ಶನಿವಾರ, ಫೆಬ್ರವರಿ 24, 2024

ಜನಪರ ಹೋರಾಟಗಳಲ್ಲಿ ವಿಷ್ಣು ನಾಯ್ಕರು.

ಸಾಹಿತಿಗಳ ಬಗ್ಗೆ ಜನಸಾಮಾನ್ಯರಲ್ಲಿ ಒಂದು ರೀತಿಯ ಗೌರವ ಭಾವನೆಯಿದೆ. ಸಾಹಿತಿಯಾದವರ ಮುಖ್ಯ ಕಾರ್ಯವೆಂದರೆ ಜನಪರವಾಗಿ ಯೋಚಿಸುತ್ತ ತನ್ನ ಸುತ್ತ ಮುತ್ತಲಿನ ಸಮಾಜದಲ್ಲಿ ಹೊಸ ಎಚ್ಚರ ಹುಟ್ಟಿಸುವುದು. ನಾವೆಲ್ಲರೂ ಸಮಾಜದ ಒಂದು ಭಾಗ, ಈ ಕಾರಣದಿಂದ ತಾನು ಬೇರೂರಿ ಬದುಕುವ ಸಮಾಜದ ವಾಸ್ತವ ಚಿತ್ರವನ್ನು ಸಾಹಿತ್ಯದ ಮೂಲಕ ಜನಸಾಮಾನ್ಯರಿಗೆ ಕಟ್ಟಿಕೊಡುವುದು, ಸಮಾಜದ ಓರೆ-ಕೊರೆಗಳನ್ನು ಅನಾವರಣಗೊಳಿಸುತ್ತ ಓದುಗರ ಸಾಮಾಜಿಕ ಅರಿವನ್ನು ವಿಸ್ತರಿಸುವುದು ತನ್ನ ಮೊದಲ ಕರ್ತವ್ಯ ಎಂಬ ನಂಬಿಕೆ ಬರಹಗಾರನಿಂದ ಹೊಮ್ಮಿದಾಗ ಮಾತ್ರ ಬದಲಾವಣೆಯನ್ನು ನಿರೀಕ್ಷಿಸಬಹುದು. ವ್ಯಕ್ತಿನಿಷ್ಠತೆಯ ಬದಲು, ವಸ್ತುನಿಷ್ಠ ನಿಲುವಿನಲ್ಲಿ ನಿಂತು ತನ್ನ ಸುತ್ತಣ ಸಾಮಾಜಿಕ ಪರಿಸರದಲ್ಲಿ ಇದ್ದುದನ್ನು ಇದ್ದ ಹಾಗೆ, ಯಾವ ಉತ್ಪ್ರೇಕ್ಷೆ,ಪೂರ್ವಾಗ್ರಹಗಳ ಸೋಂಕೂ ಇಲ್ಲದೆ ಚಿತ್ರಿಸುವುದು ಸಮಾಜಮುಖಿ ಬರಹಗಾರನಿಗೆ ಮಾತ್ರ ಸಾಧ್ಯ. ಸಾಹಿತಿಗಳು ಸಾಮಾಜಿಕ ಬದ್ಧತೆಯನ್ನು ಹೊಂದಿದವರಾಗಿದ್ದು, ವಸ್ತುನಿಷ್ಠವಾಗಿ ಚಿಂತಿಸುವ ಬರೆಯುವ ಹಾಗೂ ಜನಸಾಮಾನ್ಯರ ಬವಣೆಗಳ ಬಗ್ಗೆ ಬೆಳಕು ಚೆಲ್ಲುವ ದಾರ್ಶನಿಕರು ಎಂಬ ಗ್ರಹಿಕೆ ಓದುಗರಲ್ಲಿದೆ.ಒಬ್ಬ ಸೃಜನಶೀಲ ಬರಹಗಾರನ ಬರಹ ವೈಯಕ್ತಿಕವಾಗಿ ಹಾಗೂ ಸಾರ್ವಜನಿಕವಾಗಿ ಎರಡು ಸ್ತರಗಳಲ್ಲಿ ತೆರೆದುಕೊಳ್ಳುತ್ತದೆ. ತನ್ನ ಆತ್ಮ ಸಂತೋಷಕ್ಕೆ ಬರೆದುಕೊಂಡ ವೈಯಕ್ತಿಕ ಬರಹದ ಬಗ್ಗೆ ಸಾಹಿತಿಗೆ ಯಾವ ವಿಧವಾದ ಕಟ್ಟುಪಾಡುಗಳಿರುವುದಿಲ್ಲ. ಆದರೆ ಸಾರ್ವಜನಿಕ ಸಮಸ್ಯೆಗಳನ್ನು ತನ್ನ ಬರಹಕ್ಕೆ ವಸ್ತುವಿಷಯವನ್ನಾಗಿ ಆಯ್ಕೆ ಮಾಡಿಕೊಂಡು ರಚಿಸಿದ ಕಥೆ, ಕವಿತೆ, ಲೇಖನ ಯಾವುದೇ ಆಗಲಿ ಅದು ಚರ್ಚಿತ ವಿಷಯವಾಗಿ ಅನಾವರಣಗೊಳ್ಳುತ್ತದೆ. ಆದ್ದರಿಂದ ಸಾಹಿತಿಗಳು ಬರವಣಿಗೆಗೆ ಸೀಮಿತವಾಗಿ ನಿಷ್ಕ್ರೀಯರಾದರೆ ಸಾಲದು,ಜನ ಸಮುದಾಯದ ನೋವು ಕಷ್ಟಗಳಿಗೆ ಸ್ಪಂದಿಸುತ್ತ ಸಕ್ರಿಯರಾಗಿದ್ದರೆ ಅವರ ಬರವಣಿಗೆಗೆ ಬೆಲೆ ಬರುತ್ತದೆ.