ಗುರುವಾರ, ಫೆಬ್ರವರಿ 25, 2021

ರನ್ನನ ಗದಾಯುದ್ಧ.

ಕನ್ನಡ ಸಾಹಿತ್ಯದ ರತ್ನತ್ರಯರಲ್ಲಿ ಒಬ್ಬನಾದ ರನ್ನ ಕನ್ನಡದ ಶಕ್ತಿ ಕವಿ.ಅವನ ಅಜಿತನಾಥ ಪುರಾಣ ಮತ್ತು ಸಾಹಸಭೀಮವಿಜಯ ಎಂಬ ಎರಡು ಕಾವ್ಯಗಳು ಉಪಲಬ್ದವಾಗಿವೆ.ಬೆಳುಗರೆ ನಾಡಿನ ಬೆಳುಗಲಿ 500 ಪ್ರಾಂತದ ಜಂಬುಖಂಡಿ 70ರಲ್ಲಿ ಶ್ರೇಷ್ಠವಾದ ಮುದುವೊಳಲು (ಇಂದಿನ ಬಾಗಲಕೋಟ ಜಿಲ್ಲೆಯ ಮುಧೋಳ) ಎಂಬ ಊರಿನಲ್ಲಿ ಜನಿಸಿದನು ಸೌಮ್ಯ ಸಂವತ್ಸರ ಅಂದರೆ ಕ್ರಿ.ಶ.949 ರಲ್ಲಿ ಹುಟ್ಟಿದನು.ತಂದೆ ಜಿನವಲ್ಲಭೇಂದ್ರ, ತಾಯಿ ಅಬ್ಬಲಬ್ಬೆ. ಜಕ್ಕಿ ಮತ್ತು ಶಾಂತಿ ಎಂಬ ಇಬ್ಬರು ಹೆಂಡತಿಯರು.ಮಗ ರಾಯ ಮಗಳು ಅತ್ತಿಮಬ್ಬೆ. ಅಜಿತಸೇನಾಚಾರ್ಯರು ರನ್ನನ ಗುರುಗಳು. ಗಂಗ ಮಂತ್ರಿ ಚಾವುಂಡರಾಯ ಮತ್ತು ದಾನಚಿಂತಾಮಣಿ ಅತ್ತಿಮಬ್ಬೆ ಯ ಆಶ್ರಯ ಪಡೆದ ರನ್ನ, ಚಾಲುಕ್ಯ ಚಕ್ರವರ್ತಿ ತೈಲಪ ಮತ್ತು ಅವನ ಮಗ ಸತ್ಯಾಶ್ರಯ ಇರಿವಬೆಡಂಗನಲ್ಲಿ ಆಸ್ಥಾನ ಕವಿಯಾಗಿದ್ದ.ಅವನಿಗೆ ಕವಿ ಚಕ್ರವರ್ತಿ ಎಂಬ ಬಿರುದು ಇತ್ತು.ಪರಶುರಾಮ ಚರಿತೆ ಮತ್ತು ಚಕ್ರೇಶ್ವರ ಚರಿತೆ ಎಂಬ ಇನ್ನೆರಡು ಕಾವ್ಯಗಳನ್ನು ಬರೆದಿರುವುದಾಗಿ ಹೇಳಿಕೊಂಡಿದ್ದಾನೆ. ಆದರೆ ಅವು ಸಿಕ್ಕಿಲ್ಲ.ರನ್ನಕಂದ ಎಂಬ ನಿಘಂಟು ರನ್ನನ ಹೆಸರಿನಲ್ಲಿದೆ. ಸಾಹಸಭೀಮ ವಿಜಯ ರನ್ನನ ಶ್ರೇಷ್ಠ ಕಾವ್ಯ.ತನ್ನ ಆಶ್ರಯದಾತ ಸತ್ಯಾಶ್ರಯನನ್ನು ಕಥಾನಾಯಕ ಭೀಮನೊಡನೆ ಸಮೀಕರಿಸಿ ಈ ಕಾವ್ಯವನ್ನು ಬರೆದಿದ್ದಾನೆ. ಸಿಂಹಾವಲೋಕನ ಕ್ರಮದಿಂದ ಇಡೀ ಮಹಾಭಾರತದ ಕಥೆಯನ್ನು ಹೇಳುವ ತಂತ್ರವನ್ನು ಕವಿ ಇಲ್ಲಿ ಬಳಸಿದ್ದಾನೆ. ಕುರುಕ್ಷೇತ್ರದ ರಣಭೂಮಿಯಲ್ಲಿ ಸರ್ವಸ್ವವನ್ನೂ ಕಳೆದುಕೊಂಡು ಏಕಾಂಗಿಯಾದ ದುರ್ಯೋಧನ,ಭೀಷ್ಮರ ಸಲಹೆಯಂತೆ ಬಲರಾಮ, ಅಶ್ವತ್ಥಾಮ,ಕೃಪಾಚಾರ್ಯರು ಮರಳುವವರೆಗೆ ಕಾಲಯಾಪನೆ ಮಾಡುವ ಉದ್ದೇಶದಿಂದ ಅವರು ಉಪದೇಶಿಸಿದ ಜಲಮಂತ್ರ ಸಹಾಯದಿಂದ ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತುಕೊಳ್ಳುತ್ತಾನೆ. ಯುದ್ಧಭೂಮಿಯಲ್ಲಿ ದುರ್ಯೋಧನನನ್ನು ಅರಸಿ ಅವನನ್ನು ಎಲ್ಲಿಯೂ ಕಾಣದೆ ಪಾಂಡವರು ನಿರಾಶರಾಗುತ್ತಾರೆ. ದುರ್ಯೋಧನನನ್ನು ಕೊಲ್ಲಲು ತುದಿಗಾಲ ಮೇಲೆ ನಿಂತಿದ್ದ ಭೀಮ ತನ್ನ ತಾಳ್ಮೆ ಕಳೆದು ಕೊಳ್ಳುತ್ತಾನೆ. ಅವನಿಗಾಗಿ ಎಲ್ಲೆಡೆ ಹುಡುಕಾಡುತ್ತಾನೆ.ಪಾಂಡವರು ಗೂಢಚಾರರನ್ನು ಕಳುಹಿಸಿ ದುರ್ಯೋಧನನ ಇರುವನ್ನು ತಿಳಿಯಲು ಪ್ರಯತ್ನಿಸುತ್ತಾರೆ. ಆ ಸಂದರ್ಭವನ್ನು ಪ್ರಸ್ತುತ ಕಾವ್ಯ ಭಾಗದಲ್ಲಿ ಕಾಣಬಹುದು.ದುರ್ಯೋಧನನ ಕುರಿತು ಭೀಮನಿಗಿರುವ ದ್ವೇಷ,ಸೇಡು,ಆಕ್ರೋಶಗಳನ್ನು ಇಲ್ಲಿ ಕಾಣಬಹುದು. ಶಲ್ಯನ ವಧೆಯ ನಂತರ ದುರ್ಯೋಧನನನ್ನು ಕಾಣದೇ ಇದಕ್ಕೆ ಏನಾದರೂ ಕಾರಣವಿರಬೇಕು ಎಂದು ಭಾವಿಸಿದ ಧರ್ಮರಾಯ ಶ್ರೀ ಕೃಷ್ಣನೊಡನೆ ಸಮಾಲೋಚಿಸುವದನ್ನು ಕೇಳಿದ ಭೀಮಸೇನ ತುಂಬಿದ ರಾಜಸಭೆಯಲ್ಲಿ ನಾನು ಮಾಡಿದ ಪ್ರತಿಜ್ಞೆ ಹುಸಿಯಾಗುತ್ತಿದೆ.