ಮುಂತಾದ ಊರುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಅಲ್ಲಿ ತೀವ್ರವಾದ ರಾಷ್ಟ್ರೀಯ ಚಟುವಟಿಕೆಗಳ ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳ ತೊಡಗಿದರು. ಕೃಷ್ಣಾ ನಾರಾಯಣ ನಾಯಕ, ಹನುಮಂತರಾವ ಮಾಂಜೇಕರ, ಪದ್ಮನಾಭ ಎಸ್. ಕಾಮತ ಮುಂತಾದವರು ವಿದ್ಯಾರ್ಥಿಗಳಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಗುರುತಿಸಿಕೊಂಡು ಕಾರವಾರಕ್ಕೆ ಆಗಮಿಸಿದರು. ಆಗಲೇ ಕರ್ನಾಟಕದಲ್ಲಿ ಕಾರವಾರ ಜಿಲ್ಲೆಯ ಪರಿಸ್ಥಿತಿ ಕರನಿರಾಕರಣ ಚಳುವಳಿಗೆ ಅನುಕೂಲವಾಗಿದೆಯೆಂದು ಕರ್ನಾಟಕ ಕಾಂಗ್ರೆಸ್ ಭಾವಿಸಿತು. ಈ ಜಿಲ್ಲೆಯ ಜನ ಶಾಂತ ವೃತ್ತಿಯವರು ಕೈಗೊಂಡ ಕೆಲಸವನ್ನು ಬಿಡದ ಸ್ವಭಾವದವರು. ಇಲ್ಲಿ ಬ್ರಾಹ್ಮಣ-ಬ್ರಾಹ್ಮಣೇತರ ಎಂಬ ವಾದ ತೀವ್ರವಾಗಿಲ್ಲ. ಗಾಂಧೀಜಿಯವರ ಬಗ್ಗೆ ಜನಸಾಮಾನ್ಯರಲ್ಲಿ ನಿಷ್ಠೆ ಇದೆ. ಭಾವುಕರಾಗಿದ್ದ ಈ ಜಿಲ್ಲೆಯ ಜನ ಎಂತ ತ್ಯಾಗಕ್ಕೂ ಸಿದ್ಧರು. ಕಾಲೇಜು ಶಿಕ್ಷಣವನ್ನು ಬಿಟ್ಟು ಬಂದ ವಿದ್ಯಾರ್ಥಿಗಳು ಹಳ್ಳಿಗಳಿಗೆ ಹೋಗಿ ಚೆನ್ನಾಗಿ ಕೆಲಸ ಮಾಡಿದ್ದರು. ಈ ರೀತಿಯ ಅನುಕೂಲಕರ ಪರಿಸ್ಥಿತಿ ಬೇರೆ ಯಾವ ಜಿಲ್ಲೆಯಲ್ಲಿಯೂ ಇಲ್ಲ ಎಂದು ಕಾಂಗ್ರೆಸ್ ಭಾವಿಸಿತು. ಉತ್ತರ ಕನ್ನಡ ಜಿಲ್ಲೆಯಲ್ಲಿ ಚಳುವಳಿಯನ್ನು ತೀವ್ರಗೊಳಿಸಿತು. ಶಿರ್ಶಿ, ಸಿದ್ಧಾಪುರ, ಅಂಕೋಲಾ ತಾಲೂಕುಗಳಲ್ಲಿ ಸ್ವಾತಂತ್ರ್ಯ ಚಳುವಳಿ ತೀವ್ರವಾಗಿ ಹಬ್ಬಿತು. ಕಾರವಾರ ತಾಲೂಕಿನಲ್ಲಿಯೂ ತಕ್ಕ ಮಟ್ಟಿಗೆ ಚಳುವಳಿ ಕಾಣಿಸಿಕೊಂಡಿತು. 1921ರ ಅಸಹಕಾರ ಚಳುವಳಿಯಿಂದ ಪ್ರೇರೇಪಿತರಾದ ಕಾರವಾರದ ಕೆ.ಆರ್.ಹಳದಿಪುರಕರ ಜಿಲ್ಲೆಯ ಇತರ ವಕೀಲರ ಜೊತೆ ಸೇರಿ ಸನದುಗಳನ್ನು ಹಿಂತಿರುಗಿಸಿ ನ್ಯಾಯಾಲಯಗಳಿಗೆ ಬಹಿಷ್ಕಾರ ಹಾಕಿದರು. 1923ರಲ್ಲಿ ಎನ್.ಎಸ್. ಹರ್ಡಿಕರರಿಂದ ಸ್ಥಾಪಿಸಲ್ಪಟ್ಟ ಹಿಂದುಸ್ತಾನಿ ಸೇವಾದಳ ಕಾರವಾರದಲ್ಲಿಯೂ ಪ್ರಾರಂಭವಾಯಿತು. 1924ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್‌ ಅಧಿವೇಶನ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದಾಗ ಕೃಷ್ಣ ನಾರಾಯಣ ನಾಯಕರವರ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿದ್ದರು. ಗಾಂಧೀಜಿಯವರ ಭಾಷಣದಿಂದ ಪ್ರಭಾವಿತರಾದ ಇವರೆಲ್ಲ ತಾಲೂಕಿನಲ್ಲಿ ಚಳುವಳಿಯನ್ನು ತೀವ್ರಗೊಳಿಸಿದರು. 1923ರಲ್ಲಿ ಸಿಂದ್‌ನ ರಾಜಕೀಯ ಕೈದಿ ಶರ್ಮಾ ಕಾರವಾರ ಜೈಲಿನಲ್ಲಿ ಇದ್ದು ಬಿಡುಗಡೆಹೊಂದಿದರು. ಆ ಸಂದರ್ಭದಲ್ಲಿ ಮೊದಲ ಬಾರಿಗೆ ಬೃಹತ್ ಪ್ರಮಾಣದ ರಾಜಕೀಯ ಮೆರವಣಿಗೆ ನಡೆಯಿತು. 1924 ರಿಂದ 29ರವರೆಗೆ ಚಳುವಳಿ ತಣ್ಣಗಿತ್ತು. ಆದರೆ ಇದ್ದಕ್ಕಿದ್ದಂತೆ ಕಾಯಿದೆ ಭಂಗ ಚಳುವಳಿ ತೀವ್ರಗೊಂಡಿತು. ಸುಬ್ಬರಾವ್ ಹಳದಿಪುರ ಬಂಧಿತರಾದರು. ಈ ಹೊತ್ತಿಗಾಗಲೇ ಪದ್ಮನಾಭ ಎಸ್. ಕಾಮತರವರು ಕಾನೂನು ಶಿಕ್ಷಣ ಪಡೆದು ಕಾರವಾರಕ್ಕೆ ಬಂದು ಪ್ರಾಕ್ಟಿಸ್ ಆರಂಭಿಸಿದರು. 1930 ಮತ್ತು 1932ರಲ್ಲಿ ಬಂಧಿತರಾದ ಅಥವಾ ಕ್ರಿಮಿನಲ್‌ ಕಟ್ಲೆಗಳಲ್ಲಿ ಸೇರಿಸಲ್ಪಟ್ಟ ಸತ್ಯಾಗ್ರಹಿಗಳ ಪರವಾಗಿ ಅವರು ವಕಾಲತ್ತು ವಹಿಸಿದರು. 1930ರ ಮಾರ್ಚ್ ತಿಂಗಳಲ್ಲಿ ಗದಗದ ವಿ.ಜಿ. ಕಂಬಿಯವರು ಸತ್ಯಾಗ್ರಹಿಗಳ ಕ್ಯಾಪ್ಟನ್ ಎಂದು ಹರ್ಡಿಕರರಿಂದ ನೇಮಕಗೊಂಡು ಕಾರವಾರಕ್ಕೆ ಆಗಮಿಸಿದರು. ಪಿ.ಎಸ್. ಕಾಮತರ ಜೊತೆ ಸೇರಿ 50 ಜನ ಸ್ವಯಂಸೇವಕರನ್ನು ಮುರಳೀಧರ ಮಠದಲ್ಲಿ ಸೇರಿಸಿ ಸಭೆ ನಡೆಸಿ ಮುಂದೆ ನಡೆಯಬಹುದಾದ ಚಳುವಳಿಯ ರೂಪರೇಷೆಗಳನ್ನು ಸಿದ್ಧಪಡಿಸಿದರು. ಈ ಸಂದರ್ಭದಲ್ಲಿಯೇ ಪಾನವಿರೋಧಿ ಚಳುವಳಿಯು ತೀವ್ರಗೊಂಡಿತು. ಕಾರವಾರ ಜಿಲ್ಲೆಯಲ್ಲಿ ಸರಾಯಿ ಅಂಗಡಿಗಳನ್ನು ನಡೆಸಲು ಹರಾಜು ಪ್ರಕ್ರಿಯೆಯನ್ನು ಬ್ರಿಟೀಷ್ ಸರಕಾರ ಕೈಗೊಂಡಿತು. ಜೂನ್ 27, 1931ರಂದು ನಡೆದ ಈ ಪ್ರಕ್ರಿಯೆಯನ್ನು ವಿರೋಧಿಸಿ ಕಾರವಾರದಲ್ಲಿ ಹರತಾಳ ನಡೆಸಲಾಯಿತು. ಕೆ.ಎನ್. ನಾಯ್ಕ, ಹನುಮಂತರಾವ ಮಾಂಜೇಕರ ಮೋಟಾ ಎಸ್‌. ದುರ್ಗೆಕರ ಮುಂತಾದವರು ಈ ಆಂದೋಲನದ ಮುಂಚೂಣಿಯಲ್ಲಿದ್ದರು. ಈ ಹರಾಜು ಪ್ರಕ್ರಿಯೆಯಲ್ಲಿ ಕಾರವಾರದ 13 ಸರಾಯಿ ಅಂಗಡಿಗಳಲ್ಲಿ ಕೇವಲ 5, ಕುಮಟಾದ 18ರಲ್ಲಿ 2, ಭಟ್ಕಳದ 11ರಲ್ಲಿ 1, ಯಲ್ಲಾಪುರದ 7ರಲ್ಲಿ 2, ಜೋಯ್ದಾದ 7ರಲ್ಲಿ 2, ಸರಾಯಿ ಅಂಗಡಿಗಳು ಹರಾಜುಗೊಂಡವು. ಆದರೆ ಅಂಕೋಲಾ, ಶಿರ್ಶಿ, ಸಿದ್ಧಾಪುರ, ಹೊನ್ನಾವರ ತಾಲೂಕುಗಳಲ್ಲಿ ಒಂದು ಅಂಗಡಿಯೂ ಹರಾಜು ಆಗಲಿಲ್ಲ. ಇದರಿಂದಾಗಿ ಸರಕಾರ ಶೇಕಡಾ 75ರಷ್ಟು ಆದಾಯವನ್ನು ಕಳೆದುಕೊಂಡಿತು. 1930ರಲ್ಲಿ ಸರಕಾರ ಮತ್ತು ಕಾರವಾರದ ಜಿ.