ಗುರುವಾರ, ಮಾರ್ಚ್ 18, 2021

ಚೈತನ್ಯ ಜ್ಯೋತಿ - ಒಂದು ಪರಿಚಯ

ಕಳೆದ ಶತಮಾನದ 60-80ರ ದಶಕ ಉತ್ತರಕನ್ನಡ ಜಿಲ್ಲೆಯ ಉನ್ನತ ಶಿಕ್ಷಣದ ದೃಷ್ಟಿಯಿಂದ ಮಹತ್ವದ ಅವಧಿ. ಸ್ವಾತಂತ್ರ್ಯಾ ನಂತರದ ತಲೆಮಾರಿಗೆ ಉತ್ತಮ ಶಿಕ್ಷಣವನ್ನು ನೀಡುವ ಉದ್ದೇಶದಿಂದ ದೂರದರ್ಶಿತ್ವವನ್ನು ಹೊಂದಿದ್ದ ಹಲವು ಮಹನೀಯರ ಶ್ರಮದ ಫಲವಾಗಿ ಅನೇಕ ಶಿಕ್ಷಣ ಸಂಸ್ಥೆಗಳು ತಲೆಯೆತ್ತಿದವು. ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಲು ಉನ್ನತ ಶೈಕ್ಷಣಿಕ ಅರ್ಹತೆ ಹೊಂದಿದ ಅಧ್ಯಾಪಕರನ್ನು ಆಯ್ಕೆ ಮಾಡಿದರು.ದಕ್ಷತೆ,ಪ್ರಾಮಾಣಿಕತೆ,ಅರ್ಪಣಾ ಮನೋಭಾವದ ಈ ಶಿಕ್ಷಕರು ಬಹುಮುಖ ಪ್ರತಿಭೆನ್ನು ಹೊಂದಿದ್ದು ಪಂಡಿತ ಪರಂಪರೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದರು. ಅವರಲ್ಲಿ ಕೆಲವರು ಕಾಲೇಜು ವ್ಯಾಪ್ತಿಯನ್ನು ಮೀರಿ ಬೆಳೆದು ಕಾಲೇಜಿನ ಹೆಸರು ಹೇಳಿದಾಕ್ಷಣ ಆ ಅಧ್ಯಾಪಕರ ವ್ಯಕ್ತಿತ್ವ ಕಣ್ಣ ಮುಂದೆ ಬರುತ್ತಿತ್ತು.ಕಾರವಾರ ದಿವೇಕರ ಕಾಲೇಜಿನ ಪ್ರೊ.ಜಿ.ವಿ.ಭಟ್ಟ, ಅಂಕೋಲಾ ಗೋಖಲೆ ಕಾಲೇಜಿನ ಪ್ರೊ.ಕೆ.ಜಿ.ನಾಯಕ, ಶಿರ್ಶಿ ಕಾಲೇಜಿನ ಪ್ರೊ.ಎಲ್.ಟಿ. ಶರ್ಮ, ದಾಂಡೇಲಿ ಕಾಲೇಜಿನ ಪ್ರೊ.ಸಭಾಹಿತ,ಹೊನ್ನಾವರ ಕಾಲೇಜಿನ ಡಾ.ಎನ್.ಆರ್.ನಾಯಕ ಅಂತಹ ವ್ಯಕ್ತಿತ್ವ ಹೊಂದಿದ್ದರು. ಇದೇ ಸಾಲಿನಲ್ಲಿ ಸೇರಿಸಬಹುದಾದ ಇನ್ನೊಬ್ಬರು ಜಿಲ್ಲೆಯ ಮೊದಲ ಮಹಾವಿದ್ಯಾಲಯ ಕುಮಟಾ ಬಾಳಿಗಾ ಕಾಲೇಜಿನ ಪ್ರೊ.