ಶುಕ್ರವಾರ, ಮಾರ್ಚ್ 25, 2022

ಅಪ್ಪುವನ್ನು ನೆನೆಯುತ್ತ... ಥಿಯೇಟರ್ ನಲ್ಲಿ ಸಿನಿಮಾ ನೋಡದೇ ಅದೆಷ್ಟೋ ವರ್ಷಗಳಾಗಿವೆ.ಹಾಗೆಂದು ಸಿನೇಮಾದ ಬಗ್ಗೆ ನಿರಾಸಕ್ತಿಯೇನೂ ಇಲ್ಲ. ಹೊಸ ಸಿನಿಮಾಗಳು ಬಿಡುಗಡೆಯಾದ ಎರಡು ಮೂರು ವಾರಗಳಲ್ಲಿ ಟಿ.ವಿ.ಯಲ್ಲಿ ಪ್ರದರ್ಶನಗೊಳ್ಳುವದರಿಂದ ಟಾಕೀಸ್ ಗೆ ಹೋಗಿ ನೋಡುವ ಧಾವಂತ ಉಳಿದಿಲ್ಲ.ಇತ್ತೀಚಿನ ದಿನಗಳಲ್ಲಿ ಥಿಯೇಟರ್ ಗಳ ಜೊತೆಯಲ್ಲಿ ಓಟಿಟಿ ವೇದಿಕೆಗಳಲ್ಲಿಯೂ ಚಿತ್ರ ಬಿಡುಗಡೆಯಾಗುವದರಿಂದ ಮನೆಯಲ್ಲೇ ಕುಳಿತು ನೋಡಬಹುದಾಗಿದೆ. ಕನ್ನಡಿಗ,ಒನ್ ಕಟ್ ಟು ಕಟ್, ದೃಶ್ಯ ೨,ಗರುಡ ಗಮನ ವೃಷಭ ವಾಹನ ಮುಂತಾದ ಸಿನೇಮಾಗಳನ್ನು ಹಾಗೇ ನೋಡಿಯಾಗಿದೆ. ಆದರೆ ಪುನೀತ್ ರಾಜಕುಮಾರ್ ಅವರ ಅಕಾಲಿಕ ಅಗಲಿಕೆ ಅವರು ಕೊನೆಯ ಚಿತ್ರವನ್ನು ಚಿತ್ರ ಮಂದಿರದಲ್ಲಿಯೇ ನೋಡುವಂತೆ ಮಾಡಿತು.ಪುನೀತ್ ರಾಜಕುಮಾರ್ ಅವರು ಬಾಲ್ಯದಲ್ಲೇ ಲೋಹಿತ್ ಆಗಿ, ನಂತರ ಅಪ್ಪು ಆಗಿ ತಮ್ಮ ಅಭಿನಯದಿಂದ ಕನ್ನಡಿಗರ ಮನ ಗೆದ್ದವರು.ಅವರು ನಟಿಸಿದ ವಸಂತ ಗೀತಾ,ಎರಡು ನಕ್ಷತ್ರಗಳು, ಭೂಮಿಗೆ ಬಂದ ಭಗವಂತ, ಬೆಟ್ಟದ ಹೂವು, ಭಕ್ತ ಪ್ರಹ್ಲಾದ ಮುಂತಾದ ಚಿತ್ರಗಳ ಅಭಿನಯ ಅವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ.ಆದರೆ ಪರಶುರಾಮ ಚಿತ್ರದ ನಂತರ ಯಾಕೋ ಅವರು ಚಿತ್ರರಂಗದಿಂದ ದೂರವಾದರು. ಬೇರೆ ಬೇರೆ ಉದ್ಯಮಗಳಲ್ಲಿ ತೊಡಗಿಕೊಂಡರೂ ಅವು ಅವರ ಕೈ ಹಿಡಿಯಲಿಲ್ಲ. ಈ ನಡುವೆ ಅವರ ವ್ಯವಹಾರದ ಕುರಿತು ಅಲ್ಲಲ್ಲಿ ನಕಾರಾತ್ಮಕ ಪಿಸುಮಾತುಗಳು ಕೇಳಿ ಬಂದವು. ಆದರೆ ಅವುಗಳಿಗೆಲ್ಲ ತಲೆ ಕೆಡಿಸಿ ಕೊಳ್ಳದೆ ಪುನೀತ್ ಅಪ್ಪು ಸಿನೇಮಾದ ಮೂಲಕ ಚಿತ್ರರಂಗಕ್ಕೆ ಪುನರ್ ಪ್ರವೇಶಿದರು. ನಂತರ ಮರಳಿ ನೋಡಿದ್ದೇ ಇಲ್ಲ.ಅವರು ಅಭಿನಯಿಸಿದ ಚಿತ್ರಗಳೆಲ್ಲ ಸೂಪರ್ ಡೂಪರ್ ಗಳೇ.ಪ್ರಥ್ವಿ,ಜಾಕಿ,ರಾಜರತ್ನ, ರಾಜಕುಮಾರ, ಅರಸು, ಮೈತ್ರಿ ಮುಂತಾದ ಚಿತ್ರಗಳು ಚಿತ್ರರಂಗದಲ್ಲಿ ಹೊಸ ಭಾಷ್ಯವನ್ನು ಬರೆದವು.ಅಭಿನಯದ ಜೊತೆಯಲ್ಲಿಯೇ ಯಾವ ಪ್ರಚಾರವನ್ನು ಬಯಸದೇ ಜನಮುಖಿ ಚಿಂತನೆಯನ್ನು ಮೈಗೂಡಿಸಿಕೊಂಡು ಅನಾಥಾಲಯ, ವೃದ್ಧಾಶ್ರಮ,ಬಡ ಮಕ್ಕಳ ಶಿಕ್ಷಣ -ಯೋಗಕ್ಷೇಮಗಳಲ್ಲಿ ತೊಡಗಿ ತಮ್ಮ ವ್ಯಕ್ತಿತ್ವಕ್ಕೆ ಹೊಸ ಪ್ರಭೆಯನ್ನು ಸೃಷ್ಟಿಸಿಕೊಂಡರು. ಇಂತಹ ಪುನೀತ್ ರಾಜಕುಮಾರ್ ಅವರು ಯಾರೂ ನಿರೀಕ್ಷಿಸದ ರೀತಿಯಲ್ಲಿ ಕಣ್ಮರೆಯಾದಾಗ ಇಡೀ ಕನ್ನಡನಾಡು ಕಣ್ಣೀರು ಹಾಕಿದ್ದು ಅವರು ವ್ಯಕ್ತಿತ್ವದ ಮಹೋನ್ನತಿಯ ಪ್ರತೀಕ. ಸುಮಾರು ಮೂವತ್ತೈದು ವರ್ಷಗಳ ಹಿಂದೆ ಕನ್ನಡದ ಪ್ರತಿಭಾವಂತ ಕಲಾವಿದ ಶಂಕರನಾಗ್ ಆಕಸ್ಮಿಕ ಅಪಘಾತದಲ್ಲಿ ಮರಣ ಹೊಂದಿದಾಗಲೂ ಕನ್ನಡನಾಡು ಇಂತಹುದೇ ಶೋಕವನ್ನು ವ್ಯಕ್ತ ಪಡಿಸಿತ್ತು.ಆದರೆ ಅಪ್ಪು ಅವರ ಅಗಲಿಕೆಯ ನೋವು ಉಂಟು ಮಾಡಿದೆ ಪ್ರಭಾವ ಇನ್ನೂ ಗಾಢವಾಗಿತ್ತು.