ಭಾನುವಾರ, ಜುಲೈ 3, 2016

ಅಪ್ಪ ತೀರಿಹೋಗಿ ಇಂದಿಗೆ ಒಂದುವರ್ಷ.ಸಾಯುವಾಗ ಅಪ್ಪನಿಗೆ ಸರಿಸುಮಾರು 94 ವರ್ಷಗಳಾಗಿರಬಹುದು.ಅವನ ಜನ್ಮದಿನಾಂಕ ನಿರ್ದಿಷ್ಟವಾಗಿ ಗೊತ್ತಿಲ್ಲದೇ ಇರುವದರಿಂದ ವಯಸ್ಸನ್ನು ಅಂದಾಜು ಮಾಡಬಹುದಷ್ಟೆ.ಅಪ್ಪ ದೊಡ್ಡ ಸಾಧಕನೇನೂ ಅಲ್ಲ. ಪತ್ರಿಕೆಯ ಪುಟಗಳಲ್ಲಿ ಹೆಸರು ಬರುವ ಪ್ರಖ್ಯಾತಿಯನ್ನಾಗಲೀ ಕುಖ್ಯಾತಿಯನ್ನಾಗಲೀ ಆತ ಪಡೆದಿರಲಿಲ್ಲ.ಸಾಮಾನ್ಯರಲ್ಲಿಯೇ ಅತಿಸಾಮಾನ್ಯನಾಗಿದ್ದ.ಗ್ರಾಮೀಣ ಬದುಕಿನ ಅಪ್ಪಟ ಹುಂಬನಾಗಿದ್ದ.ಎಷ್ಟು ಬೇಗ ಕೋಪಿಸಿಕೊಳ್ಳುತ್ತಿದ್ದನೋ ಅಷ್ಟೇ ಬೇಗ ಶಾಂತನಾಗುತ್ತಿದ್ದ.ಅವನು ಕಲಿತದ್ದು ಮೂರೋ ನಾಲ್ಕನೇ ತರಗತಿ.ಆದರೆ ಅವನ ಅಕ್ಷರ ಮುತ್ತಿನಂತಿತ್ತು.ಬಡತನದ ಕಾರಣಕ್ಕೆ ಓದು ಮುಂದುವರಿಸಲಾಗದೇ ತುತ್ತಿನ ಚೀಲ ತುಂಬಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಣ್ಣ ವಯಸ್ಸಿನಲ್ಲಿಯೇ ಮನೆ ಬಿಟ್ಟು ತೆರಳಿದ್ದ.ಹುಟ್ಟಿ ಬೆಳೆದದ್ದು ಅಂಕೋಲಾ ತಾಲೂಕಿನ ಬೇಲೇಕೇರಿಯಲ್ಲಾದರೂ ಅಲ್ಲಿ ಇಲ್ಲಿ ಅಲೆದಾಡಿ ಬದುಕಿನ ನೆಲೆ ಕಂಡುಕೊಂಡಿದ್ದು ಮುಂಡಗೋಡು ತಾಲೂಕಿನ ಮಳಗಿಯಲ್ಲಿ.ಅಲೆಮಾರಿಯಾಗಿದ್ದ ಅಪ್ಪನಿಗೆ ಮದುವೆಯಾದಾಗ 35 ವರ್ಷವಂತೆ.ನನಗೆ ನೆನಪಿರುವಂತೆ ಸುಖದ ಜೀವನವಂತೂ ನಮ್ಮದಾಗಿರಲಿಲ್ಲ.ಆದರೆ ತಾನು ಹಿಂದೆ ಸುಖದ ಸುಪ್ಪತ್ತಿಗೆಯಲ್ಲಿದ್ದೆ ಎಂದು ಹೇಳಿಕೊಳ್ಳುತ್ತಿದ್ದ.ಅಪ್ಪನ ಸುಖದ ಪರಿಕಲ್ಪನೆಯೇ ಭಿನ್ನವಾಗಿತ್ತು.ಹೊಟ್ಟೆ ತುಂಬ ಊಟ,ಉಡಲು ಬಟ್ಟೆ,ಕಣ್ತುಂಬ ನಿದ್ದೆ,ಮನೆಗೆ ಯಾರೇ ಬಂದರೂ ಬೇಸರಿಸದೇ ಉಪಚರಿಸುವದು.