ಮಂಗಳವಾರ, ಸೆಪ್ಟೆಂಬರ್ 28, 2021

ಪ್ರೊ.ಎ.ಎಚ್ ನಾಯಕ

ಅಂದು ಅಂಕೋಲೆಯ ಗೋಖಲೆ ಸೆಂಟನರಿ ಕಾಲೇಜಿನಲ್ಲಿಯೇ ಶಿಕ್ಷಣವನ್ನು ಮುಂದುವರಿಸಬೇಕೆಂಬ ತಾಯಿಯವರ ಒತ್ತಾಯಕ್ಕೆ ಮಣಿದು ಕಾಲೇಜ್ ಕ್ಯಾಂಪಸ್ ಅನ್ನು ಪ್ರವೇಶಿಸಿದ್ದೆ.ಅದುವರೆಗಿನ ಜೀವನವನ್ನು ಘಟ್ಟದ ಮೇಲಿನ ಭಾಗದಲ್ಲಿ ಕಳೆದಿದ್ದ ನನಗೆ ಅಂಕೋಲೆಯ ಪರಿಸರ, ಭಾಷೆ ಹೊಸದಾಗಿತ್ತು, ಸಾಕಷ್ಟು ಅನುಮಾನ, ಸಂಶಯ, ಕೀಳರಿಮೆಗಳಿತ್ತು. ಭವ್ಯವಾದ ಕಟ್ಟಡವನ್ನು ಪ್ರವೇಶಿಸಲು ಭಯಪಟ್ಟು ಕಾಲೇಜಿನ ಹೆಸರು ಹೊತ್ತ ನಾಮ ಫಲಕವನ್ನು ಓದುತ್ತಾ ನಿಂತಿದ್ದೆ.ಆಗ "ಏಯ್ ಯಾರದು? ಯಾಕೆ ಬಂದದ್ದು?" ಎಂಬ ಕಂಚಿನ ಧ್ವನಿ ಕೇಳಿ ಬೆಚ್ಚಿ ಬಿದ್ದು ಸಾವಕಾಶವಾಗಿ ಹೆಜ್ಜೆ ಕೀಳಲು ಪ್ರಾರಂಭಿಸಿದ್ದೆ. ಆದರೆ ಆ ಧ್ವನಿ ನನ್ನನ್ನು ಮತ್ತೆ ಹಿಂಬಾಲಿಸಿ "ನಿಲ್ಲು , ಅಲ್ಲಿಯೇ ನಿಲ್ಲು" ಎಂದು ಅಧಿಕಾರವಾಣಿಯಿಂದ ಗದರಿಸಿದಂತೆ ಕೇಳಿ ಬಂತು.ಆಗಲೇ ಸಫಾರಿ ಧರಿಸಿದ್ದ ವ್ಯಕ್ತಿಯೊಬ್ಬರು ನನ್ನ ಹತ್ತಿರಕ್ಕೆ ಬಂದು ನಾನು ಯಾರು? ಏನು? ಎತ್ತ ? ಎಂದು ವಿಚಾರಿಸಿ, ನನ್ನ ಭಯ ಆತಂಕಗಳನ್ನು ದೂರಮಾಡಿ,ಒಳಗೆ ಕರೆದುಕೊಂಡು ಹೋಗಿ ಆಫೀಸಿನಿಂದ ಪ್ರವೇಶದ ಅರ್ಜಿಯನ್ನು ತುಂಬಿಸಿಕೊಂಡು, ಒಂದು ವಾರದ ನಂತರ ನೋಟಿಸ್ ಬೋರ್ಡಿನಲ್ಲಿ ಅರ್ಜಿ ತುಂಬಿದ ವಿದ್ಯಾರ್ಥಿಗಳ ಪಟ್ಟಿಯನ್ನು ಪ್ರಕಟಿಸುವದಾಗಿಯೂ,ಸಂದರ್ಶನಕ್ಕೆ ಹಾಜರಾಗುವಂತೆಯೂ ತಿಳಿಸಿದರು. ಒಂದು ವಾರ ಕಳೆದು ಕಾಲೇಜಿಗೆ ಬಂದಾಗ ಗೊತ್ತಾಗಿದ್ದು ಅವರು ಕಾಲೇಜಿನ ಹಿರಿಯ ಪ್ರಾಧ್ಯಾಪಕ ಪ್ರೊ.ಎ.ಎಚ್.ನಾಯಕರೆಂದು.ನಂತರದ ದಿನಗಳಲ್ಲಿ ಅವರು ಕೇವಲ ನನಗೊಬ್ಬನಿಗೆ ಅಲ್ಲ, ಭಯ ಆತಂಕದಲ್ಲಿರುವ ಹಲವು ವಿದ್ಯಾರ್ಥಿಗಳಿಗೆ ಧೈರ್ಯ,ಆತ್ಮವಿಶ್ವಾಸ ತುಂಬಿದವರು ಎಂಬುದು ನನ್ನ ಅನುಭವಕ್ಕೆ ಬಂತು. ರೈತರ ದುಡಿಮೆಯ ಹಣದಿಂದ ದಿನಕರ ದೇಸಾಯಿಯವರ ನೇತ್ರತ್ವದಲ್ಲಿ ಕೆನರಾ ವೆಲ್ಫೇರ್ ಟ್ರಸ್ಟ್ ಅಂಕೋಲೆಯಲ್ಲಿ ಮೂಲ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ಪದವಿ ಕಾಲೇಜನ್ನು ಪ್ರಾರಂಭಿಸಿದಾಗ ನಾಡಿನ ಬೇರೆ ಬೇರೆ ಕಡೆಗಳಿಂದ ಪ್ರತಿಭಾವಂತರನ್ನು ಹುಡುಕಿ ಅಧ್ಯಾಪಕರನ್ನಾಗಿ ನೇಮಕ ಮಾಡಿಕೊಂಡು ಶೈಕ್ಷಣಿಕವಾಗಿ ಭದ್ರ ಬುನಾದಿಯನ್ನು ಹಾಕಿದರು.ಹೀಗೆ ಯಾರ ಶಿಫಾರಸು ಮತ್ತು ಪ್ರಭಾವವಿಲ್ಲದೇ ಕೇವಲ ತಮ್ಮ ಪ್ರತಿಭೆ ಮತ್ತು ಪಾಂಡಿತ್ಯದ ಬಲದಿಂದ ಆಯ್ಕೆಯಾದವರಲ್ಲಿ ಪ್ರೊ.ಎ.ಎಚ್ ನಾಯಕ ಅವರೂ ಒಬ್ಬರಾಗಿದ್ದರು. ವಿದ್ಯಾರ್ಥಿಯಾಗಿದ್ದಾಗಲೇ ಅಂಚೆ ಇಲಾಖೆಯಲ್ಲಿ ಸೇವೆ ಪ್ರಾರಂಭಿಸಿದ ಅವರಿಗೆ ತಾನೊಬ್ಬ ಪ್ರಾಧ್ಯಾಪಕನಾಗಬೇಕು ಎಂಬ ಮಹತ್ವಾಕಾಂಕ್ಷೆ ಇತ್ತು. ಇದನ್ನು ಈಡೇರಿಸಿಕೊಳ್ಳಲು ಒಂದಲ್ಲ ಮೂರು ಸ್ನಾತಕೋತ್ತರ ಪದವಿಗಳನ್ನು ಪಡೆದು ಅರ್ಹತೆ ಗಿಟ್ಟಿಸಿಕೊಂಡಿದ್ದರು. ಅಂಕೋಲೆ ಕಾಲೇಜಿಗೆ ನೇಮಕವಾಗುವದರೊಂದಿಗೆ ಅವರ ಆಸೆ ಈಡೇರಿತು. ಅವರು ಅತ್ಯುತ್ತಮ ಇತಿಹಾಸ ಪ್ರಾಧ್ಯಾಪಕರಾಗಿದ್ದರು. ನಾನೇನು ಅವರ ನೇರ ವಿದ್ಯಾರ್ಥಿಯಲ್ಲ. ನಾನು ವಿದ್ಯಾರ್ಥಿಯಾಗಿದ್ದಾಗ ಅವರು ಮೇಜರ್ ತರಗತಿಗಳಿಗೆ ಮಾತ್ರ ಪಾಠ ಮಾಡುತ್ತಿದ್ದರು. ನಾನು ಇತಿಹಾಸವನ್ನು ಮೈನರ್ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದೆ. ಆದರೆ ಮೇಜರ್ ವಿದ್ಯಾರ್ಥಿಗಳು ಅವರ ಪಾಠದ ಕುರಿತು ಮಾತನಾಡುವುದನ್ನು ಕೇಳಿ ನಾನು ಒಂದೆರಡು ಪಿರಿಯಡ್ಡುಗಳಿಗೆ ಕುಳಿತದ್ದು ನೆನಪಿದೆ. ಅವರ ಪಾಠದ ಶೈಲಿ ಅತ್ಯುತ್ತಮವಾಗಿತ್ತು. ಯಾವುದೇ ಟಿಪ್ಪಣಿ - ಪುಸ್ತಕಗಳ ನೆರವಿಲ್ಲದೆ ನೇರವಾಗಿ ಅವರು ಪಾಠಮಾಡುತ್ತಿದ್ದರು ಅವರ ಕಂಚಿನ ಕಂಠ ಇಡೀ ತರಗತಿಯನ್ನು ಹಿಡಿತದಲ್ಲಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.ಅವರ ಸಮಯಪ್ರಜ್ಞೆ ಅನುಕರಣೀಯವಾಗಿತ್ತು. ಗಂಟೆ ಹೊಡೆಯುತ್ತಿದ್ದಂತೆ ಅವರು ತರಗತಿಗೆ ಹಾಜರಾಗುತ್ತಿದ್ದರು.ತರಗತಿಗಳಲ್ಲಿ ತರಲೆ ಮಾಡುವ ವಿದ್ಯಾರ್ಥಿಗಳಿಗೆ ಪ್ರೀತಿಯಿಂದಲೇ ಗದರಿ ಸರಿದಾರಿಗೆ ತರಲು ಪ್ರಯತ್ನಿಸುತ್ತಿದ್ದರು. ಅಂಕೋಲೆಯ ಕಾಲೇಜು ತನ್ನ ಶಿಸ್ತು ಮತ್ತು ಸೃಜನಶೀಲ ಚಟುವಟಿಕೆಗಳಿಂದ ಕರ್ನಾಟಕದಲ್ಲಿಯೇ ಹೆಸರಾಗಿತ್ತು.ಇದಕ್ಕೆ ಪ್ರಿನ್ಸಿಪಾಲ್ ಕೆ.ಜಿ.ನಾಯಕರ ದಕ್ಷತೆ ಮತ್ತು ಮಾರ್ಗದರ್ಶನ ಕಾರಣವಾಗಿತ್ತು. ಆದರೆ ಅಂದು ಕಾರ್ಯನಿರ್ವಹಿಸುತ್ತಿದ್ದ ಅಧ್ಯಾಪಕರ ಕ್ರಿಯಾಶೀಲತೆ, ಸಹಕಾರವೂ ಅದಕ್ಕೆ ಪೂರಕವಾಗಿತ್ತು ಎಂದರೆ ತಪ್ಪಾಗಲಾರದು ಪ್ರೊ.ಡಿ.ಆರ್.ಪೈ, ಪ್ರೊ.ಎಂ.ಪಿ.ಭಟ್ಟ, ಪ್ರೊ.ಸಿ.ಎನ್.ಶೆಟ್ಟಿ, ಪ್ರೊ.ವಿ.ಎ.ಜೋಶಿ, ಪ್ರೊ.ಎ.ಎಚ್.ನಾಯಕ ಮೊದಲಾದ ಅರ್ಪಣಾ ಮನೋಭಾವದ ಪ್ರಾಧ್ಯಾಪಕರು ಕೆ.ಜಿ.ನಾಯಕರ ಹೆಗಲಿಗೆ ಹೆಗಲು ಕೊಟ್ಟು,ಕಾಲೇಜನ್ನು ಬೆಳೆಸುವಲ್ಲಿ ಸಹಕರಿಸಿದರು.ಈ ಎಲ್ಲ ಅಧ್ಯಾಪಕರಲ್ಲಿ ಎ.ಎಚ್ ನಾಯಕರು ಮುಂಚೂಣಿಯಲ್ಲಿದ್ದರು.ಅವರು ಕೇವಲ ತರಗತಿಗಳಿಗೆ ಸೀಮಿತರಾಗದೇ ತರಗತಿಗಳು ಮುಗಿದ ನಂತರ ಕಾಲೇಜು ವರಾಂಡದಲ್ಲಿ ಅವರು ಹಾಜರಿರುತ್ತಿದ್ದರು.ತರಗತಿಗಳು ನಡೆಯುತ್ತಿದ್ದಾಗ ಯಾವುದೇ ವಿದ್ಯಾರ್ಥಿ ವರಾಂಡದ ಮೇಲೆ ತಿರುಗಾಡದಂತೆ ನೋಡಿಕೊಳ್ಳುತ್ತಿದ್ದರು. ಕ್ಲಾಸುಗಳು ಇಲ್ಲದಿದ್ದರೆ ವಾಚನಾಲಯಕ್ಕೆ ಹೋಗುವಂತೆ ಇಲ್ಲವೇ ಜಿಮಖಾನಾ ಹಾಲ್ ಗೆ ಹೋಗುವಂತೆ ನಿರ್ದೇಶನ ನೀಡುತ್ತಿದ್ದರು.ಒಟ್ಟಿನಲ್ಲಿ ವಿದ್ಯಾರ್ಥಿಗಳು ಯಾವುದಾದರೂ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬುದು ಅವರ ಅನಿಸಿಕೆಯಾಗಿತ್ತು.ಎಷ್ಟೇ ಶಿಸ್ತು ಕಠಿಣ ನಿಯಮಗಳಿದ್ದರೂ ಕಾಲೇಜಿನಲ್ಲಿ ಸಣ್ಣಪುಟ್ಟ ಗುಂಪು ಗಲಾಟೆಗಳಾಗುವದು ಸಹಜ.ಒಮ್ಮೆ ಕಾಲೇಜಿನಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು.ಆಗ ಸಿನಿಮೀಯ ರೀತಿಯಲ್ಲಿ ಕಿಟಕಿ ತೆರೆದು ಹಾರಿಬಂದು ವಿದ್ಯಾರ್ಥಿಗಳ ಕಲಹ ತೀವ್ರ ಸ್ವರೂಪ ಪಡೆಯದಂತೆ ನೋಡಿಕೊಂಡಿದ್ದರು.ಇದು ಅವರ ಧೈರ್ಯದ ಪ್ರತೀಕವಾಗಿತ್ತು. ಅವರು ಎಂದಿಗೂ ವಿದ್ಯಾರ್ಥಿಗಳಿಗೆ ಉಗ್ರಸ್ವರೂಪದ ಶಿಕ್ಷೆ ನೀಡುತ್ತಿರಲಿಲ್ಲ. ಎಂತಹ ಅಧಿಕಪ್ರಸಂಗದ ವಿದ್ಯಾರ್ಥಿ ಇದ್ದರೂ ಅವನಿಗೆ ಪ್ರೀತಿ ಸಮಾಧಾನದಿಂದ ಬುದ್ಧಿ ಹೇಳಿ ತಿದ್ದುತ್ತಿದ್ದರು. ಅಂದು ತುಂಟತನ ಮಾಡುತ್ತಿದ್ದ ಅನೇಕ ವಿದ್ಯಾರ್ಥಿಗಳು ಎ.ಎಚ್.ನಾಯಕರ ಈ ಗುಣವನ್ನು ಇಂದು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾರೆ. ಅಧ್ಯಾಪಕರಾಗಿ ಮಾತ್ರವಲ್ಲ, ಉತ್ತಮ ಆಡಳಿತಗಾರರಾಗಿಯೂ ಪ್ರೊ.ಎ.ಎಚ್.ನಾಯಕರು ಹೆಸರು ಮಾಡಿದ್ದರು.ಕೆ.ಜಿ.ನಾಯಕರ ನಂತರ ಪ್ರಾಚಾರ್ಯರಾಗಿ ಅಧಿಕಾರ ಸ್ವೀಕರಿಸಿದ ಅವರು ಕೆ.ಜಿ. ನಾಯಕರು ನಿರ್ಮಿಸಿದ್ದ ಪ್ರಭಾವಲಯವನ್ನು ವಿಸ್ತರಿಸುವಂತೆ ಆಡಳಿತ ನಡೆಸಿದರು. ಅವರ ಅವಧಿಯಲ್ಲಿ ಕಾಲೇಜಿನ ರಜತ ಮಹೋತ್ಸವ ಸಮಾರಂಭ ತುಂಬ ವಿಜೃಂಭಣೆಯಿಂದ ನಡೆದಿತ್ತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ.ಶಿವರಾಮ ಕಾರಂತರು ಅವರ ಕಾರ್ಯಕ್ಷಮತೆ ಮತ್ತು ದಕ್ಷತೆಯನ್ನು ಹಾಡಿ ಹೊಗಳಿದ್ದರು. ಪರೋಪಕಾರಿ ಮತ್ತು ಮಾನವೀಯ ಗುಣಗಳ ಗಣಿ ಯಾಗಿದ್ದ ಅವರು ತಾವು ನೀಡಿದ ಸಹಾಯ ಸಹಕಾರವನ್ನು ಅವರು ಎಂದಿಗೂ ಯಾರಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ ಬಲಗೈ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು ಎಂಬುದು ಅವರ ನೀತಿಯಾಗಿತ್ತು.ಅನೇಕ ಬಡ ಅಸಹಾಯಕ ವಿದ್ಯಾರ್ಥಿಗಳಿಗೆ ಅವರು ನೆರವು ನೀಡುತ್ತಿದ್ದರು.ಆದರೆ ಅದನ್ನು ಎಂದೂ ಪ್ರಚಾರಕ್ಕೆ ಬಳಸಿಕೊಳ್ಳಲಿಲ್ಲ. ಅವರ ಅಗಲಿಕೆಯ ನಂತರ ಹಲವರು ಅವರಿಂದ ಪಡೆದ ಸಹಾಯವನ್ನು ಕೃತಜ್ಞತೆಯಿಂದ ಸ್ಮರಿಸಿದ್ದರು. ಪ್ರೊ.ಎ.ಎಚ್.ನಾಯಕರು ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದರನ್ನು ಸಮಗ್ರವಾಗಿ ಓದಿಕೊಂಡಿದ್ದರು. ಅವರ ತತ್ವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ಉತ್ತಮ ಮಾತುಗಾರರಾಗಿದ್ದ ಅವರ ಭಾಷೆ ಅತ್ಯಂತ ಪ್ರಬುದ್ಧವಾಗಿತ್ತು .ಕನ್ನಡ - ಇಂಗ್ಲಿಷ್ ಭಾಷೆಗಳಲ್ಲಿ ಅವರು ನಿರರ್ಗಳವಾಗಿ ಭಾಷಣ ಮಾಡುತ್ತಿದ್ದರು. ತಮ್ಮ ಸಂವಹನ ಕಲೆಯಿಂದಾಗಿಯೇ ಅವರು ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವಲ್ಲಿ, ಅವರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಸಕಲರಿಗೂ ಲೇಸನ್ನೇ ಬಯಸುವ,ಸಕಲರಲ್ಲಿಯೂ ಲೇಸನ್ನೇ ಕಾಣುವ ಗುಣ ಎ.ಎಚ್.ನಾಯಕರದಾಗಿತ್ತು.ಆದ್ದರಿಂದಲೇ ಅವರು ಕಲ್ಲಿನಲ್ಲಿಯೂ ದೇವರನ್ನು ಕಂಡು ನಮಸ್ಕರಿಸುತ್ತಿದ್ದರು. ಇದು ದೈವಿಕತೆಯನ್ನು ಮೀರಿದ ಅಧ್ಯಾತ್ಮಿಕತೆಯಾಗಿತ್ತು.ಅವರ ಈ ಸ್ವಭಾವ ಕೆಲವರಿಗೆ ಅವರ ಮೋಜಿನದಾಗಿತ್ತು.ಅದನ್ನು ದುರುಪಯೋಗಪಡಿಸಿಕೊಳ್ಳಲು ಕೆಲವರು ಪ್ರಯತ್ನಿಸುತ್ತಿದ್ದರು. ಆದರೆ ಅವರ ಸಾತ್ವಿಕ ಸ್ವಭಾವ ಅದರತ್ತ ಗಮನ ನೀಡುತ್ತಿರಲಿಲ್ಲ. ತಮ್ಮ ಕಣ್ಣೆದುರು ಏನು ನಡೆಯುತ್ತಿದೆ ಎಂಬುದನ್ನು ಮಾತ್ರ ಗಮನಿಸುತ್ತಿದ್ದ ಅವರು ಬೆನ್ನ ಹಿಂದೆ ನಡೆಯುತ್ತಿದ್ದ ಘಟನೆಗಳಿಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡುತ್ತಿರಲಿಲ್ಲ. ಇದು ಅವರಿಗೆ ಮಾತ್ರ ಸಿದ್ದಿಸಿದ ಗುಣವಾಗಿತ್ತು. ಎ.ಎಚ್ ನಾಯಕರು ತಮ್ಮ ಬದುಕಿನ ಪಯಣ ಮುಗಿಸಿ ಮೂರು ವರ್ಷಗಳು ಕಳೆದಿವೆ.ಅವರ ತಾತ್ವಿಕ ಬದ್ಧತೆ, ಕರ್ತವ್ಯ ಪ್ರಜ್ಞೆ, ಪರೋಪಕಾರ ಗುಣ, ದೈವಭಕ್ತಿಗಳು ಎಂದಿಗೂ ಎಲ್ಲರಿಗೂ ಮಾದರಿಯಾಗಿರುತ್ತವೆ. - ಶ್ರೀಧರ ಬಿ.ನಾಯಕ, ಬೇಲೇಕೇರಿ.

ಸೋಮವಾರ, ಜೂನ್ 28, 2021

ತ್ರಿಪದಿ

ತ್ರಿಪದಿಯು ಅಚ್ಚಗನ್ನಡ ಛಂದೋ ಮಟ್ಡು. ಕನ್ನಡ ಜನಪದ ಗೀತೆಗಳ ಬಹುಭಾಗ ತ್ರಿಪದಿಯಲ್ಲಿವೆ. ಆದ್ದರಿಂದ ತ್ರಿಪದಿಯನ್ನು ಕನ್ನಡ ವೃತ್ತಗಳ ಗಾಯತ್ರಿ ಎಂದು ಕರೆಯಲಾಗುತ್ತದೆ. ಶಾಸನ ಸಾಹಿತ್ಯಗಳಲ್ಲಿಯೂ ತ್ರಿಪದಿ ಸ್ಥಾನಪಡೆದಿದೆ. ತ್ರಿಪದಿಯಷ್ಟು ಸುದೀರ್ಘವಾದ ಇತಿಹಾಸವನ್ನು ಹೊಂದಿದ ಇನ್ನೊಂದು ಸಾಹಿತ್ಯ ರೂಪ ಕನ್ನಡದಲ್ಲಿಲ್ಲ . ತ್ರಿಪದಿಯ ಲಕ್ಷಣ ನಾಗವರ್ಮ ಜಯಕೀರ್ತಿ ಸರ್ವಜ್ಞ ಸೋಮೇಶ್ವರ ಮುಂತಾದವರು ತಮ್ಮ ಚಂದು ಗ್ರಂಥಗಳಲ್ಲಿ ತ್ರಿಪದಿಯ ಲಕ್ಷಣವನ್ನು ಪ್ರಸ್ತಾಪಿಸಿದ್ದಾರೆ ಹೆಸರೇ ಸೂಚಿಸುವಂತೆ ತಿರುಪತಿ ಮೂರು ಸಾಲುಗಳನ್ನು ಒಳಗೊಂಡಿದೆ ಸರ್ವಜ್ಞ ಸೋಮೇಶ್ವರನ ಮಾನಸೋಲ್ಲಾಸ ದಲ್ಲಿ ತಿರುಪತಿಯನ್ನು ನಾಲ್ಕು ಸಾಲುಗಳನ್ನು ಪರಿಗಣಿಸಿದ್ದಾರೆ ನಾಗವರ್ಮ ಹೇಳಿದ ತ್ರಿಪದಿಯ ಲಕ್ಷಣ ಹೀಗಿದೆ. u u. u . _ . u u. u._. uu.u._._. u. _ ಬಿಸರುಹೋ|ದ್ಭವಗಣಂ| ರಸದಶ|ಸ್ಥಾನದೊಳ್| uu.u.u. _. u. uu. u._. u u. u.u. ಬಿಸರುಹ| ನೇತ್ರ | ಗಣಮೆಬl ರ್ಕುಳಿದವು| u u.u.u. _. _. u u.u.u. ಬಿಸರುಹ| ನೇತ್ರೇ| ತ್ರಿಪದಿಗೆ ಈ ಪದ್ಯ ತ್ರಿಪದಿಯ ಲಕ್ಷಣ ಹೇಳುವುದರ ಜೊತೆಗೆ ತ್ರಿಪದಿಯ ಲಕ್ಷ್ಯವೂ ಆಗಿದೆ .ತ್ರಿಪದಿಯ ರಸ ಅಂದರೆ ಆರನೆಯ ಸ್ಥಾನದಲ್ಲಿ, ಮತ್ತು ದಶ ಅಂದರೆ ಹತ್ತನೆಯ ಸ್ಥಾನದಲ್ಲಿ ಬ್ರಹ್ಮಗಣಗಳು ಬರುತ್ತವೆ. ಉಳಿದ ಗಣಗಳು ವಿಷ್ಣುಗಣಗಳಾಗಿರುತ್ತವೆ. ನಾಗವರ್ಮ ಚಿತ್ರ ಮತ್ತು ವಿಚಿತ್ರ ಎಂಬ ತ್ರಿಪದಿಯ ಎರಡು ಪ್ರಭೇದಗಳನ್ನು ಹೇಳುತ್ತಾನೆ .ಚಿತ್ರ ತ್ರಿಪದಿಯು ಸಾಮಾನ್ಯ ತ್ರಿಪದಿಯಂತೆ ಇರುತ್ತದೆ. ಆದರೆ ವಿನ್ಯಾಸದ ದೃಷ್ಟಿಯಿಂದ ನಾಲ್ಕು ಪಾದಗಳು ಆಗುತ್ತವೆ. ವಿಚಿತ್ರ ತ್ರಿಪದಿಯು ಸಾಮಾನ್ಯ ತ್ರಿಪದಿಯಂತೆ ಇದ್ದರೂ ಕೊನೆಯ ಗಣ ರುದ್ರಗಣವಾಗಿರುತ್ತದೆ. ಒಟ್ಟಿನಲ್ಲಿ ಲಕ್ಷಣವನ್ನು ಹೀಗೆ ಸಂಗ್ರಹಿಸಬಹುದು: 1) ತ್ರಿಪದಿಯಲ್ಲಿ 3 ಸಾಲುಗಳಿರುತ್ತವೆ. 2) ಒಟ್ಟು11 ಗಣಗಳಿರುತ್ತವೆ. ಆರು ಮತ್ತು ಹತ್ತನೆಯ ಗಣಗಳು ಬ್ರಹ್ಮ ಗಣಗಳು, ಉಳಿದ ಗಣಗಳು ವಿಷ್ಣುಗಣಗಳು. 3) ಲಕ್ಷಣವನ್ನು ಗಮನಿಸಿದರೆ ಏಳು ಮತ್ತು ಹನ್ನೊಂದನೆಯ ಗಣಗಳು ಎರಡು ಲಘು ಗಳಿಂದ ಪ್ರಾರಂಭವಾಗುತ್ತವೆ. 4) ತಿರುಪತಿಯಲ್ಲಿ ಚಿತ್ರ ಮತ್ತು ವಿಚಿತ್ರ ಎಂಬ ಎರಡು ಪ್ರಭೇದಗಳನ್ನು ಗುರುತಿಸಲಾಗುತ್ತದೆ. 5)ತ್ರಿಪದಿಯ ಒಟ್ಟು ಗಣ ವಿನ್ಯಾಸ ಹೀಗೆ ಗುರುತಿಸಬಹುದು: ವಿಷ್ಣು| ವಿಷ್ಣು |ವಿಷ್ಣು| ವಿಷ್ಣು | ವಿಷ್ಣು |ಬ್ರಹ್ಮ| ವಿಷ್ಣು | ವಿಷ್ಣು |ವಿಷ್ಣು| ಬ್ರಹ್ಮ|ವಿಷ್ಣು| ತ್ರಿಪದಿ ಒಂದು ಹಾಡುಗಬ್ಬವಾಗಿರುವುದು. ಹಾಡುವಾಗ ಮೊದಲ ಎರಡು ಪಾದಗಳಲ್ಲಿನ 7 ಗಣಗಳವರೆಗೆ ಒಂದು ಘಟಕವಾಗಿ ಹಾಡಿ ನಂತರ ಐದನೆಯ ಗಣದಿಂದ ಪ್ರಾರಂಭಿಸಿ ಮತ್ತೆ ಹಾಡಬೇಕು. ಇದರಿಂದ ತ್ರಿಪದಿ ನಾಲ್ಕು ಸಾಲುಗಳು ಎನ್ನಿಸುತ್ತದೆ. ತ್ರಿಪದಿ ಅಂಶಗಣ ಛಂದಸ್ಸು ಆಗಿರುವುದರಿಂದ ಅಲ್ಲಿಗೆ ವಿಕಲ್ಪತೆಗೆ ಅವಕಾಶವಿದೆ. ಅಂದರೆ ವಿಷ್ಣು ಗಣ ಸ್ಥಾನದಲ್ಲಿ ಬ್ರಹ್ಮ ಗಣಗಳಾಗಲಿ, ರುದ್ರ ಗಣಗಳಾಗಲಿ ಬರ ಬಹುದು ಆದರೆ ಆರು ಮತ್ತು 10ನೆಯ ಗಣ ಸ್ಥಾನದಲ್ಲಿ ವಿಕಲ್ಪತೆಗೆ ಅವಕಾಶವಿಲ್ಲ. ಅಲ್ಲಿ ಬ್ರಹ್ಮಗಣ ಬರಲೇಬೇಕು. ಕನ್ನಡದಲ್ಲಿ ಮೊಟ್ಟಮೊದಲ ತ್ರಿಪದಿಯ ಲಿಖಿತ ದಾಖಲೆಗಳು ಕ್ರಿಸ್ತಶಕ 700 ರ ಬಾದಾಮಿ ಶಾಸನದಲ್ಲಿ ದೊರಕುತ್ತದೆ. ಐತಿಹಾಸಿಕ ಮತ್ತು ಸಾಹಿತ್ಯಕ ದೃಷ್ಟಿಯಿಂದ ಮಹತ್ವಪೂರ್ಣವಾದ ತ್ರಿಪದಿ ಇದಾಗಿದೆ. ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ ಭಾದಿಪ್ಪ ಕಲಿಗೆ ಕಲಿಯುಗ ವಿಪರೀತನ್ ಮಾಧವನೀತನ್ ಪೆರನಲ್ಲ || ಈ ತ್ರಿಪದಿ ನಾಗವರ್ಮ ಹೇಳಿದ ಲಕ್ಷಣಕ್ಕೆ ಅನುಗುಣವಾಗಿದೆ ಇಲ್ಲಿ ಮೂರನೆಯ ಗಣವನ್ನು ವಿಷ್ಣುಗಣವನ್ನಾಗಿ ವಿಭಜಿಸಿದರೆ ಒಳ ಪ್ರಾಸಕ್ಕೆ ಭಂಗ ಬರುವುದರಿಂದ ಅದನ್ನು ಬ್ರಹ್ಮಗಣವನ್ನಾಗಿ ಮಾಡಿ ಮೂರನೆಯ ಗಣವನ್ನು ರುದ್ರಗಣವನ್ನಾಗಿ ಪರಿವರ್ತಿಸಬಹುದು. ಸೊರಬ,ಹುಂಚ, ಹೇಮಾವತಿ, ನೀಲಗುಂದ, ಮತ್ತು ಶಿಕಾರಿಪುರದ ಶಾಸನಗಳಲ್ಲಿ ತ್ರಿಪದಿಗಳು ದೊರಕುತ್ತವೆ. ಪಂಪನ ನಾಗವರ್ಮ ಚಾವುಂಡರಾಯ ನಾಗಚಂದ್ರ ಮುಂತಾದ ಕವಿಗಳು ತಮ್ಮ ಕಾವ್ಯಗಳಲ್ಲಿ ಬಳಸಿದ್ದಾರೆ. ಮಾತ್ರಗಣಾನ್ವಿತ ತ್ರಿಪದಿಗಳು : ಅಂಶಗಣಾನ್ವಿತವಾದ ತ್ರಿಪದಿಗಳು 12ನೆಯ ಶತಮಾನದ ನಂತರ ಮಾತ್ರಗಣವಾಗಿ ಪರಿವರ್ತಿತವಾದದ್ದನ್ನು ವಿದ್ವಾಂಸರು ಗುರುತಿಸುತ್ತಾರೆ. ಮಾತ್ರಾ ಗಣಾನ್ವಿತ ತ್ರಿಪದಿಗಳಲ್ಲಿ ವಿಷ್ಣು ಗಣದ ಬದಲು ಅದೇ ವ್ಯಾಪ್ತಿಯ ಐದು ಮಾತ್ರೆಯ ಗಣಗಳು, ಬ್ರಹ್ಮ ಗಣದ ಬದಲು 3-4 ಮಾತ್ರೆ ಗಣಗಳು ಬರುತ್ತವೆ. ಸರ್ವಜ್ಞ ಈ ಪುಟ್ಟ ಛಂದಸ್ಸನ್ನು ಸಮರ್ಥವಾಗಿ ತನ್ನ ಕಾವ್ಯ ಮಾಧ್ಯಮವನ್ನಾಗಿ ಬಳಸಿಕೊಂಡಿದ್ದಾನೆ.ಅವನ ತ್ರಿಪದಿಗಳು ಅಂಶಗಣ ಘಟಿತವಾಗಿರದೆ ಮಾತ್ರಗಣ ಘಟಿತವಾಗಿವೆ. ಸಾಲವನು ಕೊಂಬಾಗ ಹಾಲೋಗರುಂಡಂತೆ ಸಾಲಿಗನು ಬಂದು ಎಳೆವಾಗ-ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ ಇಲ್ಲಿ ಆರು ಮತ್ತು ಹತ್ತನೆಯ ಸ್ಥಾನದಲ್ಲಿ ಮೂರು ಮಾತ್ರೆಯ ಗಣಗಳು ಬರುತ್ತವೆ. ಉಳಿದಂತೆ ಐದು ಮಾತ್ರೆಯ ಗಣಗಳಿವೆ. ಜನಪದ ಕಾವ್ಯಗಳಲ್ಲಿ ತನ್ನ ಮುದ್ರೆಯನ್ನು ಸ್ಪಷ್ಟವಾಗಿ ಒತ್ತಿದ ತ್ರಿಪದಿಯನ್ನು ಹೊಸಗನ್ನಡದಲ್ಲಿ ಮಾಸ್ತಿ, ಬೇಂದ್ರೆ ,ಪುತಿನ,ಎಸ್.ವಿ. ಪರಮೇಶ್ವರಭಟ್ಟರು ಸಮರ್ಥವಾಗಿ ಬಳಸಿದ್ದಾರೆ.ಶ್ರೀಮತಿ ಜಯದೇವಿತಾಯಿ ಲಿಗಾಡೆ ಎಂಬ ಕವಯಿತ್ರಿ ತ್ರಿಪದಿಯನ್ನು ಬಳಸಿಕೊಂಡು ಶ್ರೀ ಸಿದ್ದರಾಮೇಶ್ವರ ಪುರಾಣ ಎಂಬ ಮಹಾಕಾವ್ಯವನ್ನು ರಚಿಸಿದ್ದಾರೆ. ಅಲ್ಲಿ ಒಟ್ಟು 4100 ತ್ರಿಪದಿಗಳಿವೆ.

