ಶನಿವಾರ, ಫೆಬ್ರವರಿ 24, 2024

ಜನಪರ ಹೋರಾಟಗಳಲ್ಲಿ ವಿಷ್ಣು ನಾಯ್ಕರು.

ಸಾಹಿತಿಗಳ ಬಗ್ಗೆ ಜನಸಾಮಾನ್ಯರಲ್ಲಿ ಒಂದು ರೀತಿಯ ಗೌರವ ಭಾವನೆಯಿದೆ. ಸಾಹಿತಿಯಾದವರ ಮುಖ್ಯ ಕಾರ್ಯವೆಂದರೆ ಜನಪರವಾಗಿ ಯೋಚಿಸುತ್ತ ತನ್ನ ಸುತ್ತ ಮುತ್ತಲಿನ ಸಮಾಜದಲ್ಲಿ ಹೊಸ ಎಚ್ಚರ ಹುಟ್ಟಿಸುವುದು. ನಾವೆಲ್ಲರೂ ಸಮಾಜದ ಒಂದು ಭಾಗ, ಈ ಕಾರಣದಿಂದ ತಾನು ಬೇರೂರಿ ಬದುಕುವ ಸಮಾಜದ ವಾಸ್ತವ ಚಿತ್ರವನ್ನು ಸಾಹಿತ್ಯದ ಮೂಲಕ ಜನಸಾಮಾನ್ಯರಿಗೆ ಕಟ್ಟಿಕೊಡುವುದು, ಸಮಾಜದ ಓರೆ-ಕೊರೆಗಳನ್ನು ಅನಾವರಣಗೊಳಿಸುತ್ತ ಓದುಗರ ಸಾಮಾಜಿಕ ಅರಿವನ್ನು ವಿಸ್ತರಿಸುವುದು ತನ್ನ ಮೊದಲ ಕರ್ತವ್ಯ ಎಂಬ ನಂಬಿಕೆ ಬರಹಗಾರನಿಂದ ಹೊಮ್ಮಿದಾಗ ಮಾತ್ರ ಬದಲಾವಣೆಯನ್ನು ನಿರೀಕ್ಷಿಸಬಹುದು. ವ್ಯಕ್ತಿನಿಷ್ಠತೆಯ ಬದಲು, ವಸ್ತುನಿಷ್ಠ ನಿಲುವಿನಲ್ಲಿ ನಿಂತು ತನ್ನ ಸುತ್ತಣ ಸಾಮಾಜಿಕ ಪರಿಸರದಲ್ಲಿ ಇದ್ದುದನ್ನು ಇದ್ದ ಹಾಗೆ, ಯಾವ ಉತ್ಪ್ರೇಕ್ಷೆ,ಪೂರ್ವಾಗ್ರಹಗಳ ಸೋಂಕೂ ಇಲ್ಲದೆ ಚಿತ್ರಿಸುವುದು ಸಮಾಜಮುಖಿ ಬರಹಗಾರನಿಗೆ ಮಾತ್ರ ಸಾಧ್ಯ. ಸಾಹಿತಿಗಳು ಸಾಮಾಜಿಕ ಬದ್ಧತೆಯನ್ನು ಹೊಂದಿದವರಾಗಿದ್ದು, ವಸ್ತುನಿಷ್ಠವಾಗಿ ಚಿಂತಿಸುವ ಬರೆಯುವ ಹಾಗೂ ಜನಸಾಮಾನ್ಯರ ಬವಣೆಗಳ ಬಗ್ಗೆ ಬೆಳಕು ಚೆಲ್ಲುವ ದಾರ್ಶನಿಕರು ಎಂಬ ಗ್ರಹಿಕೆ ಓದುಗರಲ್ಲಿದೆ.ಒಬ್ಬ ಸೃಜನಶೀಲ ಬರಹಗಾರನ ಬರಹ ವೈಯಕ್ತಿಕವಾಗಿ ಹಾಗೂ ಸಾರ್ವಜನಿಕವಾಗಿ ಎರಡು ಸ್ತರಗಳಲ್ಲಿ ತೆರೆದುಕೊಳ್ಳುತ್ತದೆ. ತನ್ನ ಆತ್ಮ ಸಂತೋಷಕ್ಕೆ ಬರೆದುಕೊಂಡ ವೈಯಕ್ತಿಕ ಬರಹದ ಬಗ್ಗೆ ಸಾಹಿತಿಗೆ ಯಾವ ವಿಧವಾದ ಕಟ್ಟುಪಾಡುಗಳಿರುವುದಿಲ್ಲ. ಆದರೆ ಸಾರ್ವಜನಿಕ ಸಮಸ್ಯೆಗಳನ್ನು ತನ್ನ ಬರಹಕ್ಕೆ ವಸ್ತುವಿಷಯವನ್ನಾಗಿ ಆಯ್ಕೆ ಮಾಡಿಕೊಂಡು ರಚಿಸಿದ ಕಥೆ, ಕವಿತೆ, ಲೇಖನ ಯಾವುದೇ ಆಗಲಿ ಅದು ಚರ್ಚಿತ ವಿಷಯವಾಗಿ ಅನಾವರಣಗೊಳ್ಳುತ್ತದೆ. ಆದ್ದರಿಂದ ಸಾಹಿತಿಗಳು ಬರವಣಿಗೆಗೆ ಸೀಮಿತವಾಗಿ ನಿಷ್ಕ್ರೀಯರಾದರೆ ಸಾಲದು,ಜನ ಸಮುದಾಯದ ನೋವು ಕಷ್ಟಗಳಿಗೆ ಸ್ಪಂದಿಸುತ್ತ ಸಕ್ರಿಯರಾಗಿದ್ದರೆ ಅವರ ಬರವಣಿಗೆಗೆ ಬೆಲೆ ಬರುತ್ತದೆ.ಅಂತಹ ಮೌಲ್ಯಯುತ ಬದುಕನ್ನು ಬದುಕಿದವರು ವಿಷ್ಣು ನಾಯ್ಕರು. ಜಗದಗಲ ತುಂಬಿರುವ ನೋವಿನಲ್ಲಿ ಪೆನ್ನದ್ದು ಅರಳುವವು ಅಕ್ಷರವು ಕವನವಾಗಿ ನೋವು ಸಾಯುವವರೆಗೆ ಕವನ ಸಾಯುವುದಿಲ್ಲ ನಿಲ್ಲುವುದು ಸಾಂತ್ವನದ ಸಿಲುಬೆಯಾಗಿ. ವಿಷ್ಣು ನಾಯ್ಕರು ಒಂದು ವ್ಯಕ್ತಿಯಲ್ಲ,ಶಕ್ತಿ.ಒಂದು ಬೃಹತ್ ಸಂಸ್ಥೆ ಮಾಡುವ ಕಾರ್ಯವನ್ನು ಏಕಾಂಗಿಯಾಗಿ ಸಾಧಿಸಿದವರು.ತನ್ನ ಊರು, ಪರಿಸರ, ಅಂಕೋಲೆ, ಅಂಬಾರಕೊಡ್ಲು, ಉತ್ತರ ಕನ್ನಡ ಜಿಲ್ಲೆ, ಅಲ್ಲಿನ ಜನ ಸಮುದಾಯ ಇವುಗಳನ್ನೆಲ್ಲ ಪ್ರೀತಿ ಮತ್ತು ಕಾಳಜಿಯಿಂದ ನೋಡಿದವರು. ಇಲ್ಲಿನ ಜನರ ಒಡಲಾಳದ ನೋವನ್ನು, ತೀವ್ರ ಬಡತನವನ್ನು, ಬದುಕುವ ಛಲವನ್ನು, ಕಷ್ಟ-ಸುಖ- ಸಮೃದ್ಧಿಗಳನ್ನು ಕಣ್ಣಾರೆ ಕಂಡವರು ಜನಸಮುದಾಯದ ಜೊತೆಗೆ ಒಂದಾಗಿ ಬೆರೆತು ಮನುಷ್ಯನ ಬದುಕು ಹಸನಾಗಲು ನಿರಂತರವಾಗಿ ಚಿಂತಿಸಿದವರು.ಅವರು ಕೇವಲ ಬರೆದವರಲ್ಲ, ಬರೆದಂತೆ ಬದುಕಿದವರು.ಬದುಕು ಮತ್ತು ಬರಹದಲ್ಲಿ ಅಭಿನ್ನತೆಯನ್ನು ರೂಢಿಸಿಕೊಂಡವರು.ಅವರಲ್ಲಿದ್ದ ಶ್ರದ್ಧೆ,ನಿಷ್ಠೆ,ಕಾರ್ಯತತ್ಪರತೆ,ಸಮಯಪ್ರಜ್ಞೆ,ಶಿಸ್ತು ಮುಂತಾದ ಗುಣಗಳು ಅವರನ್ನು ವಿಶಿಷ್ಟರಲ್ಲಿ ವಿಶಿಷ್ಟರನ್ನಾಗಿ ಪರಿಗಣಿಸುವಂತೆ ಮಾಡಿದ್ದವು. ಹೆಣ್ಣಿಗಾಗಿ ಸತ್ತವರು ಕೋಟಿ ಮಣ್ಣಿಗಾಗಿ ಸತ್ತವರು ಕೋಟಿ ಹೊನ್ನಿಗಾಗಿ ಸತ್ತವರು ಕೋಟಿ ಗುಹೇಶ್ವರ ನಿನಗಾಗಿ ಸತ್ತವರನಾರನೂ ಕಾಣೆ ಎಂದು ಅಲ್ಲಮ ಪ್ರಭು ಹೇಳುತ್ತಾರೆ.ಇಂದು ಸಮಾಜದಲ್ಲಿ ಅನೇಕರು ಸಮಾಜದ ಲೋಪ ದೋಷಗಳ ಮಾತನಾಡುತ್ತ ಕೇವಲ ತಮಗಾಗಿ ಮಾತ್ರ ಬದುಕುತ್ತಾರೆ.ಆದರೆ ಸಾಮೂದಾಹಿಕ ಸಾಮಾಜಿಕ ಹಿತವನ್ನು ಬಯಸಿ ಸಮಾಜಕ್ಕಾಗಿ ಬದುಕುವವರು ವಿರಳ.ಅಂತಹ ವಿರಳರಲ್ಲಿ ವಿಷ್ಣು ನಾಯ್ಕರು ಒಬ್ಬರು.ಒಂದರ್ಥದಲ್ಲಿ ವಿಷ್ಣು ನಾಯ್ಕರು ಹುಟ್ಟು ಹೋರಾಟಗಾರರು.ಬಡತನವನ್ನೇ ಹಾಸಿ ಹೊದ್ದುಕೊಂಡ ನಿರಕ್ಷರಿ ಅಪ್ಪ ಅವ್ವನ ಆರು ಮಕ್ಕಳಲ್ಲಿ ಒಬ್ಬನಾಗಿ,ಹಸಿವು,ಬಡತನ,ಮೂಢನಂಬಿಕೆಗಳ ವಿರುದ್ಧ ಸೆಣೆಸುತ್ತ, ಬಾಲ್ಯದಿಂದಲೂ ಹೋರಾಟವನ್ನೇ ಮೈಗೂಡಿಸಿಕೊಂಡು ಬೆಳೆದು ಬಂದವರು.ಮುಂದೆ ಈ ಹೋರಾಟದ ಮನೋಭಾವವೇ ಅವರ ಸಾರ್ವಜನಿಕ ಬದುಕಿನ ಭಾಗವಾಗಿ ಬೆರೆತು ಹೋಯಿತು.ಅದನ್ನು ಜನಪರವಾಗಿ ಬಳಸಿಕೊಂಡು ಬೆಳೆಸಿಕೊಂಡು ಜನರು ನೋವಿಗೆ ಮಿಡಿಯುವ ಪ್ರಾಣಮಿತ್ರನಂತಾದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನಕರ ದೇಸಾಯಿ ಅವರ ನೇತೃತ್ವದಲ್ಲಿ 'ಉಳುವವನಿಗೇ ನೆಲೆದೊಡೆತನ' ಎಂಬ ಬೇಡಿಕೆ ಮುಂದಿಟ್ಟು ನಡೆದ ರೈತ ಆಂದೋಲನದಲ್ಲಿ ಬಡ ರೈತನ ಮಗನಾದ ವಿಷ್ಣು ನಾಯ್ಕ ಅವರು ತಮ್ಮ ೧೩ನೇ ವಯಸ್ಸಿನಲ್ಲೇ ವಿದ್ಯಾರ್ಥಿ ಹೋರಾಟಗಾರನಾಗಿ - ಪ್ರವೇಶಿಸಬೇಕಾದ ಸಂದರ್ಭ ಎದುರಾಯಿತು. ಆ ಹದಿಹರೆಯದಲ್ಲೇ ದೇಸಾಯಿಯವರ ರೈತ ಚಳುವಳಿಯ ನಿಷ್ಠಾವಂತ ಕಾರ್ಯಕರ್ತನಾಗಿ ಸೇರಿದ ಇವರು ೧೯೫೭ ರಿಂದ ೧೯೭೧ನೇ ಇಸವಿಯವರೆಗೆ ಹೋರಾಟದ ಕೊನೆಯ ದಿನಗಳವರೆಗ ಛಲ ಬಿಡದೆ ತಮ್ಮನ್ನು ತೊಡಗಿಸಿಕೊಂಡರು.ಅವರು ಕೆಂಪುಬಾವುಟ ಹಿಡಿದ ಕಾಲದಲ್ಲಿ 'ಸಮಾಜವಾದ ಅಂದರೇನು' ಎಂಬುದೇ ಅವರಿಗೆ ತಿಳಿದಿರಲಿಲ್ಲ. ಅವರು ಈ ರೈತಜನಾಂದೋಲನದಲ್ಲಿ ತೊಡಗಿಸಿಕೊಂಡದ್ದಕ್ಕೆ ಕಾರಣಗಳಿವೆ. ಅವರು ಹುಟ್ಟುವುದಕ್ಕಿಂತ ಮೊದಲೇ, ಅವರು ಹುಟ್ಟಿದ ಹಳ್ಳಿಯಾದ ಅಂಬಾರಕೊಡ್ಲದ ಪರಿಸರದಲ್ಲಿಯೇ ಆ ಹೋರಾಟದ ಗಾಳಿ ಇತ್ತು. ಗ್ರಾಮೀಣ ಭಾಗದಲ್ಲಿ ಈ ಹೋರಾಟವನ್ನು ಕುರಿತ ಮೊದಲ ಬೃಹತ್ ಸಭೆ ನಡೆದದ್ದೇ ಅವರ ಊರು ಅಂಬಾರಕೊಡ್ಲದಲ್ಲಿ-ಅವರು ಹುಟ್ಟುವುದಕ್ಕಿಂತ ನಾಲ್ಕುವರ್ಷ ಮೊದಲು,-೧೯೪೦ರಲ್ಲಿ. ಭೂಮಾಲಿಕವರ್ಗದವರ ಪಿತೂರಿ ಕಾರಣವಾಗಿ, ದಿನಕರ ದೇಸಾಯಿಯವರಿಗೆ 'ಹಾವಳಿ ಮಂಜ' ಎಂದು ಕುಖ್ಯಾತಿಯ ನಾಮಕರಣ ಮಾಡಿ, ವರ್ಗಕಲಹ ಹುಟ್ಟುಹಾಕುತ್ತಿರುವವರೆಂಬ ಆರೋಪ ಮಾಡಿ, ಅವರನ್ನು ಗಡಿಪಾರು ಶಿಕ್ಷೆಗೆ ಆಗಿನ ಬ್ರಿಟಿಷ್ ಸರ್ಕಾರ ಗುರಿಪಡಿಸಿದ್ದು ಅದೇ ವರ್ಷ. ಈ ರೈತ ಹೋರಾಟವೇ ಕಾವು ಕೊಟ್ಟು ವಿಷ್ಣುನಾಯ್ಕರ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಪ್ರಜ್ಞೆಯನ್ನು ಹೊರೆಸಿ, ಮೊಳಕೆಯೊಡೆಸಿ ಬೆಳೆಸಿದ್ದು. ಅವರು ಸಮಾಜವಾದವನ್ನೋ ಸಮತಾವಾದವನ್ನೋ ಅಧ್ಯಯನ ಮಾಡಿ ಪಡೆದ ತಿಳಿವು ಮತ್ತು ಪ್ರೇರಣೆಯಿಂದ ಈ ಹೋರಾಟಕ್ಕೆ ಪ್ರವೇಶಿಸಿದವರಲ್ಲ. ಈ ರೈತ ಹೋರಾಟದೊಂದಿಗೆ ಕೂಡಿಕೊಳ್ಳುವುದು ಅವರಿಗೆ ಒಂದು ತಾತ್ಕಾಲಿಕ ಉಮೇದಿಯ ವೇಷವೋ ಆವೇಶವೋ ಆಗಿರಲಿಲ್ಲ. ಈ ಹೋರಾಟ ಅವರ ಒಡಲ ಉರಿಹಸಿವೆಗೆ ದನಿಕೊಡುವ ಒಂದು ಸಹಜ ಬೆಳವಣಿಗೆಯಾಗಿತ್ತು. ಮನೆಯಲ್ಲಿ ಎರಡು ಹೊತ್ತಿನ ತುತ್ತನ್ನಕ್ಕೂ ಗತಿಯಿಲ್ಲದ ಕುಟುಂಬ ಅವರದಾಗಿತ್ತು. ಇರುವ 25 ಗುಂಟೆ ಗೇಣಿ ಜಮೀನಿನಲ್ಲಿ ವರ್ಷವಿಡೀ ಕಷ್ಟಪಟ್ಟು ದುಡಿದ ಪ್ರಯುಕ್ತ ಬೆಳೆದು ನಿಂತ ಪೈರಿನಲ್ಲಿ ಸರಿ ಅರ್ಧಭಾಗ ಒಡೆಯನ ಮನೆಗೆ-ಅಳೆಯಬೇಕಾಗುತ್ತಿತ್ತು. ನೈಸರ್ಗಿಕ ಕ್ಷಾಮವೋ, ಅತಿವೃಷ್ಟಿಯೋ ಉಂಟಾಗಿ ಬೆಳೆ ನಾಶವಾದರೂ 'ಗೇಣಿ' ಎಂಬ ಹೆಸರಿನಲ್ಲಿ ಭೂಮಾಲಿಕರ ಮನೆಗೆ ಅಳೆಯಬೇಕಾದುದನ್ನು ಅಳೆಯದಿದ್ದರೆ ಅದನ್ನು ಭೂ ಮಾಲೀಕ 'ನಗದುಸಾಲ' ಎಂದು ಪರಿಗಣಿಸಿ ಛಾಪಾ ಕಾಗದದಲ್ಲಿ ಬರೆದು ಸಹಿ ಪಡೆಯುತ್ತಿದ್ದರು. ಹೀಗೆ ಬರೆಯಿಸಿಕೊಂಡ ಹಣಕ್ಕೆ ಬಡ್ಡಿಯಾಕರಣೆಯಾಗುತ್ತಿತ್ತು. ಅಸಲು ಬಡ್ಡಿ ಬೆಳೆಯುತ್ತಿದ್ದಂತೆ ಒಂದುದಿನ ಮನೆಜಪ್ತಿ ವಾರಂಟನ್ನು ಎದುರಿಸಬೇಕಾಗುತ್ತಿತ್ತು. ಒಂದುಕಡೆ ನಿರುಮ್ಮಳ ಊಟಕ್ಕಿಲ್ಲದ ನೋವು, ಇನ್ನೊಂದೆಡೆ ಯಾವಾಗ ಮನೆ ಜಪ್ತಿಗೆ ಬರುವುದೋ ಎಂಬ ಆತಂಕ. ಇಂಥ ನಿರಂತರ ನೋವು- ನಷ್ಟಗಳಲ್ಲಿ ನರಳಿದ ಬಹಳಷ್ಟು ಕುಟುಂಬಗಳಲ್ಲಿ ಅವರ ಕುಟುಂಬವೂ ಒಂದಾಗಿತ್ತು.ಇಂತಹ ಸಂದರ್ಭದಲ್ಲಿ ದುಡಿಯುವ ರೈತನಿಗೆ ಅವನ ಜಮೀನಿನ ಮಾಲೀಕತ್ವದ ಹಕ್ಕು ಬರಬೇಕೆಂದು ಚಳವಳಿ ಆರಂಭವಾದಾಗ ಯಾವ ಜಾಗೃತ ಮನಸ್ಸು ಸುಮ್ಮನೆ ಇರಲು ಸಾಧ್ಯ?... ಮುಲ್ಕಿ ಮುಗಿಸಿ ಹೈಸ್ಕೂಲು ಸೇರುತ್ತಿರುವಾಗಲೇ ಕೆಂಪುಬಾವುಟ ಕೈಗೆ ಬಂದಿತ್ತು. ಶ್ರಮಜೀವಿಗಳ ಒಕ್ಕಟ್ಟು ಮತ್ತು ಹೋರಾಟ ಅವರ ಕಣ್ಮುಂದೆ ಇರುವ ನೆಮ್ಮದಿಯ ಬದುಕಿನ ದಾರಿಗಳಾಗಿದ್ದವು. ಹೈಸ್ಕೂಲು ಮುಗಿಸುವುದರೊಳಗಾಗಿ ಅವರ ಹೆಸರು ರೈತಸಂಘಟನೆಯಲ್ಲಿ-ದಿನಕರ ದೇಸಾಯಿ, ವಿಜಯಾ ನಾಡಕರ್ಣಿ ದಯಾನಂದ ನಾಡಕರ್ಣಿ, ಗಿರಿಪಿಕಳೆ, ಶಂಕರ ಕೇಣಿ, ಅಮ್ಮೆಂಬಳ ಆನಂದ, ಗಂಗಮ್ಮ ಅವರ ಗಮನ ಸೆಳೆಯುವಂತಾಯಿತು.ಅದರಿಂದಾಗಿ ಹತ್ತು-ಹಲವು ರೈತಪರವಾದ ಸಭೆ-ಸಮಾರಂಭಗಳಲ್ಲಿ ಅವರು ನಿರಂತರ 13 ವರ್ಷಗಳವರೆಗೆ ತೊಡಗಿಸಿಕೊಂಡು ಸಮಚಿತ್ತದಿಂದ ಎಲ್ಲ ಕಠಿಣ ಪ್ರಸಂಗಗಳನ್ನು ಎದುರಿಸಿದ್ದರು, ಚುನಾವಣೆಗಳಲ್ಲಿ ವಹಿಸಲಾಗುತ್ತಿದ್ದ ಹೊಣೆಗಾರಿಕೆಗಳನ್ನೆಲ್ಲ ನಿಭಾಯಿಸಿದ್ದರು, 13 ವರ್ಷಗಳ ಆ ಸುದೀರ್ಘ ಹೋರಾಟ ಅವರ ಪಾಲಿನ ಸಾರ್ಥಕ ಬದುಕಿನ ಸ್ಮರಣಾರ್ಹ ದಿನಗಳಾಗಿವೆ. ಇಂತಹ ಬದ್ಧತೆಯ ಉಳ್ಳ ಹೋರಾಟಗಾರರು ಶ್ರಮದ ಫಲವಾಗಿಯೇ ಸರ್ಕಾರ ಜಮೀನು ರಹಿತ ಬಡ ರೈತರಿಗೆ ಸಾಗುವಳಿ ಯೋಗ್ಯ ಒಂದು ಲಕ್ಷ ಎಕರೆ ಅರಣ್ಯ ಜಮೀನನ್ನು ಬಿಟ್ಟು ಕೊಡುವ ವಾಗ್ದಾನ ಮಾಡಿತು.ಇದು ನಿಜವಾಗಿ ಜನಪರ ಹೋರಾಟದ ವಿಜಯವಾಗಿತ್ತು. ಇದೇ ಸಮಯದಲ್ಲಿ ಸಮಾಜವಾದಿ ನಿಲುವಿನಿಂದ ಪ್ರಭಾವಿತರಾಗಿ, ತಮ್ಮ ಸ್ವಂತ ಊರಿನಲ್ಲಿ ಸಮಾಜವಾದಿ ಯುವಕ ಸಂಘವನ್ನು ಹುಟ್ಟು ಹಾಕಿ ಜನಪರವಾದ ಕಾರ್ಯಕ್ಕೆ,ಜನಜಾಗ್ರತಿ ಅಭಿಯಾನಕ್ಕೆ ಅಲ್ಲಿನ ಯುವಕರನ್ನು ಸಂಘಟಿಸಿದರು. ಅದರ ಮೂಲಕವೇ ಊರಿಗೆ ಅಗತ್ಯವಿರುವ ರಸ್ತೆ, ನೀರು, ದಾರಿದೀಪ, ಶಾಲೆ ಮುಂತಾದ ಅಭಿವೃದ್ಧಿಗಾಗಿ ತೊಡಗಿಸಿಕೊಂಡರು. ನಾಲ್ಕಡಿ ಅಗಲಳತೆಯ ಅಂಬಾರಕೊಡ್ಡದ ರಸ್ತೆಗಳೆಲ್ಲ ಅಗಲೀಕರಣಗೊಂಡು ವಾಹನ ಸಂಚಾರಕ್ಕೆ ಅನುಕೂಲವಾದುದು ಆಗಲೇ. ಶ್ರಮದಾನ, ಮೆರವಣಿಗೆ, ಭಾಷಣ ಮುಂತಾದ ಕಾರ್ಯಕ್ರಮಗಳಿಗೂ ನೇತೃತ್ವ ನೀಡಿದರು. ಜೊತೆಗೆ ಊರ ಯುವಜನರ ಸಾಂಸ್ಕೃತಿಕ ಚಟುವಟಿಕೆಗಳಿಗೂ ಪ್ರೋತ್ಸಾಹಿಸಿದರು.ಈ ಯುವಕ ಸಂಘದಿಂದ ಪ್ರೇರಿತರಾಗಿ ಸುತ್ತಲಿನ ಹಳ್ಳಿಗಳಲ್ಲಿಯೂ ಯುವಕ ಸಂಘಗಳು ಹುಟ್ಟಿಕೊಂಡು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು ವಿಷ್ಣು ನಾಯ್ಕರ ಜನಪರ ಕಾಳಜಿಯ ಯಶಸ್ಸು ಎಂದು ಹೇಳಬಹುದು. ಸಮಾಜದ ಏಕತೆ ಮತ್ತು ಸಾಮರಸ್ಯಕ್ಕೆ ವಿಷ್ಣು ನಾಯ್ಕರು ನೀಡಿದ ಕೊಡುಗೆ ಗಮನಾರ್ಹವಾದದ್ದು. ದೇಶದಲ್ಲಿ ಕೋಮುಸೌಹಾರ್ದ ಹದಗೆಡುತ್ತಿದ್ದ ಸಮಯದಲ್ಲಿ ವಿಷ್ಣು ನಾಯ್ಕರು ಅಂಕೋಲೆಯ ಸಮಾನ ಮನಸ್ಕ ಸ್ನೇಹಿತರೊಂದಿಗೆ ಸೇರಿ, ಸರಕಾರಿ ಅಧಿಕಾರಿಗಳ ಸಹಕಾರವನ್ನೂ ಪಡೆದು ಅಂಕೋಲೆಯಲ್ಲಿ ಬೀದಿ ಕವಿಗೋಷ್ಠಿ ಹಾಗೂ ಒಂದು ಹನಿ ರಕ್ತ ಎಂಬ ಬೀದಿ ನಾಟಕ ಮುಂತಾದ ಚಟುವಟಿಕೆಗಳನ್ನು ನಡೆಸಿದರು. ವಿಚಾರವಾದಿಗಳ ವೇದಿಕೆಗಳನ್ನು ಬಳಸಿಕೊಂಡು ಭಾಷಣಗಳ ಮೂಲಕ, ಆಗಲೇ ಘಟಿಸಿ ಹೋದ ಅಹಿತಕರ ಘಟನೆಗೆ ಕಾರಣರಾದವರ ನಿಲುವನ್ನು ತರಾಟೆಗೆ ತೆಗೆದುಕೊಂಡರು. ಇದು ಅವರ ಪ್ರಗತಿಪರ ಜನಪರ ನಿಲುವಿನ ದೃಢತೆಯಾಗಿತ್ತು.