ಗುರುವಾರ, ಜುಲೈ 21, 2022

" ಹರ್ ಘರ್ ಮೇ ತಿರಂಗಾ"ಅಭಿಯಾನದ ಹಿಂದೆ- ಮುಂದೆ

ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಇದೇ ಆಗಸ್ಟ್ 11ರಿಂದ 17ರವರೆಗೆ ದೇಶದಾದ್ಯಂತ "ಪ್ರತಿ ಮನೆಯಲ್ಲಿ ರಾಷ್ಟ್ರಧ್ವಜ "(ಹರ್ ಘರ್ ಮೇ ತಿರಂಗಾ) ಅಭಿಯಾನವನ್ನು ನಡೆಸುವುದಾಗಿ ಕೇಂದ್ರ ಸರಕಾರ ಘೋಷಿಸಿದೆ.ಸ್ವಾತಂತ್ರ್ಯೋತ್ಸವದ 75 ವರ್ಷಗಳನ್ನು ಪೂರ್ಣಗೊಳಿಸಿದ ನೆನಪಿನಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.ಈ ಅಭಿಯಾನದಡಿಯಲ್ಲಿ ದೇಶದ ಪ್ರತಿಯೊಬ್ಬ ನಾಗರಿಕರೂ ತಮ್ಮ ಮನೆಯಲ್ಲಿ ರಾಷ್ಟ್ರೀಯ ಹೆಮ್ಮೆಯ ಸಂಕೇತವಾದ ರಾಷ್ಟ್ರಧ್ವಜವನ್ನು ಹಾರಿಸಬೇಕೆಂದು ಸಂಕಲ್ಪಿಸಲಾಗಿದೆ. ಈ ಅಭಿಯಾನದಡಿಯಲ್ಲಿ 20 ಕೋಟಿಗೂ ಹೆಚ್ಚು ಮನೆಗಳಲ್ಲಿ ನೂರು ಕೋಟಿಗೂ ಹೆಚ್ಚು ಜನರು ತ್ರಿವರ್ಣ ರಾಷ್ಟ್ರಧ್ವಜವನ್ನು ಹಾರಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ.ತ್ರಿವರ್ಣ ಧ್ವಜಾರೋಹಣವು ದೇಶದ ಪ್ರತಿಯೊಬ್ಬ ನಾಗರಿಕನ ಹೃದಯದಲ್ಲಿ ದೇಶಪ್ರೇಮದ ಭಾವನೆಯನ್ನು ಮೂಡಿಸಿ ರಾಷ್ಟ್ರಾಭಿಮಾನವನ್ನು ಉದ್ದೀಪನಗೊಳಿಸಲಿದೆ ಎಂದು ಆಶಿಸಲಾಗಿದೆ. ನಮ್ಮ ದೇಶದ ರಾಷ್ಟ್ರಧ್ವಜಕ್ಕೆ ಅದರದೇ ಆದ ಇತಿಹಾಸವಿದೆ.ಹಲವು ಹಂತಗಳನ್ನು ದಾಟಿ ಬಂದ ಈಗಿನ ಸ್ವರೂಪದ ಧ್ವಜವನ್ನು ಜುಲೈ 22,1947 ರಂದು ಸಂವಿಧಾನ ಸಭೆಯಲ್ಲಿ ರಾಷ್ಟ್ರಧ್ವಜವೆಂದು ಸ್ವೀಕರಿಸಲಾಯಿತು.ಈ ಧ್ವಜವನ್ನು ಶಿಕ್ಷಕರೂ ಮತ್ತು ಸ್ವಾತಂತ್ರ್ಯ ಹೋರಾಟಗಾರರೂ ಆದ ಆಂಧ್ರಪ್ರದೇಶದ ಮಚಲಿಪಟ್ಟಣಂ ದ ಪಿಂಗಾಲಿ ವೆಂಕಯ್ಯನವರು ವಿನ್ಯಾಸಗೊಳಿಸಿದರು.