ಸೋಮವಾರ, ಆಗಸ್ಟ್ 15, 2022

ಕಾರವಾರ ಮತ್ತು ಸ್ವಾತಂತ್ರ್ಯ ಚಳುವಳಿ

ಕಾರವಾರ ಮತ್ತು ಸ್ವಾತಂತ್ರ್ಯ ಚಳುವಳಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸಮರ್ಥ ನಾಯಕತ್ವದಲ್ಲಿ ದೇಶದ ನಾಗರಿಕರ ತ್ಯಾಗ-ಬಲಿದಾನಗಳ ಮೂಲಕ ಗಳಿಸಿದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಸ್ತುತ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದ ಸ್ವಾತಂತ್ರ್ಯ ಚಳುವಳಿಯ ಅವಲೋಕನ ಯುವ ಜನತೆಯಲ್ಲಿ ಸ್ವಾತಂತ್ರ್ಯ ಚಳುವಳಿಯ ಇತಿಹಾಸದ ಕುರಿತು ಆಸಕ್ತಿಯನ್ನು ಮೂಡಿಸಬಲ್ಲದು. ಇತಿಹಾಸವನ್ನು ಅರಿಯದವರು ಹೊಸ ಇತಿಹಾಸವನ್ನು ಸೃಷ್ಟಿಸಲಾರರು ಎಂಬ ಮಾತಿನಂತೆ ಸ್ವಾತಂತ್ರ ಹೋರಾಟದ ಅರಿವಿಲ್ಲದವರಿಂದ ಸ್ವಾತಂತ್ರ್ಯದ ರಕ್ಷಣೆ ಸಾಧ್ಯವಾಗದು. (ಇಲ್ಲಿನ ಮಾಹಿತಿ ಅಪೂರ್ಣವಾಗಿರಬಹುದು. ಬಲ್ಲವರು ತಮಗೆ ತಿಳಿದ ಮಾಹಿತಿ ನೀಡಿದರೆ ಲೇಖನವನ್ನು ಇನ್ನಷ್ಟು ಅಧಿಕೃತ ಗೊಳಿಸಲಾಗುವುದು). 1858ರ ನಂತರ ಭಾರತ ಅಧಿಕೃತವಾಗಿ ಬ್ರಿಟೀಷ್ ಸರಕಾರದ ವಸಾಹತು ಎಂದು ಪರಿಗಣಿಸಲ್ಪಟ್ಟಿತು. ಇಂಗ್ಲೀಷ್ ಶಿಕ್ಷಣದ ಪರಿಣಾಮವಾಗಿ ಸ್ವಾತಂತ್ರ್ಯ ಸೌಹಾರ್ದತೆಗಳ ಆದರ್ಶಗಳನ್ನು ಅರಗಿಸಿಕೊಂಡ ಒಂದು ಜನಾಂಗ ರೂಪಗೊಂಡಿತು. ಇಂಗ್ಲೀಷ್ ಶಿಕ್ಷಣವನ್ನು ಪಡೆದ ಭಾರತೀಯರು ಬ್ರಿಟೀಷ್ ಸರಕಾರದಲ್ಲಿ ಕೆಳದರ್ಜೆಯ ಹುದ್ದೆಗಳನ್ನು ಪಡೆದು ವರ್ಣಭೇದ ನೀತಿಗೆ ತುತ್ತಾದರು. ಹೀಗೆ ಅಸಮಾನತೆಗೆ ತುತ್ತಾದಾಗ ರಾಷ್ಟ್ರೀಯ ಪರಿಷತ್ತು ರೂಪಗೊಂಡು ರಾಷ್ಟ್ರೀಯತೆಯ ಭಾವನೆಯನ್ನು ಭಾರತೀಯರಲ್ಲಿ ಮೂಡಿಸಲು ಪ್ರಯತ್ನಿಸಿತು. 1885ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ಕಾಂಗ್ರೆಸ್ ಈ ಉದ್ದೇಶವನ್ನು ಸಮಗ್ರವಾಗಿ ಮಂಡಿಸುವ ಒಂದು ರಾಜಕೀಯ ಸಂಸ್ಥೆಯಾಗಿ ಪರಿವರ್ತಿತವಾಯಿತು. ದಾದಾಬಾಯಿ ನವರೋಜಿ, ಗೋಪಾಲಕೃಷ್ಣ ಗೋಖಲೆ ಮತ್ತು ಬಾಲಗಂಗಾಧರ ತಿಲಕ ಮುಂತಾದ ಹಿರಿಯರ ಪ್ರಯತ್ನದ ಫಲವಾಗಿ ಕಾಂಗ್ರೆಸ್ ಭಾರತದಲ್ಲಿ ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ರೂಪುಗೊಂಡಿತು. 