ಶನಿವಾರ, ನವೆಂಬರ್ 28, 2015

ಹೃದಯವಿಲ್ಲದ ಸರಕುಗಳು
-------------------------------------
ಹಸಿದ ಹೊಟ್ಟೆಗೆ ಅನ್ನ ಹುಡುಕಿ
ಭಿಕ್ಷಕ್ಕೆ ತೆರಳಿದರೆ
ಯಾರ ಮನೆಯಲ್ಲಿಯೂ
ಒಲೆ ಉರಿಯುತ್ತಿಲ್ಲ!!
ಫಿಜ್ಜಾ-ಬರ್ಗರ್ ಗೆ ಆರ್ಡರ್ ಕೊಟ್ಟು
ಬರುವಿಕೆಗಾಗಿ ಕಾಯುತ್ತಿದ್ದಾರೆ.!!
ಬಾಯಾರಿ ನೀರಿಗಾಗಿ
ಕೆರೆ-ಹಳ್ಳಗಳನ್ನು ಹುಡುಕಿಹೊರಟರೆ
ಅಲ್ಲೆಲ್ಲ ತಲೆ ಎತ್ತಿವೆ
ಭವ್ಯ ಮಹಲುಗಳು,ಅಪಾರ್ಟಮೆಂಟ್ ಗಳು!!
ಬಾಟಲಿಯಲ್ಲಿ ಅವಿತ ನೀರು
ಮಾರಾಟಕ್ಕಿದೆ.
ನಿದ್ರಿಸಲೆಂದು ಹಾಳು ದೇಗುಲ ಹುಡುಕಿಹೊರಟರೆ
ದೇಗುಲಗಳೆಲ್ಲ ನವೀಕರಣಗೊಂಡಿವೆ.
ಕಾವಲಿಗೆ ಸೆಕ್ಯೂಟರಿ ಗಾರ್ಡ ನಿಂತಿದ್ದಾರೆ!!
“ಅನುಮತಿ ಇದ್ದವರಿಗೆ ಮಾತ್ರ ಪ್ರವೇಶ”
ಎಂಬ ಬೋರ್ಡು ನೇತು ಬಿದ್ದಿದೆ.
ಆತ್ಮಸಂಗಾತಿಯನ್ನು ಅರಸಿ ಹೊರಟರೆ
ಹಸಿಮಾಂಸದ ದೇಹವನ್ನು
ಹರಿದು ಹಂಚಿ ತಿನ್ನಲು
ಸಂಚು ಹೂಡಿವೆ ಆತ್ಮವಿಲ್ಲದ
ವಿಕೃತ ಮನಸ್ಸುಗಳು.
ಯಾರಿದ್ದರೇನಂತೆ?ಏನಿದ್ದರೇನಂತೆ?
ಎಲ್ಲ ಹೃದಯವಿಲ್ಲದ ಸರಕುಗಳು!!?
                                                                                       --ಶ್ರೀಧರ ನಾಯಕ,ಬೇಲೇಕೇರಿ


ಕಾಮಧೇನು
-----------------


ಸುತ್ತಲೂ ಕವಿದಿರಲು
ಅಜ್ಞಾನದ ಕತ್ತಲು
ಎಂದೂ ಆರದ ಅರಿವಿನ
ದೀಪ ಹೊತ್ತಿಸಿದೆ ನೀನು!
ಸ್ವಾಭಿಮಾನದ ಬೆಳಕು
ದಮನಿತರಲ್ಲಿ ಮೂಡಿಸಿ
ಅವಕಾಶಗಳ ದಿಕ್ಕು ನೀ ತೋರಿದೆ.
ಅನ್ಯಾಯ-ಅವಮಾನಗಳ
ಕುಲುಮೆಯಲಿ ಬೆಂದು
ದುಃಖ-ದುಮ್ಮಾನಗಳ
ಸುತ್ತಿಗೆಯೇಟು ತಿಂದು
‘ಭೀಮ’ಕಾಯದ ಪುತ್ಥಳಿಯಾದೆ.
ಭಾಷೆ-ಗಡಿಗಳ ದಾಟಿ
ರಾಶಿ ಕೋಶಗಳನೋದಿ
ಜ್ಞಾನಶಿಖರದ ತುತ್ತತುದಿಯೇರಿ
ಹಾರಿಸಿದೆ ವಿಚಾರಕ್ರಾಂತಿಯಧ್ವಜವ.
‘ಇಲ್ಲಿತ್ತು ಶೋಷಣೆ ಅಲ್ಲಿತ್ತು ದಾಸ್ಯ’
ಮೊಳಗಿಸಿದೆ ನೀನು ಹೋರಾಟದ ಘೋಷಣೆ.
‘ಸ್ವಾತಂತ್ರ-ಸಮತೆ ಜೊತೆಗೂಡಬೇಕು
ಬಿಡುಗಡೆಯ ಕನಸು ನನಸಾಗಬೇಕು’
ದಲಿತನಾಯಕ ನೀನು ರಾಷ್ಟ್ರನಾಯಕನಾದೆ;
ಸಮತ್ವವ ಸಾರುವ ರಾಜ್ಯಾಂಗ ರೂಪಿಸಿದೆ.
ಆಧುನಿಕ ಮನುವೆಂದು
ಕರೆಯುವರು ನಿನ್ನ
ಆದರೆ ತರತಮವ ಸೃಷ್ಠಿಸಿದ
ಮನುವಲ್ಲ ನೀನು
ಸಮಾನತೆಯ ಅಮೃತ ಕರೆದ ಕಾಮಧೇನು!