ಎಸ್. ನಾಡಕರ್ಣಿ ಮತ್ತು ಸುಬ್ಬರಾವ ಹಳದಿಪುರಕರರಂತಹ ಕಾಂಗ್ರೆಸ್ ನಾಯಕರನ್ನು ಪ್ರಚೋದನಾರಹಿತ ಬಂಧನಕ್ಕೆ ಒಳಪಡಿಸಲಾಯಿತು. ಇದರಿಂದ ಕಾರವಾರದ ವಾತಾವರಣ ಕಾವೇರಿತು. ಇವರಿಬ್ಬರಿಗೆ ಎರಡು ವರ್ಷ ಶಿಕ್ಷೆಯಾದಾಗ ಕಾರವಾರದಲ್ಲಿ ಹಿಂದೆಂದು ಆಗದಂತಹ ಪ್ರತಿಭಟನಾ ಮೆರವಣಿಗೆ ನೆರವೇರಿತು. ಈ ನಡುವೆ ಕೆ.ಪಿ.ಸಿ.ಸಿ ಉಪ್ಪಿನ ಸತ್ಯಾಗ್ರಹವನ್ನು ನಡೆಸಲು ಅಂಕೋಲೆ ಸೂಕ್ತ ಸ್ಥಳವೆಂದು ಆಯ್ಕೆ ಮಾಡಿತು. ಅಂಕೋಲೆಯಲ್ಲಿ ನಡೆದ ಐತಿಹಾಸಿಕ ಉಪ್ಪಿನ ಸತ್ಯಾಗ್ರಹದಲ್ಲಿ ಕಾರವಾರದಿಂದ ಕೆ.ಎನ್.ನಾಯ್ಕರ ನೇತೃತ್ವದಲ್ಲಿ ಒಂದು ತಂಡ ಪಾಲ್ಗೊಂಡಿತು. ನಂತರ ಕಾರವಾರ ಮಾಜಾಳಿ ಭಾಗದ ನೂರಾರು ಕಾರ್ಯಕರ್ತರು ಗೋವೆಯನ್ನು ಪ್ರವೇಶಿಸಿ ತೆರಿಗೆಯನ್ನು ನೀಡದೆ ಉಪ್ಪನ್ನು ತಂದರು,, ಆ ಸಂದರ್ಭದಲ್ಲಿ ಕೃಷ್ಣ ನಾಯಕ, ಶಾಮರಾವ ಗಾಯತೊಂಡೆ ಹಳಗಾ ಮುಂತಾದವರು ಬಂಧಿತರಾದರು. ಕಾರವಾರದಲ್ಲಿ ಉಪ್ಪಿನ ಸತ್ಯಾಗ್ರಹ ನಡೆದಾಗ ಗಂಗೊಳ್ಳಿ ಮನೆತನದ ಮಹಿಳೆಯೊಬ್ಬರು ಉಪ್ಪನ್ನು ಖರೀದಿಸಿ ಚಳುವಳಿಗೆ ನೆರವು ನೀಡಿದರು. ಸತ್ಯಾಗ್ರಹದ ಮೊದಲ ದಿನವೇ ಬಾಲಕೃಷ್ಣ ಶ್ರೀನಿವಾಸ ಭುಜಲೆ ಬಂಧಿತರಾದರು. ಈ ಸಂದರ್ಭದಲ್ಲಿ ಕಾಳಿನದಿಯ ಬಳಿ ಸುಮಾರು 5000 ಜನ ಸೇರಿ ಅಲ್ಲಿಂದ ಪೇಟೆಗೆ ಮೆರವಣಿಗೆಯಲ್ಲಿ ಬಂದರು. ಆಗಲೇ ಹನುಮಂತ ಮಾಂಜೇಕರ ಕೂಡ ಬಂಧಿತರಾದರು. ಸ್ಥಳೀಯ ಕಾರ್ಯಕರ್ತರಾದ ಡಿ.ಎನ್. ಶಾನಭಾಗ, ಪಿ.ಪಿ. ಸಾವುಕರ ಎನ್ನುವವರೂ ಬಂಧಿತರಾದರು. ಆದರೆ ಚಳುವಳಿಯ ಖರ್ಚುವೆಚ್ಚವನ್ನು ನಿಭಾಯಿಸುವ ದೃಷ್ಟಿಯಿಂದ ಪಿ.ಎಸ್.ಕಾಮತ, ಕೆ.ಆರ್. ಹಳದಿಪುರರಂತವರು ಬಂಧಿತರಾಗದೇ ಹೊರಗುಳಿದರು. ಸ್ಥಳೀಯ ಕಾರ್ಯಕರ್ತರಾಗಿದ್ದ ಪಾಂಗಂ ಡಬ್ಬಿ ಫಂಡ್ ಸಂಗ್ರಹಿಸುತ್ತಿದ್ದರು. ಈ ಚಳುವಳಿಯನ್ನು ಬೆಂಬಲಿಸಿದ ಕಾರಣಕ್ಕೆ ಪಿ.ಎಸ್.ಕಾಮತ, ಆರ್.ವಿ.ಗಂಗೊಳ್ಳಿ, ಎಮ್.ಎಮ್. ಶಾನಭಾಗ, ವಾಯ್.ಟಿ. ನಾಡಕರ್ಣಿ ಈ ನಾಲ್ಕು ಜನ ವಕೀಲರು ಸನದುಗಳನ್ನು ಕಳೆದುಕೊಂಡರು. ಮುಂದೆ ಗಾಂಧಿ ಐಶ್ವಿನ್ ಒಪ್ಪಂದದಂತೆ ಅವುಗಳನ್ನು ಮರಳಿಸಲಾಯಿತು. ಉಪ್ಪಿನ ಸತ್ಯಾಗ್ರಹಕ್ಕೆ ಹೊಸ ಸ್ವರೂಪವನ್ನು ಕೊಡಲು ನಿರ್ಧರಿಸಿದ ಕೆ.ಎನ್.ನಾಯ್ಕರು ಜನರ ಸಹಾನುಭೂತಿಯನ್ನು ದೊಡ್ಡ ಪ್ರಮಾಣದಲ್ಲಿ ಗಳಿಸಿಕೊಳ್ಳುವ ಪ್ರಯತ್ನಕ್ಕಿಳಿದರು. ಆದ್ದರಿಂದ ಗೋವೆಯಿಂದ ತೆಂಗಿನ ಮಡಲನ್ನು ಸುಂಕಕೊಡದೆ ತಂದು ಮಾರಾಟಕ್ಕಿಳಿದರು. ಇದರಿಂದ ಹೆಂಗಸರ ಸಹಾನುಭೂತಿ ದೊರಕಿತು. ಮುಂದೆ ಅಗ್ಗದ ಉಪ್ಪು ತರಲು ನಿರ್ಣಯಿಸಿ ಅಂಗಡಿ, ಮಾಜಾಳಿ ಮುಂತಾದ ಗ್ರಾಮಗಳ ಜನರ ಸಹಕಾರ ಪಡೆದರು. ಸುಮಾರು 200 ಜನ ಗೋವಾ ಗಡಿಯನ್ನು ಪ್ರವೇಶಿಸಿ ಸಣ್ಣ ಸಣ್ಣ ಚೀಲಗಳಲ್ಲಿ ಉಪ್ಪನ್ನು ಹೊತ್ತು ತಂದು ಚಳುವಳಿಯನ್ನು ಯಶಸ್ವಿಗೊಳಿಸಿದರು. 1934ರಲ್ಲಿ ಮಹಾತ್ಮಾಗಾಂಧಿ ಹರಿಜನ ಪ್ರವಾಸ ಕೈಗೊಂಡು ಕಾರವಾರಕ್ಕೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಅವರು ಸ್ವಾತಂತ್ರ್ಯ ಚಳುವಳಿಯ ಕೇಂದ್ರವಾದ ಸುಬ್ಬರಾವ ಹಳದಿಪುರರವರ ಮನೆಗೆ ಭೇಟಿ ನೀಡಿದರು. ಕರನಿರಾಕರಣೆಯಿಂದ ಭೂಮಿ ಕಳೆದುಕೊಂಡ ಸತ್ಯಾಗ್ರಹಿಗಳನ್ನು ಸಂತೈಸಿದರು. ಸ್ವಾತಂತ್ರ್ಯ ಚಳುವಳಿಯ ಇತಿಹಾಸದಲ್ಲಿ 1942ರ ಚಲೇಜಾವ ಚಳುವಳಿ ಮಹತ್ವದ ಘಟ್ಟ. ಬ್ರಿಟೀಷ ಸರಕಾರ ಗಾಂಧೀಜಿಯವರನ್ನು ಬಂಧಿಸಿತು. ಕುಮಟಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ತಿಮ್ಮಪ್ಪ ನಾಯ್ಕ ಗಾಂಧೀಜಿಯವರ ಬಂಧನವನ್ನು ವಿರೋಧಿಸಿ ಭಾಷಣ ಮಾಡಿದರು. ಅದೇ ಸಂದರ್ಭದಲ್ಲಿ ಕಾರವಾರದಲ್ಲೂ ಕೂಡ ಬೃಹತ್ ಪ್ರತಿಭಟನಾ ಸಭೆ ಜರುಗಿತು. ಖಾದಿಮುಲ್ಲಾ ಎಂದೇ ಹೆಸರಾದ ಶೇಖ ಉಮರ ಎಂಬುವವರು ಆಗ ಬಂಧಿತರಾಗಿ ಹಿಂಡಲಗಾ ಜೈಲು ಸೇರಿದರು. 1942ರ ಚಳುವಳಿಯಲ್ಲಿ ಭಾಗವಹಿಸಿದ ಭೂಗತ ಕಾರ್ಯಕರ್ತರ ಜೊತೆಗೆ ಸಂಪರ್ಕವಿರಿಸಿಕೊಂಡ ಪಿ.ಎಸ್. ಕಾಮತರವರು ಅವರಿಗೆ ಎಲ್ಲ ವಿಧದ ಆರ್ಥಿಕ ಸಹಾಯ ನೀಡಿದರು. ಜೊತೆಗೆ ಬಂಧಿತರಿಗೆ ಕಾನೂನಾತ್ಮಕ ನೆರವು ನೀಡಿದರು. . ಹೀಗೆ ನಾಡಿನ ವಿವಿಧ ಪ್ರಾಂತಗಳ ಜನರೊಂದಿಗೆ ಕಾರವಾರ ತಾಲೂಕಿನ ಜನರೂ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡಿದ್ದರು. ಜಾತಿ ಮತ ಪಂಥ ಭಾಷೆಗಳ ಬೇಧಭಾವವಿಲ್ಲದೆ ನಾವೆಲ್ಲ ಭಾರತೀಯರು ಎಂಬ ಮನೋಭಾವವನ್ನು ಹೊಂದಿ ಹೋರಾಟ ಮಾಡಿದ್ದರ ಫಲವಾಗಿ 1947 ಅಗಸ್ಟ್ 15ರಂದು ಸ್ವಾತಂತ್ರ್ಯ ದೊರಕಿತು. 1947 ಅಗಸ್ಟ್ 14ರ ರಾತ್ರಿ 12 ಗಂಟೆಗೆ ಭಾರತ ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಹನುಮಂತರಾವ ಮಾಂಜೇಕರರವರು ಅಶ್ವತ್ಥ ವೃಕ್ಷ ನೆಟ್ಟರು. ಕಾರವಾರದ ಆಝಾದ ಮೈದಾನದಲ್ಲಿ ಅಗಸ್ಟ್ 15ರಂದು ಮೊದಲ ಧ್ವಜ ಹಾರಿಸಿದ ಶ್ರೇಯಸ್ಸು ಪಿ.ಎಸ್. ಕಾಮತರದಾಗಿತ್ತು. ದೇಶದ ಇತರ ಭಾಗಗಳಂತೆ ಕಾರವಾರ ತಾಲೂಕಿನಲ್ಲಿಯೂ ನಡೆದ ಚಳುವಳಿ ಸ್ವಾತಂತ್ರ್ಯ ದೊರಕಿಸಿಕೊಳ್ಳಲು ನೆರವು ನೀಡಿತು ಎಂಬುದನ್ನು ಮರೆಯುವಂತಿಲ್ಲ.