ಎಸ್.ಆರ್.ನಾರಾಯಣರಾವ್ ಅವರು. ಎಸ್. ಆರ್.ನಾರಾಯಣರಾವ್ ಅವರು ನನ್ನ ಅಧ್ಯಾಪಕರಲ್ಲ.ಅವರ ನೇರ ಪರಿಚಯವೂ ನನಗಿಲ್ಲ. ಆದರೆ ಅವರ ಬಗ್ಗೆ ಅವರ ವಿದ್ಯಾರ್ಥಿಗಳು, ಸಹೋದ್ಯೋಗಿಗಳು, ಪರಿಚಿತರು ಮಾತನಾಡುವುದನ್ನು ಕೇಳಿದ್ದೇನೆ. ಅವರ ಕೆಲವು ಲೇಖನಗಳನ್ನು ಓದಿದ್ದೇನೆ. ಭಾಷಣ ಆಲಿಸಿದ್ದೇನೆ. ಆದರೆ ಅವರನ್ನು ಮುಖತಃ ಭೇಟಿಯಾಗಿ ಮಾತನಾಡಿಲ್ಲ. ನನ್ನ ಗೆಳೆಯನೊಬ್ಬ ಕೆಲವು ಕಾಲ ಬಾಳಿಗಾ ಕಾಲೇಜಿನಲ್ಲಿ ಅರೆಕಾಲಿಕ ಇಂಗ್ಲೀಷ್ ಉಪನ್ಯಾಸಕನಾಗಿ ಕಾರ್ಯನಿರ್ವಹಿಸಿದ್ದ. ಪ್ರತಿದಿನ ಅವನ ತರಗತಿಗಳು ಮುಗಿದ ನಂತರ ಅವನನ್ನು ತಮ್ಮ ಚೇಂಬರಿಗೆ ಕರೆಯಿಸಿಕೊಂಡು ಎರಡು ತಾಸು ಅವನೊಡನೆ ಪಾಠ-ಪ್ರವಚನ,ಸಿಲೇಬಸ್, ವಿದ್ಯಾರ್ಥಿಗಳನ್ನು ಆಕರ್ಷಿಸುವ ಶೈಲಿ ಹೀಗೆ ಎಲ್ಲವನ್ನೂ ವಿವರಿಸುತ್ತಿದ್ದರಂತೆ. ಎರಡು ವರ್ಷ ಸ್ನಾತಕೋತ್ತರ ಪದವಿಯ ಸಂದರ್ಭದಲ್ಲಿ ಪಡೆದ ಜ್ಞಾನಕ್ಕಿಂತ ಹೆಚ್ಚಿನ ಅನುಭವ ಎಸ್.ಆರ್.ನಾರಾಯಣರಾವ್ ಅವರಿಂದ ದೊರಕಿತು ಎಂದು ಕೃತಜ್ಞತೆಯಿಂದ ಸ್ಮರಿಸುತ್ತಾನೆ. ಹೀಗೆ ಎಸ್. ಆರ್. ನಾರಾಯಣರಾವ್ ತಮ್ಮ ಸಂಪರ್ಕಕ್ಕೆ ಬಂದವರ ಮೇಲೆಲ್ಲ ಪ್ರಭಾವ ಬೀರಿದ್ದಾರೆ.ತಾವು ಬೆಳೆಯುವದರ ಜೊತೆಗೆ ಹಲವರನ್ನು ಬೆಳೆಸಿದ್ದಾರೆ.ಇಂದು ಖ್ಯಾತ ವಿಮರ್ಶಕರೆಂದು ಹೆಸರು ಮಾಡಿರುವ ಡಾ.ಎಮ್.ಜಿ.ಹೆಗಡೆ,ಡಾ.ಆರ್.ಜಿ.ಹೆಗಡೆ ಇವರೆಲ್ಲ ಅವರ ವಿದ್ಯಾರ್ಥಿಗಳೇ. ಅವರ ಭೌತಿಕ- ಬೌದ್ಧಿಕ ಸಾಂಗತ್ಯ ಪಡೆದು ಅವರ ವೈಚಾರಿಕತೆಯ ವಾರಸುದಾರರಾದ ಡಾ. ಎಂ.