ರಾಜಕುಮಾರ ಅವರ ಎಲ್ಲ ಮಕ್ಕಳು ಚಿತ್ರರಂಗದಲ್ಲಿದ್ದರೂ ಅಭಿಮಾನಿಗಳು ಪುನೀತ್ ಅವರಲ್ಲಿ ರಾಜಕುಮಾರರನ್ನು ಕಾಣುತ್ತಿದ್ದರು. ಕನ್ನಡವನ್ನು ಸರಿಯಾಗಿ ಮಾತನಾಡಲು ಬಾರದ ಆದರೆ ಪುನೀತ್ ರ ಸಿನೇಮಾ ನೋಡಿ ಮೆಚ್ಚಿದವರು ಅವರ ಭಾವಚಿತ್ರದ ಬ್ಯಾನರ್ ಪ್ರಕಟಿಸಿ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದನ್ನು ಕಂಡಾಗ ಇವನೆಂತಹ ಪುಣ್ಯಾತ್ಮನಾಗಿದ್ದ ಎನ್ನಿಸುತ್ತದೆ. ಅವರ ಕೊನೆಯ ಚಿತ್ರ ಜೇಮ್ಸ್ ಮೊನ್ನೆಯಷ್ಟೇ ಬಿಡುಗಡೆಯಾಗಿದೆ.ಅಪ್ಪು ಮೇಲಿನ ಪ್ರೀತಿ ಮತ್ತು ಗೌರವ ಈ ಚಿತ್ರವನ್ನು ಥಿಯೇಟರ್ ನಲ್ಲಿಯೇ ನೋಡುವಂತೆ ಪ್ರೇರೇಪಿಸಿತು. ಆ ಚಿತ್ರದ ವಿಮರ್ಶೆಯನ್ನಿಲ್ಲಿ ಮಾಡಲಾರೆ. ಅಲ್ಲಿ ಏನೇ ಅರೆ ಕೊರೆಗಳಿದ್ದರೂ ಅಪ್ಪುವಿನ ಕೊನೆಯ ಚಿತ್ರವಾದ್ದರಿಂದ ಯಾವುದನ್ನೂ ಆಕ್ಷೇಪಿಸದೇ ಒಪ್ಪಿಕೊಳ್ಳಲೇಬೇಕು.ಆದರೆ ಸಿನೇಮಾ ನೋಡುವಾಗ ಉಂಟಾದ ತಳಮಳ ಹೇಳಲಸಾಧ್ಯ.ಮೆತ್ತನೆಯ ಸುಖಾಸೀನದಲ್ಲಿ ಕುಳಿತಿದ್ದರೂ ಮುಳ್ಳಿನ ಮೇಲೆ ಕುಳಿತಂತೆ ಭಾಸವಾಗುತ್ತಿತ್ತು.ಚಿತ್ರಮಂದಿರ ಏ.ಸಿ.ಯಾಗಿದ್ದರೂ ಮೈ ಬೆವರುತ್ತಿತ್ತು. ಟೈಟಲ್ ಕಾರ್ಡಿನಲ್ಲಿ ಅವರನ್ನು ಕಾಣುತ್ತಿದ್ದಂತೆ ಕಣ್ಣಾಲಿಗಳು ತುಂಬಿ ಬಂದವು.ಅವರ ಪಾತ್ರ ಪ್ರವೇಶವಾಗುತ್ತಲೇ ಬೆಂಗಳೂರಿನ ಪಿವಿಆರ್ ನಂತಲ್ಲಿಯೂ ಸಿಳ್ಳೆ ಜೈಕಾರಗಳು ಮಾರ್ದನಿಸಿದವು. ಆದರೆ ಮರುಕ್ಷಣವೇ ಮತ್ತೆ ಮೌನ.ಏಕೆಂದರೆ ಪಾತ್ರದ ಧ್ವನಿ ಪುನೀತರದಾಗಿರಲಿಲ್ಲ, ಶಿವಣ್ಣನದಾಗಿತ್ತು.