ಬುಧವಾರ, ಜೂನ್ 23, 2021

ರಗಳೆಯ ಲಕ್ಷಣ

ರಗಳೆ ರಗಳೆ ಕನ್ನಡದ ವಿಶಿಷ್ಟ ಸಾಹಿತ್ಯ ಪ್ರಕಾರ. ಹನ್ನೆರಡನೇ ಶತಮಾನದ ಬದಲಾವಣೆಯ ಗಾಳಿ ಸಾಹಿತ್ಯ ರೂಪದಲ್ಲಿ ತನ್ನ ಪ್ರಭಾವವನ್ನು ಬೀರಿತು. ಹೀಗಾಗಿ ಚಂಪೂ ರೂಪದಲ್ಲಿದ್ದ ಸಾಹಿತ್ಯ, ವಚನ ಮತ್ತಿತರ ರೂಪಗಳಲ್ಲಿ ಅಭಿವ್ಯಕ್ತವಾಗತೊಡಗಿತು. ಜನರ ಆಡುಮಾತಿನ ಲಯವನ್ನು ಅನುಸರಿಸಿ ಸಾಹಿತ್ಯ ರೂಪಗಳು ಹೊಸಹುಟ್ಟು ಪಡೆದವು. ಇಂತಹ ಸಂದರ್ಭದಲ್ಲಿ ರೂಪಗೊಂಡ ವಿಶಿಷ್ಡ ಸಾಹಿತ್ಯ ಪ್ರಕಾರ ರಗಳೆ. ಈಗ ತಿಳಿದಿರುವ ಮಟ್ಟಿಗೆ ರಗಳೆ ಅಥವಾ ಅದರ ಸಮಾನಾರ್ಥಕ ಪದ ರಗಟಾ ಎಂಬ ಶಬ್ದವನ್ನು ಮೊಟ್ಟಮೊದಲು ಬಳಸಿದವನು ನಾಗವರ್ಮ. ಜಯಕೀರ್ತಿ, ಗುಣಚಂದ್ರ ಮೊದಲಾದವರೂ ಸಹ ತಮ್ಮ ಛಂಧೋ ಗ್ರಂಥಗಳಲ್ಲಿ ರಗಳೆ ಎಂಬ ಶಬ್ದವನ್ನು ಬಳಸಿದ್ದಾರೆ.ಪ್ರಾಕೃತದಲ್ಲಿ ರಗಡಾ ಧ್ರುವಕ ಎಂಬ ಸಮಚತುಷ್ಪದಿ ವೃತ್ತವಿದೆ. ಅದು ಕನ್ನಡದಲ್ಲಿ ರಗಳೆ ಅಥವಾ ರಘಟಾ ಎಂಬ ಮಾತುಗಳಿಗೆ ಪ್ರೇರಣೆ ನೀಡಿರಬೇಕು. ರಗಳೆಯ ಮೂಲ ರಗಳೆಯ ಮೂಲವನ್ನು ಕೆಲವರು ಸಂಸ್ಕೃತದಲ್ಲಿಯೂ ಮತ್ತೆ ಕೆಲವರು ಪ್ರಾಕೃತದಲ್ಲಿ ಯೂ ಇನ್ನು ಕೆಲವರು ಕನ್ನಡದಲ್ಲಿಯೂ ಗುರುತಿಸಲು ಪ್ರಯತ್ನಿಸುತ್ತಾರೆ. ಕೆಲವು ಕನ್ನಡ ಕಾವ್ಯಗಳಲ್ಲಿ ರಗಳೆಯ ಪದ್ಯಗಳಿಗೆ ಸಂಸ್ಕೃತದ ಪದ್ಧತಿ ಎಂಬ ಪದದ ಪ್ರಾಕೃತ ರೂಪವಾದ ಪದ್ಧಳಿ ಎಂಬ ಹೆಸರು ಪ್ರಯೋಗಿಸಲಾಗಿದೆ‌ ಈ ಕಾರಣದಿಂದ ರಗಳೆಯ ಮೂಲ ಪ್ರಾಕೃತ ಇಲ್ಲವೆ ಅಪಭ್ರಂಶ ಭಾಷೆಯಲ್ಲಿದೆ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ರಗಳೆಯ ಲಕ್ಷಣ ಕನ್ನಡದಲ್ಲಿ ಮೊಟ್ಟ ಮೊದಲು ರಗಳೆಯ ಲಕ್ಷಣವನ್ನು ಪ್ರಸ್ತಾಪಿಸಿದನು ನಾಗವರ್ಮ. ಜಯಕೀರ್ತಿಯೂ ತನ್ನ "ಛಂದೋನುಶಾಸನ"ದಲ್ಲಿ ರಗಳೆಯ ಲಕ್ಷಣವನ್ನು ಹೇಳಿದ್ದಾನೆ. ಗಣನಿಯಮ ವಿಪರ್ಯಾಸದೊ ಳೆಣೆವಡೆದೊಳ್ಪೆಸೆಯೆ ಮಾತ್ರ ಸಮನಾಗೆ ಗುಣಾ ಗ್ರಣಿಯ ಮತದಿಂದ ತಾಳದ ಗಣನೆಗೊಡಂಬಟ್ಟೊಡದುವೆ ರಘಟಾ ಬಂಧಂ ರಗಳೆಯ ಲಕ್ಷಣವನ್ನು ಒಟ್ಟಾರೆಯಾಗಿ ಹೀಗೆ ಸಂಗ್ರಹಿಸಬಹುದು: ಪ್ರತಿ ಪಾದದಲ್ಲಿ ಗಣ ನಿಯಮದಲ್ಲಿ ವ್ಯತ್ಯಾಸವಿರುತ್ತದೆ. ಆದರೆ ಒಟ್ಟು ಮಾತ್ರೆಗಳ ಸಂಖ್ಯೆ ಸಮಾನವಾಗಿರುತ್ತದೆ. ಎರಡೆರಡು ಪಾದಗಳು ಒಂದೊಂದು ಜೋಡಿಯಾಗಿರುತ್ತವೆ.ಗಣಗಳ ನಡೆ ತಾಳದ ಲೆಕ್ಕಕ್ಕೆ ತಪ್ಪದ ಹಾಗೆ ಇರುತ್ತದೆ. ರಗಳೆ ನಿರ್ದಿಷ್ಟವಾದ ಪಾದಗಳನ್ನು ಹೊಂದಿಲ್ಲ. ಈ ಪದ್ಯವನ್ನು ಕೇಳಿದರೆ ಕಿವಿಗೆ ಹಿತವಾಗಿರಬೇಕು. ರಗಳೆಯ ಇತಿಹಾಸ: ಕನ್ನಡದಲ್ಲಿ ದೊರೆತ ಮೊಟ್ಟಮೊದಲ ಕೃತಿ ಕವಿರಾಜಮಾರ್ಗದಲ್ಲಿ ರಗಳೆ ಬಳಕೆಯಾಗಲಿಲ್ಲ. ಆದರೆ ಆದಿಕವಿ ಪಂಪನ ಆದಿಪುರಾಣದಲ್ಲಿ ಎರಡು ರಗಳೆಗಳನ್ನು ಕಾಣುತ್ತೇವೆ. ಸ್ಫುರಿತೇಂ। ದ್ರನೀಲ| ಮಣಿಖಚಿ| ತ ಭೂಮಿ ಚೆಲುವಿಂ| ಗಿದು ನೆ| ಟ್ಟನೆ ಜ| ನ್ಮ ಭೂಮಿ ಹೀಗೆ ಸಾಗುವ 32 ಪಾದಗಳು ಇಲ್ಲಿವೆ. ಇಲ್ಲಿ ಪ್ರತಿಯೊಂದು ಚರಣಕ್ಕೆ 4ಮಾತ್ರೆಯ 4 ಗಣಗಳಿವೆ. ವಿಶಿಷ್ಟವಾದ ಅಂತ್ಯಪ್ರಾಸವಿದೆ.ಈ ರಗಳೆಗೆ ಪಂಪ ಯಾವುದೇ ಹೆಸರು ಕೊಟ್ಟಿಲ್ಲ. ವಿಕ್ರಮಾರ್ಜುನ ವಿಜಯದಲ್ಲಿಯೂ ಮೂರು ರಗಳೆಗಳಿವೆ.ಪೊನ್ನ ತನ್ನ ಶಾಂತಿ ಪುರಾಣದಲ್ಲಿ ಒಂದು ರಗಳೆ ಬಳಸಿದ್ದು ಅದನ್ನು ತ್ವರಿತ ರಗಳೆ ಎಂದು ಕರೆದಿದ್ದಾನೆ.ರನ್ನ,ನಾಗವರ್ಮ, ದುರ್ಗಸಿಂಹ ಮುಂತಾದ ಕವಿಗಳು ರಗಳೆಗಳನ್ನು ಬಳಸಿದ್ದಾರೆ ಆದರೆ ವಚನಕಾರರ ನಂತರ ಕಾವ್ಯರಚನೆಗೆ ತೊಡಗಿದ ಹರಿಹರ ರಗಳೆಯನ್ನು ತನ್ನ ಸಂಪೂರ್ಣ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಮಾಡಿಕೊಂಡು ನೂರಕ್ಕೂ ಹೆಚ್ಚು ರಗಳೆಗಳನ್ನು ಬರೆದು ರಗಳೆಯ ಕವಿ ಎನಿಸಿಕೊಂಡ. ರಗಳೆಗಳನ್ನು ವೈವಿಧ್ಯಮಯವಾಗಿ ಹರಿಹರನಿಗೆ ಸಲ್ಲುತ್ತದೆ ರಗಳೆಯಲ್ಲಿ ಮಂದಾನಿಲ,ಲಲಿತ ಮತ್ತು ಉತ್ಸಾಹ ಗಳೆಂಬ ಮೂರು ಪ್ರಕಾರಗಳನ್ನು ಗುರುತಿಸಲಾಗುತ್ತದೆ. (1) ಮಂದಾನಿಲರಗಳೆಯ ಲಕ್ಷಣ: ಪ್ರತಿಪಾದದಲ್ಲಿ ನಾಲ್ಕು ಮಾತ್ರೆಯ ನಾಲ್ಕು ಗಣಗಳು ಒಟ್ಟು ಮಾತ್ರೆಯ ಸಂಖ್ಯೆ ಹದಿನಾರು ಇದ್ದು ಎರಡೆರಡು ಸಾಲುಗಳಿಗೆ ಪ್ರಾಸನಿಯಮವಿರುವ ಪದ್ಯಜಾತಿಗೆ ಮಂದಾನಿಲರಗಳೆಯೆನ್ನುವರು. ಅಂತ್ಯಪ್ರಾಸವೂ ಕೆಲವು ಕಡೆ ಇರುವುದುಂಟು.ಹರಿಹರನ ಕುಂಬಾರ ಗುಂಡಯ್ಯನ ರಗಳೆ ಮಂದಾನಿಲ ರಗಳೆಗೆ ಉತ್ತಮ ಉದಾಹರಣೆ. ದಶಭುಜ|ಮಂ ದಿಗು|ತಟದೊಳ್| ಪಸರಿಸೆ ಎಸೆವ ಕ|ರಂಗಳ| ನೆತ್ತಲ್ |ನೇಮಿಸೆ ಒಂದು ಪ|ದಂ ಪಾ|ತಾಳವ|ನೊತ್ತಲ್| ಒಂದು ಪ|ದಂ ಬ್ರ|ಹ್ಮಾಂಡವ|ನೆತ್ತಲು ಕುಂಬಾರ ಗುಂಡಯ್ಯನ ರಗಳೆ -ಹರಿಹರ ಈ ಮಂದಾನಿಲರಗಳೆಯಲ್ಲಿ ಇನ್ನೂ ಒಂದು ವಿಧವನ್ನು ಗುರುತಿಸಲಾಗುತ್ತದೆ. ಇಲ್ಲಿ ಪ್ರತಿಯೊಂದು ಪಾದದಲ್ಲೂ ಮೂರು ಮತ್ತು ಐದು ಮಾತ್ರೆಯ ಎರಡೆರಡು ಗಣಗಳು ಒಟ್ಟು ೧೬ ಮಾತ್ರೆಗಳು ಇರುತ್ತವೆ.ಹೀಗೆ ಮೂರಾದ ಮೇಲೆ ಐದು ಮಾತ್ರೆಯಗಣದಿಂದ ಕೂಡಿದ, ಒಟ್ಟು ನಾಲ್ಕು ಮಾತ್ರಾಗಣದಿಂದ ಕೂಡಿ ಎರಡೆರಡು ಸಾಲಿನಲ್ಲಿ ಆದಿಪ್ರಾಸ, ಅಂತ್ಯ ಪ್ರಾಸವಿರುವ ಪದ್ಯವು ಮಂದಾನಿಲರಗಳೆಯಲ್ಲಿ ಎರಡನೆಯ ವಿಧವಾಗಿದೆ. ನಂದ | ನಂಗಳೊಳ್| ಸುಳಿವ | ಬಿರಯಿಯಿಂ ಕಂಪು | ಕಣ್ಮಲೆಯ| ಪೂತ | ಸುರಯಿಯಿಂ - ಸುತ್ತ | ಲುಂ ಪರಿವ| ಜರಿ ಪೊ|ನಂಗಳ ಎತ್ತ|ಲುಂ ನಲಿವ| ಪೊಸ ನ|ವಿಲ್ಗಳಿಂ ‌ -ಪಂಪ ಭಾರತ (2) ಲಲಿತರಗಳೆಯ ಲಕ್ಷಣ: ಲಲಿತ ರಗಳೆಯಲ್ಲಿ ಇಷ್ಟೇ ಸಾಲುಗಳು ಇರಬೇಕೆಂಬ ನಿಯಮವಿಲ್ಲ.ಆದರೆ ಪ್ರತಿಯೊಂದು ಪಾದದಲ್ಲೂ ಐದೈದು ಮಾತ್ರೆಯ ನಾಲ್ಕು ಗಣಗಳಿದ್ದು,ಒಟ್ಟು ಮಾತ್ರೆಗಳ ಸಂಖ್ಯೆ ಇಪ್ಪತ್ತು ಆಗಿರಬೇಕು.ಎರಡೆರಡು ಸಾಲುಗಳಲ್ಲಿ ಆದಿಪ್ರಾಸ ನಿಯಮವನ್ನು ಪಾಲಿಸಬೇಕು. ಅಂತ್ಯ ಪ್ರಾಸದ ನಿಯಮವೂ ಎರಡೆರಡು ಸಾಲುಗಳಿಗೆ ಇರಬಹುದು.ಕೆಲವು ಕಡೆ ಆದಿಪ್ರಾಸವಿಲ್ಲದೆ ಕೇವಲ ಅಂತ್ಯ ಪ್ರಾಸವೂ ಇರಬಹುದು.ಹರಿಹರನ ಇಳೆಯಾಂಡಗುಡಿಮಾರರ ರಗಳೆಯು ಲಲಿತ ರಗಳೆಗೆ ಉದಾಹರಣೆಯಾಗಿದೆ. ಇಂತುಕೊಡು|ತಿರೆ ಮಿಕ್ಕು|ದಂತೊಂದು|ಕೋಲ್ನೆಲಂ| ಸಂತತಂ| ಶಿವಭಕ್ತಿ| ಬೀಜವಿ|ಕ್ಕುವ ನೆಲಂ| ಆನೆಲದೊ|ಳುಳ್ಳುದೊ|ಮ್ಮನ ಬೀಜ|ವಂ ತಳಿದು| ಏನಾದು|ದುಂ ಕೊಂಡು|ಬಂದು ಹ|ರ್ಷಂದಳೆದು -ಇಳೆಯಾಂಡ ಗುಡಿಮಾರರ ರಗಳೆ-ಹರಿಹರ ಉತ್ಸಾಹ ರಗಳೆ : ಉತ್ಸಾಹ ರಗಳೆಯಲ್ಲಿ ಸಾಮಾನ್ಯವಾಗಿ 3 ಮಾತ್ರೆಯ 8 ಗಣಗಳು ಇರುತ್ತವೆ. ಪ್ರತಿ ಪಾದದಲ್ಲಿ 24 ಮಾತ್ರೆಗಳಿರುತ್ತವೆ. ಕೆಲವರು ಉತ್ಸಾಹ ರಗಳೆ ಒಂದು ಪಾದವನ್ನು 3 ಮಾತ್ರೆಯ 4 ಗಣಗಳನ್ನಾಗಿ ಮಾಡಿ ಒಂದು ಪಾದವನ್ನು ಎರಡಾಗಿ ವಿಭಜಿಸಿತ್ತಾರೆ.ಆಗ ಪ್ರಾಸಕ್ಕೆ ಭಂಗ ಬರುತ್ತದೆ. ಹರಿಹರನ ತಿರುಕುಪ್ಪೆಯ ತೊಂಡರ ರಗಳೆ ಉತ್ಸಾಹ ರಗಳೆಗೆ ಒಂದು ಉತ್ತಮ ಉದಾಹರಣೆ. ಪಾಪ|ವೆಂಬ|ಮಲಿನ| ಮನದ| ಸೀರೆ|ಯಂ ತೆ|ರಳ್ಚಿ|ಕಟ್ಟಿ| ಕೋಪ|ವೆಂಬ|ಕತ್ತೆ|ನಿಲಲು|ಬೆನ್ನ|ಮೇಲೆ| ಮಾಣ|ದೊಟ್ಟಿ| ನಡೆದು|ಭವನ|ಭಕ್ತಿ|ರಸದ|ಹೊಳೆಯ|ತಡಿಯ|ಬಳಿಗೆ|ಬಂದು| ಮೃಡನೆ|ಶರಣೆ|ನುತ್ತೆ|ಧೈರ್ಯ|ವೆಂಬ|ಕಲ್ಲ|ಬಳಿಗೆ|ಬಂದು| -ತಿರುಕುಪ್ಪೆಯ ತೊಂಡರ ರಗಳೆ -ಹರಿಹರ ಹರಿಹರನ ರಗಳೆಗಳಲ್ಲಿ ಲಲಿತ ರಗಳೆಗೆ ಹೆಚ್ಚಿನ ಪ್ರಾಧಾನ್ಯತೆ ದೊರೆತಿದೆ. ರಗಳೆಗಳಲ್ಲಿ ಪಾದಗಳಿಗೆ ಮಿತಿ ಇಲ್ಲ. ಆದರೆ ಎರಡೆರಡು ಪಾದಗಳು ಒಂದು ಘಟಕವಾಗಿರುತ್ತವೆ. ಆದಿ-ಅಂತ್ಯ ಪ್ರಾಸಗಳು ಸರಿಯಾಗಿ ಬಳಕೆಯಾಗಬೇಕು.ಕಥನ ಕವನಗಳಿಗೆ ಇದು ಸೂಕ್ತ ಮಾಧ್ಯಮ. ಹರಿಹರನ ನಂತರ ಕೆಲವು ಕನ್ನಡ ಕವಿಗಳು ರಗಳೆಗಳನ್ನು ತಮ್ಮ ಕಾವ್ಯ ಮಾಧ್ಯಮವನ್ನಾಗಿ ಬಳಸಲು ಪ್ರಯತ್ನಿಸಿದರು. ಆದರೆ ಅವನಷ್ಟು ಯಶಸ್ವಿಯಾಗಲಿಲ್ಲ.ಹೊಸಗನ್ನಡದಲ್ಲಿ ರಗಳೆ ಸರಳ ರಗಳೆಯಾಯಿತು. ಅದನ್ನು ಮಹಾಛಂದಸ್ಸನ್ನಾಗಿ ಪರಿವರ್ತಿಸಿ ಕುವೆಂಪು ಅವರು ಶ್ರೀ ರಾಮಾಯಣ ದರ್ಶನಂ ಎಂಬ ಮಹಾಕಾವ್ಯವನ್ನು ರಚಿಸಿದರು.