ಭಾನುವಾರ, ಆಗಸ್ಟ್ 14, 2022

ಬೇಲೇಕೇರಿ ಸ್ವಾತಂತ್ರ್ಯ ಹೋರಾಟಗಾರರು

ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಾಚರಣೆಯ ಉತ್ಸಾಹದಲ್ಲಿದ್ದೇವೆ. ಸ್ವಾತಂತ್ರ್ಯ ಸುಲಭವಾಗಿ ಸಿಗಲಿಲ್ಲ.ಅದಕ್ಕೆ ಸುದೀರ್ಘವಾದ ವ್ಯವಸ್ಥಿತವಾದ ಮತ್ತು ಸಂಘಟಿತ ಹೋರಾಟ ನಡೆದಿದೆ.ಸಂತನಂತಿದ್ದ ಪೂಜ್ಯ ಮಹಾತ್ಮಾ ಗಾಂಧೀಜಿಯವರ ಸಮರ್ಥ ನಾಯಕತ್ವದಡಿಯಲ್ಲಿ ನಡೆದ ಹೋರಾಟದ ಫಲವಾಗಿ ಸ್ವಾತಂತ್ರ್ಯ ನಮ್ಮದಾಗಿದೆ.ಜನಸಾಮಾನ್ಯರೂ ಸ್ವಾತಂತ್ರ್ಯಕ್ಕಾಗಿ ತಮ್ಮ ಮನೆ ಮಠಗಳನ್ನು ತೊರೆದು ಪ್ರಾಣದ ಹಂಗು ಬಿಟ್ಟು ಹೋರಾಡಿದ್ದಾರೆ. ಯಾವ ತಪ್ಪೂ ಮಾಡದೇ ಜೈಲು ಶಿಕ್ಷೆ ಅನುಭವಿಸಿದ್ದಾರೆ.ನಮ್ಮ ಅಂಕೋಲಾ ತಾಲೂಕಿನಲ್ಲಿ ನಡೆದ ಹೋರಾಟವೂ ಅವಿಸ್ಮರಣೀಯ.ಈ ತಾಲೂಕಿನ ಪ್ರತಿ ಹಳ್ಳಿಯೂ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದವು.ಬೇಲೇಕೇರಿಯೂ ಇದಕ್ಕೆ ಹೊರತಾಗಿರಲಿಲ್ಲ.ಆದರೆ ಅದು ಅಷ್ಟಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗಿಲ್ಲ. ಸಧ್ಯಕ್ಕೆ ದೊರಕುವ ಮಾಹಿತಿಯ ಪ್ರಕಾರ ಬೇಲೇಕೇರಿಯ ಕರಿಯಣ್ಣ ಬೀರಣ್ಣ ನಾಯಕ,ಗೋವಿಂದ ಅನಂತ ನಾಯಕ,ತಿಮ್ಮಣ್ಣ ಹಮ್ಮಣ್ಣ ನಾಯಕ,ಬೀರಣ್ಣ ಬರ್ಮು ನಾಯಕ, ವಿಠೋಬಾ ರಾಮ ನಾಯಕ,ಸುಖಾ ತಿಮ್ಮಣ್ಣ ನಾಯಕ,ಗಿರಿಯಣ್ಣ ನಾರಾಯಣ ನಾಯಕ,ನಾರಾಯಣ ವೆಂಕಯ್ಯ ನಾಯಕ,ಕಲ್ಲು ಅನಂತ ನಾಯಕ,ಬೊಮ್ಮಯ್ಯ ಬೀರಣ್ಣ ನಾಯಕ,ವೆಂಕಣ್ಣ ದೇವಣ್ಣ ನಾಯಕ , ವೆಂಕಣ್ಣ ಸಾಂತು ನಾಯಕ,ವಿಠೋಬಾ ತಿಮ್ಮಣ್ಣ ನಾಯಕ, ತಮ್ಮಣ್ಣ ದೊಡ್ಡತಮ್ಮ ನಾಯಕ,ಹಮ್ಮಣ್ಣ ಬೀರಪ್ಪ ನಾಯಕ ವೆಂಕಪ್ಪನಮನೆ,ವೆಂಕಟರಮಣ ತಿಮ್ಮಣ್ಣ ನಾಯಕ,ವೆಂಕಣ್ಣ ಅನಂತ ನಾಯಕ,ವಿಠೋಬಾ ಬೀರಣ್ಣ ನಾಯಕ,ತಿಮ್ಮಣ್ಣ ಕರಿಯಣ್ಣ ನಾಯಕ ,ಹೊನ್ನಪ್ಪ ವೆಂಕಯ್ಯನಾಯಕ ವೆಂಕಯ್ಯನಮನೆ,ಕರಿಯಣ್ಣ ಬುಳ್ಳಾ ನಾಯಕ ಕರ್ನಮನೆ,ನಾರಾಯಣ ರಾಮ ನಾಯಕ ಬೀರುಮನೆ, ಗಿರಿಯಣ್ಣ ಸುಖಾ ನಾಯಕ,ವಾಸು ಬೀರಣ್ಣ ನಾಯಕ,ತಿಮ್ಮಣ್ಣ ದೇವಪ್ಪ ನಾಯಕ,ಬುದ್ಯಾ ಪೆಡ್ನೇಕರ,ಯಶವಂತ ನಾಯ್ಕ ಹೀಗೆ ಹಲವರು‌ ಉಪ್ಪಿನ ಸತ್ಯಾಗ್ರಹ,ಕರಬಂದಿ ಚಳುವಳಿ,ಚಲೇಜಾವ್ ಚಳುವಳಿಗಳಲ್ಲಿ ಭಾಗವಹಿಸಿ ಜೈಲು ಶಿಕ್ಷೆ ಅನುಭವಿಸಿದ್ದರು. ಮಹಿಳೆಯರೂ ಕೂಡ ಚಳುವಳಿಯಲ್ಲಿ ಪಾಲ್ಗೊಂಡು ಶಿಕ್ಷೆ ಅನುಭವಿಸಿದ್ದರು.ರಾಕಮ್ಮ ರಾಮ ನಾಯಕ,ಮಾಣು ಬೀರಪ್ಪ ನಾಯಕ,ಶಿವಮ್ಮಬೀರಪ್ಪ ನಾಯಕ,ತಿಮ್ಮಕ್ಕ ಬೀರಪ್ಪ ನಾಯಕ, ಹನಮು ವೆಂಕಣ್ಣ ನಾಯಕ ಮುಂತಾದವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು.ಇಲ್ಲಿ ಕೆಂಚನಮನೆಯ ವೆಂಕಮ್ಮ ಮಾಣಿ ನಾಯಕ ಅವರನ್ನು ವಿಶೇಷವಾಗಿ ಹೆಸರಿಸಲೇಬೇಕು.ಭಾರತದ ಕೋಗಿಲೆ ಎಂದು ಹೆಸರಾದ ಸರೋಜಿನಿ ನಾಯ್ಡು ಅವರ ನಿಕಟವರ್ತಿಗಳಲ್ಲಿ ಒಬ್ಬರಾಗಿದ್ದ ಅವರು ಹಿಂಡಲಗಾದಲ್ಲಿ ಜೈಲುವಾಸ ಅನುಭವಿಸಿದ್ದರು. ನಮಗೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಸ್ವಾತಂತ್ರ್ಯ ಹೋರಾಟಗಾರರು ಪರಿಚಯ ಇರುತ್ತದೆ.ಆದರೆ ನಮ್ಮವರ ಬಗ್ಗೆಯೇ ತಿಳಿದಿರುವದಿಲ್ಲ.ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಾದರೂ ನಮ್ಮ ಹಿರಿಯರನ್ನು ಸ್ಮರಿಸಿಕೊಳ್ಳವದರ ಮೂಲಕ ಅವರ ಹೋರಾಟಕ್ಕೆ ನಮನ ಸಲ್ಲಿಸುವುದು ನಮ್ಮ ಕರ್ತವ್ಯ.(ಇದು ಪರಿಪೂರ್ಣ ಪಟ್ಟಿ ಅಲ್ಲ.ಇನ್ನೂ ಇದ್ದಾರೆ.ನನಗೆ ಸಿಕ್ಕ ಮಾಹಿತಿ ಮಾತ್ರ ಇಲ್ಲಿದೆ.ಬಲ್ಲವರು ಇನ್ನೂ ಮಾಹಿತಿ ನೀಡಿದರೆ ಅವರು ಹೆಸರುಗಳನ್ನು ಸೇರಿಸುತ್ತೇನೆ.) - ಶ್ರೀಧರ ಬಿ.ನಾಯಕ