1915ರ ಪ್ರಾರಂಭದಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ಗಾಂಧೀಜಿ ತಮ್ಮ ರಾಜಕೀಯ ಗುರು ಗೋಖಲೆಯವರ ಸರ್ವಂಟ್ಸ್ ಆಫ್ ಇಂಡಿಯಾ ಸೊಸೈಟಿಯನ್ನು ಸೇರುವ ಅಭಿಲಾಷೆಯನ್ನು ಹೊಂದಿದ್ದರು. ಆದರೆ ಪುಸ್ತಕ ಜ್ಞಾನಕ್ಕಿಂತ ಜನಸಾಮಾನ್ಯರ ಆಸೆ ಆಕಾಂಕ್ಷೆಗಳ ಪರಿಜ್ಞಾನ ಬಹಳ ಮಹತ್ವದ್ದು ಎಂಬ ಗೋಖಲೆಯವರ ಮಾತಿನಂತೆ ಗಾಂಧೀಜಿ ಭಾರತದ ಮೂಲೆ ಮೂಲೆಯನ್ನು ಸಂಚರಿಸಿ ಲೋಕಜ್ಞಾನವನ್ನು ಪಡೆದರು. ಆದರೆ ಆ ವೇಳೆಗಾಗಲೇ ಗೋಖಲೆಯವರು ದಿವಂಗತರಾಗಿದ್ದರು. ಬ್ರಿಟೀಷ್ ಸರಕಾರ ಜಾರಿಗೆ ತಂದ ಕೌಲೆಟ್ ಕಾಯಿದೆಗಳ ವಿರುದ್ಧ ಗಾಂಧೀಜಿ ಅಸಹಕಾರ ಚಳುವಳಿ ಪ್ರಾರಂಭಿಸಿದಾಗ ತಿಲಕರ ಆಶೀರ್ವಾದ ದೊರಕಿತು. 1919-20 ರಿಂದ ಗಾಂಧಿಯುಗ ಪ್ರಾರಂಭವಾಯಿತು. ಗೋಖಲೆಯವರ ಮಾರ್ಗದರ್ಶನ, ತಿಲಕರ ಆದರ್ಶಗಳನ್ನು ಹೊಂದಿ ಗಾಂಧೀಜಿ ಕಾಂಗ್ರೆಸ್‌ನ್ನು ಜನಸಾಮಾನ್ಯರ ಸಂಘಟನೆಯಾಗಿ ರೂಪಿಸಿದರು. ಸ್ವರಾಜ್ಯವನ್ನು ಗಳಿಸಿಕೊಳ್ಳಲು ಯೋಗ್ಯ ಶೀಲ ಚಾರಿತ್ರ್ಯಗಳನ್ನು ಗಳಿಸಿಕೊಳ್ಳಬೇಕೆಂಬ ಅವರ ಮಾತುಗಳು ಭಾರತೀಯರ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದವು. ಇಂತಹ ಮಾತುಗಳು ಗಾಂಧೀಜಿಯವರ ಕುರಿತು ದೇಶಾದ್ಯಂತ ಗೌರವವನ್ನು ಮೂಡಿಸಿದವು. ಜನಸಾಮಾನ್ಯರು ಗಾಂಧೀಜಿಯವರಲ್ಲಿ ನಿಷ್ಠೆಯನ್ನು ಬೆಳೆಸಿಕೊಂಡರು. ಸ್ವಾತಂತ್ರ್ಯ ಪಡೆಯಲು ಅವರು ಹೇಳುವ ಕಾರ್ಯಗಳನ್ನು ಶಿರಸಾವಹಿಸಿ ಪಾಲಿಸಲು ಜನ ಸಿದ್ಧರಾದರು. ಇಂತಹ ಸಂದರ್ಭದಲ್ಲಿಯೇ ಚಳುವಳಿಯನ್ನು ತೀವ್ರಗೊಳಿಸಲು ಕಾಂಗ್ರೆಸ್ ತೀರ್ಮಾನಿಸಿತು. ಇದರ ಅಂಗವಾಗಿ ದೇಶದ ಬೇರೆ ಬೇರೆ ಸ್ಥಳಗಳಲ್ಲಿ ರಾಜಕೀಯ ಸಮ್ಮೇಳನಗಳು ನಡೆದವು. ಇಂತಹ ಒಂದು ಜಿಲ್ಲಾ ರಾಜಕೀಯ ಸಮ್ಮೇಳನವನ್ನು 1920ರಲ್ಲಿ ಕಾರವಾರದಲ್ಲಿ ಸಂಘಟಿಸಲಾಯಿತು. 1900ರಲ್ಲಿ ಲಾಹೋರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದ ಸರ್ ನಾರಾಯಣ ಚಂದಾವರಕರ ಈ ರಾಜಕೀಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಈ ಸಂದರ್ಭದಲ್ಲಿ ಅನೇಕ ಸಮಸ್ಯೆಗಳನ್ನು ಚರ್ಚಿಸಿ ಜಿಲ್ಲೆಯಲ್ಲಿ ರಾಜಕೀಯ ಜಾಗೃತಿ ಮೂಡಿಸಲು ತೀರ್ಮಾನಿಸಲಾಯಿತು. 