ಅಂತಹ ಮೌಲ್ಯಯುತ ಬದುಕನ್ನು ಬದುಕಿದವರು ವಿಷ್ಣು ನಾಯ್ಕರು. ಜಗದಗಲ ತುಂಬಿರುವ ನೋವಿನಲ್ಲಿ ಪೆನ್ನದ್ದು ಅರಳುವವು ಅಕ್ಷರವು ಕವನವಾಗಿ ನೋವು ಸಾಯುವವರೆಗೆ ಕವನ ಸಾಯುವುದಿಲ್ಲ ನಿಲ್ಲುವುದು ಸಾಂತ್ವನದ ಸಿಲುಬೆಯಾಗಿ. ವಿಷ್ಣು ನಾಯ್ಕರು ಒಂದು ವ್ಯಕ್ತಿಯಲ್ಲ,ಶಕ್ತಿ.ಒಂದು ಬೃಹತ್ ಸಂಸ್ಥೆ ಮಾಡುವ ಕಾರ್ಯವನ್ನು ಏಕಾಂಗಿಯಾಗಿ ಸಾಧಿಸಿದವರು.ತನ್ನ ಊರು, ಪರಿಸರ, ಅಂಕೋಲೆ, ಅಂಬಾರಕೊಡ್ಲು, ಉತ್ತರ ಕನ್ನಡ ಜಿಲ್ಲೆ, ಅಲ್ಲಿನ ಜನ ಸಮುದಾಯ ಇವುಗಳನ್ನೆಲ್ಲ ಪ್ರೀತಿ ಮತ್ತು ಕಾಳಜಿಯಿಂದ ನೋಡಿದವರು. ಇಲ್ಲಿನ ಜನರ ಒಡಲಾಳದ ನೋವನ್ನು, ತೀವ್ರ ಬಡತನವನ್ನು, ಬದುಕುವ ಛಲವನ್ನು, ಕಷ್ಟ-ಸುಖ- ಸಮೃದ್ಧಿಗಳನ್ನು ಕಣ್ಣಾರೆ ಕಂಡವರು ಜನಸಮುದಾಯದ ಜೊತೆಗೆ ಒಂದಾಗಿ ಬೆರೆತು ಮನುಷ್ಯನ ಬದುಕು ಹಸನಾಗಲು ನಿರಂತರವಾಗಿ ಚಿಂತಿಸಿದವರು.ಅವರು ಕೇವಲ ಬರೆದವರಲ್ಲ, ಬರೆದಂತೆ ಬದುಕಿದವರು.ಬದುಕು ಮತ್ತು ಬರಹದಲ್ಲಿ ಅಭಿನ್ನತೆಯನ್ನು ರೂಢಿಸಿಕೊಂಡವರು.ಅವರಲ್ಲಿದ್ದ ಶ್ರದ್ಧೆ,ನಿಷ್ಠೆ,ಕಾರ್ಯತತ್ಪರತೆ,ಸಮಯಪ್ರಜ್ಞೆ,ಶಿಸ್ತು ಮುಂತಾದ ಗುಣಗಳು ಅವರನ್ನು ವಿಶಿಷ್ಟರಲ್ಲಿ ವಿಶಿಷ್ಟರನ್ನಾಗಿ ಪರಿಗಣಿಸುವಂತೆ ಮಾಡಿದ್ದವು. ಹೆಣ್ಣಿಗಾಗಿ ಸತ್ತವರು ಕೋಟಿ ಮಣ್ಣಿಗಾಗಿ ಸತ್ತವರು ಕೋಟಿ ಹೊನ್ನಿಗಾಗಿ ಸತ್ತವರು ಕೋಟಿ ಗುಹೇಶ್ವರ ನಿನಗಾಗಿ ಸತ್ತವರನಾರನೂ ಕಾಣೆ ಎಂದು ಅಲ್ಲಮ ಪ್ರಭು ಹೇಳುತ್ತಾರೆ.ಇಂದು ಸಮಾಜದಲ್ಲಿ ಅನೇಕರು ಸಮಾಜದ ಲೋಪ ದೋಷಗಳ ಮಾತನಾಡುತ್ತ ಕೇವಲ ತಮಗಾಗಿ ಮಾತ್ರ ಬದುಕುತ್ತಾರೆ.ಆದರೆ ಸಾಮೂದಾಹಿಕ ಸಾಮಾಜಿಕ ಹಿತವನ್ನು ಬಯಸಿ ಸಮಾಜಕ್ಕಾಗಿ ಬದುಕುವವರು ವಿರಳ.ಅಂತಹ ವಿರಳರಲ್ಲಿ ವಿಷ್ಣು ನಾಯ್ಕರು ಒಬ್ಬರು.ಒಂದರ್ಥದಲ್ಲಿ ವಿಷ್ಣು ನಾಯ್ಕರು ಹುಟ್ಟು ಹೋರಾಟಗಾರರು.