ಗುರುವಾರ, ಜುಲೈ 21, 2022

" ಹರ್ ಘರ್ ಮೇ ತಿರಂಗಾ"ಅಭಿಯಾನದ ಹಿಂದೆ- ಮುಂದೆ

ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಇದೇ ಆಗಸ್ಟ್ 11ರಿಂದ 17ರವರೆಗೆ ದೇಶದಾದ್ಯಂತ "ಪ್ರತಿ ಮನೆಯಲ್ಲಿ ರಾಷ್ಟ್ರಧ್ವಜ "(ಹರ್ ಘರ್ ಮೇ ತಿರಂಗಾ) ಅಭಿಯಾನವನ್ನು ನಡೆಸುವುದಾಗಿ ಕೇಂದ್ರ ಸರಕಾರ ಘೋಷಿಸಿದೆ.ಸ್ವಾತಂತ್ರ್ಯೋತ್ಸವದ 75 ವರ್ಷಗಳನ್ನು ಪೂರ್ಣಗೊಳಿಸಿದ ನೆನಪಿನಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.ಈ ಅಭಿಯಾನದಡಿಯಲ್ಲಿ ದೇಶದ ಪ್ರತಿಯೊಬ್ಬ ನಾಗರಿಕರೂ ತಮ್ಮ ಮನೆಯಲ್ಲಿ ರಾಷ್ಟ್ರೀಯ ಹೆಮ್ಮೆಯ ಸಂಕೇತವಾದ ರಾಷ್ಟ್ರಧ್ವಜವನ್ನು ಹಾರಿಸಬೇಕೆಂದು ಸಂಕಲ್ಪಿಸಲಾಗಿದೆ. ಈ ಅಭಿಯಾನದಡಿಯಲ್ಲಿ 20 ಕೋಟಿಗೂ ಹೆಚ್ಚು ಮನೆಗಳಲ್ಲಿ ನೂರು ಕೋಟಿಗೂ ಹೆಚ್ಚು ಜನರು ತ್ರಿವರ್ಣ ರಾಷ್ಟ್ರಧ್ವಜವನ್ನು ಹಾರಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ.ತ್ರಿವರ್ಣ ಧ್ವಜಾರೋಹಣವು ದೇಶದ ಪ್ರತಿಯೊಬ್ಬ ನಾಗರಿಕನ ಹೃದಯದಲ್ಲಿ ದೇಶಪ್ರೇಮದ ಭಾವನೆಯನ್ನು ಮೂಡಿಸಿ ರಾಷ್ಟ್ರಾಭಿಮಾನವನ್ನು ಉದ್ದೀಪನಗೊಳಿಸಲಿದೆ ಎಂದು ಆಶಿಸಲಾಗಿದೆ. ನಮ್ಮ ದೇಶದ ರಾಷ್ಟ್ರಧ್ವಜಕ್ಕೆ ಅದರದೇ ಆದ ಇತಿಹಾಸವಿದೆ.ಹಲವು ಹಂತಗಳನ್ನು ದಾಟಿ ಬಂದ ಈಗಿನ ಸ್ವರೂಪದ ಧ್ವಜವನ್ನು ಜುಲೈ 22,1947 ರಂದು ಸಂವಿಧಾನ ಸಭೆಯಲ್ಲಿ ರಾಷ್ಟ್ರಧ್ವಜವೆಂದು ಸ್ವೀಕರಿಸಲಾಯಿತು.ಈ ಧ್ವಜವನ್ನು ಶಿಕ್ಷಕರೂ ಮತ್ತು ಸ್ವಾತಂತ್ರ್ಯ ಹೋರಾಟಗಾರರೂ ಆದ ಆಂಧ್ರಪ್ರದೇಶದ ಮಚಲಿಪಟ್ಟಣಂ ದ ಪಿಂಗಾಲಿ ವೆಂಕಯ್ಯನವರು ವಿನ್ಯಾಸಗೊಳಿಸಿದರು.ನಮ್ಮ ರಾಷ್ಟ್ರಧ್ವಜವು ಆಯತಾಕಾರದಲ್ಲಿದ್ದು ಉದ್ದ ಅಗಲವು 3:2 ಅನುಪಾತವನ್ನು ಹೊಂದಿದೆ. ಧ್ವಜದ ಮೂರು ಬಣ್ಣಗಳಾದ ಕೇಸರಿ,ಬಿಳಿ ಮತ್ತು ಹಸಿರು ಸರಿಸಮಾನ ಗಾತ್ರದಲ್ಲಿದ್ದು ಅದರ ಮಧ್ಯದಲ್ಲಿ ನೀಲಿ ಬಣ್ಣದ ಅಶೋಕ ಚಕ್ರವು 24 ಸಮ-ಅಂತರದ ರೇಖೆಗಳನ್ನು ಹೊಂದಿರುತ್ತದೆ.ಧ್ವಜದ ಬಣ್ಣಗಳು ತ್ಯಾಗ,ಶಾಂತಿ ಮತ್ತು ಸಮೃದ್ಧಿಯ ಸಂಕೇತವಾಗಿದ್ದು,ವಿಭಿನ್ನ ಜಾತಿ, ಮತ,ಪಂಗಡ.ಭಾಷೆ ಮತ್ತು ಸಂಸ್ಕೃತಿಯ ಜನರನ್ನು ಒಂದೇ ದ್ವಜದಡಿ ನಿಲ್ಲಿಸಿ ದೇಶದ ಏಕತೆಯನ್ನು ಸಾರುವ ದಿವ್ಯ ಸಾಧನವಾಗಿದೆ.ಇಂತಹ ರಾಷ್ಟ್ರದ್ವಜವನ್ನು ಕೇವಲ ಕೈ ನೇಯ್ಗೆಯಿಂದಲೇ ಸಿದ್ದವಾದ ಶುದ್ಧ ಖಾದಿಯಿಂದ ತಯಾರಿಸಲ್ಪಟ್ಟಿರಬೇಕೆಂಬ ನಿಯಮವಿದೆ.2002ರ ಧ್ವಜ ಸಂಹಿತೆಯು ಉಣ್ಣೆ, ರೇಷ್ಮೆ ಇಲ್ಲವೇ ಹತ್ತಿಯ ಧ್ವಜಗಳಿಗೂ ಅವಕಾಶ ನೀಡಿದೆ.ಆದರೆ ಅದು ಕೈ ನೂಲು ಮತ್ತು ಕೈ ನೇಯ್ಗೆಯದೇ ಆಗಿರಬೇಕು ಎಂದು ಹೇಳಲಾಗಿದೆ.ನಮ್ಮ ಸಂವಿಧಾನದಲ್ಲಿ ಉಲ್ಲೇಖಿಸಿದಂತೆ ಭಾರತೀಯ ಗುಣಮಟ್ಟ ಸಂಸ್ಥೆಯಿಂದ ಪ್ರಮಾಣಪತ್ರ ಪಡೆದು ರಾಷ್ಟ್ರಧ್ವಜವನ್ನು ತಯಾರಿಸುವ ಘಟಕವು ಕರ್ನಾಟಕದ ಧಾರವಾಡ ಜಿಲ್ಲೆಯಲ್ಲಿ ಮಾತ್ರವಿದೆ.ಇದು ದೇಶಾದ್ಯಂತ ಅಗತ್ಯವಿರುವ ಧ್ವಜಗಳನ್ನು ಪೂರೈಸುತ್ತದೆ. ರಾಷ್ಟ್ರಧ್ವಜವನ್ನು ನಮ್ಮ ದೇಶದ ರಾಷ್ಟ್ರೀಯ ಹಬ್ಬದ ದಿನಗಳಲ್ಲಿ ಗೌರವಪೂರ್ವಕವಾಗಿ ಹಾರಿಸಬೇಕು. ರಾಷ್ಟ್ರದ ಪ್ರತೀಕವಾಗಿರುವ ರಾಷ್ಟ್ರಧ್ವಜವನ್ನು ಹಾರಿಸುವಾಗ ಯಾವುದೇ ರೀತಿಯ ಅಪಚಾರವಾಗಬಾರದು ಎಂಬ ಉದ್ದೇಶದಿಂದ ರಾಷ್ಟ್ರಧ್ವಜ ಸಂಹಿತೆಯನ್ನು ರೂಪಿಸಲಾಗಿದೆ. ರಾಷ್ಟ್ರಧ್ವಜವನ್ನು ಹಾರಿಸುವಾಗ ಸನ್ಮಾನಪೂರ್ವಕ ಉಚ್ಛ ಸ್ಥಾನವನ್ನು ನೀಡಬೇಕು.ಎಲ್ಲರಿಗೂ ಕಾಣಿಸುವ ಸ್ಥಳದಲ್ಲಿ ಧ್ವಜವನ್ನು ಏರಿಸಬೇಕು.ಸರಕಾರಿ ಕಟ್ಟಡಗಳಲ್ಲಿ ರವಿವಾರ ಮತ್ತು ಇತರ ರಜಾದಿನಗಳಲ್ಲಿಯೂ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಧ್ವಜ ಹಾರಿಸಬೇಕು. ಪ್ರತಿಕೂಲ ಹವಾಮಾನವಿದ್ದರೂ ಧ್ವಜ ಹಾರಿಸುವುದು ಕಡ್ಡಾಯವಾಗಿದೆ. ರಾಷ್ಟ್ರಧ್ವಜವನ್ನು ಉತ್ಸಾಹದಿಂದ ಏರಿಸಬೇಕು ಗೌರವದಿಂದ ನಿಧಾನವಾಗಿ ಕೆಳಗಿಳಿಸಬೇಕು.ಧ್ವಜ ಹಾರಿಸುವಾಗ ಕೇಸರಿ ಬಣ್ಣದ ಪಟ್ಟಿಯು ಮೇಲಿರಬೇಕು ಹಸಿರು ಬಣ್ಣದ ಪಟ್ಟಿಯು ಕೆಳಗಿರಬೇಕು . 2002ಕ್ಕಿಂತ ಮೊದಲು ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವದ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಖಾಸಗಿ ನಾಗರಿಕರಿಗೆ ರಾಷ್ಟ್ರಧ್ವಜವನ್ನು ಹಾರಿಸಲು ಅನುಮತಿಯಿರಲಿಲ್ಲ.ಆದರೆ ಉದ್ಯಮಿ ನವೀನ್ ಜಿಂದಾಲ್ ರ ಹೋರಾಟದ ಫಲವಾಗಿ ರಾಷ್ಟ್ರಧ್ವಜ ಹಾರಿಸಲು ಇದ್ದ ನಿರ್ಬಂಧವನ್ನು ತೆಗೆದು ಹಾಕಲಾಯಿತು. ಜಿಂದಾಲ್ ಅವರು ಅಮೇರಿಕಾದಲ್ಲಿ ಶಿಕ್ಷಣ ಪಡೆದವರು.ಅಲ್ಲಿ ಸಾಮಾನ್ಯ ನಾಗರಿಕರು ರಾಷ್ಟ್ರಧ್ವಜ ಹಾರಿಸಲು ಯಾವುದೇ ಅಡೆತಡೆಗಳಿರಲಿಲ್ಲ.ಇದರಿಂದ ಪ್ರಭಾವಿತರಾದ ನವೀನ್ ಜಿಂದಾಲ್ ಶಿಕ್ಷಣ ಮುಗಿಸಿ ಭಾರತಕ್ಕೆ ಬರುತ್ತಿದ್ದಂತೆಯೇ 1992 ರ ಆರಂಭದಲ್ಲಿ ತಮ್ಮ ಕಚೇರಿಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿದರು.ಆಗಿನ ಆಡಳಿತ ವ್ಯವಸ್ಥೆ ಜಿಂದಾಲ್ ರ ಈ ಕ್ರಮವನ್ನು ಆಕ್ಷೇಪಿಸಿ ಧ್ವಜವನ್ನು ಮುಟ್ಟುಗೋಲು ಹಾಕಿಕೊಂಡಿತು ಮತ್ತು ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತು.ಆಗ ಜಿಂದಾಲ್ ಅವರು ದೆಹಲಿಯ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡಿ ಖಾಸಗಿ ನಾಗರಿಕರು ಧ್ವಜವನ್ನು ಬಳಸುವುದರ ಮೇಲಿರುವ ನಿರ್ಬಂಧವನ್ನು ತೆಗೆದು ಹಾಕಲು ಕೋರಿದರು.ಅವರ ಪರವಾಗಿ ವಾದಿಸಿದ ವಕೀಲರು ರಾಷ್ಟ್ರಧ್ವಜವನ್ನು ಸರಿಯಾದ ಕ್ರಮದಲ್ಲಿ ಗೌರವದಿಂದ ಹಾರಿಸುವುದು ನಾಗರಿಕರ ಹಕ್ಕು ಮತ್ತು ದೇಶ ಪ್ರೇಮವನ್ನು ವ್ಯಕ್ತಪಡಿಸುವ ಮಾರ್ಗ ಎಂದು ವಾದಿಸಿದರು.ದೆಹಲಿ ಉಚ್ಚ ನ್ಯಾಯಾಲಯವು ಈ ಪ್ರಕರಣವನ್ನು ಸುಪ್ರೀಂಕೋರ್ಟ್ ಗೆ ವರ್ಗಾಯಿಸಿತು.ಸುಪ್ರಿಂ ಕೋರ್ಟ್ ನವೀನ್ ಜಿಂದಾಲ್ ಪರವಾಗಿ ತೀರ್ಪು ನೀಡಿತು. ನಂತರ ಸರ್ಕಾರವು 26 ಜನೇವರಿ 2002 ರಂದು ಭಾರತೀಯ ಧ್ವಜ ಸಂಹಿತೆಯನ್ನು ತಿದ್ದುಪಡಿ ಮಾಡಿ ಖಾಸಗಿ ನಾಗರಿಕರು ಯಾವುದೇ ದಿನ ಧ್ವಜದ ಘನತೆ ಗೌರವವನ್ನು ಕಾಪಾಡಿಕೊಂಡು ಧ್ವಜವನ್ನು ಹಾರಿಸಲು ಅವಕಾಶ ಕಲ್ಪಿಸಿತು.ಆದರೆ ಧ್ವಜವನ್ನು ಸಮ ವಸ್ತ್ರವನ್ನಾಗಿ,ವೇಷ-ಭೂಷಣಗಳನ್ನಾಗಿ,ವಸ್ತು ಒಡವೆಗಳ ಮೇಲೆ ಕಸೂತಿ ಮಾಡುವುದನ್ನು ನಿಷೇಧಿಸಿತು.ಹೀಗಾಗಿ ಈಗ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹರ್ ಘರ್ ತಿರಂಗಾ ಅಭಿಯಾನವನ್ನು ನಡೆಸಲು ಸಾಧ್ಯವಾಗಿದೆ. ಆದರೆ ಈ ಅಭಿಯಾನದ ಸಂದರ್ಭದಲ್ಲಿ ಕಳೆದ ಡಿಸೆಂಬರ್ 30,2021ರಂದು ಭಾರತೀಯ ಧ್ವಜ ಸಂಹಿತೆ 2002ನ್ನು ಮತ್ತೆ ತಿದ್ದುಪಡಿ ಮಾಡಿದೆ.ಈ ತಿದ್ದುಪಡಿಯು ಪಾಲಿಸ್ಟರ್ ಬಟ್ಟೆಯಿಂದ ತಯಾರಿಸಿದ ಮತ್ತು ಯಂತ್ರಗಳ ಮೂಲಕ ತಯಾರಿಸಿದ ರಾಷ್ಟ್ರಧ್ವಜಗಳಿಗೂ ಅವಕಾಶ ನೀಡಿದೆ.ಮಾತ್ರವಲ್ಲ,ಆನ್ ಲೈನ್ ಪೋರ್ಟಲ್ ಗಳಲ್ಲಿ 30 ರೂಪಾಯಿಗಳಿಗೆ ಧ್ವಜಗಳು ಲಭ್ಯವಾಗಲಿವೆ ಎಂದು ಸಂಸ್ಕೃತಿ ಇಲಾಖೆಯು ಹೇಳಿದೆ.ಅಮೇಜಾನ್,ಫ್ಲಿಫ್ ಕಾರ್ಟ್ ಗಳಂತಹ ಇ- ಕಾಮರ್ಸ್ ಸಂಸ್ಥೆಗಳ ಜೊತೆಗೆ ಅದು ಮಾತುಕತೆಯನ್ನೂ ನಡೆಸಿದೆ.ಒಂದು ಕಡೆ ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ.ಇನ್ನೊಂದು ಕಡೆ ಇ-ಕಾಮರ್ಸ ಸಂಸ್ಥೆಗಳ ಮೂಲಕ ದೇಶದ ಗೌರವದ ಪ್ರತೀಕವಾದ ನಮ್ಮ ರಾಷ್ಟ್ರಧ್ವಜವನ್ನು ಚೀನಾದಿಂದಲೇ ತರಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ.(ಅಮೇಜಾನ್ ನಂತಹ ಸಂಸ್ಥೆಗಳಲ್ಲಿ ಭಾರತೀಯ ಧ್ವಜ ಮತ್ತು ಭೂಪಟಗಳಿಗೆ ನಿರಂತರವಾಗಿ ಅವಮಾನಗಳಾಗುತ್ತಿವೆ ಎಂಬ ಆಕ್ಷೇಪಗಳೂ ಇವೆ.)ಇದು ಸಹಜವಾಗಿ ರಾಷ್ಟ್ರಧ್ವಜ ತಯಾರಿಕೆಯಲ್ಲಿ ನಿರತರಾದವರ ಆಕ್ರೋಶಕ್ಕೆ ಕಾರಣವಾಗಿದೆ.ಖಾದಿ ಬಟ್ಟೆ ನಮ್ಮ ಅಸ್ಮಿತೆ.ಅದನ್ನು ಹೊರತು ಪಡಿಸಿ,ಯಂತ್ರದಿಂದ ತಯಾರಿಸಿದ ಧ್ವಜಗಳಿಗೆ ಅವಕಾಶ ನೀಡಿದರೆ ಧ್ವಜದ ಮಹತ್ವ ಮತ್ತು ಗೌರವ ಕಡಿಮೆಯಾಗಲಿದೆ ಎಂದು ಅಭಿಪ್ರಾಯ ಪಡಲಾಗುತ್ತಿದೆ.ಇಂತಹ ಧ್ವಜಗಳಿಗೆ ಮಾನ್ಯತೆ ನೀಡಿದರೆ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ರಾಷ್ಟ್ರಧ್ವಜ ತಯಾರಿಕಾ ಘಟಕ ಧ್ವಜ ತಯಾರಿಕೆಯನ್ನು ನಿಲ್ಲಿಸಲಿದೆ.ಇದರಿಂದ ಕೈ ಮಗ್ಗ ನಿಲ್ಲುತ್ತದೆ.ಕೈಮಗ್ಗ ನಿಂತರೆ ಹತ್ತಿ ಬೆಳೆಗಾರರಿಗೆ ಸಮಸ್ಯೆಯಾಗಲಿದೆ.ಈ ನಿಟ್ಟಿನಲ್ಲಿ ಸಂಘವು ಈಗಾಗಲೇ ಪ್ರಧಾನಿಗಳಿಗೆ ತಮ್ಮ ಪ್ರತಿಭಟನೆಯನ್ನು ಸಲ್ಲಿಸಿದೆ.ಫಲಿತಾಂಶವನ್ನು ಕಾದು ನೋಡಬೇಕಾಗಿದೆ. ಶ್ರೀಧರ ಬಿ.ನಾಯಕ,ಬೇಲೇಕೇರಿ