1921ರಲ್ಲಿ ಕಾರವಾರ ತಾಲೂಕಿನ ಕಾಂಗ್ರೆಸ್ ಕಮಿಟಿಯ ಹಂಗಾಮಿ ಸಮಿತಿಯನ್ನು ಹರಿಬಾಬು ಕಾಮತರ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾಯಿತು. 1922ರಲ್ಲಿ ನಿಯಮಬದ್ಧ ಚುನಾವಣೆ ನಡೆದು ಮಂಗೇಶರಾವ ತೇಲಂಗ ಅಧ್ಯಕ್ಷರಾಗಿ ಆಯ್ಕೆಯಾದರು. ಕೆ.ಆರ್. ಹಳದಿಪುರಕರ ಮತ್ತು ಎಮ್.ಡಿ.ನಾಡಕರ್ಣಿ ಕಾರ್ಯದರ್ಶಿಗಳಾದರು. ಇದೇ ಸಂದರ್ಭದಲ್ಲಿ ಕಾರವಾರ ತಾಲೂಕಿನ ಕೆಲವು ತರುಣರು ಮುಂಬೈ ಪೂಣಾ ಮುಂತಾದ ಊರುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಅಲ್ಲಿ ತೀವ್ರವಾದ ರಾಷ್ಟ್ರೀಯ ಚಟುವಟಿಕೆಗಳ ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳ ತೊಡಗಿದರು. ಕೃಷ್ಣಾ ನಾರಾಯಣ ನಾಯಕ, ಹನುಮಂತರಾವ ಮಾಂಜೇಕರ, ಪದ್ಮನಾಭ ಎಸ್. ಕಾಮತ ಮುಂತಾದವರು ವಿದ್ಯಾರ್ಥಿಗಳಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಗುರುತಿಸಿಕೊಂಡು ಕಾರವಾರಕ್ಕೆ ಆಗಮಿಸಿದರು. ಆಗಲೇ ಕರ್ನಾಟಕದಲ್ಲಿ ಕಾರವಾರ ಜಿಲ್ಲೆಯ ಪರಿಸ್ಥಿತಿ ಕರನಿರಾಕರಣ ಚಳುವಳಿಗೆ ಅನುಕೂಲವಾಗಿದೆಯೆಂದು ಕರ್ನಾಟಕ ಕಾಂಗ್ರೆಸ್ ಭಾವಿಸಿತು. ಈ ಜಿಲ್ಲೆಯ ಜನ ಶಾಂತ ವೃತ್ತಿಯವರು ಕೈಗೊಂಡ ಕೆಲಸವನ್ನು ಬಿಡದ ಸ್ವಭಾವದವರು. ಇಲ್ಲಿ ಬ್ರಾಹ್ಮಣ-ಬ್ರಾಹ್ಮಣೇತರ ಎಂಬ ವಾದ ತೀವ್ರವಾಗಿಲ್ಲ. ಗಾಂಧೀಜಿಯವರ ಬಗ್ಗೆ ಜನಸಾಮಾನ್ಯರಲ್ಲಿ ನಿಷ್ಠೆ ಇದೆ. ಭಾವುಕರಾಗಿದ್ದ ಈ ಜಿಲ್ಲೆಯ ಜನ ಎಂತ ತ್ಯಾಗಕ್ಕೂ ಸಿದ್ಧರು. ಕಾಲೇಜು ಶಿಕ್ಷಣವನ್ನು ಬಿಟ್ಟು ಬಂದ ವಿದ್ಯಾರ್ಥಿಗಳು ಹಳ್ಳಿಗಳಿಗೆ ಹೋಗಿ ಚೆನ್ನಾಗಿ ಕೆಲಸ ಮಾಡಿದ್ದರು. ಈ ರೀತಿಯ ಅನುಕೂಲಕರ ಪರಿಸ್ಥಿತಿ ಬೇರೆ ಯಾವ ಜಿಲ್ಲೆಯಲ್ಲಿಯೂ ಇಲ್ಲ ಎಂದು ಕಾಂಗ್ರೆಸ್ ಭಾವಿಸಿತು. ಉತ್ತರ ಕನ್ನಡ ಜಿಲ್ಲೆಯಲ್ಲಿ ಚಳುವಳಿಯನ್ನು ತೀವ್ರಗೊಳಿಸಿತು. ಶಿರ್ಶಿ, ಸಿದ್ಧಾಪುರ, ಅಂಕೋಲಾ ತಾಲೂಕುಗಳಲ್ಲಿ ಸ್ವಾತಂತ್ರ್ಯ ಚಳುವಳಿ ತೀವ್ರವಾಗಿ ಹಬ್ಬಿತು. ಕಾರವಾರ ತಾಲೂಕಿನಲ್ಲಿಯೂ ತಕ್ಕ ಮಟ್ಟಿಗೆ ಚಳುವಳಿ ಕಾಣಿಸಿಕೊಂಡಿತು. 1921ರ ಅಸಹಕಾರ ಚಳುವಳಿಯಿಂದ ಪ್ರೇರೇಪಿತರಾದ ಕಾರವಾರದ ಕೆ.ಆರ್.ಹಳದಿಪುರಕರ ಜಿಲ್ಲೆಯ ಇತರ ವಕೀಲರ ಜೊತೆ ಸೇರಿ ಸನದುಗಳನ್ನು ಹಿಂತಿರುಗಿಸಿ ನ್ಯಾಯಾಲಯಗಳಿಗೆ ಬಹಿಷ್ಕಾರ ಹಾಕಿದರು. 