ಶನಿವಾರ, ಸೆಪ್ಟೆಂಬರ್ 24, 2022

ದೀಪಾವಳಿ

ದೀಪಾವಳಿ ಬೆಳಕಿನ ಹಬ್ಬ.ಇದು ಬರೀ ಹಬ್ಬವಲ್ಲ,ಹಬ್ಬಗಳ ಪರಂಪರೆ.ಕೆಲವು ಪ್ರದೇಶಗಳಲ್ಲಿ ಮೂರು ದಿನ,ಇನ್ನೂ ಕೆಲವು ಪ್ರದೇಶಗಳಲ್ಲಿ ಐದು ದಿನಗಳವರೆಗೆ ಈ ಹಬ್ಬವನ್ನು ಆಚರಿಸಲಾಗುತ್ತದೆ.ಆದ್ದರಿಂದ ದೀಪಾವಳಿಯನ್ನು ದೊಡ್ಡ ಹಬ್ಬವೆಂದು ಕರೆಯಲಾಗುತ್ತದೆ.ಹೆಚ್ಚು ಕಡಿಮೆ ನಮ್ಮ ದೇಶದಲ್ಲಿ ಜಾತಿ,ಭಾಷೆ,ಪ್ರದೇಶಗಳ ಹಂಗಿಲ್ಲದೇ,ಬಡವ- ಬಲ್ಲಿದ ಎಂಬ ಭೇದವಿಲ್ಲದೇ ಶ್ರದ್ಧೆ,ಭಕ್ತಿ ಮತ್ತು ಸಂಭ್ರಮದಿಂದ ಆಚರಿಸುವ ಹಬ್ಬ ಇದೊಂದೇ ಇರಬಹುದು. ದೀಪಾವಳಿ ಹಬ್ಬ ಶಾಸ್ತ್ರೀಯವೂ ಹೌದು,ಜಾನಪದೀಯವೂ ಹೌದು.ಈ ಹಬ್ಬಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ. ಸಂಪ್ರದಾಯದ ಆಯಾಮವೂ ಇದೆ.ದೀಪಾವಳಿಗೆ ಸಂಬಂಧಿಸಿದಂತೆ ನರಕಾಸುರನ ದುಷ್ಟತನದ ದಮನದ ಕತೆಯನ್ನೂ ಹೇಳಲಾಗುತ್ತದೆ.ಬಲೀಂದ್ರನ ತ್ಯಾಗದ ಪ್ರಸಂಗವೂ ಪ್ರಚಲಿತದಲ್ಲಿದೆ.ಹಬ್ಬದ ಸಂದರ್ಭದಲ್ಲಿ ಲಕ್ಷ್ಮಿಯನ್ನೂ ಆರಾಧಿಸಲಾಗುತ್ತದೆ.ಗೋವುಗಳನ್ನೂ ಪೂಜಿಸಲಾಗುತ್ತದೆ.ಅತ್ಯಂತ ವೈವಿಧ್ಯಪೂರ್ಣವಾಗಿ ಆಚರಿಸಲ್ಪಡುವ ದೀಪಾವಳಿ ಫಲವಂತಿಕೆಯನ್ನು ಸೂಚಿಸುವ ಸಿರಿವಂತಿಕೆಯ ಹಬ್ಬ.ಮುಂಗಾರು ಬೆಳೆ ಕೊಯ್ಲಿಗೆ ಬರುವ ಸಮಯದಲ್ಲಿ ಈ ಹಬ್ಬ ಬರುವುದು ವಿಶೇಷ. ಕೆಲ ಕಡೆಗಳಲ್ಲಿ ದೀಪಾವಳಿಯಿಂದ ಹೊಸ ವರ್ಷವೂ ಪ್ರಾರಂಭವಾಗುತ್ತದೆ. ಈ ಹಬ್ಬವನ್ನು ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ಮಲೆನಾಡಿನಲ್ಲಿ ಮನೆ ಮನೆಗೂ ದೀಪದ ಬೆಳಕು ಹಂಚುವ ಅಂಟಿಗೆ-ಪಂಟಿಗೆ ,ಬಯಲು ಸೀಮೆಯಲ್ಲಿ ದೀಪದ ಸುತ್ತಮುತ್ತ ಸಗಣಿಯಿಂದ ಬೊಂಬೆಗಳನ್ನು ಮಾಡಿ ಪೂಜಿಸುವ ಹಟ್ಟಿ ಹಬ್ಬ, ದಕ್ಷಿಣ ಕನ್ನಡದಲ್ಲಿ ಬಲಿ ಚಕ್ರವರ್ತಿಗೆ ಪೂಜೆ.ಉತ್ತರ ಕನ್ನಡದ ಕರಾವಳಿಯಲ್ಲಿ ಬೋರಜ್ಜಿ ಮತ್ತು ಬಲೀಂದ್ರ ಪೂಜೆ ಹೀಗೆ ವೈವಿಧ್ಯತೆಯ ನಡುವೆಯೂ ಸಂಭ್ರಮದ ಏಕತೆಯಿದೆ. ಆಶ್ವಯುಜ ಮಾಸದ ಕೊನೆ ಮತ್ತು ಕಾರ್ತಿಕ ಮಾಸದ ಪ್ರಾರಂಭದಲ್ಲಿ ಆಚರಿಸುವ ಈ ಹಬ್ಬವನ್ನು ಬೆಳಕಿನ ಹಬ್ಬ ಎಂದೇ ಕರೆಯಲಾಗುತ್ತದೆ.ಪ್ರಾಕೃತಿಕವಾಗಿ ಹಗಲು ಚಿಕ್ಕದಾಗುತ್ತಾ ರಾತ್ರಿ ದೀರ್ಘವಾಗಿ ಆವರಿಸುವ ಕಾಲವಿದು.ಅಮವಾಸ್ಯೆಯ ಕಾರಣದಿಂದ ಕತ್ತಲು ಇನ್ನೂ ದಟ್ಟವಾಗುವ ಈ ಸಮಯದಲ್ಲಿ ಮನೆ ಹಾಗೂ ಮನದಲ್ಲಿ ಕವಿದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ.ದೀಪಾವಳಿ ಎಂದರೆ ದೀಪಗಳ ಆವಳಿ ಅಂದರೆ ದೀಪಗಳ ಸಾಲು. ದೀಪಾವಳಿ ಎಂದಾಗ ಕಣ್ಣಮುಂದೆ ಬರುವುದೇ ಹಣತೆ ದೀಪಗಳ ಬೆಳಕು.ಹೀಗೆ ಈ ಹಬ್ಬದಲ್ಲಿ ಹಣತೆ,ದೀಪ,ಬೆಳಕಿಗೆ ಬಹಳ ಪ್ರಾಮುಖ್ಯತೆಯಿದೆ.ನಮ್ಮ ಸಂಸ್ಕೃತಿಯಲ್ಲಿ ಸಾಮಾನ್ಯವಾಗಿ ದೀಪ ಬೆಳಗುವ ಮೂಲಕವೇ ಯಾವುದೇ ಕೆಲಸವನ್ನು ಆರಂಭಿಸಲಾಗುತ್ತದೆ.ದೀಪಗಳನ್ನೇ ಇಟ್ಟು ದೀಪದಿಂದಲೇಬೆಳಗುತ್ತೇವೆ.ಹಾಗೆ ಬೆಳಗುವ ಬೆಳಕು ಸಾಮಾನ್ಯವಲ್ಲ,ಕವಿ ಕೆ.ಎಸ್.