ಮಂಗಳವಾರ, ಸೆಪ್ಟೆಂಬರ್ 28, 2021

ಪ್ರೊ.ಎ.ಎಚ್ ನಾಯಕ

ಅಂದು ಅಂಕೋಲೆಯ ಗೋಖಲೆ ಸೆಂಟನರಿ ಕಾಲೇಜಿನಲ್ಲಿಯೇ ಶಿಕ್ಷಣವನ್ನು ಮುಂದುವರಿಸಬೇಕೆಂಬ ತಾಯಿಯವರ ಒತ್ತಾಯಕ್ಕೆ ಮಣಿದು ಕಾಲೇಜ್ ಕ್ಯಾಂಪಸ್ ಅನ್ನು ಪ್ರವೇಶಿಸಿದ್ದೆ.ಅದುವರೆಗಿನ ಜೀವನವನ್ನು ಘಟ್ಟದ ಮೇಲಿನ ಭಾಗದಲ್ಲಿ ಕಳೆದಿದ್ದ ನನಗೆ ಅಂಕೋಲೆಯ ಪರಿಸರ, ಭಾಷೆ ಹೊಸದಾಗಿತ್ತು, ಸಾಕಷ್ಟು ಅನುಮಾನ, ಸಂಶಯ, ಕೀಳರಿಮೆಗಳಿತ್ತು. ಭವ್ಯವಾದ ಕಟ್ಟಡವನ್ನು ಪ್ರವೇಶಿಸಲು ಭಯಪಟ್ಟು ಕಾಲೇಜಿನ ಹೆಸರು ಹೊತ್ತ ನಾಮ ಫಲಕವನ್ನು ಓದುತ್ತಾ ನಿಂತಿದ್ದೆ.ಆಗ "ಏಯ್ ಯಾರದು? ಯಾಕೆ ಬಂದದ್ದು?" ಎಂಬ ಕಂಚಿನ ಧ್ವನಿ ಕೇಳಿ ಬೆಚ್ಚಿ ಬಿದ್ದು ಸಾವಕಾಶವಾಗಿ ಹೆಜ್ಜೆ ಕೀಳಲು ಪ್ರಾರಂಭಿಸಿದ್ದೆ. ಆದರೆ ಆ ಧ್ವನಿ ನನ್ನನ್ನು ಮತ್ತೆ ಹಿಂಬಾಲಿಸಿ "ನಿಲ್ಲು , ಅಲ್ಲಿಯೇ ನಿಲ್ಲು" ಎಂದು ಅಧಿಕಾರವಾಣಿಯಿಂದ ಗದರಿಸಿದಂತೆ ಕೇಳಿ ಬಂತು.ಆಗಲೇ ಸಫಾರಿ ಧರಿಸಿದ್ದ ವ್ಯಕ್ತಿಯೊಬ್ಬರು ನನ್ನ ಹತ್ತಿರಕ್ಕೆ ಬಂದು ನಾನು ಯಾರು? ಏನು? ಎತ್ತ ? ಎಂದು ವಿಚಾರಿಸಿ, ನನ್ನ ಭಯ ಆತಂಕಗಳನ್ನು ದೂರಮಾಡಿ,ಒಳಗೆ ಕರೆದುಕೊಂಡು ಹೋಗಿ ಆಫೀಸಿನಿಂದ ಪ್ರವೇಶದ ಅರ್ಜಿಯನ್ನು ತುಂಬಿಸಿಕೊಂಡು, ಒಂದು ವಾರದ ನಂತರ ನೋಟಿಸ್ ಬೋರ್ಡಿನಲ್ಲಿ ಅರ್ಜಿ ತುಂಬಿದ ವಿದ್ಯಾರ್ಥಿಗಳ ಪಟ್ಟಿಯನ್ನು ಪ್ರಕಟಿಸುವದಾಗಿಯೂ,ಸಂದರ್ಶನಕ್ಕೆ ಹಾಜರಾಗುವಂತೆಯೂ ತಿಳಿಸಿದರು. ಒಂದು ವಾರ ಕಳೆದು ಕಾಲೇಜಿಗೆ ಬಂದಾಗ ಗೊತ್ತಾಗಿದ್ದು ಅವರು ಕಾಲೇಜಿನ ಹಿರಿಯ ಪ್ರಾಧ್ಯಾಪಕ ಪ್ರೊ.ಎ.ಎಚ್.ನಾಯಕರೆಂದು.