ನಾಳೆ ಬಗ್ಗೆ ಯೋಚಿಸದೇ ಇಂದು ಇಂದಿಗೆ ನಾಳೆ ನಾಳೆಗೆ ಎಂದು ನಿರ್ಲಿಪ್ತವಾಗಿರುವದು..ಇಂತಹ ಸುಖ ಪಡೆಯಲು ಅಪ್ಪ ಪಡುತ್ತಿದ್ದ ಕಷ್ಟ ಅಷ್ಟಿಷ್ಟಲ್ಲ.ತಾನು ಕಲಿತ ನಾಲ್ಕಕ್ಷರವನ್ನೇ ಬಳಸಿಕೊಂಡು ಅರಣ್ಯ ಗುತ್ತಿಗೆದಾರರಲ್ಲಿ ಕಾರಕೂನನಾಗಿದ್ದ ಅಪ್ಪ, ಪ್ರತಿದಿನ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಸುಮಾರು 20-25 ಕಿ.ಮೀ.ಸೈಕಲ್ ಹೊಡೆದುಕೊಂಡು ಕಾಮಗಾರಿ ನಡೆಯುವ ಸ್ಥಳ ತಲುಪುತ್ತಿದ್ದ. ಮತ್ತೆ ಆತ ಮರಳುತ್ತಿದ್ದುದು ರಾತ್ರಿ ಒಂಬತ್ತು ಗಂಟೆಗೆ.ಚಿಕ್ಕವರಾಗಿದ್ದ ನಾವು ಏಳುವ ಮೊದಲೇ ಮನೆ ಬಿಡುತ್ತಿದ್ದ ಅಪ್ಪ ನಾವು ಮಲಗಿದ ನಂತರವೇ ಮರಳುತ್ತಿದ್ದ.ದಣಿದು ಬಂದವನು ನೀರನ್ನೂ ಕುಡಿಯದೇ”ಮಕ್ಕಳು ಊಟ ಮಾಡಿದರೆ? ಮಕ್ಕಳು ಮಲಗಿದರೆ?” ಎಂದು ಕೇಳುತ್ತ ನಮ್ಮ ತಲೆಯ ಮೇಲೆ ಕೈಯಾಡಿಸುತ್ತಿದ್ದುದು ನಿದ್ರೆಯ ಮಂಪರಿನಲ್ಲಿ ನಮ್ಮಅನುಭವಕ್ಕೆಬರುತಿತ್ತು.ಶ್ರಮಜೀವಿಯಾಗಿದ್ದ ಅಪ್ಪ ಸತ್ಯ,ಪ್ರಾಮಾಣಿಕತೆಯ ಸಂಕೇತವಾಗಿದ್ದ.ತಾನು ಪ್ರಾಥಮಿಕ ಶಾಲೆಯಲ್ಲಿ ಕಲಿತ”ಕಳ್ಳನಾಗಲು ಬೇಡ ಜನರೊಳು,ಸುಳ್ಳನೆನಿಸಲುಬೇಡ ಜಗದೊಳು,ಮೈಗಳ್ಳನಾಗಲು ಬೇಡ ಗುರು ತಾಯ್ತಂದೆಗಳ ನುಡಿಗೆ”ಎಂಬ ಪದ್ಯವನ್ನು ಉಪದೇಶವೆಂಬ ರೀತಿಯಲ್ಲಿ ಯಾವಾಗಲೂ ಹೇಳುತ್ತ್ತಿದ್ದ. ಅರಣ್ಯಗುತ್ತಿಗೆದಾರನೊಬ್ಬ ಕೆಲಸಗಾರರಿಗೆ ಸರಿಯಾಗಿ ಕೂಲಿ ಕೊಡದಿದ್ದಾಗ ಅವನೊಡನೆ ಜಗಳವಾಡಿದ ಸಂಗತಿಯನ್ನು ಆಗಾಗ ಅಭಿನಯಪೂರ್ವಕವಾಗಿ ವರ್ಣಿಸುತ್ತಿದ್ದ.ಅಪ್ಪನಲ್ಲಿ ಅಪಾರ ಲೋಕಜ್ಞಾನವಿತ್ತು.