ಬಡತನವನ್ನೇ ಹಾಸಿ ಹೊದ್ದುಕೊಂಡ ನಿರಕ್ಷರಿ ಅಪ್ಪ ಅವ್ವನ ಆರು ಮಕ್ಕಳಲ್ಲಿ ಒಬ್ಬನಾಗಿ,ಹಸಿವು,ಬಡತನ,ಮೂಢನಂಬಿಕೆಗಳ ವಿರುದ್ಧ ಸೆಣೆಸುತ್ತ, ಬಾಲ್ಯದಿಂದಲೂ ಹೋರಾಟವನ್ನೇ ಮೈಗೂಡಿಸಿಕೊಂಡು ಬೆಳೆದು ಬಂದವರು.ಮುಂದೆ ಈ ಹೋರಾಟದ ಮನೋಭಾವವೇ ಅವರ ಸಾರ್ವಜನಿಕ ಬದುಕಿನ ಭಾಗವಾಗಿ ಬೆರೆತು ಹೋಯಿತು.ಅದನ್ನು ಜನಪರವಾಗಿ ಬಳಸಿಕೊಂಡು ಬೆಳೆಸಿಕೊಂಡು ಜನರು ನೋವಿಗೆ ಮಿಡಿಯುವ ಪ್ರಾಣಮಿತ್ರನಂತಾದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನಕರ ದೇಸಾಯಿ ಅವರ ನೇತೃತ್ವದಲ್ಲಿ 'ಉಳುವವನಿಗೇ ನೆಲೆದೊಡೆತನ' ಎಂಬ ಬೇಡಿಕೆ ಮುಂದಿಟ್ಟು ನಡೆದ ರೈತ ಆಂದೋಲನದಲ್ಲಿ ಬಡ ರೈತನ ಮಗನಾದ ವಿಷ್ಣು ನಾಯ್ಕ ಅವರು ತಮ್ಮ ೧೩ನೇ ವಯಸ್ಸಿನಲ್ಲೇ ವಿದ್ಯಾರ್ಥಿ ಹೋರಾಟಗಾರನಾಗಿ - ಪ್ರವೇಶಿಸಬೇಕಾದ ಸಂದರ್ಭ ಎದುರಾಯಿತು. ಆ ಹದಿಹರೆಯದಲ್ಲೇ ದೇಸಾಯಿಯವರ ರೈತ ಚಳುವಳಿಯ ನಿಷ್ಠಾವಂತ ಕಾರ್ಯಕರ್ತನಾಗಿ ಸೇರಿದ ಇವರು ೧೯೫೭ ರಿಂದ ೧೯೭೧ನೇ ಇಸವಿಯವರೆಗೆ ಹೋರಾಟದ ಕೊನೆಯ ದಿನಗಳವರೆಗ ಛಲ ಬಿಡದೆ ತಮ್ಮನ್ನು ತೊಡಗಿಸಿಕೊಂಡರು.ಅವರು ಕೆಂಪುಬಾವುಟ ಹಿಡಿದ ಕಾಲದಲ್ಲಿ 'ಸಮಾಜವಾದ ಅಂದರೇನು' ಎಂಬುದೇ ಅವರಿಗೆ ತಿಳಿದಿರಲಿಲ್ಲ. ಅವರು ಈ ರೈತಜನಾಂದೋಲನದಲ್ಲಿ ತೊಡಗಿಸಿಕೊಂಡದ್ದಕ್ಕೆ ಕಾರಣಗಳಿವೆ. ಅವರು ಹುಟ್ಟುವುದಕ್ಕಿಂತ ಮೊದಲೇ, ಅವರು ಹುಟ್ಟಿದ ಹಳ್ಳಿಯಾದ ಅಂಬಾರಕೊಡ್ಲದ ಪರಿಸರದಲ್ಲಿಯೇ ಆ ಹೋರಾಟದ ಗಾಳಿ ಇತ್ತು. ಗ್ರಾಮೀಣ ಭಾಗದಲ್ಲಿ ಈ ಹೋರಾಟವನ್ನು ಕುರಿತ ಮೊದಲ ಬೃಹತ್ ಸಭೆ ನಡೆದದ್ದೇ ಅವರ ಊರು ಅಂಬಾರಕೊಡ್ಲದಲ್ಲಿ-ಅವರು ಹುಟ್ಟುವುದಕ್ಕಿಂತ ನಾಲ್ಕುವರ್ಷ ಮೊದಲು,-೧೯೪೦ರಲ್ಲಿ. ಭೂಮಾಲಿಕವರ್ಗದವರ ಪಿತೂರಿ ಕಾರಣವಾಗಿ, ದಿನಕರ ದೇಸಾಯಿಯವರಿಗೆ 'ಹಾವಳಿ ಮಂಜ' ಎಂದು ಕುಖ್ಯಾತಿಯ ನಾಮಕರಣ ಮಾಡಿ, ವರ್ಗಕಲಹ ಹುಟ್ಟುಹಾಕುತ್ತಿರುವವರೆಂಬ ಆರೋಪ ಮಾಡಿ, ಅವರನ್ನು ಗಡಿಪಾರು ಶಿಕ್ಷೆಗೆ ಆಗಿನ ಬ್ರಿಟಿಷ್ ಸರ್ಕಾರ ಗುರಿಪಡಿಸಿದ್ದು ಅದೇ ವರ್ಷ. ಈ ರೈತ ಹೋರಾಟವೇ ಕಾವು ಕೊಟ್ಟು