ಗುರುವಾರ, ಮಾರ್ಚ್ 18, 2021

ಚೈತನ್ಯ ಜ್ಯೋತಿ - ಒಂದು ಪರಿಚಯ

ಕಳೆದ ಶತಮಾನದ 60-80ರ ದಶಕ ಉತ್ತರಕನ್ನಡ ಜಿಲ್ಲೆಯ ಉನ್ನತ ಶಿಕ್ಷಣದ ದೃಷ್ಟಿಯಿಂದ ಮಹತ್ವದ ಅವಧಿ. ಸ್ವಾತಂತ್ರ್ಯಾ ನಂತರದ ತಲೆಮಾರಿಗೆ ಉತ್ತಮ ಶಿಕ್ಷಣವನ್ನು ನೀಡುವ ಉದ್ದೇಶದಿಂದ ದೂರದರ್ಶಿತ್ವವನ್ನು ಹೊಂದಿದ್ದ ಹಲವು ಮಹನೀಯರ ಶ್ರಮದ ಫಲವಾಗಿ ಅನೇಕ ಶಿಕ್ಷಣ ಸಂಸ್ಥೆಗಳು ತಲೆಯೆತ್ತಿದವು. ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಲು ಉನ್ನತ ಶೈಕ್ಷಣಿಕ ಅರ್ಹತೆ ಹೊಂದಿದ ಅಧ್ಯಾಪಕರನ್ನು ಆಯ್ಕೆ ಮಾಡಿದರು.ದಕ್ಷತೆ,ಪ್ರಾಮಾಣಿಕತೆ,ಅರ್ಪಣಾ ಮನೋಭಾವದ ಈ ಶಿಕ್ಷಕರು ಬಹುಮುಖ ಪ್ರತಿಭೆನ್ನು ಹೊಂದಿದ್ದು ಪಂಡಿತ ಪರಂಪರೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದರು. ಅವರಲ್ಲಿ ಕೆಲವರು ಕಾಲೇಜು ವ್ಯಾಪ್ತಿಯನ್ನು ಮೀರಿ ಬೆಳೆದು ಕಾಲೇಜಿನ ಹೆಸರು ಹೇಳಿದಾಕ್ಷಣ ಆ ಅಧ್ಯಾಪಕರ ವ್ಯಕ್ತಿತ್ವ ಕಣ್ಣ ಮುಂದೆ ಬರುತ್ತಿತ್ತು.ಕಾರವಾರ ದಿವೇಕರ ಕಾಲೇಜಿನ ಪ್ರೊ.ಜಿ.ವಿ.ಭಟ್ಟ, ಅಂಕೋಲಾ ಗೋಖಲೆ ಕಾಲೇಜಿನ ಪ್ರೊ.ಕೆ.ಜಿ.ನಾಯಕ, ಶಿರ್ಶಿ ಕಾಲೇಜಿನ ಪ್ರೊ.ಎಲ್.ಟಿ. ಶರ್ಮ, ದಾಂಡೇಲಿ ಕಾಲೇಜಿನ ಪ್ರೊ.ಸಭಾಹಿತ,ಹೊನ್ನಾವರ ಕಾಲೇಜಿನ ಡಾ.ಎನ್.ಆರ್.ನಾಯಕ ಅಂತಹ ವ್ಯಕ್ತಿತ್ವ ಹೊಂದಿದ್ದರು. ಇದೇ ಸಾಲಿನಲ್ಲಿ ಸೇರಿಸಬಹುದಾದ ಇನ್ನೊಬ್ಬರು ಜಿಲ್ಲೆಯ ಮೊದಲ ಮಹಾವಿದ್ಯಾಲಯ ಕುಮಟಾ ಬಾಳಿಗಾ ಕಾಲೇಜಿನ ಪ್ರೊ.ಎಸ್.ಆರ್.ನಾರಾಯಣರಾವ್ ಅವರು. ಎಸ್. ಆರ್.ನಾರಾಯಣರಾವ್ ಅವರು ನನ್ನ ಅಧ್ಯಾಪಕರಲ್ಲ.ಅವರ ನೇರ ಪರಿಚಯವೂ ನನಗಿಲ್ಲ. ಆದರೆ ಅವರ ಬಗ್ಗೆ ಅವರ ವಿದ್ಯಾರ್ಥಿಗಳು, ಸಹೋದ್ಯೋಗಿಗಳು, ಪರಿಚಿತರು ಮಾತನಾಡುವುದನ್ನು ಕೇಳಿದ್ದೇನೆ. ಅವರ ಕೆಲವು ಲೇಖನಗಳನ್ನು ಓದಿದ್ದೇನೆ. ಭಾಷಣ ಆಲಿಸಿದ್ದೇನೆ. ಆದರೆ ಅವರನ್ನು ಮುಖತಃ ಭೇಟಿಯಾಗಿ ಮಾತನಾಡಿಲ್ಲ. ನನ್ನ ಗೆಳೆಯನೊಬ್ಬ ಕೆಲವು ಕಾಲ ಬಾಳಿಗಾ ಕಾಲೇಜಿನಲ್ಲಿ ಅರೆಕಾಲಿಕ ಇಂಗ್ಲೀಷ್ ಉಪನ್ಯಾಸಕನಾಗಿ ಕಾರ್ಯನಿರ್ವಹಿಸಿದ್ದ. ಪ್ರತಿದಿನ ಅವನ ತರಗತಿಗಳು ಮುಗಿದ ನಂತರ ಅವನನ್ನು ತಮ್ಮ ಚೇಂಬರಿಗೆ ಕರೆಯಿಸಿಕೊಂಡು ಎರಡು ತಾಸು ಅವನೊಡನೆ ಪಾಠ-ಪ್ರವಚನ,ಸಿಲೇಬಸ್, ವಿದ್ಯಾರ್ಥಿಗಳನ್ನು ಆಕರ್ಷಿಸುವ ಶೈಲಿ ಹೀಗೆ ಎಲ್ಲವನ್ನೂ ವಿವರಿಸುತ್ತಿದ್ದರಂತೆ. ಎರಡು ವರ್ಷ ಸ್ನಾತಕೋತ್ತರ ಪದವಿಯ ಸಂದರ್ಭದಲ್ಲಿ ಪಡೆದ ಜ್ಞಾನಕ್ಕಿಂತ ಹೆಚ್ಚಿನ ಅನುಭವ ಎಸ್.ಆರ್.ನಾರಾಯಣರಾವ್ ಅವರಿಂದ ದೊರಕಿತು ಎಂದು ಕೃತಜ್ಞತೆಯಿಂದ ಸ್ಮರಿಸುತ್ತಾನೆ. ಹೀಗೆ ಎಸ್. ಆರ್. ನಾರಾಯಣರಾವ್ ತಮ್ಮ ಸಂಪರ್ಕಕ್ಕೆ ಬಂದವರ ಮೇಲೆಲ್ಲ ಪ್ರಭಾವ ಬೀರಿದ್ದಾರೆ.ತಾವು ಬೆಳೆಯುವದರ ಜೊತೆಗೆ ಹಲವರನ್ನು ಬೆಳೆಸಿದ್ದಾರೆ.ಇಂದು ಖ್ಯಾತ ವಿಮರ್ಶಕರೆಂದು ಹೆಸರು ಮಾಡಿರುವ ಡಾ.ಎಮ್.ಜಿ.ಹೆಗಡೆ,ಡಾ.ಆರ್.ಜಿ.ಹೆಗಡೆ ಇವರೆಲ್ಲ ಅವರ ವಿದ್ಯಾರ್ಥಿಗಳೇ. ಅವರ ಭೌತಿಕ- ಬೌದ್ಧಿಕ ಸಾಂಗತ್ಯ ಪಡೆದು ಅವರ ವೈಚಾರಿಕತೆಯ ವಾರಸುದಾರರಾದ ಡಾ. ಎಂ.ಎಚ್ ನಾಯ್ಕ ಅವರೂ ಎಸ್.ಆರ್ ನಾರಾಯಣರಾವ್ ಶಿಷ್ಯರೇ.ಈ ಶಿಷ್ಯ ಎಂದೂ ಖ್ಯಾತಿಯನ್ನು ಬಯಸದ ತಮ್ಮ ಗುರುಗಳ ಲೇಖನಗಳನ್ನು ಒಳಗೊಂಡ "ಚೈತನ್ಯ ಜ್ಯೋತಿ" ಎಂಬ ಪುಸ್ತಕವನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಆ ಮೂಲಕ ತಮ್ಮ ಗುರುವನ್ನು ಶಾಶ್ವತಗೊಳಿಸುವ, ಅವರ ವಿಚಾರಗಳನ್ನು ಬದಲಾವಣೆಯ ಪವಾಡ ಅಪೇಕ್ಷಿಸುವ ಅಸಂಖ್ಯಾತ ಭಾರತೀಯ ಸಾಹಸಿ ಯುವ ಜನಾಂಗಕ್ಕೆ ಪರಿಚಯಿಸುವ ಮಹತ್ತರ ಕಾರ್ಯ ಮಾಡಿದ್ದಾರೆ. "ಚೈತನ್ಯ ಜ್ಯೋತಿ "ಎಂಬ ಶೀರ್ಷಿಕೆಯೇ ಆಕರ್ಷಕವಾಗಿದೆ. ಜ್ಯೋತಿ ಯಾವಾಗಲೂ ಚೈತನ್ಯ ಸ್ವರೂಪಿಯೇ.ಅದು ಕೇವಲ ತಾನು ಬೆಳಗದೇ ತನ್ನಂತೆ ಹಲವು ಜ್ಯೋತಿಗಳು ಬೆಳಗಲು ಅವಕಾಶ ಮಾಡಿಕೊಡುತ್ತದೆ.ಅದರಲ್ಲಿಯೂ ಜ್ಞಾನ ಜ್ಯೋತಿಯಂತಿರುವ ಪ್ರೊ.ಎಸ್.ಆರ್.ನಾರಾಯಣರಾವ್ ರಂತವರು ಅಳಿದರೂ ಚೈತನ್ಯ ಸ್ವರೂಪಿಯಾಗಿ ಶಾಶ್ವತರಾಗಿರುತ್ತಾರೆ. ಈ ಪುಸ್ತಕದಲ್ಲಿ ಎರಡು ಭಾಗಗಳಿವೆ. ಮೊದಲ ಭಾಗದಲ್ಲಿ ನಾರಾಯಣ ರಾವ್ ಅವರನ್ನು ಕುರಿತು ಅವರ ಮಕ್ಕಳು, ವಿದ್ಯಾರ್ಥಿಗಳು ಮತ್ತು ಸ್ವತಃ ಎಮ್.ಎಚ್.ನಾಯ್ಕ ಅವರೇ ಬರೆದ ಅಭಿಮಾನದ ಲೇಖನಗಳಿವೆ. ಈ ಲೇಖನಗಳು ನಾರಾಯಣರಾವ್ ಅವರನ್ನು ಪ್ರತ್ಯಕ್ಷ ನೋಡಿರದವರ ಕಣ್ಮುಂದೆ ಅವರು ಸುಳಿದಾಡುವಂತೆ ಮಾಡುತ್ತವೆ. ಇವು ಅವರ ಜೀವನ ಶೈಲಿ,ಪಾಠದ ಶೈಲಿ, ವೈಚಾರಿಕ ನಿಲುವುಗಳು,ಹಾಸ್ಯಪ್ರಜ್ಞೆ ಹೀಗ ಎಲ್ಲವನ್ನೂ ಸಮಗ್ರವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿವೆ. ಎಂ.ಎಚ್ ನಾಯ್ಕರಂತೂ ನಾರಾಯಣರಾವ್ ಅವರನ್ನು ಸಂಪೂರ್ಣವಾಗಿ ಆವಾಹಿಸಿಕೊಂಡು ಬಿಟ್ಟಿದ್ದಾರೆ. ಅವರನ್ನು "ಜೀನಿಯಸ್ ಗುರು" ಎಂದು ಸಂಬೋಧಿಸಿ ಅವರ ವ್ಯಕ್ತಿತ್ವವನ್ನು ಅನಾವರಣ ಮಾಡುತ್ತಾರೆ. ಬೇರೆಬೇರೆಯ ಅನುಭವದ ಸಾಧನೆಯ ಕ್ಷೇತ್ರಗಳಲ್ಲಿ ಯಾವ ವ್ಯಕ್ತಿ ತನ್ನ ಕಾಲದ ಸಮಸ್ತ ಜನಾಂಗದ ಅಂತಃಸತ್ವವನ್ನು ಅತ್ಯಧಿಕ ಪ್ರಮಾಣದಲ್ಲಿ ಅತ್ಯುತ್ಕೃಷ್ಟವಾದ ರೀತಿಯಲ್ಲಿ ಅಭಿವ್ಯಕ್ತಿಸುವನೋ ಅಂತವರನ್ನು ಜೀನಿಯಸ್ ಎಂದು ಕರೆಯಲಾಗುತ್ತದೆ. ಮಹಾತ್ಮಗಾಂಧಿ,ಐನ್ ಸ್ಟೈನ್, ಅರವಿಂದರು, ಲಿಯೋನಾರ್ಡೋ ಡ ವಿಂಚಿ,ಹೋಮರ್,ವ್ಯಾಸ,ವಾಲ್ಮೀಕಿ ಅಂಥವರನ್ನು ಸಾಮಾನ್ಯವಾಗಿ ಜೀನಿಯಸ್ ಎಂದು ಗುರುತಿಸಲಾಗುತ್ತದೆ.ಡಾ.ನಾಯ್ಕರು ಎಸ್.ಆರ್. ನಾರಾಯಣರಾವ್ ಅವರನ್ನು ಅಂಥವರ ಸಾಲಿಗೆ ಸೇರಿಸುತ್ತಾರೆ. ಏಕೆಂದರೆ ಆ ಕಾಲಘಟ್ಟದಲ್ಲಿ ಅವರ ವಿಶಿಷ್ಟ ಅಭಿವ್ಯಕ್ತಿಯಲ್ಲಿ ಅವರ ವಿದ್ಯಾರ್ಥಿಗಳು ಅವರಲ್ಲಿನ ಅತ್ಯುತ್ಕೃಷ್ಟವಾದುದನ್ನು ಅತ್ಯುತ್ಕೃಷ್ಟವಾದ ರೀತಿಯಲ್ಲಿ ಪಡೆದಿದ್ದಾರೆ ಎಂದು ಅವರು ನಂಬಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಮಾತ್ರವಲ್ಲ ಸಾಮಾನ್ಯ ಜನರೊಂದಿಗೂ ಕಾಳಜಿಯಿಂದ ವ್ಯವಹರಿಸುವ ರೀತಿಯನ್ನು ವಿವರಿಸುತ್ತಾರೆ.ತರಕಾರಿ ಮಾರುವವಳ ಜೊತೆಗೆ ಚೌಕಾಶಿ ಮಾಡದೇ ಇರುವದನ್ನು ಪ್ರಶ್ನಿಸಿದಾಗ ಅವರು ಕೊಟ್ಟ ಉತ್ತರ "ನನಗೆ ಪಗಾರು ಬರುತ್ತದೆ.