1923ರಲ್ಲಿ ಎನ್.ಎಸ್. ಹರ್ಡಿಕರರಿಂದ ಸ್ಥಾಪಿಸಲ್ಪಟ್ಟ ಹಿಂದುಸ್ತಾನಿ ಸೇವಾದಳ ಕಾರವಾರದಲ್ಲಿಯೂ ಪ್ರಾರಂಭವಾಯಿತು. 1924ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್‌ ಅಧಿವೇಶನ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದಾಗ ಕೃಷ್ಣ ನಾರಾಯಣ ನಾಯಕರವರ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿದ್ದರು. ಗಾಂಧೀಜಿಯವರ ಭಾಷಣದಿಂದ ಪ್ರಭಾವಿತರಾದ ಇವರೆಲ್ಲ ತಾಲೂಕಿನಲ್ಲಿ ಚಳುವಳಿಯನ್ನು ತೀವ್ರಗೊಳಿಸಿದರು. 1923ರಲ್ಲಿ ಸಿಂದ್‌ನ ರಾಜಕೀಯ ಕೈದಿ ಶರ್ಮಾ ಕಾರವಾರ ಜೈಲಿನಲ್ಲಿ ಇದ್ದು ಬಿಡುಗಡೆಹೊಂದಿದರು. ಆ ಸಂದರ್ಭದಲ್ಲಿ ಮೊದಲ ಬಾರಿಗೆ ಬೃಹತ್ ಪ್ರಮಾಣದ ರಾಜಕೀಯ ಮೆರವಣಿಗೆ ನಡೆಯಿತು. 1924 ರಿಂದ 29ರವರೆಗೆ ಚಳುವಳಿ ತಣ್ಣಗಿತ್ತು. ಆದರೆ ಇದ್ದಕ್ಕಿದ್ದಂತೆ ಕಾಯಿದೆ ಭಂಗ ಚಳುವಳಿ ತೀವ್ರಗೊಂಡಿತು. ಸುಬ್ಬರಾವ್ ಹಳದಿಪುರ ಬಂಧಿತರಾದರು. ಈ ಹೊತ್ತಿಗಾಗಲೇ ಪದ್ಮನಾಭ ಎಸ್. ಕಾಮತರವರು ಕಾನೂನು ಶಿಕ್ಷಣ ಪಡೆದು ಕಾರವಾರಕ್ಕೆ ಬಂದು ಪ್ರಾಕ್ಟಿಸ್ ಆರಂಭಿಸಿದರು. 1930 ಮತ್ತು 1932ರಲ್ಲಿ ಬಂಧಿತರಾದ ಅಥವಾ ಕ್ರಿಮಿನಲ್‌ ಕಟ್ಲೆಗಳಲ್ಲಿ ಸೇರಿಸಲ್ಪಟ್ಟ ಸತ್ಯಾಗ್ರಹಿಗಳ ಪರವಾಗಿ ಅವರು ವಕಾಲತ್ತು ವಹಿಸಿದರು. 1930ರ ಮಾರ್ಚ್ ತಿಂಗಳಲ್ಲಿ ಗದಗದ ವಿ.ಜಿ. ಕಂಬಿಯವರು ಸತ್ಯಾಗ್ರಹಿಗಳ ಕ್ಯಾಪ್ಟನ್ ಎಂದು ಹರ್ಡಿಕರರಿಂದ ನೇಮಕಗೊಂಡು ಕಾರವಾರಕ್ಕೆ ಆಗಮಿಸಿದರು. ಪಿ.ಎಸ್. ಕಾಮತರ ಜೊತೆ ಸೇರಿ 50 ಜನ ಸ್ವಯಂಸೇವಕರನ್ನು ಮುರಳೀಧರ ಮಠದಲ್ಲಿ ಸೇರಿಸಿ ಸಭೆ ನಡೆಸಿ ಮುಂದೆ ನಡೆಯಬಹುದಾದ ಚಳುವಳಿಯ ರೂಪರೇಷೆಗಳನ್ನು ಸಿದ್ಧಪಡಿಸಿದರು. ಈ ಸಂದರ್ಭದಲ್ಲಿಯೇ ಪಾನವಿರೋಧಿ ಚಳುವಳಿಯು ತೀವ್ರಗೊಂಡಿತು. ಕಾರವಾರ ಜಿಲ್ಲೆಯಲ್ಲಿ ಸರಾಯಿ ಅಂಗಡಿಗಳನ್ನು ನಡೆಸಲು ಹರಾಜು ಪ್ರಕ್ರಿಯೆಯನ್ನು ಬ್ರಿಟೀಷ್ ಸರಕಾರ ಕೈಗೊಂಡಿತು. ಜೂನ್ 27, 1931ರಂದು ನಡೆದ ಈ ಪ್ರಕ್ರಿಯೆಯನ್ನು ವಿರೋಧಿಸಿ ಕಾರವಾರದಲ್ಲಿ ಹರತಾಳ ನಡೆಸಲಾಯಿತು. ಕೆ.