ದ್ರೌಪದಿಯ ಮುಖದ ಖಿನ್ನತೆ ಇನ್ನೂ ದೂರವಾಗಿಲ್ಲ. ನನ್ನ ತೋಳುಗಳ ಉತ್ಸಾಹ ಇನ್ನೂ ಕುಗ್ಗಿಲ್ಲ. ದುರ್ಯೋಧನ ಇನ್ನೂ ಬದುಕಿದ್ದಾನೆ. ನಾನೀಗ ಏನು ಮಾಡಲಿ? ಹೇಗೆ ಮಾಡಲಿ? ಎಂದು ಚಡಪಡಿಸಿದನು. ದುರ್ಯೋಧನನ ಎರಡು ತೊಡೆಗಳನ್ನು ತನ್ನ ಗದಾದಂಡದಿಂದ ನುಚ್ಚುನೂರು ಮಾಡಲು, ಅವನ ಬಾಹುಗಳನ್ನು ತನ್ನ ಗದೆ ಎಂಬ ಕೊಡಲಿಯಿಂದ ಕತ್ತರಿಸಲು,ಕೆಂಪು ಕಣ್ಣು ಹೊಂದಿದ ದುರ್ಯೋಧನನ ವಿಶಾಲವಾದ ಎದೆಯನ್ನು ತನ್ನ ಗದೆ ಎಂಬ ನೇಗಿಲಿನಿಂದ ಎರಡು ಭಾಗವಾಗಿ ಸೀಳಿ ಹರಗಲು,ಆ ಸರ್ಪಧ್ವಜನ ಹಣೆಯನ್ನು ತನ್ನ ಗದಾದಂಡದಿಂದ ಚಿಪ್ಪು ಚಿಪ್ಪಾಗಿ ಮಾಡಲು,ದ್ರೌಪದಿಗೆ ದ್ರೋಹ ಎಸಗಿದ ಅವನ ರತ್ನ ಖಚಿತ ಕಿರೀಟವನ್ನು ತನ್ನ ಗದೆಯ ಹೊಡೆತದಿಂದ ಉರುಳಿಸಿ, ಕಾಲಿನಿಂದ ಒದ್ದು ಮಣ್ಣಹುಡಿಯಲ್ಲಿ ಹೊರಳಿಸಲು ಭೀಮ ತವಕಿಸುತ್ತಿದ್ದನು. ಕುದಿಯುತ್ತಿರುವ ತನ್ನ ಕೋಪಾಗ್ನಿಯನ್ನುದುರ್ಯೋಧನನ ರಕ್ತ ಪ್ರವಾಹದಿಂದ ಶಮನ ಮಾಡಿಕೊಳ್ಳಲು ಸಾಧ್ಯವಾಗದೆ ಅಸಮಾಧಾನಗೊಂಡ ಭೀಮಸೇನ ತನ್ನ ಮೀಸೆಯನ್ನು ಕಡಿದು ತನ್ನ ಮಿತಿಮೀರಿದ ಶತ್ರುವಿನ ಪಟ್ಟವನ್ನು ಹಾರಿಸುವೆನೋ ದೇವತೆಗಳು ಉಂಡ ಅಮೃತವನ್ನು ಕಾರಿಸುವೆನೋ ಗಂಧರ್ವರನ್ನು ಮೇರು ಪರ್ವತದ ತುತ್ತ ತುದಿಯನ್ನು ಏರಿಸುವೆನೋ ಎಂಬ ಒತ್ತಡದಲ್ಲಿದ್ದನು.ಖಳನಾದ ದುರ್ಯೋಧನ ರಸಾತಳಕ್ಕಿಳಿದನೋ ನಾಲ್ಕು ದಿಕ್ಕಿನ ಕೋಣೆಗಳಲ್ಲಿ ಎಲ್ಲಿ ಅಡಗಿದನೋ,ಅಥವಾ ತಾಯಿ ಗಾಂಧಾರಿಯ ಬಸಿರನ್ನು ಮರಳಿ ಹೊಕ್ಕನೋ ಎಂದು ಭೀಮಸೇನ ಕಳವಳಿಸುತ್ತಾನೆ.ಹದಿನಾಲ್ಕು ಲೋಕಗಳು,ನಾಲ್ಕು ಸಮುದ್ರಗಳು,ಹತ್ತು ದಿಕ್ಕುಗಳು ಇರುವುದೊಂದೇ ಬ್ರಹ್ಮಾಂಡ ಇವನ್ನು ಬಿಟ್ಟು ಬೇರೆಲ್ಲೂ ಸ್ಥಳವಿಲ್ಲ. ಇನ್ನೆಲ್ಲಿ ಓಡಿಹೋಗುವನು,ಯಾರ ಸ್ನೇಹ ಸಂಪಾದಿಸಿ ಅಡಗಿರುವನು,ಇವನ್ನು ಬಿಟ್ಟು ಹೊರಗೆಲ್ಲಿ ಹೋಗಿ ದುರ್ಯೋಧನ ಬದುಕಬಲ್ಲನು ಎಂದು ಭೀಮಸೇನ ಚಿಂತಾಕ್ರಾಂತನಾಗುತ್ತಾನೆ.ಆದರೆ ಅಷ್ಟಕ್ಕೆ ಸುಮ್ಮನಾಗದೇ ತನ್ನನ್ನು ತಾನು ಜಾಗೃತವಾಗಿಟ್ಟುಕೊಳ್ಳಲು ಮತ್ತೊಮ್ಮೆ ಪ್ರತಿಜ್ಞೆ ಮಾಡುತ್ತಾನೆ. ನಾಲ್ಕು ದಿಗಂತಗಳನ್ನು ಹೊಂದಿರುವ ಭೂಮಿಯೇ ಕೇಳು,ಸಮುದ್ರವೇ ಆಲಿಸು,ಅಗ್ನಿಯೇ ಆಲಿಸು, ಮಾರುತವೇ ಕೇಳು,ಆಕಾಶವೇ ಆಲಿಸು ನನ್ನ ಶತ್ರುವನ್ನು ಕೊಂದು ಕೋಪಾಗ್ನಿಗೆ ಆಹುತಿ ಮಾಡುತ್ತೇನೆ.ಯಾವಾಗ ಅವನನ್ನು ಕೊಲ್ಲಲು ಸಾಧ್ಯವಿಲ್ಲವೋ ಆಗ ನನ್ನನ್ನೇ ನಾನು ಅಗ್ನಿಗೆ ಆಹುತಿ ಮಾಡಿಕೊಳ್ಳುತ್ತೇನೆ. ಇದು ನನ್ನ ಪ್ರತಿಜ್ಞೆ ಎಂದು ಪಂಚಭೂತಗಳ ಸಾಕ್ಷಿಯಾಗಿ ಶಪಥ ಮಾಡುತ್ತಾನೆ. ನಂತರ ಧರ್ಮರಾಯನಲ್ಲಿಗೆ ತೆರಳಿ ಅವನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ತನ್ನ ಆತಂಕವನ್ನು ತೋಡಿಕೊಳ್ಳುತ್ತಾನೆ.ತಾನು ಮಾಡಿದ ಪ್ರತಿಜ್ಞೆ ನೆರವೇರದೇ ಇರುವುದರಿಂದ ದ್ರೌಪದಿ ಮುಡಿಯನ್ನು ಕಟ್ಟಿಕೊಳ್ಳದೇ ಕೊರಗುತ್ತಿದ್ದಾಳೆ.ಅವಳ ದುಃಖವನ್ನು ನೋಡಿ ನಾನೂ ನನ್ನ ತಮ್ಮಂದಿರು ಎಷ್ಟು ಸಹಿಸಬಲ್ಲೆವು?ದ್ರೌಪದಿಯ ಈ ಅವಸ್ಥೆಯನ್ನು ಕಂಡು ನೀನು ಮನಸ್ಸಿನಲ್ಲಿ ಕೂಡ ನೊಂದುಕೊಳ್ಳುವುದಿಲ್ಲ.ನೀನು ನಿಷ್ಕರುಣಿ.ಹೀಗೆಯೇ ಇರು. ನಾನು ನನ್ನ ಕೋಪವನ್ನು ತೀರಿಸಿಕೊಳ್ಳಲು ಶತ್ರುವೆಂಬ ಮರವನ್ನು ಬೇರು ಸಹಿತ ಕಿತ್ತು ಹಾಕುತ್ತೇನೆ ಎಂದು ಆರ್ಭಟಿಸುತ್ತಾನೆ.