                                                                     - -  ಶ್ರೀಧರ ನಾಯಕ

ಶುಕ್ರವಾರ, ನವೆಂಬರ್ 27, 2015

                                                                             ಡಾ.ಕಲಬುರ್ಗಿಯವರು ನನ್ನವಿದ್ಯಾಗುರುಗಳು.ಕನ್ನಡ ಅಧ್ಯಯನ ಪೀಠದಲ್ಲಿ ನಮಗವರು ಛಂದಸ್ಸು,ಗ್ರಂಥಸಂಪಾದನಾಶಾಸ್ತ್ರಮತ್ತುಸಂಶೋಧನಾಶಾಸ್ತ್ರಗಳನ್ನುಬೋಧಿಸುತ್ತಿದ್ದರು ಛಂಧಸ್ಸಿನ ಸೂತ್ರಗಳು ನನ್ನನೆನಪಿನಲ್ಲಿರಲು ಅವರ ಬೋಧನೆಯೇ ಕಾರಣ.ಆಂತರಿಕ ಮೌಲ್ಯಮಾಪನಕ್ಕಾಗಿ ನಾಲ್ಕು ಸಂಶೋಧನಾ ಲೇಖನಗಳನ್ನು ಸಿದ್ಧಪಡಿಸಬೇಕಿತ್ತು.ಆ ಸಂದರ್ಭದಲ್ಲಿ ಅವರು ನೀಡಿದ ಮಾರ್ಗದರ್ಶನ ಮರೆಯಲಾಗದು.ಇದೇ ನವೆಂಬರ 28ರಂದು ಅವರ ಜನ್ಮದಿನ.ಯಾರನ್ನೂದ್ವೇಷಿಸದ ಅವರು ಬದುಕಿದ್ದರೆ 77ವರ್ಷ ತುಂಬುತಿತ್ತು.ಅನ್ಯಾಯವಾಗಿ ಹತ್ಯೆಯಾದ ಆ ಗುರುಜೀವಕ್ಕೆ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇನೆ.ನಾನು ವಿದ್ಯಾರ್ಥಿಯಾಗಿದ್ದಾಗ ಬರೆದ ಕವನ ಒಂದು ಇಲ್ಲಿದೆ.
                       
                                                           ಡಾ.ಕಲಬುರ್ಗಿ
                                                        ----------------
ಇವನೊಬ್ಬಜಂಗಮ
ನಿಂತಲ್ಲಿ ನಿಲ್ಲದೆ,ಕುಳಿತಲ್ಲಿ ಕೂಡದೆ
ಅತ್ತಿತ್ತ ಅಲೆದಾಡಿ,
ಕತ್ತಲಲಿ ಅಡಗಿರುವ
ಸತ್ಯಕ್ಕೆ ಬೆಳಕು ಚೆಲ್ಲುವವ.
ಈತ ಕಣ್ಣು ಹಾಯಿಸಿದಲ್ಲೆಲ್ಲ
ಸಮಸ್ಯೆಯ ಸಿಕ್ಕುಗಳೇ!
ಎಲ್ಲವೂ ಕಗ್ಗಂಟು.
ಬುದ್ಧಿ-ಭಾವಗಳ ಸಮರಸದಿ
ಸಿಕ್ಕುಬಿಡಿಸಿದಾಗ
ಅಡಗಿರುವ ಸತ್ಯ ಅಸ್ತಿತ್ವ ಸಾರುವದು.
ಅಲ್ಲಿಂದ ಪ್ರಾರಂಭ ವಾದ-ವಿವಾದ
ಕೋರ್ಟು-ಕಚೇರಿಯತ್ತಲೂ ಇವನ ಪಾದ,
ಮಠ-ಮಾನ್ಯಗಳಿಂದಲೂ ಬಿರುನುಡಿಯ ವೇಧೆ.
ಆದರೂ ಕುಗ್ಗಿಲ್ಲ;
ಸ್ವಲ್ಪವೂ ತಗ್ಗಿಲ್ಲ,
ಮುಂಚಿಗಿಂತಲೂ ಈಗ ಉತ್ಸಾಹ ಅಧಿಕ
ಹಲವರಿಗೆ ಈತ ‘ಮಾರ್ಗ’ದರ್ಶಕ
‘ಜನಮೆಚ್ಚಿ ನಡಕೋಂಡರೇನಿಹುದು ಜಗದೀ
ಮನಮೆಚ್ಚಿ ನಡಕೊಂಬುದೇ ಚೆಂದವು’
ವೇದಿಕೆ ಹತ್ತಿ ನಿಂತರೆ
ಸಲಿಲವಾಗಿ ಹರಿಯುವದು ವಾಕ್ ಪ್ರವಾಹ
ಎಲ್ಲಿಯೂ ಕೊಳೆಯಿಲ್ಲ,ಕೊಸರಿಲ್ಲ.
ಬಿಳಿ-ಬಿಳಿ ನೊರೆಚೆಲ್ಲುವ ಹಾಲು ಅದೆಲ್ಲ.!
                                                                                                                                                                                           - ಶ್ರೀಧರ ಬಿ.ನಾಯಕ