ಎನ್. ನಾಯ್ಕ, ಹನುಮಂತರಾವ ಮಾಂಜೇಕರ ಮೋಟಾ ಎಸ್‌. ದುರ್ಗೆಕರ ಮುಂತಾದವರು ಈ ಆಂದೋಲನದ ಮುಂಚೂಣಿಯಲ್ಲಿದ್ದರು. ಈ ಹರಾಜು ಪ್ರಕ್ರಿಯೆಯಲ್ಲಿ ಕಾರವಾರದ 13 ಸರಾಯಿ ಅಂಗಡಿಗಳಲ್ಲಿ ಕೇವಲ 5, ಕುಮಟಾದ 18ರಲ್ಲಿ 2, ಭಟ್ಕಳದ 11ರಲ್ಲಿ 1, ಯಲ್ಲಾಪುರದ 7ರಲ್ಲಿ 2, ಜೋಯ್ದಾದ 7ರಲ್ಲಿ 2, ಸರಾಯಿ ಅಂಗಡಿಗಳು ಹರಾಜುಗೊಂಡವು. ಆದರೆ ಅಂಕೋಲಾ, ಶಿರ್ಶಿ, ಸಿದ್ಧಾಪುರ, ಹೊನ್ನಾವರ ತಾಲೂಕುಗಳಲ್ಲಿ ಒಂದು ಅಂಗಡಿಯೂ ಹರಾಜು ಆಗಲಿಲ್ಲ. ಇದರಿಂದಾಗಿ ಸರಕಾರ ಶೇಕಡಾ 75ರಷ್ಟು ಆದಾಯವನ್ನು ಕಳೆದುಕೊಂಡಿತು. 1930ರಲ್ಲಿ ಸರಕಾರ ಮತ್ತು ಕಾರವಾರದ ಜಿ.ಎಸ್. ನಾಡಕರ್ಣಿ ಮತ್ತು ಸುಬ್ಬರಾವ ಹಳದಿಪುರಕರರಂತಹ ಕಾಂಗ್ರೆಸ್ ನಾಯಕರನ್ನು ಪ್ರಚೋದನಾರಹಿತ ಬಂಧನಕ್ಕೆ ಒಳಪಡಿಸಲಾಯಿತು. ಇದರಿಂದ ಕಾರವಾರದ ವಾತಾವರಣ ಕಾವೇರಿತು. ಇವರಿಬ್ಬರಿಗೆ ಎರಡು ವರ್ಷ ಶಿಕ್ಷೆಯಾದಾಗ ಕಾರವಾರದಲ್ಲಿ ಹಿಂದೆಂದು ಆಗದಂತಹ ಪ್ರತಿಭಟನಾ ಮೆರವಣಿಗೆ ನೆರವೇರಿತು. ಈ ನಡುವೆ ಕೆ.ಪಿ.ಸಿ.ಸಿ ಉಪ್ಪಿನ ಸತ್ಯಾಗ್ರಹವನ್ನು ನಡೆಸಲು ಅಂಕೋಲೆ ಸೂಕ್ತ ಸ್ಥಳವೆಂದು ಆಯ್ಕೆ ಮಾಡಿತು. ಅಂಕೋಲೆಯಲ್ಲಿ ನಡೆದ ಐತಿಹಾಸಿಕ ಉಪ್ಪಿನ ಸತ್ಯಾಗ್ರಹದಲ್ಲಿ ಕಾರವಾರದಿಂದ ಕೆ.ಎನ್.ನಾಯ್ಕರ ನೇತೃತ್ವದಲ್ಲಿ ಒಂದು ತಂಡ ಪಾಲ್ಗೊಂಡಿತು. ನಂತರ ಕಾರವಾರ ಮಾಜಾಳಿ ಭಾಗದ ನೂರಾರು ಕಾರ್ಯಕರ್ತರು ಗೋವೆಯನ್ನು ಪ್ರವೇಶಿಸಿ ತೆರಿಗೆಯನ್ನು ನೀಡದೆ ಉಪ್ಪನ್ನು ತಂದರು,, ಆ ಸಂದರ್ಭದಲ್ಲಿ ಕೃಷ್ಣ ನಾಯಕ, ಶಾಮರಾವ ಗಾಯತೊಂಡೆ ಹಳಗಾ ಮುಂತಾದವರು ಬಂಧಿತರಾದರು. ಕಾರವಾರದಲ್ಲಿ ಉಪ್ಪಿನ ಸತ್ಯಾಗ್ರಹ ನಡೆದಾಗ ಗಂಗೊಳ್ಳಿ ಮನೆತನದ ಮಹಿಳೆಯೊಬ್ಬರು ಉಪ್ಪನ್ನು ಖರೀದಿಸಿ ಚಳುವಳಿಗೆ ನೆರವು ನೀಡಿದರು. ಸತ್ಯಾಗ್ರಹದ ಮೊದಲ ದಿನವೇ ಬಾಲಕೃಷ್ಣ ಶ್ರೀನಿವಾಸ ಭುಜಲೆ ಬಂಧಿತರಾದರು. ಈ ಸಂದರ್ಭದಲ್ಲಿ ಕಾಳಿನದಿಯ ಬಳಿ ಸುಮಾರು 5000 ಜನ ಸೇರಿ ಅಲ್ಲಿಂದ ಪೇಟೆಗೆ ಮೆರವಣಿಗೆಯಲ್ಲಿ ಬಂದರು. ಆಗಲೇ ಹನುಮಂತ ಮಾಂಜೇಕರ ಕೂಡ ಬಂಧಿತರಾದರು. ಸ್ಥಳೀಯ ಕಾರ್ಯಕರ್ತರಾದ ಡಿ.ಎನ್. ಶಾನಭಾಗ, ಪಿ.ಪಿ. ಸಾವುಕರ ಎನ್ನುವವರೂ ಬಂಧಿತರಾದರು. ಆದರೆ ಚಳುವಳಿಯ ಖರ್ಚುವೆಚ್ಚವನ್ನು ನಿಭಾಯಿಸುವ ದೃಷ್ಟಿಯಿಂದ ಪಿ.ಎಸ್.ಕಾಮತ, ಕೆ.ಆರ್. ಹಳದಿಪುರರಂತವರು ಬಂಧಿತರಾಗದೇ ಹೊರಗುಳಿದರು. ಸ್ಥಳೀಯ ಕಾರ್ಯಕರ್ತರಾಗಿದ್ದ ಪಾಂಗಂ ಡಬ್ಬಿ ಫಂಡ್ ಸಂಗ್ರಹಿಸುತ್ತಿದ್ದರು. ಈ ಚಳುವಳಿಯನ್ನು ಬೆಂಬಲಿಸಿದ ಕಾರಣಕ್ಕೆ ಪಿ.