ಇಂತಹುದೇ ಇನ್ನೊಂದು ಪ್ರಸಂಗದಲ್ಲಿ ಇಬ್ಬರು ವ್ಯಕ್ತಿಗಳ ನಡುವಿನ ವೈಯಕ್ತಿಕ ಜಗಳ ಕೆಲವರ ಪ್ರತಿಷ್ಠೆಯಿಂದಾಗಿ ಎರಡು ಸಮುದಾಯಗಳ ಮಧ್ಯೆ ವೈಷಮ್ಯವನ್ನು ಹುಟ್ಟುಹಾಕಿ ಅಂಕೋಲೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಂದರ್ಭದಲ್ಲಿ ಎದುರಾಗಿತ್ತು.ಇದು ಇಡೀ ಅಂಕೋಲೆಯ ಸಾಮರಸ್ಯವನ್ನು ಶಾಶ್ವತವಾಗಿ ಹದಗೆಡಿಸುವ ಆತಂಕಕಾರಿ ಬೆಳವಣಿಗೆಯಾಗಿತ್ತು. ಇಂತಹ ಬೆಳವಣಿಗೆ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಅರಿತ ವಿಷ್ಣು ನಾಯ್ಕರು ಎರಡೂ ಸಮುದಾಯದ ಹಿರಿಯರನ್ನು ಭೇಟಿಮಾಡಿ ಸಮಾಜದಲ್ಲಿ ಸಾಮರಸ್ಯವನ್ನು ಉಂಟು ಮಾಡಲು ಶ್ರಮಿಸಿದರು.ಆ ವೇಳೆಗೆ ಕೆಲವರು ಅವರ ಸೈಕಲ್ಲನ್ನು ತಡೆದು ಬೆದರಿಸಿದಾಗಲೂ ಅದಕ್ಕೆಲ್ಲ ಸೊಪ್ಪು ಹಾಕದೇ ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದರು.ಆದರೆ ಇದನ್ನೊಂದು ಹೋರಾಟವೆಂದು ಅವರೆಂದೂ ಬಿಂಬಿಸಿ ಕೊಂಡು ಎಲ್ಲಿಯೂ ದಾಖಲಿಸಿಲ್ಲ. ಇತಿಹಾಸದಲ್ಲಿ ಇಂತಹ ಕಹಿ ಘಟನೆಗಳು ಸ್ಥಾನ ಪಡೆದು ಮುಂದಿನ ತಲೆಮಾರಿಗೆ ತಪ್ಪು ಸಂದೇಶ ಹೋಗಬಾರದೆಂಬ ಸದುದ್ದೇಶ ಇದರ ಹಿಂದಿರುವಂತಿದೆ. ಅಂಕೋಲಾ ತಾಲೂಕಿನಲ್ಲಿ ೧೯೯೧ರಲ್ಲಿ ಸ್ಥಳೀಯ ಸಾಮಾಜಿಕ ಸೇವಾ ಸಂಸ್ಥೆಯಾದ ಕ್ರಿಸ್ತಮಿತ್ರ ಆಶ್ರಮದ ಸಹಯೋಗದಲ್ಲಿ ಪ್ರಾರಂಭಗೊಂಡ ಮದ್ಯಪಾನ ವಿರೋಧಿ ಅಂದೋಲನದಲ್ಲಿ ವಿಷ್ಣು ನಾಯ್ಕ ಅವರು ನಿರ್ವಹಿಸಿದ ಪಾತ್ರ ಬಹಳ ಮಹತ್ವದ್ದು. ಮದ್ಯಪಾನ ದುಶ್ಚಟಗಳಿಂದ ದೂರವಿರುವಂತೆ ಜನರಿಗೆ ತಿಳಿಹೇಳಲು ವಿಷ್ಣು ನಾಯ್ಕರು ಆ ಸಂದರ್ಭದಲ್ಲಿ ಬಳಸಿಕೊಂಡದ್ದು ಬೀದಿನಾಟಕಗಳ ಮಾಧ್ಯಮ. ಆ ಒಂದು ದಶಕದಲ್ಲಿ ಜಿಲ್ಲೆಯಾದ್ಯಂತ ಮದ್ಯಪಾನ ವಿರೋಧಿ ಅಂದೋಲನ ವ್ಯಾಪಿಸಿದ್ದರ ಹಿಂದೆ ವಿಷ್ಣು ನಾಯ್ಕ ಅವರು ಹುಟ್ಟು ಹಾಕಿದ 'ರಾಘವೇಂದ್ರ ರಂಗಸಂಗ'ದ ಪಾತ್ರ ಬಹಳ ಹಿರಿದು. ಮದ್ಯಪಾನದಿಂದ ಆಗುವ ವಿವಿಧ ಅನಾಹುತಗಳನ್ನು ಬಿಂಬಿಸುವ ಸರಾಯಿ ಸೂರಪ್ಪ ಎಂಬ ಬೀದಿನಾಟಕವನ್ನು ಸ್ವತಃ ಬರೆದು ನಿರ್ದೇಶಿಸಿ, ಜಿಲ್ಲೆಯ ಹಲವಾರು ಹಳ್ಳಿಗಳಿಗೆ ಹೋಗಿ ಅಭಿನಯಿಸಿದ ರೀತಿ ನಿಜಕ್ಕೂ ಪರಿಣಾಮಕಾರಿಯಾಗಿತ್ತು ಅದನ್ನು ನೋಡಿ ಮನವರಿಕೆ ಮಾಡಿಕೊಂಡ ಹಲವರು ಕುಡಿತದ ಚಟದಿಂದ ಹೊರಬಂದ ಉದಾಹರಣೆಗಳೂ ಇವೆ. ಅಂದು ವಯಸ್ಕರ ಶಿಕ್ಷಣ ಸಚಿವರಾಗಿದ್ದ ಶ್ರೀ ಪ್ರಭಾಕರ ರಾಣೆಯವರ ಒತ್ತಾಸೆಯ ಮೇರೆಗೆ ೯೦ರ ದಶಕದಲ್ಲಿ ರಾಜ್ಯಾದ್ಯಂತ ನಡೆದ ಸಂಪೂರ್ಣ ಸಾಕ್ಷರತಾ ಅಂದೋಲನದಲ್ಲಿ ವಿಷ್ಣು ನಾಯ್ಕ ಅವರು ತೊಡಗಿಸಿಕೊಂಡ ಪರಿ ಅವರ ಬದ್ಧತೆಯ ದ್ಯೋತಕವಾಗಿದೆ. ವಿಶೇಷವಾಗಿ ಸಾಕ್ಷರತಾ ಅಂದೋಲನದ ಪ್ರಾರಂಭದಲ್ಲಿ ವಾತಾವರಣ ನಿರ್ಮಾಣಕ್ಕಾಗಿರುವ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಕಲಾಜಾಥಾ ತಂಡಗಳ ಮುಂಚೂಣಿ ನಾಯಕರಾಗಿ ಜಿಲ್ಲೆಯ ಹನ್ನೊಂದು ತಾಲೂಕುಗಳಲ್ಲೂ ಮಿಂಚಿನ ಸಂಚಾರ ಕೈಕೊಂಡು ಅಕ್ಷರಾಭ್ಯಾಸದ ವಾತಾವರಣವನ್ನು ಗ್ರಾಮೀಣ ನಿರಕ್ಷರಿ ಜನತೆಯ ಮನಸ್ಸಿನಲ್ಲಿ ಮೂಡಿಸುವಲ್ಲಿ ಯಶಸ್ವಿಯಾದರು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಾಕ್ಷರತಾ ಕಾರ್ಯಕಾರಿಣಿ ಸಮಿತಿಯ ಕ್ರಿಯಾಶೀಲ ಸದಸ್ಯರಾಗಿ ತಮ್ಮ ಅಮೂಲ್ಯ ಸೇವೆ ಸಲ್ಲಿಸಿದರು. ಶಿಕ್ಷಣದಲ್ಲಿ ಭಾಷಾ ಮಾಧ್ಯಮದ ಕುರಿತಾಗಿ ನಡೆದ ಗೋಕಾಕ ಚಳುವಳಿಯ ಸಂದರ್ಭದಲ್ಲಿ ವಿಷ್ಣು ನಾಯ್ಕರು ತಾಲೂಕಿನ ಕನ್ನಡಾಭಿಮಾನಿ ಬಳಗದೊಂದಿಗೆ ಸೇರಿ ೨೧ ದಿನಗಳ ಸರದಿ ಉಪವಾಸ ಸತ್ಯಾಗ್ರಹಕ್ಕೆ ಬಲ ತುಂಬಿದರು. ಕನ್ನಡಾಭಿಮಾನ ಮೂಡಿಸಲು ರಾಜ್ಯಮಟ್ಟದಲ್ಲಿ ವಿಶೇಷ ಉಪನ್ಯಾಸ, ಸಾರ್ವಜನಿಕ ಜಾಥಾ ಮುಂತಾದವುಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡರು. ಗೋಕಾಕ ಚಳುವಳಿ ಸಂದರ್ಭದಲ್ಲಿ ಧಾರವಾಡದ ರಾಜ್ಯ ಕನ್ನಡ ಕ್ರಿಯಾ ಸಮಿತಿಯ ಕರೆಗೆ ಓಗೊಟ್ಟು ಧರಣಿಯಲ್ಲಿ ಪಾಲ್ಗೊಂಡರು. ಉತ್ತಮ ವಾಗ್ಮಿ,ಗಂಭೀರ ವ್ಯಕ್ತಿತ್ವ,ಪ್ರಖರ ವೈಚಾರಿಕ ನಿಲುವುಗಳನ್ನು ಹೊಂದಿದ್ದ ವಿಷ್ಣು ನಾಯ್ಕರು ತಮ್ಮ ಖಚಿತ ವಿಚಾರಗಳೊಂದಿಗೆ ಜಿಲ್ಲೆಯಲ್ಲಿ ನಡೆಯುವ ಯಾವುದೇ ತರದ ಸಾಮಾಜಿಕ ಹೋರಾಟವಿರಲಿ ಅಲ್ಲಿ ತಮ್ಮ ಸಹಭಾಗಿತ್ವವನ್ನು, ನೈತಿಕ ಬಲವನ್ನು ನೀಡುತ್ತಲೇ ಬಂದಿದ್ದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಆಗಾಗ ತಲೆ ಎತ್ತುವ ಪರಿಸರ ಸಂಬಂಧಿ ಹೋರಾಟಕ್ಕೆ ಭಾವಾವೇಶ ಬಿಟ್ಟು ವೈಜ್ಞಾನಿಕ ದೃಷ್ಟಿಕೋನದಿಂದ ಅಗತ್ಯಕ್ಕೆ ತಕ್ಕಷ್ಟು ನೈತಿಕ ಬೆಂಬಲ ನೀಡಿದವರಾಗಿದ್ದಾರೆ. ಜನಜೀವನಕ್ಕೆ ಮಾರಕವಾಗಬಹುದಾದಂತ ಅಣು ಉತ್ಪನ್ನ ಕೇಂದ್ರ, ಉಷ್ಣ ವಿದ್ಯುತ್ ಸ್ಥಾವರ, ನೌಕಾನೆಲೆ, ಗಣಿ ಉದ್ಯಮ ಮುಂತಾದವುಗಳನ್ನು ತಾತ್ವಿಕ ನೆಲೆಯಲ್ಲಿ ವಿರೋಧಿಸುವುದರ ಜೊತೆಗೆ ಪರಿಸರ ಸ್ನೇಹಿ ಅಭಿವೃದ್ಧಿಗಳಾದ ಪ್ರವಾಸೋದ್ಯಮ, ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗ ಮುಂತಾದ ಹಲವು ಜನೋಪಯೋಗಿ ಯೋಜನೆಗಳ ಅನುಷ್ಠಾನಕ್ಕಾಗಿ ಒತ್ತಾಯಿಸುತ್ತಲೇ ಬಂದಿದ್ದರು.ಇಂತಹ ಕ್ರಿಯಾಶೀಲ,ಸೃಜನಶೀಲ ವ್ಯಕ್ತಿತ್ವದ ವಿಷ್ಣು ನಾಯ್ಕರ ಅಗಲುವಿಕೆಯಿಂದ ಜಿಲ್ಲೆಯ ಜನಪರ ಚಳುವಳಿ ಬಡವಾಗಿದೆಯೆಂದು ಹೇಳಬಹುದು.