ನಮ್ಮ ರಾಷ್ಟ್ರಧ್ವಜವು ಆಯತಾಕಾರದಲ್ಲಿದ್ದು ಉದ್ದ ಅಗಲವು 3:2 ಅನುಪಾತವನ್ನು ಹೊಂದಿದೆ. ಧ್ವಜದ ಮೂರು ಬಣ್ಣಗಳಾದ ಕೇಸರಿ,ಬಿಳಿ ಮತ್ತು ಹಸಿರು ಸರಿಸಮಾನ ಗಾತ್ರದಲ್ಲಿದ್ದು ಅದರ ಮಧ್ಯದಲ್ಲಿ ನೀಲಿ ಬಣ್ಣದ ಅಶೋಕ ಚಕ್ರವು 24 ಸಮ-ಅಂತರದ ರೇಖೆಗಳನ್ನು ಹೊಂದಿರುತ್ತದೆ.ಧ್ವಜದ ಬಣ್ಣಗಳು ತ್ಯಾಗ,ಶಾಂತಿ ಮತ್ತು ಸಮೃದ್ಧಿಯ ಸಂಕೇತವಾಗಿದ್ದು,ವಿಭಿನ್ನ ಜಾತಿ, ಮತ,ಪಂಗಡ.ಭಾಷೆ ಮತ್ತು ಸಂಸ್ಕೃತಿಯ ಜನರನ್ನು ಒಂದೇ ದ್ವಜದಡಿ ನಿಲ್ಲಿಸಿ ದೇಶದ ಏಕತೆಯನ್ನು ಸಾರುವ ದಿವ್ಯ ಸಾಧನವಾಗಿದೆ.ಇಂತಹ ರಾಷ್ಟ್ರದ್ವಜವನ್ನು ಕೇವಲ ಕೈ ನೇಯ್ಗೆಯಿಂದಲೇ ಸಿದ್ದವಾದ ಶುದ್ಧ ಖಾದಿಯಿಂದ ತಯಾರಿಸಲ್ಪಟ್ಟಿರಬೇಕೆಂಬ ನಿಯಮವಿದೆ.2002ರ ಧ್ವಜ ಸಂಹಿತೆಯು ಉಣ್ಣೆ, ರೇಷ್ಮೆ ಇಲ್ಲವೇ ಹತ್ತಿಯ ಧ್ವಜಗಳಿಗೂ ಅವಕಾಶ ನೀಡಿದೆ.ಆದರೆ ಅದು ಕೈ ನೂಲು ಮತ್ತು ಕೈ ನೇಯ್ಗೆಯದೇ ಆಗಿರಬೇಕು ಎಂದು ಹೇಳಲಾಗಿದೆ.ನಮ್ಮ ಸಂವಿಧಾನದಲ್ಲಿ ಉಲ್ಲೇಖಿಸಿದಂತೆ ಭಾರತೀಯ ಗುಣಮಟ್ಟ ಸಂಸ್ಥೆಯಿಂದ ಪ್ರಮಾಣಪತ್ರ ಪಡೆದು ರಾಷ್ಟ್ರಧ್ವಜವನ್ನು ತಯಾರಿಸುವ ಘಟಕವು ಕರ್ನಾಟಕದ ಧಾರವಾಡ ಜಿಲ್ಲೆಯಲ್ಲಿ ಮಾತ್ರವಿದೆ.ಇದು ದೇಶಾದ್ಯಂತ ಅಗತ್ಯವಿರುವ ಧ್ವಜಗಳನ್ನು ಪೂರೈಸುತ್ತದೆ. ರಾಷ್ಟ್ರಧ್ವಜವನ್ನು ನಮ್ಮ ದೇಶದ ರಾಷ್ಟ್ರೀಯ ಹಬ್ಬದ ದಿನಗಳಲ್ಲಿ ಗೌರವಪೂರ್ವಕವಾಗಿ ಹಾರಿಸಬೇಕು. ರಾಷ್ಟ್ರದ ಪ್ರತೀಕವಾಗಿರುವ ರಾಷ್ಟ್ರಧ್ವಜವನ್ನು ಹಾರಿಸುವಾಗ ಯಾವುದೇ ರೀತಿಯ ಅಪಚಾರವಾಗಬಾರದು ಎಂಬ ಉದ್ದೇಶದಿಂದ ರಾಷ್ಟ್ರಧ್ವಜ ಸಂಹಿತೆಯನ್ನು ರೂಪಿಸಲಾಗಿದೆ. ರಾಷ್ಟ್ರಧ್ವಜವನ್ನು ಹಾರಿಸುವಾಗ ಸನ್ಮಾನಪೂರ್ವಕ ಉಚ್ಛ ಸ್ಥಾನವನ್ನು ನೀಡಬೇಕು.ಎಲ್ಲರಿಗೂ ಕಾಣಿಸುವ ಸ್ಥಳದಲ್ಲಿ ಧ್ವಜವನ್ನು ಏರಿಸಬೇಕು.ಸರಕಾರಿ ಕಟ್ಟಡಗಳಲ್ಲಿ ರವಿವಾರ ಮತ್ತು ಇತರ ರಜಾದಿನಗಳಲ್ಲಿಯೂ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಧ್ವಜ ಹಾರಿಸಬೇಕು. ಪ್ರತಿಕೂಲ ಹವಾಮಾನವಿದ್ದರೂ ಧ್ವಜ ಹಾರಿಸುವುದು ಕಡ್ಡಾಯವಾಗಿದೆ. ರಾಷ್ಟ್ರಧ್ವಜವನ್ನು ಉತ್ಸಾಹದಿಂದ ಏರಿಸಬೇಕು ಗೌರವದಿಂದ ನಿಧಾನವಾಗಿ ಕೆಳಗಿಳಿಸಬೇಕು.ಧ್ವಜ ಹಾರಿಸುವಾಗ ಕೇಸರಿ ಬಣ್ಣದ ಪಟ್ಟಿಯು ಮೇಲಿರಬೇಕು ಹಸಿರು ಬಣ್ಣದ ಪಟ್ಟಿಯು ಕೆಳಗಿರಬೇಕು . 2002ಕ್ಕಿಂತ ಮೊದಲು ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವದ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಖಾಸಗಿ ನಾಗರಿಕರಿಗೆ ರಾಷ್ಟ್ರಧ್ವಜವನ್ನು ಹಾರಿಸಲು ಅನುಮತಿಯಿರಲಿಲ್ಲ.ಆದರೆ ಉದ್ಯಮಿ ನವೀನ್ ಜಿಂದಾಲ್ ರ ಹೋರಾಟದ ಫಲವಾಗಿ ರಾಷ್ಟ್ರಧ್ವಜ ಹಾರಿಸಲು ಇದ್ದ ನಿರ್ಬಂಧವನ್ನು ತೆಗೆದು ಹಾಕಲಾಯಿತು. ಜಿಂದಾಲ್ ಅವರು ಅಮೇರಿಕಾದಲ್ಲಿ ಶಿಕ್ಷಣ ಪಡೆದವರು.ಅಲ್ಲಿ ಸಾಮಾನ್ಯ ನಾಗರಿಕರು ರಾಷ್ಟ್ರಧ್ವಜ ಹಾರಿಸಲು ಯಾವುದೇ ಅಡೆತಡೆಗಳಿರಲಿಲ್ಲ.ಇದರಿಂದ ಪ್ರಭಾವಿತರಾದ ನವೀನ್ ಜಿಂದಾಲ್ ಶಿಕ್ಷಣ ಮುಗಿಸಿ ಭಾರತಕ್ಕೆ ಬರುತ್ತಿದ್ದಂತೆಯೇ 1992 ರ ಆರಂಭದಲ್ಲಿ ತಮ್ಮ ಕಚೇರಿಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿದರು.ಆಗಿನ ಆಡಳಿತ ವ್ಯವಸ್ಥೆ ಜಿಂದಾಲ್ ರ ಈ ಕ್ರಮವನ್ನು ಆಕ್ಷೇಪಿಸಿ ಧ್ವಜವನ್ನು ಮುಟ್ಟುಗೋಲು ಹಾಕಿಕೊಂಡಿತು ಮತ್ತು ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತು.ಆಗ ಜಿಂದಾಲ್ ಅವರು ದೆಹಲಿಯ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡಿ ಖಾಸಗಿ ನಾಗರಿಕರು ಧ್ವಜವನ್ನು ಬಳಸುವುದರ ಮೇಲಿರುವ ನಿರ್ಬಂಧವನ್ನು ತೆಗೆದು ಹಾಕಲು ಕೋರಿದರು.ಅವರ ಪರವಾಗಿ ವಾದಿಸಿದ ವಕೀಲರು ರಾಷ್ಟ್ರಧ್ವಜವನ್ನು ಸರಿಯಾದ ಕ್ರಮದಲ್ಲಿ ಗೌರವದಿಂದ ಹಾರಿಸುವುದು ನಾಗರಿಕರ ಹಕ್ಕು ಮತ್ತು ದೇಶ ಪ್ರೇಮವನ್ನು ವ್ಯಕ್ತಪಡಿಸುವ ಮಾರ್ಗ ಎಂದು ವಾದಿಸಿದರು.ದೆಹಲಿ ಉಚ್ಚ ನ್ಯಾಯಾಲಯವು ಈ ಪ್ರಕರಣವನ್ನು ಸುಪ್ರೀಂಕೋರ್ಟ್ ಗೆ ವರ್ಗಾಯಿಸಿತು.ಸುಪ್ರಿಂ ಕೋರ್ಟ್ ನವೀನ್ ಜಿಂದಾಲ್ ಪರವಾಗಿ ತೀರ್ಪು ನೀಡಿತು. ನಂತರ ಸರ್ಕಾರವು 26 ಜನೇವರಿ 2002 ರಂದು ಭಾರತೀಯ ಧ್ವಜ ಸಂಹಿತೆಯನ್ನು ತಿದ್ದುಪಡಿ ಮಾಡಿ ಖಾಸಗಿ ನಾಗರಿಕರು ಯಾವುದೇ ದಿನ ಧ್ವಜದ ಘನತೆ ಗೌರವವನ್ನು ಕಾಪಾಡಿಕೊಂಡು ಧ್ವಜವನ್ನು ಹಾರಿಸಲು ಅವಕಾಶ ಕಲ್ಪಿಸಿತು.ಆದರೆ ಧ್ವಜವನ್ನು ಸಮ ವಸ್ತ್ರವನ್ನಾಗಿ,ವೇಷ-ಭೂಷಣಗಳನ್ನಾಗಿ,ವಸ್ತು ಒಡವೆಗಳ ಮೇಲೆ ಕಸೂತಿ ಮಾಡುವುದನ್ನು ನಿಷೇಧಿಸಿತು.ಹೀಗಾಗಿ ಈಗ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹರ್ ಘರ್ ತಿರಂಗಾ ಅಭಿಯಾನವನ್ನು ನಡೆಸಲು ಸಾಧ್ಯವಾಗಿದೆ. ಆದರೆ ಈ ಅಭಿಯಾನದ ಸಂದರ್ಭದಲ್ಲಿ ಕಳೆದ ಡಿಸೆಂಬರ್ 30,2021ರಂದು ಭಾರತೀಯ ಧ್ವಜ ಸಂಹಿತೆ 2002ನ್ನು ಮತ್ತೆ ತಿದ್ದುಪಡಿ ಮಾಡಿದೆ.ಈ ತಿದ್ದುಪಡಿಯು ಪಾಲಿಸ್ಟರ್ ಬಟ್ಟೆಯಿಂದ ತಯಾರಿಸಿದ ಮತ್ತು ಯಂತ್ರಗಳ ಮೂಲಕ ತಯಾರಿಸಿದ ರಾಷ್ಟ್ರಧ್ವಜಗಳಿಗೂ ಅವಕಾಶ ನೀಡಿದೆ.ಮಾತ್ರವಲ್ಲ,ಆನ್ ಲೈನ್ ಪೋರ್ಟಲ್ ಗಳಲ್ಲಿ 30 ರೂಪಾಯಿಗಳಿಗೆ ಧ್ವಜಗಳು ಲಭ್ಯವಾಗಲಿವೆ ಎಂದು ಸಂಸ್ಕೃತಿ ಇಲಾಖೆಯು ಹೇಳಿದೆ.ಅಮೇಜಾನ್,ಫ್ಲಿಫ್ ಕಾರ್ಟ್ ಗಳಂತಹ ಇ- ಕಾಮರ್ಸ್ ಸಂಸ್ಥೆಗಳ ಜೊತೆಗೆ ಅದು ಮಾತುಕತೆಯನ್ನೂ ನಡೆಸಿದೆ.ಒಂದು ಕಡೆ ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ.ಇನ್ನೊಂದು ಕಡೆ ಇ-ಕಾಮರ್ಸ ಸಂಸ್ಥೆಗಳ ಮೂಲಕ ದೇಶದ ಗೌರವದ ಪ್ರತೀಕವಾದ ನಮ್ಮ ರಾಷ್ಟ್ರಧ್ವಜವನ್ನು ಚೀನಾದಿಂದಲೇ ತರಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ.(ಅಮೇಜಾನ್ ನಂತಹ ಸಂಸ್ಥೆಗಳಲ್ಲಿ ಭಾರತೀಯ ಧ್ವಜ ಮತ್ತು ಭೂಪಟಗಳಿಗೆ ನಿರಂತರವಾಗಿ ಅವಮಾನಗಳಾಗುತ್ತಿವೆ ಎಂಬ ಆಕ್ಷೇಪಗಳೂ ಇವೆ.)ಇದು ಸಹಜವಾಗಿ ರಾಷ್ಟ್ರಧ್ವಜ ತಯಾರಿಕೆಯಲ್ಲಿ ನಿರತರಾದವರ ಆಕ್ರೋಶಕ್ಕೆ ಕಾರಣವಾಗಿದೆ.ಖಾದಿ ಬಟ್ಟೆ ನಮ್ಮ ಅಸ್ಮಿತೆ.ಅದನ್ನು ಹೊರತು ಪಡಿಸಿ,ಯಂತ್ರದಿಂದ ತಯಾರಿಸಿದ ಧ್ವಜಗಳಿಗೆ ಅವಕಾಶ ನೀಡಿದರೆ ಧ್ವಜದ ಮಹತ್ವ ಮತ್ತು ಗೌರವ ಕಡಿಮೆಯಾಗಲಿದೆ ಎಂದು ಅಭಿಪ್ರಾಯ ಪಡಲಾಗುತ್ತಿದೆ.ಇಂತಹ ಧ್ವಜಗಳಿಗೆ ಮಾನ್ಯತೆ ನೀಡಿದರೆ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ರಾಷ್ಟ್ರಧ್ವಜ ತಯಾರಿಕಾ ಘಟಕ ಧ್ವಜ ತಯಾರಿಕೆಯನ್ನು ನಿಲ್ಲಿಸಲಿದೆ.ಇದರಿಂದ ಕೈ ಮಗ್ಗ ನಿಲ್ಲುತ್ತದೆ.ಕೈಮಗ್ಗ ನಿಂತರೆ ಹತ್ತಿ ಬೆಳೆಗಾರರಿಗೆ ಸಮಸ್ಯೆಯಾಗಲಿದೆ.ಈ ನಿಟ್ಟಿನಲ್ಲಿ ಸಂಘವು ಈಗಾಗಲೇ ಪ್ರಧಾನಿಗಳಿಗೆ ತಮ್ಮ ಪ್ರತಿಭಟನೆಯನ್ನು ಸಲ್ಲಿಸಿದೆ.ಫಲಿತಾಂಶವನ್ನು ಕಾದು ನೋಡಬೇಕಾಗಿದೆ. ಶ್ರೀಧರ ಬಿ.ನಾಯಕ,ಬೇಲೇಕೇರಿ