ಶುಕ್ರವಾರ, ಮಾರ್ಚ್ 25, 2022

ಪಾವನ ಪುನೀತ

ಅಪ್ಪುವನ್ನು ನೆನೆಯುತ್ತ... ಥಿಯೇಟರ್ ನಲ್ಲಿ ಸಿನಿಮಾ ನೋಡದೇ ಅದೆಷ್ಟೋ ವರ್ಷಗಳಾಗಿವೆ.ಹಾಗೆಂದು ಸಿನೇಮಾದ ಬಗ್ಗೆ ನಿರಾಸಕ್ತಿಯೇನೂ ಇಲ್ಲ. ಹೊಸ ಸಿನಿಮಾಗಳು ಬಿಡುಗಡೆಯಾದ ಎರಡು ಮೂರು ವಾರಗಳಲ್ಲಿ ಟಿ.ವಿ.ಯಲ್ಲಿ ಪ್ರದರ್ಶನಗೊಳ್ಳುವದರಿಂದ ಟಾಕೀಸ್ ಗೆ ಹೋಗಿ ನೋಡುವ ಧಾವಂತ ಉಳಿದಿಲ್ಲ.ಇತ್ತೀಚಿನ ದಿನಗಳಲ್ಲಿ ಥಿಯೇಟರ್ ಗಳ ಜೊತೆಯಲ್ಲಿ ಓಟಿಟಿ ವೇದಿಕೆಗಳಲ್ಲಿಯೂ ಚಿತ್ರ ಬಿಡುಗಡೆಯಾಗುವದರಿಂದ ಮನೆಯಲ್ಲೇ ಕುಳಿತು ನೋಡಬಹುದಾಗಿದೆ. ಕನ್ನಡಿಗ,ಒನ್ ಕಟ್ ಟು ಕಟ್, ದೃಶ್ಯ ೨,ಗರುಡ ಗಮನ ವೃಷಭ ವಾಹನ ಮುಂತಾದ ಸಿನೇಮಾಗಳನ್ನು ಹಾಗೇ ನೋಡಿಯಾಗಿದೆ. ಆದರೆ ಪುನೀತ್ ರಾಜಕುಮಾರ್ ಅವರ ಅಕಾಲಿಕ ಅಗಲಿಕೆ ಅವರು ಕೊನೆಯ ಚಿತ್ರವನ್ನು ಚಿತ್ರ ಮಂದಿರದಲ್ಲಿಯೇ ನೋಡುವಂತೆ ಮಾಡಿತು.ಪುನೀತ್ ರಾಜಕುಮಾರ್ ಅವರು ಬಾಲ್ಯದಲ್ಲೇ ಲೋಹಿತ್ ಆಗಿ, ನಂತರ ಅಪ್ಪು ಆಗಿ ತಮ್ಮ ಅಭಿನಯದಿಂದ ಕನ್ನಡಿಗರ ಮನ ಗೆದ್ದವರು.ಅವರು ನಟಿಸಿದ ವಸಂತ ಗೀತಾ,ಎರಡು ನಕ್ಷತ್ರಗಳು, ಭೂಮಿಗೆ ಬಂದ ಭಗವಂತ, ಬೆಟ್ಟದ ಹೂವು, ಭಕ್ತ ಪ್ರಹ್ಲಾದ ಮುಂತಾದ ಚಿತ್ರಗಳ ಅಭಿನಯ ಅವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ.ಆದರೆ ಪರಶುರಾಮ ಚಿತ್ರದ ನಂತರ ಯಾಕೋ ಅವರು ಚಿತ್ರರಂಗದಿಂದ ದೂರವಾದರು. ಬೇರೆ ಬೇರೆ ಉದ್ಯಮಗಳಲ್ಲಿ ತೊಡಗಿಕೊಂಡರೂ ಅವು ಅವರ ಕೈ ಹಿಡಿಯಲಿಲ್ಲ. ಈ ನಡುವೆ ಅವರ ವ್ಯವಹಾರದ ಕುರಿತು ಅಲ್ಲಲ್ಲಿ ನಕಾರಾತ್ಮಕ ಪಿಸುಮಾತುಗಳು ಕೇಳಿ ಬಂದವು. ಆದರೆ ಅವುಗಳಿಗೆಲ್ಲ ತಲೆ ಕೆಡಿಸಿ ಕೊಳ್ಳದೆ ಪುನೀತ್ ಅಪ್ಪು ಸಿನೇಮಾದ ಮೂಲಕ ಚಿತ್ರರಂಗಕ್ಕೆ ಪುನರ್ ಪ್ರವೇಶಿದರು. ನಂತರ ಮರಳಿ ನೋಡಿದ್ದೇ ಇಲ್ಲ.ಅವರು ಅಭಿನಯಿಸಿದ ಚಿತ್ರಗಳೆಲ್ಲ ಸೂಪರ್ ಡೂಪರ್ ಗಳೇ.ಪ್ರಥ್ವಿ,ಜಾಕಿ,ರಾಜರತ್ನ, ರಾಜಕುಮಾರ, ಅರಸು, ಮೈತ್ರಿ ಮುಂತಾದ ಚಿತ್ರಗಳು ಚಿತ್ರರಂಗದಲ್ಲಿ ಹೊಸ ಭಾಷ್ಯವನ್ನು ಬರೆದವು.ಅಭಿನಯದ ಜೊತೆಯಲ್ಲಿಯೇ ಯಾವ ಪ್ರಚಾರವನ್ನು ಬಯಸದೇ ಜನಮುಖಿ ಚಿಂತನೆಯನ್ನು ಮೈಗೂಡಿಸಿಕೊಂಡು ಅನಾಥಾಲಯ, ವೃದ್ಧಾಶ್ರಮ,ಬಡ ಮಕ್ಕಳ ಶಿಕ್ಷಣ -ಯೋಗಕ್ಷೇಮಗಳಲ್ಲಿ ತೊಡಗಿ ತಮ್ಮ ವ್ಯಕ್ತಿತ್ವಕ್ಕೆ ಹೊಸ ಪ್ರಭೆಯನ್ನು ಸೃಷ್ಟಿಸಿಕೊಂಡರು. ಇಂತಹ ಪುನೀತ್ ರಾಜಕುಮಾರ್ ಅವರು ಯಾರೂ ನಿರೀಕ್ಷಿಸದ ರೀತಿಯಲ್ಲಿ ಕಣ್ಮರೆಯಾದಾಗ ಇಡೀ ಕನ್ನಡನಾಡು ಕಣ್ಣೀರು ಹಾಕಿದ್ದು ಅವರು ವ್ಯಕ್ತಿತ್ವದ ಮಹೋನ್ನತಿಯ ಪ್ರತೀಕ. ಸುಮಾರು ಮೂವತ್ತೈದು ವರ್ಷಗಳ ಹಿಂದೆ ಕನ್ನಡದ ಪ್ರತಿಭಾವಂತ ಕಲಾವಿದ ಶಂಕರನಾಗ್ ಆಕಸ್ಮಿಕ ಅಪಘಾತದಲ್ಲಿ ಮರಣ ಹೊಂದಿದಾಗಲೂ ಕನ್ನಡನಾಡು ಇಂತಹುದೇ ಶೋಕವನ್ನು ವ್ಯಕ್ತ ಪಡಿಸಿತ್ತು.ಆದರೆ ಅಪ್ಪು ಅವರ ಅಗಲಿಕೆಯ ನೋವು ಉಂಟು ಮಾಡಿದೆ ಪ್ರಭಾವ ಇನ್ನೂ ಗಾಢವಾಗಿತ್ತು.ರಾಜಕುಮಾರ ಅವರ ಎಲ್ಲ ಮಕ್ಕಳು ಚಿತ್ರರಂಗದಲ್ಲಿದ್ದರೂ ಅಭಿಮಾನಿಗಳು ಪುನೀತ್ ಅವರಲ್ಲಿ ರಾಜಕುಮಾರರನ್ನು ಕಾಣುತ್ತಿದ್ದರು. ಕನ್ನಡವನ್ನು ಸರಿಯಾಗಿ ಮಾತನಾಡಲು ಬಾರದ ಆದರೆ ಪುನೀತ್ ರ ಸಿನೇಮಾ ನೋಡಿ ಮೆಚ್ಚಿದವರು ಅವರ ಭಾವಚಿತ್ರದ ಬ್ಯಾನರ್ ಪ್ರಕಟಿಸಿ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದನ್ನು ಕಂಡಾಗ ಇವನೆಂತಹ ಪುಣ್ಯಾತ್ಮನಾಗಿದ್ದ ಎನ್ನಿಸುತ್ತದೆ. ಅವರ ಕೊನೆಯ ಚಿತ್ರ ಜೇಮ್ಸ್ ಮೊನ್ನೆಯಷ್ಟೇ ಬಿಡುಗಡೆಯಾಗಿದೆ.ಅಪ್ಪು ಮೇಲಿನ ಪ್ರೀತಿ ಮತ್ತು ಗೌರವ ಈ ಚಿತ್ರವನ್ನು ಥಿಯೇಟರ್ ನಲ್ಲಿಯೇ ನೋಡುವಂತೆ ಪ್ರೇರೇಪಿಸಿತು. ಆ ಚಿತ್ರದ ವಿಮರ್ಶೆಯನ್ನಿಲ್ಲಿ ಮಾಡಲಾರೆ. ಅಲ್ಲಿ ಏನೇ ಅರೆ ಕೊರೆಗಳಿದ್ದರೂ ಅಪ್ಪುವಿನ ಕೊನೆಯ ಚಿತ್ರವಾದ್ದರಿಂದ ಯಾವುದನ್ನೂ ಆಕ್ಷೇಪಿಸದೇ ಒಪ್ಪಿಕೊಳ್ಳಲೇಬೇಕು.ಆದರೆ ಸಿನೇಮಾ ನೋಡುವಾಗ ಉಂಟಾದ ತಳಮಳ ಹೇಳಲಸಾಧ್ಯ.ಮೆತ್ತನೆಯ ಸುಖಾಸೀನದಲ್ಲಿ ಕುಳಿತಿದ್ದರೂ ಮುಳ್ಳಿನ ಮೇಲೆ ಕುಳಿತಂತೆ ಭಾಸವಾಗುತ್ತಿತ್ತು.ಚಿತ್ರಮಂದಿರ ಏ.ಸಿ.ಯಾಗಿದ್ದರೂ ಮೈ ಬೆವರುತ್ತಿತ್ತು. ಟೈಟಲ್ ಕಾರ್ಡಿನಲ್ಲಿ ಅವರನ್ನು ಕಾಣುತ್ತಿದ್ದಂತೆ ಕಣ್ಣಾಲಿಗಳು ತುಂಬಿ ಬಂದವು.ಅವರ ಪಾತ್ರ ಪ್ರವೇಶವಾಗುತ್ತಲೇ ಬೆಂಗಳೂರಿನ ಪಿವಿಆರ್ ನಂತಲ್ಲಿಯೂ ಸಿಳ್ಳೆ ಜೈಕಾರಗಳು ಮಾರ್ದನಿಸಿದವು. ಆದರೆ ಮರುಕ್ಷಣವೇ ಮತ್ತೆ ಮೌನ.ಏಕೆಂದರೆ ಪಾತ್ರದ ಧ್ವನಿ ಪುನೀತರದಾಗಿರಲಿಲ್ಲ, ಶಿವಣ್ಣನದಾಗಿತ್ತು.ಪುನೀತರ ಪಾತ್ರಕ್ಕೆ ಶಿವಣ್ಣ ಧ್ವನಿ ನೀಡಿದ್ದಾರೆ ಎಂದು ಪತ್ರಿಕೆಗಳಲ್ಲಿ ಓದಿದ್ದರೂ ಆ ಕ್ಷಣಕ್ಕೆ ಸತ್ಯವನ್ನು ಅರಗಿಸಿಕೊಳ್ಳಲು ಮನಸ್ಸು ಒಪ್ಪಲಿಲ್ಲ. ಪುನೀತ್ ನ ಧ್ವನಿಯನ್ನು ಮತ್ತೆ ಕೇಳಲಾಗುವದಿಲ್ಲವಲ್ಲ ಎಂದು ಸಂಕಟವಾಯಿತು.ಚಿತ್ರದಲ್ಲಿನ ಅವರ ಕುಣಿತ, ಫೈಟಿಂಗ್,ಆ ಮುಗ್ಧನಗು ಎಲ್ಲವನ್ನೂ ನೋಡುತ್ತಿದ್ದಂತೆ ಸಾವಿಗೆ ಈ ಹುಡುಗನನ್ನು ಇಷ್ಟು ಬೇಗ ಕರೆದುಕೊಂಡು ಹೋಗುವ ಮನಸ್ಸಾದರೂ ಹೇಗೆ ಬಂತು ಎಂಬ ಉತ್ತರವಿಲ್ಲದ ಪ್ರಶ್ನೆ ಸುಳಿದು ಹೋಯಿತು.ಅಂತಹ ಹುರಿಗೊಂಡ ದೇಹದ ವಿಶಾಲ ಎದೆಯಲ್ಲಿ ಅಡಗಿದ್ದ ಆ ಪುಟ್ಟ ಹೃದಯ ಇದ್ದಕ್ಕಿದ್ದಂತೆ ತನ್ನ ಮಿಡಿತವನ್ನು ನಿಲ್ಲಿಸಿದ್ದಾದರೂ ಯಾಕೆ ಎಂಬುದಕ್ಕೆ ಯಾರಲ್ಲಿಯೂ ಉತ್ತರವಿರಲಿಲ್ಲ. ಚಿತ್ರ ಮುಗಿದ ನಂತರ ಅಪ್ಪುವಿನ ಧ್ವನಿಯಲ್ಲಿಯೇ ಕೇಳಿ ಬಂದ ಜೈಹಿಂದ್ ಜೈ ಕರ್ನಾಟಕ ಪದಗಳು ಕಿವಿಯನ್ನು ನಿಮಿರಿಸುವಂತೆ ಮಾಡಿದರೂ ಅದು ಕ್ಷಣಿಕ ಎನ್ನಿಸಿ ಅಕ್ಷರಶಃ ಅಳುವಂತೆ ಮಾಡಿದವು. ಆಸನದಿಂದೆದ್ದರೂ ನಿಲ್ಲಲಾಗದೇ ಕುಸಿದು ಕುಳಿತು ಕೊಳ್ಳುವಂತಾಯಿತು. ಬಾಲನಟನಾಗಿದ್ದಾಗ ಒಮ್ಮೆ ನೋಡಿದ್ದು ಬಿಟ್ಟರೆ ಮತ್ತೆ ಬೇರೆ ಯಾವುದೇ ಸಂಬಂಧಗಳಿಲ್ಲದಿದ್ದರೂ ಅಪ್ಪು ಮನಸ್ಸಿಗೆ ತಟ್ಟಿದ್ದು ಮಾತ್ರ ವಿಚಿತ್ರವೇ! ನೂರಾರು ಪ್ರೇಕ್ಷರಿದ್ದರೂ ಸೂಜಿ ಬಿದ್ದರೂ ಸಪ್ಪಳ ಕೇಳುವ ಗಾಢ ಮೌನ ಆವರಿಸಿದ್ದ ಚಿತ್ರಮಂದಿರದಿಂದ ಭಾರವಾದ ಹೆಜ್ಜೆ ಇಡುತ್ತಾ ಹೊರ ಬಂದಾಗ ಇನ್ನು ಅಪ್ಪುವಿನ ಹೊಸ ಚಿತ್ರಗಳನ್ನು ನೋಡಲಾಗುವುದಿಲ್ಲ ಎಂಬ ವಾಸ್ತವ ಬೆಳಕಿನಷ್ಟೇ ಸತ್ಯವಾಗಿತ್ತು. - ಶ್ರೀಧರ ಬಿ.ನಾಯಕ  