ಆ ಬಡ ಮಹಿಳೆಗೆ ಏನು ಸಿಗುತ್ತದೆ?ನನ್ನಿಂದ ಅವಳಿಗೆ ಸ್ವಲ್ಪ ಹೆಚ್ಚಿನ ಲಾಭ ದೊರಕಲಿ." ಇದು ಅವರ ವ್ಯಕ್ತಿತ್ವದ ಉದಾತ್ತತೆಯನ್ನು ಎತ್ತಿ ತೋರಿಸುತ್ತದೆ.ಈ ಘಟನೆಯನ್ನು ಸ್ಮರಿಸುವ ಮೂಲಕ ಎಂ.ಎಚ್. ನಾಯ್ಕರು ಎಸ್.ಆರ್. ನಾರಾಯಣರಾವ್ ಅವರ ವ್ಯಕ್ತಿತ್ವದ ಘನತೆಗೆ ಸುವರ್ಣ ಚೌಕಟ್ಟನ್ನು ನಿರ್ಮಿಸಿ ಕೊಟ್ಟಿದ್ದಾರೆ. ನಾರಾಯಣರಾವ್ ಅವರ ವೈಚಾರಿಕ ನಿಲುವುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದರೆ ಮೊದಲ ಭಾಗದ ಈ ಲೇಖನಗಳನ್ನು ಓದಿಕೊಳ್ಳಲೇಬೇಕು.ಇವುಗಳ ಮ‌ೂಲಕ ಅವರ ವ್ಯಕ್ತಿತ್ವದ ಸಂಪೂರ್ಣ ಪರಿಚಯ ಓದುಗರಿಗೆ ದೊರಕುತ್ತದೆ. ಬೂಟಾಟಿಕೆ ಎಂಬುದು ಅವರಲ್ಲಿ ಇರಲೇ ಇಲ್ಲ.ಅನೇಕ ಇಂಗ್ಲೀಷ್ ಅಧ್ಯಾಪಕರನ್ನು ಸೃಷ್ಟಿಸಿದ,ಸ್ವತಃ ಇಂಗ್ಲೀಷ್ ಪ್ರಾಧ್ಯಾಪಕರಾದ ನಾರಾಯಣರಾವ್ ಅವರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗೆ ಸೇರಿಸಿದ ಆದರ್ಶವಂತರು.ಅವರ ಸರಳತೆ, ಆಡಂಬರ ರಹಿತ, ಉನ್ನತ ಚಿಂತನೆಯ ಉದಾತ್ತ ಜೀವನದ ಚಿತ್ರಣವನ್ನು ಒಳಗೊಂಡ ಇಲ್ಲಿನ ಲೇಖನಗಳು ಎಸ್.ಆರ್. ನಾರಾಯಣರಾವ್ ಅವರ ಮೇಲಿನ ಗೌರವವನ್ನು ಇಮ್ಮಡಿಗೊಳಿಸುತ್ತವೆ. ನಮ್ಮ ನಡುವೆ ಇಂಥವರೊಬ್ಬರು ಬದುಕಿದ್ದರು ಎಂಬ ಆಶ್ಚರ್ಯ ಮೂಡಿಸುವುದರ ಜೊತೆಗೆ ಈಗಿನ ತಲೆಮಾರಿನವರಿಗೆ ಇಂಥವರ ಮಾರ್ಗದರ್ಶನ ದೊರಕದೇ ಹೋಯಿತಲ್ಲ ಎಂಬ ವಿಷಾದವೂ ಮೂಡುತ್ತದೆ. ಈ ಪುಸ್ತಕದ ಎರಡನೆಯ ಭಾಗದಲ್ಲಿ ಪ್ರೊ. ಎಸ್. ಆರ್. ನಾರಾಯಣರಾವ್ ಅವರು ಕರಾವಳಿ ಮುಂಜಾವು ಪತ್ರಿಕೆಗೆ ಬರೆದ 37 ಲೇಖನಗಳಿವೆ. ಪುಸ್ತಕ- ಲೇಖನಗಳ ಮೂಲಕ ಸ್ಥಾವರವಾಗುವ ಇಚ್ಛೆ ಅವರಿಗೆ ಇದ್ದಂತಿರಲಿಲ್ಲ. ತಮ್ಮ ವಿಚಾರಗಳನ್ನು ಆತ್ಮೀಯರ ನಡುವೆ,ವಿದ್ಯಾರ್ಥಿಗಳ ನಡುವೆ ಉಪನ್ಯಾಸಗಳ ಮೂಲಕ ಬಿತ್ತರಿಸುತ್ತಾ ಜಂಗಮನಂತೆ ಇದ್ದವರು ಅವರು. ಆದರೆ ಅವರ ಆಲೋಚನೆಗಳಲ್ಲಿರುವ ಪ್ರಖರ ವೈಚಾರಿಕತೆಯನ್ನು ಗುರುತಿಸಿದ ಕವಿ ಬಿ.ಎ.ಸನದಿಯವರ ಒತ್ತಾಸೆಯಂತೆ ಲೇಖನಗಳನ್ನು ಬರೆದರು. ಅವುಗಳನ್ನು ಗಂಗಾಧರ ಹಿರೇಗುತ್ತಿ ಅವರು ತಮ್ಮ "ಕರಾವಳಿ ಮುಂಜಾವು" ಪತ್ರಿಕೆಯಲ್ಲಿ ಪ್ರಕಟಿಸಿ ನಾಡಿನ ಜನತೆಗೆ ಪರಿಚಯಿಸಿದರು.ಈಗ ಎಮ್.ಎಚ್.ನಾಯ್ಕರು ಅವುಗಳನ್ನು ಕ್ರೋಢೀಕರಿಸಿ ಪುಸ್ತಕ ರೂಪ ನೀಡಿದರು. ಹೀಗೆ ಶ್ರೇಷ್ಠ ಎನ್ನಬಹುದಾದ ಬರಹಗಾರನೊಬ್ಬ ಸೂಕ್ತ ರೀತಿಯಲ್ಲಿ ಸಾಹಿತ್ಯಲೋಕದಲ್ಲಿ ದಾಖಲಾಗಲು ಅವಕಾಶ ನೀಡಿದ ಈ ಮೂರು ಜನ ಮಹನೀಯರು ಅಭಿನಂದನಾರ್ಹರು. ಈ ಲೇಖನಗಳು ಎಸ್ಆರ್ ನಾರಾಯಣರಾವ್ ಅವರ ಓದಿನ ವಿಸ್ತೃತ ತೆಯನ್ನು ಪರಿಚಯ ಮಾಡಿಕೊಡುತ್ತವೆ.ಇಲ್ಲಿನ ಲೇಖನಗಳ ವೈವಿಧ್ಯತೆ ಗಮನ ಸೆಳೆಯುತ್ತದೆ ಇಲ್ಲಿ ಇತಿಹಾಸವಿದೆ, ಸಾಹಿತ್ಯವಿದೆ. ತತ್ವಶಾಸ್ತ್ರವಿದೆ ,ತರ್ಕಶಾಸ್ತ್ರವಿದೆ. ಅಧ್ಯಾತ್ಮಿಕತೆಯ ಜೊತೆಗೆ ವೈಜ್ಞಾನಿಕತೆಯೂ ಮೇಳೈಸಿದೆ. ಸನಾತನದ ಜೊತೆಗೆ ಆಧುನಿಕತೆಯು ಸೇರಿದೆ. ರಾಜಕೀಯವೂ ಇದೆ,ಸಾಂಸ್ಕೃತಿಕತೆಯೂ ಇದೆ. ಹೀಗೆ ಎಲ್ಲವನ್ನೂ ಒಳಗೊಂಡ ಬಹುಶ್ರುತತ್ವವನ್ನು ಇಲ್ಲಿನ ಲೇಖನಗಳಲ್ಲಿ ಕಾಣಬಹುದು. ನಮ್ಮ ದೇಶದ ರಾಜಕೀಯ ಸಾಂಸ್ಕೃತಿಕ ಇತಿಹಾಸಕ್ಕೆ ಸಂಬಂಧಿಸಿದ ಲೇಖನಗಳಲ್ಲಿ ಭಾರತ ಜಾಗತಿಕ ಶಕ್ತಿಯಾಗಿ ರೂಪಗೊಳ್ಳುವ ಅನಿವಾರ್ಯತೆಯನ್ನು ಅವರು ಪ್ರತಿಪಾದಿಸುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾಗಿದ್ದರೂ ರಾಜಕೀಯ ಸಾಧನೆಗೆ ಅನುಗುಣವಾದ ಹೊಸ ಸಾಂಸ್ಕೃತಿಕ ನೆಲೆ ನಿರ್ಮಾಣವಾಗಲಿಲ್ಲ ಎಂಬ ವಿಷಾದ ಅವರಲ್ಲಿದೆ. ಜಾತಿಯತೆ,ಮತೀಯತೆ,ಪೊಳ್ಳು ಧರ್ಮನಿರಪೇಕ್ಷತೆಗಳು ದೇಶದ ಅಭಿವೃದ್ಧಿಗೆ ಅಡ್ಡಗಾಲಾಗಿರುವದನ್ನು ಅವರು ಎತ್ತಿ ತೋರಿಸುತ್ತಾರೆ. ಶಿಕ್ಷಣ ಮತ್ತು ಆಡಳಿತ ಪ್ರಕ್ರಿಯೆಗಳಲ್ಲಿ ಸತ್ಯನಿಷ್ಠೆ, ವಸ್ತುನಿಷ್ಠೆ ಸಾಮಾಜಿಕ ಬದ್ಧತೆ ಮತ್ತು ಮಾನವೀಯ ನಿಲುವುಗಳಿಗೆ ಹೆಚ್ಚಿನ ಪ್ರಾಶಸ್ತ್ಯಕೊಟ್ಟು ದೇಶದ ಅಭಿವೃದ್ಧಿ ಸಾಧಿಸಬೇಕು ಎಂಬ ಕಳಕಳಿಯನ್ನು ಅವರು ತಮ್ಮ ಲೇಖನಗಳಲ್ಲಿ ವ್ಯಕ್ತಪಡಿಸುತ್ತಾರೆ. ಇಲ್ಲಿ ಭಾರತೀಯ ಸನಾತನ ಧರ್ಮದ ವಿವೇಚನೆಯ ಜೊತೆಗೆ ಆಧುನಿಕ ಮತ್ತು ಆಧುನಿಕೋತ್ತರ ಪಾಶ್ಚಾತ್ಯ ಚಿಂತಕರ ವಿಚಾರಗಳನ್ನು ಅವರು ಪ್ರಸ್ತಾಪಿಸುತ್ತಾರೆ.ಕಾರ್ಲ್ ಪಾಪ್ಪರ್,ಅರ್ನಾಲ್ಡ್‌ ಟಾಯ್ನಬಿ,ಮಾರ್ಟಿನ್ ಬ್ಯೂಬರ್, ರಾಬರ್ಟ್ ಸ್ಟ್ರಾಜ್ ಹ್ಯೂಪೆ, ಚಾರ್ಲ್ಸ್ ಡಾರ್ವಿನ್ ಇಗ್ನೇಜಿಯೋ ಸಿಲೋನಿ ಮುಂತಾದವರನ್ನು ಕನ್ನಡ ಓದುಗರಿಗೆ ಪರಿಚಯಿಸುತ್ತಾರೆ.ಅಪ್ಪಟ ಭಾರತೀಯರೇ ಆಗಿದ್ದು ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ ತುಘೈಲ್ ಅಹ್ಮದ್ ಮತ್ತು ಎಸ್.ಎನ್.ಬಾಲಗಂಗಾಧರ ಅವರ ಚಿಂತನೆಗಳಲ್ಲಿರುವ ವೈಚಾರಿಕತೆಯನ್ನು ಪ್ರಸ್ತಾಪಿಸುತ್ತಾರೆ. ಟಿ.ಎಸ್.ಎಲಿಯಟ್, ಕೋಲ್ ರಿಜ್,ಎಫ್.ಆರ್.ಲಿವೀಸ್ ರಂತಹ ಸಾಹಿತ್ಯ ವಿಮರ್ಶಕರ ಮಿಮಾಂಸೆಯ ತಾತ್ವಿಕತೆಯನ್ನು ಚರ್ಚಿಸಿದ್ದಾರೆ.ಆಧ್ಯಾತ್ಮಿಕತೆ- ವೈಚಾರಿಕತೆಗಳನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ನೋಡುವ ಪ್ರಯತ್ನ ಇಲ್ಲಿದೆ. ಒಟ್ಟಾರೆಯಾಗಿ ನಾರಾಯಣರಾವ್ ಅವರ ಲೇಖನಗಳನ್ನು ಅವಲೋಕಿಸಿದಾಗ ಮನುಕುಲದ ಬಗೆಗಿರುವ ಅವರ ಕಾಳಜಿ ಎದ್ದು ಕಾಣುತ್ತದೆ.ಧರ್ಮಾಂಧತೆ,ಮತಾಂಧತೆ,ಚಾರಿತ್ರ್ಯಹೀನತೆ ಮತ್ತು ಹುಸಿ ವೈಚಾರಿಕತೆ ಇವುಗಳನ್ನು ಬಿಟ್ಟು ಮಾನವತಾವಾದದ ನೆಲೆಯಲ್ಲಿ,ಎಲ್ಲ ಧರ್ಮಗಳಲ್ಲಿರುವ ಆತ್ಮದ ಕಲ್ಪನೆಯಿಂದ ಆಧ್ಯಾತ್ಮಿಕ ಮನೋಭೂಮಿಕೆಯನ್ನು ಸೃಷ್ಟಿಸಿಕೊಂಡರೆ ಆಧುನಿಕ ಮಾನವ ಉಳಿದು ಬೆಳೆದು ಭವ್ಯನಾಗುತ್ತಾನೆ ಎಂಬ ಆಶಯ ಅವರದು. ಎಸ್ಆರ್ ನಾರಾಯಣರಾವ್ ಅವರ ಉದಾತ್ತ ಆಶಯಗಳನ್ನು ವಿಸ್ತರಿಸುವ ಉದ್ದೇಶದಿಂದ ಡಾ.ಎಮ್.ಎಚ್. ನಾಯ್ಕ ಅವರು ಈ ಚೈತನ್ಯ ಜ್ಯೋತಿಯನ್ನು ಪ್ರಕಾಶಿಸಿದ್ದಾರೆ. ಅದರ ಕಿರಣಗಳು ನಮ್ಮ ಅಂತರಂಗದಲ್ಲಿರುವ ವೈಚಾರಿಕತೆಯನ್ನು ಜಾಗೃತಗೊಳಿಸಿ, ಮನುಕುಲವನ್ನು ಉಳಿಸಿ-ಬೆಳೆಸಿದರೆ ಜೀನಿಯಸ್ ಗುರುವಿನ ಬರವಣಿಗೆ ಸಾರ್ಥಕವಾಗಬಲ್ಲದು. - ಶ್ರೀಧರ ಬಿ.ನಾಯಕ,ಬೇಲೇಕೇರಿ.