ನಂತರದ ದಿನಗಳಲ್ಲಿ ಅವರು ಕೇವಲ ನನಗೊಬ್ಬನಿಗೆ ಅಲ್ಲ, ಭಯ ಆತಂಕದಲ್ಲಿರುವ ಹಲವು ವಿದ್ಯಾರ್ಥಿಗಳಿಗೆ ಧೈರ್ಯ,ಆತ್ಮವಿಶ್ವಾಸ ತುಂಬಿದವರು ಎಂಬುದು ನನ್ನ ಅನುಭವಕ್ಕೆ ಬಂತು. ರೈತರ ದುಡಿಮೆಯ ಹಣದಿಂದ ದಿನಕರ ದೇಸಾಯಿಯವರ ನೇತ್ರತ್ವದಲ್ಲಿ ಕೆನರಾ ವೆಲ್ಫೇರ್ ಟ್ರಸ್ಟ್ ಅಂಕೋಲೆಯಲ್ಲಿ ಮೂಲ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ಪದವಿ ಕಾಲೇಜನ್ನು ಪ್ರಾರಂಭಿಸಿದಾಗ ನಾಡಿನ ಬೇರೆ ಬೇರೆ ಕಡೆಗಳಿಂದ ಪ್ರತಿಭಾವಂತರನ್ನು ಹುಡುಕಿ ಅಧ್ಯಾಪಕರನ್ನಾಗಿ ನೇಮಕ ಮಾಡಿಕೊಂಡು ಶೈಕ್ಷಣಿಕವಾಗಿ ಭದ್ರ ಬುನಾದಿಯನ್ನು ಹಾಕಿದರು.ಹೀಗೆ ಯಾರ ಶಿಫಾರಸು ಮತ್ತು ಪ್ರಭಾವವಿಲ್ಲದೇ ಕೇವಲ ತಮ್ಮ ಪ್ರತಿಭೆ ಮತ್ತು ಪಾಂಡಿತ್ಯದ ಬಲದಿಂದ ಆಯ್ಕೆಯಾದವರಲ್ಲಿ ಪ್ರೊ.ಎ.ಎಚ್ ನಾಯಕ ಅವರೂ ಒಬ್ಬರಾಗಿದ್ದರು. ವಿದ್ಯಾರ್ಥಿಯಾಗಿದ್ದಾಗಲೇ ಅಂಚೆ ಇಲಾಖೆಯಲ್ಲಿ ಸೇವೆ ಪ್ರಾರಂಭಿಸಿದ ಅವರಿಗೆ ತಾನೊಬ್ಬ ಪ್ರಾಧ್ಯಾಪಕನಾಗಬೇಕು ಎಂಬ ಮಹತ್ವಾಕಾಂಕ್ಷೆ ಇತ್ತು. ಇದನ್ನು ಈಡೇರಿಸಿಕೊಳ್ಳಲು ಒಂದಲ್ಲ ಮೂರು ಸ್ನಾತಕೋತ್ತರ ಪದವಿಗಳನ್ನು ಪಡೆದು ಅರ್ಹತೆ ಗಿಟ್ಟಿಸಿಕೊಂಡಿದ್ದರು. ಅಂಕೋಲೆ ಕಾಲೇಜಿಗೆ ನೇಮಕವಾಗುವದರೊಂದಿಗೆ ಅವರ ಆಸೆ ಈಡೇರಿತು. ಅವರು ಅತ್ಯುತ್ತಮ ಇತಿಹಾಸ ಪ್ರಾಧ್ಯಾಪಕರಾಗಿದ್ದರು. ನಾನೇನು ಅವರ ನೇರ ವಿದ್ಯಾರ್ಥಿಯಲ್ಲ. ನಾನು ವಿದ್ಯಾರ್ಥಿಯಾಗಿದ್ದಾಗ ಅವರು ಮೇಜರ್ ತರಗತಿಗಳಿಗೆ ಮಾತ್ರ ಪಾಠ ಮಾಡುತ್ತಿದ್ದರು. ನಾನು ಇತಿಹಾಸವನ್ನು ಮೈನರ್ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದೆ. ಆದರೆ ಮೇಜರ್ ವಿದ್ಯಾರ್ಥಿಗಳು ಅವರ ಪಾಠದ ಕುರಿತು ಮಾತನಾಡುವುದನ್ನು ಕೇಳಿ ನಾನು ಒಂದೆರಡು ಪಿರಿಯಡ್ಡುಗಳಿಗೆ ಕುಳಿತದ್ದು ನೆನಪಿದೆ. ಅವರ ಪಾಠದ ಶೈಲಿ ಅತ್ಯುತ್ತಮವಾಗಿತ್ತು. ಯಾವುದೇ ಟಿಪ್ಪಣಿ - ಪುಸ್ತಕಗಳ ನೆರವಿಲ್ಲದೆ ನೇರವಾಗಿ ಅವರು ಪಾಠಮಾಡುತ್ತಿದ್ದರು ಅವರ ಕಂಚಿನ ಕಂಠ ಇಡೀ ತರಗತಿಯನ್ನು ಹಿಡಿತದಲ್ಲಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.