ಇಂದು ಒಂದು ದಿವಸ ನಾನು ನಿನಗೆ ಆಜ್ಞಾನುವರ್ತಿಯಲ್ಲ, ನನಗೆ ನೀನು ಹಿರಿಯನಲ್ಲ. ನನ್ನಷ್ಟಕ್ಕೆ ನನ್ನನ್ನು ಬಿಟ್ಟುಬಿಡು. ಕೌರವನನ್ನು ಕೊಂದು ಹಿಸುಕಿ ಹಾಕುತ್ತೇನೆ ಎಂದು ಆಕ್ರೋಶ ವ್ಯಕ್ತ ಪಡಿಸುತ್ತಾನೆ.ನನ್ನ ಕಣ್ಣೆದುರಿನಲ್ಲಿಯೇ ದ್ರೌಪದಿಯ ಮುಂದಲೆ ಹಿಡಿದೆಳೆದು ಅವಮಾನಗೊಳಿಸಿ,ಸೊಕ್ಕಿ ಮೆರೆಯುತ್ತಿದ್ದವನನ್ನು ಕೊಂದು ಹಾಕಿದ್ದೇನೆ.ಇನ್ನು ದುರ್ಯೋಧನನನ್ನು ಕೊಲ್ಲಲು ತಡ ಮಾಡುವೆನೆ? ಎಂದು ಆಕ್ರೋಶಭರಿತನಾಗಿ ಪ್ರಶ್ನಿಸುತ್ತಾನೆ. ಹೀಗೆ ದುರ್ಯೋಧನನನ್ನು ಕೊಲ್ಲುವ ಉತ್ಸಾಹದಿಂದ ಮುನ್ನುಗ್ಗುತ್ತ ಸಿಂಹನಾದ ಮಾಡುತ್ತಾ ಅವನನ್ನು ಅರಸುತ್ತ ಭೀಮ ಅತ್ತಿತ್ತ ಸುಳಿದಾಡುತ್ತಾನೆ. ಕುರುವಂಶವೆಂಬ ಬಾಳೆಯ ವನಕ್ಕೆ ಆನೆಯಾದವನು, ಶತ್ರಗಳೆಂಬ ಪತಂಗಗಳು ದಾಳಿಮಾಡಿ ಆಹುತಿಯಾಗುವ ಸಂದರ್ಭದಲ್ಲಿಯೂ ಪುಟಿದೇಳುವ ದೀಪದಂತಿರುವ ಭೀಮ ಕುರುಭೂಮಿಯಲ್ಲಿಯೇ ಕುರುರಾಜನನ್ನು ಹುಡುಕಿದನು.ವಿದ್ಯಾಭ್ಯಾಸದ ಸಂದರ್ಭದಲ್ಲಿ ತಾನು ಬಿಟ್ಟ ಬಾಣ ಗುರಿ ತಪ್ಪಿತೆಂದು ಗುರುಗಳು ಹೇಳಿದಾಗ ಬಾಣದ ವೇಗವನ್ನು ಮೀರಿ ಅದನ್ನು ಬೆನ್ನಟ್ಟಿ ಮರಳಿ ತಂದಿದ್ದ ಭೀಮ, ಈಗ ಅದೇ ವೇಗದಲ್ಲಿ ಅತ್ತಿತ್ತ ಸಂಚರಿಸಿ ದುರ್ಯೋಧನನ್ನು ಹುಡುಕಿದನು. ಆದರೆ ನಾಲ್ವತ್ತೆಂಟು ಗಾವುದ ವಿಸ್ತೀರ್ಣದ ಕುರುಕ್ಷೇತ್ರದಲ್ಲಿ ಎಲ್ಲಿಯೂ ಅವನನ್ನು ಕಾಣದೇ ದುರ್ಯೋಧನನ ಬೀಡಿಗೆ ಧಾವಿಸಿ ಬರುತ್ತಾನೆ.ಅರಗಿನ ಅರಮನೆಯಲ್ಲಿ ನಮ್ಮನ್ನು ಸುಡಲು ಬಗೆದವನು ಎಲ್ಲಿದ್ದಾನೆ? ಭೀಮನನ್ನು ವಿಷವಿಕ್ಕಿ ಕೊಲ್ಲಲು ಹವಣಿಸಿದವನು ಎಲ್ಲಿದ್ದಾನೆ? ದ್ಯೂತ ಪ್ರಸಂಗದಲ್ಲಿ ವಂಚನೆಯಿಂದ ನಮ್ಮನ್ನು ಸೋಲಿಸಿ ದ್ರೌಪತಿಯನ್ನು ಎಳೆದೊಯ್ದ ಅಪರಾಧಿ ಎಲ್ಲಿದ್ದಾನೆ?ಕೃತಕ ಸಭಾ ಪ್ರವೇಶಕ್ಕೆ ನಮ್ಮನ್ನು ಕರೆದು ಮೋಸ ಮಾಡಿದ ದುರ್ಯೋಧನ ಎಲ್ಲಿದ್ದಾನೆ? ಎಂದು ಆರ್ಭಟಿಸುತ್ತಾನೆ. ಹನ್ನೊಂದು ಅಕ್ಷೋಹಿಣಿ ಸೈನ್ಯಕ್ಕೆ ಒಡೆಯನಾಗಿಯೂ ಈಗ ದಾರುಣವಾದ ಶೋಕಾಗ್ನಿಯಲ್ಲಿ ಬೆಂದು ಮಕ್ಕಳ ಸಾವಿಗಾಗಿ ದುಃಖಿಸುವ ರಾಜಾಧಿರಾಜ ಎಲ್ಲಿದ್ದಾನೆ? ಎಂದು ವ್ಯಂಗ್ಯಭರಿತನಾಗಿ ಪ್ರಶ್ನಿಸುತ್ತಾನೆ. ಭರತ ವಂಶಕ್ಕೆ ಕಳಂಕನೂ ಅನಿಷ್ಠನೂ ಆದ ಕುರುಕುಲ ಮುಖ್ಯ ದುರ್ಯೋಧನ ಎಲ್ಲಿದ್ದಾನೆ? ಕುರುಕುಲಕ್ಕೆ ಪ್ರಳಯ ಸ್ವರೂಪಿಯಾದ ಭೀಮಸೇನ ಬಂದಿದ್ದಾನೆ ಎಂದು ಗರ್ಜಿಸಿ ಕುರುರಾಜನ ಬಾಗಿಲ ಬಳಿ ಬರುತ್ತಾನೆ.ಆದರೆ ಅಲ್ಲಿ ಯುದ್ಧದಲ್ಲಿ ತನ್ನ ಮಕ್ಕಳ ಗತಿ ಏನಾಯಿತು ಎಂಬುದನ್ನು ತಿಳಿಯಲು ಗಾಂಧಾರಿ ಪರಿಜನ ಸಹಿತವಾಗಿ ನಿಂತಿದ್ದಳು.ಕೌರವನನ್ನು ನುಂಗಿದ ರಾಕ್ಷಸನಂತೆ ಪಾಂಡವ ಸೈನ್ಯವನ್ನು ರಕ್ಷಿಸುವ ಕೋಟೆಯಂತೆ ಇರುವ ಭೀಮಸೇನನ ಬರುವಿಕೆಯನ್ನು ಅವಳು ಅರಿತಳು.ನನ್ನ ನೂರು ಮಕ್ಕಳನ್ನು ನುಂಗಿದ ರೀತಿಯಲ್ಲಿಯೇ ಸುಯೋಧನನನ್ನು ನುಂಗಲು ಈತ ಬಂದನಲ್ಲ, ಅನ್ಯಾಯವಾಯಿತು ಎಂದು ಅವಳು ಪರಿತಪಿಸಿದಳು.ಕೋಪದಿಂದ ಕುದಿಯುತ್ತಿದ್ದರೂ ಭೀಮ ತನ್ನ ಕಠಿಣ ಧ್ವನಿಯಲ್ಲಿ ಹಿರಿಯರಿಗೆಲ್ಲ ನಮಸ್ಕರಿಸುತ್ತಾನೆ.