ಗುರುವಾರ, ಫೆಬ್ರವರಿ 25, 2021

ರನ್ನನ ಗದಾಯುದ್ಧ.

ಕನ್ನಡ ಸಾಹಿತ್ಯದ ರತ್ನತ್ರಯರಲ್ಲಿ ಒಬ್ಬನಾದ ರನ್ನ ಕನ್ನಡದ ಶಕ್ತಿ ಕವಿ.ಅವನ ಅಜಿತನಾಥ ಪುರಾಣ ಮತ್ತು ಸಾಹಸಭೀಮವಿಜಯ ಎಂಬ ಎರಡು ಕಾವ್ಯಗಳು ಉಪಲಬ್ದವಾಗಿವೆ.ಬೆಳುಗರೆ ನಾಡಿನ ಬೆಳುಗಲಿ 500 ಪ್ರಾಂತದ ಜಂಬುಖಂಡಿ 70ರಲ್ಲಿ ಶ್ರೇಷ್ಠವಾದ ಮುದುವೊಳಲು (ಇಂದಿನ ಬಾಗಲಕೋಟ ಜಿಲ್ಲೆಯ ಮುಧೋಳ) ಎಂಬ ಊರಿನಲ್ಲಿ ಜನಿಸಿದನು ಸೌಮ್ಯ ಸಂವತ್ಸರ ಅಂದರೆ ಕ್ರಿ.ಶ.949 ರಲ್ಲಿ ಹುಟ್ಟಿದನು.ತಂದೆ ಜಿನವಲ್ಲಭೇಂದ್ರ, ತಾಯಿ ಅಬ್ಬಲಬ್ಬೆ. ಜಕ್ಕಿ ಮತ್ತು ಶಾಂತಿ ಎಂಬ ಇಬ್ಬರು ಹೆಂಡತಿಯರು.ಮಗ ರಾಯ ಮಗಳು ಅತ್ತಿಮಬ್ಬೆ. ಅಜಿತಸೇನಾಚಾರ್ಯರು ರನ್ನನ ಗುರುಗಳು. ಗಂಗ ಮಂತ್ರಿ ಚಾವುಂಡರಾಯ ಮತ್ತು ದಾನಚಿಂತಾಮಣಿ ಅತ್ತಿಮಬ್ಬೆ ಯ ಆಶ್ರಯ ಪಡೆದ ರನ್ನ, ಚಾಲುಕ್ಯ ಚಕ್ರವರ್ತಿ ತೈಲಪ ಮತ್ತು ಅವನ ಮಗ ಸತ್ಯಾಶ್ರಯ ಇರಿವಬೆಡಂಗನಲ್ಲಿ ಆಸ್ಥಾನ ಕವಿಯಾಗಿದ್ದ.ಅವನಿಗೆ ಕವಿ ಚಕ್ರವರ್ತಿ ಎಂಬ ಬಿರುದು ಇತ್ತು.ಪರಶುರಾಮ ಚರಿತೆ ಮತ್ತು ಚಕ್ರೇಶ್ವರ ಚರಿತೆ ಎಂಬ ಇನ್ನೆರಡು ಕಾವ್ಯಗಳನ್ನು ಬರೆದಿರುವುದಾಗಿ ಹೇಳಿಕೊಂಡಿದ್ದಾನೆ. ಆದರೆ ಅವು ಸಿಕ್ಕಿಲ್ಲ.ರನ್ನಕಂದ ಎಂಬ ನಿಘಂಟು ರನ್ನನ ಹೆಸರಿನಲ್ಲಿದೆ. ಸಾಹಸಭೀಮ ವಿಜಯ ರನ್ನನ ಶ್ರೇಷ್ಠ ಕಾವ್ಯ.ತನ್ನ ಆಶ್ರಯದಾತ ಸತ್ಯಾಶ್ರಯನನ್ನು ಕಥಾನಾಯಕ ಭೀಮನೊಡನೆ ಸಮೀಕರಿಸಿ ಈ ಕಾವ್ಯವನ್ನು ಬರೆದಿದ್ದಾನೆ. ಸಿಂಹಾವಲೋಕನ ಕ್ರಮದಿಂದ ಇಡೀ ಮಹಾಭಾರತದ ಕಥೆಯನ್ನು ಹೇಳುವ ತಂತ್ರವನ್ನು ಕವಿ ಇಲ್ಲಿ ಬಳಸಿದ್ದಾನೆ. ಕುರುಕ್ಷೇತ್ರದ ರಣಭೂಮಿಯಲ್ಲಿ ಸರ್ವಸ್ವವನ್ನೂ ಕಳೆದುಕೊಂಡು ಏಕಾಂಗಿಯಾದ ದುರ್ಯೋಧನ,ಭೀಷ್ಮರ ಸಲಹೆಯಂತೆ ಬಲರಾಮ, ಅಶ್ವತ್ಥಾಮ,ಕೃಪಾಚಾರ್ಯರು ಮರಳುವವರೆಗೆ ಕಾಲಯಾಪನೆ ಮಾಡುವ ಉದ್ದೇಶದಿಂದ ಅವರು ಉಪದೇಶಿಸಿದ ಜಲಮಂತ್ರ ಸಹಾಯದಿಂದ ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತುಕೊಳ್ಳುತ್ತಾನೆ. ಯುದ್ಧಭೂಮಿಯಲ್ಲಿ ದುರ್ಯೋಧನನನ್ನು ಅರಸಿ ಅವನನ್ನು ಎಲ್ಲಿಯೂ ಕಾಣದೆ ಪಾಂಡವರು ನಿರಾಶರಾಗುತ್ತಾರೆ. ದುರ್ಯೋಧನನನ್ನು ಕೊಲ್ಲಲು ತುದಿಗಾಲ ಮೇಲೆ ನಿಂತಿದ್ದ ಭೀಮ ತನ್ನ ತಾಳ್ಮೆ ಕಳೆದು ಕೊಳ್ಳುತ್ತಾನೆ. ಅವನಿಗಾಗಿ ಎಲ್ಲೆಡೆ ಹುಡುಕಾಡುತ್ತಾನೆ.ಪಾಂಡವರು ಗೂಢಚಾರರನ್ನು ಕಳುಹಿಸಿ ದುರ್ಯೋಧನನ ಇರುವನ್ನು ತಿಳಿಯಲು ಪ್ರಯತ್ನಿಸುತ್ತಾರೆ. ಆ ಸಂದರ್ಭವನ್ನು ಪ್ರಸ್ತುತ ಕಾವ್ಯ ಭಾಗದಲ್ಲಿ ಕಾಣಬಹುದು.ದುರ್ಯೋಧನನ ಕುರಿತು ಭೀಮನಿಗಿರುವ ದ್ವೇಷ,ಸೇಡು,ಆಕ್ರೋಶಗಳನ್ನು ಇಲ್ಲಿ ಕಾಣಬಹುದು. ಶಲ್ಯನ ವಧೆಯ ನಂತರ ದುರ್ಯೋಧನನನ್ನು ಕಾಣದೇ ಇದಕ್ಕೆ ಏನಾದರೂ ಕಾರಣವಿರಬೇಕು ಎಂದು ಭಾವಿಸಿದ ಧರ್ಮರಾಯ ಶ್ರೀ ಕೃಷ್ಣನೊಡನೆ ಸಮಾಲೋಚಿಸುವದನ್ನು ಕೇಳಿದ ಭೀಮಸೇನ ತುಂಬಿದ ರಾಜಸಭೆಯಲ್ಲಿ ನಾನು ಮಾಡಿದ ಪ್ರತಿಜ್ಞೆ ಹುಸಿಯಾಗುತ್ತಿದೆ.ದ್ರೌಪದಿಯ ಮುಖದ ಖಿನ್ನತೆ ಇನ್ನೂ ದೂರವಾಗಿಲ್ಲ. ನನ್ನ ತೋಳುಗಳ ಉತ್ಸಾಹ ಇನ್ನೂ ಕುಗ್ಗಿಲ್ಲ. ದುರ್ಯೋಧನ ಇನ್ನೂ ಬದುಕಿದ್ದಾನೆ. ನಾನೀಗ ಏನು ಮಾಡಲಿ? ಹೇಗೆ ಮಾಡಲಿ? ಎಂದು ಚಡಪಡಿಸಿದನು. ದುರ್ಯೋಧನನ ಎರಡು ತೊಡೆಗಳನ್ನು ತನ್ನ ಗದಾದಂಡದಿಂದ ನುಚ್ಚುನೂರು ಮಾಡಲು, ಅವನ ಬಾಹುಗಳನ್ನು ತನ್ನ ಗದೆ ಎಂಬ ಕೊಡಲಿಯಿಂದ ಕತ್ತರಿಸಲು,ಕೆಂಪು ಕಣ್ಣು ಹೊಂದಿದ ದುರ್ಯೋಧನನ ವಿಶಾಲವಾದ ಎದೆಯನ್ನು ತನ್ನ ಗದೆ ಎಂಬ ನೇಗಿಲಿನಿಂದ ಎರಡು ಭಾಗವಾಗಿ ಸೀಳಿ ಹರಗಲು,ಆ ಸರ್ಪಧ್ವಜನ ಹಣೆಯನ್ನು ತನ್ನ ಗದಾದಂಡದಿಂದ ಚಿಪ್ಪು ಚಿಪ್ಪಾಗಿ ಮಾಡಲು,ದ್ರೌಪದಿಗೆ ದ್ರೋಹ ಎಸಗಿದ ಅವನ ರತ್ನ ಖಚಿತ ಕಿರೀಟವನ್ನು ತನ್ನ ಗದೆಯ ಹೊಡೆತದಿಂದ ಉರುಳಿಸಿ, ಕಾಲಿನಿಂದ ಒದ್ದು ಮಣ್ಣಹುಡಿಯಲ್ಲಿ ಹೊರಳಿಸಲು ಭೀಮ ತವಕಿಸುತ್ತಿದ್ದನು. ಕುದಿಯುತ್ತಿರುವ ತನ್ನ ಕೋಪಾಗ್ನಿಯನ್ನುದುರ್ಯೋಧನನ ರಕ್ತ ಪ್ರವಾಹದಿಂದ ಶಮನ ಮಾಡಿಕೊಳ್ಳಲು ಸಾಧ್ಯವಾಗದೆ ಅಸಮಾಧಾನಗೊಂಡ ಭೀಮಸೇನ ತನ್ನ ಮೀಸೆಯನ್ನು ಕಡಿದು ತನ್ನ ಮಿತಿಮೀರಿದ ಶತ್ರುವಿನ ಪಟ್ಟವನ್ನು ಹಾರಿಸುವೆನೋ ದೇವತೆಗಳು ಉಂಡ ಅಮೃತವನ್ನು ಕಾರಿಸುವೆನೋ ಗಂಧರ್ವರನ್ನು ಮೇರು ಪರ್ವತದ ತುತ್ತ ತುದಿಯನ್ನು ಏರಿಸುವೆನೋ ಎಂಬ ಒತ್ತಡದಲ್ಲಿದ್ದನು.ಖಳನಾದ ದುರ್ಯೋಧನ ರಸಾತಳಕ್ಕಿಳಿದನೋ ನಾಲ್ಕು ದಿಕ್ಕಿನ ಕೋಣೆಗಳಲ್ಲಿ ಎಲ್ಲಿ ಅಡಗಿದನೋ,ಅಥವಾ ತಾಯಿ ಗಾಂಧಾರಿಯ ಬಸಿರನ್ನು ಮರಳಿ ಹೊಕ್ಕನೋ ಎಂದು ಭೀಮಸೇನ ಕಳವಳಿಸುತ್ತಾನೆ.ಹದಿನಾಲ್ಕು ಲೋಕಗಳು,ನಾಲ್ಕು ಸಮುದ್ರಗಳು,ಹತ್ತು ದಿಕ್ಕುಗಳು ಇರುವುದೊಂದೇ ಬ್ರಹ್ಮಾಂಡ ಇವನ್ನು ಬಿಟ್ಟು ಬೇರೆಲ್ಲೂ ಸ್ಥಳವಿಲ್ಲ. ಇನ್ನೆಲ್ಲಿ ಓಡಿಹೋಗುವನು,ಯಾರ ಸ್ನೇಹ ಸಂಪಾದಿಸಿ ಅಡಗಿರುವನು,ಇವನ್ನು ಬಿಟ್ಟು ಹೊರಗೆಲ್ಲಿ ಹೋಗಿ ದುರ್ಯೋಧನ ಬದುಕಬಲ್ಲನು ಎಂದು ಭೀಮಸೇನ ಚಿಂತಾಕ್ರಾಂತನಾಗುತ್ತಾನೆ.ಆದರೆ ಅಷ್ಟಕ್ಕೆ ಸುಮ್ಮನಾಗದೇ ತನ್ನನ್ನು ತಾನು ಜಾಗೃತವಾಗಿಟ್ಟುಕೊಳ್ಳಲು ಮತ್ತೊಮ್ಮೆ ಪ್ರತಿಜ್ಞೆ ಮಾಡುತ್ತಾನೆ. ನಾಲ್ಕು ದಿಗಂತಗಳನ್ನು ಹೊಂದಿರುವ ಭೂಮಿಯೇ ಕೇಳು,ಸಮುದ್ರವೇ ಆಲಿಸು,ಅಗ್ನಿಯೇ ಆಲಿಸು, ಮಾರುತವೇ ಕೇಳು,ಆಕಾಶವೇ ಆಲಿಸು ನನ್ನ ಶತ್ರುವನ್ನು ಕೊಂದು ಕೋಪಾಗ್ನಿಗೆ ಆಹುತಿ ಮಾಡುತ್ತೇನೆ.ಯಾವಾಗ ಅವನನ್ನು ಕೊಲ್ಲಲು ಸಾಧ್ಯವಿಲ್ಲವೋ ಆಗ ನನ್ನನ್ನೇ ನಾನು ಅಗ್ನಿಗೆ ಆಹುತಿ ಮಾಡಿಕೊಳ್ಳುತ್ತೇನೆ. ಇದು ನನ್ನ ಪ್ರತಿಜ್ಞೆ ಎಂದು ಪಂಚಭೂತಗಳ ಸಾಕ್ಷಿಯಾಗಿ ಶಪಥ ಮಾಡುತ್ತಾನೆ. ನಂತರ ಧರ್ಮರಾಯನಲ್ಲಿಗೆ ತೆರಳಿ ಅವನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ತನ್ನ ಆತಂಕವನ್ನು ತೋಡಿಕೊಳ್ಳುತ್ತಾನೆ.ತಾನು ಮಾಡಿದ ಪ್ರತಿಜ್ಞೆ ನೆರವೇರದೇ ಇರುವುದರಿಂದ ದ್ರೌಪದಿ ಮುಡಿಯನ್ನು ಕಟ್ಟಿಕೊಳ್ಳದೇ ಕೊರಗುತ್ತಿದ್ದಾಳೆ.ಅವಳ ದುಃಖವನ್ನು ನೋಡಿ ನಾನೂ ನನ್ನ ತಮ್ಮಂದಿರು ಎಷ್ಟು ಸಹಿಸಬಲ್ಲೆವು?ದ್ರೌಪದಿಯ ಈ ಅವಸ್ಥೆಯನ್ನು ಕಂಡು ನೀನು ಮನಸ್ಸಿನಲ್ಲಿ ಕೂಡ ನೊಂದುಕೊಳ್ಳುವುದಿಲ್ಲ.ನೀನು ನಿಷ್ಕರುಣಿ.ಹೀಗೆಯೇ ಇರು. ನಾನು ನನ್ನ ಕೋಪವನ್ನು ತೀರಿಸಿಕೊಳ್ಳಲು ಶತ್ರುವೆಂಬ ಮರವನ್ನು ಬೇರು ಸಹಿತ ಕಿತ್ತು ಹಾಕುತ್ತೇನೆ ಎಂದು ಆರ್ಭಟಿಸುತ್ತಾನೆ.ಇಂದು ಒಂದು ದಿವಸ ನಾನು ನಿನಗೆ ಆಜ್ಞಾನುವರ್ತಿಯಲ್ಲ, ನನಗೆ ನೀನು ಹಿರಿಯನಲ್ಲ. ನನ್ನಷ್ಟಕ್ಕೆ ನನ್ನನ್ನು ಬಿಟ್ಟುಬಿಡು. ಕೌರವನನ್ನು ಕೊಂದು ಹಿಸುಕಿ ಹಾಕುತ್ತೇನೆ ಎಂದು ಆಕ್ರೋಶ ವ್ಯಕ್ತ ಪಡಿಸುತ್ತಾನೆ.ನನ್ನ ಕಣ್ಣೆದುರಿನಲ್ಲಿಯೇ ದ್ರೌಪದಿಯ ಮುಂದಲೆ ಹಿಡಿದೆಳೆದು ಅವಮಾನಗೊಳಿಸಿ,ಸೊಕ್ಕಿ ಮೆರೆಯುತ್ತಿದ್ದವನನ್ನು ಕೊಂದು ಹಾಕಿದ್ದೇನೆ.ಇನ್ನು ದುರ್ಯೋಧನನನ್ನು ಕೊಲ್ಲಲು ತಡ ಮಾಡುವೆನೆ? ಎಂದು ಆಕ್ರೋಶಭರಿತನಾಗಿ ಪ್ರಶ್ನಿಸುತ್ತಾನೆ. ಹೀಗೆ ದುರ್ಯೋಧನನನ್ನು ಕೊಲ್ಲುವ ಉತ್ಸಾಹದಿಂದ ಮುನ್ನುಗ್ಗುತ್ತ ಸಿಂಹನಾದ ಮಾಡುತ್ತಾ ಅವನನ್ನು ಅರಸುತ್ತ ಭೀಮ ಅತ್ತಿತ್ತ ಸುಳಿದಾಡುತ್ತಾನೆ. ಕುರುವಂಶವೆಂಬ ಬಾಳೆಯ ವನಕ್ಕೆ ಆನೆಯಾದವನು, ಶತ್ರಗಳೆಂಬ ಪತಂಗಗಳು ದಾಳಿಮಾಡಿ ಆಹುತಿಯಾಗುವ ಸಂದರ್ಭದಲ್ಲಿಯೂ ಪುಟಿದೇಳುವ ದೀಪದಂತಿರುವ ಭೀಮ ಕುರುಭೂಮಿಯಲ್ಲಿಯೇ ಕುರುರಾಜನನ್ನು ಹುಡುಕಿದನು.ವಿದ್ಯಾಭ್ಯಾಸದ ಸಂದರ್ಭದಲ್ಲಿ ತಾನು ಬಿಟ್ಟ ಬಾಣ ಗುರಿ ತಪ್ಪಿತೆಂದು ಗುರುಗಳು ಹೇಳಿದಾಗ ಬಾಣದ ವೇಗವನ್ನು ಮೀರಿ ಅದನ್ನು ಬೆನ್ನಟ್ಟಿ ಮರಳಿ ತಂದಿದ್ದ ಭೀಮ, ಈಗ ಅದೇ ವೇಗದಲ್ಲಿ ಅತ್ತಿತ್ತ ಸಂಚರಿಸಿ ದುರ್ಯೋಧನನ್ನು ಹುಡುಕಿದನು. ಆದರೆ ನಾಲ್ವತ್ತೆಂಟು ಗಾವುದ ವಿಸ್ತೀರ್ಣದ ಕುರುಕ್ಷೇತ್ರದಲ್ಲಿ ಎಲ್ಲಿಯೂ ಅವನನ್ನು ಕಾಣದೇ ದುರ್ಯೋಧನನ ಬೀಡಿಗೆ ಧಾವಿಸಿ ಬರುತ್ತಾನೆ.ಅರಗಿನ ಅರಮನೆಯಲ್ಲಿ ನಮ್ಮನ್ನು ಸುಡಲು ಬಗೆದವನು ಎಲ್ಲಿದ್ದಾನೆ? ಭೀಮನನ್ನು ವಿಷವಿಕ್ಕಿ ಕೊಲ್ಲಲು ಹವಣಿಸಿದವನು ಎಲ್ಲಿದ್ದಾನೆ? ದ್ಯೂತ ಪ್ರಸಂಗದಲ್ಲಿ ವಂಚನೆಯಿಂದ ನಮ್ಮನ್ನು ಸೋಲಿಸಿ ದ್ರೌಪತಿಯನ್ನು ಎಳೆದೊಯ್ದ ಅಪರಾಧಿ ಎಲ್ಲಿದ್ದಾನೆ?