ಬಡವರಿಗೆ ಅನ್ಯಾಯವಾದಾಗ,ಅವರಿಗೆ ಯಾವುದಾದರೂ ಸರಕಾರಿ ಸವಲತ್ತು ದೊರಕಬೇಕಾದಾಗ ಅವರ ಪರವಾಗಿ ಮೇಲಾಧಿಕಾರಿಗಳಿಗೆ ಅರ್ಜಿ ಬರೆದು ನ್ಯಾಯ ಒದಗಿಸುವ ಲಾಯರಿ ಕೆಲಸವನ್ನುಮಾಡುತ್ತಿದ್ದ.ಹಲವು ಸಂದರ್ಬಗಳಲ್ಲಿ ಅಕ್ಕ-ಪಕ್ಕದ ಮನೆಗಳಲ್ಲಿ ನಡೆಯುತ್ತಿದ್ದ ಜಗಳಗಳನ್ನು ಪಂಚಾಯತಿ ಮೂಲಕ ಬಗೆಹರಿಸುವ ನ್ಯಾಯಾಧೀಶನೂ ಆಗುತ್ತಿದ್ದ.ಹೀಗಾಗಿ ಅವರೆಲ್ಲ ಅಪ್ಪನಿಗೆ ಗೌರವ ಕೊಡುತ್ತಿದ್ದರು. ಅಪ್ಪ ಐದು ಜನ ಮಕ್ಕಳನ್ನು ಸಾಕಿ ಬೆಳೆಸಿ ವಿದ್ಯಾವಂತರನ್ನಾಗಿಸಿದ್ದೇ ದೊಡ್ಡ ಸಾಹಸ.ಹಾಗೆಂದು ಪಟ್ಟಾಗಿ ಕುಳಿತು ನಮ್ಮನ್ನೆಲ್ಲ ಓದಿಸಲಿಲ್ಲ.ಹೊಟ್ಟೆ ತುಂಬಿಸಬೇಕಾದ ಅನಿವಾರ್ಯತೆಯ ನಡುವೆ ಅವನಿಗೆ ಅಷ್ಟು ಪುರುಸೊತ್ತು ಇರಲಿಲ್ಲ. ನಮ್ಮನ್ನೆಲ್ಲ ಓದಿಸುವ ಜವಾಬ್ದಾರಿ ನಮ್ಮ ಆಯಿಯದೇ ಆಗಿತ್ತು.ಅಣ್ಣ ಆಯಿಗೆ ನೆರವು ನೀಡುತ್ತಿದ್ದ.ಅಪ್ಪನ ಸಿಟ್ಟು,ಸೆಡವು,ಹಸಿವು, ಬಳಲಿಕೆಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಆಯಿ ಅಪ್ಪನ ನಿಜವಾದ ಶಕ್ತಿಯಾಗಿದ್ದಳು.15 ವರ್ಷಗಳ ಹಿಂದೆ ಆಯಿ ತೀರಿಹೋದ ನಂತರ ಅಪ್ಪ ಒಬ್ಬಂಟಿಯಾದ.”ಸಿಟ್ಟಿನ ಕೊರ್ಲಿಯಾದ ಇವರು ನಾನು ಸತ್ತರೆ ಮಕ್ಕಳ ಜೊತೆ ಹೇಗೆ ಹೊಂದಿಕೊಳ್ಳುವರೋ?’ಎಂಬ ಆತಂಕ ಅವಳಲ್ಲಿತ್ತು.ಆದರೆ ಅಂತಹ ಆತಂಕಕ್ಕೆ ಅವಕಾಶ ಕೊಡದಂತೆ ಮಗುವಿನಂತೆ ನಮ್ಮ ಜೊತೆಯಲ್ಲಿದ್ದ .ಅಪ್ಪ ನೂರು ವರ್ಷ ಮುಗಿಸಬೇಕು ಎಂದು ನಾವೆಲ್ಲ ಅಪೇಕ್ಷೆ ಪಡುತ್ತಿದ್ದಾಗಲೇ ಸಾಕಿನ್ನು ಎಂದು ಮರಳಿಬಾರದ ಊರಿಗೆ ನಡೆದುಬಿಟ್ಟ.ಈಗ ನಮ್ಮೆಲ್ಲರ ನೆನಪಿನ ಭಿತ್ತಿಯಲ್ಲಿ ಅಪ್ಪನ ಚಿತ್ರ ನೇತಾಡುತ್ತಿದೆ.