ಮಂಗಳವಾರ, ಸೆಪ್ಟೆಂಬರ್ 28, 2021

ಪ್ರೊ.ಎ.ಎಚ್ ನಾಯಕ

ಅಂದು ಅಂಕೋಲೆಯ ಗೋಖಲೆ ಸೆಂಟನರಿ ಕಾಲೇಜಿನಲ್ಲಿಯೇ ಶಿಕ್ಷಣವನ್ನು ಮುಂದುವರಿಸಬೇಕೆಂಬ ತಾಯಿಯವರ ಒತ್ತಾಯಕ್ಕೆ ಮಣಿದು ಕಾಲೇಜ್ ಕ್ಯಾಂಪಸ್ ಅನ್ನು ಪ್ರವೇಶಿಸಿದ್ದೆ.ಅದುವರೆಗಿನ ಜೀವನವನ್ನು ಘಟ್ಟದ ಮೇಲಿನ ಭಾಗದಲ್ಲಿ ಕಳೆದಿದ್ದ ನನಗೆ ಅಂಕೋಲೆಯ ಪರಿಸರ, ಭಾಷೆ ಹೊಸದಾಗಿತ್ತು, ಸಾಕಷ್ಟು ಅನುಮಾನ, ಸಂಶಯ, ಕೀಳರಿಮೆಗಳಿತ್ತು. ಭವ್ಯವಾದ ಕಟ್ಟಡವನ್ನು ಪ್ರವೇಶಿಸಲು ಭಯಪಟ್ಟು ಕಾಲೇಜಿನ ಹೆಸರು ಹೊತ್ತ ನಾಮ ಫಲಕವನ್ನು ಓದುತ್ತಾ ನಿಂತಿದ್ದೆ.ಆಗ "ಏಯ್ ಯಾರದು? ಯಾಕೆ ಬಂದದ್ದು?" ಎಂಬ ಕಂಚಿನ ಧ್ವನಿ ಕೇಳಿ ಬೆಚ್ಚಿ ಬಿದ್ದು ಸಾವಕಾಶವಾಗಿ ಹೆಜ್ಜೆ ಕೀಳಲು ಪ್ರಾರಂಭಿಸಿದ್ದೆ. ಆದರೆ ಆ ಧ್ವನಿ ನನ್ನನ್ನು ಮತ್ತೆ ಹಿಂಬಾಲಿಸಿ "ನಿಲ್ಲು , ಅಲ್ಲಿಯೇ ನಿಲ್ಲು" ಎಂದು ಅಧಿಕಾರವಾಣಿಯಿಂದ ಗದರಿಸಿದಂತೆ ಕೇಳಿ ಬಂತು.ಆಗಲೇ ಸಫಾರಿ ಧರಿಸಿದ್ದ ವ್ಯಕ್ತಿಯೊಬ್ಬರು ನನ್ನ ಹತ್ತಿರಕ್ಕೆ ಬಂದು ನಾನು ಯಾರು? ಏನು? ಎತ್ತ ? ಎಂದು ವಿಚಾರಿಸಿ, ನನ್ನ ಭಯ ಆತಂಕಗಳನ್ನು ದೂರಮಾಡಿ,ಒಳಗೆ ಕರೆದುಕೊಂಡು ಹೋಗಿ ಆಫೀಸಿನಿಂದ ಪ್ರವೇಶದ ಅರ್ಜಿಯನ್ನು ತುಂಬಿಸಿಕೊಂಡು, ಒಂದು ವಾರದ ನಂತರ ನೋಟಿಸ್ ಬೋರ್ಡಿನಲ್ಲಿ ಅರ್ಜಿ ತುಂಬಿದ ವಿದ್ಯಾರ್ಥಿಗಳ ಪಟ್ಟಿಯನ್ನು ಪ್ರಕಟಿಸುವದಾಗಿಯೂ,ಸಂದರ್ಶನಕ್ಕೆ ಹಾಜರಾಗುವಂತೆಯೂ ತಿಳಿಸಿದರು. ಒಂದು ವಾರ ಕಳೆದು ಕಾಲೇಜಿಗೆ ಬಂದಾಗ ಗೊತ್ತಾಗಿದ್ದು ಅವರು ಕಾಲೇಜಿನ ಹಿರಿಯ ಪ್ರಾಧ್ಯಾಪಕ ಪ್ರೊ.ಎ.ಎಚ್.ನಾಯಕರೆಂದು.ನಂತರದ ದಿನಗಳಲ್ಲಿ ಅವರು ಕೇವಲ ನನಗೊಬ್ಬನಿಗೆ ಅಲ್ಲ, ಭಯ ಆತಂಕದಲ್ಲಿರುವ ಹಲವು ವಿದ್ಯಾರ್ಥಿಗಳಿಗೆ ಧೈರ್ಯ,ಆತ್ಮವಿಶ್ವಾಸ ತುಂಬಿದವರು ಎಂಬುದು ನನ್ನ ಅನುಭವಕ್ಕೆ ಬಂತು. ರೈತರ ದುಡಿಮೆಯ ಹಣದಿಂದ ದಿನಕರ ದೇಸಾಯಿಯವರ ನೇತ್ರತ್ವದಲ್ಲಿ ಕೆನರಾ ವೆಲ್ಫೇರ್ ಟ್ರಸ್ಟ್ ಅಂಕೋಲೆಯಲ್ಲಿ ಮೂಲ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ಪದವಿ ಕಾಲೇಜನ್ನು ಪ್ರಾರಂಭಿಸಿದಾಗ ನಾಡಿನ ಬೇರೆ ಬೇರೆ ಕಡೆಗಳಿಂದ ಪ್ರತಿಭಾವಂತರನ್ನು ಹುಡುಕಿ ಅಧ್ಯಾಪಕರನ್ನಾಗಿ ನೇಮಕ ಮಾಡಿಕೊಂಡು ಶೈಕ್ಷಣಿಕವಾಗಿ ಭದ್ರ ಬುನಾದಿಯನ್ನು ಹಾಕಿದರು.ಹೀಗೆ ಯಾರ ಶಿಫಾರಸು ಮತ್ತು ಪ್ರಭಾವವಿಲ್ಲದೇ ಕೇವಲ ತಮ್ಮ ಪ್ರತಿಭೆ ಮತ್ತು ಪಾಂಡಿತ್ಯದ ಬಲದಿಂದ ಆಯ್ಕೆಯಾದವರಲ್ಲಿ ಪ್ರೊ.ಎ.ಎಚ್ ನಾಯಕ ಅವರೂ ಒಬ್ಬರಾಗಿದ್ದರು. ವಿದ್ಯಾರ್ಥಿಯಾಗಿದ್ದಾಗಲೇ ಅಂಚೆ ಇಲಾಖೆಯಲ್ಲಿ ಸೇವೆ ಪ್ರಾರಂಭಿಸಿದ ಅವರಿಗೆ ತಾನೊಬ್ಬ ಪ್ರಾಧ್ಯಾಪಕನಾಗಬೇಕು ಎಂಬ ಮಹತ್ವಾಕಾಂಕ್ಷೆ ಇತ್ತು. ಇದನ್ನು ಈಡೇರಿಸಿಕೊಳ್ಳಲು ಒಂದಲ್ಲ ಮೂರು ಸ್ನಾತಕೋತ್ತರ ಪದವಿಗಳನ್ನು ಪಡೆದು ಅರ್ಹತೆ ಗಿಟ್ಟಿಸಿಕೊಂಡಿದ್ದರು. ಅಂಕೋಲೆ ಕಾಲೇಜಿಗೆ ನೇಮಕವಾಗುವದರೊಂದಿಗೆ ಅವರ ಆಸೆ ಈಡೇರಿತು. ಅವರು ಅತ್ಯುತ್ತಮ ಇತಿಹಾಸ ಪ್ರಾಧ್ಯಾಪಕರಾಗಿದ್ದರು. ನಾನೇನು ಅವರ ನೇರ ವಿದ್ಯಾರ್ಥಿಯಲ್ಲ. ನಾನು ವಿದ್ಯಾರ್ಥಿಯಾಗಿದ್ದಾಗ ಅವರು ಮೇಜರ್ ತರಗತಿಗಳಿಗೆ ಮಾತ್ರ ಪಾಠ ಮಾಡುತ್ತಿದ್ದರು. ನಾನು ಇತಿಹಾಸವನ್ನು ಮೈನರ್ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದೆ. ಆದರೆ ಮೇಜರ್ ವಿದ್ಯಾರ್ಥಿಗಳು ಅವರ ಪಾಠದ ಕುರಿತು ಮಾತನಾಡುವುದನ್ನು ಕೇಳಿ ನಾನು ಒಂದೆರಡು ಪಿರಿಯಡ್ಡುಗಳಿಗೆ ಕುಳಿತದ್ದು ನೆನಪಿದೆ. ಅವರ ಪಾಠದ ಶೈಲಿ ಅತ್ಯುತ್ತಮವಾಗಿತ್ತು. ಯಾವುದೇ ಟಿಪ್ಪಣಿ - ಪುಸ್ತಕಗಳ ನೆರವಿಲ್ಲದೆ ನೇರವಾಗಿ ಅವರು ಪಾಠಮಾಡುತ್ತಿದ್ದರು ಅವರ ಕಂಚಿನ ಕಂಠ ಇಡೀ ತರಗತಿಯನ್ನು ಹಿಡಿತದಲ್ಲಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.ಅವರ ಸಮಯಪ್ರಜ್ಞೆ ಅನುಕರಣೀಯವಾಗಿತ್ತು. ಗಂಟೆ ಹೊಡೆಯುತ್ತಿದ್ದಂತೆ ಅವರು ತರಗತಿಗೆ ಹಾಜರಾಗುತ್ತಿದ್ದರು.ತರಗತಿಗಳಲ್ಲಿ ತರಲೆ ಮಾಡುವ ವಿದ್ಯಾರ್ಥಿಗಳಿಗೆ ಪ್ರೀತಿಯಿಂದಲೇ ಗದರಿ ಸರಿದಾರಿಗೆ ತರಲು ಪ್ರಯತ್ನಿಸುತ್ತಿದ್ದರು. ಅಂಕೋಲೆಯ ಕಾಲೇಜು ತನ್ನ ಶಿಸ್ತು ಮತ್ತು ಸೃಜನಶೀಲ ಚಟುವಟಿಕೆಗಳಿಂದ ಕರ್ನಾಟಕದಲ್ಲಿಯೇ ಹೆಸರಾಗಿತ್ತು.ಇದಕ್ಕೆ ಪ್ರಿನ್ಸಿಪಾಲ್ ಕೆ.ಜಿ.ನಾಯಕರ ದಕ್ಷತೆ ಮತ್ತು ಮಾರ್ಗದರ್ಶನ ಕಾರಣವಾಗಿತ್ತು. ಆದರೆ ಅಂದು ಕಾರ್ಯನಿರ್ವಹಿಸುತ್ತಿದ್ದ ಅಧ್ಯಾಪಕರ ಕ್ರಿಯಾಶೀಲತೆ, ಸಹಕಾರವೂ ಅದಕ್ಕೆ ಪೂರಕವಾಗಿತ್ತು ಎಂದರೆ ತಪ್ಪಾಗಲಾರದು ಪ್ರೊ.ಡಿ.ಆರ್.ಪೈ, ಪ್ರೊ.ಎಂ.ಪಿ.ಭಟ್ಟ, ಪ್ರೊ.ಸಿ.ಎನ್.ಶೆಟ್ಟಿ, ಪ್ರೊ.ವಿ.ಎ.ಜೋಶಿ, ಪ್ರೊ.ಎ.ಎಚ್.ನಾಯಕ ಮೊದಲಾದ ಅರ್ಪಣಾ ಮನೋಭಾವದ ಪ್ರಾಧ್ಯಾಪಕರು ಕೆ.ಜಿ.ನಾಯಕರ ಹೆಗಲಿಗೆ ಹೆಗಲು ಕೊಟ್ಟು,ಕಾಲೇಜನ್ನು ಬೆಳೆಸುವಲ್ಲಿ ಸಹಕರಿಸಿದರು.ಈ ಎಲ್ಲ ಅಧ್ಯಾಪಕರಲ್ಲಿ ಎ.ಎಚ್ ನಾಯಕರು ಮುಂಚೂಣಿಯಲ್ಲಿದ್ದರು.ಅವರು ಕೇವಲ ತರಗತಿಗಳಿಗೆ ಸೀಮಿತರಾಗದೇ ತರಗತಿಗಳು ಮುಗಿದ ನಂತರ ಕಾಲೇಜು ವರಾಂಡದಲ್ಲಿ ಅವರು ಹಾಜರಿರುತ್ತಿದ್ದರು.ತರಗತಿಗಳು ನಡೆಯುತ್ತಿದ್ದಾಗ ಯಾವುದೇ ವಿದ್ಯಾರ್ಥಿ ವರಾಂಡದ ಮೇಲೆ ತಿರುಗಾಡದಂತೆ ನೋಡಿಕೊಳ್ಳುತ್ತಿದ್ದರು. ಕ್ಲಾಸುಗಳು ಇಲ್ಲದಿದ್ದರೆ ವಾಚನಾಲಯಕ್ಕೆ ಹೋಗುವಂತೆ ಇಲ್ಲವೇ ಜಿಮಖಾನಾ ಹಾಲ್ ಗೆ ಹೋಗುವಂತೆ ನಿರ್ದೇಶನ ನೀಡುತ್ತಿದ್ದರು.ಒಟ್ಟಿನಲ್ಲಿ ವಿದ್ಯಾರ್ಥಿಗಳು ಯಾವುದಾದರೂ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬುದು ಅವರ ಅನಿಸಿಕೆಯಾಗಿತ್ತು.ಎಷ್ಟೇ ಶಿಸ್ತು ಕಠಿಣ ನಿಯಮಗಳಿದ್ದರೂ ಕಾಲೇಜಿನಲ್ಲಿ ಸಣ್ಣಪುಟ್ಟ ಗುಂಪು ಗಲಾಟೆಗಳಾಗುವದು ಸಹಜ.ಒಮ್ಮೆ ಕಾಲೇಜಿನಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು.ಆಗ ಸಿನಿಮೀಯ ರೀತಿಯಲ್ಲಿ ಕಿಟಕಿ ತೆರೆದು ಹಾರಿಬಂದು ವಿದ್ಯಾರ್ಥಿಗಳ ಕಲಹ ತೀವ್ರ ಸ್ವರೂಪ ಪಡೆಯದಂತೆ ನೋಡಿಕೊಂಡಿದ್ದರು.ಇದು ಅವರ ಧೈರ್ಯದ ಪ್ರತೀಕವಾಗಿತ್ತು. ಅವರು ಎಂದಿಗೂ ವಿದ್ಯಾರ್ಥಿಗಳಿಗೆ ಉಗ್ರಸ್ವರೂಪದ ಶಿಕ್ಷೆ ನೀಡುತ್ತಿರಲಿಲ್ಲ. ಎಂತಹ ಅಧಿಕಪ್ರಸಂಗದ ವಿದ್ಯಾರ್ಥಿ ಇದ್ದರೂ ಅವನಿಗೆ ಪ್ರೀತಿ ಸಮಾಧಾನದಿಂದ ಬುದ್ಧಿ ಹೇಳಿ ತಿದ್ದುತ್ತಿದ್ದರು. ಅಂದು ತುಂಟತನ ಮಾಡುತ್ತಿದ್ದ ಅನೇಕ ವಿದ್ಯಾರ್ಥಿಗಳು ಎ.ಎಚ್.ನಾಯಕರ ಈ ಗುಣವನ್ನು ಇಂದು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾರೆ. ಅಧ್ಯಾಪಕರಾಗಿ ಮಾತ್ರವಲ್ಲ, ಉತ್ತಮ ಆಡಳಿತಗಾರರಾಗಿಯೂ ಪ್ರೊ.ಎ.ಎಚ್.ನಾಯಕರು ಹೆಸರು ಮಾಡಿದ್ದರು.ಕೆ.ಜಿ.ನಾಯಕರ ನಂತರ ಪ್ರಾಚಾರ್ಯರಾಗಿ ಅಧಿಕಾರ ಸ್ವೀಕರಿಸಿದ ಅವರು ಕೆ.ಜಿ. ನಾಯಕರು ನಿರ್ಮಿಸಿದ್ದ ಪ್ರಭಾವಲಯವನ್ನು ವಿಸ್ತರಿಸುವಂತೆ ಆಡಳಿತ ನಡೆಸಿದರು. ಅವರ ಅವಧಿಯಲ್ಲಿ ಕಾಲೇಜಿನ ರಜತ ಮಹೋತ್ಸವ ಸಮಾರಂಭ ತುಂಬ ವಿಜೃಂಭಣೆಯಿಂದ ನಡೆದಿತ್ತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ.ಶಿವರಾಮ ಕಾರಂತರು ಅವರ ಕಾರ್ಯಕ್ಷಮತೆ ಮತ್ತು ದಕ್ಷತೆಯನ್ನು ಹಾಡಿ ಹೊಗಳಿದ್ದರು. ಪರೋಪಕಾರಿ ಮತ್ತು ಮಾನವೀಯ ಗುಣಗಳ ಗಣಿ ಯಾಗಿದ್ದ ಅವರು ತಾವು ನೀಡಿದ ಸಹಾಯ ಸಹಕಾರವನ್ನು ಅವರು ಎಂದಿಗೂ ಯಾರಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ ಬಲಗೈ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು ಎಂಬುದು ಅವರ ನೀತಿಯಾಗಿತ್ತು.ಅನೇಕ ಬಡ ಅಸಹಾಯಕ ವಿದ್ಯಾರ್ಥಿಗಳಿಗೆ ಅವರು ನೆರವು ನೀಡುತ್ತಿದ್ದರು.ಆದರೆ ಅದನ್ನು ಎಂದೂ ಪ್ರಚಾರಕ್ಕೆ ಬಳಸಿಕೊಳ್ಳಲಿಲ್ಲ. ಅವರ ಅಗಲಿಕೆಯ ನಂತರ ಹಲವರು ಅವರಿಂದ ಪಡೆದ ಸಹಾಯವನ್ನು ಕೃತಜ್ಞತೆಯಿಂದ ಸ್ಮರಿಸಿದ್ದರು. ಪ್ರೊ.ಎ.ಎಚ್.ನಾಯಕರು ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದರನ್ನು ಸಮಗ್ರವಾಗಿ ಓದಿಕೊಂಡಿದ್ದರು. ಅವರ ತತ್ವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ಉತ್ತಮ ಮಾತುಗಾರರಾಗಿದ್ದ ಅವರ ಭಾಷೆ ಅತ್ಯಂತ ಪ್ರಬುದ್ಧವಾಗಿತ್ತು .ಕನ್ನಡ - ಇಂಗ್ಲಿಷ್ ಭಾಷೆಗಳಲ್ಲಿ ಅವರು ನಿರರ್ಗಳವಾಗಿ ಭಾಷಣ ಮಾಡುತ್ತಿದ್ದರು. ತಮ್ಮ ಸಂವಹನ ಕಲೆಯಿಂದಾಗಿಯೇ ಅವರು ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವಲ್ಲಿ, ಅವರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಸಕಲರಿಗೂ ಲೇಸನ್ನೇ ಬಯಸುವ,ಸಕಲರಲ್ಲಿಯೂ ಲೇಸನ್ನೇ ಕಾಣುವ ಗುಣ ಎ.ಎಚ್.ನಾಯಕರದಾಗಿತ್ತು.ಆದ್ದರಿಂದಲೇ ಅವರು ಕಲ್ಲಿನಲ್ಲಿಯೂ ದೇವರನ್ನು ಕಂಡು ನಮಸ್ಕರಿಸುತ್ತಿದ್ದರು. ಇದು ದೈವಿಕತೆಯನ್ನು ಮೀರಿದ ಅಧ್ಯಾತ್ಮಿಕತೆಯಾಗಿತ್ತು.ಅವರ ಈ ಸ್ವಭಾವ ಕೆಲವರಿಗೆ ಅವರ ಮೋಜಿನದಾಗಿತ್ತು.ಅದನ್ನು ದುರುಪಯೋಗಪಡಿಸಿಕೊಳ್ಳಲು ಕೆಲವರು ಪ್ರಯತ್ನಿಸುತ್ತಿದ್ದರು. ಆದರೆ ಅವರ ಸಾತ್ವಿಕ ಸ್ವಭಾವ ಅದರತ್ತ ಗಮನ ನೀಡುತ್ತಿರಲಿಲ್ಲ. ತಮ್ಮ ಕಣ್ಣೆದುರು ಏನು ನಡೆಯುತ್ತಿದೆ ಎಂಬುದನ್ನು ಮಾತ್ರ ಗಮನಿಸುತ್ತಿದ್ದ ಅವರು ಬೆನ್ನ ಹಿಂದೆ ನಡೆಯುತ್ತಿದ್ದ ಘಟನೆಗಳಿಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡುತ್ತಿರಲಿಲ್ಲ. ಇದು ಅವರಿಗೆ ಮಾತ್ರ ಸಿದ್ದಿಸಿದ ಗುಣವಾಗಿತ್ತು. ಎ.ಎಚ್ ನಾಯಕರು ತಮ್ಮ ಬದುಕಿನ ಪಯಣ ಮುಗಿಸಿ ಮೂರು ವರ್ಷಗಳು ಕಳೆದಿವೆ.ಅವರ ತಾತ್ವಿಕ ಬದ್ಧತೆ, ಕರ್ತವ್ಯ ಪ್ರಜ್ಞೆ, ಪರೋಪಕಾರ ಗುಣ, ದೈವಭಕ್ತಿಗಳು ಎಂದಿಗೂ ಎಲ್ಲರಿಗೂ ಮಾದರಿಯಾಗಿರುತ್ತವೆ. - ಶ್ರೀಧರ ಬಿ.ನಾಯಕ, ಬೇಲೇಕೇರಿ.