ಬುಧವಾರ, ಮಾರ್ಚ್ 1, 2023

ಮರೆಯಾದ ಬುಡಕಟ್ಟು ಭಾಷೆ

ತ್ರಿಪುರ ರಾಜ್ಯದ ಬುಡಕಟ್ಟು ಭಾಷೆಗಳಲ್ಲಿ ಒಂದಾದ `ಸೈಮರ್~ನ ಕಥೆ-ವ್ಯಥೆ ಇದು.ಇನ್ನು ಕೆಲವೇ ವರ್ಷಗಳಲ್ಲಿ ಅದು ಜಗತ್ತಿನಿಂದ ನಿರ್ಗಮಿಸುವುದು ಖಚಿತ! ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ಕೇವಲ ನಾಲ್ಕು ಮಾತ್ರ ಎಂದು ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ (ಸಿಐಐಎಲ್)2017ರಲ್ಲಿ ಅಧಿಕೃತವಾಗಿ ಘೋಷಿಸಿದೆ.ಕೊನೆಯುಸಿರೆಳೆಯುತ್ತಿರುವ ಈ ಭಾಷೆಯ ಅಂತಿಮ ಕೊಂಡಿಯಾಗಿರುವ 70 ವರ್ಷದ ಸುಕೃತಾಂಗ್ ಸೈಮ‌ ಅವರನ್ನು ಸಿಐಐಎಲ್ ತಂಡವು ಇಲ್ಲಿಗೆ ಕರೆದುಕೊಂಡು ಬಂದು ಈ ಭಾಷೆಯಲ್ಲಿರುವ ಜ್ಞಾನ, ಜನಪದ, ಆಚಾರ, ವಿಚಾರಗಳನ್ನು ದಾಖಲಿಸಿಡಲು ಪ್ರಯತ್ನಿಸಿದೆ. . ತ್ರಿಪುರ ರಾಜ್ಯದ ದಲಾಯ್ ಜಿಲ್ಲೆಯ ಘಂಟಾಚಲ್ ಕುಗ್ರಾಮದಲ್ಲಿರುವ `ಹಲಂ' ಜನಾಂಗದಲ್ಲಿ `ಸೈಮರ್' ಉಪಪಂಗಡದ ವ್ಯಕ್ತಿ ಆತ. ಸದ್ಯ ಈ ಭಾಷೆ ಮಾತನಾಡುವ ನಾಲ್ಕು ಕುಟುಂಬಗಳಲ್ಲಿ ಸುಕೃತಾಂಗ ಹಿರಿಯ ವ್ಯಕ್ತಿ. ತ್ರಿಪುರಾದ ಬೊರಕ್ ಕುಕುಬೈ ಬೊಸಾಂಗ್ ಸರ್ಕಾರೇತರ ಸಂಸ್ಥೆಯ ಅಧ್ಯಕ್ಷ ನಂದಕುಮಾರ್ ದೇವವರ್ಮ ಅವರು ಭಾಷಾ ಮಂದಾಕಿನಿ ಕಾರ್ಯದ ಅಂಗವಾಗಿ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಅವರು ಸಿಐಐಎಲ್‌ಗೆ ಈ ಸಂಗತಿಯನ್ನು ತಿಳಿಸಿದ ನಂತರ ಸೈಮರ್ ಭಾಷೆಯ ಅಧ್ಯಯನ ಆರಂಭವಾಗಿದೆ. ಸುಕೃತಾಂಗ್‌ಗೆ ಸೈಮರ್ ಭಾಷೆ ಹೊರತುಪಡಿಸಿ ಬೇರೆ ಯಾವುದೇ ಭಾಷೆ ಬರುವುದಿಲ್ಲ. ಅವರ ಭಾವನೆ ಮತ್ತು ತಮ್ಮ ಸಂಶೋಧನೆಯ ಕುರಿತು ನಂದಕುಮಾರ್ ವಿವರಿಸಿದ ಅಂಶಗಳು ಹೀಗಿವೆ; ಸೈಮರ್ ಕುಟುಂಬಗಳು ಕೂಲಿ ಮಾಡಿಕೊಂಡು ಜೀವನ ಸಾಗಿಸುವವರು. ಬಡತನ ರೇಖೆಗಿಂತ ಕೆಳಗಿರುವ ಈ ಜನಾಂಗವು ಅಳಿವಿನಂಚಿಗೆ ತಲುಪಲು ಸಾಮಾಜಿಕ, ಆರ್ಥಿಕ, ಆಧುನಿಕ ಕಾರಣಗಳಿವೆ. 2009ರಲ್ಲಿ 25 ಮಂದಿ ಈ ಭಾಷೆ ಬಳಕೆ ಮಾಡುತ್ತಿದ್ದರು. ಇದೀಗ ಕೇವಲ ನಾಲ್ಕ ಜನರು ಸೈಮರ್ ಭಾಷೆ ಬಳಸುತ್ತಿದ್ದಾರೆ. ಬಡತನದ ಕಾರಣದಿಂದ ದೂರದ ಊರುಗಳಿಗೆ ಉದ್ಯೋಗ ಅರಸಿ ಹಲವರು ಹೋಗಿದ್ದು, ವಿದ್ಯಾಭ್ಯಾಸಕ್ಕಾಗಿ ಕೆಲವರು ತಮ್ಮ ಮೂಲಸ್ಥಾನ ತೊರೆದಿದ್ದಾರೆ. ಲಿಂಗಾನುಪಾತವು ಅಸಮತೋಲನವಾಗಿದ್ದು ಸೈಮರ್ ಭಾಷೆಯ ಅಳಿವಿಗೆ ಮುಖ್ಯ ಕಾರಣಗಳು. ಸೈಮರ್ ಭಾಷೆ ಬಳಕೆ ಮಾಡುತ್ತಿದ್ದವರು ಚದುರಿ ಹೋಗಿದ್ದಾರೆ. ಈ ಜನಾಂಗದ ವ್ಯಕ್ತಿಯೊಬ್ಬ ಮದುವೆಯಾಗುವ ಮಹಿಳೆ ಮತ್ತೊಂದು ಭಾಷೆ ಮಾತನಾಡುತ್ತಾಳೆ. ಇವರಿಗೆ ಜನಿಸುವ ಮಗು ಇನ್ನೊಂದು ಭಾಷೆಯನ್ನು ಕಲಿಯುತ್ತದೆ. ಹೀಗಾಗಿ ಸೈಮರ್ ಭಾಷೆ ಗೊತ್ತಿರುವ ಮಂದಿ ಮಾತ್ರ ಪರಸ್ಪರ ಮಾತನಾಡಿಕೊಳ್ಳುತ್ತಾರೆ. ಇದೀಗ ವಲಸೆ ಹೆಚ್ಚಳವಾಗಿರುವುದರಿಂದ ಈ ರೂಢಿಯೂ ತಪ್ಪಿಹೋಗಿದೆ. ಹಲಂ ಜನಾಂಗದಲ್ಲಿ ಹಲವು ಉಪಪಂಗಡಗಳಿದ್ದು, ಪ್ರತಿಯೊಂದರಲ್ಲಿಯೂ ವಿವಿಧ ಶೈಲಿಗಳ ಭಾಷಾ ಬಳಕೆಯಿದೆ. ಅವುಗಳಲ್ಲಿ ಸ್ವಲ್ಪಮಟ್ಟಿನ ಅಂತರವಿದೆ. ಆದರೆ ಅಪ್ಪಟ ಸೈಮ‌ರ್ ಭಾಷೆಯನ್ನು ಅರ್ಥ ಮಾಡಿಕೊಳ್ಳುವವರೂ ಕಡಿಮೆಯಾಗುತ್ತಿದ್ದಾರೆ. ಉದ್ಯೋಗ, ವಿವಾಹ ಕಾರಣಗಳಿಗಾಗಿ ಸೈಮರ್ ಜನಾಂಗದ ಹಲವರು ಇನ್ನಿತರ ಪಂಗಡಗಳಿಗೆ ಮತಾಂತರಗೊಂಡಿದ್ದಾರೆ. ಅರಣ್ಯದಲ್ಲಿಯೇ ಬದುಕುವ ಈ ಜನಾಂಗವು ಮೂಲತಃ ಮಾಂಸಾಹಾರಿಗಳಾದರೂ, ರೊಟ್ಟಿ, ಚಪಾತಿಯಂತಹ ಪದಾರ್ಥಗಳನ್ನು ಸೇವಿಸುವುದಿಲ್ಲ. ಅನ್ನವೇ ಮುಖ್ಯ ಆಹಾರ. ಈ ಪಂಗಡದಲ್ಲಿಯೂ ಹಲವು ಜನಪದ ಗೀತೆಗಳು, ಆಚರಣೆಗಳು ಇವೆ. ತ್ರಿಪುರಾದಲ್ಲಿ ನಮ್ಮ ಸಮೀಕ್ಷೆಯ ಪ್ರಕಾರ 50 ಭಾಷೆಗಳಿವೆ. ಈಗಾಗಲೇ ಅಳಿದು ಹೋದ ಭಾಷೆಗಳ ಕುರಿತು ಹೆಚ್ಚು ಮಾಹಿತಿಯಿಲ್ಲ ಎಂದು ನಂದಕುಮಾರ್ ಹೇಳುತ್ತಾರೆ. `ಭಾಷೆಯನ್ನಂತೂ ಉಳಿಸಿ ಬೆಳೆಸುವುದು ಕಷ್ಟ. ಆ ಭಾಷೆಯಲ್ಲಿರುವ ಜ್ಞಾನ, ಜನಪದ ಮತ್ತಿತರ ಸಂಗತಿಗಳನ್ನು ದಾಖಲಿಸಿ, ಮುಂದಿನ ಸಂಶೋಧಕರಿಗಾಗಿ ಇಡುವುದು ನಮ್ಮ ಉದ್ದೇಶ. ಯಾವುದೇ ಒಂದು ಭಾಷೆಯಲ್ಲಿ ಆಯಾ ಜನಾಂಗದ ಸಂಸ್ಕೃತಿ, ಪರಂಪರೆ, ಅಸ್ತಿತ್ವಗಳು ಇರುತ್ತವೆ ಎಂದು ಈಶಾನ್ಯ ರಾಜ್ಯಗಳ ಆದಿವಾಸಿ ಮತ್ತು ಅಳಿವಿನಂಚಿನ ಭಾಷೆಗಳ ಮುಖ್ಯಸ್ಥ ಡಾ.ದೇವಿಪ್ರಸಾದ್ ಶಾಸ್ತ್ರಿ ಹೇಳುತ್ತಾರೆ. ತಮ್ಮ ಜನಾಂಗದ ಗತಿ ಏನಾಗಲಿದೆ ಎಂಬ ಕಹಿಸತ್ಯ ಗೊತ್ತಿದ್ದರೂ ಉಳಿಯುವಷ್ಟು ಉಳಿಯಲಿ ಉದ್ದೇಶದಿಂದ ಈಶಾನ್ಯ ರಾಜ್ಯದಿಂದ ದಕ್ಷಿಣದ ಮೈಸೂರಿಗೆ ಬಂದಿರುವ ಸುಕೃತಾಂಗ್ ಸಿಐಐಎಲ್‌ನರು ನೀಡಿದ ಸನ್ಮಾನ ಸ್ವೀಕರಿಸಿದ ನಂತರ `ನನ್ನ ಭಾಷೆ ವಿನಾಶವಾಗಲಿದೆ. ನಾವು ಎಲ್ಲವನ್ನೂ ಕಳೆದುಕೊಳ್ಳಲಿದ್ದೇವೆ..ದೇಶವಾಸಿಗಳು ನಮ್ಮ ಕೈಹಿಡಿಯಬೇಕು ಎಂದು ಕೂಗಿ ಹೇಳಿದ್ದು ತನ್ನ ಭಾಷೆಯ ಕುರಿತು ಅವನಿಗಿರುವ ಕಾಳಜಿಯ ಪ್ರತೀಕವಾಗಿತ್ತು. `ಸೈಮರ್ 'ಬುಡಕಟ್ಟು ಜನಾಂಗದಲ್ಲಿ ಹೆಣ್ಣು ಮಕ್ಕಳ ಸಂತಾನವೇ ಇಲ್ಲ. ಅನುವಂಶಿಕ ಕಾರಣಗಳಿಂದಾಗಿ ಈ ಜನಾಂಗದಲ್ಲಿ ತಲೆತಲಾಂತರದಿಂದ ಕೇವಲ ಪುತ್ರಸಂತಾನವಿರುವುದೇ ಈ ಭಾಷೆ ಮತ್ತು ಜನಾಂಗದ ಅಳಿವಿಗೆ ಕಾರಣವಂತೆ! ತ್ರಿಪುರಾದ ಬೊರಕ್ ಕುಕುಬೈ ಬೊಸಾಂಗ್ ಸರ್ಕಾರೇತರ ಸಂಸ್ಥೆಯ ಅಧ್ಯಕ್ಷ ನಂದಕುಮಾರ್ ದೇವವರ್ಮ ಉದಾಹರಣೆ ಸಮೇತ ಈ ಮಾತನ್ನು ಪುಷ್ಟಿಕರಿಸಿದ್ದಾರೆ.`ಸುಕೃತಾಂಗ್ ಅವರ ತಾತನಿಗೆ ಒಬ್ಬ ಮಗ, ಅವರಿಗೆ ಸುಕೃತಾಂಗ್ ಏಕೈಕ ಪುತ್ರ, ಅವರಿಗೆ ಒಬ್ಬ ಮಗ ಮಾತ್ರ ಇದ್ದಾರೆ.ಇದು ಸೈಮರ್‌ನ ಪ್ರತಿಯೊಂದು ಕುಟುಂಬದಲ್ಲಿಯೂ ಕಂಡುಬರುತ್ತಿರುವ ಆಶ್ಚರ್ಯದಾಯಕ ಸಂಗತಿ. ಇದರಿಂದಾಗಿ ಬೇರೆ ಪಂಗಡಗಳ ಹೆಣ್ಣುಮಕ್ಕಳನ್ನು ಮದುವೆಯಾಗಿ ಬರುವ ಸಂಪ್ರದಾಯ ಇಲ್ಲಿದ್ದು, ಕ್ರಮೇಣ ಇದು ಭಾಷೆಯ ಅಳಿವಿಗೂ ಕಾರಣವಾಗಿದೆ.ಇದು ತಮ್ಮ ಸಂಶೋಧನೆಯಲ್ಲಿ ಕಂಡುಬಂದಿರುವ ಅಂಶ ಎಂಬುದು ಅವರ ಅಭಿಪ್ರಾಯ.

ತಾಯಿಯ ಛಲ

ಒಂದು ದಿನ ಮಗು ಥಾಮಸ್ ಆಲ್ವಾ ಎಡಿಸನ್ ಮನೆಗೆ ಬಂದು ತನ್ನ ತಾಯಿಯ ಕೈಗೆ ಒಂದು ಪತ್ರ ಕೊಡುತ್ತಾನೆ, ಅಮ್ಮಾ ನಮ್ಮ ಟೀಚರ್ ಈ ಪತ್ರವನ್ನು ನಿನಗೆ ಮಾತ್ರ ಕೊಡಲು ಹೇಳಿದ್ದಾರೆ ಎನ್ನುತ್ತಾನೆ. ಅದನ್ನು ಮಗನಿಗಾಗಿ ಗಟ್ಟಿಯಾಗಿ ಓದುತ್ತಾ ಆ ತಾಯಿಯ ಕಣ್ಣು ಒದ್ದೆಯಾಯಿತು :"ನಿಮ್ಮ ಮಗ ತುಂಬ ಬುದ್ಧಿವಂತನಿದ್ದಾನೆ.ನಮ್ಮ ಶಾಲೆ ಅವನ ಬುದ್ಧಿಮತ್ತೆಗೆ ತುಂಬಾ ಸಣ್ಣದು ಹಾಗೂ ಅವನಿಗೆ ಕಲಿಸಬಲ್ಲ ಅರ್ಹತೆ ನಮ್ಮ ಯಾವ ಉಪಾಧ್ಯಾಯರಿಗೂ ಇಲ್ಲ. ಆದುದರಿಂದ ಅವನ ವಿದ್ಯಾಭ್ಯಾಸವನ್ನು ನೀವೇ ಮನೆಯಲ್ಲಿ ಮಾಡಿಸುವುದು."ಅದಾಗಿ ತುಂಬಾ ವರ್ಷಗಳ ನಂತರ ಎಡಿಸನ್ ರ ತಾಯಿ ಮರಣಿಸುತ್ತಾರೆ.ಆಗ ಎಡಿಸನ್ ಪ್ರಪಂಚದ ಅಗ್ರಮಾನ್ಯ ವಿಜ್ಞಾನಿಗಳಲ್ಲಿ ಮೊದಲಿಗರಾಗಿರುತ್ತಾರೆ. ಆ ಸಂದರ್ಭದಲ್ಲಿ ತನ್ನ ತಾಯಿಯ ಪೆಟ್ಟಿಗೆಯಲ್ಲಿನ ಹಳೆಯ ವಸ್ತು ವಿಚಾರಗಳನ್ನು ಪರಿಶೀಲಿಸುತ್ತಿರುವಾಗ ಕಣ್ಣಿಗೆ ಬಿದ್ದ ಮಡುಚಿದ ಕಾಗದವೊಂದನ್ನು ಬಿಡಿಸಿ ನೋಡಿದರೆ ಅದರಲ್ಲಿ ಹೀಗೆ ಬರೆದಿರುತ್ತದೆ.: "ನಿನ್ನ ಮಗ ಒಬ್ಬ ಬುದ್ಧಿಮಾಂದ್ಯ, ಅವನನ್ನು ನಾವು ಇನ್ನು ಮುಂದೆ ಶಾಲೆಗೆ ಬರಗೊಡುವುದಿಲ್ಲ.ಅವನನ್ನು ಮನೆಯಲ್ಲಿಯೇ ಇಟ್ಟು ಕೊಳ್ಳುವದು.” ತನ್ನ ಮಗುವಿನ ಮೃದು ಮನಸ್ಸನ್ನು ನೋಯಿಸದಿರಲು ಅಂದು ವಿರುದ್ಧವಾಗಿ ಓದಿದ ತಾಯಿಯನ್ನು ನೆನೆದು ಎಡಿಸನ್ ರು ಗದ್ಗದಿತರಾಗುತ್ತಾರೆ.ಗಂಟೆಗಟ್ಟಲೆ ಬಿಕ್ಕಿ ಬಿಕ್ಕಿ ಅಳುತ್ತಾರೆ ಮತ್ತು ತಮ್ಮ ದಿನಚರಿಯಲ್ಲಿ ಹೀಗೆ ಬರೆಯುತ್ತಾರೆ:' ಥಾಮಸ್ ಅಲ್ವಾ ಎಡಿಸನ್ ಒಬ್ಬ ಬುದ್ಧಿಮಾಂದ್ಯ ಮಗು, ಆದರೆ ಅವನ ಶ್ರೇಷ್ಠ ಮಾತೆಯ ದೆಸೆಯಿಂದ ಅವನು ಶತಮಾನದ ಬುದ್ಧಿವಂತನಾಗುತ್ತಾನೆ." Mother is the First Teacher in our Life. ಜಗದ ಎಲ್ಲ ತಾಯಂದಿರಿಗೆ ನಮನಗಳು.