ಕೃತಕ ಸಭಾ ಪ್ರವೇಶಕ್ಕೆ ನಮ್ಮನ್ನು ಕರೆದು ಮೋಸ ಮಾಡಿದ ದುರ್ಯೋಧನ ಎಲ್ಲಿದ್ದಾನೆ? ಎಂದು ಆರ್ಭಟಿಸುತ್ತಾನೆ. ಹನ್ನೊಂದು ಅಕ್ಷೋಹಿಣಿ ಸೈನ್ಯಕ್ಕೆ ಒಡೆಯನಾಗಿಯೂ ಈಗ ದಾರುಣವಾದ ಶೋಕಾಗ್ನಿಯಲ್ಲಿ ಬೆಂದು ಮಕ್ಕಳ ಸಾವಿಗಾಗಿ ದುಃಖಿಸುವ ರಾಜಾಧಿರಾಜ ಎಲ್ಲಿದ್ದಾನೆ? ಎಂದು ವ್ಯಂಗ್ಯಭರಿತನಾಗಿ ಪ್ರಶ್ನಿಸುತ್ತಾನೆ. ಭರತ ವಂಶಕ್ಕೆ ಕಳಂಕನೂ ಅನಿಷ್ಠನೂ ಆದ ಕುರುಕುಲ ಮುಖ್ಯ ದುರ್ಯೋಧನ ಎಲ್ಲಿದ್ದಾನೆ? ಕುರುಕುಲಕ್ಕೆ ಪ್ರಳಯ ಸ್ವರೂಪಿಯಾದ ಭೀಮಸೇನ ಬಂದಿದ್ದಾನೆ ಎಂದು ಗರ್ಜಿಸಿ ಕುರುರಾಜನ ಬಾಗಿಲ ಬಳಿ ಬರುತ್ತಾನೆ.ಆದರೆ ಅಲ್ಲಿ ಯುದ್ಧದಲ್ಲಿ ತನ್ನ ಮಕ್ಕಳ ಗತಿ ಏನಾಯಿತು ಎಂಬುದನ್ನು ತಿಳಿಯಲು ಗಾಂಧಾರಿ ಪರಿಜನ ಸಹಿತವಾಗಿ ನಿಂತಿದ್ದಳು.ಕೌರವನನ್ನು ನುಂಗಿದ ರಾಕ್ಷಸನಂತೆ ಪಾಂಡವ ಸೈನ್ಯವನ್ನು ರಕ್ಷಿಸುವ ಕೋಟೆಯಂತೆ ಇರುವ ಭೀಮಸೇನನ ಬರುವಿಕೆಯನ್ನು ಅವಳು ಅರಿತಳು.ನನ್ನ ನೂರು ಮಕ್ಕಳನ್ನು ನುಂಗಿದ ರೀತಿಯಲ್ಲಿಯೇ ಸುಯೋಧನನನ್ನು ನುಂಗಲು ಈತ ಬಂದನಲ್ಲ, ಅನ್ಯಾಯವಾಯಿತು ಎಂದು ಅವಳು ಪರಿತಪಿಸಿದಳು.ಕೋಪದಿಂದ ಕುದಿಯುತ್ತಿದ್ದರೂ ಭೀಮ ತನ್ನ ಕಠಿಣ ಧ್ವನಿಯಲ್ಲಿ ಹಿರಿಯರಿಗೆಲ್ಲ ನಮಸ್ಕರಿಸುತ್ತಾನೆ.ನಂತರ ಗಟ್ಟಿ ಧ್ವನಿಯಲ್ಲಿ ರಾಜಾ ದೃತರಾಷ್ಟ್ರಕೇಳು, ತಾಯಿ ಗಾಂಧಾರಿ ಆಲಿಸು,ನನ್ನ ಗದೆಯಿಂದ ನಿಮ್ಮ ನೂರು ಜನ ಮಕ್ಕಳನ್ನು ಕೊಂದಿದ್ದೇನೆ. ದುಶ್ಯಾಸನನ ಎದೆ ಬಗೆದು ಅವನ ರಕ್ತದಿಂದ ನನ್ನ ಕೋಪಾಗ್ನಿಯನ್ನು ತಣಿಸಿದ್ದೇನೆ. ಈಗ ನೂರಾರು ಅಪರಾಧಗಳನ್ನು ಮಾಡಿದ ದುರ್ಯೋಧನನ್ನು ನುಂಗಲು ಬಂದಿದ್ದೇನೆ ಎಂದು ಆರ್ಭಟಿಸುತ್ತಾನೆ. ಇದೇ ವೇಳೆಗೆ ಕಿರಾತ ದೂತನೊಬ್ಬ ತಂದ ಸಂದೇಶ ದುರ್ಯೋಧನನ ಇರುವಿಕೆಯ ಸುಳಿವು ನೀಡುತ್ತದೆ. ಭೀಷ್ಮರು ಉಪದೇಶಿಸಿದ ಜಲಮಂತ್ರದ ಸಹಾಯದಿಂದ ಕಾಲ ವಂಚನೆ ಮಾಡಲು ದುರ್ಯೋಧನ ವೈಶಂಪಾಯನ ಸರೋವರವನ್ನು ಪ್ರವೇಶಿಸಿರಬೇಕು.ಬಲರಾಮ,ಅಶ್ವತ್ಥಾಮ ಮತ್ತು ಕೃಪಾಚಾರ್ಯರು ನಾಳೆ ದುರ್ಯೋಧನನನ್ನು ಕೂಡಿಕೊಳ್ಳುತ್ತಾರೆ. ಅವರು ಬರುವ ಮುನ್ನವೇ ದುರ್ಯೋಧನನನ್ನು ಗೆಲ್ಲಬೇಕು.ನಂತರ ಅವನನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಆಲೋಚಿಸಿದ ಶ್ರೀಕೃಷ್ಣ ಈಗಿಂದೀಗಲೇ ವೈಶಂಪಾಯನ ಸರೋವರವನ್ನು ಮುತ್ತಿ ಅಡಗಿರುವ ದುರ್ಯೋಧನನನ್ನು ಮೇಲಕ್ಕೇಳಿಸಿ ಅವನನ್ನು ಸೋಲಿಸಬೇಕು ಎಂದು ಪಾಂಡವರನ್ನು ಹುರಿದುಂಬಿಸಿ ಸರೋವರದತ್ತ ಕರೆತರುತ್ತಾನೆ.ಅಲ್ಲಿ ಕಿರಾತ ದೂತರು ಹೇಳಿದ ಗುರುತುಗಳನ್ನು ಕಂಡು ಅವು ದುರ್ಯೋಧನನ ಹೆಜ್ಜೆಗುರುತುಗಳು ಎಂದು ಮನವರಿಕೆ ಮಾಡಿಕೊಳ್ಳುತ್ತಾರೆ.ಕುರುರಾಜ ಹಿಂದೆ ಹಿಂದೆ ಹೆಜ್ಜೆ ಇಟ್ಟು ಭರತ ವಂಶಕ್ಕೆ ಎಂದಿಲ್ಲದ ಕಳಂಕವನ್ನು ತಂದನೆಂದು ಧರ್ಮರಾಯ ತಲೆತಗ್ಗಿಸಿದನು.ಪಾಂಡವರು ಅಲ್ಲಿಗೆ ಬರುತ್ತಿದ್ದಂತೆ ಸರೋವರದಲ್ಲಿ ರಾಜಹಂಸಗಳು ಕಲರವ ಮಾಡಿ ಅವರನ್ನು ಸ್ವಾಗತಿಸುತ್ತವೆ‌.ಗಾಳಿಯ ರಭಸಕ್ಕೆ ಮುನ್ನುಗ್ಗಿದ ತೆರೆಗಳು ಪಾಂಡವರಿಗೆ ನಮಸ್ಕರಿಸುವಂತೆ ಕಂಡುಬಂತು. ಅದೇ ವೇಳೆಗೆ ಮೀನು ಬೇಟೆಗಾಗಿ ನೀರಿಗೆ ಧುಮುಕಿದ ಮಿಂಗುಲಿಗ ಹಕ್ಕಿ ಭೀಮ,ದುರ್ಯೋಧನ ಇಲ್ಲಿಯೇ ಅಡಗಿದ್ದಾನೆ ಎಂದು ತೋರಿಸಿದಂತೆ ಕಂಡು ಬಂತು. ನಿನ್ನ ಶತ್ರು ಈ ಕೊಳದಲ್ಲಿ ಅಡಗಿ ಕುಳಿತಿದ್ದಾನೆ ನೋಡು ಎಂದು ಭೀಮನಿಗೆ ತಿಳಿಸುವಂತೆ ಮೀನುಗಳು ಫಳಫಳ ಹೊಳೆದವು.ಇದರಿಂದ ಉತ್ಸಾಹ ಭರಿತನಾದ ಭೀಮ ಶತ್ರು ನನ್ನ ಕೈಗೆ ಸಿಕ್ಕಿದ್ದಾನೆ.ಸರೋವರದಲ್ಲಿದ್ದವನು ಇನ್ನೆಲ್ಲಿ ಹೋಗಲು ಸಾಧ್ಯ? ಮೊದಲು ಸರೋವರದ ನೀರನ್ನೆಲ್ಲ ಹಿರಿ ನಂತರ ಶತ್ರುವಿನ ರಕ್ತವನ್ನು ಕುಡಿದು ಒಡೆಯ ಧರ್ಮರಾಜನಿಗೆ ನನ್ನ ಸಾಮರ್ಥ್ಯವನ್ನು ತೋರಿಸುತ್ತೇನೆ ಎಂದು ಭೀಮಸೇನನು ತೋಳುಗಳನ್ನು ತಟ್ಟಿಕೊಂಡು ದಿಕ್ಕುಗಳು ಪ್ರತಿಧ್ವನಿಸುವಂತೆ ಘರ್ಜಿಸುತ್ತಾನೆ. ನಂತರ ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತ ದುರ್ಯೋಧನನನ್ನು ಕೊಳದಿಂದ ಹೊರಮಡಿಸಲು ಅವರು ಪ್ರಯತ್ನ ಮಾಡುತ್ತಾರೆ. ಕೊಳವನ್ನು ಸುತ್ತುವರಿದ ಪಾಂಡವರು ಶಂಖ.ಜಾಗಟೆ, ಭೇರಿ,ಕಹಳೆ ಮುಂತಾದ ಪಂಚ ಮಹಾ ವಾದ್ಯಗಳನ್ನು ಬಾರಿಸುತ್ತಾ ಕೊಳದಲ್ಲಿ ಅಡಗಿ ಕುಳಿತ ದುರ್ಯೋಧನನ್ನು ಹೊರತರಲು ವಿಫಲರಾದರು. ಆಗ ನಕುಲನು ದುರ್ಯೋಧನನ ಹೆಸರು ಹಿಡಿದು ಅವನನ್ನು ನಿಂದಿಸಿ ಹೊರಬರುವಂತೆ ಆರ್ಭಟಿಸುತ್ತಾನೆ.ಆದರೆ ಅವನ ಮಾತುಗಳು ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಅವನ ನಂತರ ಸಹದೇವ ದುರ್ಯೋಧನನನ್ನು ಕೆಣಕಿ ಯುದ್ಧಕ್ಕೆ ಆಹ್ವಾನಿಸುತ್ತಾನೆ. ಅದೂ ವಿಫಲವಾಗುತ್ತದೆ ನಂತರ ಅರ್ಜುನ ಮುಂದೆ ಬಂದು ನೀರಲ್ಲಿ ಮೀನು,ಕಪ್ಪೆ,ಎಸಡಿಗಳಿರುವಂತೆ ವೀರರು ಇರುವರೆ? ಹೊರಬಂದು ಯುದ್ಧ ಮಾಡು ಎಂದು ಕರೆಯುತ್ತಾನೆ. ಆದರೆ ಅದು ಸಫಲವಾಗುವುದಿಲ್ಲ. ಧರ್ಮರಾಯ ಮುಂದೆ ಬಂದು ಭರತವಂಶದಲ್ಲಿ ಬದ್ಧ ಮತ್ಸರವಿರಲಿಲ್ಲ ನಿನ್ನಿಂದ ಅದು ಘಟಿಸುತ್ತಿದೆ. ಈಗಲೂ ಸಮಯ ಮೀರಿಲ್ಲ. ಕೊಳದಲ್ಲಿ ಅಡಗಿ ಕುಳಿತಿರುವುದು ಸರಿಯೇ? ಸಂಧಿಗೆ ಒಪ್ಪಿಕೋ ಎಂದು ನುಡಿಯುತ್ತಾನೆ. ಈ ಮಾತನ್ನು ಕೇಳುತ್ತಿದ್ದಂತೆ ಭೀಮಸೇನ ಆಸ್ಫೋಟಿಸುತ್ತಾನೆ."ಈ ಭೂತು ಎನ್ನ ಸರಂಗೇಳ್ದೊಡಲ್ಲದೇ ಪೊರ ಮಡುವವನಲ್ಲ" ಎಂದು ಗರ್ಜಿಸಿ ಇವನಿಗೆ ನಾನೇ ಮದ್ದು ಎಂದು ಆರ್ಭಟಿಸಿತ್ತಾನೆ. ಭಯಂಕರ ಯುದ್ಧದಲ್ಲಿ ನೀನು ಒಳಗಿದ್ದೆ.ನಿನ್ನ ಕುಲವನ್ನೆಲ್ಲ ಕೋಪದಿಂದ ಇರಿದು ಕೊಂದೆ. ಹಿಂದಿನಿಂದಲೇ ಬಂದರೆ ಕೊಳದೊಳಗೆ ಅಡಗಿ ಕುಳಿತಿರುವೆಯಲ್ಲ! ಹೀಗೆ ಅಡಗಿ ಕುಳಿತರೆ ಬದುಕುವೆನೆಂದು ತಿಳಿದಿರುವೆಯಾ? ನನ್ನ ಸ್ವರವನ್ನು ಕೇಳಲಾರದೆ ಉಗ್ರರೂಪವನ್ನು ನೋಡಲಾರದೆ ಸಮರಾಂಗಣವನ್ನು ಬಿಟ್ಟು ಕೊಳವನ್ನು ಪ್ರವೇಶಿಸಿದರೆ ಬದುಕುವೆಯಾ?ಎಂದು ಆಕ್ರೋಶದಿಂದ ಪ್ರಶ್ನಿಸುತ್ತಾನೆ. ನೀರಿನಲ್ಲಿ ಮೀನಿರುವಂತೆ ಕೊಳದೊಳಗೆ ಮುಳುಗಿ ಮುಳುಗಿ ಅಡಗಿರುವೆಯಲ್ಲ, ದುರ್ಯೋಧನ ಎನ್ನುವ ಹೆಸರಿಗಿದು ಅವಮಾನ. "ಸತ್ತರೇಂ ಪುಟ್ಟರೆ"ಎಂದು ಪ್ರಶ್ನಿಸಿ, ಹೊರಗೆ ಬಾ ಆಯುಧ ಹಿಡಿದು ಯುದ್ಧ ಮಾಡು ಎಂದು ಕರೆಯುತ್ತಾನೆ. ಶ್ರೀಕೃಷ್ಣ ಸಂಧಾನಕ್ಕೆ ಬಂದಾಗ ಅವನನ್ನು ಅವಮಾನಗೊಳಿಸಲು ಪ್ರಯತ್ನಿಸಿದೆಯಲ್ಲ,ಆ ಅಹಂಕಾರ ಈಗ ಎಲ್ಲಿದೆ? ದ್ರೌಪತಿಯ ಮುಡಿ ಹಿಡಿದು ಸೀರೆ ಎಳೆಯುವಂತೆ ಮಾಡಿದ ಮದ ಈಗೆಲ್ಲಿದೆ? ಪಾಂಡವರನ್ನು ಕಾಡಿನಲ್ಲಿ ಅಲೆಸಿದ ಸೊಕ್ಕು ಈಗ ಏನಾಯಿತು ಎಂದು ಭೀಮ ಆರ್ಭಟಿಸಿತ್ತಾನೆ. ಅಷ್ಟಕ್ಕೆ ಸುಮ್ಮನಿರದೆ ಬ್ರಹ್ಮಾಂಡವೇ ಒಡೆಯುವಂತೆ ಸಿಂಹನಾದ ಮಾಡುತ್ತಾನೆ.ಭೀಮನ ಕೋಪಾಟೋಪದ ಪರಿಣಾಮವಾಗಿ ಕೋಳದ ನೀರು ಹುರಿಗಡಲೆ ಹುರಿಯಲು ಕಾದ ಮರಳಿನಂತೆ ಬಿಸಿಯಾಗುತ್ತದೆ. ಕೊಳದ ತಾವರೆಗಳು ಬಾಡುತ್ತವೆ. ಕೊಳದಲ್ಲಿರುವ ಮೀನುಗಳು ಕೊಳದ ನೀರು ಕಾದ ಎಸರಿನಂತೆ ಕುದಿಯುತ್ತದೆ. ಅಲ್ಲಿರುವ ಮೀನುಗಳು ಅನ್ನ ಕುದಿಯುವಂತೆ ಕುದಿಯುತ್ತವೆ. ಹೀಗೆ ನೀರಿನಲ್ಲಿರುವ ಜೀವರಾಶಿಗಳು ಪ್ರಾಣ ಬಿಡುತ್ತಿರಲು ಸಿಂಹಕೇತನನಾದ ಭೀಮಸೇನ ಭರ್ಜರಿಯಾಗಿ ಸಿಂಹನಾದ ಮಾಡುತ್ತಾನೆ. ಭೀಮನ ಆರ್ಭಟದ ಧ್ವನಿ ಅಜೇಯವಾದ ಸಿಂಹದ ಧ್ವನಿಯನ್ನೂ ಮೀರಿಸಿದ ಸಿಡಿಲಿನ ಧ್ವನಿಯನ್ನು ಹೋಲುತ್ತಿತ್ತು. ಅದನ್ನು ಕೇಳುತ್ತಿದ್ದಂತೆ ನೀರಿನಲ್ಲಿ ಅಡಗಿ ಕುಳಿತ ದುರ್ಯೋಧನನ ಕಣ್ಣುಗಳು ಕೋಪದಿಂದ ಕೆಂಪಾಗುತ್ತವೆ. ಮನಸ್ಸಿನ ಏಕಾಗ್ರತೆಯನ್ನು ಕಳೆದು ಕೊಳ್ಳುತ್ತಾನೆ. ಇದರ ಪರಿಣಾಮವಾಗಿ ಆತನ ನೀರಿನಲ್ಲಿದ್ದರೂ ಬೇವರುತ್ತಾನೆ. ಆ ಕ್ಷಣ ಅಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದೇ ರಸಾತಳದಿಂದ ಪ್ರಳಯಕಾಲದ ಕಾಲಾಗ್ನಿರುದ್ರನು ಹೊರಹೊಮ್ಮುವಂತೆ ಸರೋವರದಿಂದ ಮಧ್ಯದಿಂದ ಹೊರಬಿದ್ದು ತನ್ನ ಕೈಯಲ್ಲಿದ್ದ ಗದೆಯನ್ನು ಅತ್ತಿತ್ತ ತೂಗಿ ಎಂಟು ದಿಕ್ಕುಗಳನ್ನು ಅವಲೋಕಿಸುತ್ತಾ ಭೀಮ ಎಲ್ಲಿದ್ದಾನೆ ಎಂದು ಆರ್ಭಟಿಸುತ್ತಾನೆ. ಪ್ರಸ್ತುತ ಕಾವ್ಯಭಾಗ ಗದಾಯುದ್ಧ ಕಾವ್ಯದ ರಸಘಟ್ಟಿ ಎಂದು ಹೇಳಬಹುದು.ಈ ಭಾಗದಲ್ಲಿ ದುರ್ಯೋಧನನಿಗೆ ಭೀಮನ ಮೇಲಿರುವ ದ್ವೇಷವನ್ನು ಕವಿ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾನೆ. ಪಂಚಮಹಾವಾದ್ಯಗಳ ಸದ್ದಿಗೆ, ನಕುಲ-ಸಹದೇವ, ಧರ್ಮರಾಜ ಅರ್ಜುನರ ಮಾತಿಗೆ ಮನೋನಿಗ್ರಹವನ್ನು ಕಳೆದುಕೊಳ್ಳದ ದುರ್ಯೋಧನ, ಭೀಮ ಆರ್ಭಟಕ್ಕೆ ಚಂಚಲಚಿತ್ತನಾಗಿ ಕೊಳದಿಂದ ಮೇಲಕ್ಕೇಳುವ ದೃಶ್ಯ ಅತ್ಯಂತ ನಾಟಕೀಯವಾಗಿದೆ.ಇಂತಹ ಪರಿಣಾಮಕಾರಿ ದೃಶ್ಯ ನಿರೂಪಣೆಯ ಕಾರಣಕ್ಕೆ ರನ್ನ ಮಹಾಕವಿ ಎನಿಸಿಕೊಳ್ಳುತ್ತಾನೆ.