ಅವರ ಸಮಯಪ್ರಜ್ಞೆ ಅನುಕರಣೀಯವಾಗಿತ್ತು. ಗಂಟೆ ಹೊಡೆಯುತ್ತಿದ್ದಂತೆ ಅವರು ತರಗತಿಗೆ ಹಾಜರಾಗುತ್ತಿದ್ದರು.ತರಗತಿಗಳಲ್ಲಿ ತರಲೆ ಮಾಡುವ ವಿದ್ಯಾರ್ಥಿಗಳಿಗೆ ಪ್ರೀತಿಯಿಂದಲೇ ಗದರಿ ಸರಿದಾರಿಗೆ ತರಲು ಪ್ರಯತ್ನಿಸುತ್ತಿದ್ದರು. ಅಂಕೋಲೆಯ ಕಾಲೇಜು ತನ್ನ ಶಿಸ್ತು ಮತ್ತು ಸೃಜನಶೀಲ ಚಟುವಟಿಕೆಗಳಿಂದ ಕರ್ನಾಟಕದಲ್ಲಿಯೇ ಹೆಸರಾಗಿತ್ತು.ಇದಕ್ಕೆ ಪ್ರಿನ್ಸಿಪಾಲ್ ಕೆ.ಜಿ.ನಾಯಕರ ದಕ್ಷತೆ ಮತ್ತು ಮಾರ್ಗದರ್ಶನ ಕಾರಣವಾಗಿತ್ತು. ಆದರೆ ಅಂದು ಕಾರ್ಯನಿರ್ವಹಿಸುತ್ತಿದ್ದ ಅಧ್ಯಾಪಕರ ಕ್ರಿಯಾಶೀಲತೆ, ಸಹಕಾರವೂ ಅದಕ್ಕೆ ಪೂರಕವಾಗಿತ್ತು ಎಂದರೆ ತಪ್ಪಾಗಲಾರದು ಪ್ರೊ.ಡಿ.ಆರ್.ಪೈ, ಪ್ರೊ.ಎಂ.ಪಿ.ಭಟ್ಟ, ಪ್ರೊ.ಸಿ.ಎನ್.ಶೆಟ್ಟಿ, ಪ್ರೊ.ವಿ.ಎ.ಜೋಶಿ, ಪ್ರೊ.ಎ.ಎಚ್.ನಾಯಕ ಮೊದಲಾದ ಅರ್ಪಣಾ ಮನೋಭಾವದ ಪ್ರಾಧ್ಯಾಪಕರು ಕೆ.ಜಿ.ನಾಯಕರ ಹೆಗಲಿಗೆ ಹೆಗಲು ಕೊಟ್ಟು,ಕಾಲೇಜನ್ನು ಬೆಳೆಸುವಲ್ಲಿ ಸಹಕರಿಸಿದರು.ಈ ಎಲ್ಲ ಅಧ್ಯಾಪಕರಲ್ಲಿ ಎ.ಎಚ್ ನಾಯಕರು ಮುಂಚೂಣಿಯಲ್ಲಿದ್ದರು.ಅವರು ಕೇವಲ ತರಗತಿಗಳಿಗೆ ಸೀಮಿತರಾಗದೇ ತರಗತಿಗಳು ಮುಗಿದ ನಂತರ ಕಾಲೇಜು ವರಾಂಡದಲ್ಲಿ ಅವರು ಹಾಜರಿರುತ್ತಿದ್ದರು.ತರಗತಿಗಳು ನಡೆಯುತ್ತಿದ್ದಾಗ ಯಾವುದೇ ವಿದ್ಯಾರ್ಥಿ ವರಾಂಡದ ಮೇಲೆ ತಿರುಗಾಡದಂತೆ ನೋಡಿಕೊಳ್ಳುತ್ತಿದ್ದರು. ಕ್ಲಾಸುಗಳು ಇಲ್ಲದಿದ್ದರೆ ವಾಚನಾಲಯಕ್ಕೆ ಹೋಗುವಂತೆ ಇಲ್ಲವೇ ಜಿಮಖಾನಾ ಹಾಲ್ ಗೆ ಹೋಗುವಂತೆ ನಿರ್ದೇಶನ ನೀಡುತ್ತಿದ್ದರು.ಒಟ್ಟಿನಲ್ಲಿ ವಿದ್ಯಾರ್ಥಿಗಳು ಯಾವುದಾದರೂ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬುದು ಅವರ ಅನಿಸಿಕೆಯಾಗಿತ್ತು.ಎಷ್ಟೇ ಶಿಸ್ತು ಕಠಿಣ ನಿಯಮಗಳಿದ್ದರೂ ಕಾಲೇಜಿನಲ್ಲಿ ಸಣ್ಣಪುಟ್ಟ ಗುಂಪು ಗಲಾಟೆಗಳಾಗುವದು ಸಹಜ.ಒಮ್ಮೆ ಕಾಲೇಜಿನಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು.ಆಗ ಸಿನಿಮೀಯ ರೀತಿಯಲ್ಲಿ ಕಿಟಕಿ ತೆರೆದು ಹಾರಿಬಂದು ವಿದ್ಯಾರ್ಥಿಗಳ ಕಲಹ ತೀವ್ರ ಸ್ವರೂಪ ಪಡೆಯದಂತೆ ನೋಡಿಕೊಂಡಿದ್ದರು.ಇದು ಅವರ ಧೈರ್ಯದ ಪ್ರತೀಕವಾಗಿತ್ತು. ಅವರು ಎಂದಿಗೂ ವಿದ್ಯಾರ್ಥಿಗಳಿಗೆ ಉಗ್ರಸ್ವರೂಪದ ಶಿಕ್ಷೆ ನೀಡುತ್ತಿರಲಿಲ್ಲ. ಎಂತಹ ಅಧಿಕಪ್ರಸಂಗದ ವಿದ್ಯಾರ್ಥಿ ಇದ್ದರೂ ಅವನಿಗೆ ಪ್ರೀತಿ ಸಮಾಧಾನದಿಂದ ಬುದ್ಧಿ ಹೇಳಿ ತಿದ್ದುತ್ತಿದ್ದರು. ಅಂದು ತುಂಟತನ ಮಾಡುತ್ತಿದ್ದ ಅನೇಕ ವಿದ್ಯಾರ್ಥಿಗಳು ಎ.ಎಚ್.ನಾಯಕರ ಈ ಗುಣವನ್ನು ಇಂದು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾರೆ. ಅಧ್ಯಾಪಕರಾಗಿ ಮಾತ್ರವಲ್ಲ, ಉತ್ತಮ ಆಡಳಿತಗಾರರಾಗಿಯೂ ಪ್ರೊ.ಎ.ಎಚ್.ನಾಯಕರು ಹೆಸರು ಮಾಡಿದ್ದರು.ಕೆ.ಜಿ.ನಾಯಕರ ನಂತರ ಪ್ರಾಚಾರ್ಯರಾಗಿ ಅಧಿಕಾರ ಸ್ವೀಕರಿಸಿದ ಅವರು ಕೆ.ಜಿ. ನಾಯಕರು ನಿರ್ಮಿಸಿದ್ದ ಪ್ರಭಾವಲಯವನ್ನು ವಿಸ್ತರಿಸುವಂತೆ ಆಡಳಿತ ನಡೆಸಿದರು. ಅವರ ಅವಧಿಯಲ್ಲಿ ಕಾಲೇಜಿನ ರಜತ ಮಹೋತ್ಸವ ಸಮಾರಂಭ ತುಂಬ ವಿಜೃಂಭಣೆಯಿಂದ ನಡೆದಿತ್ತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ.ಶಿವರಾಮ ಕಾರಂತರು ಅವರ ಕಾರ್ಯಕ್ಷಮತೆ ಮತ್ತು ದಕ್ಷತೆಯನ್ನು ಹಾಡಿ ಹೊಗಳಿದ್ದರು. ಪರೋಪಕಾರಿ ಮತ್ತು ಮಾನವೀಯ ಗುಣಗಳ ಗಣಿ ಯಾಗಿದ್ದ ಅವರು ತಾವು ನೀಡಿದ ಸಹಾಯ ಸಹಕಾರವನ್ನು ಅವರು ಎಂದಿಗೂ ಯಾರಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ ಬಲಗೈ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು ಎಂಬುದು ಅವರ ನೀತಿಯಾಗಿತ್ತು.ಅನೇಕ ಬಡ ಅಸಹಾಯಕ ವಿದ್ಯಾರ್ಥಿಗಳಿಗೆ ಅವರು ನೆರವು ನೀಡುತ್ತಿದ್ದರು.ಆದರೆ ಅದನ್ನು ಎಂದೂ ಪ್ರಚಾರಕ್ಕೆ ಬಳಸಿಕೊಳ್ಳಲಿಲ್ಲ. ಅವರ ಅಗಲಿಕೆಯ ನಂತರ ಹಲವರು ಅವರಿಂದ ಪಡೆದ ಸಹಾಯವನ್ನು ಕೃತಜ್ಞತೆಯಿಂದ ಸ್ಮರಿಸಿದ್ದರು. ಪ್ರೊ.