ಶನಿವಾರ, ಸೆಪ್ಟೆಂಬರ್ 24, 2022

ದೀಪಾವಳಿ

ದೀಪಾವಳಿ ಬೆಳಕಿನ ಹಬ್ಬ.ಇದು ಬರೀ ಹಬ್ಬವಲ್ಲ,ಹಬ್ಬಗಳ ಪರಂಪರೆ.ಕೆಲವು ಪ್ರದೇಶಗಳಲ್ಲಿ ಮೂರು ದಿನ,ಇನ್ನೂ ಕೆಲವು ಪ್ರದೇಶಗಳಲ್ಲಿ ಐದು ದಿನಗಳವರೆಗೆ ಈ ಹಬ್ಬವನ್ನು ಆಚರಿಸಲಾಗುತ್ತದೆ.ಆದ್ದರಿಂದ ದೀಪಾವಳಿಯನ್ನು ದೊಡ್ಡ ಹಬ್ಬವೆಂದು ಕರೆಯಲಾಗುತ್ತದೆ.ಹೆಚ್ಚು ಕಡಿಮೆ ನಮ್ಮ ದೇಶದಲ್ಲಿ ಜಾತಿ,ಭಾಷೆ,ಪ್ರದೇಶಗಳ ಹಂಗಿಲ್ಲದೇ,ಬಡವ- ಬಲ್ಲಿದ ಎಂಬ ಭೇದವಿಲ್ಲದೇ ಶ್ರದ್ಧೆ,ಭಕ್ತಿ ಮತ್ತು ಸಂಭ್ರಮದಿಂದ ಆಚರಿಸುವ ಹಬ್ಬ ಇದೊಂದೇ ಇರಬಹುದು. ದೀಪಾವಳಿ ಹಬ್ಬ ಶಾಸ್ತ್ರೀಯವೂ ಹೌದು,ಜಾನಪದೀಯವೂ ಹೌದು.ಈ ಹಬ್ಬಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ. ಸಂಪ್ರದಾಯದ ಆಯಾಮವೂ ಇದೆ.ದೀಪಾವಳಿಗೆ ಸಂಬಂಧಿಸಿದಂತೆ ನರಕಾಸುರನ ದುಷ್ಟತನದ ದಮನದ ಕತೆಯನ್ನೂ ಹೇಳಲಾಗುತ್ತದೆ.ಬಲೀಂದ್ರನ ತ್ಯಾಗದ ಪ್ರಸಂಗವೂ ಪ್ರಚಲಿತದಲ್ಲಿದೆ.ಹಬ್ಬದ ಸಂದರ್ಭದಲ್ಲಿ ಲಕ್ಷ್ಮಿಯನ್ನೂ ಆರಾಧಿಸಲಾಗುತ್ತದೆ.ಗೋವುಗಳನ್ನೂ ಪೂಜಿಸಲಾಗುತ್ತದೆ.ಅತ್ಯಂತ ವೈವಿಧ್ಯಪೂರ್ಣವಾಗಿ ಆಚರಿಸಲ್ಪಡುವ ದೀಪಾವಳಿ ಫಲವಂತಿಕೆಯನ್ನು ಸೂಚಿಸುವ ಸಿರಿವಂತಿಕೆಯ ಹಬ್ಬ.ಮುಂಗಾರು ಬೆಳೆ ಕೊಯ್ಲಿಗೆ ಬರುವ ಸಮಯದಲ್ಲಿ ಈ ಹಬ್ಬ ಬರುವುದು ವಿಶೇಷ. ಕೆಲ ಕಡೆಗಳಲ್ಲಿ ದೀಪಾವಳಿಯಿಂದ ಹೊಸ ವರ್ಷವೂ ಪ್ರಾರಂಭವಾಗುತ್ತದೆ. ಈ ಹಬ್ಬವನ್ನು ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ಮಲೆನಾಡಿನಲ್ಲಿ ಮನೆ ಮನೆಗೂ ದೀಪದ ಬೆಳಕು ಹಂಚುವ ಅಂಟಿಗೆ-ಪಂಟಿಗೆ ,ಬಯಲು ಸೀಮೆಯಲ್ಲಿ ದೀಪದ ಸುತ್ತಮುತ್ತ ಸಗಣಿಯಿಂದ ಬೊಂಬೆಗಳನ್ನು ಮಾಡಿ ಪೂಜಿಸುವ ಹಟ್ಟಿ ಹಬ್ಬ, ದಕ್ಷಿಣ ಕನ್ನಡದಲ್ಲಿ ಬಲಿ ಚಕ್ರವರ್ತಿಗೆ ಪೂಜೆ.ಉತ್ತರ ಕನ್ನಡದ ಕರಾವಳಿಯಲ್ಲಿ ಬೋರಜ್ಜಿ ಮತ್ತು ಬಲೀಂದ್ರ ಪೂಜೆ ಹೀಗೆ ವೈವಿಧ್ಯತೆಯ ನಡುವೆಯೂ ಸಂಭ್ರಮದ ಏಕತೆಯಿದೆ. ಆಶ್ವಯುಜ ಮಾಸದ ಕೊನೆ ಮತ್ತು ಕಾರ್ತಿಕ ಮಾಸದ ಪ್ರಾರಂಭದಲ್ಲಿ ಆಚರಿಸುವ ಈ ಹಬ್ಬವನ್ನು ಬೆಳಕಿನ ಹಬ್ಬ ಎಂದೇ ಕರೆಯಲಾಗುತ್ತದೆ.ಪ್ರಾಕೃತಿಕವಾಗಿ ಹಗಲು ಚಿಕ್ಕದಾಗುತ್ತಾ ರಾತ್ರಿ ದೀರ್ಘವಾಗಿ ಆವರಿಸುವ ಕಾಲವಿದು.ಅಮವಾಸ್ಯೆಯ ಕಾರಣದಿಂದ ಕತ್ತಲು ಇನ್ನೂ ದಟ್ಟವಾಗುವ ಈ ಸಮಯದಲ್ಲಿ ಮನೆ ಹಾಗೂ ಮನದಲ್ಲಿ ಕವಿದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ.ದೀಪಾವಳಿ ಎಂದರೆ ದೀಪಗಳ ಆವಳಿ ಅಂದರೆ ದೀಪಗಳ ಸಾಲು. ದೀಪಾವಳಿ ಎಂದಾಗ ಕಣ್ಣಮುಂದೆ ಬರುವುದೇ ಹಣತೆ ದೀಪಗಳ ಬೆಳಕು.ಹೀಗೆ ಈ ಹಬ್ಬದಲ್ಲಿ ಹಣತೆ,ದೀಪ,ಬೆಳಕಿಗೆ ಬಹಳ ಪ್ರಾಮುಖ್ಯತೆಯಿದೆ.ನಮ್ಮ ಸಂಸ್ಕೃತಿಯಲ್ಲಿ ಸಾಮಾನ್ಯವಾಗಿ ದೀಪ ಬೆಳಗುವ ಮೂಲಕವೇ ಯಾವುದೇ ಕೆಲಸವನ್ನು ಆರಂಭಿಸಲಾಗುತ್ತದೆ.ದೀಪಗಳನ್ನೇ ಇಟ್ಟು ದೀಪದಿಂದಲೇಬೆಳಗುತ್ತೇವೆ.ಹಾಗೆ ಬೆಳಗುವ ಬೆಳಕು ಸಾಮಾನ್ಯವಲ್ಲ,ಕವಿ ಕೆ.ಎಸ್.ನರಸಿಂಹ ಸ್ವಾಮಿಯವರ ಪ್ರಕಾರ "ಯಾವ ಚಿತ್‌ಶಕ್ತಿಯದು? ಸೂರ್ಯನಲಿ ಬೆಳಕಾಗಿ, ತಾರೆಯಲಿ ಹೊಳಪಾಗಿ, ಬೆಂಕಿಯಲಿ ಬಿಸಿಯಾಗಿ ಪ್ರವಹಿಸಿಹುದೋ, ಆ ದಿವ್ಯಶಕ್ತಿಯೇ ಈ ಮಣ್ಣ ಹಣತೆಯಲಿ ಹರಿಯುತಿರೆ, ಕಿರಿಹಣತೆ ಕಿರಿದಾದರೇನು? ಬೆಳಕ ಬೀರುವ ಶಕ್ತಿ ಹಿರಿದಲ್ಲವೇನು?" ಹಣತೆಯ ಗಾತ್ರಕ್ಕಿಂತ ಅದರಿಂದ ಹೊಮ್ಮುವ ಬೆಳಕು ಮುಖ್ಯ.ಆದ್ದರಿಂದಲೇ ಇಡೀ ಜಗತ್ತನ್ನು ಬೆಳಗುವ ಸೂರ್ಯನೇ ಆಗಬೇಕಾಗಿಲ್ಲ.ನಮ್ಮ ಸುತ್ತಲನ್ನು ಬೆಳಗುವ ಹಣತೆಯಾದರೂ ಸಾಕು ಎಂಬ ಮಾತಿನ ಮೂಲಕ ಬೆಳಕಿನ ಮಹತ್ವವನ್ನು ಹೇಳುತ್ತೇವೆ. ”ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನ್ನು” ಎಂಬ ಬಿ.ಎಂ.ಶ್ರೀಕಂಠಯ್ಯನವರ ಕವಿತೆ ದೀಪಾವಳಿ ಹಬ್ಬಕ್ಕೆ ಅರ್ಥಪೂರ್ಣವಾಗಿದೆ. ”ಅಸತೋಮಾ ಸದ್ಗಮಯಾ, ತಮಸೋಮಾ ಜ್ಯೋತಿರ್ಗಮಯ“ ಎಂಬ ಮಾತು ದೀಪಾವಳಿಯ ಸಂದೇಶವನ್ನೇ ಪ್ರತಿಫಲಿಸುತ್ತದೆ.ಇಲ್ಲಿ ಕತ್ತಲು ಅಂದರೆ ಕೇವಲ ಯಥಾರ್ಥದ ಕತ್ತಲು ಮಾತ್ರವಲ್ಲ,ಮನುಷ್ಯನಲ್ಲಿರುವ ಅಹಂಕಾರ, ಅಂಧಶ್ರದ್ಧೆ, ಅಜ್ಞಾನ ಎಲ್ಲವೂ ಹೌದು.ಅವನ ಬುದ್ಧಿ,ನಡತೆ,ಆಚಾರ,ವಿಚಾರಗಳಿಗೆ ಅಂಟಿಕೊಂಡಿರುವ ಈ ಕತ್ತಲೆ ದೂರವಾಗಬೇಕು.ಬದುಕಿನ,ಮನಸ್ಸಿನ ಎಲ್ಲ ನಕಾರಾತ್ಮಕ ಅಂಶಗಳು ನಿವಾರಣೆಯಾಗಬೇಕು.ಅಜ್ಞಾನದ ಕತ್ತಲು ದೂರವಾಗಿ ಸುಜ್ಞಾನದ ಬೆಳಕು ಎಲ್ಲ ಕಡೆಗಳಲ್ಲಿಯೂ ಹರಡಬೇಕು ಎಂಬ ಹಿರಿದಾದ ಸಂದೇಶ ದೀಪಾವಳಿ ಹಬ್ಬದ ಆಚರಣೆಯಲ್ಲಿದೆ. ಶ್ರೀಧರ ಬಿ.ನಾಯಕ

ಗುರುವಾರ, ಸೆಪ್ಟೆಂಬರ್ 15, 2022

ರಾಣೆಯವರ ನೆನಪಿನಲ್ಲಿ..

ಶ್ರೀ ಪ್ರಭಾಕರ ರಾಣೆಯವರು ನಿಧನರಾಗಿದ್ದಾರೆ.ಅದರೊಂದಿಗೆ ಕಾರವಾರದ ಇತಿಹಾಸದಲ್ಲಿ ಸಾತ್ವಿಕ ಅಧ್ಯಾಯವೊಂದು ಮುಕ್ತಾಯವಾಗಿದೆ.ಅವರು ಸುಸಂಸ್ಕೃತ,ಪ್ರಾಮಾಣಿಕ ಮತ್ತು ಅಧ್ಯಯನಶೀಲ ರಾಜಕಾರಣಿಯಾಗಿದ್ದರು.ಆದರೆ ರಾಜಕಾರಣಿಯಾಗಿ ಅವರು ಏನನ್ನೂ ಗಳಿಸಲಿಲ್ಲ.ಶಿಕ್ಷಣ ಪ್ರೇಮಿಯಾಗಿ ಲಕ್ಷಾಂತರ ಜನರು ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ.ಶರಣರ ಗುಣ ಮರಣದಲ್ಲಿ ನೋಡು ಎಂಬ ಮಾತು ಪ್ರಚಲಿತದಲ್ಲಿದೆ.ಸಾತ್ವಿಕರೊಬ್ಬರ ಸಾವಿನ ಸಂದರ್ಭದಲ್ಲಿ ಈ ಮಾತು ಸತ್ಯ ಅನ್ನಿಸುತ್ತದೆ.ಏಕೆಂದರೆ ಹುಟ್ಟು ಆಕಸ್ಮಿಕವಾದರೂ ಸಾವು ಖಚಿತ. ಹುಟ್ಟು ಸಂಭ್ರಮಕ್ಕೆ ಕಾರಣವಾದರೆ ಸಾವು ನಮ್ಮನ್ನು ಇನ್ನಿಲ್ಲದ ದುಃಖಕ್ಕೀಡು ಮಾಡುತ್ತದೆ. ಆದರೆ ಸಾವು ಜಗತ್ತಿಗೇ ತಿಳಿಯುವಂತಾಗಬೇಕು. ಅದು ನಿಜವಾದ ಬದುಕಿನ ಸಾರ್ಥಕತೆ. ವ್ಯಕ್ತಿ ತನ್ನ ಇಡೀ ಜೀವಮಾನದಲ್ಲಿ ಅಳವಡಿಸಿಕೊಂಡ ವ್ಯಕ್ತಿತ್ವದ ಪರಾಮರ್ಶೆ ಸಾವಿನ ಬಳಿಕ ನಡೆಯುತ್ತದೆ. ಆ ವ್ಯಕ್ತಿಯ ಸಾಧನೆ ಮತ್ತು ಸಾಮಾಜಿಕ ಕೊಡುಗೆಯ ಆಧಾರದ ಮೇಲೆ ಅವನ ಅಮರತ್ವ ಸಾಬೀತಾಗುತ್ತದೆ. ಅಂತಹ ಅಮರತ್ವ ಪಡೆದ ವ್ಯಕ್ತಿ ಪ್ರಭಾಕರ ರಾಣೆಯವರು.ಕೆಲವರು ಅವರಲ್ಲಿ ರಾಜಕಾರಣಿಯನ್ನು ಕಂಡರೆ ಇನ್ನು ಕೆಲವರು ಅವರಲ್ಲಿ ಹೋರಾಟಗಾರರನ್ನು ಕಾಣುತ್ತಾರೆ.ಮತ್ತೆ ಕೆಲವರು ದೃಷ್ಟಿಯಲ್ಲಿ ಅವರೊಬ್ಬ ಶಿಕ್ಷಣ ಪ್ರೇಮಿ.ಎಲ್ಲಕ್ಕಿಂತ ಮುಖ್ಯವಾಗಿ ಅವರು ಮಾನವೀಯ ಅಂತಃಕರಣವುಳ್ಳ ವ್ಯಕ್ತಿಯಾಗಿದ್ದರು.ಇನ್ನೊಬ್ಬರ ನೋವು ಸಂಕಷ್ಟಗಳನ್ನು,ಅಸಹಾಯಕತೆಯನ್ನು ಅರ್ಥಮಾಡಿಕೊಳ್ಳಬಲ್ಲವರಾಗಿದ್ದರು.ಆದ್ದರಿಂದಲೇ ಅವರ ಶಿಕ್ಷಣ ಸಂಸ್ಥೆಗಳಲ್ಲಿ ನೂರಾರು ಜನ ಜಾತಿ,ಮತ,ಭಾಷೆ,ಪ್ರದೇಶಗಳ ವ್ಯಾಪ್ತಿಯನ್ನು ಮೀರಿ ಉದ್ಯೋಗಸ್ಥರಾಗಲು ಸಾಧ್ಯವಾಯಿತು.ಯಾರ ಮೇಲೂ ದ್ವೇಷ-ಅಸಹನೆ ತೋರಿಸುವ ವ್ಯಕ್ತಿ ಅವರಾಗಿರಲಿಲ್ಲ.ನೀರು ತನ್ನಲ್ಲಿ ಮುಳುಗಿದವರಿಗೆ ಬದುಕಲು ಮೂರು ಅವಕಾಶಗಳನ್ನು ನೀಡುತ್ತದೆ.ಹಾಗೆಯೇ ರಾಣೆಯವರು ನನಗೂ ಮೂರು ಅವಕಾಶ ನೀಡಿದರು.ಅವರು ನೀಡಿದ ಎರಡು ಅವಕಾಶಗಳನ್ನು ನಾನು ಕೈ ಚೆಲ್ಲಿದರೂ ಅದನ್ನು ಮನಸ್ಸಿನಲ್ಲಿಟ್ಟು ಕೊಳ್ಳದೇ ನನಗೆ ಸದಾಶಿವಗಡದ ಪದವಿ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಲು ಅನುವು ಮಾಡಿಕೊಟ್ಟ ವಿಶಾಲ ಹೃದಯಿ ಅವರು.ಸಾಹಿತ್ಯದ ಓದು ಅವರಲ್ಲಿ ಸಮಚಿತ್ತತೆಯನ್ನು ರೂಪಿಸಿತ್ತು.ಕುವೆಂಪು,ಬೇಂದ್ರೆ,ಕಾರಂತ,ಲಂಕೇಶ್,ಅನಂತಮೂರ್ತಿ ಹೀಗೆ ಕನ್ನಡದ ಮಹತ್ವದ ಲೇಖಕರನ್ನು ಸಮಗ್ರವಾಗಿ ಅಲ್ಲದಿದ್ದರೂ ಸಾಕಷ್ಟು ಓದಿದ್ದರು.ಕಾರಂತರ ಅಳಿದ ಮೇಲೆ ಕಾದಂಬರಿಯನ್ನು ಹತ್ತಾರು ಬಾರಿ ಕೇಳಿ ಪಡೆದು ಓದಿದ್ದರು.ಯಾವುದೇ ಪುಸ್ತಕ ನಮ್ಮ ಕೈಯಲ್ಲಿದ್ದರೆ ಆ ಪುಸ್ತಕದ ಬಗ್ಗೆ ಕೇಳಿ ತಿಳಿದು ಕೊಳ್ಳುತ್ತಿದ್ದರು.ಅಂತಹ ಅಪರೂಪದ ವ್ಯಕ್ತಿತ್ವವನ್ನು ಹೊಂದಿದ ಶ್ರೀ ರಾಣೆಯವರು ಅಗಲಿದರೂ ಸಾವಿರದ ಹೃದಯಗಳಲ್ಲಿ ಶಾಶ್ವತರಾಗಿರುತ್ತಾರೆ. ಸಾವು ಕೇವಲ ದೇಹಕ್ಕೆ ಮಾತ್ರ. ಆದರೆ ಅವರು ಇಡೀ ಜೀವಮಾನದಲ್ಲಿ ಅಳವಡಿಸಿಕೊಂಡ ಮೌಲ್ಯಗಳನ್ನು ಅನುಸರಿಸುವದರ ಮೂಲಕ,ಅವರ ಶಿಕ್ಷಣ ಸಂಸ್ಥೆಗಳನ್ನು ಆದರ್ಶ ಸಂಸ್ಥೆಗಳನ್ನಾಗಿ ರೂಪಿಸುವದರ ಮೂಲಕ ಅವರು ಹೆಸರನ್ನು ಚಿರಸ್ಥಾಯಿಯಾಗಿಸಬೇಕಿದೆ.