ದುರ್ಗಸಿಂಹನ ಪಂಚತಂತ್ರದ ಎರಡು ಗಿಳಿಗಳ ಕಥೆ

ಕನ್ನಡ ಸಾಹಿತ್ಯದಲ್ಲಿ ದುರ್ಗಸಿಂಹನಿಗೆ ವಿಶಿಷ್ಟ ಸ್ಥಾನವಿದೆ.ಪಂಚತಂತ್ರ ಎಂಬ ವಿಶಿಷ್ಟ ಕೃತಿಯ ಮೂಲಕ ತನ್ನ ಸ್ಥಾನವನ್ನು ಆತ ಭದ್ರಪಡಿಸಿ ಕೊಂಡಿದ್ದಾನೆ. ಭಾರತೀಯ ಸಾಹಿತ್ಯದಲ್ಲಿ ಪಂಚತಂತ್ರದ ಎರಡು ಧಾರೆಗಳು ಪ್ರಚಲಿತದಲ್ಲಿವೆ.ಒಂದು ವಿಷ್ಣುಶರ್ಮನ ಪಂಚತಂತ್ರ ಇನ್ನೊಂದು ವಸುಭಾಗಭಟ್ಟ ನ ಪಂಚತಂತ್ರ. ವಿಷ್ಣುಶರ್ಮನ ಪಂಚತಂತ್ರದ ಅನೇಕ ಅವತರಣಿಕೆಗಳು ನಮಗೆ ದೊರಕುತ್ತವೆ ಆದರೆ ವಸುಭಾಗಭಟ್ಟನ ಪಂಚತಂತ್ರದ ಅವತರಣಿಕೆ ಕೇವಲ ದುರ್ಗಸಿಂಹನಲ್ಲಿ ಮಾತ್ರ ದೊರಕುತ್ತದೆ.ಆದ್ದರಿಂದ ದುರ್ಗಸಿಂಹನ ಪಂಚತಂತ್ರಕ್ಕೆ ಭಾರತೀಯ ಸಾಹಿತ್ಯದಲ್ಲಿ ಮಹತ್ವದ ಸ್ಥಾನವಿದೆ. ದುರ್ಗಸಿಂಹ ಈ ಕೃತಿಯಲ್ಲಿ ತನ್ನ ವೈಯಕ್ತಿಕ ವಿವರಗಳನ್ನು ಹೇಳಿಕೊಂಡಿದ್ದಾನೆ .ಇವನ ಊರು ಸಯ್ಯಡಿ.ಇಂದಿನ ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿದೆ. ತಂದೆ ಈಶ್ವರಾರ್ಯ, ತಾಯಿ ದೇವಕಬ್ಬೆ.ದುರ್ಗಸಿಂಹನ ಗುರು ಶಂಕರ ಭಟ್ಟ.ಇಮ್ಮಡಿ ಜಯಸಿಂಹನ ಆಸ್ಥಾನದಲ್ಲಿ ಸಂಧಿವಿಗ್ರಹಿ ಆಗಿದ್ದ ದುರ್ಗಸಿಂಹ ಪ್ರತಾಪಶಾಲಿಯೂ ಆಗಿದ್ದ.ಸಂಸ್ಕೃತದಲ್ಲಿದ್ದ ಪಂಚತಂತ್ರವನ್ನು ಕನ್ನಡದಲ್ಲಿ ರಚಿಸುವ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾನೆ.ಈ ಕೃತಿಯನ್ನು 1031ರಲ್ಲಿ ರಚಿಸಿರುವದಾಗಿ ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಪಂಚತಂತ್ರ ಹೆಸರೇ ಸೂಚಿಸುವಂತೆ ಐದು ತಂತ್ರಗಳ ಕಥೆಗಳ ಸಂಕಲನ.ಅರ್ಥಶಾಸ್ತ್ರದ ಐದು ತಂತ್ರಗಳ ಮೂಲಕ ಕಥೆಗಳನ್ನು ಹೇಳಿರುವದರಿಂದ ಇದಕ್ಕೆ ಪಂಚತಂತ್ರ ಎಂಬ ಹೆಸರು ಬಂದಿದೆ.ಅಮರ ಶಕ್ತಿ ಎಂಬ ಅರಸನ ದಾರಿತಪ್ಪಿದ ಮೂರು ಮಕ್ಕಳನ್ನು ಯೋಗ್ಯರನ್ನಾಗಿ ಮಾಡಲು ಪ್ರಾಣಿ-ಪಕ್ಷಿಗಳ ಪಾತ್ರಗಳನ್ನು ಒಳಗೊಂಡ ನೀತಿ ಕಥೆಗಳನ್ನು ಹೇಳುವ ಮೂಲಕ ಅವರನ್ನು ಸಂಸ್ಕಾರವಂತರನ್ನಾಗಿ ಪರಿವರ್ತಿಸಲಾಯಿತು ಎಂಬುದು ಈ ಕಾವ್ಯದ ಹೆಗ್ಗಳಿಕೆ.ಭೇದ ಪ್ರಕರಣ ಪರೀಕ್ಷಾ ಪ್ರಕರಣ ವಿಶ್ವಾಸ ಪ್ರಕರಣ, ವಂಚನೆ ಪ್ರಕರಣ ,ಮಿತ್ರಕಾರ್ಯ ಎಂಬ ಐದು ತಂತ್ರಗಳು ಈ ಕಾವ್ಯದಲ್ಲಿ ವೆ ಪ್ರಸ್ತುತ ಎರಡು ಗಿಣಿಗಳ ಕಥೆಯನ್ನು ದುರ್ಗಸಿಂಹನ ಪಂಚತಂತ್ರದ ಮೊದಲ ಪ್ರಕರಣ ಮಿತ್ರ ಭೇದದಿಂದ ಆಯ್ದುಕೊಳ್ಳಲಾಗಿದೆ . ಗುಣದೋಷಗಳು ಸಹವಾಸದಿಂದ ಉಂಟಾಗುತ್ತವೆ ಎಂಬುದನ್ನು ಈ ಕಥೆ ಪರಿಣಾಮಕಾರಿಯಾಗಿ ನಿರೂಪಿಸುತ್ತದೆ.ಇಲ್ಲಿ ಪದ್ಯ ಭಾಗಕ್ಕಿಂತ ಗದ್ಯ ಭಾಗವೇ ಹೆಚ್ಚಾಗಿದ್ದು ನಿರೂಪಣೆಯ ದೃಷ್ಟಿಯಿಂದ ಅಡೆತಡೆಯಿಲ್ಲದೆ ಮುಂದುವರಿಯಲು ಅನುಕೂಲವಾಗಿದೆ. ಶ್ರೀಮನ್ನಾರಾಯಣನಿಗೆ ಸರಿ ದೊರೆಯಾದ ಜನೋದಯ ಎಂಬ ಅರಸನು ಒಮ್ಮೆ ಬೇಟೆಯಾಡಲು ಕಾಡಿಗೆ ಹೋದನು. ಇದನ್ನು ತಿಳಿದ ಅವನ ದಾಯಾದಿ ಅವನನ್ನು ಕೊಲ್ಲುವ ಉದ್ದೇಶದಿಂದ ಹಿಂಬಾಲಿಸಿದನು.ಇದನ್ನು ಅರಿತ ರಾಜನು ಅವನು ತನ್ನ ಶತ್ರು ಎಂದು ಭಾವಿಸಿ ವೈರತ್ವಕ್ಕೆ ಬಲಿಯಾಗಿ ನಿಷ್ಕಾರಣವಾಗಿ ಏಕೆ ಸಾಯಬೇಕು,ಬದುಕಿದವನೇ ಬಂಟ ಎಂಬ ಗಾದೆ ಮಾತಿದೆ. ಧರ್ಮಸಾಧನೆಗೆ ಶರೀರವೇ ನಿಜವಾದ ಮಾಧ್ಯಮ.ಆದ್ದರಿಂದ ಈ ಶರೀರವನ್ನು ಕಾಪಾಡಿಕೊಳ್ಳಬೇಕು ಎಂದು ನಿರ್ಧರಿಸಿ ತಾನು ಏರಿದ ಕುದುರೆಯನ್ನು ಮನಸ್ಸಿನ ವೇಗಕ್ಕೂ ಮಿಗಿಲಾಗಿ ಓಡಿಸಿದನು.ಹಾಗೆ ಓಡಿದ ಕುದುರೆ ಬೇಡರ ಬಿಡಾರವೊಂದನ್ನು ತಲುಪಿತು.ಜನ ಸಂಚಾರವಿರುವಲ್ಲಿ ನಿರ್ಭೀತನಾಗಿ ಇರಬಹುದು ಎಂದು ಭಾವಿಸಿದ ರಾಜ ಅಲ್ಲಿ ಕೆಲಕಾಲ ವಿಶ್ರಾಂತಿ ಬಯಸಿದನು.ಆದರೆ ಬೇಡರ ಬಿಡಾರದಲ್ಲಿ ಇದ್ದ ಪಂಜರದ ಗಿಣಿಯೊಂದು ಎಲೈ ಶಬರರಾಜ,ಬಗೆಬಗೆಯ ಆಭರಣಗಳನ್ನು ತೊಟ್ಟುಕೊಂಡು ಒಬ್ಬನು ವ್ಯಾಕುಲಗೊಂಡು ಇಲ್ಲಿಗೆ ಬರುತ್ತಿದ್ದಾನೆ. ಯಾವುದೇ ಗೊಂದಲಗಳಿಲ್ಲದೆ ಈ ಐಶ್ವರ್ಯವನ್ನು ತೆಗೆದುಕೊಳ್ಳು ಎಂದಿತು.ಈ ಮಾತನ್ನು ಕೇಳಿ ಇನ್ನಷ್ಟು ಗಾಬರಿಗೊಂಡ ರಾಜ ಇದು ಸುರಕ್ಷಿತ ಪ್ರದೇಶವಲ್ಲ ಎಂದು ಭಾವಿಸಿ ಕುದುರೆಯನ್ನು ಮುನ್ನಡೆಸಿದನು. ಸ್ವಲ್ಪ ದೂರ ಕ್ರಮಿಸುತ್ತಿದ್ದಂತೆ ಮುಗಿಲು ಮುದ್ದಿಡುವ ಮರಗಳ ಗುಂಪಿನ ನಡುವೆ ಸ್ವರ್ಗಕ್ಕೆ ಹೋಗಲು ಸೋಪಾನ ಕಟ್ಟಿದಂತೆ ಏರುತ್ತಿದ್ದ ಹೊಗೆಯನ್ನು ಕಂಡು ಅದೂ ಬೇಡರಹಳ್ಳಿ ಎಂದು ಭಾವಿಸಿ ಭಯಗೊಂಡು ತನ್ನ ಇಷ್ಟದೈವವನ್ನು ಸ್ಮರಿಸಿದನು.ಮಾರ್ಗಾಯಾಸದಿಂದ ಬಳಲಿದ ನನಗೆ ದೇವರೇ ಗತಿಯೆಂದು ಭಾವಿಸಿ ಮನಗುಂದಿ ಬರುತ್ತಿದ್ದ ಜನೋದಯ ಅರಸನಿಗೆ ಪ್ರಾಣವಾಯು ಬರುವಂತೆ ಹೋಮಧೂಮದ ಕಂಪನ್ನು ಹೊತ್ತುತಂದ ಗಾಳಿ ದೇಹದ ಬಳಲಿಕೆಯನ್ನು ದೂರ ಮಾಡುತ್ತದೆ.ಧೂಪ ವಾಸನೆಯಿಂದ ಇದು ಋಷ್ಯಾಶ್ರಮವಾಗಿರಬೇಕು ಎಂದು ನಿಶ್ಚಯಿಸಿ ಅತ್ತ ಮುಂದುವರೆಯುತ್ತಾನೆ.ಅಲ್ಲಿಯ ವಾತಾವರಣ ಆಹ್ಲಾದಕರವಾಗಿರುತ್ತದೆ. ಆಶ್ರಮವಾಸಿಗಳು ಹೋಮಕಾರ್ಯಗಳ ಸಿದ್ಧತೆಯಲ್ಲಿ ಇರುತ್ತಾರೆ. ಬಗೆ ಬಗೆಯ ಸುಗಂಧ ಪುಷ್ಪಗಳನ್ನು ಹೋಮ ಕಟ್ಟಿಗೆಗಳನ್ನು ಸಂಗ್ರಹಿಸುತ್ತಿದ್ದ ಪರಿಚಾರಕರನ್ನು ಕಾಣುತ್ತಾನೆ. ಫಲಭರಿತ ಮರ-ಗಿಡಗಳನ್ನೂ ವೇದಮಂತ್ರಗಳನ್ನು ಉಲಿಯುತ್ತಿದ್ದ ಕೋಗಿಲೆ,ಗಿಳಿ, ಗೊರವಂಕಗಳನ್ನು ನೋಡುತ್ತಾನೆ. ತಮ್ಮ ತುಂಟಾಟಗಳನ್ನು ಮರೆತು ತಪೋಧನರಿಗೆ ನೆರವು ನೀಡುವ ಕಪಿಗಳನ್ನು ಅರಸ ಕಾಣುತ್ತಾನೆ. ಯಜ್ಞಕ್ಕೆ ಬೇಕಾದ ಸಮೃದ್ಧ ಕ್ಷೀರಗಳನ್ನು ನೀಡುವ ಕಾಮಧೇನುಗಳು ಅವನ ಕಣ್ಣಿಗೆ ಬೀಳುತ್ತವೆ. ಅಲ್ಲಿರುವ ಪ್ರಾಣಿ ಪಕ್ಷಿಗಳು ತಮ್ಮಲ್ಲಿರುವ ವೈರತ್ವವನ್ನು ಮರೆತು ವರ್ತಿಸುವುದನ್ನು ಅರಸ ಕಾಣುತ್ತಾನೆ. ಎಲ್ಲಿ ನೋಡಿದರೂ ತಪೋಧನರ ತಪಸ್ಸಿನ ಪ್ರಭಾವಕ್ಕೆ ಒಳಗಾಗಿ ಸದ್ಗುಣಗಳನ್ನು ಹೊಂದಿದ ಜೀವಸಂಕುಲಗಳನ್ನು ಕಂಡು ಅರಸ ಆಶ್ಚರ್ಯ ಚಕಿತನಾಗುತ್ತಾನೆ. ಆಗಲೇ ಅವನನ್ನು ಕಂಡ ಒಂದು ರಾಜಕೀರವು ಎಲೈ ಮಹಾಪುರುಷ ನೀನೂ ಕುದುರೆಯೂ ತುಂಬಾ ಬಳಲಿದ್ದೀರಿ.ಇಂದಿ ನೀವು ಈ ಋಷ್ಯಾಶ್ರಮದಲ್ಲಿ ವಿಶ್ರಮಿಸಿ ಕೊಂಡು ಹೋಗಿ ಎಂದಿತು.ಆ ಪಕ್ಷಿಯ ಮಾತನ್ನು ನಂಬಿ ಸಮೀಪದ ಹೂಗೊಳದ ದಡದಲ್ಲಿದ್ದ ಮಾವಿನ ಮರದ ನೆರಳಲ್ಲಿ ಕುದುರೆಯನ್ನು ಬಿಟ್ಟು ತಾನು ಸ್ನಾನಾದಿ ನಿತ್ಯ ನಿಯಮಗಳನ್ನು ಪೂರೈಸಿ ಶುಚಿರ್ಭೂತನಾದನು.ಬಳಿಕ ಅಲ್ಲಿಯೇ ಸಮೀಪದಲ್ಲಿದ್ದ ಆಶ್ರಮದ ಗುರುಗಳ ಬಳಿ ಬಂದು ಅವರಿಗೆ ನಮಸ್ಕರಿಸಿ ಗುರುಗಳೇ ತಾವು ದೇವತಾ ಸ್ವರೂಪರು.ತತ್ವ,ತಪಸ್ಸು, ಧರ್ಮ ಇವುಗಳು ಹೇಗಿವೆ ಎಂಬುದನ್ನು ನನಗೆ ತಿಳಿಯುವಂತೆ ಹೇಳಿರಿ ಎಂದು ಕೋರುತ್ತಾನೆ.ಆಗ ಆ ಮುನೀಶ್ವರನು"ಹುಟ್ಟು ಸಾವು ಇಲ್ಲದವನೇ ದೇವರು, ಅವನ ಮಾತೇ ತತ್ವ, ಜೀವ ದಯೆಯೇ ಧರ್ಮ, ಇಂದ್ರಿಯ ಸೇವನೆಯನ್ನು ತೊರೆಯುವುದೇ ತಪಸ್ಸು" ಎಂದು ಕೆಲ ಮಾತುಗಳಲ್ಲಿ ತತ್ವ ವಿಚಾರವನ್ನು ಉಪದೇಶಿಸುತ್ತಾನೆ. ಇದರಿಂದ ಸಂತೋಷ ಹೊಂದಿದ ರಾಜನು ಅಲ್ಲಿಯೇ ಕುಳಿತು ವಿಶ್ರಾಂತಿ ಪಡೆಯುತ್ತಾನೆ.ಆಗ ರಾಜಕೀರವು ನೇರಳೆ, ಬಾಳೆ ಮುಂತಾದ ರುಚಿಕರವಾದ ಹಣ್ಣುಗಳನ್ನು ತಂದು ಕೊಡುತ್ತದೆ. ಅದನ್ನೆಲ್ಲ ಸವಿದು ತನ್ನ ಶ್ರಮ ಪರಿಹರಿಸಿಕೊಂಡ ಅರಸನು ಆ ಗಿಳಿಯ ಜೊತೆಗೆ ಸಂವಾದ ನಡೆಸುತ್ತಾನೆ. ನಿನ್ನಂತೆ ದೇಹ,ರೂಪು,ವಯಸ್ಸು, ಸ್ವರಗಳನ್ನು ಹೊಂದಿದ ನಿನಗೆ ಅನುರೂಪವಾದ ಗಿಳಿಯೊಂದನ್ನು ಬೇಡರಹಳ್ಳಿಯಲ್ಲಿ ಕಂಡೆ.ಅದು ನನ್ನನ್ನು ಕಂಡು ಇವನನ್ನು ಹಿಡಿ,ಕಟ್ಟು,ಕೊಲ್ಲು ಎಂದು ಕಠಿಣವಾಗಿ ವರ್ತಿಸಿತು.ಆದರೆ ನೀನು ಮಿತ್ರನಾಗಿ ನಡೆದುಕೊಂಡೆ ಇದಕ್ಕೆ ಕಾರಣವೇನು? ಎಂದು ಕೇಳಿದನು.ಆಗ ರಾಜಕೀರವು ಆ ಪಕ್ಷಿಗೂ ನನಗೂ ತಂದೆ-ತಾಯಿಗಳು ಒಬ್ಬರೇ.ಈ ಮುನಿಗಳು ನನ್ನನ್ನು ಕೊಂಡು ಬಂದರು.ಅವನನ್ನು ಕ್ರೂರರೂ, ಕಠಿಣ ಹೃದಯದವರೂ ಆದ ಬೇಡರು ಕೊಂಡು ಹೋದರು. ನಾನು ಪ್ರತಿದಿನ ಮುನಿಗಳ ಮಾತುಗಳನ್ನು ಕೇಳಿದರೆ ಅವನು ಬೇಡರ ಮಾತುಗಳನ್ನು ಕೇಳುವನು ಇದು ಪ್ರತ್ಯಕ್ಷವಾಗಿ ನಿನ್ನ ಅನುಭವಕ್ಕೆ ಬಂದಿದೆ ಎಂದು ಹೇಳಿತು. ಎಂತಹ ಬುದ್ಧಿವಂತನೂ ಸಂಗ ವಶದಿಂದ ತನ್ನ ಸ್ವಭಾವವನ್ನು ಬೆಳೆಸಿಕೊಳ್ಳುತ್ತಾನೆ ಎಂಬುದು ಸತ್ಯ ಎಂದು ಅರಸ ಅರಿತುಕೊಂಡನು. ನೀತಿಯೇ ಮುಖ್ಯ ಉದ್ದೇಶವಾದ ಈ ಕಥೆಯಲ್ಲಿ ದುರ್ಗಸಿಂಹ, ವ್ಯಕ್ತಿಯ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಪರಿಸರ ವಹಿಸುವ ಪಾತ್ರವನ್ನು ನಿರೂಪಿಸುತ್ತಾನೆ. ಪರಿಸರ ಮತ್ತು ಸಹವಾಸಗಳು ವ್ಯಕ್ತಿಗಳ ಬದುಕಿನಲ್ಲಿ ಮಹತ್ವದ ಪ್ರಭಾವವನ್ನು ಬೀರುತ್ತವೆ ಆದ್ದರಿಂದ ಒಳ್ಳೆಯ ಪರಿಸರದಲ್ಲಿ ಬಾಳಿ ಬದುಕಬೇಕು ಎಂಬ ನೀತಿಯನ್ನು ಈ ಕತೆಯ ಮೂಲಕ ನಿರೂಪಿಸುತ್ತಾನೆ.