ಎಸ್.ಕಾಮತ, ಆರ್.ವಿ.ಗಂಗೊಳ್ಳಿ, ಎಮ್.ಎಮ್. ಶಾನಭಾಗ, ವಾಯ್.ಟಿ. ನಾಡಕರ್ಣಿ ಈ ನಾಲ್ಕು ಜನ ವಕೀಲರು ಸನದುಗಳನ್ನು ಕಳೆದುಕೊಂಡರು. ಮುಂದೆ ಗಾಂಧಿ ಐಶ್ವಿನ್ ಒಪ್ಪಂದದಂತೆ ಅವುಗಳನ್ನು ಮರಳಿಸಲಾಯಿತು. ಉಪ್ಪಿನ ಸತ್ಯಾಗ್ರಹಕ್ಕೆ ಹೊಸ ಸ್ವರೂಪವನ್ನು ಕೊಡಲು ನಿರ್ಧರಿಸಿದ ಕೆ.ಎನ್.ನಾಯ್ಕರು ಜನರ ಸಹಾನುಭೂತಿಯನ್ನು ದೊಡ್ಡ ಪ್ರಮಾಣದಲ್ಲಿ ಗಳಿಸಿಕೊಳ್ಳುವ ಪ್ರಯತ್ನಕ್ಕಿಳಿದರು. ಆದ್ದರಿಂದ ಗೋವೆಯಿಂದ ತೆಂಗಿನ ಮಡಲನ್ನು ಸುಂಕಕೊಡದೆ ತಂದು ಮಾರಾಟಕ್ಕಿಳಿದರು. ಇದರಿಂದ ಹೆಂಗಸರ ಸಹಾನುಭೂತಿ ದೊರಕಿತು. ಮುಂದೆ ಅಗ್ಗದ ಉಪ್ಪು ತರಲು ನಿರ್ಣಯಿಸಿ ಅಂಗಡಿ, ಮಾಜಾಳಿ ಮುಂತಾದ ಗ್ರಾಮಗಳ ಜನರ ಸಹಕಾರ ಪಡೆದರು. ಸುಮಾರು 200 ಜನ ಗೋವಾ ಗಡಿಯನ್ನು ಪ್ರವೇಶಿಸಿ ಸಣ್ಣ ಸಣ್ಣ ಚೀಲಗಳಲ್ಲಿ ಉಪ್ಪನ್ನು ಹೊತ್ತು ತಂದು ಚಳುವಳಿಯನ್ನು ಯಶಸ್ವಿಗೊಳಿಸಿದರು. 1934ರಲ್ಲಿ ಮಹಾತ್ಮಾಗಾಂಧಿ ಹರಿಜನ ಪ್ರವಾಸ ಕೈಗೊಂಡು ಕಾರವಾರಕ್ಕೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಅವರು ಸ್ವಾತಂತ್ರ್ಯ ಚಳುವಳಿಯ ಕೇಂದ್ರವಾದ ಸುಬ್ಬರಾವ ಹಳದಿಪುರರವರ ಮನೆಗೆ ಭೇಟಿ ನೀಡಿದರು. ಕರನಿರಾಕರಣೆಯಿಂದ ಭೂಮಿ ಕಳೆದುಕೊಂಡ ಸತ್ಯಾಗ್ರಹಿಗಳನ್ನು ಸಂತೈಸಿದರು. ಸ್ವಾತಂತ್ರ್ಯ ಚಳುವಳಿಯ ಇತಿಹಾಸದಲ್ಲಿ 1942ರ ಚಲೇಜಾವ ಚಳುವಳಿ ಮಹತ್ವದ ಘಟ್ಟ. ಬ್ರಿಟೀಷ ಸರಕಾರ ಗಾಂಧೀಜಿಯವರನ್ನು ಬಂಧಿಸಿತು. ಕುಮಟಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ತಿಮ್ಮಪ್ಪ ನಾಯ್ಕ ಗಾಂಧೀಜಿಯವರ ಬಂಧನವನ್ನು ವಿರೋಧಿಸಿ ಭಾಷಣ ಮಾಡಿದರು. ಅದೇ ಸಂದರ್ಭದಲ್ಲಿ ಕಾರವಾರದಲ್ಲೂ ಕೂಡ ಬೃಹತ್ ಪ್ರತಿಭಟನಾ ಸಭೆ ಜರುಗಿತು. ಖಾದಿಮುಲ್ಲಾ ಎಂದೇ ಹೆಸರಾದ ಶೇಖ ಉಮರ ಎಂಬುವವರು ಆಗ ಬಂಧಿತರಾಗಿ ಹಿಂಡಲಗಾ ಜೈಲು ಸೇರಿದರು. 1942ರ ಚಳುವಳಿಯಲ್ಲಿ ಭಾಗವಹಿಸಿದ ಭೂಗತ ಕಾರ್ಯಕರ್ತರ ಜೊತೆಗೆ ಸಂಪರ್ಕವಿರಿಸಿಕೊಂಡ ಪಿ.