ಸೋಮವಾರ, ಜೂನ್ 28, 2021

ತ್ರಿಪದಿ

ತ್ರಿಪದಿಯು ಅಚ್ಚಗನ್ನಡ ಛಂದೋ ಮಟ್ಡು. ಕನ್ನಡ ಜನಪದ ಗೀತೆಗಳ ಬಹುಭಾಗ ತ್ರಿಪದಿಯಲ್ಲಿವೆ. ಆದ್ದರಿಂದ ತ್ರಿಪದಿಯನ್ನು ಕನ್ನಡ ವೃತ್ತಗಳ ಗಾಯತ್ರಿ ಎಂದು ಕರೆಯಲಾಗುತ್ತದೆ. ಶಾಸನ ಸಾಹಿತ್ಯಗಳಲ್ಲಿಯೂ ತ್ರಿಪದಿ ಸ್ಥಾನಪಡೆದಿದೆ. ತ್ರಿಪದಿಯಷ್ಟು ಸುದೀರ್ಘವಾದ ಇತಿಹಾಸವನ್ನು ಹೊಂದಿದ ಇನ್ನೊಂದು ಸಾಹಿತ್ಯ ರೂಪ ಕನ್ನಡದಲ್ಲಿಲ್ಲ . ತ್ರಿಪದಿಯ ಲಕ್ಷಣ ನಾಗವರ್ಮ ಜಯಕೀರ್ತಿ ಸರ್ವಜ್ಞ ಸೋಮೇಶ್ವರ ಮುಂತಾದವರು ತಮ್ಮ ಚಂದು ಗ್ರಂಥಗಳಲ್ಲಿ ತ್ರಿಪದಿಯ ಲಕ್ಷಣವನ್ನು ಪ್ರಸ್ತಾಪಿಸಿದ್ದಾರೆ ಹೆಸರೇ ಸೂಚಿಸುವಂತೆ ತಿರುಪತಿ ಮೂರು ಸಾಲುಗಳನ್ನು ಒಳಗೊಂಡಿದೆ ಸರ್ವಜ್ಞ ಸೋಮೇಶ್ವರನ ಮಾನಸೋಲ್ಲಾಸ ದಲ್ಲಿ ತಿರುಪತಿಯನ್ನು ನಾಲ್ಕು ಸಾಲುಗಳನ್ನು ಪರಿಗಣಿಸಿದ್ದಾರೆ ನಾಗವರ್ಮ ಹೇಳಿದ ತ್ರಿಪದಿಯ ಲಕ್ಷಣ ಹೀಗಿದೆ. u u. u . _ . u u. u._. uu.u._._. u. _ ಬಿಸರುಹೋ|ದ್ಭವಗಣಂ| ರಸದಶ|ಸ್ಥಾನದೊಳ್| uu.u.u. _. u. uu. u._. u u. u.u. ಬಿಸರುಹ| ನೇತ್ರ | ಗಣಮೆಬl ರ್ಕುಳಿದವು| u u.u.u. _. _. u u.u.u. ಬಿಸರುಹ| ನೇತ್ರೇ| ತ್ರಿಪದಿಗೆ ಈ ಪದ್ಯ ತ್ರಿಪದಿಯ ಲಕ್ಷಣ ಹೇಳುವುದರ ಜೊತೆಗೆ ತ್ರಿಪದಿಯ ಲಕ್ಷ್ಯವೂ ಆಗಿದೆ .ತ್ರಿಪದಿಯ ರಸ ಅಂದರೆ ಆರನೆಯ ಸ್ಥಾನದಲ್ಲಿ, ಮತ್ತು ದಶ ಅಂದರೆ ಹತ್ತನೆಯ ಸ್ಥಾನದಲ್ಲಿ ಬ್ರಹ್ಮಗಣಗಳು ಬರುತ್ತವೆ. ಉಳಿದ ಗಣಗಳು ವಿಷ್ಣುಗಣಗಳಾಗಿರುತ್ತವೆ. ನಾಗವರ್ಮ ಚಿತ್ರ ಮತ್ತು ವಿಚಿತ್ರ ಎಂಬ ತ್ರಿಪದಿಯ ಎರಡು ಪ್ರಭೇದಗಳನ್ನು ಹೇಳುತ್ತಾನೆ .ಚಿತ್ರ ತ್ರಿಪದಿಯು ಸಾಮಾನ್ಯ ತ್ರಿಪದಿಯಂತೆ ಇರುತ್ತದೆ. ಆದರೆ ವಿನ್ಯಾಸದ ದೃಷ್ಟಿಯಿಂದ ನಾಲ್ಕು ಪಾದಗಳು ಆಗುತ್ತವೆ. ವಿಚಿತ್ರ ತ್ರಿಪದಿಯು ಸಾಮಾನ್ಯ ತ್ರಿಪದಿಯಂತೆ ಇದ್ದರೂ ಕೊನೆಯ ಗಣ ರುದ್ರಗಣವಾಗಿರುತ್ತದೆ. ಒಟ್ಟಿನಲ್ಲಿ ಲಕ್ಷಣವನ್ನು ಹೀಗೆ ಸಂಗ್ರಹಿಸಬಹುದು: 1) ತ್ರಿಪದಿಯಲ್ಲಿ 3 ಸಾಲುಗಳಿರುತ್ತವೆ. 2) ಒಟ್ಟು11 ಗಣಗಳಿರುತ್ತವೆ. ಆರು ಮತ್ತು ಹತ್ತನೆಯ ಗಣಗಳು ಬ್ರಹ್ಮ ಗಣಗಳು, ಉಳಿದ ಗಣಗಳು ವಿಷ್ಣುಗಣಗಳು. 3) ಲಕ್ಷಣವನ್ನು ಗಮನಿಸಿದರೆ ಏಳು ಮತ್ತು ಹನ್ನೊಂದನೆಯ ಗಣಗಳು ಎರಡು ಲಘು ಗಳಿಂದ ಪ್ರಾರಂಭವಾಗುತ್ತವೆ. 4) ತಿರುಪತಿಯಲ್ಲಿ ಚಿತ್ರ ಮತ್ತು ವಿಚಿತ್ರ ಎಂಬ ಎರಡು ಪ್ರಭೇದಗಳನ್ನು ಗುರುತಿಸಲಾಗುತ್ತದೆ. 5)ತ್ರಿಪದಿಯ ಒಟ್ಟು ಗಣ ವಿನ್ಯಾಸ ಹೀಗೆ ಗುರುತಿಸಬಹುದು: ವಿಷ್ಣು| ವಿಷ್ಣು |ವಿಷ್ಣು| ವಿಷ್ಣು | ವಿಷ್ಣು |ಬ್ರಹ್ಮ| ವಿಷ್ಣು | ವಿಷ್ಣು |ವಿಷ್ಣು| ಬ್ರಹ್ಮ|ವಿಷ್ಣು| ತ್ರಿಪದಿ ಒಂದು ಹಾಡುಗಬ್ಬವಾಗಿರುವುದು. ಹಾಡುವಾಗ ಮೊದಲ ಎರಡು ಪಾದಗಳಲ್ಲಿನ 7 ಗಣಗಳವರೆಗೆ ಒಂದು ಘಟಕವಾಗಿ ಹಾಡಿ ನಂತರ ಐದನೆಯ ಗಣದಿಂದ ಪ್ರಾರಂಭಿಸಿ ಮತ್ತೆ ಹಾಡಬೇಕು. ಇದರಿಂದ ತ್ರಿಪದಿ ನಾಲ್ಕು ಸಾಲುಗಳು ಎನ್ನಿಸುತ್ತದೆ. ತ್ರಿಪದಿ ಅಂಶಗಣ ಛಂದಸ್ಸು ಆಗಿರುವುದರಿಂದ ಅಲ್ಲಿಗೆ ವಿಕಲ್ಪತೆಗೆ ಅವಕಾಶವಿದೆ. ಅಂದರೆ ವಿಷ್ಣು ಗಣ ಸ್ಥಾನದಲ್ಲಿ ಬ್ರಹ್ಮ ಗಣಗಳಾಗಲಿ, ರುದ್ರ ಗಣಗಳಾಗಲಿ ಬರ ಬಹುದು ಆದರೆ ಆರು ಮತ್ತು 10ನೆಯ ಗಣ ಸ್ಥಾನದಲ್ಲಿ ವಿಕಲ್ಪತೆಗೆ ಅವಕಾಶವಿಲ್ಲ. ಅಲ್ಲಿ ಬ್ರಹ್ಮಗಣ ಬರಲೇಬೇಕು. ಕನ್ನಡದಲ್ಲಿ ಮೊಟ್ಟಮೊದಲ ತ್ರಿಪದಿಯ ಲಿಖಿತ ದಾಖಲೆಗಳು ಕ್ರಿಸ್ತಶಕ 700 ರ ಬಾದಾಮಿ ಶಾಸನದಲ್ಲಿ ದೊರಕುತ್ತದೆ. ಐತಿಹಾಸಿಕ ಮತ್ತು ಸಾಹಿತ್ಯಕ ದೃಷ್ಟಿಯಿಂದ ಮಹತ್ವಪೂರ್ಣವಾದ ತ್ರಿಪದಿ ಇದಾಗಿದೆ. ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ ಭಾದಿಪ್ಪ ಕಲಿಗೆ ಕಲಿಯುಗ ವಿಪರೀತನ್ ಮಾಧವನೀತನ್ ಪೆರನಲ್ಲ || ಈ ತ್ರಿಪದಿ ನಾಗವರ್ಮ ಹೇಳಿದ ಲಕ್ಷಣಕ್ಕೆ ಅನುಗುಣವಾಗಿದೆ ಇಲ್ಲಿ ಮೂರನೆಯ ಗಣವನ್ನು ವಿಷ್ಣುಗಣವನ್ನಾಗಿ ವಿಭಜಿಸಿದರೆ ಒಳ ಪ್ರಾಸಕ್ಕೆ ಭಂಗ ಬರುವುದರಿಂದ ಅದನ್ನು ಬ್ರಹ್ಮಗಣವನ್ನಾಗಿ ಮಾಡಿ ಮೂರನೆಯ ಗಣವನ್ನು ರುದ್ರಗಣವನ್ನಾಗಿ ಪರಿವರ್ತಿಸಬಹುದು. ಸೊರಬ,ಹುಂಚ, ಹೇಮಾವತಿ, ನೀಲಗುಂದ, ಮತ್ತು ಶಿಕಾರಿಪುರದ ಶಾಸನಗಳಲ್ಲಿ ತ್ರಿಪದಿಗಳು ದೊರಕುತ್ತವೆ. ಪಂಪನ ನಾಗವರ್ಮ ಚಾವುಂಡರಾಯ ನಾಗಚಂದ್ರ ಮುಂತಾದ ಕವಿಗಳು ತಮ್ಮ ಕಾವ್ಯಗಳಲ್ಲಿ ಬಳಸಿದ್ದಾರೆ. ಮಾತ್ರಗಣಾನ್ವಿತ ತ್ರಿಪದಿಗಳು : ಅಂಶಗಣಾನ್ವಿತವಾದ ತ್ರಿಪದಿಗಳು 12ನೆಯ ಶತಮಾನದ ನಂತರ ಮಾತ್ರಗಣವಾಗಿ ಪರಿವರ್ತಿತವಾದದ್ದನ್ನು ವಿದ್ವಾಂಸರು ಗುರುತಿಸುತ್ತಾರೆ. ಮಾತ್ರಾ ಗಣಾನ್ವಿತ ತ್ರಿಪದಿಗಳಲ್ಲಿ ವಿಷ್ಣು ಗಣದ ಬದಲು ಅದೇ ವ್ಯಾಪ್ತಿಯ ಐದು ಮಾತ್ರೆಯ ಗಣಗಳು, ಬ್ರಹ್ಮ ಗಣದ ಬದಲು 3-4 ಮಾತ್ರೆ ಗಣಗಳು ಬರುತ್ತವೆ. ಸರ್ವಜ್ಞ ಈ ಪುಟ್ಟ ಛಂದಸ್ಸನ್ನು ಸಮರ್ಥವಾಗಿ ತನ್ನ ಕಾವ್ಯ ಮಾಧ್ಯಮವನ್ನಾಗಿ ಬಳಸಿಕೊಂಡಿದ್ದಾನೆ.ಅವನ ತ್ರಿಪದಿಗಳು ಅಂಶಗಣ ಘಟಿತವಾಗಿರದೆ ಮಾತ್ರಗಣ ಘಟಿತವಾಗಿವೆ. ಸಾಲವನು ಕೊಂಬಾಗ ಹಾಲೋಗರುಂಡಂತೆ ಸಾಲಿಗನು ಬಂದು ಎಳೆವಾಗ-ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ ಇಲ್ಲಿ ಆರು ಮತ್ತು ಹತ್ತನೆಯ ಸ್ಥಾನದಲ್ಲಿ ಮೂರು ಮಾತ್ರೆಯ ಗಣಗಳು ಬರುತ್ತವೆ. ಉಳಿದಂತೆ ಐದು ಮಾತ್ರೆಯ ಗಣಗಳಿವೆ. ಜನಪದ ಕಾವ್ಯಗಳಲ್ಲಿ ತನ್ನ ಮುದ್ರೆಯನ್ನು ಸ್ಪಷ್ಟವಾಗಿ ಒತ್ತಿದ ತ್ರಿಪದಿಯನ್ನು ಹೊಸಗನ್ನಡದಲ್ಲಿ ಮಾಸ್ತಿ, ಬೇಂದ್ರೆ ,ಪುತಿನ,ಎಸ್.ವಿ. ಪರಮೇಶ್ವರಭಟ್ಟರು ಸಮರ್ಥವಾಗಿ ಬಳಸಿದ್ದಾರೆ.ಶ್ರೀಮತಿ ಜಯದೇವಿತಾಯಿ ಲಿಗಾಡೆ ಎಂಬ ಕವಯಿತ್ರಿ ತ್ರಿಪದಿಯನ್ನು ಬಳಸಿಕೊಂಡು ಶ್ರೀ ಸಿದ್ದರಾಮೇಶ್ವರ ಪುರಾಣ ಎಂಬ ಮಹಾಕಾವ್ಯವನ್ನು ರಚಿಸಿದ್ದಾರೆ. ಅಲ್ಲಿ ಒಟ್ಟು 4100 ತ್ರಿಪದಿಗಳಿವೆ.