ನಂತರ ಗಟ್ಟಿ ಧ್ವನಿಯಲ್ಲಿ ರಾಜಾ ದೃತರಾಷ್ಟ್ರಕೇಳು, ತಾಯಿ ಗಾಂಧಾರಿ ಆಲಿಸು,ನನ್ನ ಗದೆಯಿಂದ ನಿಮ್ಮ ನೂರು ಜನ ಮಕ್ಕಳನ್ನು ಕೊಂದಿದ್ದೇನೆ. ದುಶ್ಯಾಸನನ ಎದೆ ಬಗೆದು ಅವನ ರಕ್ತದಿಂದ ನನ್ನ ಕೋಪಾಗ್ನಿಯನ್ನು ತಣಿಸಿದ್ದೇನೆ. ಈಗ ನೂರಾರು ಅಪರಾಧಗಳನ್ನು ಮಾಡಿದ ದುರ್ಯೋಧನನ್ನು ನುಂಗಲು ಬಂದಿದ್ದೇನೆ ಎಂದು ಆರ್ಭಟಿಸುತ್ತಾನೆ. ಇದೇ ವೇಳೆಗೆ ಕಿರಾತ ದೂತನೊಬ್ಬ ತಂದ ಸಂದೇಶ ದುರ್ಯೋಧನನ ಇರುವಿಕೆಯ ಸುಳಿವು ನೀಡುತ್ತದೆ. ಭೀಷ್ಮರು ಉಪದೇಶಿಸಿದ ಜಲಮಂತ್ರದ ಸಹಾಯದಿಂದ ಕಾಲ ವಂಚನೆ ಮಾಡಲು ದುರ್ಯೋಧನ ವೈಶಂಪಾಯನ ಸರೋವರವನ್ನು ಪ್ರವೇಶಿಸಿರಬೇಕು.ಬಲರಾಮ,ಅಶ್ವತ್ಥಾಮ ಮತ್ತು ಕೃಪಾಚಾರ್ಯರು ನಾಳೆ ದುರ್ಯೋಧನನನ್ನು ಕೂಡಿಕೊಳ್ಳುತ್ತಾರೆ. ಅವರು ಬರುವ ಮುನ್ನವೇ ದುರ್ಯೋಧನನನ್ನು ಗೆಲ್ಲಬೇಕು.ನಂತರ ಅವನನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಆಲೋಚಿಸಿದ ಶ್ರೀಕೃಷ್ಣ ಈಗಿಂದೀಗಲೇ ವೈಶಂಪಾಯನ ಸರೋವರವನ್ನು ಮುತ್ತಿ ಅಡಗಿರುವ ದುರ್ಯೋಧನನನ್ನು ಮೇಲಕ್ಕೇಳಿಸಿ ಅವನನ್ನು ಸೋಲಿಸಬೇಕು ಎಂದು ಪಾಂಡವರನ್ನು ಹುರಿದುಂಬಿಸಿ ಸರೋವರದತ್ತ ಕರೆತರುತ್ತಾನೆ.ಅಲ್ಲಿ ಕಿರಾತ ದೂತರು ಹೇಳಿದ ಗುರುತುಗಳನ್ನು ಕಂಡು ಅವು ದುರ್ಯೋಧನನ ಹೆಜ್ಜೆಗುರುತುಗಳು ಎಂದು ಮನವರಿಕೆ ಮಾಡಿಕೊಳ್ಳುತ್ತಾರೆ.ಕುರುರಾಜ ಹಿಂದೆ ಹಿಂದೆ ಹೆಜ್ಜೆ ಇಟ್ಟು ಭರತ ವಂಶಕ್ಕೆ ಎಂದಿಲ್ಲದ ಕಳಂಕವನ್ನು ತಂದನೆಂದು ಧರ್ಮರಾಯ ತಲೆತಗ್ಗಿಸಿದನು.ಪಾಂಡವರು ಅಲ್ಲಿಗೆ ಬರುತ್ತಿದ್ದಂತೆ ಸರೋವರದಲ್ಲಿ ರಾಜಹಂಸಗಳು ಕಲರವ ಮಾಡಿ ಅವರನ್ನು ಸ್ವಾಗತಿಸುತ್ತವೆ‌.ಗಾಳಿಯ ರಭಸಕ್ಕೆ ಮುನ್ನುಗ್ಗಿದ ತೆರೆಗಳು ಪಾಂಡವರಿಗೆ ನಮಸ್ಕರಿಸುವಂತೆ ಕಂಡುಬಂತು. ಅದೇ ವೇಳೆಗೆ ಮೀನು ಬೇಟೆಗಾಗಿ ನೀರಿಗೆ ಧುಮುಕಿದ ಮಿಂಗುಲಿಗ ಹಕ್ಕಿ ಭೀಮ,ದುರ್ಯೋಧನ ಇಲ್ಲಿಯೇ ಅಡಗಿದ್ದಾನೆ ಎಂದು ತೋರಿಸಿದಂತೆ ಕಂಡು ಬಂತು. ನಿನ್ನ ಶತ್ರು ಈ ಕೊಳದಲ್ಲಿ ಅಡಗಿ ಕುಳಿತಿದ್ದಾನೆ ನೋಡು ಎಂದು ಭೀಮನಿಗೆ ತಿಳಿಸುವಂತೆ ಮೀನುಗಳು ಫಳಫಳ ಹೊಳೆದವು.ಇದರಿಂದ ಉತ್ಸಾಹ ಭರಿತನಾದ ಭೀಮ ಶತ್ರು ನನ್ನ ಕೈಗೆ ಸಿಕ್ಕಿದ್ದಾನೆ.ಸರೋವರದಲ್ಲಿದ್ದವನು ಇನ್ನೆಲ್ಲಿ ಹೋಗಲು ಸಾಧ್ಯ? ಮೊದಲು ಸರೋವರದ ನೀರನ್ನೆಲ್ಲ ಹಿರಿ ನಂತರ ಶತ್ರುವಿನ ರಕ್ತವನ್ನು ಕುಡಿದು ಒಡೆಯ ಧರ್ಮರಾಜನಿಗೆ ನನ್ನ ಸಾಮರ್ಥ್ಯವನ್ನು ತೋರಿಸುತ್ತೇನೆ ಎಂದು ಭೀಮಸೇನನು ತೋಳುಗಳನ್ನು ತಟ್ಟಿಕೊಂಡು ದಿಕ್ಕುಗಳು ಪ್ರತಿಧ್ವನಿಸುವಂತೆ ಘರ್ಜಿಸುತ್ತಾನೆ. ನಂತರ ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತ ದುರ್ಯೋಧನನನ್ನು ಕೊಳದಿಂದ ಹೊರಮಡಿಸಲು ಅವರು ಪ್ರಯತ್ನ ಮಾಡುತ್ತಾರೆ. ಕೊಳವನ್ನು ಸುತ್ತುವರಿದ ಪಾಂಡವರು ಶಂಖ.ಜಾಗಟೆ, ಭೇರಿ,ಕಹಳೆ ಮುಂತಾದ ಪಂಚ ಮಹಾ ವಾದ್ಯಗಳನ್ನು ಬಾರಿಸುತ್ತಾ ಕೊಳದಲ್ಲಿ ಅಡಗಿ ಕುಳಿತ ದುರ್ಯೋಧನನ್ನು ಹೊರತರಲು ವಿಫಲರಾದರು. ಆಗ ನಕುಲನು ದುರ್ಯೋಧನನ ಹೆಸರು ಹಿಡಿದು ಅವನನ್ನು ನಿಂದಿಸಿ ಹೊರಬರುವಂತೆ ಆರ್ಭಟಿಸುತ್ತಾನೆ.