ಸೋಮವಾರ, ಆಗಸ್ಟ್ 15, 2022

ಕಾರವಾರ ಮತ್ತು ಸ್ವಾತಂತ್ರ್ಯ ಚಳುವಳಿ

ಕಾರವಾರ ಮತ್ತು ಸ್ವಾತಂತ್ರ್ಯ ಚಳುವಳಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸಮರ್ಥ ನಾಯಕತ್ವದಲ್ಲಿ ದೇಶದ ನಾಗರಿಕರ ತ್ಯಾಗ-ಬಲಿದಾನಗಳ ಮೂಲಕ ಗಳಿಸಿದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಸ್ತುತ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದ ಸ್ವಾತಂತ್ರ್ಯ ಚಳುವಳಿಯ ಅವಲೋಕನ ಯುವ ಜನತೆಯಲ್ಲಿ ಸ್ವಾತಂತ್ರ್ಯ ಚಳುವಳಿಯ ಇತಿಹಾಸದ ಕುರಿತು ಆಸಕ್ತಿಯನ್ನು ಮೂಡಿಸಬಲ್ಲದು. ಇತಿಹಾಸವನ್ನು ಅರಿಯದವರು ಹೊಸ ಇತಿಹಾಸವನ್ನು ಸೃಷ್ಟಿಸಲಾರರು ಎಂಬ ಮಾತಿನಂತೆ ಸ್ವಾತಂತ್ರ ಹೋರಾಟದ ಅರಿವಿಲ್ಲದವರಿಂದ ಸ್ವಾತಂತ್ರ್ಯದ ರಕ್ಷಣೆ ಸಾಧ್ಯವಾಗದು. (ಇಲ್ಲಿನ ಮಾಹಿತಿ ಅಪೂರ್ಣವಾಗಿರಬಹುದು. ಬಲ್ಲವರು ತಮಗೆ ತಿಳಿದ ಮಾಹಿತಿ ನೀಡಿದರೆ ಲೇಖನವನ್ನು ಇನ್ನಷ್ಟು ಅಧಿಕೃತ ಗೊಳಿಸಲಾಗುವುದು). 1858ರ ನಂತರ ಭಾರತ ಅಧಿಕೃತವಾಗಿ ಬ್ರಿಟೀಷ್ ಸರಕಾರದ ವಸಾಹತು ಎಂದು ಪರಿಗಣಿಸಲ್ಪಟ್ಟಿತು. ಇಂಗ್ಲೀಷ್ ಶಿಕ್ಷಣದ ಪರಿಣಾಮವಾಗಿ ಸ್ವಾತಂತ್ರ್ಯ ಸೌಹಾರ್ದತೆಗಳ ಆದರ್ಶಗಳನ್ನು ಅರಗಿಸಿಕೊಂಡ ಒಂದು ಜನಾಂಗ ರೂಪಗೊಂಡಿತು. ಇಂಗ್ಲೀಷ್ ಶಿಕ್ಷಣವನ್ನು ಪಡೆದ ಭಾರತೀಯರು ಬ್ರಿಟೀಷ್ ಸರಕಾರದಲ್ಲಿ ಕೆಳದರ್ಜೆಯ ಹುದ್ದೆಗಳನ್ನು ಪಡೆದು ವರ್ಣಭೇದ ನೀತಿಗೆ ತುತ್ತಾದರು. ಹೀಗೆ ಅಸಮಾನತೆಗೆ ತುತ್ತಾದಾಗ ರಾಷ್ಟ್ರೀಯ ಪರಿಷತ್ತು ರೂಪಗೊಂಡು ರಾಷ್ಟ್ರೀಯತೆಯ ಭಾವನೆಯನ್ನು ಭಾರತೀಯರಲ್ಲಿ ಮೂಡಿಸಲು ಪ್ರಯತ್ನಿಸಿತು. 1885ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ಕಾಂಗ್ರೆಸ್ ಈ ಉದ್ದೇಶವನ್ನು ಸಮಗ್ರವಾಗಿ ಮಂಡಿಸುವ ಒಂದು ರಾಜಕೀಯ ಸಂಸ್ಥೆಯಾಗಿ ಪರಿವರ್ತಿತವಾಯಿತು. ದಾದಾಬಾಯಿ ನವರೋಜಿ, ಗೋಪಾಲಕೃಷ್ಣ ಗೋಖಲೆ ಮತ್ತು ಬಾಲಗಂಗಾಧರ ತಿಲಕ ಮುಂತಾದ ಹಿರಿಯರ ಪ್ರಯತ್ನದ ಫಲವಾಗಿ ಕಾಂಗ್ರೆಸ್ ಭಾರತದಲ್ಲಿ ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ರೂಪುಗೊಂಡಿತು. 1915ರ ಪ್ರಾರಂಭದಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ಗಾಂಧೀಜಿ ತಮ್ಮ ರಾಜಕೀಯ ಗುರು ಗೋಖಲೆಯವರ ಸರ್ವಂಟ್ಸ್ ಆಫ್ ಇಂಡಿಯಾ ಸೊಸೈಟಿಯನ್ನು ಸೇರುವ ಅಭಿಲಾಷೆಯನ್ನು ಹೊಂದಿದ್ದರು. ಆದರೆ ಪುಸ್ತಕ ಜ್ಞಾನಕ್ಕಿಂತ ಜನಸಾಮಾನ್ಯರ ಆಸೆ ಆಕಾಂಕ್ಷೆಗಳ ಪರಿಜ್ಞಾನ ಬಹಳ ಮಹತ್ವದ್ದು ಎಂಬ ಗೋಖಲೆಯವರ ಮಾತಿನಂತೆ ಗಾಂಧೀಜಿ ಭಾರತದ ಮೂಲೆ ಮೂಲೆಯನ್ನು ಸಂಚರಿಸಿ ಲೋಕಜ್ಞಾನವನ್ನು ಪಡೆದರು. ಆದರೆ ಆ ವೇಳೆಗಾಗಲೇ ಗೋಖಲೆಯವರು ದಿವಂಗತರಾಗಿದ್ದರು. ಬ್ರಿಟೀಷ್ ಸರಕಾರ ಜಾರಿಗೆ ತಂದ ಕೌಲೆಟ್ ಕಾಯಿದೆಗಳ ವಿರುದ್ಧ ಗಾಂಧೀಜಿ ಅಸಹಕಾರ ಚಳುವಳಿ ಪ್ರಾರಂಭಿಸಿದಾಗ ತಿಲಕರ ಆಶೀರ್ವಾದ ದೊರಕಿತು. 1919-20 ರಿಂದ ಗಾಂಧಿಯುಗ ಪ್ರಾರಂಭವಾಯಿತು. ಗೋಖಲೆಯವರ ಮಾರ್ಗದರ್ಶನ, ತಿಲಕರ ಆದರ್ಶಗಳನ್ನು ಹೊಂದಿ ಗಾಂಧೀಜಿ ಕಾಂಗ್ರೆಸ್‌ನ್ನು ಜನಸಾಮಾನ್ಯರ ಸಂಘಟನೆಯಾಗಿ ರೂಪಿಸಿದರು. ಸ್ವರಾಜ್ಯವನ್ನು ಗಳಿಸಿಕೊಳ್ಳಲು ಯೋಗ್ಯ ಶೀಲ ಚಾರಿತ್ರ್ಯಗಳನ್ನು ಗಳಿಸಿಕೊಳ್ಳಬೇಕೆಂಬ ಅವರ ಮಾತುಗಳು ಭಾರತೀಯರ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದವು. ಇಂತಹ ಮಾತುಗಳು ಗಾಂಧೀಜಿಯವರ ಕುರಿತು ದೇಶಾದ್ಯಂತ ಗೌರವವನ್ನು ಮೂಡಿಸಿದವು. ಜನಸಾಮಾನ್ಯರು ಗಾಂಧೀಜಿಯವರಲ್ಲಿ ನಿಷ್ಠೆಯನ್ನು ಬೆಳೆಸಿಕೊಂಡರು. ಸ್ವಾತಂತ್ರ್ಯ ಪಡೆಯಲು ಅವರು ಹೇಳುವ ಕಾರ್ಯಗಳನ್ನು ಶಿರಸಾವಹಿಸಿ ಪಾಲಿಸಲು ಜನ ಸಿದ್ಧರಾದರು. ಇಂತಹ ಸಂದರ್ಭದಲ್ಲಿಯೇ ಚಳುವಳಿಯನ್ನು ತೀವ್ರಗೊಳಿಸಲು ಕಾಂಗ್ರೆಸ್ ತೀರ್ಮಾನಿಸಿತು. ಇದರ ಅಂಗವಾಗಿ ದೇಶದ ಬೇರೆ ಬೇರೆ ಸ್ಥಳಗಳಲ್ಲಿ ರಾಜಕೀಯ ಸಮ್ಮೇಳನಗಳು ನಡೆದವು. ಇಂತಹ ಒಂದು ಜಿಲ್ಲಾ ರಾಜಕೀಯ ಸಮ್ಮೇಳನವನ್ನು 1920ರಲ್ಲಿ ಕಾರವಾರದಲ್ಲಿ ಸಂಘಟಿಸಲಾಯಿತು. 1900ರಲ್ಲಿ ಲಾಹೋರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದ ಸರ್ ನಾರಾಯಣ ಚಂದಾವರಕರ ಈ ರಾಜಕೀಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಈ ಸಂದರ್ಭದಲ್ಲಿ ಅನೇಕ ಸಮಸ್ಯೆಗಳನ್ನು ಚರ್ಚಿಸಿ ಜಿಲ್ಲೆಯಲ್ಲಿ ರಾಜಕೀಯ ಜಾಗೃತಿ ಮೂಡಿಸಲು ತೀರ್ಮಾನಿಸಲಾಯಿತು. 1921ರಲ್ಲಿ ಕಾರವಾರ ತಾಲೂಕಿನ ಕಾಂಗ್ರೆಸ್ ಕಮಿಟಿಯ ಹಂಗಾಮಿ ಸಮಿತಿಯನ್ನು ಹರಿಬಾಬು ಕಾಮತರ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾಯಿತು. 1922ರಲ್ಲಿ ನಿಯಮಬದ್ಧ ಚುನಾವಣೆ ನಡೆದು ಮಂಗೇಶರಾವ ತೇಲಂಗ ಅಧ್ಯಕ್ಷರಾಗಿ ಆಯ್ಕೆಯಾದರು. ಕೆ.ಆರ್. ಹಳದಿಪುರಕರ ಮತ್ತು ಎಮ್.ಡಿ.ನಾಡಕರ್ಣಿ ಕಾರ್ಯದರ್ಶಿಗಳಾದರು. ಇದೇ ಸಂದರ್ಭದಲ್ಲಿ ಕಾರವಾರ ತಾಲೂಕಿನ ಕೆಲವು ತರುಣರು ಮುಂಬೈ ಪೂಣಾ ಮುಂತಾದ ಊರುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಅಲ್ಲಿ ತೀವ್ರವಾದ ರಾಷ್ಟ್ರೀಯ ಚಟುವಟಿಕೆಗಳ ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳ ತೊಡಗಿದರು. ಕೃಷ್ಣಾ ನಾರಾಯಣ ನಾಯಕ, ಹನುಮಂತರಾವ ಮಾಂಜೇಕರ, ಪದ್ಮನಾಭ ಎಸ್. ಕಾಮತ ಮುಂತಾದವರು ವಿದ್ಯಾರ್ಥಿಗಳಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಗುರುತಿಸಿಕೊಂಡು ಕಾರವಾರಕ್ಕೆ ಆಗಮಿಸಿದರು. ಆಗಲೇ ಕರ್ನಾಟಕದಲ್ಲಿ ಕಾರವಾರ ಜಿಲ್ಲೆಯ ಪರಿಸ್ಥಿತಿ ಕರನಿರಾಕರಣ ಚಳುವಳಿಗೆ ಅನುಕೂಲವಾಗಿದೆಯೆಂದು ಕರ್ನಾಟಕ ಕಾಂಗ್ರೆಸ್ ಭಾವಿಸಿತು. ಈ ಜಿಲ್ಲೆಯ ಜನ ಶಾಂತ ವೃತ್ತಿಯವರು ಕೈಗೊಂಡ ಕೆಲಸವನ್ನು ಬಿಡದ ಸ್ವಭಾವದವರು. ಇಲ್ಲಿ ಬ್ರಾಹ್ಮಣ-ಬ್ರಾಹ್ಮಣೇತರ ಎಂಬ ವಾದ ತೀವ್ರವಾಗಿಲ್ಲ. ಗಾಂಧೀಜಿಯವರ ಬಗ್ಗೆ ಜನಸಾಮಾನ್ಯರಲ್ಲಿ ನಿಷ್ಠೆ ಇದೆ. ಭಾವುಕರಾಗಿದ್ದ ಈ ಜಿಲ್ಲೆಯ ಜನ ಎಂತ ತ್ಯಾಗಕ್ಕೂ ಸಿದ್ಧರು. ಕಾಲೇಜು ಶಿಕ್ಷಣವನ್ನು ಬಿಟ್ಟು ಬಂದ ವಿದ್ಯಾರ್ಥಿಗಳು ಹಳ್ಳಿಗಳಿಗೆ ಹೋಗಿ ಚೆನ್ನಾಗಿ ಕೆಲಸ ಮಾಡಿದ್ದರು. ಈ ರೀತಿಯ ಅನುಕೂಲಕರ ಪರಿಸ್ಥಿತಿ ಬೇರೆ ಯಾವ ಜಿಲ್ಲೆಯಲ್ಲಿಯೂ ಇಲ್ಲ ಎಂದು ಕಾಂಗ್ರೆಸ್ ಭಾವಿಸಿತು. ಉತ್ತರ ಕನ್ನಡ ಜಿಲ್ಲೆಯಲ್ಲಿ ಚಳುವಳಿಯನ್ನು ತೀವ್ರಗೊಳಿಸಿತು. ಶಿರ್ಶಿ, ಸಿದ್ಧಾಪುರ, ಅಂಕೋಲಾ ತಾಲೂಕುಗಳಲ್ಲಿ ಸ್ವಾತಂತ್ರ್ಯ ಚಳುವಳಿ ತೀವ್ರವಾಗಿ ಹಬ್ಬಿತು. ಕಾರವಾರ ತಾಲೂಕಿನಲ್ಲಿಯೂ ತಕ್ಕ ಮಟ್ಟಿಗೆ ಚಳುವಳಿ ಕಾಣಿಸಿಕೊಂಡಿತು. 1921ರ ಅಸಹಕಾರ ಚಳುವಳಿಯಿಂದ ಪ್ರೇರೇಪಿತರಾದ ಕಾರವಾರದ ಕೆ.ಆರ್.ಹಳದಿಪುರಕರ ಜಿಲ್ಲೆಯ ಇತರ ವಕೀಲರ ಜೊತೆ ಸೇರಿ ಸನದುಗಳನ್ನು ಹಿಂತಿರುಗಿಸಿ ನ್ಯಾಯಾಲಯಗಳಿಗೆ ಬಹಿಷ್ಕಾರ ಹಾಕಿದರು. 1923ರಲ್ಲಿ ಎನ್.ಎಸ್. ಹರ್ಡಿಕರರಿಂದ ಸ್ಥಾಪಿಸಲ್ಪಟ್ಟ ಹಿಂದುಸ್ತಾನಿ ಸೇವಾದಳ ಕಾರವಾರದಲ್ಲಿಯೂ ಪ್ರಾರಂಭವಾಯಿತು. 1924ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್‌ ಅಧಿವೇಶನ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದಾಗ ಕೃಷ್ಣ ನಾರಾಯಣ ನಾಯಕರವರ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿದ್ದರು. ಗಾಂಧೀಜಿಯವರ ಭಾಷಣದಿಂದ ಪ್ರಭಾವಿತರಾದ ಇವರೆಲ್ಲ ತಾಲೂಕಿನಲ್ಲಿ ಚಳುವಳಿಯನ್ನು ತೀವ್ರಗೊಳಿಸಿದರು. 