ವಿಷ್ಣುನಾಯ್ಕರ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಪ್ರಜ್ಞೆಯನ್ನು ಹೊರೆಸಿ, ಮೊಳಕೆಯೊಡೆಸಿ ಬೆಳೆಸಿದ್ದು. ಅವರು ಸಮಾಜವಾದವನ್ನೋ ಸಮತಾವಾದವನ್ನೋ ಅಧ್ಯಯನ ಮಾಡಿ ಪಡೆದ ತಿಳಿವು ಮತ್ತು ಪ್ರೇರಣೆಯಿಂದ ಈ ಹೋರಾಟಕ್ಕೆ ಪ್ರವೇಶಿಸಿದವರಲ್ಲ. ಈ ರೈತ ಹೋರಾಟದೊಂದಿಗೆ ಕೂಡಿಕೊಳ್ಳುವುದು ಅವರಿಗೆ ಒಂದು ತಾತ್ಕಾಲಿಕ ಉಮೇದಿಯ ವೇಷವೋ ಆವೇಶವೋ ಆಗಿರಲಿಲ್ಲ. ಈ ಹೋರಾಟ ಅವರ ಒಡಲ ಉರಿಹಸಿವೆಗೆ ದನಿಕೊಡುವ ಒಂದು ಸಹಜ ಬೆಳವಣಿಗೆಯಾಗಿತ್ತು. ಮನೆಯಲ್ಲಿ ಎರಡು ಹೊತ್ತಿನ ತುತ್ತನ್ನಕ್ಕೂ ಗತಿಯಿಲ್ಲದ ಕುಟುಂಬ ಅವರದಾಗಿತ್ತು. ಇರುವ 25 ಗುಂಟೆ ಗೇಣಿ ಜಮೀನಿನಲ್ಲಿ ವರ್ಷವಿಡೀ ಕಷ್ಟಪಟ್ಟು ದುಡಿದ ಪ್ರಯುಕ್ತ ಬೆಳೆದು ನಿಂತ ಪೈರಿನಲ್ಲಿ ಸರಿ ಅರ್ಧಭಾಗ ಒಡೆಯನ ಮನೆಗೆ-ಅಳೆಯಬೇಕಾಗುತ್ತಿತ್ತು. ನೈಸರ್ಗಿಕ ಕ್ಷಾಮವೋ, ಅತಿವೃಷ್ಟಿಯೋ ಉಂಟಾಗಿ ಬೆಳೆ ನಾಶವಾದರೂ 'ಗೇಣಿ' ಎಂಬ ಹೆಸರಿನಲ್ಲಿ ಭೂಮಾಲಿಕರ ಮನೆಗೆ ಅಳೆಯಬೇಕಾದುದನ್ನು ಅಳೆಯದಿದ್ದರೆ ಅದನ್ನು ಭೂ ಮಾಲೀಕ 'ನಗದುಸಾಲ' ಎಂದು ಪರಿಗಣಿಸಿ ಛಾಪಾ ಕಾಗದದಲ್ಲಿ ಬರೆದು ಸಹಿ ಪಡೆಯುತ್ತಿದ್ದರು. ಹೀಗೆ ಬರೆಯಿಸಿಕೊಂಡ ಹಣಕ್ಕೆ ಬಡ್ಡಿಯಾಕರಣೆಯಾಗುತ್ತಿತ್ತು. ಅಸಲು ಬಡ್ಡಿ ಬೆಳೆಯುತ್ತಿದ್ದಂತೆ ಒಂದುದಿನ ಮನೆಜಪ್ತಿ ವಾರಂಟನ್ನು ಎದುರಿಸಬೇಕಾಗುತ್ತಿತ್ತು. ಒಂದುಕಡೆ ನಿರುಮ್ಮಳ ಊಟಕ್ಕಿಲ್ಲದ ನೋವು, ಇನ್ನೊಂದೆಡೆ ಯಾವಾಗ ಮನೆ ಜಪ್ತಿಗೆ ಬರುವುದೋ ಎಂಬ ಆತಂಕ. ಇಂಥ ನಿರಂತರ ನೋವು- ನಷ್ಟಗಳಲ್ಲಿ ನರಳಿದ ಬಹಳಷ್ಟು ಕುಟುಂಬಗಳಲ್ಲಿ ಅವರ ಕುಟುಂಬವೂ ಒಂದಾಗಿತ್ತು.ಇಂತಹ ಸಂದರ್ಭದಲ್ಲಿ ದುಡಿಯುವ ರೈತನಿಗೆ ಅವನ ಜಮೀನಿನ ಮಾಲೀಕತ್ವದ ಹಕ್ಕು ಬರಬೇಕೆಂದು ಚಳವಳಿ ಆರಂಭವಾದಾಗ ಯಾವ ಜಾಗೃತ ಮನಸ್ಸು ಸುಮ್ಮನೆ ಇರಲು ಸಾಧ್ಯ?... ಮುಲ್ಕಿ ಮುಗಿಸಿ ಹೈಸ್ಕೂಲು ಸೇರುತ್ತಿರುವಾಗಲೇ ಕೆಂಪುಬಾವುಟ ಕೈಗೆ ಬಂದಿತ್ತು. ಶ್ರಮಜೀವಿಗಳ ಒಕ್ಕಟ್ಟು ಮತ್ತು ಹೋರಾಟ ಅವರ ಕಣ್ಮುಂದೆ ಇರುವ ನೆಮ್ಮದಿಯ ಬದುಕಿನ ದಾರಿಗಳಾಗಿದ್ದವು. ಹೈಸ್ಕೂಲು ಮುಗಿಸುವುದರೊಳಗಾಗಿ ಅವರ ಹೆಸರು ರೈತಸಂಘಟನೆಯಲ್ಲಿ-ದಿನಕರ ದೇಸಾಯಿ, ವಿಜಯಾ ನಾಡಕರ್ಣಿ ದಯಾನಂದ ನಾಡಕರ್ಣಿ, ಗಿರಿಪಿಕಳೆ, ಶಂಕರ ಕೇಣಿ, ಅಮ್ಮೆಂಬಳ ಆನಂದ, ಗಂಗಮ್ಮ ಅವರ ಗಮನ ಸೆಳೆಯುವಂತಾಯಿತು.ಅದರಿಂದಾಗಿ ಹತ್ತು-ಹಲವು ರೈತಪರವಾದ ಸಭೆ-ಸಮಾರಂಭಗಳಲ್ಲಿ ಅವರು ನಿರಂತರ 13 ವರ್ಷಗಳವರೆಗೆ ತೊಡಗಿಸಿಕೊಂಡು ಸಮಚಿತ್ತದಿಂದ ಎಲ್ಲ ಕಠಿಣ ಪ್ರಸಂಗಗಳನ್ನು ಎದುರಿಸಿದ್ದರು, ಚುನಾವಣೆಗಳಲ್ಲಿ ವಹಿಸಲಾಗುತ್ತಿದ್ದ ಹೊಣೆಗಾರಿಕೆಗಳನ್ನೆಲ್ಲ ನಿಭಾಯಿಸಿದ್ದರು, 13 ವರ್ಷಗಳ ಆ ಸುದೀರ್ಘ ಹೋರಾಟ ಅವರ ಪಾಲಿನ ಸಾರ್ಥಕ ಬದುಕಿನ ಸ್ಮರಣಾರ್ಹ ದಿನಗಳಾಗಿವೆ. ಇಂತಹ ಬದ್ಧತೆಯ ಉಳ್ಳ ಹೋರಾಟಗಾರರು ಶ್ರಮದ ಫಲವಾಗಿಯೇ ಸರ್ಕಾರ ಜಮೀನು ರಹಿತ ಬಡ ರೈತರಿಗೆ ಸಾಗುವಳಿ ಯೋಗ್ಯ ಒಂದು ಲಕ್ಷ ಎಕರೆ ಅರಣ್ಯ ಜಮೀನನ್ನು ಬಿಟ್ಟು ಕೊಡುವ ವಾಗ್ದಾನ ಮಾಡಿತು.ಇದು ನಿಜವಾಗಿ ಜನಪರ ಹೋರಾಟದ ವಿಜಯವಾಗಿತ್ತು. ಇದೇ ಸಮಯದಲ್ಲಿ ಸಮಾಜವಾದಿ ನಿಲುವಿನಿಂದ ಪ್ರಭಾವಿತರಾಗಿ, ತಮ್ಮ ಸ್ವಂತ ಊರಿನಲ್ಲಿ ಸಮಾಜವಾದಿ ಯುವಕ ಸಂಘವನ್ನು ಹುಟ್ಟು ಹಾಕಿ ಜನಪರವಾದ ಕಾರ್ಯಕ್ಕೆ,ಜನಜಾಗ್ರತಿ ಅಭಿಯಾನಕ್ಕೆ ಅಲ್ಲಿನ ಯುವಕರನ್ನು ಸಂಘಟಿಸಿದರು. ಅದರ ಮೂಲಕವೇ ಊರಿಗೆ ಅಗತ್ಯವಿರುವ ರಸ್ತೆ, ನೀರು, ದಾರಿದೀಪ, ಶಾಲೆ ಮುಂತಾದ ಅಭಿವೃದ್ಧಿಗಾಗಿ ತೊಡಗಿಸಿಕೊಂಡರು. ನಾಲ್ಕಡಿ ಅಗಲಳತೆಯ ಅಂಬಾರಕೊಡ್ಡದ ರಸ್ತೆಗಳೆಲ್ಲ ಅಗಲೀಕರಣಗೊಂಡು ವಾಹನ ಸಂಚಾರಕ್ಕೆ ಅನುಕೂಲವಾದುದು ಆಗಲೇ. ಶ್ರಮದಾನ, ಮೆರವಣಿಗೆ, ಭಾಷಣ ಮುಂತಾದ ಕಾರ್ಯಕ್ರಮಗಳಿಗೂ ನೇತೃತ್ವ ನೀಡಿದರು. ಜೊತೆಗೆ ಊರ ಯುವಜನರ ಸಾಂಸ್ಕೃತಿಕ ಚಟುವಟಿಕೆಗಳಿಗೂ ಪ್ರೋತ್ಸಾಹಿಸಿದರು.