ಎಚ್ ನಾಯ್ಕ ಅವರೂ ಎಸ್.ಆರ್ ನಾರಾಯಣರಾವ್ ಶಿಷ್ಯರೇ.ಈ ಶಿಷ್ಯ ಎಂದೂ ಖ್ಯಾತಿಯನ್ನು ಬಯಸದ ತಮ್ಮ ಗುರುಗಳ ಲೇಖನಗಳನ್ನು ಒಳಗೊಂಡ "ಚೈತನ್ಯ ಜ್ಯೋತಿ" ಎಂಬ ಪುಸ್ತಕವನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಆ ಮೂಲಕ ತಮ್ಮ ಗುರುವನ್ನು ಶಾಶ್ವತಗೊಳಿಸುವ, ಅವರ ವಿಚಾರಗಳನ್ನು ಬದಲಾವಣೆಯ ಪವಾಡ ಅಪೇಕ್ಷಿಸುವ ಅಸಂಖ್ಯಾತ ಭಾರತೀಯ ಸಾಹಸಿ ಯುವ ಜನಾಂಗಕ್ಕೆ ಪರಿಚಯಿಸುವ ಮಹತ್ತರ ಕಾರ್ಯ ಮಾಡಿದ್ದಾರೆ. "ಚೈತನ್ಯ ಜ್ಯೋತಿ "ಎಂಬ ಶೀರ್ಷಿಕೆಯೇ ಆಕರ್ಷಕವಾಗಿದೆ. ಜ್ಯೋತಿ ಯಾವಾಗಲೂ ಚೈತನ್ಯ ಸ್ವರೂಪಿಯೇ.ಅದು ಕೇವಲ ತಾನು ಬೆಳಗದೇ ತನ್ನಂತೆ ಹಲವು ಜ್ಯೋತಿಗಳು ಬೆಳಗಲು ಅವಕಾಶ ಮಾಡಿಕೊಡುತ್ತದೆ.ಅದರಲ್ಲಿಯೂ ಜ್ಞಾನ ಜ್ಯೋತಿಯಂತಿರುವ ಪ್ರೊ.ಎಸ್.ಆರ್.ನಾರಾಯಣರಾವ್ ರಂತವರು ಅಳಿದರೂ ಚೈತನ್ಯ ಸ್ವರೂಪಿಯಾಗಿ ಶಾಶ್ವತರಾಗಿರುತ್ತಾರೆ. ಈ ಪುಸ್ತಕದಲ್ಲಿ ಎರಡು ಭಾಗಗಳಿವೆ. ಮೊದಲ ಭಾಗದಲ್ಲಿ ನಾರಾಯಣ ರಾವ್ ಅವರನ್ನು ಕುರಿತು ಅವರ ಮಕ್ಕಳು, ವಿದ್ಯಾರ್ಥಿಗಳು ಮತ್ತು ಸ್ವತಃ ಎಮ್.ಎಚ್.ನಾಯ್ಕ ಅವರೇ ಬರೆದ ಅಭಿಮಾನದ ಲೇಖನಗಳಿವೆ. ಈ ಲೇಖನಗಳು ನಾರಾಯಣರಾವ್ ಅವರನ್ನು ಪ್ರತ್ಯಕ್ಷ ನೋಡಿರದವರ ಕಣ್ಮುಂದೆ ಅವರು ಸುಳಿದಾಡುವಂತೆ ಮಾಡುತ್ತವೆ. ಇವು ಅವರ ಜೀವನ ಶೈಲಿ,ಪಾಠದ ಶೈಲಿ, ವೈಚಾರಿಕ ನಿಲುವುಗಳು,ಹಾಸ್ಯಪ್ರಜ್ಞೆ ಹೀಗ ಎಲ್ಲವನ್ನೂ ಸಮಗ್ರವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿವೆ. ಎಂ.