ಆದರೆ ಅವನ ಮಾತುಗಳು ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಅವನ ನಂತರ ಸಹದೇವ ದುರ್ಯೋಧನನನ್ನು ಕೆಣಕಿ ಯುದ್ಧಕ್ಕೆ ಆಹ್ವಾನಿಸುತ್ತಾನೆ. ಅದೂ ವಿಫಲವಾಗುತ್ತದೆ ನಂತರ ಅರ್ಜುನ ಮುಂದೆ ಬಂದು ನೀರಲ್ಲಿ ಮೀನು,ಕಪ್ಪೆ,ಎಸಡಿಗಳಿರುವಂತೆ ವೀರರು ಇರುವರೆ? ಹೊರಬಂದು ಯುದ್ಧ ಮಾಡು ಎಂದು ಕರೆಯುತ್ತಾನೆ. ಆದರೆ ಅದು ಸಫಲವಾಗುವುದಿಲ್ಲ. ಧರ್ಮರಾಯ ಮುಂದೆ ಬಂದು ಭರತವಂಶದಲ್ಲಿ ಬದ್ಧ ಮತ್ಸರವಿರಲಿಲ್ಲ ನಿನ್ನಿಂದ ಅದು ಘಟಿಸುತ್ತಿದೆ. ಈಗಲೂ ಸಮಯ ಮೀರಿಲ್ಲ. ಕೊಳದಲ್ಲಿ ಅಡಗಿ ಕುಳಿತಿರುವುದು ಸರಿಯೇ? ಸಂಧಿಗೆ ಒಪ್ಪಿಕೋ ಎಂದು ನುಡಿಯುತ್ತಾನೆ. ಈ ಮಾತನ್ನು ಕೇಳುತ್ತಿದ್ದಂತೆ ಭೀಮಸೇನ ಆಸ್ಫೋಟಿಸುತ್ತಾನೆ."ಈ ಭೂತು ಎನ್ನ ಸರಂಗೇಳ್ದೊಡಲ್ಲದೇ ಪೊರ ಮಡುವವನಲ್ಲ" ಎಂದು ಗರ್ಜಿಸಿ ಇವನಿಗೆ ನಾನೇ ಮದ್ದು ಎಂದು ಆರ್ಭಟಿಸಿತ್ತಾನೆ. ಭಯಂಕರ ಯುದ್ಧದಲ್ಲಿ ನೀನು ಒಳಗಿದ್ದೆ.ನಿನ್ನ ಕುಲವನ್ನೆಲ್ಲ ಕೋಪದಿಂದ ಇರಿದು ಕೊಂದೆ. ಹಿಂದಿನಿಂದಲೇ ಬಂದರೆ ಕೊಳದೊಳಗೆ ಅಡಗಿ ಕುಳಿತಿರುವೆಯಲ್ಲ! ಹೀಗೆ ಅಡಗಿ ಕುಳಿತರೆ ಬದುಕುವೆನೆಂದು ತಿಳಿದಿರುವೆಯಾ? ನನ್ನ ಸ್ವರವನ್ನು ಕೇಳಲಾರದೆ ಉಗ್ರರೂಪವನ್ನು ನೋಡಲಾರದೆ ಸಮರಾಂಗಣವನ್ನು ಬಿಟ್ಟು ಕೊಳವನ್ನು ಪ್ರವೇಶಿಸಿದರೆ ಬದುಕುವೆಯಾ?ಎಂದು ಆಕ್ರೋಶದಿಂದ ಪ್ರಶ್ನಿಸುತ್ತಾನೆ. ನೀರಿನಲ್ಲಿ ಮೀನಿರುವಂತೆ ಕೊಳದೊಳಗೆ ಮುಳುಗಿ ಮುಳುಗಿ ಅಡಗಿರುವೆಯಲ್ಲ, ದುರ್ಯೋಧನ ಎನ್ನುವ ಹೆಸರಿಗಿದು ಅವಮಾನ. "ಸತ್ತರೇಂ ಪುಟ್ಟರೆ"ಎಂದು ಪ್ರಶ್ನಿಸಿ, ಹೊರಗೆ ಬಾ ಆಯುಧ ಹಿಡಿದು ಯುದ್ಧ ಮಾಡು ಎಂದು ಕರೆಯುತ್ತಾನೆ. ಶ್ರೀಕೃಷ್ಣ ಸಂಧಾನಕ್ಕೆ ಬಂದಾಗ ಅವನನ್ನು ಅವಮಾನಗೊಳಿಸಲು ಪ್ರಯತ್ನಿಸಿದೆಯಲ್ಲ,ಆ ಅಹಂಕಾರ ಈಗ ಎಲ್ಲಿದೆ? ದ್ರೌಪತಿಯ ಮುಡಿ ಹಿಡಿದು ಸೀರೆ ಎಳೆಯುವಂತೆ ಮಾಡಿದ ಮದ ಈಗೆಲ್ಲಿದೆ? ಪಾಂಡವರನ್ನು ಕಾಡಿನಲ್ಲಿ ಅಲೆಸಿದ ಸೊಕ್ಕು ಈಗ ಏನಾಯಿತು ಎಂದು ಭೀಮ ಆರ್ಭಟಿಸಿತ್ತಾನೆ. ಅಷ್ಟಕ್ಕೆ ಸುಮ್ಮನಿರದೆ ಬ್ರಹ್ಮಾಂಡವೇ ಒಡೆಯುವಂತೆ ಸಿಂಹನಾದ ಮಾಡುತ್ತಾನೆ.ಭೀಮನ ಕೋಪಾಟೋಪದ ಪರಿಣಾಮವಾಗಿ ಕೋಳದ ನೀರು ಹುರಿಗಡಲೆ ಹುರಿಯಲು ಕಾದ ಮರಳಿನಂತೆ ಬಿಸಿಯಾಗುತ್ತದೆ. ಕೊಳದ ತಾವರೆಗಳು ಬಾಡುತ್ತವೆ. ಕೊಳದಲ್ಲಿರುವ ಮೀನುಗಳು ಕೊಳದ ನೀರು ಕಾದ ಎಸರಿನಂತೆ ಕುದಿಯುತ್ತದೆ. ಅಲ್ಲಿರುವ ಮೀನುಗಳು ಅನ್ನ ಕುದಿಯುವಂತೆ ಕುದಿಯುತ್ತವೆ. ಹೀಗೆ ನೀರಿನಲ್ಲಿರುವ ಜೀವರಾಶಿಗಳು ಪ್ರಾಣ ಬಿಡುತ್ತಿರಲು ಸಿಂಹಕೇತನನಾದ ಭೀಮಸೇನ ಭರ್ಜರಿಯಾಗಿ ಸಿಂಹನಾದ ಮಾಡುತ್ತಾನೆ. ಭೀಮನ ಆರ್ಭಟದ ಧ್ವನಿ ಅಜೇಯವಾದ ಸಿಂಹದ ಧ್ವನಿಯನ್ನೂ ಮೀರಿಸಿದ ಸಿಡಿಲಿನ ಧ್ವನಿಯನ್ನು ಹೋಲುತ್ತಿತ್ತು. ಅದನ್ನು ಕೇಳುತ್ತಿದ್ದಂತೆ ನೀರಿನಲ್ಲಿ ಅಡಗಿ ಕುಳಿತ ದುರ್ಯೋಧನನ ಕಣ್ಣುಗಳು ಕೋಪದಿಂದ ಕೆಂಪಾಗುತ್ತವೆ. ಮನಸ್ಸಿನ ಏಕಾಗ್ರತೆಯನ್ನು ಕಳೆದು ಕೊಳ್ಳುತ್ತಾನೆ. ಇದರ ಪರಿಣಾಮವಾಗಿ ಆತನ ನೀರಿನಲ್ಲಿದ್ದರೂ ಬೇವರುತ್ತಾನೆ. ಆ ಕ್ಷಣ ಅಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದೇ ರಸಾತಳದಿಂದ ಪ್ರಳಯಕಾಲದ ಕಾಲಾಗ್ನಿರುದ್ರನು ಹೊರಹೊಮ್ಮುವಂತೆ ಸರೋವರದಿಂದ ಮಧ್ಯದಿಂದ ಹೊರಬಿದ್ದು ತನ್ನ ಕೈಯಲ್ಲಿದ್ದ ಗದೆಯನ್ನು ಅತ್ತಿತ್ತ ತೂಗಿ ಎಂಟು ದಿಕ್ಕುಗಳನ್ನು ಅವಲೋಕಿಸುತ್ತಾ ಭೀಮ ಎಲ್ಲಿದ್ದಾನೆ ಎಂದು ಆರ್ಭಟಿಸುತ್ತಾನೆ. ಪ್ರಸ್ತುತ ಕಾವ್ಯಭಾಗ ಗದಾಯುದ್ಧ ಕಾವ್ಯದ ರಸಘಟ್ಟಿ ಎಂದು ಹೇಳಬಹುದು.