ಪುನೀತರ ಪಾತ್ರಕ್ಕೆ ಶಿವಣ್ಣ ಧ್ವನಿ ನೀಡಿದ್ದಾರೆ ಎಂದು ಪತ್ರಿಕೆಗಳಲ್ಲಿ ಓದಿದ್ದರೂ ಆ ಕ್ಷಣಕ್ಕೆ ಸತ್ಯವನ್ನು ಅರಗಿಸಿಕೊಳ್ಳಲು ಮನಸ್ಸು ಒಪ್ಪಲಿಲ್ಲ. ಪುನೀತ್ ನ ಧ್ವನಿಯನ್ನು ಮತ್ತೆ ಕೇಳಲಾಗುವದಿಲ್ಲವಲ್ಲ ಎಂದು ಸಂಕಟವಾಯಿತು.ಚಿತ್ರದಲ್ಲಿನ ಅವರ ಕುಣಿತ, ಫೈಟಿಂಗ್,ಆ ಮುಗ್ಧನಗು ಎಲ್ಲವನ್ನೂ ನೋಡುತ್ತಿದ್ದಂತೆ ಸಾವಿಗೆ ಈ ಹುಡುಗನನ್ನು ಇಷ್ಟು ಬೇಗ ಕರೆದುಕೊಂಡು ಹೋಗುವ ಮನಸ್ಸಾದರೂ ಹೇಗೆ ಬಂತು ಎಂಬ ಉತ್ತರವಿಲ್ಲದ ಪ್ರಶ್ನೆ ಸುಳಿದು ಹೋಯಿತು.ಅಂತಹ ಹುರಿಗೊಂಡ ದೇಹದ ವಿಶಾಲ ಎದೆಯಲ್ಲಿ ಅಡಗಿದ್ದ ಆ ಪುಟ್ಟ ಹೃದಯ ಇದ್ದಕ್ಕಿದ್ದಂತೆ ತನ್ನ ಮಿಡಿತವನ್ನು ನಿಲ್ಲಿಸಿದ್ದಾದರೂ ಯಾಕೆ ಎಂಬುದಕ್ಕೆ ಯಾರಲ್ಲಿಯೂ ಉತ್ತರವಿರಲಿಲ್ಲ. ಚಿತ್ರ ಮುಗಿದ ನಂತರ ಅಪ್ಪುವಿನ ಧ್ವನಿಯಲ್ಲಿಯೇ ಕೇಳಿ ಬಂದ ಜೈಹಿಂದ್ ಜೈ ಕರ್ನಾಟಕ ಪದಗಳು ಕಿವಿಯನ್ನು ನಿಮಿರಿಸುವಂತೆ ಮಾಡಿದರೂ ಅದು ಕ್ಷಣಿಕ ಎನ್ನಿಸಿ ಅಕ್ಷರಶಃ ಅಳುವಂತೆ ಮಾಡಿದವು. ಆಸನದಿಂದೆದ್ದರೂ ನಿಲ್ಲಲಾಗದೇ ಕುಸಿದು ಕುಳಿತು ಕೊಳ್ಳುವಂತಾಯಿತು. ಬಾಲನಟನಾಗಿದ್ದಾಗ ಒಮ್ಮೆ ನೋಡಿದ್ದು ಬಿಟ್ಟರೆ ಮತ್ತೆ ಬೇರೆ ಯಾವುದೇ ಸಂಬಂಧಗಳಿಲ್ಲದಿದ್ದರೂ ಅಪ್ಪು ಮನಸ್ಸಿಗೆ ತಟ್ಟಿದ್ದು ಮಾತ್ರ ವಿಚಿತ್ರವೇ! ನೂರಾರು ಪ್ರೇಕ್ಷರಿದ್ದರೂ ಸೂಜಿ ಬಿದ್ದರೂ ಸಪ್ಪಳ ಕೇಳುವ ಗಾಢ ಮೌನ ಆವರಿಸಿದ್ದ ಚಿತ್ರಮಂದಿರದಿಂದ ಭಾರವಾದ ಹೆಜ್ಜೆ ಇಡುತ್ತಾ ಹೊರ ಬಂದಾಗ ಇನ್ನು ಅಪ್ಪುವಿನ ಹೊಸ ಚಿತ್ರಗಳನ್ನು ನೋಡಲಾಗುವುದಿಲ್ಲ ಎಂಬ ವಾಸ್ತವ ಬೆಳಕಿನಷ್ಟೇ ಸತ್ಯವಾಗಿತ್ತು. - ಶ್ರೀಧರ ಬಿ.ನಾಯಕ