ಈ ಯುವಕ ಸಂಘದಿಂದ ಪ್ರೇರಿತರಾಗಿ ಸುತ್ತಲಿನ ಹಳ್ಳಿಗಳಲ್ಲಿಯೂ ಯುವಕ ಸಂಘಗಳು ಹುಟ್ಟಿಕೊಂಡು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು ವಿಷ್ಣು ನಾಯ್ಕರ ಜನಪರ ಕಾಳಜಿಯ ಯಶಸ್ಸು ಎಂದು ಹೇಳಬಹುದು. ಸಮಾಜದ ಏಕತೆ ಮತ್ತು ಸಾಮರಸ್ಯಕ್ಕೆ ವಿಷ್ಣು ನಾಯ್ಕರು ನೀಡಿದ ಕೊಡುಗೆ ಗಮನಾರ್ಹವಾದದ್ದು. ದೇಶದಲ್ಲಿ ಕೋಮುಸೌಹಾರ್ದ ಹದಗೆಡುತ್ತಿದ್ದ ಸಮಯದಲ್ಲಿ ವಿಷ್ಣು ನಾಯ್ಕರು ಅಂಕೋಲೆಯ ಸಮಾನ ಮನಸ್ಕ ಸ್ನೇಹಿತರೊಂದಿಗೆ ಸೇರಿ, ಸರಕಾರಿ ಅಧಿಕಾರಿಗಳ ಸಹಕಾರವನ್ನೂ ಪಡೆದು ಅಂಕೋಲೆಯಲ್ಲಿ ಬೀದಿ ಕವಿಗೋಷ್ಠಿ ಹಾಗೂ ಒಂದು ಹನಿ ರಕ್ತ ಎಂಬ ಬೀದಿ ನಾಟಕ ಮುಂತಾದ ಚಟುವಟಿಕೆಗಳನ್ನು ನಡೆಸಿದರು. ವಿಚಾರವಾದಿಗಳ ವೇದಿಕೆಗಳನ್ನು ಬಳಸಿಕೊಂಡು ಭಾಷಣಗಳ ಮೂಲಕ, ಆಗಲೇ ಘಟಿಸಿ ಹೋದ ಅಹಿತಕರ ಘಟನೆಗೆ ಕಾರಣರಾದವರ ನಿಲುವನ್ನು ತರಾಟೆಗೆ ತೆಗೆದುಕೊಂಡರು. ಇದು ಅವರ ಪ್ರಗತಿಪರ ಜನಪರ ನಿಲುವಿನ ದೃಢತೆಯಾಗಿತ್ತು.ಇಂತಹುದೇ ಇನ್ನೊಂದು ಪ್ರಸಂಗದಲ್ಲಿ ಇಬ್ಬರು ವ್ಯಕ್ತಿಗಳ ನಡುವಿನ ವೈಯಕ್ತಿಕ ಜಗಳ ಕೆಲವರ ಪ್ರತಿಷ್ಠೆಯಿಂದಾಗಿ ಎರಡು ಸಮುದಾಯಗಳ ಮಧ್ಯೆ ವೈಷಮ್ಯವನ್ನು ಹುಟ್ಟುಹಾಕಿ ಅಂಕೋಲೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಂದರ್ಭದಲ್ಲಿ ಎದುರಾಗಿತ್ತು.ಇದು ಇಡೀ ಅಂಕೋಲೆಯ ಸಾಮರಸ್ಯವನ್ನು ಶಾಶ್ವತವಾಗಿ ಹದಗೆಡಿಸುವ ಆತಂಕಕಾರಿ ಬೆಳವಣಿಗೆಯಾಗಿತ್ತು. ಇಂತಹ ಬೆಳವಣಿಗೆ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಅರಿತ ವಿಷ್ಣು ನಾಯ್ಕರು ಎರಡೂ ಸಮುದಾಯದ ಹಿರಿಯರನ್ನು ಭೇಟಿಮಾಡಿ ಸಮಾಜದಲ್ಲಿ ಸಾಮರಸ್ಯವನ್ನು ಉಂಟು ಮಾಡಲು ಶ್ರಮಿಸಿದರು.ಆ ವೇಳೆಗೆ ಕೆಲವರು ಅವರ ಸೈಕಲ್ಲನ್ನು ತಡೆದು ಬೆದರಿಸಿದಾಗಲೂ ಅದಕ್ಕೆಲ್ಲ ಸೊಪ್ಪು ಹಾಕದೇ ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದರು.ಆದರೆ ಇದನ್ನೊಂದು ಹೋರಾಟವೆಂದು ಅವರೆಂದೂ ಬಿಂಬಿಸಿ ಕೊಂಡು ಎಲ್ಲಿಯೂ ದಾಖಲಿಸಿಲ್ಲ. ಇತಿಹಾಸದಲ್ಲಿ ಇಂತಹ ಕಹಿ ಘಟನೆಗಳು ಸ್ಥಾನ ಪಡೆದು ಮುಂದಿನ ತಲೆಮಾರಿಗೆ ತಪ್ಪು ಸಂದೇಶ ಹೋಗಬಾರದೆಂಬ ಸದುದ್ದೇಶ ಇದರ ಹಿಂದಿರುವಂತಿದೆ. ಅಂಕೋಲಾ ತಾಲೂಕಿನಲ್ಲಿ ೧೯೯೧ರಲ್ಲಿ ಸ್ಥಳೀಯ ಸಾಮಾಜಿಕ ಸೇವಾ ಸಂಸ್ಥೆಯಾದ ಕ್ರಿಸ್ತಮಿತ್ರ ಆಶ್ರಮದ ಸಹಯೋಗದಲ್ಲಿ ಪ್ರಾರಂಭಗೊಂಡ ಮದ್ಯಪಾನ ವಿರೋಧಿ ಅಂದೋಲನದಲ್ಲಿ ವಿಷ್ಣು ನಾಯ್ಕ ಅವರು ನಿರ್ವಹಿಸಿದ ಪಾತ್ರ ಬಹಳ ಮಹತ್ವದ್ದು. ಮದ್ಯಪಾನ ದುಶ್ಚಟಗಳಿಂದ ದೂರವಿರುವಂತೆ ಜನರಿಗೆ ತಿಳಿಹೇಳಲು ವಿಷ್ಣು ನಾಯ್ಕರು ಆ ಸಂದರ್ಭದಲ್ಲಿ ಬಳಸಿಕೊಂಡದ್ದು ಬೀದಿನಾಟಕಗಳ ಮಾಧ್ಯಮ. ಆ ಒಂದು ದಶಕದಲ್ಲಿ ಜಿಲ್ಲೆಯಾದ್ಯಂತ ಮದ್ಯಪಾನ ವಿರೋಧಿ ಅಂದೋಲನ ವ್ಯಾಪಿಸಿದ್ದರ ಹಿಂದೆ ವಿಷ್ಣು ನಾಯ್ಕ ಅವರು ಹುಟ್ಟು ಹಾಕಿದ 'ರಾಘವೇಂದ್ರ ರಂಗಸಂಗ'ದ ಪಾತ್ರ ಬಹಳ ಹಿರಿದು. ಮದ್ಯಪಾನದಿಂದ ಆಗುವ ವಿವಿಧ ಅನಾಹುತಗಳನ್ನು ಬಿಂಬಿಸುವ ಸರಾಯಿ ಸೂರಪ್ಪ ಎಂಬ ಬೀದಿನಾಟಕವನ್ನು ಸ್ವತಃ ಬರೆದು ನಿರ್ದೇಶಿಸಿ, ಜಿಲ್ಲೆಯ ಹಲವಾರು ಹಳ್ಳಿಗಳಿಗೆ ಹೋಗಿ ಅಭಿನಯಿಸಿದ ರೀತಿ ನಿಜಕ್ಕೂ ಪರಿಣಾಮಕಾರಿಯಾಗಿತ್ತು ಅದನ್ನು ನೋಡಿ ಮನವರಿಕೆ ಮಾಡಿಕೊಂಡ ಹಲವರು ಕುಡಿತದ ಚಟದಿಂದ ಹೊರಬಂದ ಉದಾಹರಣೆಗಳೂ ಇವೆ. ಅಂದು ವಯಸ್ಕರ ಶಿಕ್ಷಣ ಸಚಿವರಾಗಿದ್ದ ಶ್ರೀ ಪ್ರಭಾಕರ ರಾಣೆಯವರ ಒತ್ತಾಸೆಯ ಮೇರೆಗೆ ೯೦ರ ದಶಕದಲ್ಲಿ ರಾಜ್ಯಾದ್ಯಂತ ನಡೆದ ಸಂಪೂರ್ಣ ಸಾಕ್ಷರತಾ ಅಂದೋಲನದಲ್ಲಿ ವಿಷ್ಣು ನಾಯ್ಕ ಅವರು ತೊಡಗಿಸಿಕೊಂಡ ಪರಿ ಅವರ ಬದ್ಧತೆಯ ದ್ಯೋತಕವಾಗಿದೆ. ವಿಶೇಷವಾಗಿ ಸಾಕ್ಷರತಾ ಅಂದೋಲನದ ಪ್ರಾರಂಭದಲ್ಲಿ ವಾತಾವರಣ ನಿರ್ಮಾಣಕ್ಕಾಗಿರುವ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಕಲಾಜಾಥಾ ತಂಡಗಳ ಮುಂಚೂಣಿ ನಾಯಕರಾಗಿ ಜಿಲ್ಲೆಯ ಹನ್ನೊಂದು ತಾಲೂಕುಗಳಲ್ಲೂ ಮಿಂಚಿನ ಸಂಚಾರ ಕೈಕೊಂಡು ಅಕ್ಷರಾಭ್ಯಾಸದ ವಾತಾವರಣವನ್ನು ಗ್ರಾಮೀಣ ನಿರಕ್ಷರಿ ಜನತೆಯ ಮನಸ್ಸಿನಲ್ಲಿ ಮೂಡಿಸುವಲ್ಲಿ ಯಶಸ್ವಿಯಾದರು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಾಕ್ಷರತಾ ಕಾರ್ಯಕಾರಿಣಿ ಸಮಿತಿಯ ಕ್ರಿಯಾಶೀಲ ಸದಸ್ಯರಾಗಿ ತಮ್ಮ ಅಮೂಲ್ಯ ಸೇವೆ ಸಲ್ಲಿಸಿದರು. ಶಿಕ್ಷಣದಲ್ಲಿ ಭಾಷಾ ಮಾಧ್ಯಮದ ಕುರಿತಾಗಿ ನಡೆದ ಗೋಕಾಕ ಚಳುವಳಿಯ ಸಂದರ್ಭದಲ್ಲಿ ವಿಷ್ಣು ನಾಯ್ಕರು ತಾಲೂಕಿನ ಕನ್ನಡಾಭಿಮಾನಿ ಬಳಗದೊಂದಿಗೆ ಸೇರಿ ೨೧ ದಿನಗಳ ಸರದಿ ಉಪವಾಸ ಸತ್ಯಾಗ್ರಹಕ್ಕೆ ಬಲ ತುಂಬಿದರು. ಕನ್ನಡಾಭಿಮಾನ ಮೂಡಿಸಲು ರಾಜ್ಯಮಟ್ಟದಲ್ಲಿ ವಿಶೇಷ ಉಪನ್ಯಾಸ, ಸಾರ್ವಜನಿಕ ಜಾಥಾ ಮುಂತಾದವುಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡರು. ಗೋಕಾಕ ಚಳುವಳಿ ಸಂದರ್ಭದಲ್ಲಿ ಧಾರವಾಡದ ರಾಜ್ಯ ಕನ್ನಡ ಕ್ರಿಯಾ ಸಮಿತಿಯ ಕರೆಗೆ ಓಗೊಟ್ಟು ಧರಣಿಯಲ್ಲಿ ಪಾಲ್ಗೊಂಡರು. ಉತ್ತಮ ವಾಗ್ಮಿ,ಗಂಭೀರ ವ್ಯಕ್ತಿತ್ವ,ಪ್ರಖರ ವೈಚಾರಿಕ ನಿಲುವುಗಳನ್ನು ಹೊಂದಿದ್ದ ವಿಷ್ಣು ನಾಯ್ಕರು ತಮ್ಮ ಖಚಿತ ವಿಚಾರಗಳೊಂದಿಗೆ ಜಿಲ್ಲೆಯಲ್ಲಿ ನಡೆಯುವ ಯಾವುದೇ ತರದ ಸಾಮಾಜಿಕ ಹೋರಾಟವಿರಲಿ ಅಲ್ಲಿ ತಮ್ಮ ಸಹಭಾಗಿತ್ವವನ್ನು, ನೈತಿಕ ಬಲವನ್ನು ನೀಡುತ್ತಲೇ ಬಂದಿದ್ದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಆಗಾಗ ತಲೆ ಎತ್ತುವ ಪರಿಸರ ಸಂಬಂಧಿ ಹೋರಾಟಕ್ಕೆ ಭಾವಾವೇಶ ಬಿಟ್ಟು ವೈಜ್ಞಾನಿಕ ದೃಷ್ಟಿಕೋನದಿಂದ ಅಗತ್ಯಕ್ಕೆ ತಕ್ಕಷ್ಟು ನೈತಿಕ ಬೆಂಬಲ ನೀಡಿದವರಾಗಿದ್ದಾರೆ. ಜನಜೀವನಕ್ಕೆ ಮಾರಕವಾಗಬಹುದಾದಂತ ಅಣು ಉತ್ಪನ್ನ ಕೇಂದ್ರ, ಉಷ್ಣ ವಿದ್ಯುತ್ ಸ್ಥಾವರ, ನೌಕಾನೆಲೆ, ಗಣಿ ಉದ್ಯಮ ಮುಂತಾದವುಗಳನ್ನು ತಾತ್ವಿಕ ನೆಲೆಯಲ್ಲಿ ವಿರೋಧಿಸುವುದರ ಜೊತೆಗೆ ಪರಿಸರ ಸ್ನೇಹಿ ಅಭಿವೃದ್ಧಿಗಳಾದ ಪ್ರವಾಸೋದ್ಯಮ, ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗ ಮುಂತಾದ ಹಲವು ಜನೋಪಯೋಗಿ ಯೋಜನೆಗಳ ಅನುಷ್ಠಾನಕ್ಕಾಗಿ ಒತ್ತಾಯಿಸುತ್ತಲೇ ಬಂದಿದ್ದರು.ಇಂತಹ ಕ್ರಿಯಾಶೀಲ,ಸೃಜನಶೀಲ ವ್ಯಕ್ತಿತ್ವದ ವಿಷ್ಣು ನಾಯ್ಕರ ಅಗಲುವಿಕೆಯಿಂದ ಜಿಲ್ಲೆಯ ಜನಪರ ಚಳುವಳಿ ಬಡವಾಗಿದೆಯೆಂದು ಹೇಳಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