ಎಸ್. ಕಾಮತರವರು ಅವರಿಗೆ ಎಲ್ಲ ವಿಧದ ಆರ್ಥಿಕ ಸಹಾಯ ನೀಡಿದರು. ಜೊತೆಗೆ ಬಂಧಿತರಿಗೆ ಕಾನೂನಾತ್ಮಕ ನೆರವು ನೀಡಿದರು. . ಹೀಗೆ ನಾಡಿನ ವಿವಿಧ ಪ್ರಾಂತಗಳ ಜನರೊಂದಿಗೆ ಕಾರವಾರ ತಾಲೂಕಿನ ಜನರೂ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡಿದ್ದರು. ಜಾತಿ ಮತ ಪಂಥ ಭಾಷೆಗಳ ಬೇಧಭಾವವಿಲ್ಲದೆ ನಾವೆಲ್ಲ ಭಾರತೀಯರು ಎಂಬ ಮನೋಭಾವವನ್ನು ಹೊಂದಿ ಹೋರಾಟ ಮಾಡಿದ್ದರ ಫಲವಾಗಿ 1947 ಅಗಸ್ಟ್ 15ರಂದು ಸ್ವಾತಂತ್ರ್ಯ ದೊರಕಿತು. 1947 ಅಗಸ್ಟ್ 14ರ ರಾತ್ರಿ 12 ಗಂಟೆಗೆ ಭಾರತ ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಹನುಮಂತರಾವ ಮಾಂಜೇಕರರವರು ಅಶ್ವತ್ಥ ವೃಕ್ಷ ನೆಟ್ಟರು. ಕಾರವಾರದ ಆಝಾದ ಮೈದಾನದಲ್ಲಿ ಅಗಸ್ಟ್ 15ರಂದು ಮೊದಲ ಧ್ವಜ ಹಾರಿಸಿದ ಶ್ರೇಯಸ್ಸು ಪಿ.ಎಸ್. ಕಾಮತರದಾಗಿತ್ತು. ದೇಶದ ಇತರ ಭಾಗಗಳಂತೆ ಕಾರವಾರ ತಾಲೂಕಿನಲ್ಲಿಯೂ ನಡೆದ ಚಳುವಳಿ ಸ್ವಾತಂತ್ರ್ಯ ದೊರಕಿಸಿಕೊಳ್ಳಲು ನೆರವು ನೀಡಿತು ಎಂಬುದನ್ನು ಮರೆಯುವಂತಿಲ್ಲ.

ಭಾನುವಾರ, ಆಗಸ್ಟ್ 14, 2022

ಬೇಲೇಕೇರಿ ಸ್ವಾತಂತ್ರ್ಯ ಹೋರಾಟಗಾರರು

ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಾಚರಣೆಯ ಉತ್ಸಾಹದಲ್ಲಿದ್ದೇವೆ. ಸ್ವಾತಂತ್ರ್ಯ ಸುಲಭವಾಗಿ ಸಿಗಲಿಲ್ಲ.ಅದಕ್ಕೆ ಸುದೀರ್ಘವಾದ ವ್ಯವಸ್ಥಿತವಾದ ಮತ್ತು ಸಂಘಟಿತ ಹೋರಾಟ ನಡೆದಿದೆ.ಸಂತನಂತಿದ್ದ ಪೂಜ್ಯ ಮಹಾತ್ಮಾ ಗಾಂಧೀಜಿಯವರ ಸಮರ್ಥ ನಾಯಕತ್ವದಡಿಯಲ್ಲಿ ನಡೆದ ಹೋರಾಟದ ಫಲವಾಗಿ ಸ್ವಾತಂತ್ರ್ಯ ನಮ್ಮದಾಗಿದೆ.ಜನಸಾಮಾನ್ಯರೂ ಸ್ವಾತಂತ್ರ್ಯಕ್ಕಾಗಿ ತಮ್ಮ ಮನೆ ಮಠಗಳನ್ನು ತೊರೆದು ಪ್ರಾಣದ ಹಂಗು ಬಿಟ್ಟು ಹೋರಾಡಿದ್ದಾರೆ. ಯಾವ ತಪ್ಪೂ ಮಾಡದೇ ಜೈಲು ಶಿಕ್ಷೆ ಅನುಭವಿಸಿದ್ದಾರೆ.ನಮ್ಮ ಅಂಕೋಲಾ ತಾಲೂಕಿನಲ್ಲಿ ನಡೆದ ಹೋರಾಟವೂ ಅವಿಸ್ಮರಣೀಯ.ಈ ತಾಲೂಕಿನ ಪ್ರತಿ ಹಳ್ಳಿಯೂ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದವು.ಬೇಲೇಕೇರಿಯೂ ಇದಕ್ಕೆ ಹೊರತಾಗಿರಲಿಲ್ಲ.