ಎ.ಎಚ್.ನಾಯಕರು ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದರನ್ನು ಸಮಗ್ರವಾಗಿ ಓದಿಕೊಂಡಿದ್ದರು. ಅವರ ತತ್ವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ಉತ್ತಮ ಮಾತುಗಾರರಾಗಿದ್ದ ಅವರ ಭಾಷೆ ಅತ್ಯಂತ ಪ್ರಬುದ್ಧವಾಗಿತ್ತು .ಕನ್ನಡ - ಇಂಗ್ಲಿಷ್ ಭಾಷೆಗಳಲ್ಲಿ ಅವರು ನಿರರ್ಗಳವಾಗಿ ಭಾಷಣ ಮಾಡುತ್ತಿದ್ದರು. ತಮ್ಮ ಸಂವಹನ ಕಲೆಯಿಂದಾಗಿಯೇ ಅವರು ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವಲ್ಲಿ, ಅವರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಸಕಲರಿಗೂ ಲೇಸನ್ನೇ ಬಯಸುವ,ಸಕಲರಲ್ಲಿಯೂ ಲೇಸನ್ನೇ ಕಾಣುವ ಗುಣ ಎ.ಎಚ್.ನಾಯಕರದಾಗಿತ್ತು.ಆದ್ದರಿಂದಲೇ ಅವರು ಕಲ್ಲಿನಲ್ಲಿಯೂ ದೇವರನ್ನು ಕಂಡು ನಮಸ್ಕರಿಸುತ್ತಿದ್ದರು. ಇದು ದೈವಿಕತೆಯನ್ನು ಮೀರಿದ ಅಧ್ಯಾತ್ಮಿಕತೆಯಾಗಿತ್ತು.ಅವರ ಈ ಸ್ವಭಾವ ಕೆಲವರಿಗೆ ಅವರ ಮೋಜಿನದಾಗಿತ್ತು.ಅದನ್ನು ದುರುಪಯೋಗಪಡಿಸಿಕೊಳ್ಳಲು ಕೆಲವರು ಪ್ರಯತ್ನಿಸುತ್ತಿದ್ದರು. ಆದರೆ ಅವರ ಸಾತ್ವಿಕ ಸ್ವಭಾವ ಅದರತ್ತ ಗಮನ ನೀಡುತ್ತಿರಲಿಲ್ಲ. ತಮ್ಮ ಕಣ್ಣೆದುರು ಏನು ನಡೆಯುತ್ತಿದೆ ಎಂಬುದನ್ನು ಮಾತ್ರ ಗಮನಿಸುತ್ತಿದ್ದ ಅವರು ಬೆನ್ನ ಹಿಂದೆ ನಡೆಯುತ್ತಿದ್ದ ಘಟನೆಗಳಿಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡುತ್ತಿರಲಿಲ್ಲ. ಇದು ಅವರಿಗೆ ಮಾತ್ರ ಸಿದ್ದಿಸಿದ ಗುಣವಾಗಿತ್ತು. ಎ.ಎಚ್ ನಾಯಕರು ತಮ್ಮ ಬದುಕಿನ ಪಯಣ ಮುಗಿಸಿ ಮೂರು ವರ್ಷಗಳು ಕಳೆದಿವೆ.ಅವರ ತಾತ್ವಿಕ ಬದ್ಧತೆ, ಕರ್ತವ್ಯ ಪ್ರಜ್ಞೆ, ಪರೋಪಕಾರ ಗುಣ, ದೈವಭಕ್ತಿಗಳು ಎಂದಿಗೂ ಎಲ್ಲರಿಗೂ ಮಾದರಿಯಾಗಿರುತ್ತವೆ. - ಶ್ರೀಧರ ಬಿ.ನಾಯಕ, ಬೇಲೇಕೇರಿ.