1923ರಲ್ಲಿ ಸಿಂದ್‌ನ ರಾಜಕೀಯ ಕೈದಿ ಶರ್ಮಾ ಕಾರವಾರ ಜೈಲಿನಲ್ಲಿ ಇದ್ದು ಬಿಡುಗಡೆಹೊಂದಿದರು. ಆ ಸಂದರ್ಭದಲ್ಲಿ ಮೊದಲ ಬಾರಿಗೆ ಬೃಹತ್ ಪ್ರಮಾಣದ ರಾಜಕೀಯ ಮೆರವಣಿಗೆ ನಡೆಯಿತು. 1924 ರಿಂದ 29ರವರೆಗೆ ಚಳುವಳಿ ತಣ್ಣಗಿತ್ತು. ಆದರೆ ಇದ್ದಕ್ಕಿದ್ದಂತೆ ಕಾಯಿದೆ ಭಂಗ ಚಳುವಳಿ ತೀವ್ರಗೊಂಡಿತು. ಸುಬ್ಬರಾವ್ ಹಳದಿಪುರ ಬಂಧಿತರಾದರು. ಈ ಹೊತ್ತಿಗಾಗಲೇ ಪದ್ಮನಾಭ ಎಸ್. ಕಾಮತರವರು ಕಾನೂನು ಶಿಕ್ಷಣ ಪಡೆದು ಕಾರವಾರಕ್ಕೆ ಬಂದು ಪ್ರಾಕ್ಟಿಸ್ ಆರಂಭಿಸಿದರು. 1930 ಮತ್ತು 1932ರಲ್ಲಿ ಬಂಧಿತರಾದ ಅಥವಾ ಕ್ರಿಮಿನಲ್‌ ಕಟ್ಲೆಗಳಲ್ಲಿ ಸೇರಿಸಲ್ಪಟ್ಟ ಸತ್ಯಾಗ್ರಹಿಗಳ ಪರವಾಗಿ ಅವರು ವಕಾಲತ್ತು ವಹಿಸಿದರು. 1930ರ ಮಾರ್ಚ್ ತಿಂಗಳಲ್ಲಿ ಗದಗದ ವಿ.ಜಿ. ಕಂಬಿಯವರು ಸತ್ಯಾಗ್ರಹಿಗಳ ಕ್ಯಾಪ್ಟನ್ ಎಂದು ಹರ್ಡಿಕರರಿಂದ ನೇಮಕಗೊಂಡು ಕಾರವಾರಕ್ಕೆ ಆಗಮಿಸಿದರು. ಪಿ.ಎಸ್. ಕಾಮತರ ಜೊತೆ ಸೇರಿ 50 ಜನ ಸ್ವಯಂಸೇವಕರನ್ನು ಮುರಳೀಧರ ಮಠದಲ್ಲಿ ಸೇರಿಸಿ ಸಭೆ ನಡೆಸಿ ಮುಂದೆ ನಡೆಯಬಹುದಾದ ಚಳುವಳಿಯ ರೂಪರೇಷೆಗಳನ್ನು ಸಿದ್ಧಪಡಿಸಿದರು. ಈ ಸಂದರ್ಭದಲ್ಲಿಯೇ ಪಾನವಿರೋಧಿ ಚಳುವಳಿಯು ತೀವ್ರಗೊಂಡಿತು. ಕಾರವಾರ ಜಿಲ್ಲೆಯಲ್ಲಿ ಸರಾಯಿ ಅಂಗಡಿಗಳನ್ನು ನಡೆಸಲು ಹರಾಜು ಪ್ರಕ್ರಿಯೆಯನ್ನು ಬ್ರಿಟೀಷ್ ಸರಕಾರ ಕೈಗೊಂಡಿತು. ಜೂನ್ 27, 1931ರಂದು ನಡೆದ ಈ ಪ್ರಕ್ರಿಯೆಯನ್ನು ವಿರೋಧಿಸಿ ಕಾರವಾರದಲ್ಲಿ ಹರತಾಳ ನಡೆಸಲಾಯಿತು. ಕೆ.ಎನ್. ನಾಯ್ಕ, ಹನುಮಂತರಾವ ಮಾಂಜೇಕರ ಮೋಟಾ ಎಸ್‌. ದುರ್ಗೆಕರ ಮುಂತಾದವರು ಈ ಆಂದೋಲನದ ಮುಂಚೂಣಿಯಲ್ಲಿದ್ದರು. ಈ ಹರಾಜು ಪ್ರಕ್ರಿಯೆಯಲ್ಲಿ ಕಾರವಾರದ 13 ಸರಾಯಿ ಅಂಗಡಿಗಳಲ್ಲಿ ಕೇವಲ 5, ಕುಮಟಾದ 18ರಲ್ಲಿ 2, ಭಟ್ಕಳದ 11ರಲ್ಲಿ 1, ಯಲ್ಲಾಪುರದ 7ರಲ್ಲಿ 2, ಜೋಯ್ದಾದ 7ರಲ್ಲಿ 2, ಸರಾಯಿ ಅಂಗಡಿಗಳು ಹರಾಜುಗೊಂಡವು. ಆದರೆ ಅಂಕೋಲಾ, ಶಿರ್ಶಿ, ಸಿದ್ಧಾಪುರ, ಹೊನ್ನಾವರ ತಾಲೂಕುಗಳಲ್ಲಿ ಒಂದು ಅಂಗಡಿಯೂ ಹರಾಜು ಆಗಲಿಲ್ಲ. ಇದರಿಂದಾಗಿ ಸರಕಾರ ಶೇಕಡಾ 75ರಷ್ಟು ಆದಾಯವನ್ನು ಕಳೆದುಕೊಂಡಿತು. 1930ರಲ್ಲಿ ಸರಕಾರ ಮತ್ತು ಕಾರವಾರದ ಜಿ.ಎಸ್. ನಾಡಕರ್ಣಿ ಮತ್ತು ಸುಬ್ಬರಾವ ಹಳದಿಪುರಕರರಂತಹ ಕಾಂಗ್ರೆಸ್ ನಾಯಕರನ್ನು ಪ್ರಚೋದನಾರಹಿತ ಬಂಧನಕ್ಕೆ ಒಳಪಡಿಸಲಾಯಿತು. ಇದರಿಂದ ಕಾರವಾರದ ವಾತಾವರಣ ಕಾವೇರಿತು. ಇವರಿಬ್ಬರಿಗೆ ಎರಡು ವರ್ಷ ಶಿಕ್ಷೆಯಾದಾಗ ಕಾರವಾರದಲ್ಲಿ ಹಿಂದೆಂದು ಆಗದಂತಹ ಪ್ರತಿಭಟನಾ ಮೆರವಣಿಗೆ ನೆರವೇರಿತು. ಈ ನಡುವೆ ಕೆ.ಪಿ.ಸಿ.ಸಿ ಉಪ್ಪಿನ ಸತ್ಯಾಗ್ರಹವನ್ನು ನಡೆಸಲು ಅಂಕೋಲೆ ಸೂಕ್ತ ಸ್ಥಳವೆಂದು ಆಯ್ಕೆ ಮಾಡಿತು. ಅಂಕೋಲೆಯಲ್ಲಿ ನಡೆದ ಐತಿಹಾಸಿಕ ಉಪ್ಪಿನ ಸತ್ಯಾಗ್ರಹದಲ್ಲಿ ಕಾರವಾರದಿಂದ ಕೆ.ಎನ್.ನಾಯ್ಕರ ನೇತೃತ್ವದಲ್ಲಿ ಒಂದು ತಂಡ ಪಾಲ್ಗೊಂಡಿತು. ನಂತರ ಕಾರವಾರ ಮಾಜಾಳಿ ಭಾಗದ ನೂರಾರು ಕಾರ್ಯಕರ್ತರು ಗೋವೆಯನ್ನು ಪ್ರವೇಶಿಸಿ ತೆರಿಗೆಯನ್ನು ನೀಡದೆ ಉಪ್ಪನ್ನು ತಂದರು,, ಆ ಸಂದರ್ಭದಲ್ಲಿ ಕೃಷ್ಣ ನಾಯಕ, ಶಾಮರಾವ ಗಾಯತೊಂಡೆ ಹಳಗಾ ಮುಂತಾದವರು ಬಂಧಿತರಾದರು. ಕಾರವಾರದಲ್ಲಿ ಉಪ್ಪಿನ ಸತ್ಯಾಗ್ರಹ ನಡೆದಾಗ ಗಂಗೊಳ್ಳಿ ಮನೆತನದ ಮಹಿಳೆಯೊಬ್ಬರು ಉಪ್ಪನ್ನು ಖರೀದಿಸಿ ಚಳುವಳಿಗೆ ನೆರವು ನೀಡಿದರು. ಸತ್ಯಾಗ್ರಹದ ಮೊದಲ ದಿನವೇ ಬಾಲಕೃಷ್ಣ ಶ್ರೀನಿವಾಸ ಭುಜಲೆ ಬಂಧಿತರಾದರು. ಈ ಸಂದರ್ಭದಲ್ಲಿ ಕಾಳಿನದಿಯ ಬಳಿ ಸುಮಾರು 5000 ಜನ ಸೇರಿ ಅಲ್ಲಿಂದ ಪೇಟೆಗೆ ಮೆರವಣಿಗೆಯಲ್ಲಿ ಬಂದರು. ಆಗಲೇ ಹನುಮಂತ ಮಾಂಜೇಕರ ಕೂಡ ಬಂಧಿತರಾದರು. ಸ್ಥಳೀಯ ಕಾರ್ಯಕರ್ತರಾದ ಡಿ.ಎನ್. ಶಾನಭಾಗ, ಪಿ.ಪಿ. ಸಾವುಕರ ಎನ್ನುವವರೂ ಬಂಧಿತರಾದರು. ಆದರೆ ಚಳುವಳಿಯ ಖರ್ಚುವೆಚ್ಚವನ್ನು ನಿಭಾಯಿಸುವ ದೃಷ್ಟಿಯಿಂದ ಪಿ.ಎಸ್.ಕಾಮತ, ಕೆ.ಆರ್. ಹಳದಿಪುರರಂತವರು ಬಂಧಿತರಾಗದೇ ಹೊರಗುಳಿದರು. ಸ್ಥಳೀಯ ಕಾರ್ಯಕರ್ತರಾಗಿದ್ದ ಪಾಂಗಂ ಡಬ್ಬಿ ಫಂಡ್ ಸಂಗ್ರಹಿಸುತ್ತಿದ್ದರು. ಈ ಚಳುವಳಿಯನ್ನು ಬೆಂಬಲಿಸಿದ ಕಾರಣಕ್ಕೆ ಪಿ.ಎಸ್.ಕಾಮತ, ಆರ್.ವಿ.ಗಂಗೊಳ್ಳಿ, ಎಮ್.ಎಮ್. ಶಾನಭಾಗ, ವಾಯ್.ಟಿ. ನಾಡಕರ್ಣಿ ಈ ನಾಲ್ಕು ಜನ ವಕೀಲರು ಸನದುಗಳನ್ನು ಕಳೆದುಕೊಂಡರು. ಮುಂದೆ ಗಾಂಧಿ ಐಶ್ವಿನ್ ಒಪ್ಪಂದದಂತೆ ಅವುಗಳನ್ನು ಮರಳಿಸಲಾಯಿತು. ಉಪ್ಪಿನ ಸತ್ಯಾಗ್ರಹಕ್ಕೆ ಹೊಸ ಸ್ವರೂಪವನ್ನು ಕೊಡಲು ನಿರ್ಧರಿಸಿದ ಕೆ.ಎನ್.ನಾಯ್ಕರು ಜನರ ಸಹಾನುಭೂತಿಯನ್ನು ದೊಡ್ಡ ಪ್ರಮಾಣದಲ್ಲಿ ಗಳಿಸಿಕೊಳ್ಳುವ ಪ್ರಯತ್ನಕ್ಕಿಳಿದರು. ಆದ್ದರಿಂದ ಗೋವೆಯಿಂದ ತೆಂಗಿನ ಮಡಲನ್ನು ಸುಂಕಕೊಡದೆ ತಂದು ಮಾರಾಟಕ್ಕಿಳಿದರು. ಇದರಿಂದ ಹೆಂಗಸರ ಸಹಾನುಭೂತಿ ದೊರಕಿತು. ಮುಂದೆ ಅಗ್ಗದ ಉಪ್ಪು ತರಲು ನಿರ್ಣಯಿಸಿ ಅಂಗಡಿ, ಮಾಜಾಳಿ ಮುಂತಾದ ಗ್ರಾಮಗಳ ಜನರ ಸಹಕಾರ ಪಡೆದರು. ಸುಮಾರು 200 ಜನ ಗೋವಾ ಗಡಿಯನ್ನು ಪ್ರವೇಶಿಸಿ ಸಣ್ಣ ಸಣ್ಣ ಚೀಲಗಳಲ್ಲಿ ಉಪ್ಪನ್ನು ಹೊತ್ತು ತಂದು ಚಳುವಳಿಯನ್ನು ಯಶಸ್ವಿಗೊಳಿಸಿದರು. 1934ರಲ್ಲಿ ಮಹಾತ್ಮಾಗಾಂಧಿ ಹರಿಜನ ಪ್ರವಾಸ ಕೈಗೊಂಡು ಕಾರವಾರಕ್ಕೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಅವರು ಸ್ವಾತಂತ್ರ್ಯ ಚಳುವಳಿಯ ಕೇಂದ್ರವಾದ ಸುಬ್ಬರಾವ ಹಳದಿಪುರರವರ ಮನೆಗೆ ಭೇಟಿ ನೀಡಿದರು. ಕರನಿರಾಕರಣೆಯಿಂದ ಭೂಮಿ ಕಳೆದುಕೊಂಡ ಸತ್ಯಾಗ್ರಹಿಗಳನ್ನು ಸಂತೈಸಿದರು. ಸ್ವಾತಂತ್ರ್ಯ ಚಳುವಳಿಯ ಇತಿಹಾಸದಲ್ಲಿ 1942ರ ಚಲೇಜಾವ ಚಳುವಳಿ ಮಹತ್ವದ ಘಟ್ಟ. ಬ್ರಿಟೀಷ ಸರಕಾರ ಗಾಂಧೀಜಿಯವರನ್ನು ಬಂಧಿಸಿತು. ಕುಮಟಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ತಿಮ್ಮಪ್ಪ ನಾಯ್ಕ ಗಾಂಧೀಜಿಯವರ ಬಂಧನವನ್ನು ವಿರೋಧಿಸಿ ಭಾಷಣ ಮಾಡಿದರು. ಅದೇ ಸಂದರ್ಭದಲ್ಲಿ ಕಾರವಾರದಲ್ಲೂ ಕೂಡ ಬೃಹತ್ ಪ್ರತಿಭಟನಾ ಸಭೆ ಜರುಗಿತು. ಖಾದಿಮುಲ್ಲಾ ಎಂದೇ ಹೆಸರಾದ ಶೇಖ ಉಮರ ಎಂಬುವವರು ಆಗ ಬಂಧಿತರಾಗಿ ಹಿಂಡಲಗಾ ಜೈಲು ಸೇರಿದರು. 1942ರ ಚಳುವಳಿಯಲ್ಲಿ ಭಾಗವಹಿಸಿದ ಭೂಗತ ಕಾರ್ಯಕರ್ತರ ಜೊತೆಗೆ ಸಂಪರ್ಕವಿರಿಸಿಕೊಂಡ ಪಿ.ಎಸ್. ಕಾಮತರವರು ಅವರಿಗೆ ಎಲ್ಲ ವಿಧದ ಆರ್ಥಿಕ ಸಹಾಯ ನೀಡಿದರು. ಜೊತೆಗೆ ಬಂಧಿತರಿಗೆ ಕಾನೂನಾತ್ಮಕ ನೆರವು ನೀಡಿದರು. . ಹೀಗೆ ನಾಡಿನ ವಿವಿಧ ಪ್ರಾಂತಗಳ ಜನರೊಂದಿಗೆ ಕಾರವಾರ ತಾಲೂಕಿನ ಜನರೂ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡಿದ್ದರು. ಜಾತಿ ಮತ ಪಂಥ ಭಾಷೆಗಳ ಬೇಧಭಾವವಿಲ್ಲದೆ ನಾವೆಲ್ಲ ಭಾರತೀಯರು ಎಂಬ ಮನೋಭಾವವನ್ನು ಹೊಂದಿ ಹೋರಾಟ ಮಾಡಿದ್ದರ ಫಲವಾಗಿ 1947 ಅಗಸ್ಟ್ 15ರಂದು ಸ್ವಾತಂತ್ರ್ಯ ದೊರಕಿತು. 1947 ಅಗಸ್ಟ್ 14ರ ರಾತ್ರಿ 12 ಗಂಟೆಗೆ ಭಾರತ ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಹನುಮಂತರಾವ ಮಾಂಜೇಕರರವರು ಅಶ್ವತ್ಥ ವೃಕ್ಷ ನೆಟ್ಟರು. ಕಾರವಾರದ ಆಝಾದ ಮೈದಾನದಲ್ಲಿ ಅಗಸ್ಟ್ 15ರಂದು ಮೊದಲ ಧ್ವಜ ಹಾರಿಸಿದ ಶ್ರೇಯಸ್ಸು ಪಿ.ಎಸ್. ಕಾಮತರದಾಗಿತ್ತು. ದೇಶದ ಇತರ ಭಾಗಗಳಂತೆ ಕಾರವಾರ ತಾಲೂಕಿನಲ್ಲಿಯೂ ನಡೆದ ಚಳುವಳಿ ಸ್ವಾತಂತ್ರ್ಯ ದೊರಕಿಸಿಕೊಳ್ಳಲು ನೆರವು ನೀಡಿತು ಎಂಬುದನ್ನು ಮರೆಯುವಂತಿಲ್ಲ.