ಎಚ್ ನಾಯ್ಕರಂತೂ ನಾರಾಯಣರಾವ್ ಅವರನ್ನು ಸಂಪೂರ್ಣವಾಗಿ ಆವಾಹಿಸಿಕೊಂಡು ಬಿಟ್ಟಿದ್ದಾರೆ. ಅವರನ್ನು "ಜೀನಿಯಸ್ ಗುರು" ಎಂದು ಸಂಬೋಧಿಸಿ ಅವರ ವ್ಯಕ್ತಿತ್ವವನ್ನು ಅನಾವರಣ ಮಾಡುತ್ತಾರೆ. ಬೇರೆಬೇರೆಯ ಅನುಭವದ ಸಾಧನೆಯ ಕ್ಷೇತ್ರಗಳಲ್ಲಿ ಯಾವ ವ್ಯಕ್ತಿ ತನ್ನ ಕಾಲದ ಸಮಸ್ತ ಜನಾಂಗದ ಅಂತಃಸತ್ವವನ್ನು ಅತ್ಯಧಿಕ ಪ್ರಮಾಣದಲ್ಲಿ ಅತ್ಯುತ್ಕೃಷ್ಟವಾದ ರೀತಿಯಲ್ಲಿ ಅಭಿವ್ಯಕ್ತಿಸುವನೋ ಅಂತವರನ್ನು ಜೀನಿಯಸ್ ಎಂದು ಕರೆಯಲಾಗುತ್ತದೆ. ಮಹಾತ್ಮಗಾಂಧಿ,ಐನ್ ಸ್ಟೈನ್, ಅರವಿಂದರು, ಲಿಯೋನಾರ್ಡೋ ಡ ವಿಂಚಿ,ಹೋಮರ್,ವ್ಯಾಸ,ವಾಲ್ಮೀಕಿ ಅಂಥವರನ್ನು ಸಾಮಾನ್ಯವಾಗಿ ಜೀನಿಯಸ್ ಎಂದು ಗುರುತಿಸಲಾಗುತ್ತದೆ.ಡಾ.ನಾಯ್ಕರು ಎಸ್.ಆರ್. ನಾರಾಯಣರಾವ್ ಅವರನ್ನು ಅಂಥವರ ಸಾಲಿಗೆ ಸೇರಿಸುತ್ತಾರೆ. ಏಕೆಂದರೆ ಆ ಕಾಲಘಟ್ಟದಲ್ಲಿ ಅವರ ವಿಶಿಷ್ಟ ಅಭಿವ್ಯಕ್ತಿಯಲ್ಲಿ ಅವರ ವಿದ್ಯಾರ್ಥಿಗಳು ಅವರಲ್ಲಿನ ಅತ್ಯುತ್ಕೃಷ್ಟವಾದುದನ್ನು ಅತ್ಯುತ್ಕೃಷ್ಟವಾದ ರೀತಿಯಲ್ಲಿ ಪಡೆದಿದ್ದಾರೆ ಎಂದು ಅವರು ನಂಬಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಮಾತ್ರವಲ್ಲ ಸಾಮಾನ್ಯ ಜನರೊಂದಿಗೂ ಕಾಳಜಿಯಿಂದ ವ್ಯವಹರಿಸುವ ರೀತಿಯನ್ನು ವಿವರಿಸುತ್ತಾರೆ.ತರಕಾರಿ ಮಾರುವವಳ ಜೊತೆಗೆ ಚೌಕಾಶಿ ಮಾಡದೇ ಇರುವದನ್ನು ಪ್ರಶ್ನಿಸಿದಾಗ ಅವರು ಕೊಟ್ಟ ಉತ್ತರ "ನನಗೆ ಪಗಾರು ಬರುತ್ತದೆ.ಆ ಬಡ ಮಹಿಳೆಗೆ ಏನು ಸಿಗುತ್ತದೆ?ನನ್ನಿಂದ ಅವಳಿಗೆ ಸ್ವಲ್ಪ ಹೆಚ್ಚಿನ ಲಾಭ ದೊರಕಲಿ." ಇದು ಅವರ ವ್ಯಕ್ತಿತ್ವದ ಉದಾತ್ತತೆಯನ್ನು ಎತ್ತಿ ತೋರಿಸುತ್ತದೆ.ಈ ಘಟನೆಯನ್ನು ಸ್ಮರಿಸುವ ಮೂಲಕ ಎಂ.ಎಚ್. ನಾಯ್ಕರು ಎಸ್.ಆರ್. ನಾರಾಯಣರಾವ್ ಅವರ ವ್ಯಕ್ತಿತ್ವದ ಘನತೆಗೆ ಸುವರ್ಣ ಚೌಕಟ್ಟನ್ನು ನಿರ್ಮಿಸಿ ಕೊಟ್ಟಿದ್ದಾರೆ. ನಾರಾಯಣರಾವ್ ಅವರ ವೈಚಾರಿಕ ನಿಲುವುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದರೆ ಮೊದಲ ಭಾಗದ ಈ ಲೇಖನಗಳನ್ನು ಓದಿಕೊಳ್ಳಲೇಬೇಕು.ಇವುಗಳ ಮ‌ೂಲಕ ಅವರ ವ್ಯಕ್ತಿತ್ವದ ಸಂಪೂರ್ಣ ಪರಿಚಯ ಓದುಗರಿಗೆ ದೊರಕುತ್ತದೆ. ಬೂಟಾಟಿಕೆ ಎಂಬುದು ಅವರಲ್ಲಿ ಇರಲೇ ಇಲ್ಲ.ಅನೇಕ ಇಂಗ್ಲೀಷ್ ಅಧ್ಯಾಪಕರನ್ನು ಸೃಷ್ಟಿಸಿದ,ಸ್ವತಃ ಇಂಗ್ಲೀಷ್ ಪ್ರಾಧ್ಯಾಪಕರಾದ ನಾರಾಯಣರಾವ್ ಅವರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗೆ ಸೇರಿಸಿದ ಆದರ್ಶವಂತರು.ಅವರ ಸರಳತೆ, ಆಡಂಬರ ರಹಿತ, ಉನ್ನತ ಚಿಂತನೆಯ ಉದಾತ್ತ ಜೀವನದ ಚಿತ್ರಣವನ್ನು ಒಳಗೊಂಡ ಇಲ್ಲಿನ ಲೇಖನಗಳು ಎಸ್.ಆರ್. ನಾರಾಯಣರಾವ್ ಅವರ ಮೇಲಿನ ಗೌರವವನ್ನು ಇಮ್ಮಡಿಗೊಳಿಸುತ್ತವೆ. ನಮ್ಮ ನಡುವೆ ಇಂಥವರೊಬ್ಬರು ಬದುಕಿದ್ದರು ಎಂಬ ಆಶ್ಚರ್ಯ ಮೂಡಿಸುವುದರ ಜೊತೆಗೆ ಈಗಿನ ತಲೆಮಾರಿನವರಿಗೆ ಇಂಥವರ ಮಾರ್ಗದರ್ಶನ ದೊರಕದೇ ಹೋಯಿತಲ್ಲ ಎಂಬ ವಿಷಾದವೂ ಮೂಡುತ್ತದೆ. ಈ ಪುಸ್ತಕದ ಎರಡನೆಯ ಭಾಗದಲ್ಲಿ ಪ್ರೊ. ಎಸ್. ಆರ್. ನಾರಾಯಣರಾವ್ ಅವರು ಕರಾವಳಿ ಮುಂಜಾವು ಪತ್ರಿಕೆಗೆ ಬರೆದ 37 ಲೇಖನಗಳಿವೆ. ಪುಸ್ತಕ- ಲೇಖನಗಳ ಮೂಲಕ ಸ್ಥಾವರವಾಗುವ ಇಚ್ಛೆ ಅವರಿಗೆ ಇದ್ದಂತಿರಲಿಲ್ಲ. ತಮ್ಮ ವಿಚಾರಗಳನ್ನು ಆತ್ಮೀಯರ ನಡುವೆ,ವಿದ್ಯಾರ್ಥಿಗಳ ನಡುವೆ ಉಪನ್ಯಾಸಗಳ ಮೂಲಕ ಬಿತ್ತರಿಸುತ್ತಾ ಜಂಗಮನಂತೆ ಇದ್ದವರು ಅವರು. ಆದರೆ ಅವರ ಆಲೋಚನೆಗಳಲ್ಲಿರುವ ಪ್ರಖರ ವೈಚಾರಿಕತೆಯನ್ನು ಗುರುತಿಸಿದ ಕವಿ ಬಿ.ಎ.ಸನದಿಯವರ ಒತ್ತಾಸೆಯಂತೆ ಲೇಖನಗಳನ್ನು ಬರೆದರು. ಅವುಗಳನ್ನು ಗಂಗಾಧರ ಹಿರೇಗುತ್ತಿ ಅವರು ತಮ್ಮ "ಕರಾವಳಿ ಮುಂಜಾವು" ಪತ್ರಿಕೆಯಲ್ಲಿ ಪ್ರಕಟಿಸಿ ನಾಡಿನ ಜನತೆಗೆ ಪರಿಚಯಿಸಿದರು.ಈಗ ಎಮ್.ಎಚ್.ನಾಯ್ಕರು ಅವುಗಳನ್ನು ಕ್ರೋಢೀಕರಿಸಿ ಪುಸ್ತಕ ರೂಪ ನೀಡಿದರು. ಹೀಗೆ ಶ್ರೇಷ್ಠ ಎನ್ನಬಹುದಾದ ಬರಹಗಾರನೊಬ್ಬ ಸೂಕ್ತ ರೀತಿಯಲ್ಲಿ ಸಾಹಿತ್ಯಲೋಕದಲ್ಲಿ ದಾಖಲಾಗಲು ಅವಕಾಶ ನೀಡಿದ ಈ ಮೂರು ಜನ ಮಹನೀಯರು ಅಭಿನಂದನಾರ್ಹರು. ಈ ಲೇಖನಗಳು ಎಸ್ಆರ್ ನಾರಾಯಣರಾವ್ ಅವರ ಓದಿನ ವಿಸ್ತೃತ ತೆಯನ್ನು ಪರಿಚಯ ಮಾಡಿಕೊಡುತ್ತವೆ.ಇಲ್ಲಿನ ಲೇಖನಗಳ ವೈವಿಧ್ಯತೆ ಗಮನ ಸೆಳೆಯುತ್ತದೆ ಇಲ್ಲಿ ಇತಿಹಾಸವಿದೆ, ಸಾಹಿತ್ಯವಿದೆ. ತತ್ವಶಾಸ್ತ್ರವಿದೆ ,ತರ್ಕಶಾಸ್ತ್ರವಿದೆ. ಅಧ್ಯಾತ್ಮಿಕತೆಯ ಜೊತೆಗೆ ವೈಜ್ಞಾನಿಕತೆಯೂ ಮೇಳೈಸಿದೆ. ಸನಾತನದ ಜೊತೆಗೆ ಆಧುನಿಕತೆಯು ಸೇರಿದೆ. ರಾಜಕೀಯವೂ ಇದೆ,ಸಾಂಸ್ಕೃತಿಕತೆಯೂ ಇದೆ. ಹೀಗೆ ಎಲ್ಲವನ್ನೂ ಒಳಗೊಂಡ ಬಹುಶ್ರುತತ್ವವನ್ನು ಇಲ್ಲಿನ ಲೇಖನಗಳಲ್ಲಿ ಕಾಣಬಹುದು. ನಮ್ಮ ದೇಶದ ರಾಜಕೀಯ ಸಾಂಸ್ಕೃತಿಕ ಇತಿಹಾಸಕ್ಕೆ ಸಂಬಂಧಿಸಿದ ಲೇಖನಗಳಲ್ಲಿ ಭಾರತ ಜಾಗತಿಕ ಶಕ್ತಿಯಾಗಿ ರೂಪಗೊಳ್ಳುವ ಅನಿವಾರ್ಯತೆಯನ್ನು ಅವರು ಪ್ರತಿಪಾದಿಸುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾಗಿದ್ದರೂ ರಾಜಕೀಯ ಸಾಧನೆಗೆ ಅನುಗುಣವಾದ ಹೊಸ ಸಾಂಸ್ಕೃತಿಕ ನೆಲೆ ನಿರ್ಮಾಣವಾಗಲಿಲ್ಲ ಎಂಬ ವಿಷಾದ ಅವರಲ್ಲಿದೆ. ಜಾತಿಯತೆ,ಮತೀಯತೆ,ಪೊಳ್ಳು ಧರ್ಮನಿರಪೇಕ್ಷತೆಗಳು ದೇಶದ ಅಭಿವೃದ್ಧಿಗೆ ಅಡ್ಡಗಾಲಾಗಿರುವದನ್ನು ಅವರು ಎತ್ತಿ ತೋರಿಸುತ್ತಾರೆ. ಶಿಕ್ಷಣ ಮತ್ತು ಆಡಳಿತ ಪ್ರಕ್ರಿಯೆಗಳಲ್ಲಿ ಸತ್ಯನಿಷ್ಠೆ, ವಸ್ತುನಿಷ್ಠೆ ಸಾಮಾಜಿಕ ಬದ್ಧತೆ ಮತ್ತು ಮಾನವೀಯ ನಿಲುವುಗಳಿಗೆ ಹೆಚ್ಚಿನ ಪ್ರಾಶಸ್ತ್ಯಕೊಟ್ಟು ದೇಶದ ಅಭಿವೃದ್ಧಿ ಸಾಧಿಸಬೇಕು ಎಂಬ ಕಳಕಳಿಯನ್ನು ಅವರು ತಮ್ಮ ಲೇಖನಗಳಲ್ಲಿ ವ್ಯಕ್ತಪಡಿಸುತ್ತಾರೆ. ಇಲ್ಲಿ ಭಾರತೀಯ ಸನಾತನ ಧರ್ಮದ ವಿವೇಚನೆಯ ಜೊತೆಗೆ ಆಧುನಿಕ ಮತ್ತು ಆಧುನಿಕೋತ್ತರ ಪಾಶ್ಚಾತ್ಯ ಚಿಂತಕರ ವಿಚಾರಗಳನ್ನು ಅವರು ಪ್ರಸ್ತಾಪಿಸುತ್ತಾರೆ.ಕಾರ್ಲ್ ಪಾಪ್ಪರ್,ಅರ್ನಾಲ್ಡ್‌ ಟಾಯ್ನಬಿ,ಮಾರ್ಟಿನ್ ಬ್ಯೂಬರ್, ರಾಬರ್ಟ್ ಸ್ಟ್ರಾಜ್ ಹ್ಯೂಪೆ, ಚಾರ್ಲ್ಸ್ ಡಾರ್ವಿನ್ ಇಗ್ನೇಜಿಯೋ ಸಿಲೋನಿ ಮುಂತಾದವರನ್ನು ಕನ್ನಡ ಓದುಗರಿಗೆ ಪರಿಚಯಿಸುತ್ತಾರೆ.ಅಪ್ಪಟ ಭಾರತೀಯರೇ ಆಗಿದ್ದು ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ ತುಘೈಲ್ ಅಹ್ಮದ್ ಮತ್ತು ಎಸ್.ಎನ್.ಬಾಲಗಂಗಾಧರ ಅವರ ಚಿಂತನೆಗಳಲ್ಲಿರುವ ವೈಚಾರಿಕತೆಯನ್ನು ಪ್ರಸ್ತಾಪಿಸುತ್ತಾರೆ. ಟಿ.ಎಸ್.ಎಲಿಯಟ್, ಕೋಲ್ ರಿಜ್,ಎಫ್.ಆರ್.ಲಿವೀಸ್ ರಂತಹ ಸಾಹಿತ್ಯ ವಿಮರ್ಶಕರ ಮಿಮಾಂಸೆಯ ತಾತ್ವಿಕತೆಯನ್ನು ಚರ್ಚಿಸಿದ್ದಾರೆ.ಆಧ್ಯಾತ್ಮಿಕತೆ- ವೈಚಾರಿಕತೆಗಳನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ನೋಡುವ ಪ್ರಯತ್ನ ಇಲ್ಲಿದೆ. ಒಟ್ಟಾರೆಯಾಗಿ ನಾರಾಯಣರಾವ್ ಅವರ ಲೇಖನಗಳನ್ನು ಅವಲೋಕಿಸಿದಾಗ ಮನುಕುಲದ ಬಗೆಗಿರುವ ಅವರ ಕಾಳಜಿ ಎದ್ದು ಕಾಣುತ್ತದೆ.ಧರ್ಮಾಂಧತೆ,ಮತಾಂಧತೆ,ಚಾರಿತ್ರ್ಯಹೀನತೆ ಮತ್ತು ಹುಸಿ ವೈಚಾರಿಕತೆ ಇವುಗಳನ್ನು ಬಿಟ್ಟು ಮಾನವತಾವಾದದ ನೆಲೆಯಲ್ಲಿ,ಎಲ್ಲ ಧರ್ಮಗಳಲ್ಲಿರುವ ಆತ್ಮದ ಕಲ್ಪನೆಯಿಂದ ಆಧ್ಯಾತ್ಮಿಕ ಮನೋಭೂಮಿಕೆಯನ್ನು ಸೃಷ್ಟಿಸಿಕೊಂಡರೆ ಆಧುನಿಕ ಮಾನವ ಉಳಿದು ಬೆಳೆದು ಭವ್ಯನಾಗುತ್ತಾನೆ ಎಂಬ ಆಶಯ ಅವರದು. ಎಸ್ಆರ್ ನಾರಾಯಣರಾವ್ ಅವರ ಉದಾತ್ತ ಆಶಯಗಳನ್ನು ವಿಸ್ತರಿಸುವ ಉದ್ದೇಶದಿಂದ ಡಾ.ಎಮ್.ಎಚ್. ನಾಯ್ಕ ಅವರು ಈ ಚೈತನ್ಯ ಜ್ಯೋತಿಯನ್ನು ಪ್ರಕಾಶಿಸಿದ್ದಾರೆ. ಅದರ ಕಿರಣಗಳು ನಮ್ಮ ಅಂತರಂಗದಲ್ಲಿರುವ ವೈಚಾರಿಕತೆಯನ್ನು ಜಾಗೃತಗೊಳಿಸಿ, ಮನುಕುಲವನ್ನು ಉಳಿಸಿ-ಬೆಳೆಸಿದರೆ ಜೀನಿಯಸ್ ಗುರುವಿನ ಬರವಣಿಗೆ ಸಾರ್ಥಕವಾಗಬಲ್ಲದು. - ಶ್ರೀಧರ ಬಿ.ನಾಯಕ,ಬೇಲೇಕೇರಿ.