ಗುರುವಾರ, ಅಕ್ಟೋಬರ್ 1, 2020

ಗಾಂಧಿ ಸ್ಮರಣೆ

ತಿಳಿ ನೀಲದಲ್ಲಿ ತಾ ಲೀನವಾಗಿ ಅವ ಹೋದ ದೂರ ದೂರ ಬೆಳಗಿಹುದು ಇಲ್ಲಿ ಅವ ಬಿಟ್ಟ ಬೆಳಕು: ಇನ್ನೊಮ್ಮೆ ಏಕೆ ಬಾರ| ಎನಿತು ಸರಳ ನುಡಿ, ಎಷ್ಟು ಸಹಜ ನಡೆ ಮನದ ಮಹತಿಯೇನು! ಅವನ ಎದೆಯ ಉನ್ನತಿಯ ನಿಲುಕುವುದು ಯಾವ ಗಿರಿಯ ಸಾನು? ಇಹುದೆ ಅವನ ಕರುಣೆಯನು ಧರೆಗೆ ಕರೆವಂಥ ಕಾಮಧೇನು? ಅವನು ಗೈದ ಲೀಲೆಯಲಿ ಲಯಸಿತೆಂಥವರ "ನಾನು-ನಾನು" ಮಹಾತ್ಮ ಗಾಂಧೀಜಿಯವರ ಅಗಲಿಕೆಯ ಸಂದರ್ಭದಲ್ಲಿ ಕವಿ ಡಿ.ಎಸ್. ಕರ್ಕಿ ಅವರು ಬರೆದ ಕವಿತೆಯ ಈ ಸಾಲುಗಳು ಗಾಂಧೀಜಿಯವರ ವ್ಯಕ್ತಿತ್ವದ ಘನತೆಯನ್ನು ಸಮರ್ಥವಾಗಿ ಹಿಡಿದಿಡುತ್ತವೆ. ಇಂದು ನಾವು ಗಾಂಧೀಜಿಯವರ 150ನೆಯ ಜಯಂತಿಯನ್ನು ಆಚರಿಸುತ್ತಿದ್ದೇವೆ ಹುಟ್ಟುವಾಗಲೇ ಅವರೇನೂ ಮಹಾತ್ಮರಾಗಿರಲಿಲ್ಲ.ಮುಂದಿನ ದಿನಗಳಲ್ಲಿ ಅವರ ಕ್ರಿಯೆ, ಅವರು ಪ್ರತಿಪಾದಿಸಿದ ಮೌಲ್ಯಗಳು, ಆದರ್ಶಗಳು ಅವರನ್ನು ಮಹಾತ್ಮರನ್ನಾಗಿಸಿವೆ.ಅವರು ಪ್ರತಿಪಾದಿಸಿದ ಸತ್ಯ, ಅಹಿಂಸೆ, ಸ್ವಾವಲಂಬನೆ, ಸರಳತೆ ಮತ್ತು ಧಾರ್ಮಿಕ ಸಾಮರಸ್ಯದಂತಹ ಮೌಲ್ಯಗಳು ಸಾರ್ವಕಾಲಿಕ ಮಹತ್ವವಾಗಿವೆ. ದುಡಿಮೆಯಿಲ್ಲದ ಸಂಪತ್ತು, ಆತ್ಮ ಸಾಕ್ಷಿ ಇಲ್ಲದ ಸಂತೋಷ, ಚಾರಿತ್ಯ ವಿಲ್ಲದ ಶಿಕ್ಷಣ, ನೀತಿ ಇಲ್ಲದ ವ್ಯಾಪಾರ, ಮಾನವೀಯತೆ ಇಲ್ಲದ ಜ್ಞಾನ, ತ್ಯಾಗವಿಲ್ಲದ ಧರ್ಮ, ತತ್ವವಿಲ್ಲದ ರಾಜಕೀಯ ಇವು ಸಪ್ತ ಪಾತಕಗಳು ಎಂದು ಹೇಳಿ ಜನರು ಇವುಗಳಿಂದ ದೂರವಾಗಿರಬೇಕು ಎಂದು ಅವರು ಪ್ರತಿಪಾದಿಸಿದ್ದರು ಅಧಿಕಾರದ ಬೆನ್ನು ಹತ್ತದ ಗಾಂಧೀಜಿ ಇಡೀ ದೇಶ ಸ್ವಾತಂತ್ರ್ಯದ ಸಂಭ್ರಮದಲ್ಲಿರುವಾಗ ಒಂಟಿಯಾಗಿ ನೌಕಾಲಿಗೆ ತೆರಳಿ ಹಿಂದೂ-ಮುಸ್ಲಿಮರ ನಡುವಿನ ಕಲಹವನ್ನು ಶಮನಗೊಳಿಸಲು ಶ್ರಮಿಸಿದರು.