ನರಸಿಂಹ ಸ್ವಾಮಿಯವರ ಪ್ರಕಾರ "ಯಾವ ಚಿತ್‌ಶಕ್ತಿಯದು? ಸೂರ್ಯನಲಿ ಬೆಳಕಾಗಿ, ತಾರೆಯಲಿ ಹೊಳಪಾಗಿ, ಬೆಂಕಿಯಲಿ ಬಿಸಿಯಾಗಿ ಪ್ರವಹಿಸಿಹುದೋ, ಆ ದಿವ್ಯಶಕ್ತಿಯೇ ಈ ಮಣ್ಣ ಹಣತೆಯಲಿ ಹರಿಯುತಿರೆ, ಕಿರಿಹಣತೆ ಕಿರಿದಾದರೇನು? ಬೆಳಕ ಬೀರುವ ಶಕ್ತಿ ಹಿರಿದಲ್ಲವೇನು?" ಹಣತೆಯ ಗಾತ್ರಕ್ಕಿಂತ ಅದರಿಂದ ಹೊಮ್ಮುವ ಬೆಳಕು ಮುಖ್ಯ.ಆದ್ದರಿಂದಲೇ ಇಡೀ ಜಗತ್ತನ್ನು ಬೆಳಗುವ ಸೂರ್ಯನೇ ಆಗಬೇಕಾಗಿಲ್ಲ.ನಮ್ಮ ಸುತ್ತಲನ್ನು ಬೆಳಗುವ ಹಣತೆಯಾದರೂ ಸಾಕು ಎಂಬ ಮಾತಿನ ಮೂಲಕ ಬೆಳಕಿನ ಮಹತ್ವವನ್ನು ಹೇಳುತ್ತೇವೆ. ”ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನ್ನು” ಎಂಬ ಬಿ.ಎಂ.ಶ್ರೀಕಂಠಯ್ಯನವರ ಕವಿತೆ ದೀಪಾವಳಿ ಹಬ್ಬಕ್ಕೆ ಅರ್ಥಪೂರ್ಣವಾಗಿದೆ. ”ಅಸತೋಮಾ ಸದ್ಗಮಯಾ, ತಮಸೋಮಾ ಜ್ಯೋತಿರ್ಗಮಯ“ ಎಂಬ ಮಾತು ದೀಪಾವಳಿಯ ಸಂದೇಶವನ್ನೇ ಪ್ರತಿಫಲಿಸುತ್ತದೆ.ಇಲ್ಲಿ ಕತ್ತಲು ಅಂದರೆ ಕೇವಲ ಯಥಾರ್ಥದ ಕತ್ತಲು ಮಾತ್ರವಲ್ಲ,ಮನುಷ್ಯನಲ್ಲಿರುವ ಅಹಂಕಾರ, ಅಂಧಶ್ರದ್ಧೆ, ಅಜ್ಞಾನ ಎಲ್ಲವೂ ಹೌದು.ಅವನ ಬುದ್ಧಿ,ನಡತೆ,ಆಚಾರ,ವಿಚಾರಗಳಿಗೆ ಅಂಟಿಕೊಂಡಿರುವ ಈ ಕತ್ತಲೆ ದೂರವಾಗಬೇಕು.ಬದುಕಿನ,ಮನಸ್ಸಿನ ಎಲ್ಲ ನಕಾರಾತ್ಮಕ ಅಂಶಗಳು ನಿವಾರಣೆಯಾಗಬೇಕು.ಅಜ್ಞಾನದ ಕತ್ತಲು ದೂರವಾಗಿ ಸುಜ್ಞಾನದ ಬೆಳಕು ಎಲ್ಲ ಕಡೆಗಳಲ್ಲಿಯೂ ಹರಡಬೇಕು ಎಂಬ ಹಿರಿದಾದ ಸಂದೇಶ ದೀಪಾವಳಿ ಹಬ್ಬದ ಆಚರಣೆಯಲ್ಲಿದೆ. ಶ್ರೀಧರ ಬಿ.ನಾಯಕ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