ಭಾನುವಾರ, ಆಗಸ್ಟ್ 14, 2022

ಬೇಲೇಕೇರಿ ಸ್ವಾತಂತ್ರ್ಯ ಹೋರಾಟಗಾರರು

ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಾಚರಣೆಯ ಉತ್ಸಾಹದಲ್ಲಿದ್ದೇವೆ. ಸ್ವಾತಂತ್ರ್ಯ ಸುಲಭವಾಗಿ ಸಿಗಲಿಲ್ಲ.ಅದಕ್ಕೆ ಸುದೀರ್ಘವಾದ ವ್ಯವಸ್ಥಿತವಾದ ಮತ್ತು ಸಂಘಟಿತ ಹೋರಾಟ ನಡೆದಿದೆ.ಸಂತನಂತಿದ್ದ ಪೂಜ್ಯ ಮಹಾತ್ಮಾ ಗಾಂಧೀಜಿಯವರ ಸಮರ್ಥ ನಾಯಕತ್ವದಡಿಯಲ್ಲಿ ನಡೆದ ಹೋರಾಟದ ಫಲವಾಗಿ ಸ್ವಾತಂತ್ರ್ಯ ನಮ್ಮದಾಗಿದೆ.ಜನಸಾಮಾನ್ಯರೂ ಸ್ವಾತಂತ್ರ್ಯಕ್ಕಾಗಿ ತಮ್ಮ ಮನೆ ಮಠಗಳನ್ನು ತೊರೆದು ಪ್ರಾಣದ ಹಂಗು ಬಿಟ್ಟು ಹೋರಾಡಿದ್ದಾರೆ. ಯಾವ ತಪ್ಪೂ ಮಾಡದೇ ಜೈಲು ಶಿಕ್ಷೆ ಅನುಭವಿಸಿದ್ದಾರೆ.ನಮ್ಮ ಅಂಕೋಲಾ ತಾಲೂಕಿನಲ್ಲಿ ನಡೆದ ಹೋರಾಟವೂ ಅವಿಸ್ಮರಣೀಯ.ಈ ತಾಲೂಕಿನ ಪ್ರತಿ ಹಳ್ಳಿಯೂ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದವು.ಬೇಲೇಕೇರಿಯೂ ಇದಕ್ಕೆ ಹೊರತಾಗಿರಲಿಲ್ಲ.ಆದರೆ ಅದು ಅಷ್ಟಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗಿಲ್ಲ. ಸಧ್ಯಕ್ಕೆ ದೊರಕುವ ಮಾಹಿತಿಯ ಪ್ರಕಾರ ಬೇಲೇಕೇರಿಯ ಕರಿಯಣ್ಣ ಬೀರಣ್ಣ ನಾಯಕ, ಗೋವಿಂದ ಅನಂತ ನಾಯಕ, ತಿಮ್ಮಣ್ಣ ಹಮ್ಮಣ್ಣ ನಾಯಕ, ಬೀರಣ್ಣ ಬರ್ಮು ನಾಯಕ, ವಿಠೋಬಾ ರಾಮ ನಾಯಕ, ಸುಖಾ ತಿಮ್ಮಣ್ಣ ನಾಯಕ, ಗಿರಿಯಣ್ಣ ನಾರಾಯಣ ನಾಯಕ ,ನಾರಾಯಣ ವೆಂಕಯ್ಯ ನಾಯಕ, ಕಲ್ಲು ಅನಂತ ನಾಯಕ, ಬೊಮ್ಮಯ್ಯ ಬೀರಣ್ಣ ನಾಯಕ , ವೆಂಕಣ್ಣ ದೇವಣ್ಣ ನಾಯಕ , ವೆಂಕಣ್ಣ ಸಾಂತು ನಾಯಕ,ವಿಠೋಬಾ ತಿಮ್ಮಣ್ಣ ನಾಯಕ, ತಮ್ಮಣ್ಣ ದೊಡ್ಡತಮ್ಮ ನಾಯಕ, ಹಮ್ಮಣ್ಣ ಬೀರಪ್ಪ ನಾಯಕ ವೆಂಕಪ್ಪನಮನೆ , ವೆಂಕಟರಮಣ ತಿಮ್ಮಣ್ಣ ನಾಯಕ, ವೆಂಕಣ್ಣ ಅನಂತ ನಾಯಕ, ವಿಠೋಬಾ ಬೀರಣ್ಣ ನಾಯಕ, ತಿಮ್ಮಣ್ಣ ಕರಿಯಣ್ಣ ನಾಯಕ ,ಹೊನ್ನಪ್ಪ ವೆಂಕಯ್ಯನಾಯಕ ವೆಂಕಯ್ಯನಮನೆ,ಕರಿಯಣ್ಣ ಬುಳ್ಳಾ ನಾಯಕ ಕರ್ನಮನೆ, ನಾರಾಯಣ ರಾಮ ನಾಯಕ ಬೀರುಮನೆ , ಗಿರಿಯಣ್ಣ ಸುಖಾ ನಾಯಕ , ವಾಸು ಬೀರಣ್ಣ ನಾಯಕ ,ತಿಮ್ಮಣ್ಣ ದೇವಪ್ಪ ನಾಯಕ ,ಬುದ್ಯಾ ಪೆಡ್ನೇಕರ, ಯಶವಂತ ನಾಯ್ಕ ಹೀಗೆ ಹಲವರು‌ ಉಪ್ಪಿನ ಸತ್ಯಾಗ್ರಹ, ಕರಬಂದಿ ಚಳುವಳಿ,ಚಲೇಜಾವ್ ಚಳುವಳಿಗಳಲ್ಲಿ ಭಾಗವಹಿಸಿ ಜೈಲು ಶಿಕ್ಷೆ ಅನುಭವಿಸಿದ್ದರು. ಮಹಿಳೆಯರೂ ಕೂಡ ಚಳುವಳಿಯಲ್ಲಿ ಪಾಲ್ಗೊಂಡು ಶಿಕ್ಷೆ ಅನುಭವಿಸಿದ್ದರು.ರಾಕಮ್ಮ ರಾಮ ನಾಯಕ,ಮಾಣು ಬೀರಪ್ಪ ನಾಯಕ, ಶಿವಮ್ಮ ಬೀರಪ್ಪ ನಾಯಕ, ತಿಮ್ಮಕ್ಕ ಬೀರಪ್ಪ ನಾಯಕ, ಹನಮು ವೆಂಕಣ್ಣ ನಾಯಕ ಮುಂತಾದವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಇಲ್ಲಿ ಕೆಂಚನಮನೆಯ ವೆಂಕಮ್ಮ ಮಾಣಿ ನಾಯಕ ಅವರನ್ನು ವಿಶೇಷವಾಗಿ ಹೆಸರಿಸಲೇಬೇಕು.ಭಾರತದ ಕೋಗಿಲೆ ಎಂದು ಹೆಸರಾದ ಸರೋಜಿನಿ ನಾಯ್ಡು ಅವರ ನಿಕಟವರ್ತಿಗಳಲ್ಲಿ ಒಬ್ಬರಾಗಿದ್ದ ಅವರು ಹಿಂಡಲಗಾದಲ್ಲಿ ಜೈಲುವಾಸ ಅನುಭವಿಸಿದ್ದರು. ನಮಗೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಸ್ವಾತಂತ್ರ್ಯ ಹೋರಾಟಗಾರರು ಪರಿಚಯ ಇರುತ್ತದೆ.ಆದರೆ ನಮ್ಮವರ ಬಗ್ಗೆಯೇ ತಿಳಿದಿರುವದಿಲ್ಲ.ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಾದರೂ ನಮ್ಮ ಹಿರಿಯರನ್ನು ಸ್ಮರಿಸಿಕೊಳ್ಳವದರ ಮೂಲಕ ಅವರ ಹೋರಾಟಕ್ಕೆ ನಮನ ಸಲ್ಲಿಸುವುದು ನಮ್ಮ ಕರ್ತವ್ಯ. (ಇದು ಪರಿಪೂರ್ಣ ಪಟ್ಟಿ ಅಲ್ಲ.ಇನ್ನೂ ಇದ್ದಾರೆ.ನನಗೆ ಸಿಕ್ಕ ಮಾಹಿತಿ ಮಾತ್ರ ಇಲ್ಲಿದೆ.ಬಲ್ಲವರು ಇನ್ನೂ ಮಾಹಿತಿ ನೀಡಿದರೆ ಅವರು ಹೆಸರುಗಳನ್ನು ಸೇರಿಸುತ್ತೇನೆ.)