ಆದರೆ ಅದು ಅಷ್ಟಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗಿಲ್ಲ. ಸಧ್ಯಕ್ಕೆ ದೊರಕುವ ಮಾಹಿತಿಯ ಪ್ರಕಾರ ಬೇಲೇಕೇರಿಯ ಕರಿಯಣ್ಣ ಬೀರಣ್ಣ ನಾಯಕ, ಗೋವಿಂದ ಅನಂತ ನಾಯಕ, ತಿಮ್ಮಣ್ಣ ಹಮ್ಮಣ್ಣ ನಾಯಕ, ಬೀರಣ್ಣ ಬರ್ಮು ನಾಯಕ, ವಿಠೋಬಾ ರಾಮ ನಾಯಕ, ಸುಖಾ ತಿಮ್ಮಣ್ಣ ನಾಯಕ, ಗಿರಿಯಣ್ಣ ನಾರಾಯಣ ನಾಯಕ ,ನಾರಾಯಣ ವೆಂಕಯ್ಯ ನಾಯಕ, ಕಲ್ಲು ಅನಂತ ನಾಯಕ, ಬೊಮ್ಮಯ್ಯ ಬೀರಣ್ಣ ನಾಯಕ , ವೆಂಕಣ್ಣ ದೇವಣ್ಣ ನಾಯಕ , ವೆಂಕಣ್ಣ ಸಾಂತು ನಾಯಕ,ವಿಠೋಬಾ ತಿಮ್ಮಣ್ಣ ನಾಯಕ, ತಮ್ಮಣ್ಣ ದೊಡ್ಡತಮ್ಮ ನಾಯಕ, ಹಮ್ಮಣ್ಣ ಬೀರಪ್ಪ ನಾಯಕ ವೆಂಕಪ್ಪನಮನೆ , ವೆಂಕಟರಮಣ ತಿಮ್ಮಣ್ಣ ನಾಯಕ, ವೆಂಕಣ್ಣ ಅನಂತ ನಾಯಕ, ವಿಠೋಬಾ ಬೀರಣ್ಣ ನಾಯಕ, ತಿಮ್ಮಣ್ಣ ಕರಿಯಣ್ಣ ನಾಯಕ ,ಹೊನ್ನಪ್ಪ ವೆಂಕಯ್ಯನಾಯಕ ವೆಂಕಯ್ಯನಮನೆ,ಕರಿಯಣ್ಣ ಬುಳ್ಳಾ ನಾಯಕ ಕರ್ನಮನೆ, ನಾರಾಯಣ ರಾಮ ನಾಯಕ ಬೀರುಮನೆ , ಗಿರಿಯಣ್ಣ ಸುಖಾ ನಾಯಕ , ವಾಸು ಬೀರಣ್ಣ ನಾಯಕ ,ತಿಮ್ಮಣ್ಣ ದೇವಪ್ಪ ನಾಯಕ ,ಬುದ್ಯಾ ಪೆಡ್ನೇಕರ, ಯಶವಂತ ನಾಯ್ಕ ಹೀಗೆ ಹಲವರು‌ ಉಪ್ಪಿನ ಸತ್ಯಾಗ್ರಹ, ಕರಬಂದಿ ಚಳುವಳಿ,ಚಲೇಜಾವ್ ಚಳುವಳಿಗಳಲ್ಲಿ ಭಾಗವಹಿಸಿ ಜೈಲು ಶಿಕ್ಷೆ ಅನುಭವಿಸಿದ್ದರು. ಮಹಿಳೆಯರೂ ಕೂಡ ಚಳುವಳಿಯಲ್ಲಿ ಪಾಲ್ಗೊಂಡು ಶಿಕ್ಷೆ ಅನುಭವಿಸಿದ್ದರು.ರಾಕಮ್ಮ ರಾಮ ನಾಯಕ,ಮಾಣು ಬೀರಪ್ಪ ನಾಯಕ, ಶಿವಮ್ಮ ಬೀರಪ್ಪ ನಾಯಕ, ತಿಮ್ಮಕ್ಕ ಬೀರಪ್ಪ ನಾಯಕ, ಹನಮು ವೆಂಕಣ್ಣ ನಾಯಕ ಮುಂತಾದವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಇಲ್ಲಿ ಕೆಂಚನಮನೆಯ ವೆಂಕಮ್ಮ ಮಾಣಿ ನಾಯಕ ಅವರನ್ನು ವಿಶೇಷವಾಗಿ ಹೆಸರಿಸಲೇಬೇಕು.ಭಾರತದ ಕೋಗಿಲೆ ಎಂದು ಹೆಸರಾದ ಸರೋಜಿನಿ ನಾಯ್ಡು ಅವರ ನಿಕಟವರ್ತಿಗಳಲ್ಲಿ ಒಬ್ಬರಾಗಿದ್ದ ಅವರು ಹಿಂಡಲಗಾದಲ್ಲಿ ಜೈಲುವಾಸ ಅನುಭವಿಸಿದ್ದರು. ನಮಗೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಸ್ವಾತಂತ್ರ್ಯ ಹೋರಾಟಗಾರರು ಪರಿಚಯ ಇರುತ್ತದೆ.ಆದರೆ ನಮ್ಮವರ ಬಗ್ಗೆಯೇ ತಿಳಿದಿರುವದಿಲ್ಲ.ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಾದರೂ ನಮ್ಮ ಹಿರಿಯರನ್ನು ಸ್ಮರಿಸಿಕೊಳ್ಳವದರ ಮೂಲಕ ಅವರ ಹೋರಾಟಕ್ಕೆ ನಮನ ಸಲ್ಲಿಸುವುದು ನಮ್ಮ ಕರ್ತವ್ಯ. (ಇದು ಪರಿಪೂರ್ಣ ಪಟ್ಟಿ ಅಲ್ಲ.ಇನ್ನೂ ಇದ್ದಾರೆ.ನನಗೆ ಸಿಕ್ಕ ಮಾಹಿತಿ ಮಾತ್ರ ಇಲ್ಲಿದೆ.ಬಲ್ಲವರು ಇನ್ನೂ ಮಾಹಿತಿ ನೀಡಿದರೆ ಅವರು ಹೆಸರುಗಳನ್ನು ಸೇರಿಸುತ್ತೇನೆ.)