ಬುಧವಾರ, ಜೂನ್ 23, 2021

ರಗಳೆಯ ಲಕ್ಷಣ

ರಗಳೆ ರಗಳೆ ಕನ್ನಡದ ವಿಶಿಷ್ಟ ಸಾಹಿತ್ಯ ಪ್ರಕಾರ. ಹನ್ನೆರಡನೇ ಶತಮಾನದ ಬದಲಾವಣೆಯ ಗಾಳಿ ಸಾಹಿತ್ಯ ರೂಪದಲ್ಲಿ ತನ್ನ ಪ್ರಭಾವವನ್ನು ಬೀರಿತು. ಹೀಗಾಗಿ ಚಂಪೂ ರೂಪದಲ್ಲಿದ್ದ ಸಾಹಿತ್ಯ, ವಚನ ಮತ್ತಿತರ ರೂಪಗಳಲ್ಲಿ ಅಭಿವ್ಯಕ್ತವಾಗತೊಡಗಿತು. ಜನರ ಆಡುಮಾತಿನ ಲಯವನ್ನು ಅನುಸರಿಸಿ ಸಾಹಿತ್ಯ ರೂಪಗಳು ಹೊಸಹುಟ್ಟು ಪಡೆದವು. ಇಂತಹ ಸಂದರ್ಭದಲ್ಲಿ ರೂಪಗೊಂಡ ವಿಶಿಷ್ಡ ಸಾಹಿತ್ಯ ಪ್ರಕಾರ ರಗಳೆ. ಈಗ ತಿಳಿದಿರುವ ಮಟ್ಟಿಗೆ ರಗಳೆ ಅಥವಾ ಅದರ ಸಮಾನಾರ್ಥಕ ಪದ ರಗಟಾ ಎಂಬ ಶಬ್ದವನ್ನು ಮೊಟ್ಟಮೊದಲು ಬಳಸಿದವನು ನಾಗವರ್ಮ. ಜಯಕೀರ್ತಿ, ಗುಣಚಂದ್ರ ಮೊದಲಾದವರೂ ಸಹ ತಮ್ಮ ಛಂಧೋ ಗ್ರಂಥಗಳಲ್ಲಿ ರಗಳೆ ಎಂಬ ಶಬ್ದವನ್ನು ಬಳಸಿದ್ದಾರೆ.ಪ್ರಾಕೃತದಲ್ಲಿ ರಗಡಾ ಧ್ರುವಕ ಎಂಬ ಸಮಚತುಷ್ಪದಿ ವೃತ್ತವಿದೆ. ಅದು ಕನ್ನಡದಲ್ಲಿ ರಗಳೆ ಅಥವಾ ರಘಟಾ ಎಂಬ ಮಾತುಗಳಿಗೆ ಪ್ರೇರಣೆ ನೀಡಿರಬೇಕು. ರಗಳೆಯ ಮೂಲ ರಗಳೆಯ ಮೂಲವನ್ನು ಕೆಲವರು ಸಂಸ್ಕೃತದಲ್ಲಿಯೂ ಮತ್ತೆ ಕೆಲವರು ಪ್ರಾಕೃತದಲ್ಲಿ ಯೂ ಇನ್ನು ಕೆಲವರು ಕನ್ನಡದಲ್ಲಿಯೂ ಗುರುತಿಸಲು ಪ್ರಯತ್ನಿಸುತ್ತಾರೆ. ಕೆಲವು ಕನ್ನಡ ಕಾವ್ಯಗಳಲ್ಲಿ ರಗಳೆಯ ಪದ್ಯಗಳಿಗೆ ಸಂಸ್ಕೃತದ ಪದ್ಧತಿ ಎಂಬ ಪದದ ಪ್ರಾಕೃತ ರೂಪವಾದ ಪದ್ಧಳಿ ಎಂಬ ಹೆಸರು ಪ್ರಯೋಗಿಸಲಾಗಿದೆ‌ ಈ ಕಾರಣದಿಂದ ರಗಳೆಯ ಮೂಲ ಪ್ರಾಕೃತ ಇಲ್ಲವೆ ಅಪಭ್ರಂಶ ಭಾಷೆಯಲ್ಲಿದೆ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ರಗಳೆಯ ಲಕ್ಷಣ ಕನ್ನಡದಲ್ಲಿ ಮೊಟ್ಟ ಮೊದಲು ರಗಳೆಯ ಲಕ್ಷಣವನ್ನು ಪ್ರಸ್ತಾಪಿಸಿದನು ನಾಗವರ್ಮ. ಜಯಕೀರ್ತಿಯೂ ತನ್ನ "ಛಂದೋನುಶಾಸನ"ದಲ್ಲಿ ರಗಳೆಯ ಲಕ್ಷಣವನ್ನು ಹೇಳಿದ್ದಾನೆ. ಗಣನಿಯಮ ವಿಪರ್ಯಾಸದೊ ಳೆಣೆವಡೆದೊಳ್ಪೆಸೆಯೆ ಮಾತ್ರ ಸಮನಾಗೆ ಗುಣಾ ಗ್ರಣಿಯ ಮತದಿಂದ ತಾಳದ ಗಣನೆಗೊಡಂಬಟ್ಟೊಡದುವೆ ರಘಟಾ ಬಂಧಂ ರಗಳೆಯ ಲಕ್ಷಣವನ್ನು ಒಟ್ಟಾರೆಯಾಗಿ ಹೀಗೆ ಸಂಗ್ರಹಿಸಬಹುದು: ಪ್ರತಿ ಪಾದದಲ್ಲಿ ಗಣ ನಿಯಮದಲ್ಲಿ ವ್ಯತ್ಯಾಸವಿರುತ್ತದೆ. ಆದರೆ ಒಟ್ಟು ಮಾತ್ರೆಗಳ ಸಂಖ್ಯೆ ಸಮಾನವಾಗಿರುತ್ತದೆ. ಎರಡೆರಡು ಪಾದಗಳು ಒಂದೊಂದು ಜೋಡಿಯಾಗಿರುತ್ತವೆ.ಗಣಗಳ ನಡೆ ತಾಳದ ಲೆಕ್ಕಕ್ಕೆ ತಪ್ಪದ ಹಾಗೆ ಇರುತ್ತದೆ. ರಗಳೆ ನಿರ್ದಿಷ್ಟವಾದ ಪಾದಗಳನ್ನು ಹೊಂದಿಲ್ಲ. ಈ ಪದ್ಯವನ್ನು ಕೇಳಿದರೆ ಕಿವಿಗೆ ಹಿತವಾಗಿರಬೇಕು. ರಗಳೆಯ ಇತಿಹಾಸ: ಕನ್ನಡದಲ್ಲಿ ದೊರೆತ ಮೊಟ್ಟಮೊದಲ ಕೃತಿ ಕವಿರಾಜಮಾರ್ಗದಲ್ಲಿ ರಗಳೆ ಬಳಕೆಯಾಗಲಿಲ್ಲ. ಆದರೆ ಆದಿಕವಿ ಪಂಪನ ಆದಿಪುರಾಣದಲ್ಲಿ ಎರಡು ರಗಳೆಗಳನ್ನು ಕಾಣುತ್ತೇವೆ. ಸ್ಫುರಿತೇಂ। ದ್ರನೀಲ| ಮಣಿಖಚಿ| ತ ಭೂಮಿ ಚೆಲುವಿಂ| ಗಿದು ನೆ| ಟ್ಟನೆ ಜ| ನ್ಮ ಭೂಮಿ ಹೀಗೆ ಸಾಗುವ 32 ಪಾದಗಳು ಇಲ್ಲಿವೆ. ಇಲ್ಲಿ ಪ್ರತಿಯೊಂದು ಚರಣಕ್ಕೆ 4ಮಾತ್ರೆಯ 4 ಗಣಗಳಿವೆ. ವಿಶಿಷ್ಟವಾದ ಅಂತ್ಯಪ್ರಾಸವಿದೆ.ಈ ರಗಳೆಗೆ ಪಂಪ ಯಾವುದೇ ಹೆಸರು ಕೊಟ್ಟಿಲ್ಲ. ವಿಕ್ರಮಾರ್ಜುನ ವಿಜಯದಲ್ಲಿಯೂ ಮೂರು ರಗಳೆಗಳಿವೆ.ಪೊನ್ನ ತನ್ನ ಶಾಂತಿ ಪುರಾಣದಲ್ಲಿ ಒಂದು ರಗಳೆ ಬಳಸಿದ್ದು ಅದನ್ನು ತ್ವರಿತ ರಗಳೆ ಎಂದು ಕರೆದಿದ್ದಾನೆ.ರನ್ನ,ನಾಗವರ್ಮ, ದುರ್ಗಸಿಂಹ ಮುಂತಾದ ಕವಿಗಳು ರಗಳೆಗಳನ್ನು ಬಳಸಿದ್ದಾರೆ ಆದರೆ ವಚನಕಾರರ ನಂತರ ಕಾವ್ಯರಚನೆಗೆ ತೊಡಗಿದ ಹರಿಹರ ರಗಳೆಯನ್ನು ತನ್ನ ಸಂಪೂರ್ಣ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಮಾಡಿಕೊಂಡು ನೂರಕ್ಕೂ ಹೆಚ್ಚು ರಗಳೆಗಳನ್ನು ಬರೆದು ರಗಳೆಯ ಕವಿ ಎನಿಸಿಕೊಂಡ. ರಗಳೆಗಳನ್ನು ವೈವಿಧ್ಯಮಯವಾಗಿ ಹರಿಹರನಿಗೆ ಸಲ್ಲುತ್ತದೆ ರಗಳೆಯಲ್ಲಿ ಮಂದಾನಿಲ,ಲಲಿತ ಮತ್ತು ಉತ್ಸಾಹ ಗಳೆಂಬ ಮೂರು ಪ್ರಕಾರಗಳನ್ನು ಗುರುತಿಸಲಾಗುತ್ತದೆ. (1) ಮಂದಾನಿಲರಗಳೆಯ ಲಕ್ಷಣ: ಪ್ರತಿಪಾದದಲ್ಲಿ ನಾಲ್ಕು ಮಾತ್ರೆಯ ನಾಲ್ಕು ಗಣಗಳು ಒಟ್ಟು ಮಾತ್ರೆಯ ಸಂಖ್ಯೆ ಹದಿನಾರು ಇದ್ದು ಎರಡೆರಡು ಸಾಲುಗಳಿಗೆ ಪ್ರಾಸನಿಯಮವಿರುವ ಪದ್ಯಜಾತಿಗೆ ಮಂದಾನಿಲರಗಳೆಯೆನ್ನುವರು. ಅಂತ್ಯಪ್ರಾಸವೂ ಕೆಲವು ಕಡೆ ಇರುವುದುಂಟು.ಹರಿಹರನ ಕುಂಬಾರ ಗುಂಡಯ್ಯನ ರಗಳೆ ಮಂದಾನಿಲ ರಗಳೆಗೆ ಉತ್ತಮ ಉದಾಹರಣೆ. ದಶಭುಜ|ಮಂ ದಿಗು|ತಟದೊಳ್| ಪಸರಿಸೆ ಎಸೆವ ಕ|ರಂಗಳ| ನೆತ್ತಲ್ |ನೇಮಿಸೆ ಒಂದು ಪ|ದಂ ಪಾ|ತಾಳವ|ನೊತ್ತಲ್| ಒಂದು ಪ|ದಂ ಬ್ರ|ಹ್ಮಾಂಡವ|ನೆತ್ತಲು ಕುಂಬಾರ ಗುಂಡಯ್ಯನ ರಗಳೆ -ಹರಿಹರ ಈ ಮಂದಾನಿಲರಗಳೆಯಲ್ಲಿ ಇನ್ನೂ ಒಂದು ವಿಧವನ್ನು ಗುರುತಿಸಲಾಗುತ್ತದೆ. ಇಲ್ಲಿ ಪ್ರತಿಯೊಂದು ಪಾದದಲ್ಲೂ ಮೂರು ಮತ್ತು ಐದು ಮಾತ್ರೆಯ ಎರಡೆರಡು ಗಣಗಳು ಒಟ್ಟು ೧೬ ಮಾತ್ರೆಗಳು ಇರುತ್ತವೆ.ಹೀಗೆ ಮೂರಾದ ಮೇಲೆ ಐದು ಮಾತ್ರೆಯಗಣದಿಂದ ಕೂಡಿದ, ಒಟ್ಟು ನಾಲ್ಕು ಮಾತ್ರಾಗಣದಿಂದ ಕೂಡಿ ಎರಡೆರಡು ಸಾಲಿನಲ್ಲಿ ಆದಿಪ್ರಾಸ, ಅಂತ್ಯ ಪ್ರಾಸವಿರುವ ಪದ್ಯವು ಮಂದಾನಿಲರಗಳೆಯಲ್ಲಿ ಎರಡನೆಯ ವಿಧವಾಗಿದೆ. ನಂದ | ನಂಗಳೊಳ್| ಸುಳಿವ | ಬಿರಯಿಯಿಂ ಕಂಪು | ಕಣ್ಮಲೆಯ| ಪೂತ | ಸುರಯಿಯಿಂ - ಸುತ್ತ | ಲುಂ ಪರಿವ| ಜರಿ ಪೊ|ನಂಗಳ ಎತ್ತ|ಲುಂ ನಲಿವ| ಪೊಸ ನ|ವಿಲ್ಗಳಿಂ ‌ -ಪಂಪ ಭಾರತ (2) ಲಲಿತರಗಳೆಯ ಲಕ್ಷಣ: ಲಲಿತ ರಗಳೆಯಲ್ಲಿ ಇಷ್ಟೇ ಸಾಲುಗಳು ಇರಬೇಕೆಂಬ ನಿಯಮವಿಲ್ಲ.ಆದರೆ ಪ್ರತಿಯೊಂದು ಪಾದದಲ್ಲೂ ಐದೈದು ಮಾತ್ರೆಯ ನಾಲ್ಕು ಗಣಗಳಿದ್ದು,ಒಟ್ಟು ಮಾತ್ರೆಗಳ ಸಂಖ್ಯೆ ಇಪ್ಪತ್ತು ಆಗಿರಬೇಕು.ಎರಡೆರಡು ಸಾಲುಗಳಲ್ಲಿ ಆದಿಪ್ರಾಸ ನಿಯಮವನ್ನು ಪಾಲಿಸಬೇಕು. ಅಂತ್ಯ ಪ್ರಾಸದ ನಿಯಮವೂ ಎರಡೆರಡು ಸಾಲುಗಳಿಗೆ ಇರಬಹುದು.ಕೆಲವು ಕಡೆ ಆದಿಪ್ರಾಸವಿಲ್ಲದೆ ಕೇವಲ ಅಂತ್ಯ ಪ್ರಾಸವೂ ಇರಬಹುದು.ಹರಿಹರನ ಇಳೆಯಾಂಡಗುಡಿಮಾರರ ರಗಳೆಯು ಲಲಿತ ರಗಳೆಗೆ ಉದಾಹರಣೆಯಾಗಿದೆ. ಇಂತುಕೊಡು|ತಿರೆ ಮಿಕ್ಕು|ದಂತೊಂದು|ಕೋಲ್ನೆಲಂ| ಸಂತತಂ| ಶಿವಭಕ್ತಿ| ಬೀಜವಿ|ಕ್ಕುವ ನೆಲಂ| ಆನೆಲದೊ|ಳುಳ್ಳುದೊ|ಮ್ಮನ ಬೀಜ|ವಂ ತಳಿದು| ಏನಾದು|ದುಂ ಕೊಂಡು|ಬಂದು ಹ|ರ್ಷಂದಳೆದು -ಇಳೆಯಾಂಡ ಗುಡಿಮಾರರ ರಗಳೆ-ಹರಿಹರ ಉತ್ಸಾಹ ರಗಳೆ : ಉತ್ಸಾಹ ರಗಳೆಯಲ್ಲಿ ಸಾಮಾನ್ಯವಾಗಿ 3 ಮಾತ್ರೆಯ 8 ಗಣಗಳು ಇರುತ್ತವೆ. ಪ್ರತಿ ಪಾದದಲ್ಲಿ 24 ಮಾತ್ರೆಗಳಿರುತ್ತವೆ. ಕೆಲವರು ಉತ್ಸಾಹ ರಗಳೆ ಒಂದು ಪಾದವನ್ನು 3 ಮಾತ್ರೆಯ 4 ಗಣಗಳನ್ನಾಗಿ ಮಾಡಿ ಒಂದು ಪಾದವನ್ನು ಎರಡಾಗಿ ವಿಭಜಿಸಿತ್ತಾರೆ.ಆಗ ಪ್ರಾಸಕ್ಕೆ ಭಂಗ ಬರುತ್ತದೆ. ಹರಿಹರನ ತಿರುಕುಪ್ಪೆಯ ತೊಂಡರ ರಗಳೆ ಉತ್ಸಾಹ ರಗಳೆಗೆ ಒಂದು ಉತ್ತಮ ಉದಾಹರಣೆ. ಪಾಪ|ವೆಂಬ|ಮಲಿನ| ಮನದ| ಸೀರೆ|ಯಂ ತೆ|ರಳ್ಚಿ|ಕಟ್ಟಿ| ಕೋಪ|ವೆಂಬ|ಕತ್ತೆ|ನಿಲಲು|ಬೆನ್ನ|ಮೇಲೆ| ಮಾಣ|ದೊಟ್ಟಿ| ನಡೆದು|ಭವನ|ಭಕ್ತಿ|ರಸದ|ಹೊಳೆಯ|ತಡಿಯ|ಬಳಿಗೆ|ಬಂದು| ಮೃಡನೆ|ಶರಣೆ|ನುತ್ತೆ|ಧೈರ್ಯ|ವೆಂಬ|ಕಲ್ಲ|ಬಳಿಗೆ|ಬಂದು| -ತಿರುಕುಪ್ಪೆಯ ತೊಂಡರ ರಗಳೆ -ಹರಿಹರ ಹರಿಹರನ ರಗಳೆಗಳಲ್ಲಿ ಲಲಿತ ರಗಳೆಗೆ ಹೆಚ್ಚಿನ ಪ್ರಾಧಾನ್ಯತೆ ದೊರೆತಿದೆ. ರಗಳೆಗಳಲ್ಲಿ ಪಾದಗಳಿಗೆ ಮಿತಿ ಇಲ್ಲ. ಆದರೆ ಎರಡೆರಡು ಪಾದಗಳು ಒಂದು ಘಟಕವಾಗಿರುತ್ತವೆ. ಆದಿ-ಅಂತ್ಯ ಪ್ರಾಸಗಳು ಸರಿಯಾಗಿ ಬಳಕೆಯಾಗಬೇಕು.ಕಥನ ಕವನಗಳಿಗೆ ಇದು ಸೂಕ್ತ ಮಾಧ್ಯಮ. ಹರಿಹರನ ನಂತರ ಕೆಲವು ಕನ್ನಡ ಕವಿಗಳು ರಗಳೆಗಳನ್ನು ತಮ್ಮ ಕಾವ್ಯ ಮಾಧ್ಯಮವನ್ನಾಗಿ ಬಳಸಲು ಪ್ರಯತ್ನಿಸಿದರು. ಆದರೆ ಅವನಷ್ಟು ಯಶಸ್ವಿಯಾಗಲಿಲ್ಲ.ಹೊಸಗನ್ನಡದಲ್ಲಿ ರಗಳೆ ಸರಳ ರಗಳೆಯಾಯಿತು. ಅದನ್ನು ಮಹಾಛಂದಸ್ಸನ್ನಾಗಿ ಪರಿವರ್ತಿಸಿ ಕುವೆಂಪು ಅವರು ಶ್ರೀ ರಾಮಾಯಣ ದರ್ಶನಂ ಎಂಬ ಮಹಾಕಾವ್ಯವನ್ನು ರಚಿಸಿದರು.