ಮನುಷ್ಯ ಮಾತ್ರನಿಂದ ಸಾಧ್ಯವಾಗದ ಅನೇಕ ಕಾರ್ಯಗಳನ್ನು ವ್ಯಕ್ತಿಯಾಗಿ ಅವರು ನಿರ್ವಹಿಸಿದರು. ಅಲೌಕಿಕ ಶಕ್ತಿಯೊಂದರ ಪ್ರತಿನಿಧಿಯಾಗಿ ಅವರು ನಮ್ಮ ನಡುವೆ ಇದ್ದರು. ಆದ್ದರಿಂದಲೇ ಕವಿ ಪುತಿನ ಅವರು "ಮೇಲೊಂದು ಗರುಡ ಹಾರುತಿಹುದು ಕೆಳಗದರ ನೆರಳು ಓಡುತಿಹುದು ಅದಕೊ ಅದರಿಚ್ಛೆ ಹಾದಿ ಇದಕು ಹರಿದತ್ತ ಬೀದಿ "ಎಂಬ ಅದ್ಭುತ ರೂಪಕದ ಮೂಲಕ ಗಾಂಧಿಜಿಯವರ ವ್ಯಕ್ತಿತ್ವದ ದೈವಿಕತೆಯನ್ನು ಅನಾವರಣಗೊಳಿಸಿದ್ದಾರೆ ಗಾಂಧೀಜಿ ಕೇವಲ ವ್ಯಕ್ತಿಯಾಗಿರಲಿಲ್ಲ. ಅವರೊಂದು ಶಕ್ತಿಯಾಗಿದ್ದರು ಅವರ ಒಂದು ಸೂಚನೆಗೆ ಇಡೀ ದೇಶದಲ್ಲಿ ಸಂಚಲನ ಮೂಡುತ್ತಿತ್ತು. ಭಾರತೀಯರು ಮಾತ್ರವಲ್ಲ ;ವಿದೇಶಿಯರು ಅವರ ಸಮರ್ಥ ನಾಯಕತ್ವವನ್ನು ಗೌರವಿಸುತ್ತಿದ್ದರು. ಮೈಸೂರಿನ ಸನ್ಯಾಸಿಯೊಬ್ಬರು ಒಮ್ಮೆ ಫ್ರಾನ್ಸ್ ದೇಶಕ್ಕೆ ಹೋಗಿದ್ದಾಗ ಅವರ ಸಾಮಾನು ಸರಂಜಾಮು ಹೊತ್ತ ಕೂಲಿ ಅವರು ಗಾಂಧಿ ದೇಶದವರು ಎಂಬ ಕಾರಣಕ್ಕೆ ಕೂಲಿಯ ಹಣವನ್ನು ನಿರಾಕರಿಸಿದಂತೆ. ತುಂಡು ಬಟ್ಟೆಯ ಫಕೀರ ಎಂದು ಅಂದಿನ ಬ್ರಿಟಿಷ್ ಪ್ರಧಾನಿಯಿಂದ ತೆ ಗಳಿಸಿಕೊಂಡರೂ ಅದೇ ಫಕೀರ ಬ್ರಿಟಿಷರನ್ನು ನಮ್ಮ ದೇಶದಿಂದ ಹೊರದಬ್ಬಲು ಯಶಸ್ವಿಯಾದರು. ಗಾಂಧೀಜಿಯವರ ಕರ್ತೃತ್ವ ಶಕ್ತಿ, ಧೃಡ ನಿರ್ಧಾರಗಳಿಂದ ಪ್ರಭಾವಿತರಾದ ಖ್ಯಾತ ವಿಜ್ಞಾನಿ ಐನ್ ಸ್ಟೈನ್ " ರಕ್ತ ಮಾಂಸ ಎಲುಬುಗಳಿಂದ ಕೂಡಿದ ಇಂತಹ ಒಬ್ಬ ಜೀವಂತ ವ್ಯಕ್ತಿ ಈ ನೆಲದ ಮೇಲೆ ನಡೆದಾಡಿದ್ದ ಎಂದು