ಈ ಭಾಗದಲ್ಲಿ ದುರ್ಯೋಧನನಿಗೆ ಭೀಮನ ಮೇಲಿರುವ ದ್ವೇಷವನ್ನು ಕವಿ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾನೆ. ಪಂಚಮಹಾವಾದ್ಯಗಳ ಸದ್ದಿಗೆ, ನಕುಲ-ಸಹದೇವ, ಧರ್ಮರಾಜ ಅರ್ಜುನರ ಮಾತಿಗೆ ಮನೋನಿಗ್ರಹವನ್ನು ಕಳೆದುಕೊಳ್ಳದ ದುರ್ಯೋಧನ, ಭೀಮ ಆರ್ಭಟಕ್ಕೆ ಚಂಚಲಚಿತ್ತನಾಗಿ ಕೊಳದಿಂದ ಮೇಲಕ್ಕೇಳುವ ದೃಶ್ಯ ಅತ್ಯಂತ ನಾಟಕೀಯವಾಗಿದೆ.ಇಂತಹ ಪರಿಣಾಮಕಾರಿ ದೃಶ್ಯ ನಿರೂಪಣೆಯ ಕಾರಣಕ್ಕೆ ರನ್ನ ಮಹಾಕವಿ ಎನಿಸಿಕೊಳ್ಳುತ್ತಾನೆ.

ದುರ್ಗಸಿಂಹನ ಪಂಚತಂತ್ರದ ಎರಡು ಗಿಳಿಗಳ ಕಥೆ

ಕನ್ನಡ ಸಾಹಿತ್ಯದಲ್ಲಿ ದುರ್ಗಸಿಂಹನಿಗೆ ವಿಶಿಷ್ಟ ಸ್ಥಾನವಿದೆ.ಪಂಚತಂತ್ರ ಎಂಬ ವಿಶಿಷ್ಟ ಕೃತಿಯ ಮೂಲಕ ತನ್ನ ಸ್ಥಾನವನ್ನು ಆತ ಭದ್ರಪಡಿಸಿ ಕೊಂಡಿದ್ದಾನೆ. ಭಾರತೀಯ ಸಾಹಿತ್ಯದಲ್ಲಿ ಪಂಚತಂತ್ರದ ಎರಡು ಧಾರೆಗಳು ಪ್ರಚಲಿತದಲ್ಲಿವೆ.ಒಂದು ವಿಷ್ಣುಶರ್ಮನ ಪಂಚತಂತ್ರ ಇನ್ನೊಂದು ವಸುಭಾಗಭಟ್ಟ ನ ಪಂಚತಂತ್ರ. ವಿಷ್ಣುಶರ್ಮನ ಪಂಚತಂತ್ರದ ಅನೇಕ ಅವತರಣಿಕೆಗಳು ನಮಗೆ ದೊರಕುತ್ತವೆ ಆದರೆ ವಸುಭಾಗಭಟ್ಟನ ಪಂಚತಂತ್ರದ ಅವತರಣಿಕೆ ಕೇವಲ ದುರ್ಗಸಿಂಹನಲ್ಲಿ ಮಾತ್ರ ದೊರಕುತ್ತದೆ.ಆದ್ದರಿಂದ ದುರ್ಗಸಿಂಹನ ಪಂಚತಂತ್ರಕ್ಕೆ ಭಾರತೀಯ ಸಾಹಿತ್ಯದಲ್ಲಿ ಮಹತ್ವದ ಸ್ಥಾನವಿದೆ. ದುರ್ಗಸಿಂಹ ಈ ಕೃತಿಯಲ್ಲಿ ತನ್ನ ವೈಯಕ್ತಿಕ ವಿವರಗಳನ್ನು ಹೇಳಿಕೊಂಡಿದ್ದಾನೆ .ಇವನ ಊರು ಸಯ್ಯಡಿ.ಇಂದಿನ ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿದೆ. ತಂದೆ ಈಶ್ವರಾರ್ಯ, ತಾಯಿ ದೇವಕಬ್ಬೆ.ದುರ್ಗಸಿಂಹನ ಗುರು ಶಂಕರ ಭಟ್ಟ.ಇಮ್ಮಡಿ ಜಯಸಿಂಹನ ಆಸ್ಥಾನದಲ್ಲಿ ಸಂಧಿವಿಗ್ರಹಿ ಆಗಿದ್ದ ದುರ್ಗಸಿಂಹ ಪ್ರತಾಪಶಾಲಿಯೂ ಆಗಿದ್ದ.ಸಂಸ್ಕೃತದಲ್ಲಿದ್ದ ಪಂಚತಂತ್ರವನ್ನು ಕನ್ನಡದಲ್ಲಿ ರಚಿಸುವ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾನೆ.ಈ ಕೃತಿಯನ್ನು 1031ರಲ್ಲಿ ರಚಿಸಿರುವದಾಗಿ ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಪಂಚತಂತ್ರ ಹೆಸರೇ ಸೂಚಿಸುವಂತೆ ಐದು ತಂತ್ರಗಳ ಕಥೆಗಳ ಸಂಕಲನ.ಅರ್ಥಶಾಸ್ತ್ರದ ಐದು ತಂತ್ರಗಳ ಮೂಲಕ ಕಥೆಗಳನ್ನು ಹೇಳಿರುವದರಿಂದ ಇದಕ್ಕೆ ಪಂಚತಂತ್ರ ಎಂಬ ಹೆಸರು ಬಂದಿದೆ.ಅಮರ ಶಕ್ತಿ ಎಂಬ ಅರಸನ ದಾರಿತಪ್ಪಿದ ಮೂರು ಮಕ್ಕಳನ್ನು ಯೋಗ್ಯರನ್ನಾಗಿ ಮಾಡಲು ಪ್ರಾಣಿ-ಪಕ್ಷಿಗಳ ಪಾತ್ರಗಳನ್ನು ಒಳಗೊಂಡ ನೀತಿ ಕಥೆಗಳನ್ನು ಹೇಳುವ ಮೂಲಕ ಅವರನ್ನು ಸಂಸ್ಕಾರವಂತರನ್ನಾಗಿ ಪರಿವರ್ತಿಸಲಾಯಿತು ಎಂಬುದು ಈ ಕಾವ್ಯದ ಹೆಗ್ಗಳಿಕೆ.