ಹೇಳಿದರೆ ಮುಂದಿನ ಪೀಳಿಗೆ ನಂಬಲಿಕ್ಕಿಲ್ಲ "ಎಂದು ಉದ್ಘರಿಸಿದ್ದರು ಗಾಂಧೀಜಿ ಕೇವಲ ಸಿದ್ಧಾಂತವನ್ನು ಪ್ರತಿಪಾದಿಸುತ್ತಿರಲಿಲ್ಲ ಅದನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತಿದ್ದರು ಭಾರತದ ನಿಜವಾದ ಶಕ್ತಿ ಹಳ್ಳಿಗಳಲ್ಲಿದೆ ಎಂದು ಅವರು ನಂಬಿದ್ದರು ಗ್ರಾಮಸ್ವರಾಜ್ಯದ ಮೂಲಕ ಹಳ್ಳಿಗಳಿಗೆ ಅಧಿಕಾರ ದೊರೆತರೆ ಜನ ತಮ್ಮ ಊರಿನ ಕುರಿತು ಚಿಂತಿಸುತ್ತಾರೆ ಇದರಿಂದ ಎಲ್ಲಾ ಹಳ್ಳಿಗಳು ಅಭಿವೃದ್ಧಿ ಹೊಂದಿ ರಾಮರಾಜ್ಯ ನಿರ್ಮಾಣವಾಗುತ್ತದೆ ಎಂಬ ವಿಶ್ವಾಸ ಅವರದಾಗಿತ್ತು ಇಂದು ಗಾಂಧೀಜಿಯವರನ್ನು ಪ್ರತ್ಯಕ್ಷವಾಗಿ ನೋಡಿದ ಅವರ ಜೊತೆ ಮಾತನಾಡಿದ ಹಿರಿಯ ತಲೆಮಾರು ಹೆಚ್ಚುಕಡಿಮೆ ಮರೆಯಾಗಿದೆ. ಗಾಂಧೀಜಿಯವರನ್ನು ಓದಿದ ಹೊಸ ತಲೆಮಾರು ಅವರ ಸರಳತೆ ಆದರ್ಶ ದೂರದೃಷ್ಟಿಯನ್ನು ಸರಿಯಾದ ಕ್ರಮದಲ್ಲಿ ಗ್ರಹಿಸುವ ಅನಿವಾರ್ಯತೆಯಿದೆ.ಏಕೆಂದರೆ ಗಾಂಧಿಜಿಯವರು ಪ್ರತಿಪಾದಿಸಿದ ತತ್ವಗಳಲ್ಲಿ ಎಲ್ಲದಕ್ಕೂ ಪರಿಹಾರವಿದೆ. ಆದರೆ ದುರಂತವೆಂದರೆ ಹೊಸತಲೆಮಾರು ಅವರ ತತ್ವ-ಆದರ್ಶಗಳನ್ನುಲೇವಡಿ ಮಾಡುತ್ತಿದೆ ಗಾಂಧೀಜಿ ಔಟ್ ಡೇಟೆಡ್ ಎಂದು ಅವರನ್ನು ನಿರಾಕರಿಸುವ ಪ್ರಯತ್ನಗಳು ನಡೆಯುತ್ತಿವೆ.ಇಂತಹ ಪ್ರಯತ್ನಗಳನ್ನು ವಿಫಲಗೊಳಿಸಿ ಗಾಂಧೀಜಿಯವರ ಪ್ರತಿಪಾದಿಸಿದ ಮೌಲ್ಯಗಳು ಎಂದಿಗೂ ಉದಾತ್ತ ವಾಗಿವೆ ಎಂಬುದನ್ನು ಮನವರಿಕೆ ಮಾಡಿ,ಅವುಗಳನ್ನು ನಮ್ಮ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡು ಆಚರಿಸುವದರಲ್ಲಿ ಗಾಂಧಿ ಜಯಂತಿಯ ಸಾರ್ಥಕತೆ ಅಡಗಿದೆ. - ಶ್ರೀಧರ ಬಿ.ನಾಯಕ