ಭೇದ ಪ್ರಕರಣ ಪರೀಕ್ಷಾ ಪ್ರಕರಣ ವಿಶ್ವಾಸ ಪ್ರಕರಣ, ವಂಚನೆ ಪ್ರಕರಣ ,ಮಿತ್ರಕಾರ್ಯ ಎಂಬ ಐದು ತಂತ್ರಗಳು ಈ ಕಾವ್ಯದಲ್ಲಿ ವೆ ಪ್ರಸ್ತುತ ಎರಡು ಗಿಣಿಗಳ ಕಥೆಯನ್ನು ದುರ್ಗಸಿಂಹನ ಪಂಚತಂತ್ರದ ಮೊದಲ ಪ್ರಕರಣ ಮಿತ್ರ ಭೇದದಿಂದ ಆಯ್ದುಕೊಳ್ಳಲಾಗಿದೆ . ಗುಣದೋಷಗಳು ಸಹವಾಸದಿಂದ ಉಂಟಾಗುತ್ತವೆ ಎಂಬುದನ್ನು ಈ ಕಥೆ ಪರಿಣಾಮಕಾರಿಯಾಗಿ ನಿರೂಪಿಸುತ್ತದೆ.ಇಲ್ಲಿ ಪದ್ಯ ಭಾಗಕ್ಕಿಂತ ಗದ್ಯ ಭಾಗವೇ ಹೆಚ್ಚಾಗಿದ್ದು ನಿರೂಪಣೆಯ ದೃಷ್ಟಿಯಿಂದ ಅಡೆತಡೆಯಿಲ್ಲದೆ ಮುಂದುವರಿಯಲು ಅನುಕೂಲವಾಗಿದೆ. ಶ್ರೀಮನ್ನಾರಾಯಣನಿಗೆ ಸರಿ ದೊರೆಯಾದ ಜನೋದಯ ಎಂಬ ಅರಸನು ಒಮ್ಮೆ ಬೇಟೆಯಾಡಲು ಕಾಡಿಗೆ ಹೋದನು. ಇದನ್ನು ತಿಳಿದ ಅವನ ದಾಯಾದಿ ಅವನನ್ನು ಕೊಲ್ಲುವ ಉದ್ದೇಶದಿಂದ ಹಿಂಬಾಲಿಸಿದನು.ಇದನ್ನು ಅರಿತ ರಾಜನು ಅವನು ತನ್ನ ಶತ್ರು ಎಂದು ಭಾವಿಸಿ ವೈರತ್ವಕ್ಕೆ ಬಲಿಯಾಗಿ ನಿಷ್ಕಾರಣವಾಗಿ ಏಕೆ ಸಾಯಬೇಕು,ಬದುಕಿದವನೇ ಬಂಟ ಎಂಬ ಗಾದೆ ಮಾತಿದೆ. ಧರ್ಮಸಾಧನೆಗೆ ಶರೀರವೇ ನಿಜವಾದ ಮಾಧ್ಯಮ.ಆದ್ದರಿಂದ ಈ ಶರೀರವನ್ನು ಕಾಪಾಡಿಕೊಳ್ಳಬೇಕು ಎಂದು ನಿರ್ಧರಿಸಿ ತಾನು ಏರಿದ ಕುದುರೆಯನ್ನು ಮನಸ್ಸಿನ ವೇಗಕ್ಕೂ ಮಿಗಿಲಾಗಿ ಓಡಿಸಿದನು.ಹಾಗೆ ಓಡಿದ ಕುದುರೆ ಬೇಡರ ಬಿಡಾರವೊಂದನ್ನು ತಲುಪಿತು.ಜನ ಸಂಚಾರವಿರುವಲ್ಲಿ ನಿರ್ಭೀತನಾಗಿ ಇರಬಹುದು ಎಂದು ಭಾವಿಸಿದ ರಾಜ ಅಲ್ಲಿ ಕೆಲಕಾಲ ವಿಶ್ರಾಂತಿ ಬಯಸಿದನು.ಆದರೆ ಬೇಡರ ಬಿಡಾರದಲ್ಲಿ ಇದ್ದ ಪಂಜರದ ಗಿಣಿಯೊಂದು ಎಲೈ ಶಬರರಾಜ,ಬಗೆಬಗೆಯ ಆಭರಣಗಳನ್ನು ತೊಟ್ಟುಕೊಂಡು ಒಬ್ಬನು ವ್ಯಾಕುಲಗೊಂಡು ಇಲ್ಲಿಗೆ ಬರುತ್ತಿದ್ದಾನೆ. ಯಾವುದೇ ಗೊಂದಲಗಳಿಲ್ಲದೆ ಈ ಐಶ್ವರ್ಯವನ್ನು ತೆಗೆದುಕೊಳ್ಳು ಎಂದಿತು.ಈ ಮಾತನ್ನು ಕೇಳಿ ಇನ್ನಷ್ಟು ಗಾಬರಿಗೊಂಡ ರಾಜ ಇದು ಸುರಕ್ಷಿತ ಪ್ರದೇಶವಲ್ಲ ಎಂದು ಭಾವಿಸಿ ಕುದುರೆಯನ್ನು ಮುನ್ನಡೆಸಿದನು. ಸ್ವಲ್ಪ ದೂರ ಕ್ರಮಿಸುತ್ತಿದ್ದಂತೆ ಮುಗಿಲು ಮುದ್ದಿಡುವ ಮರಗಳ ಗುಂಪಿನ ನಡುವೆ ಸ್ವರ್ಗಕ್ಕೆ ಹೋಗಲು ಸೋಪಾನ ಕಟ್ಟಿದಂತೆ ಏರುತ್ತಿದ್ದ ಹೊಗೆಯನ್ನು ಕಂಡು ಅದೂ ಬೇಡರಹಳ್ಳಿ ಎಂದು ಭಾವಿಸಿ ಭಯಗೊಂಡು ತನ್ನ ಇಷ್ಟದೈವವನ್ನು ಸ್ಮರಿಸಿದನು.ಮಾರ್ಗಾಯಾಸದಿಂದ ಬಳಲಿದ ನನಗೆ ದೇವರೇ ಗತಿಯೆಂದು ಭಾವಿಸಿ ಮನಗುಂದಿ ಬರುತ್ತಿದ್ದ ಜನೋದಯ ಅರಸನಿಗೆ ಪ್ರಾಣವಾಯು ಬರುವಂತೆ ಹೋಮಧೂಮದ ಕಂಪನ್ನು ಹೊತ್ತುತಂದ ಗಾಳಿ ದೇಹದ ಬಳಲಿಕೆಯನ್ನು ದೂರ ಮಾಡುತ್ತದೆ.ಧೂಪ ವಾಸನೆಯಿಂದ ಇದು ಋಷ್ಯಾಶ್ರಮವಾಗಿರಬೇಕು ಎಂದು ನಿಶ್ಚಯಿಸಿ ಅತ್ತ ಮುಂದುವರೆಯುತ್ತಾನೆ.ಅಲ್ಲಿಯ ವಾತಾವರಣ ಆಹ್ಲಾದಕರವಾಗಿರುತ್ತದೆ. ಆಶ್ರಮವಾಸಿಗಳು ಹೋಮಕಾರ್ಯಗಳ ಸಿದ್ಧತೆಯಲ್ಲಿ ಇರುತ್ತಾರೆ. ಬಗೆ ಬಗೆಯ ಸುಗಂಧ ಪುಷ್ಪಗಳನ್ನು ಹೋಮ ಕಟ್ಟಿಗೆಗಳನ್ನು ಸಂಗ್ರಹಿಸುತ್ತಿದ್ದ ಪರಿಚಾರಕರನ್ನು ಕಾಣುತ್ತಾನೆ. ಫಲಭರಿತ ಮರ-ಗಿಡಗಳನ್ನೂ ವೇದಮಂತ್ರಗಳನ್ನು ಉಲಿಯುತ್ತಿದ್ದ ಕೋಗಿಲೆ,ಗಿಳಿ, ಗೊರವಂಕಗಳನ್ನು ನೋಡುತ್ತಾನೆ. ತಮ್ಮ ತುಂಟಾಟಗಳನ್ನು ಮರೆತು ತಪೋಧನರಿಗೆ ನೆರವು ನೀಡುವ ಕಪಿಗಳನ್ನು ಅರಸ ಕಾಣುತ್ತಾನೆ. ಯಜ್ಞಕ್ಕೆ ಬೇಕಾದ ಸಮೃದ್ಧ ಕ್ಷೀರಗಳನ್ನು ನೀಡುವ ಕಾಮಧೇನುಗಳು ಅವನ ಕಣ್ಣಿಗೆ ಬೀಳುತ್ತವೆ. ಅಲ್ಲಿರುವ ಪ್ರಾಣಿ ಪಕ್ಷಿಗಳು ತಮ್ಮಲ್ಲಿರುವ ವೈರತ್ವವನ್ನು ಮರೆತು ವರ್ತಿಸುವುದನ್ನು ಅರಸ ಕಾಣುತ್ತಾನೆ. ಎಲ್ಲಿ ನೋಡಿದರೂ ತಪೋಧನರ ತಪಸ್ಸಿನ ಪ್ರಭಾವಕ್ಕೆ ಒಳಗಾಗಿ ಸದ್ಗುಣಗಳನ್ನು ಹೊಂದಿದ ಜೀವಸಂಕುಲಗಳನ್ನು ಕಂಡು ಅರಸ ಆಶ್ಚರ್ಯ ಚಕಿತನಾಗುತ್ತಾನೆ. ಆಗಲೇ ಅವನನ್ನು ಕಂಡ ಒಂದು ರಾಜಕೀರವು ಎಲೈ ಮಹಾಪುರುಷ ನೀನೂ ಕುದುರೆಯೂ ತುಂಬಾ ಬಳಲಿದ್ದೀರಿ.ಇಂದಿ ನೀವು ಈ ಋಷ್ಯಾಶ್ರಮದಲ್ಲಿ ವಿಶ್ರಮಿಸಿ ಕೊಂಡು ಹೋಗಿ ಎಂದಿತು.ಆ ಪಕ್ಷಿಯ ಮಾತನ್ನು ನಂಬಿ ಸಮೀಪದ ಹೂಗೊಳದ ದಡದಲ್ಲಿದ್ದ ಮಾವಿನ ಮರದ ನೆರಳಲ್ಲಿ ಕುದುರೆಯನ್ನು ಬಿಟ್ಟು ತಾನು ಸ್ನಾನಾದಿ ನಿತ್ಯ ನಿಯಮಗಳನ್ನು ಪೂರೈಸಿ ಶುಚಿರ್ಭೂತನಾದನು.ಬಳಿಕ ಅಲ್ಲಿಯೇ ಸಮೀಪದಲ್ಲಿದ್ದ ಆಶ್ರಮದ ಗುರುಗಳ ಬಳಿ ಬಂದು ಅವರಿಗೆ ನಮಸ್ಕರಿಸಿ ಗುರುಗಳೇ ತಾವು ದೇವತಾ ಸ್ವರೂಪರು.ತತ್ವ,ತಪಸ್ಸು, ಧರ್ಮ ಇವುಗಳು ಹೇಗಿವೆ ಎಂಬುದನ್ನು ನನಗೆ ತಿಳಿಯುವಂತೆ ಹೇಳಿರಿ ಎಂದು ಕೋರುತ್ತಾನೆ.ಆಗ ಆ ಮುನೀಶ್ವರನು"ಹುಟ್ಟು ಸಾವು ಇಲ್ಲದವನೇ ದೇವರು, ಅವನ ಮಾತೇ ತತ್ವ, ಜೀವ ದಯೆಯೇ ಧರ್ಮ, ಇಂದ್ರಿಯ ಸೇವನೆಯನ್ನು ತೊರೆಯುವುದೇ ತಪಸ್ಸು" ಎಂದು ಕೆಲ ಮಾತುಗಳಲ್ಲಿ ತತ್ವ ವಿಚಾರವನ್ನು ಉಪದೇಶಿಸುತ್ತಾನೆ. ಇದರಿಂದ ಸಂತೋಷ ಹೊಂದಿದ ರಾಜನು ಅಲ್ಲಿಯೇ ಕುಳಿತು ವಿಶ್ರಾಂತಿ ಪಡೆಯುತ್ತಾನೆ.ಆಗ ರಾಜಕೀರವು ನೇರಳೆ, ಬಾಳೆ ಮುಂತಾದ ರುಚಿಕರವಾದ ಹಣ್ಣುಗಳನ್ನು ತಂದು ಕೊಡುತ್ತದೆ. ಅದನ್ನೆಲ್ಲ ಸವಿದು ತನ್ನ ಶ್ರಮ ಪರಿಹರಿಸಿಕೊಂಡ ಅರಸನು ಆ ಗಿಳಿಯ ಜೊತೆಗೆ ಸಂವಾದ ನಡೆಸುತ್ತಾನೆ. ನಿನ್ನಂತೆ ದೇಹ,ರೂಪು,ವಯಸ್ಸು, ಸ್ವರಗಳನ್ನು ಹೊಂದಿದ ನಿನಗೆ ಅನುರೂಪವಾದ ಗಿಳಿಯೊಂದನ್ನು ಬೇಡರಹಳ್ಳಿಯಲ್ಲಿ ಕಂಡೆ.ಅದು ನನ್ನನ್ನು ಕಂಡು ಇವನನ್ನು ಹಿಡಿ,ಕಟ್ಟು,ಕೊಲ್ಲು ಎಂದು ಕಠಿಣವಾಗಿ ವರ್ತಿಸಿತು.ಆದರೆ ನೀನು ಮಿತ್ರನಾಗಿ ನಡೆದುಕೊಂಡೆ ಇದಕ್ಕೆ ಕಾರಣವೇನು? ಎಂದು ಕೇಳಿದನು.ಆಗ ರಾಜಕೀರವು ಆ ಪಕ್ಷಿಗೂ ನನಗೂ ತಂದೆ-ತಾಯಿಗಳು ಒಬ್ಬರೇ.ಈ ಮುನಿಗಳು ನನ್ನನ್ನು ಕೊಂಡು ಬಂದರು.ಅವನನ್ನು ಕ್ರೂರರೂ, ಕಠಿಣ ಹೃದಯದವರೂ ಆದ ಬೇಡರು ಕೊಂಡು ಹೋದರು. ನಾನು ಪ್ರತಿದಿನ ಮುನಿಗಳ ಮಾತುಗಳನ್ನು ಕೇಳಿದರೆ ಅವನು ಬೇಡರ ಮಾತುಗಳನ್ನು ಕೇಳುವನು ಇದು ಪ್ರತ್ಯಕ್ಷವಾಗಿ ನಿನ್ನ ಅನುಭವಕ್ಕೆ ಬಂದಿದೆ ಎಂದು ಹೇಳಿತು. ಎಂತಹ ಬುದ್ಧಿವಂತನೂ ಸಂಗ ವಶದಿಂದ ತನ್ನ ಸ್ವಭಾವವನ್ನು ಬೆಳೆಸಿಕೊಳ್ಳುತ್ತಾನೆ ಎಂಬುದು ಸತ್ಯ ಎಂದು ಅರಸ ಅರಿತುಕೊಂಡನು. ನೀತಿಯೇ ಮುಖ್ಯ ಉದ್ದೇಶವಾದ ಈ ಕಥೆಯಲ್ಲಿ ದುರ್ಗಸಿಂಹ, ವ್ಯಕ್ತಿಯ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಪರಿಸರ ವಹಿಸುವ ಪಾತ್ರವನ್ನು ನಿರೂಪಿಸುತ್ತಾನೆ. ಪರಿಸರ ಮತ್ತು ಸಹವಾಸಗಳು ವ್ಯಕ್ತಿಗಳ ಬದುಕಿನಲ್ಲಿ ಮಹತ್ವದ ಪ್ರಭಾವವನ್ನು ಬೀರುತ್ತವೆ ಆದ್ದರಿಂದ ಒಳ್ಳೆಯ ಪರಿಸರದಲ್ಲಿ ಬಾಳಿ ಬದುಕಬೇಕು ಎಂಬ ನೀತಿಯನ್ನು ಈ ಕತೆಯ ಮೂಲಕ ನಿರೂಪಿಸುತ್ತಾನೆ.